Showing posts with label Narasimha Bhat. Show all posts
Showing posts with label Narasimha Bhat. Show all posts

Wednesday, June 1, 2016

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ (794)

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ ।
ಲೇಸೆಂಬೆ ತರುಬೆಂದು ಪೆಣಲೆಂದು ಹೂವ ॥
ಪಾಶವದು ಬೇರೆ ಅಂಗಗಳೊಳಲ್ಲವೇನದಕೆ ।
ಹೇಸುವುದದೇನೆಲವೊ - ಮರುಳ ಮುನಿಯ ॥ (794)

(ತಲೆಯ+ಒಳು+ಇರಲು+ಅದು)(ಅಂಗಗಳ+ಒಳ್+ಅಲ್ಲ+ಏನ್+ಅದಕೆ)(ಹೇಸುವುದು+ಅದು+ಏನ್+ಎಲವೊ)

ಹಗ್ಗ, ಹಗ್ಗಗಳಂತೆ ತಲೆಯ ತುಂಬ ಕೂದಲುಗಳಿದ್ದರೆ, ಅದು ಅಂದ(ಲೇಸು)ವಾಗಿ ಕಾಣುತ್ತದೆಂದು ಮುಡಿಯನ್ನು(ತುರುಬು) ಹೆಣೆದು, ಅದಕ್ಕೆ ಹೂವನ್ನು ಮುಡಿಸುತ್ತಾರೆ. ಅದೇ ಕೂದಲು ದೇಹದ ಬೇರೆ ಅಂಗಗಳಲ್ಲಿ ಇದ್ದರೆ, ಅದು ನೇಣುಹಗ್ಗದಂತಾಗಿ, ನೋಡುವವರಿಗೆ ಅಸಹ್ಯಕರವಾಗಿ(ಹೇಸುವುದು) ಕಾಣುತ್ತದೆ ಅಲ್ಲವೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
People admire it as braid or plait and decorate it with flowers,
But when the rope like hair grows in other parts of the body
Why should they detest it ? - Marula Muniya (794)
(Translation from "Thus Sang Marula Muniya" by Sri. Narasimha Bhat)

Tuesday, February 17, 2015

ಇಂದೆಂಬುದೀಚಣವೊ ನಾವುಸಿರ‍್ವಷ್ಟು ದಿನ (723)

ಇಂದೆಂಬುದೀಚಣವೊ ನಾವುಸಿರ‍್ವಷ್ಟು ದಿನ |
ತಂದೆ ನಿನ್ನೆಯೊ (ಇಂದೊ) ನಾಳೆಯೇ ಮಗನೊ ||
ಹಿಂದು-ಮುಂದುಗಳ ಮರೆತಿಂದು ಬಾಳ್ವುದು ಸರಿಯೆ |
ಇಂದನಂತದ ಭಾಗ - ಮರುಳ ಮುನಿಯ || (೭೨೩)

(ಇಂದ್+ಎಂಬುದು+ಈಚಣವೊ)(ನಾವ್+ಉಸಿರ‍್ವಷ್ಟು)(ಮರೆತು+ಇಂದು)(ಇಂದು+ಅನಂತತ)

ಈವತ್ತು ಎನ್ನುವುದು ಈ ಕ್ಷಣ (ಚಣ) ಮತ್ತು ಅದು ನಮ್ಮಲ್ಲಿ ಉಸಿರು ಇರುವಷ್ಟು ಹೊತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಈವತ್ತು ತಂದೆಯಾಗಿರುವವನು, ನಾಳೆ ಮಗನಾಗಿ ಹುಟ್ಟುತ್ತಾನೋ? ನಾವು ಈ ಹಿಂದು ಮತ್ತು ಮುಂದುಗಳನ್ನು ಮರೆತು ಜೀವನವನ್ನು ನಡೆಸುವುದು ಸರಿಯೇನು? ಈವತ್ತೆನ್ನುವುದು ಅನಂತಕಾಲದ ಒಂದು ಅಂಶವಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is today? Is it just this moment or our entire life till our last breath?
The father of yesterday or today, may be the son tomorrow,
Is it then proper to live in the present forgetting the past and the future?
Today is just a minute fraction of eternity – Marula Muniya (723)
(Translation from "Thus Sang Marula Muniya" by Sri. Narasimha Bhat)

Friday, January 9, 2015

ಪಾರವಿಲ್ಲದಿಹ ಚೈತನ್ಯರಾಶಿಯೊ ಜೀವ (717)

