ಒಮ್ಮೊಮ್ಮೆ ಸತಿಪತಿಯರಿರ‍್ವರಾಚರಿತದಲಿ |
ಒಮ್ಮೊಮ್ಮೆಯವರೇಕಮಿರ‍್ತನವನುಳಿದು ||
ಬ್ರಹ್ಮ ಜೀವರ‍್ಕಳಂತಿರರೆ ವೈಕಲ್ಯದಲಿ |
ಮರ್ಮವನುಭವವೇದ್ಯ - ಮರುಳ ಮುನಿಯ || (೮೧)
(ಸತಿಪತಿಯರ್+ಇರ‍್ವರ್+ಆಚರಿತದಲಿ)(ಒಮ್ಮೊಮ್ಮೆ+ಅವರ್+ಏಕಂ+ಇರ‍್ತನವನ್+ಉಳಿದು)
(ಜೀವರ‍್ಕಳ್+ಅಂತು+ಇರರೆ)
ಒಂದೊಂದು ಸಲ ಪತಿ ಪತ್ನಿಯರಿಬ್ಬರ ವರ್ತನೆ(ಆಚರಿತ)ಗಳಲ್ಲಿ, ಒಂದೊಂದು ಸಲ ಅವರಿಬ್ಬರಾಗಿರುವುದನ್ನು (ಇರ‍್ತನವನ್) ಬಿಟ್ಟು ಒಂದೇ ಆಗಿ, ಅವರ ಕುಂದು, ಕೊರತೆ ಮತ್ತು ಚಿಂತೆಗಳ ನಡುವೆಯೂ, ಇಬ್ಬರೂ ಬ್ರಹ್ಮನು ಸೃಷ್ಟಿಸಿದ ಜೀವಗಳೇ ಎಂಬಂತೆ ನಡೆದುಕೊಳ್ಳುವುದಿಲ್ಲವೇನು? ಈ ರಹಸ್ಯ(ಮರ್ಮ)ವನ್ನು ಅನುಭವದಿಂದ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ (ವೇದ್ಯ).
ಈ ಸಂಬಂಧದಲ್ಲಿ ನಾವು ಬೇರೆ ಬೇರೆ ಎಂಬ ಭಾವನೆ ಅಳಿಸಿಹೋಗುತ್ತದೆ. ಗಂಡನ ಮಾತೇ ಹೆಂಗಸಿನ ಇಂಗಿತ, ಹೆಂಗಸಿನ ಇಂಗಿತವೇ ಗಂಡನ ಆಚರಣೆ, ಹಾಗೆ ಬ್ರಹ್ಮವಸ್ತು ಬೇರೆ; ನಾನು ಬೇರೆ; ಜೀವ ಬೇರೆ ಎಂಬ ಭಾವನೆ ಅಳಿಸಿಹೋಗಬೇಕಾದರೆ ನಾನು, ನಾನು ಎಂದು ಹೇಳಿಕೊಳ್ಳುವ ಭಾವನೆ ಮರೆಯಾಗಬೇಕು. ಆಗ ಪರಮಾತ್ಮಾನುಭವದ ಕಡೆ ಒಂದು ಹೆಜ್ಜೆಹಾಕಿದಂತಾಗುತ್ತದೆ.
No comments:
Post a Comment