Showing posts with label ಮರುಳ ಮುನಿಯನ ಕಗ್ಗ. Show all posts
Showing posts with label ಮರುಳ ಮುನಿಯನ ಕಗ್ಗ. Show all posts

Monday, July 18, 2016

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ (796)

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ -|
ಯನ್ಯೋನ್ಯವರಸುತ್ತೆ ಕರೆಯುತ್ತೆ ಜಗದಾ ||
ಪುಣ್ಯದಿಂದೊಡಗೂಡಲಾಗಳುಭಯ ಉಭಯರ ಮುಕ್ತಿ |
ಚೆನ್ನಕೇಶವಮೂರ್ತಿ - ಮರುಳ ಮುನಿಯ || (೭೯೬)

(ಕಡೆ+ಅನ್ಯೋನ್ಯ+ಅರಸುತ್ತೆ)(ಪುಣ್ಯದಿಂದ+ಒಡಗೂಡಲ್+ಆಗಳ್+ಉಭಯ)

ಕಪ್ಪು ಕಲ್ಲು (ಕೃಷ್ಣಶಿಲೆ) ಒಂದುಕಡೆ ಮತ್ತು ಅದನ್ನು ಕಡೆದು ಮೂರ್ತಿಯನ್ನು ಮಾಡುವ ಜಕ್ಕಣಾಚಾರಿಯ ಶಿಲ್ಪಕಲೆ ಮತ್ತೊಂದು ಕಡೆ. ಇವು ಒಂದು ಮತ್ತೊಂದನ್ನು ಹುಡುಕಿಕೊಂಡು ಕರೆಯುತ್ತಾ ಜಗತ್ತಿನ ಪುಣ್ಯದಿಂದ ಸೇರಿಕೊಂಡರೆ, ಆವಾಗ ಅವೆರಡಕ್ಕೂ ಚೆನ್ನಕೇಶವನ ವಿಗ್ರಹದಿಂದ ಮೋಕ್ಷವು ಸಿಗುತ್ತದೆ.

(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dark granite and Jakkana’s sculpture from two different places
Search, call each other and at last due to the
Good fortune of the world they both come together and gain liberation
As the idol of Lord Channakeshava – Marula Muniya (796)
(Translation from "Thus Sang Marula Muniya" by Sri. Narasimha Bhat)

Thursday, May 5, 2016

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು (793)

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು ।
ಮೆಚ್ಚಿಕೊಳ್ಳುವರದನು ನೋಳ್ಪ ಜನರೆಲ್ಲ ॥
ಬಚ್ಚೆಂಬರದು ಬೇರೆ ತಾವಿನೊಳು ಬೆಳೆದಿರಲು ।
ಹುಚ್ಚಲ್ಲವೇನೊ ಇದು? - ಮರುಳ ಮುನಿಯ ॥ (೭೯೩)

(ಮೆಚ್ಚಿಕೊಳ್ಳುವರ್+ಅದನು)(ಬಚ್ಚು+ಎಂಬರ್+ಅದು)(ತಾವಿನ+ಒಳು)

ತಲೆಯ ಕೂದಲನ್ನು ಕುಚ್ಚು ಕುಚ್ಚುಗಳನ್ನಾಗಿ ವಿಂಗಡಿಸಿ ಜಡೆಯನ್ನು ಹೆಣೆಯುತ್ತಾರೆ. ಆವಾಗ ಆ ಜಡೆಯು ನೋಡುವವರ ಕಣ್ಣುಗಳಿಗೆ ಅಂದವಾಗಿ ಕಂಡು, ಅದು ಅವರ ಮೆಚ್ಚಿಗೆಗೆ ಪಾತ್ರವಾಗುತ್ತದೆ. ಆದರೆ ಅದೇ ಕೂದಲು ದೇಹದ ಬೇರೆಯ ಜಾಗ(ತಾವು)ದಲ್ಲಿ ಬೆಳೆದಿದ್ದರೆ, ಅದನ್ನು ಮುಚ್ಚಿಟ್ಟಿಕೋ(ಬಚ್ಚು) ಎಂದೆನ್ನುತ್ತಾರೆ. ಇದು ಒಂದು ಹುಚ್ಚು ಕೆಲಸವಲ್ಲವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
The people who see, appreciate and admire such hair
Want to hide the hair grown in some other body parts,
Is this not sheer madness? - Marula Muniya || (793)
(Translation from "Thus Sang Marula Muniya" by Sri. Narasimha Bhat)

Monday, April 6, 2015

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ (754)

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ |
ರುಂದ್ರ ರಾಸಿಕ್ಕದಿಂದಾತ್ಮಗತಿ ಭಂಗ ||
ದ್ವಂದ್ವದ ಸಮನ್ವಯದ ಬಂಧುರತೆಯಿಂದೆ ನೀಂ |
ಸಾಂದ್ರಾತ್ಮ ಜೀವಿಯಿರು - ಮರುಳ ಮುನಿಯ || (೭೫೪)

(ರಾಸಿಕ್ಕದಿಂದ+ಆತ್ಮಗತಿ)(ಸಾಂದ್ರ+ಆತ್ಮ)

