Thursday, June 25, 2015

ತರಣಿ ಜಲವಾಯುಗಳ ಸಿರಿಯೆನುವನೇ ನರನು(782)

ತರಣಿ ಜಲವಾಯುಗಳ ಸಿರಿಯೆನುವನೇ ನರನು?|
ಸರಿಸಮದೊಳೆಲ್ಲರಿಂಗಿಹ ಪುರುಳು ಪುರುಳೇಂ? ||
ಹೆರರಿಗಿಲ್ಲದೆ ತನ್ನಮಾತ್ರಕಿಹ ಸಿರಿಯೆ ಸಿರಿ |
ತರತಮವೆ ಜನದೆಣಿಕೆ - ಮರುಳ ಮುನಿಯ || (೭೮೨)

(ಸರಿಸಮದೊಳ್+ಎಲ್ಲರಿಂಗೆ+ಇಹ)(ಹೆರರಿಗೆ+ಇಲ್ಲದೆ)(ತನ್ನಮಾತ್ರಕೆ+ಇಹ)(ಜನದ+ಎಣಿಕೆ)

ಸೂರ್ಯ, ನೀರು ಮತ್ತು ಗಾಳಿಗಳನ್ನು ತನಕೆ ದೊರಕಿರುವ ಸಿರಿ, ಸಂಪತ್ತುಗಳೆಂದು ಮನುಷ್ಯನು ಭಾವಿಸುವನೇನು? ಪ್ರತಿಯೊಬ್ಬ ಜೀವಿಗೂ ಸರಿಸಮಾನವಾಗಿ ಸಿಗುವಂತಹ ಸಾರಗಳನ್ನು ಅವನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇತರರಿಗಿರದ ಮತ್ತು ತನಗೆ ಮಾತ್ರ ಇರುವಂತಹ ಸಿರಿ ಸಂಪತ್ತುಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಈ ಬಗೆಯ ಹೆಚ್ಚು ಕಡಿಮೆಗಳನ್ನೇ ಅವನು ಲೆಕ್ಕ ಹಾಕುವನು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Does man consider the sun, water and air as wealth?
Are the precious things that all men equally possess not wealth?
Real wealth is what possesses when all others don’t possess it?
With this perverse view men are busy comparing and contrasting – Marula Muniya (782)
(Translation from "Thus Sang Marula Muniya" by Sri. Narasimha Bhat)

Thursday, June 11, 2015

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು (781)

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು |
ಬೆಂಕಿಯಂ ನರ ಸೋದರರ ನಡುವೆ ತಂದಂ ||
ಅಂಕುರಿಸಿತಂದದರಿನೊಂದಸೂಯಾ ಸ್ಪರ್ಧೆ |
ಸಂಕಟವದನುಪಮವೊ - ಮರುಳ ಮುನಿಯ || (೭೮೧)

(ಪೊಸತು+ಒಂದು)(ಅಂಕುರಿಸಿತು+ಅಂದು+ಅದರಿನ್+ಒಂದು+ಅಸೂಯಾ)(ಸಂಕಟ+ಅದು+ಅನುಪಮವೊ)

ಮೊಟ್ಟಮೊದಲಿಗೆ ನಾಣ್ಯವನ್ನು ಮುದ್ರಿಸಿದವನು (ಟಂಕಕ) ಒಂದು ಹೊಸ (ಪೊಸ) ಬೆಂಕಿಯನ್ನು ಮನುಷ್ಯರ ಸೋದರ ಭಾವಗಳಲ್ಲಿ ತಂದಿಡಲು ಕಾರಣನಾದನು. ಹಣವನ್ನು ಗಳಿಸಲು ಅವತ್ತಿನ ದಿನ ಹೊಟ್ಟೆಕಿಚ್ಚಿ(ಅಸುಯಾ)ನಿಂದ ಕೂಡಿದ ಒಂದು ಸ್ಪರ್ಧೆಯು ಮನುಷ್ಯ ಮನುಷ್ಯರ ನಡುವೆ ಹುಟ್ಟಿತು (ಅಂಕುರಿಸಿತು). ಇದರಿಂದ ಉಂಟಾದ ಸಂಕಟಗಳಿಗೆ ಸಮನಾದ ಬೇರೆ ದುಃಖಗಳೇ ಇಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The man who first invented the first coin in human history,
Brought a new fire to burn the hearts of his human brothers,
From money has sprouted the fire of jealousy and cut-throat competition
The affliction it causes is incomparable – Marula Muniya (781)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, June 10, 2015

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ (780)

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ |
ಸ್ವಮತಿಯತ್ನದಿನೆ ನಿಃಸ್ವಾರ್ಥಗುಣ ನಿನಗೆ ||
ಮಮತೆಯಿಂದಾತ್ಮ ಸಂಕೋಚ ನಿರ್ಮಮತೆಯಿಂ- |
ದಮಿತಾತ್ಮ ವಿಸ್ತಾರ - ಮರುಳ ಮುನಿಯ || (೭೮೦)

(ಮಮತೆಯಿಂದ+ಆತ್ಮ)(ನಿರ್ಮಮತೆಯಿಂದ+ಅಮಿತ+ಆತ್ಮ)