ಪಾರವಿಲ್ಲದಿಹ ಚೈತನ್ಯರಾಶಿಯೊ ಜೀವ |
ಬೇರಿನಾ ಬೇರೆ ನೀನೆಂತರಿವೆ? ಕರಿದೆ? ||
ತಾರೆಯಳೆವಣುವೊಡೆವ ಯಂತ್ರಗಳಿಗೆಟುಕದದು |
ಆರರಿವರದರಿರವ - ಮರುಳ ಮುನಿಯ || (೭೧೭)

(ಪಾರ+ಇಲ್ಲದೆ+ಇಹ)(ನೀನ್+ಎಂತು+ಅರಿವೆ)(ತಾರೆಯ+ಅಳೆವ+ಅಣುವ+ಒಡೆವ)(ಯಂತ್ರಗಳಿಗೆ+ಎಟುಕದು+ಅದು)

ಎಲ್ಲೆಯಿಲ್ಲದಿರುವ ಚೇತನ ತುಂಬಿಕೊಂಡಿರುವ ರಾಶಿ ಈ ಜೀವವೆನ್ನುವುದು. ಬೇರುಗಳ ಬೇರನ್ನು, ಎಂದರೆ, ಮೂಲದ ಮೂಲವನ್ನು ನೀನು ಹೇಗೆ ತಿಳಿಯಲು ಸಾಧ್ಯ? ಅದು ಕಪ್ಪಾಗಿರುವುದೇನು? ನಕ್ಷತ್ರಗಳನ್ನು ಅಳೆಯುವ ಮತ್ತು ಅಣುಗಳನ್ನು ಬೇರ್ಪಡಿಸುವ ಯಂತ್ರಗಳಿಗೆ ಈ ವಸ್ತುವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಸ್ಥಿತಿಯನ್ನು ತಿಳಿದವರು ಯಾರಿದ್ದಾರೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The soul is an infinite sea of dynamic energy,
How can you know the mother root of all roots? Is it ever possible?
The machines measuring stars and splitting atoms cannot touch it,
Who can know its nature and existence? – Marula Muniya (717)
(Translation from "Thus Sang Marula Muniya" by Sri. Narasimha Bhat)

Monday, January 5, 2015

ಸರ್ವಜ್ಞನಾಳುತಿರಲೇಕಿಂತು ಲೋಕದಲಿ (714)

ಸರ್ವಜ್ಞನಾಳುತಿರಲೇಕಿಂತು ಲೋಕದಲಿ |
ದುರ್ವಾರ ದೋಷಗಳು? ಧರ್ಮಲೋಪಗಳು ? ||
ಸರ್ವಕಾರುಣಿಕಪ್ರಭುತ್ವದೊಳಗೇಕಿಂತು |
ನಿರ್ವಿಣ್ಣತೆಯೊ ಜನಕೆ ? - ಮರುಳ ಮುನಿಯ || (೭೧೪)

(ಸರ್ವಜ್ಞನು+ಆಳುತ+ಇರಲ್+ಏಕೆ+ಇಂತು)(ಪ್ರಭುತ್ವದ+ಒಳಗೆ+ಏಕೆ+ಇಂತು)

ಸಕಲವನ್ನೂ ಅರಿತಿರುವ ಪರಮಾತ್ಮನು ಆಳುತ್ತಿರುವ ಈ ಜಗತ್ತಿನಲ್ಲಿ ಏಕೆ ಈ ತಡೆಯಲಿಕ್ಕಾಗದಂತಹ (ದುರ್ವಾರ) ಕುಂದುಕೊರತೆಗಳು ಮತ್ತು ಧರ್ಮಲೋಪಗಳು? ಎಲ್ಲರಲ್ಲೂ ದಯೆ ಮತ್ತು ಕನಿಕರಗಳನ್ನು ತೋರಿಸತಕ್ಕಂತಹ ಆಡಳಿತದಲ್ಲಿ ಜನಗಳಿಗೆ ನಿರಾಸೆ ಮತ್ತು ದುಃಖಗಳು ಏಕೆ ಮತ್ತು ಹೇಗೆ ಬಂತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why such irresistible evils and ethical lapses
In this world ruled by the omniscient Lord?
Why such despair to people under the rule of
The All merciful King? – Marula Muniya (714)
(Translation from "Thus Sang Marula Muniya" by Sri. Narasimha Bhat)

Thursday, December 18, 2014

ವಿಶದನುಂ ಲೀನನುಂ ನೀನಾಗು ಲೋಕದಲಿ (708)

ವಿಶದನುಂ ಲೀನನುಂ ನೀನಾಗು ಲೋಕದಲಿ |
ಕುಶಲಗುಣದಿಂ ವಿಶದಮೌನದಿಂ ಲೀನ ||
ಹೆಸರಿಗೈಸಿರಿಗಾದ ಘಾಸಿಬೆಮರಿಂ ಲೋಕ- |
ದುಸಿರ ನೀಂ ಕೆಡಿಸದಿರು - ಮರುಳ ಮುನಿಯ || (೭೦೮)