ಇಂದ್ರಿಯಗಳನ್ನು ಪ್ರತಿಬಂಧಿಸಿ (ನಿರೋಧ) ನಡೆಯುವುದರಿಂದ ವಿನೋದಕರವಾದ ಜೀವನವು ಮುರಿದುಬೀಳುತ್ತದೆ. ಘೋರ ರೀತಿಯಲ್ಲಿ (ರುಂದ್ರ) ಇಂದ್ರಿಯ ಸುಖಾಭಿಲಾಶೆಗಳನ್ನು ಅನುಭವಿಸುವುದರಿಂದ, ಆತ್ಮದ ಸಹಜಗತಿ ಕುಂಠಿತವಾಗುತ್ತದೆ. ವೈರುದ್ದ್ಯದ ಹೊಂದಾಣಿಕೆ(ಸಮನ್ವಯ)ಯ ಸುಂದರತೆ(ಬಂಧುರತೆ)ಯಿಂದ ನೀನು ಉನ್ನತವಾದ ಆತ್ಮವನ್ನು ಹೊಂದಿರುವ ಜೀವಿಯಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Suppression of senses jeopardizes happy harmonious life,
Excessive lasciviousness hinders the pilgrimage of self,
Harmoniously coordinate all dualities of life
And be a well-saturated soul – Marula Muniya (754)
(Translation from "Thus Sang Marula Muniya" by Sri. Narasimha Bhat)

Friday, April 3, 2015

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ (753)

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ |
ರಸದಾಶೆಯಿರದೆ ಹಸಿವಿನಲ್ಲಿ ಹುರುಪಿಲ್ಲ ||
ಅಸಮರುಚಿಯಿರದಂದು ರಸವಿವೇಕಿತೆಯಿಲ್ಲ |
ವಿಷಮವಿಂತುಪಯುಕ್ತ - ಮರುಳ ಮುನಿಯ || (೭೫೩)

(ಹಸಿವು+ಇರಿಯದೆ+ಇರೆ)(ಜೀವವು+ಎದ್ದು)(ನಡೆವಂತೆ+ಇಲ್ಲ)(ರಸದ+ಆಶೆ+ಇರದೆ)(ಹುರುಪು+ಇಲ್ಲ)(ಅಸಮರುಚಿ+ಇರದಂದು)(ವಿಷಮ+ಇಂತು+ಉಪಯುಕ್ತ)

ಹಸಿವು ಎನ್ನುವುದು ಜೀವಿಯನ್ನು ತಿವಿದು ಎಬ್ಬಿಸದಿದ್ದರೆ, ಜೀವಿಯು ಎದ್ದು ತನ್ನ ಹಸಿವನ್ನು ತಣಿಸಲು ಆಹಾರವನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಜಗತ್ತಿನ ರುಚಿಗಳನ್ನು ಉಣುವ ಬಯಕೆಗಳಿಲ್ಲದಿದ್ದಲ್ಲಿ ಆ ಹಸಿವನ್ನು ತಣಿಸುವುದರಲ್ಲಿ ಯಾವ ಉತ್ಸಾಹ(ಹುರುಪು)ವೂ ಇರುವುದಿಲ್ಲ. ಬೇರೆ ಬೇರೆ ರುಚಿಗಳಿಲ್ಲದಿದ್ದಲ್ಲಿ ರಸ ರುಚಿಗಳ ಬಗ್ಗೆ ವಿವೇಕಿತನವಿರುವುದಿಲ್ಲ. ಈ ಬಗೆಯಾಗಿ ಅಸಮತೆಯ ಗುಣ ಬಾಳಿಗೆ ಉಪಯುಕ್ತವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If hunger doesn’t spur us we do not get up and walk,
Without desire for delicious dishes, hunger is quite uninteresting,
Without variety in tastes there’s no scope for joyful discrimination
Unevenness thus has its own uses – Marula Muniya (753)
(Translation from "Thus Sang Marula Muniya" by Sri. Narasimha Bhat)

Monday, September 15, 2014

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ (665)

ಕರ್ಮಗಳನನುಕ್ಷಣಮುಮೆಸಗದಿಹನಾರಯ್ಯ |
ಕರ್ಮಗಳ್ ತನಗಾಗಿ ನೈಜದಿಂ ತಾನೆ ||
ಉಣ್ಣಿಪ್ಪವದು ಫಲವ ಶೇಷಮಂ ಭುಕಿಸಲ್ಕೆ |
ಜನ್ಮಾಂತರದ ವಿಧಿಯೊ - ಮರುಳ ಮುನಿಯ || (೬೬೫)

(ಕರ್ಮಗಳನ್+ಅನುಕ್ಷಣಮುಂ+ಎಸಗದೆ+ಇಹನ್+ಆರಯ್ಯ)(ಉಣ್ಣಿಪ್ಪ+ಅದು)

ನಾವು ಪ್ರತಿಯೊಂದು ಕ್ಷಣವೂ ಏನಾದರೂ ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಈ ರೀತಿಯಾಗಿ ಕರ್ಮಗಳನ್ನು ಮಾಡದಿರುವ ಮನುಷ್ಯರು ಯಾರೂ ಇಲ್ಲ. ಕರ್ಮಗಳು ಸಹಜವಾಗಿ ಅವುಗಳ ಫಲವನ್ನು ಮನುಷ್ಯನು ತಾನೇ ಉಣ್ಣುವಂತೆ ಮಾಡಿ, ಮಿಕ್ಕಿರುವುದನ್ನು ಅನುಭವಿಸಲು ಪುನಃ ಜನ್ಮಗಳನ್ನೆತ್ತುವಂತೆ ಮಾಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is there anyone who is not engaged in activity every moment?
The action done for one’s own sake would make him
Eat their fruits and the soul passes through rebirths,
To experience the balance of his Karma – Marula Muniya (665)
(Translation from "Thus Sang Marula Muniya" by Sri. Narasimha Bhat)