ಆಸೆಯನ್ನು ಹುಟ್ಟಿಸಲು ಕಾರಣಕರ್ತಳಾದ(ಕಮನಕಾರಣಿ) ಸೃಷ್ಟಿಯು ಮನುಷ್ಯನಲ್ಲಿ ಸ್ವಾರ್ಥತೆಯನ್ನು ಪೋಷಿಸುತ್ತಾಳೆ. ನಿನ್ನ ಸ್ವಂತ ಬುದ್ಧಿಯ ಉಪಯೋಗದಿಂದ ನೀನು ನಿನ್ನ ನಿಃಸ್ವಾರ್ಥ ಸ್ವಭಾವಗಳನ್ನು ಬೆಳಿಸಿಕೊಳ್ಳಬೇಕು. ಮಮಕಾರದಿಂದ ನಿನ್ನ ಆತ್ಮವು ಕುಗ್ಗಿಹೋಗುತ್ತದೆ. ಮಮಕಾರವಿಲ್ಲದಿರುವುದರಿಂದ ನಿನ್ನ ಆತ್ಮವು ಅಪಾರವಾಗಿ ವಿಸ್ತಾರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature who feeds desire fosters selfishness,
Selfishness is acquired only through hard self-effort,
Contraction of self by attachment and its infinite expansion
Through non-attachment – Marula Muniya (780)
(Translation from "Thus Sang Marula Muniya" by Sri. Narasimha Bhat)

Tuesday, June 9, 2015

ಜೇನು ಕಪ್ಪುರ ಕೇಸರಗಳು ಪಾಲಿನೊಳು (779)

ಜೇನು ಕಪ್ಪುರ ಕೇಸರಗಳು ಪಾಲಿನೊಳು |
ಲೀನ ವಿಶದಗಳಾಗಿ, ನಿರಹಮಹ ಸ್ವಾರ್ಥಂ ||
ಜ್ಞಾನಿ ಹಿತಕರನಿಹನು ಲೋಕಕ್ಕೆ ನಿಃಸ್ವಾರ್ಥ |
ಲೀನ ವಿಶದದ ಬಾಳು - ಮರುಳ ಮುನಿಯ || (೭೭೯)

(ವಿಶದಗಳ್+ಆಗಿ)(ನಿರಹಂ+ಅಹ)(ಹಿತಕರನ್+ಇಹನು)

ಜೇನುತುಪ್ಪ, ಪಚ್ಚ ಕರ್ಪೂರ ಮತ್ತು ಕೇಸರಿಗಳು ಹಾಲಿನಲ್ಲಿ ಬೆರೆತು ಕರಗಿಹೋದರೂ ಸಹ ಆ ಹಾಲನ್ನು ಆಸ್ವಾದಿಸುವವನ ನಾಲಿಗೆಗೆ ಸ್ಪಷ್ಟವಾಗಿ (ವಿಶದ) ಅವುಗಳ ಇರುವಿಕೆಯು ತಿಳಿಯುತ್ತದೆ. ಅದೇ ರೀತಿ ನಿರಹಂಕಾರ (ನಿರಹ) ಮತ್ತು ಸ್ವಾರ್ಥಗಳೂ ಸಹ, ಮನುಷ್ಯ ಜೀವಿಯಲ್ಲಿ ಅಡಗಿದ್ದರೂ ವ್ಯಕ್ತವಾಗುತ್ತಾ ಇರುತ್ತವೆ. ಜ್ಞಾನಿಯಾದರೋ ಸ್ವಾರ್ಥರಹಿತನಾಗಿ ಜಗತ್ತಿಗೇ ಒಳ್ಳೆಯದನ್ನು ಮಾಡುವವನಾಗಿರುತ್ತಾನೆ. ಅವನ ಜೀವನವು ಜಗತ್ತಿನಲ್ಲಿ ಸೇರಿಕೊಂಡು ಹೋಗಿದ್ದರೂ ಸಹ ಅವನ ಸ್ವಭಾವ ಮತ್ತು ಕಾರ್ಯಗಳು ಇತರರಿಗೆ ಸ್ಪಷ್ಟವಾಗಿ ಕಾಣಿಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Honey, camphor and saffron dissolved in milk can’t be seen
But the sweetness and fragrance can be enjoyed,
Similarly the selfishness of a wise a sage gets dissolved and his selfishness only shines
He gives help and happiness to the world – Marula Muniya (778)
(Translation from "Thus Sang Marula Muniya" by Sri. Narasimha Bhat)

Monday, June 8, 2015

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ (778)

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ |
ಬೆಳಕು ನೆರಳಿನ ಬೆರಕೆ ಹುಳಿಸು ಸಿಹಿ ಬೆರಕೆ ||
ತಿಳಿವು ಮಬ್ಬಿನ ಬೆರಕೆ ಕೊಳಕು ಚೊಕ್ಕಟ ಬೆರಕೆ |
ಕಲಿ ಸೈಸಲುಭಯವನು - ಮರುಳ ಮುನಿಯ || (೭೭೮)

(ಜೀವಗತಿ+ಒಳಿತು+ಅಲ್ಲದುಗಳ)(ಸೈಸಲು+ಉಭಯವನು)

ಜೀವನದ ನಡಗೆಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಬೆರೆತಿರುತ್ತವೆ. ಅದು ಬೆಳಕು ಮತ್ತು ನೆರಳು, ಹುಳಿ ಮತ್ತು ಸಿಹಿ, ತಿಳುವಳಿಕೆ ಮತ್ತು ಅಜ್ಞಾನ, ಮಲಿನ ಮತ್ತು ನೈರ್ಮಲ್ಯ, ಇವುಗಳಂತೆ ಜತೆಗೂಡಿರುತ್ತವೆ. ಈ ಎರಡೂ ಬಗೆಗಳನ್ನು ಸಹಿಸುವುದನ್ನು ಕಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The course of life is a mixture, a mixture of good and evil,
A mixture of light and shade, a mixture of sour and sweetness,
A mixture of knowledge and ignorance, a mixture of the clean and the unclean
Learn to endure both – Marula Muniya (778)
(Translation from "Thus Sang Marula Muniya" by Sri. Narasimha Bhat)