(ಹೆಸರಿಗೆ+ಐಸಿರಿಗೆ+ಆದ)(ಲೋಕದ+ಉಸಿರ)(ಕೆಡಿಸದೆ+ಇರು)

ಈ ಜಗತ್ತಿನಲ್ಲಿ ಸ್ಪಷ್ಟ(ವಿಶದ)ವಾಗಿ ಕಾಣಿಸಿಕೊಳ್ಳುವವನೂ ಮತ್ತು ಕಣ್ಣುಗಳಿಗೆ ಕಾಣಿಸಿಕೊಳ್ಳದೆ ಅಡಗಿಕೊಂಡಿರುವವನೂ (ಲೀನ) ಆಗು. ಚತುರತೆಯಿಂದ ಕೂಡಿದ ಸ್ವಭಾವಗಳಿಂದ ನೀನು ಸ್ಪಷ್ಟವಾಗಿ ಕಾಣಿಸಿಕೊಳ್ಳಬಲ್ಲೆ. ಮಾತನಾಡದೆ ಮೌನದಿಂದದಿರುವುದರಿಂದ ಇತರರ ಕಣ್ಣುಗಳಿಗೆ ನೀನು ಕಾಣಿಸಿಕೊಳ್ಳದೆ ಅಡಗಿರಬಲ್ಲೆ. ಬಿರುದು ಮತ್ತು ಹೆಸರುಗಳನ್ನೂ ಮತ್ತು ಸಿರಿ, ಸಂಪತ್ತು(ಐಸಿರಿ)ಗಳನ್ನೂ ಗಳಿಸಲು ಆಯಾಸದಿಂದ ಸುರಿಸಿದ (ಘಾಸಿ)ಬೆವರಿನಿಂದ ಜಗತ್ತಿನ ವಾತಾವರಣವನ್ನು ನೀನು ಹಾಳುಮಾಡಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be conspicuous in the world with your excellent virtues
And be inconspicuous by merging silently in the world.
Pollute not the breath of humanity with your stinking sweat
Caused in your struggle for fame and wealth – Marula Muniya (708)
(Translation from "Thus Sang Marula Muniya" by Sri. Narasimha Bhat) 

Monday, December 15, 2014

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ (707)

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ |
ಮಸ್ತಕದ ಗಿರಿಶಿಖರದಲಿ ಶಾಸ್ತ್ರವೊಂದು ||
ಹೃತ್ಸಾನುವೊಳ್ ಕಾವ್ಯ ನಿಂತು ಹಿತಮಿರೆ ತಂಗಿ |
ಮೃಚ್ಛಿಲೆಗೆ ಸಂಸ್ಕಾರ - ಮರುಳ ಮುನಿಯ || (೭೦೭)

(ದೀಪ್ತಿ+ಎರಡು+ಎಡೆಗೆ)(ಹೃತ್+ಸಾನು+ಒಳ್)(ಹಿತಂ+ಇರೆ)(ಮೃತ್+ಶಿಲೆ)

ತತ್ತ್ವ ಮತ್ತು ಸೂರ್ಯನ ಕಿರಣಗಳು ಜೀವದ ಎರಡು ಬದಿಗಳು ಇದ್ದಂತೆ ಶಿರಸ್ಸೆಂಬ(ಮಸ್ತಕ) ಬೆಟ್ಟದ ತುದಿಯಲ್ಲಿ ಶಾಸ್ತ್ರ ಮತ್ತು ಹೃದಯವೆಂಬ ಬೆಟ್ಟದ ತಪ್ಪಲಿ(ಸಾನು)ನಲ್ಲಿ ಕಾವ್ಯವು ಹಿತವಾಗಿ ನೆಲೆಯೂರಿದರೆ ಮಣ್ಣು (ಮೃತ್) ಮತ್ತು ಕಲ್ಲು(ಶಿಲೆ)ಗಳಿಂದ ಕೂಡಿದ ಈ ದೇಹದ ಶುದ್ಧ ಮಾಡುವಿಕೆಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sum of divine truth shines at two places in man,
The sunbeams settle as shastras on the hill top of humanhead
The rays as poetry fall into hillside valley giving comfort
Both refine the soil and stone in the human being – Marula Muniya (707)
(Translation from "Thus Sang Marula Muniya" by Sri. Narasimha Bhat)