Friday, June 27, 2014

ನಡೆಗೆ ನಡೆವಂತೆ ಲೋಗರ್ ಪ್ರಕೃತಿ ಚೋತಿತದಿ (635)

ನಡೆಗೆ ನಡೆವಂತೆ ಲೋಗರ್ ಪ್ರಕೃತಿ ಚೋತಿತದಿ  |
ಹುಡುಗಾಟ ಕುಡಕಾಟ ಮುಡುಕಾಟಗಳಲಿ ||
ಸಿಡುಕೇಕೆ? ಬರಿಯಾಟವೆಂದು ನೀನದನರಿತು |
ಬಿಡಿನಿಲ್ಲು ನಿನ್ನೊಳಗೆ - ಮರುಳ ಮುನಿಯ || (೬೩೫)

ಪ್ರಕೃತಿಯು ಹೇಗೆ ನಡೆಸುತ್ತದೆಯೋ ಹಾಗೆ ಜನಗಳು ಪ್ರಪಂಚದ ಹುಡುಗಾಟ, ತಡಕಾಟದಲ್ಲಿ, ಕುಕ್ಕಾಟ ಮತ್ತು ಮುದರಾಟದಲ್ಲಿ ನಿರತರಾಗುತ್ತಾರೆ. ಇದನ್ನು ಕಂಡು ನೀನು ಕೋಪಗೊಳ್ಳುವುದೇಕೆ? ಇವೆಲ್ಲ ಕ್ರಿಯೆಗಳು ಒಂದು ವಿನೋದವೆಂದು ತಿಳಿದು ಅಂತರಂಗದಲ್ಲಿ ಅವುಗಳಿಂದ ದೂರ ಸರಿದು ಏಕಾಂತನಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Just as an act of free walk, human beings sometimes engage themselves
In childhood acts and acts causing pain and distortions, instigated by Nature
Don’t be annoyed by this but understand that it is mere play
Remain uninvolved in self – Marula Muniya (635)
(Translation from "Thus Sang Marula Muniya" by Sri. Narasimha Bhat)

Thursday, June 26, 2014

ಕಚ್ಚವೇಂ ನಿನ್ನ ಪಲ್ಗಳೆ ನಿನ್ನ ನಾಲಗೆಯ? (634)

ಕಚ್ಚವೇಂ ನಿನ್ನ ಪಲ್ಗಳೆ ನಿನ್ನ ನಾಲಗೆಯ? |
ಚುಚ್ಚದೇಂ ನಿನ್ನ ಕಣ್ಣನೆ ನಿನ್ನ ಬೆರಳು? ||
ಕಿಚ್ಚಹುದು ನಿನ್ನ ಭಾವ್ಯಕ್ಕೆ ನಿನ್ನ ಪೂರ್ವಿಕವೆ |
ಎಚ್ಚರಿರೆ ನಿನಗುಳಿವು - ಮರುಳ ಮುನಿಯ || (೬೩೪)

ನಿನ್ನ ಹಲ್ಲುಗಳೇ ಕೆಲವು ಸಲ ನಿನ್ನ ನಾಲಿಗೆಯನ್ನು ಕಚ್ಚುವುದಿಲ್ಲವೇನು? ಇನ್ನೂ ಕೆಲವು ಸಲ ನಿನ್ನ ಬೆರಳುಗಳೇ ನಿನ್ನ ಕಣ್ಣುಗಳನ್ನು ಚುಚ್ಚುವುದಿಲ್ಲವೇನು? ಹಾಗೆಯೇ ನಿನ್ನ ಭವಿಷ್ಯತ್ತಿಗೆ(ಭಾವ್ಯಕ್ಕೆ) ನಿನ್ನ ಪೂರ್ವಜನ್ಮದ ಕೃತಿಗಳೇ ದಹಿಸುವ ಸಾಧನಗಳಾಗಬಹುದು. ಆದ ಕಾರಣ ನೀನು ಸದಾ ಜಾಗರೂಕನಾಗಿದ್ದರೆ ಮಾತ್ರ ಉಳಿದುಕೊಳ್ಳುತ್ತೀಯೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Don’t your teeth bite your own tongue at times?
Doesn’t your finger at times prick your own eyes?
Your won past may set fire to your future
Constant vigil alone can enable you to survive – Marula Muniya (634)
(Translation from "Thus Sang Marula Muniya" by Sri. Narasimha Bhat)

Wednesday, June 25, 2014

ಮನುಜನೆಲ್ಲ ಕಲಾಚಮತ್ಕೃತಿಗಳುಂ ಪ್ರಕೃತಿ- (633)

ಮನುಜನೆಲ್ಲ ಕಲಾಚಮತ್ಕೃತಿಗಳುಂ ಪ್ರಕೃತಿ- |
ಯನುಕರಣಮವನ ಸಾಮಾಗ್ರಿಯವಳಿತ್ತ ||
ಋಣಮಾತ್ರವಂತಿರೆಯುಮವಳವುತಣದ ಮತ್ತ- |
ನಣಗಿಪೌಷದ ನಿನದ - ಮರುಳ ಮುನಿಯ || (೬೩೩)

(ಮನುಜನ್+ಎಲ್ಲ)(ಪ್ರಕೃತಿಯ+ಅನುಕರಣಂ+ಅವನ)(ಸಾಮಾಗ್ರಿ+ಅವಳಿತ್ತ)(ಋಣಮಾತ್ರ+ಅಂತು+ಇರೆಯುಂ+ಅವಳ+ಅವುತಣದ)(ಮತ್ತನ್+ಅಣಗಿಪ+ಔಷದ)