Wednesday, November 19, 2014

ಹಳೆಯ ರೋಗದಿ ಹೊಸ ಚಿಕಿತ್ಸೆಯಿಂ ರುಜೆ ಹೊಸತು (697)

ಹಳೆಯ ರೋಗದಿ ಹೊಸ ಚಿಕಿತ್ಸೆಯಿಂ ರುಜೆ ಹೊಸತು |
ಒಳಗೆ ಮಾರ‍್ಪಡಿಸದಿರ‍್ಪುದೆ ಮದ್ದು ಮೈಯ ||
ನೆಲನ ನೀಂ ಸೋಂಕಿದುಡೆ ಮಣ್ ಪೊಸತು ಪೊಸತು ಕೈ |
ಮಿಲನವೇ ನವಸೃಷ್ಟಿ - ಮರುಳ ಮುನಿಯ || (೬೯೭)

(ಮಾರ‍್ಪಡಿಸದೆ+ಇರ‍್ಪುದೆ)

ಹಳೆಯ ಕಾಯಿಲೆಗೆ ಒಂದು ಹೊಸ ಔಷದಿಯನ್ನು ಉಪಯೋಗಪಡಿಸಿದರೆ, ಇನ್ನೊಂದು ಹೊಸ ಕಾಯಿಲೆ(ರುಜೆ)ಯು ಹುಟ್ಟಿಕೊಳ್ಳುತ್ತದೆ. ಏಕೆಂದರೆ ಹೊಸ ಔಷಧಿಯು ದೇಹವನ್ನು ಒಳಗಡೆ ಬದಲಾಯಿಸದೆ ಇರುವುದೇನು? ನೀನು ನಿನ್ನ ಕೈಗಳನ್ನು ನೆಲಕ್ಕೆ ಸೋಕಿಸಿ ಕೃಷಿ ಮಾಡಿದ್ದಲ್ಲಿ, ನಿನ್ನ ಕೈಗಳು ಹೊಸ ಮಣ್ಣನ್ನು ಸೋಕಿ, ಅವೂ ಸಹ ಹೊಸದಾಗುತ್ತವೆ. ಈ ಬಗೆಯಲ್ಲಿ ಕೂಡಿಕೊಳ್ಳುವುದೇ ಹೊಸ ರಚನೆಯಾಗಲು ಕಾರಣವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old disease changes into a new one with new treatment
Doesn’t the medicine effect change in the inner parts of body?
When you touch the earth the soil and hands are new
And joining of the two leads to new creation - Marula Muniya (697)
(Translation from "Thus Sang Marula Muniya" by Sri. Narasimha Bhat)

Tuesday, November 18, 2014

ದೈವಪ್ರಮಾದಿಗಳ ಸಂಸ್ಕರಣಚೋದಕರ (696)

ದೈವಪ್ರಮಾದಿಗಳ ಸಂಸ್ಕರಣಚೋದಕರ |
ಗೋವಿಂದ ಜಿನ ಬುದ್ಧ ಕ್ರಿಸ್ತ ಮಹಮದರ ||
ಗೋವುರಂಗಳೊಳಿರಿಸಿ ನಮಿಪೆವೆಂಬರು ಜನರು |
ಜೀವನಕೆ ಸೋಕಿಸರು - ಮರುಳ ಮುನಿಯ || (೬೯೬)

(ಗೋವುರಂಗಳ+ಒಳ+ಇರಿಸಿ)(ನಮಿಪೆ+ಎಂಬರು)

ದೇವಸಂದೇಶವನ್ನು ಸಾರುವ ದೇವದೂತರುಗಳನ್ನು ಮತ್ತು ಬಾಳನ್ನು ಹಸನುಗೊಳಿಸಿ, ಉದ್ಧಾರಗೊಳಿಸಿದ ಗೋವಿಂದ, ಮಹಾವೀರ, ಗೌತಮಬುದ್ಧ, ಏಸು ಕ್ರಿಸ್ತ ಮತ್ತು ಪ್ರವಾದಿ ಪೈಗಂಬರುಗಳನ್ನು, ಜನರು ಗೋಪುರ(ಗೋವುರ)ಗಳೊಳಗಡೆ ಇಟ್ಟು ಪೂಜಿಸುತ್ತಾರೆಯೇ ಹೊರತು ಅವರ ಹಿತೋಪದೇಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The messengers of God and great reformers like
Govinda, Jina, Buddha, Christ and Mohammed,
People who wish to install them on high towers and worship
Keep them away from their lives – Marula Muniya (696)
(Translation from "Thus Sang Marula Muniya" by Sri. Narasimha Bhat)

Monday, November 17, 2014

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ (695)

ಕಾದ ಪಾತ್ರೆಯ ಸೋಕದಿಹ ಕಾಳು ಬಾಯ್ಗೆ ಕಸ |
ಸೀದು ಬಿದ್ದಿಹ ಕಾಳು ಬೀದಿಗೆಲ್ಲ ಕಸ ||
ಬೂದಿಯಾಗದೆ ಭವದೆ ಪಕ್ವವಾಗಿಹ ಜೀವ |
ಸ್ವಾದು ರುಚಿಯೋ ಜಗಕೆ - ಮರುಳ ಮುನಿಯ || (೬೯೫)

ಕಾಳನ್ನು ಬಿಸಿಪಾತ್ರೆಯಲ್ಲಿ ಹಾಕಿ ಸರಿಯಾಗಿ ಹುರಿಯದಿದ್ದಲ್ಲಿ, ಅದು ಬಾಯಿಗೆ ರುಚಿಯಾಗುವುದಿಲ್ಲ. ಆದರೆ ಅದೇ ಕಾಳು ಬಿಸಿ ಪಾತ್ರೆಯಲ್ಲಿ ಸುಟ್ಟು ಕರಕಲಾಗಿ ಹೋದರೆ ಅದನ್ನು ಬೀದಿಗೆ ಎಸೆಯಬೇಕಾಗುತ್ತದೆ. ಅದೇ ರೀತಿ ಸಂಸಾರ(ಭವ)ವನ್ನು ನಿರ್ವಹಿಸುವುದರಲ್ಲಿ ಸುಟ್ಟು ಬೂದಿಯಾಗದೆ ಚೆನ್ನಾಗಿ ಪಕ್ವವಾಗಿರುವ ಜೀವವು, ಜಗತ್ತಿಗೆ ಎಲ್ಲರೂ ಬಯಸುವ ರೀತಿಯಲ್ಲಿ ಸವಿಯಾಗಿ ಹದವಾದ ಜೀವವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The grain that isn’t heated in a hot vessel is a tasteless waste,
The grain that is scorched becomes a waste even to the public,
The soul that ripens in the world without being burnt
Is delicious to the world – Marula Muniya (695)
(Translation from "Thus Sang Marula Muniya" by Sri. Narasimha Bhat)

Wednesday, November 12, 2014

ಗಾಳಿಗೋಪುರ ಸೊಗಸು ಗಾರ್ ಗೋಪುರಕಿಂತ (694)

ಗಾಳಿಗೋಪುರ ಸೊಗಸು ಗಾರ್ ಗೋಪುರಕಿಂತ |
ತಾಳದೆ ಮನಃಶಿಲ್ಪ ಕಾಮರೂಪಗಳ ||
ಏಳುವುದದೆಂತೊ ಬೀಳ್ವುದುಮಂತು ಆ ಚಿತ್ರ |
ಬಾಳ್ವನಿತ ಕಟ್ಟಿಕೊಳೊ - ಮರುಳ ಮುನಿಯ || (೬೯೪)

(ಏಳುವುದು+ಅದು+ಎಂತೊ)(ಬೀಳ್ವುದುಂ+ಅಂತು)(ಬಾಳ್ವ+ಅನಿತ)

ಗಾಳಿಯಲ್ಲಿ ಗೋಪುರವನ್ನು ಕಟ್ಟುವುದು, ಎಂದರೆ ಮನಸ್ಸಿನಲ್ಲೇ ಮಂಡಿಗೆಯನ್ನು ತಿನ್ನುವುದು, ನಿಜವಾಗಿ ಗೋಪುರವನ್ನು ಕಟ್ಟುವುದಕ್ಕಿಂತಾ ಸೊಗಸಾಗಿ ಕಾಣುತ್ತದೆ. ಏಕೆಂದರೆ ಮನಸ್ಸಿನಲ್ಲಿ ತಾನು ಬಯಸಿದಂತಹ ಆಕಾರಗಳನ್ನು ಊಹಿಸಿಕೊಳ್ಳಬಹುದು. ಆದರೆ ಈ ಚಿತ್ರವು ಹೇಗೆ ರೂಪುಗೊಳ್ಳುವುದೋ ಹಾಗೆಯೇ ಧಿಡೀರ್ ಎಂದು ಬಿದ್ದುಹೋಗುತ್ತದೆ. ಆದಕಾರಣ ಕಲ್ಪನೆಗಳು ಬಾಳಿಗೆ ನೆರವಾಗುವಷ್ಟರಮಟ್ಟಿಗೆ ಮಾತ್ರ ಇರಬೇಕು ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A castle in the air is more attractive than a mansion of brick and mortar,
Mental sculpture can take any desired form,
Such pictures rise rapidly and disappear in moments
Build something that lasts life-time – Marula Muniya (694)
(Translation from "Thus Sang Marula Muniya" by Sri. Narasimha Bhat)