ಮನುಷ್ಯನ ಎಲ್ಲಾ ಲಲಿತಕಲೆ ಮತ್ತು ವಿಸ್ಮಯಗೊಳಿಸುವ ಕೆಲಸಗಳೆಲ್ಲವೂ ಪ್ರಕೃತಿಯ ಅನುಕರಣ. ಅವಳು ಮಾಡಿದಂತೆ ಇವನೂ ಮಾಡಲು ಯತ್ನಿಸುತ್ತಾನೆ. ಅದಕ್ಕೆ ಬೇಕಾಗುವ ಸಲಕರಣೆಗಳೂ ಸಹ ಅವಳು ಕೊಟ್ಟಿದ್ದೇ ಹೌದು. ಈ ರೀತಿಯಾಗಿ ಅವನು ಅವಳಿಗೆ ಋಣಿಯಾಗಿದ್ದರೂ ಸಹ, ಅವಳ ಔತಣ(ಅವುತಣ)ದ ಅಮಲು ಮತ್ತು ಮದವನ್ನು ಕಡಿಮೆ ಮಾಡಿಸುವ ಔಷದಿ ನಿನ್ನದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All the marvels of man’s art are the imitation of Nature
All the materials he uses are the gifts of Nature
Even then her grand feast may sometimes cause intoxication
And you alone have the antidote to relieve you of it – Marula Muniya (633)
(Translation from "Thus Sang Marula Muniya" by Sri. Narasimha Bhat)

Tuesday, June 17, 2014

ಆಶೆಗಳ ಕೆರಳಿಪುದು ತೋಷಗಳನುಣಿಸುವುದು (630)

ಆಶೆಗಳ ಕೆರಳಿಪುದು ತೋಷಗಳನುಣಿಸುವುದು |
ನಾಶ ಭಯಗಳಿನೆದೆಯ ಕಾಡಿ ಕುಗ್ಗಿಪುದು ||
ಈ ಸೇನೆ ನಿನ್ನ ಸ್ವತ್ತೆನುತಿಹುದು ದೈವಕೃತಿ |
ಲೇಸು ನಿನ್ನೊಳು ನೀನು - ಮರುಳ ಮುನಿಯ || (೬೩೦)

(ತೋಷಗಳನ್+ಉಣಿಸುವುದು)(ಭಯಗಳಿನ್+ಎದೆಯ)(ಸ್ವತ್ತು+ಎನುತ+ಇಹುದು)

ಬಯಕೆಗಳ ಕೆರಳಿಸುವುದು, ಸಂತೋಷ ಮತ್ತು ತೃಪ್ತಿ(ತೋಷ)ಗಳನ್ನನುಭವಿಸುವಂತೆ ಮಾಡುವುದು, ನಷ್ಟ, ಹಾನಿ ಮತ್ತು ಹೆದರಿಕೆಗಳಿಂದ ಎದೆಯನ್ನು ಕಾಡಿ ಕುಗ್ಗಿಸುವುದು, ಈ ದಂಡುಗಳು ನಿನ್ನ ಸ್ವತ್ತು ಎಂದು ದೈವವು ಹೇಳುತ್ತದೆ. ಆದ್ದರಿಂದ ನಿನ್ನೊಳಗೆ ನೀನೇ ಉತ್ತಮತೆ ಮತ್ತು ಒಳ್ಳೆಯದನ್ನು ಕಂಡುಹಿಡಿದುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It stirs up your desires and feeds you with merriments,
It worries and disheartens you with the fear of destruction
This army swears that God’s work is your own monopoly
The best solution is to dwell in your own self – Marula Muniya (630)
(Translation from "Thus Sang Marula Muniya" by Sri. Narasimha Bhat)

Monday, June 16, 2014

ಲೋಕಕ್ಕೆ ಬಿಡುವಿಲ್ಲ ನಿನ್ನ ಚಿಂತಿಸುತಿರಲು (629)

ಲೋಕಕ್ಕೆ ಬಿಡುವಿಲ್ಲ ನಿನ್ನ ಚಿಂತಿಸುತಿರಲು |
ಶೋಕಂಗಳದಕಮಿಹುವಂತು ನಿನಗೆಂತೋ ||
ವ್ಯಾಕುಲಿಸದಿರದಾರುಮಾದರಿಪರಿಲ್ಲೆಂದು |
ಏಕಾಂತ ಶವವಾಹಿ - ಮರುಳ ಮುನಿಯ || (೬೨೯)

(ಚಿಂತಿಸುತ+ಇರಲು)(ಶೋಕಂಗಳ್+ಅದಕಂ+ಇಹುವು+ಅಂತು)(ನಿನಗೆ+ಎಂತೋ)(ವ್ಯಾಕುಲಿಸದೆ+ಇರು+ಅದು+ಆರುಂ+ಆದರಿಪರು+ಇಲ್ಲ+ಎಂದು)

ನಿನ್ನ ಬಗ್ಗೆ ತಲೆ ಕೆಡಿಸಿಕೊಳ್ಳಲು ಪ್ರಪಂಚದಲ್ಲಿ ಯಾರಿಗೂ ಸಮಯವಿಲ್ಲ. ದುಃಖ ಮತ್ತು ದುಮ್ಮಾನಗಳು ನಿನಗಿರುವಂತೆಯೇ ಅವರಿಗೂ ಇವೆ. ಯಾರೂ ನಿನಗೆ ಪ್ರೀತಿ, ಮರ್ಯಾದೆ ಮತ್ತು ಗೌರವವನ್ನು ತೋರಿಸುತ್ತಿಲ್ಲವೆಂದು ದುಃಖಿಸಬೇಡ. ಹೆಣವನ್ನು ಹೊರುವವನು ಒಂಟಿಯಾಗಿಯೇ ಇರಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world has no time to think and worry about you,
It has its own sorrows just as you have your own,
Don’t feel bad thinking that no one treats you with the love and respect,
You have to carry your dead body all alone – Marula Muniya (629)
(Translation from "Thus Sang Marula Muniya" by Sri. Narasimha Bhat)

Friday, June 13, 2014

ಅಹಿತಹಿತಗಳ ಮೂಲವಿಹುದಹಂಭಾವದಲಿ (628)

ಅಹಿತಹಿತಗಳ ಮೂಲವಿಹುದಹಂಭಾವದಲಿ |
ಅಹಮೆಂಬುದೆಲ್ಲಕಂ ಬೆಲೆಯ ಕಟ್ಟುವುದು ||
ಬಹುವಿಧದ ರುಚಿಗಳನು ತೋರಿ ಕರೆಯಲ್ ಪ್ರಕೃತಿ |
ಸ್ವಹಿತ ನಿಶ್ಚಯ ನಿನದು - ಮರುಳ ಮುನಿಯ || (೬೨೮)

(ಮೂಲ+ಇಹುದು+ಅಹಂಭಾವದಲಿ)(ಅಹಮ್+ಎಂಬುದು+ಎಲ್ಲಕಂ)

ಯಾವುದು ಹಿತ ಮತ್ತು ಯಾವುದು ಅಹಿತ ಎನ್ನುವುದರ ಮೂಲವು ಅಹಂಭಾವದಲ್ಲಿರುತ್ತದೆ. ಅದೇ ಪ್ರಪಂಚದ ಎಲ್ಲ ಪದಾರ್ಥಗಳಿಗೂ ಬೆಲೆಯನ್ನು ಕಟ್ಟುತ್ತದೆ. ವಿಧವಿಧವಾದ ರುಚಿಗಳನ್ನು ತೋರಿಸಿ ಪ್ರಕೃತಿಯು ನಿನ್ನನ್ನು ಕರೆಯುತ್ತಿರಲು, ನಿನಗೆ ಯಾವುದು ಹಿತವೆನ್ನುವುದನ್ನು ನೀನೇ ನಿಶ್ಚಯಿಸಿಕೊಳ್ಳಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The roots of good and evil are in your egoism
It is your ego-sense that fixes the value of all objects
It is Nature’s nature to entice you with many tastes
You yourself should decide what is good for you – Marula Muniya (628)
(Translation from "Thus Sang Marula Muniya" by Sri. Narasimha Bhat)

Thursday, June 12, 2014

ನಿನಗೊದಗಿದ ಪ್ರಶ್ನೆಗಳ ನೀನೆ ಬಗೆಹರಿಸಿಕೊಳೊ (627)

ನಿನಗೊದಗಿದ ಪ್ರಶ್ನೆಗಳ ನೀನೆ ಬಗೆಹರಿಸಿಕೊಳೊ |
ಎನಿತುದಿನವವರಿವರನವಲಂಬಿಸುವೆ? ||
ಹೆಣ ಹೊರೆಯವರವರಿಗವರವರೆ ಹೊರುವನಿತು |
ನಿನಗೆ ನೀನೇ ಗತಿಯೋ - ಮರುಳ ಮುನಿಯ || (೬೨೭)

(ಎನಿತುದಿನ+ಅವರ್+ಇವರನ್+ಅವಲಂಬಿಸುವೆ)(ಹೊರೆ+ಅವರವರಿಗೆ+ಅವರವರೆ)

ನಿನಗೆ ಎದುರಾಗಿರುವ ಪ್ರಶ್ನೆಗಳನ್ನು ನೀನೇ ಪರಿಹರಿಸಿಕೊ. ಎನ್ನೆಷ್ಟು ದಿನ ಇದಕ್ಕಾಗಿ ನೀನು ಬೇರೆಯವರನ್ನು ಅವಲಂಬಿಸಿರುತ್ತೀಯೆ? ಪ್ರಪಂಚದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರಿಗೂ ಅವರವರು ಹೊರುವಷ್ಟು ಹೆಣಭಾರಗಳಿರುತ್ತದೆ. ಆದುದ್ದರಿಂದ ನಿನಗೆ ನೀನೇ ಗತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You yourself should solve your own problems
How long can you depend on others?
The dead weight for each to carry is only as much as one can
You yourself are your refuge – Marula Muniya (627)
(Translation from "Thus Sang Marula Muniya" by Sri. Narasimha Bhat)

Friday, June 6, 2014

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು (626)

ಒರ‍್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು |
ಖರ್ವಪಾದಗಳಿರಲಿ ಗುರಿ ದೂರವಿರಲಿ ||
ಸರ್ವರುಂ ತೊರೆದಿರಲಿ ಶರ್ವರಿಯ ಕಾಳಿರಲಿ |
ನಿರ್ವಂಚನೆಯೊ ಮುಖ್ಯ - ಮರುಳ ಮುನಿಯ || (೬೨೬)