Tuesday, November 11, 2014

ಜೀವನವಿವರ್ಧನೆಯೆ ನಿತ್ಯದೆನ್ನುದ್ಯೋಗ (693)

ಜೀವನವಿವರ್ಧನೆಯೆ ನಿತ್ಯದೆನ್ನುದ್ಯೋಗ |
ಆವ ಕಾಣಿಕೆಯನೀನದಕೀವೆಯೆನುತೆ ||
ಆವಗಂ ಕೇಳುತಿರುವಳ್ ಪ್ರಕೃತಿ ಶಿಶುಗಳನು |
ಜೀವನೋದ್ಧೃತಿಗೊದಗೊ - ಮರುಳ ಮುನಿಯ || (೬೯೩)

(ನಿತ್ಯದ+ಎನ್ನ+ಉದ್ಯೋಗ)(ಕಾಣಿಕೆಯ+ನೀನ್+ಅದಕೆ+ಈವೆ+ಎನುತೆ)(ಜೀವನ+ಉದ್ಧೃತಿಗೆ+ಒದಗೊ)

ನನ್ನ ಪ್ರತಿನಿತ್ಯದ ಕೆಲಸವೂ ನಿನ್ನ ಜೀವನದ ಸೊಗಸನ್ನು ಹೆಚ್ಚಿಸುವುದಕ್ಕಾಗಿಯೇ ಇದೆ, ಇದಕ್ಕಾಗಿ ನೀನು ಯಾವ ಉಡುಗರೆಯನ್ನು ಕೊಡುವೆಯೆಂದು ತನ್ನ ಮಕ್ಕಳನ್ನು ಯಾವಾಗಲೂ ಕೇಳುತ್ತಿರುತ್ತಾಳೆ. ಜೀವನವನ್ನು ಸುಖಮಯಗೊಳಿಸಲು ನೆರವಾಗುವುದೇ ಪ್ರಕೃತಿಗೆ ನಾವು ಕೊಡುವ ಕಾಣಿಕೆ ಆಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Working for the prosperity of world life is my daily occupation”
What’s your contribution for this prosperity of life?
Mother Nature thus asks her children time and again.
Join the venture for elevating life to excellence – Marula Muniya (693)
(Translation from "Thus Sang Marula Muniya" by Sri. Narasimha Bhat)

Monday, November 10, 2014

ಬದುಕೆಲ್ಲಮುಂ ಜನಕೆ ವರ್ತಕ ವ್ಯಾಪಾರ (692)

ಬದುಕೆಲ್ಲಮುಂ ಜನಕೆ ವರ್ತಕ ವ್ಯಾಪಾರ |
ತ್ರಿದಿವದೊಡನೆಯುಮಿನಿತು ಮುಯ್ ಮುಯ್ವುದೇಕೆ? ||
ಮದುವೆಯೌತಣದೊಳು ಮಳಿಗೆ ಲೆಕ್ಕಾಚಾರ |
ಹೃದಯಜೀವನ ಶೂನ್ಯ - ಮರುಳ ಮುನಿಯ || (೬೯೨)

(ತ್ರಿದಿವದ+ಒಡನೆಯುಂ+ಇನಿತು)(ಮುಯ್ವುದು+ಏಕೆ)(ಮದುವೆಯ+ಔತಣದ+ಒಳು)

ಪ್ರಪಂಚದಲ್ಲಿ ನಡೆಸುವ ಜೀವನವನ್ನು ಜನಗಳು ಒಂದು ವ್ಯಾಪಾರದ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಸ್ವರ್ಗ(ತ್ರಿದಿವ)ಸುಖ ಅನುಭವಿಸುವಾಗಲೂ ದೇವತೆಗಳೊಡನೆ ಲೆಕ್ಕಾಚಾರ ಮಾಡುವುದೇಕೆ? ಮದುವೆಯ ಊಟವನ್ನು ಮಾಡುತ್ತಿರುವಾಗ ಅಂಗಡಿಯ ಸರಕುಗಳ ಯೋಚನೆ ಮಾಡಬಹುದೇ? ಹೀಗೆ ಎಲ್ಲಾ ಕಡೆ ವ್ಯಾಪಾರೀ ಮನೋಧರ್ಮದಿಂದಲೇ ಬಾಳುವುದಾದರೆ ಹೃದಯವಂತಿಕೆಯ ಬದುಕು ಎಂಬುದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All life has become the merchant’s trade to men!
Why do you complete and struggle against Heaven like this?
Business calculations even at the time of wedding feast!!
All life activity is devoid of heart-felt emotions – Marula Muniya (692)
(Translation from "Thus Sang Marula Muniya" by Sri. Narasimha Bhat)