ಧರ್ಮಯಾತ್ರೆಯನ್ನು ಮಾಡಲು ನೀನು ಒಬ್ಬನೇ ತಯಾರಾಗಿರು. ನಿನಗೆ ಗಿಡ್ಡ(ಖರ್ವ)ವಾದ ಕಾಲುಗಳಿರಬಹುದು. ನೀನು ತಲುಪಬೇಕಾಗಿರುವ ಗುರಿಯು ಬಹಳ ದೂರದಲ್ಲಿರಬಹುದು. ನಿನ್ನನ್ನು ಎಲ್ಲರೂ ಬಿಟ್ಟುಹೋಗಿರಬಹುದು. ಅದು ಕರಾಳ (ಕಾಳ್) ರಾತ್ರಿ(ಶರ್ವರಿ)ಯಾಗಿರಬಹುದು. ಧರ್ಮಯಾತ್ರೆಯನ್ನು ಮಾಡುವಾಗ ಮತ್ತು ನಿನ್ನ ಗುರಿಯನ್ನು ತಲುಪುವಾಗ ನಿಷ್ಕಪಟಿಯಾಗಿ ಇರುವುದು ಮುಖ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be ready for pilgrimage all alone
Your strides may be short and your goal may be far off
All may desert you and the night may be dark
Sincerity is of supreme importance – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 5, 2014

ಎಡಕೆ ತಿರುಗಲೆ ಬೇಡ ಬಲಕೆ ತಿರುಗಲೆ ಬೇಡ |
ಒಡನಾಡಿಯೆತ್ತಲೆಂದುಸಿರೆತ್ತಬೇಡ ||
ನಡೆ ನಿನ್ನ ಪಾಡ ನೀನಡರಲೊಮ್ಮತಿಯಿಂದೆ |
ಬಿಡುಗಡೆಯೊ ಒರ‍್ತನದಿ - ಮರುಳ ಮುನಿಯ || (೬೨೫)

(ಒಡನಾಡಿ+ಎತ್ತಲ್+ಎಂದು+ಉಸಿರ್+ಎತ್ತ+ಬೇಡ)(ನೀನ್+ಅಡರಲ್+ಒಮ್ಮತಿಯಿಂದೆ)

ಜೀವನದ ಹಾದಿಯಲ್ಲಿ ನಡೆಯುವಾಗ ಎಡಗಡೆ ಅಥವಾ ಬಲಗಡೆ ತಿರುಗಿ ನೋಡಬೇಡ. ನಿನ್ನ ಜೊತೆಗಾರರು ಎಲ್ಲೆಂದು ಉಸಿರೆತ್ತಬೇಡ. ನಿನ್ನ ಪಾಲಿಗೆ ಬಂದ ಅವಸ್ಥೆಯನ್ನು ನೀನು ಸ್ಥಿರಮನದಿಂದ ಹತ್ತು. ನಿನ್ನ ಒಂಟಿ ಸಾಹಸದಿಂದಲೇ ನಿನಗೆ ಈ ಪ್ರಪಂಚದ ವ್ಯವಹಾರಗಳಿಂದ ಬಿಡುಗಡೆಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Turn not to the left, turn not to the right,
Don’t even ask where your companion is,
Walk your path with singleness of mind and reach the goal
Singleness is deliverance – Marula Muniya (625)
(Translation from "Thus Sang Marula Muniya" by Sri. Narasimha Bhat)

Friday, May 30, 2014

ಮೂಕಹೃಚ್ಛೂಲೆಗಳನರಿಯಲಾರದ ಸಖರು (624)

ಮೂಕಹೃಚ್ಛೂಲೆಗಳನರಿಯಲಾರದ ಸಖರು |
ಲೌಕಿಕದ ನಯಗಳಲಿ ಮನವ ಮರೆಯುವರು ||
ಸಾಕು ನಿನ್ನೊಳಗನರಸದ ಜನರ ಸಹವಾಸ |
ಏಕಾಕಿ ನೀನಿರೆಲೊ - ಮರುಳ ಮುನಿಯ || (೬೨೪)

(ಹೃತ್+ಶೂಲೆಗಳು+ಅನರಿಯಲಾರದ)(ನಿನ್ನೊಳಗನ್+ಅರಸದ)(ನೀನ್+ಇರು+ಎಲೊ)

ಬಾಯಿಬಿಟ್ಟು ಹೇಳಲಿಕ್ಕಾಗದಂತಹ ಹೃದಯ(ಹೃತ)ದ ತೀಕ್ಷ್ಣವಾದ ವೇದನೆ(ಶೂಲೆ)ಗಳನ್ನು ತಿಳಿಯಲಾರದ ಸ್ನೇಹಿತರು, ಲೋಕಕ್ಕೆ ಸಂಬಧಿಸಿದ ವ್ಯವಹಾರಗಳಲ್ಲಿ ನಿನ್ನ ಸೂಕ್ಷ್ಮ ಮನಸ್ಸನ್ನು ಅರಿಯಲಾರರು. ನಿನ್ನ ಅಂತರಂಗವನ್ನು ಹುಡುಕದಿರುವ ಜನಗಳ ಸಂಪರ್ಕ ಸಾಕು. ನೀನು ಒಬ್ಬಂಟಿಗ(ಏಕಾಕಿ)ನಾಗೇ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Those friends who can’t understand your silent agonies and sorrows
Forget themselves in smooth polished worldly conduct
Avoid the company of those who never peep into your mind
Be alone in such situation – Marula Muniya (624)
(Translation from "Thus Sang Marula Muniya" by Sri. Narasimha Bhat)

Thursday, May 29, 2014

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ (623)

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ- |
ಯಾತುರದಿ ಕೀಳೆ ಹರಿಯುವುದು ಚೂರಾಗಿ ||
ಚೇತಸದ ಪಾಡಂತು ಜಗದ ಮುಳ್ಗಳಿನದನು |
ಸೈತರಿತು ಬಿಡಿಸಿಕೊಳೊ - ಮರುಳ ಮುನಿಯ || (೬೨೩)

(ಬಿದ್ದ+ಅರಿವೆ+ಆತುರದಿ)(ಪಾಡು+ಅಂತು)(ಮುಳ್ಗಳಿಂ+ಅದನು)

ತಾಳೆ ಹೂ ಮತ್ತು ಗುಲಾಬಿ ಹೂ ಗಿಡಗಳ ಪೊದೆಗಳ ಮೇಲೆ ಬಿದ್ದಿರುವ ಬಟ್ಟೆಯನ್ನು ಆತುರದಿಂದ ಬಿಡಿಸಿಕೊಳ್ಳಲು ಹೋದರೆ ಆ ಬಟ್ಟೆಯು ಹರಿದು ಛಿದ್ರವಾಗುವುದು ಖಂಡಿತ. ಅದೇ ರೀತಿ ಮನಸ್ಸಿನ ಅವಸ್ಥೆ. ಇಂತಹ ಮನಸ್ಸಿನ ಅವಸ್ಥೆಗಳನ್ನು ಜಗತ್ತಿನ ಕಷ್ಟಗಳೆಂಬ ಮುಳ್ಳುಗಳಿಂದ ಶಾಂತವಾಗಿ ಸದ್ದಿಲ್ಲದೆ ಬಿಡಿಸಿಕೊಂಡು ಪಾರಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The cloth fallen on fragrant screw-pine or rose
Will be torn into shreds if you pull it with force
Same is the fate of human mind entangled in worldly thorns
Disentangle it carefully – Marula Muniya (623)
(Translation from "Thus Sang Marula Muniya" by Sri. Narasimha Bhat)

Wednesday, May 28, 2014

ಅನ್ಯರನು ನೀನುದ್ಧರಿಪ ಮಾತಹಂಕಾರ (622)

ಅನ್ಯರನು ನೀನುದ್ಧರಿಪ ಮಾತಹಂಕಾರ |
ಮಣ್ಣು ಹುಳುವೇಂ ಗಜವ ಕುಳಿಯಿನೆತ್ತುವುದು? ||
ಪನ್ನಗಕೆ ಪೊರೆಕಳೆಯುವಿರಕುವೊಲು ಜಗ ನಿನಗೆ |
ನಿನ್ನ ನೀನೆತ್ತಿಕೊಳೊ - ಮರುಳ ಮುನಿಯ || (೬೨೨)

(ನೀನ್+ಉದ್ಧರಿಪ)(ಮಾತು+ಅಹಂಕಾರ)(ಕುಳಿಯಿನ್+ಎತ್ತುವುದು)(ಪೊರೆಕಳೆಯುವ+ಇರಕು+ವೊಲು)(ನೀನ್+ಎತ್ತಿಕೊಳೊ)

ಬೇರೆಯವರನ್ನು ನಾನು ಉದ್ಧರಿಸುತ್ತೇನೆನ್ನುವುದು ಅಹಂಕಾರದ ಮಾತಾಗುತ್ತದೆ. ಮಣ್ಣಿನ ಹುಳುವು ಆನೆಯನ್ನು ತಗ್ಗಿನಿಂದ ಮೇಲಕೆತ್ತಲು ಸಾಧ್ಯವೇ? ಹಾವು ತನ್ನ ಪೊರೆಯನ್ನು ಇಕ್ಕಟ್ಟಿನಲ್ಲಿ ಕಳಚಿಕೊಳ್ಳುವಂತೆ ನಿನಗೆ ಈ ಜಗತ್ತು. ನೀನು ಈ ಕರ್ಮದೇಹವನ್ನು ಇಲ್ಲಿ ತ್ಯಜಿಸುವೆ. ನಿನ್ನನ್ನು ನೀನು ಮೊದಲು ಮೇಲೆತ್ತಿಕೊ. ಆತ್ಮೋದ್ಧಾರ ಮೊದಲು, ಲೋಕೋದ್ಧಾರ ಆಮೇಲೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All talk of redeeming others is sheer egoism
Can an earth-worm lift up and elephant from a deep pit?
The world to you is what a thicket is to a snake to shed its slough
Elevate yourself therefore with your own self-effort – Marula Muniya (622)
(Translation from "Thus Sang Marula Muniya" by Sri. Narasimha Bhat)

Tuesday, May 27, 2014

ಗೊತ್ತಾದ ಕುರುಹು ಹೆಸರುಗಳಿಲ್ಲದಾ ಅಮಿತ (621)

ಗೊತ್ತಾದ ಕುರುಹು ಹೆಸರುಗಳಿಲ್ಲದಾ ಅಮಿತ |
ವಸ್ತುವನು ನೀಂ ತಿಳಿಯುವೊಡೆ ದೃಢದಿ ನಿನ್ನ ||
ಸೊತ್ತೆಂದು (ಪರಿ)ಗಣಿಸು (ಸು)ಜ್ಞಾನದಿಂದಲದು |
ತತ್ತ್ವವಪ್ಪುದು ನಿನಗೆ - ಮರುಳ ಮುನಿಯ || (೬೨೧)

(ಹೆಸರುಗಳು+ಇಲ್ಲದ+ಆ)(ಸುಜ್ಞಾನದಿಂದಲ್+ಅದು)(ತತ್ತ್ವ+ಅಪ್ಪುದು)