Friday, November 7, 2014

ಜೀವ ತಾಂ ಪ್ರತ್ಯಕ್ಷ ದೈವಾಂಶವಾಗಿರಲು (691)

ಜೀವ ತಾಂ ಪ್ರತ್ಯಕ್ಷ ದೈವಾಂಶವಾಗಿರಲು |
ಆವುದೋ ಶಾಸ್ತ್ರವಾಕ್ಯವನರಸಲೇಕೆ? ||
ಜೀವಪೋಷಣೆಗಲ್ತೆ ಮಿಕ್ಕೆಲ್ಲ ದೇವರುಂ |
ಜೀವಿತವೆ ಪರತತ್ತ್ವ - ಮರುಳ ಮುನಿಯ || (೬೯೧)

(ದೈವಾಂಶ+ಆಗಿರಲು)(ಶಾಸ್ತ್ರವಾಕ್ಯವಂ+ಅರಸಲ್+ಏಕೆ)

ಜೀವವು ಕಣ್ಣಿಗೆ ಕಾಣಿಸುತ್ತಿರುವ ದೈವದ ಭಾಗವಾಗಿರಲು, ಯಾವುದೋ ಬೇರೆ ಶಾಸ್ತ್ರಗಳ ವಾಕ್ಯಗಳನ್ನು ಹುಡುಕಿಕೊಂಡು ಏಕೆ ಹೋಗುತ್ತೀಯೆ? ಮಿಕ್ಕೆಲ್ಲಾ ದೇವರುಗಳಿರುವುದು ಜೀವಿಯನ್ನು ಕಾಪಾಡುವುದಕ್ಕೆ ತಾನೆ? ಈ ಜಗತ್ತಿನಲ್ಲಿ ಬದುಕಿ ಬಾಳುವುದೇ ಶ್ರೇಷ್ಠವಾದ ತತ್ತ್ವ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the Soul itself if God’s own visible part personified
Why should you seek the support of shastras?
Are not all Gods worshipped for the sustenance of the soul?
Life itself is Divinity personified – Marula Muniya (691)
(Translation from "Thus Sang Marula Muniya" by Sri. Narasimha Bhat)

Tuesday, November 4, 2014

ಜೀವನವ ಶುಚಿಯೆನಿಸು ಜೀವನವ ರುಚಿಯೆನಿಸು (690)

ಜೀವನವ ಶುಚಿಯೆನಿಸು ಜೀವನವ ರುಚಿಯೆನಿಸು |
ದೈವದೊಂದಂಶ ಸಂಪುಟವೊಂದು ಜೀವ ||
ದೈವಪದಯೋಗ್ಯತೆಯ ಜೀವಿತಕೆಗಳಿಸಲದೆ |
ಜೀವಜಯಸಂಪ್ರಾಪ್ತಿ - ಮರುಳ ಮುನಿಯ || (೬೯೦)

(ದೈವದ+ಒಂದು+ಅಂಶ)(ಜೀವಿತಕೆ+ಗಳಿಸಲ್+ಅದೆ)

ಜೀವನವನ್ನು ನಿರ್ಮಲ ಮತ್ತು ಪವಿತ್ರವನ್ನಾಗಿ ಮಾಡಿಕೊ. ಅದನ್ನು ಸವಿಯೆನ್ನಿಸುವಂತೆ ಮಾಡಿಕೊ. ಜೀವವು ದೈವದ ಪುಸ್ತಕದ ಒಂದು ಭಾಗವಷ್ಟೆ. ಜೀವನವನ್ನು ನಡೆಸಿ ಪರಮಾತ್ಮನ ಪಾದಾರವಿಂದವನ್ನು ಸೇರುವ ಅರ್ಹತೆಯನ್ನು ಸಂಪಾದಿಸಿಸಲ್ಲಿ ಅದೇ ಜೀವಕ್ಕೆ ಗೆಲುವಿನ ದಾರಿಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Keep your life pure and make your life and abode of happiness,
You soul is a casket for God’s own portion,
Success in life you will attain when you acquire godliness
For your own life – Marula Muniya (690)
(Translation from "Thus Sang Marula Muniya" by Sri. Narasimha Bhat)

Monday, November 3, 2014

ಯುಗದಿಂದ ಯುಗಕೆ ಸಾಗಿದರು ಮುಗಿಯದು ಬಾಳು (689)