ತಿಳಿಯುವಂತಹ ಚಿಹ್ನೆ ಮತ್ತು ಹೆಸರುಗಳಿಲ್ಲದಿರುವ, ಮಿತಿಯಿಲ್ಲದಿರುವ ನಿರಾಕಾರ ನಿರ್ಗುಣ ವಸ್ತುವಾದ ಪರಮಾತ್ಮನನ್ನು ನೀನು ತಿಳಿಯಬೇಕೆಂದರೆ, ಆ ಜ್ಞಾನವನ್ನು ನಿಶ್ಚಿತವಾಗಿ ನಿನ್ನ ಸ್ವತ್ತೆಂದು ಲೆಕ್ಕಕ್ಕೆ ತೆಗೆದುಕೊ. ಒಳ್ಳೆಯ ಜ್ಞಾನಮಾರ್ಗದಿಂದ ಅದು ನಿನಗೆ ತತ್ತ್ವ ಸಿದ್ಧಾಂತವಾಗಿ ಪರಿಣಮಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Infinite Entity has no known names, forms or signs
If you wish to know It well, firmly believe It to be your own asset
With blessed wisdom It becomes your own forever
It becomes your life principle then – Marula Muniya (621)
(Translation from "Thus Sang Marula Muniya" by Sri. Narasimha Bhat)

Friday, May 23, 2014

ಮಚ್ಚರಿಸಬೇಡ ಮಚ್ಚರವನಾಗಿಸಬೇಡ (620)

ಮಚ್ಚರಿಸಬೇಡ ಮಚ್ಚರವನಾಗಿಸಬೇಡ |
ಕಿಚ್ಚದಂಟಲು ಸುಡುವುದೆಲ್ಲ ನಿನ್ನದನು |
ಹೆಚ್ಚು ಕೊರೆಯವರವರ ಪೂರ್ವಕೃತ ತಾತ್‍ಕ್ಷಣಿಕ |
ಉಚ್ಚವಿರಿಸಾತ್ಮವನು - ಮರುಳ ಮುನಿಯ || (೬೨೦)

(ಮಚ್ಚರವನ್+ಆಗಿಸಬೇಡ)(ಕಿಚ್ಚು+ಅದು+ಅಂಟಲು)(ಸುಡುವುದು+ಎಲ್ಲ)(ಕೊರೆ+ಅವರ+ಅವರ)(ಉಚ್ಚ+ಇರಿಸು+ಆತ್ಮವನು)

ಮತ್ಸರ(ಮಚ್ಚರ)ವನ್ನು ಪಡಬೇಡ. ಮತ್ಸರವಾಗುವಂತಹ ಕೃತಿಗಳನ್ನು ಮಾಡಬೇಡ. ಬೆಂಕಿ(ಕಿಚ್ಚು)ಯು ಹೊತ್ತಿಕೊಳ್ಳಲು ನಿನ್ನೆಲ್ಲವನ್ನೂ ಸುಟ್ಟುಹಾಕುತ್ತದೆ. ಒಂದು ಕಡಿಮೆ ಅಥವಾ ಒಂದು ಹೆಚ್ಚಾಗಿರುವುದು ಅವರವರು ಪಡೆದುಕೊಂಡು ಬಂದ ಪೂರ್ವಜನ್ಮಗಳ ಫಲ. ಅದು ಆ ಕ್ಷಣಕ್ಕೆ ಮಾತ್ರ ಅನ್ವಯಿಸುವಂತಾದ್ದು. ಈ ಎಲ್ಲ ಭಾವಗಳನ್ನು ಮೀರಿ ನೀನು ನಿನ್ನ ಆತ್ಮಸ್ಥಿತಿಯನ್ನು ಮೇಲ್ಮಟ್ಟದಲ್ಲಿಟ್ಟುಕೊಂಡಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Envy not others and provoke not envy in others,
When the fire of jealousy is kindled, it burns your everything,
Opulence and poverty are temporary and are the fruits of your karma
But preserve yourself always in excellence – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 22, 2014

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು (619)

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು |
ದೈವಪದಸಾಯುಜ್ಯ ದೇಹ ಬಿಟ್ಟಂದು ||
ಮೂವರಗಳಿವನು ವರಿಸಿದ ಪೂರ್ವಿಕರ್ ಸಾರ |
ಕೋವಿದರ್ ಬೇಡಂತು - ಮರುಳ ಮುನಿಯ || (೬೧೯)

(ನೋವು+ಇರದೆ)(ದೈನ್ಯತೆ+ಉಳಿದ)(ಮೂವರಗಳು+ಇವನು)(ಬೇಡ್+ಅಂತು)

ನಮ್ಮ ಪೂರ್ವಿಕರ ಜೀವನದ ತತ್ತ್ವವು ಈ ಮೂರು ಗುರಿಗಳಲ್ಲಿತ್ತು. ನೋವನ್ನು ಅನುಭವಿಸದೆಯೇ ಬರುವಂತಹ ಸಾವು. ಯಾಚನಾಸ್ಥಿತಿಗಳಿಲ್ಲದ ಜೀವನ. ಮರಣ ಬಂದಾಗ ಪರಮಾತ್ಮನ ಪಾದಾರವಿಂದವನ್ನು ಸೇರುವುದು (ಸಾಯುಜ್ಯ). ತಿಳಿದಂತಹ ಪಂಡಿತರು (ಕೋವಿದರ್) ಈ ವರಗಳನ್ನು ಬೇಡೆಂದು ಹೇಳುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Death without pain and life sans humiliation
Salvation at the feet of the Lord on giving up the body
Our ancestors who opted for the above three boons were really wise
Pray to the Lord for the same – Marula Muniya (619)
(Translation from "Thus Sang Marula Muniya" by Sri. Narasimha Bhat)