ಯುಗದಿಂದ ಯುಗಕೆ ಸಾಗಿದರು ಮುಗಿಯದು ಬಾಳು |
ಜಗದ ಕುಣಿವೊಂದು ಚಣ ಮನುಜ ಜೀವನದಿ ||
ನೆಗೆ ಸೂರ್ಯಮಂಡಲಕ್ಕೆರಗು ಭೂಮಂಡಲಕೆ |
ಬಗೆ ನಿನಗೆ ನೀನೆ ದೊರೆ - ಮರುಳ ಮುನಿಯ || (೬೮೯)

(ಸೂರ್ಯಮಂಡಲಕ್ಕೆ+ಎರಗು)

ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಮುಂದುವರಿದರೂ ಸಹ, ಬದುಕು ಕೊನೆಗಾಣುವುದಿಲ್ಲ. ಮನುಷ್ಯನ ಬಾಳಿನಲ್ಲಿ ಜಗತ್ತಿನ ಕುಣಿತ ಒಂದೇ ಒಂದು ಕ್ಷಣ(ಚಣ)ವಿರುತ್ತದೆ. ನೀನು ಸೂರ್ಯಮಂಡಲಕ್ಕೆ ಹಾರು ಅಥವಾ ಭೂಮಂಡಲಕ್ಕೆ ಬೀಳು(ಎರಗು). ನಿನಗೆ ನೀನೇ ರಾಜನೆಂದು ತಿಳಿ (ಬಗೆ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Life would not end even though it flows from age to age,
Life in this world is just a moment in the eternal life of the soul of man,
Leap up to the sun or jump upon the earth
But know that you are your own monarch – Marula Muniya (689)
(Translation from "Thus Sang Marula Muniya" by Sri. Narasimha Bhat)

Friday, October 31, 2014

ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? (688)

ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? |
ಆರು ತನ್ನೇಳ್ಗೆಯನು ತಾನರಿತ ಕುಶಲಂ? ||
ಹೇರದಿರು ನಿನ್ನ ಕಣ್ಗಾಜನಿನ್ನೊರ‍್ವಂಗೆ |
ದಾರಿಯವನದವಂಗೆ - ಮರುಳ ಮುನಿಯ || (೬೮೮)

(ತಾನ್+ಅರಿತನ್+ಇನ್ನೊರ‍್ವನ+ಏಳ್ಗೆಯ)(ತನ್+ಏಳ್ಗೆಯನು)(ಕಣ್+ಗಾಜನು+ಇನ್ನೊರ‍್ವಂಗೆ)(ದಾರಿ+ಅವನದು+ಅವಂಗೆ)

ಇನ್ನೊಬ್ಬನ ಏಳಿಗೆಯ ಬಗೆಯನ್ನು ಯಾವನು ತಿಳಿದುಕೊಂಡಿದ್ದಾನೆ? ಅಥವಾ ತನ್ನ ಉನ್ನತಿಯ ಮಾರ್ಗವನ್ನೇ ತಿಳಿದುಕೊಂಡಿರುವ ಚತುರನು ಯಾರು? ನಿನ್ನ ಉದ್ಧಾರದ ಮಾರ್ಗಗಳೇ ನಿನಗೆ ತಿಳಿಯದಿರುವಾಗ ನಿನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಬೇಡ. ಅವರವರ ದಾರಿ ಅವರವರಿಗೆ ಬಿಟ್ಟಿದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who knows how to achieve the good of others?
Who knows how to accomplish one’s own good?
Thrust not your eyeglasses on the eyes of others.
Each has his own path marked out for him – Marula Muniya (688)
(Translation from "Thus Sang Marula Muniya" by Sri. Narasimha Bhat)

Thursday, October 30, 2014

ಹೆರರ ಬದುಕಿಗೆ ತನ್ನ ನೆರಳ ಬೀಳಲ್ಬಿಡದೆ (687)

ಹೆರರ ಬದುಕಿಗೆ ತನ್ನ ನೆರಳ ಬೀಳಲ್ಬಿಡದೆ |
ಹೊರಿಸದಿನ್ನೊರ‍್ವಂಗೆ ತನಗಿರುವ ಹೊರೆಯ ||
ಅರಿತು ತನ್ನೊಳಗದರೊಳಿತ ಹೊರಕನುಗೊಳಿಪ |
ಪರಿಯೆ ಸ್ವತಂತ್ರತೆಯೊ - ಮರುಳ ಮುನಿಯ || (೬೮೭)

(ಬೀಳಲ್+ಬಿಡದೆ)(ಹೊರಿಸದೆ+ಇನ್ನೊರ‍್ವಂಗೆ)(ತನಗೆ+ಇರುವ)(ತನ್ನ+ಒಳಗೆ+ಅದರ+ಒಳಿತ)(ಹೊರಕೆ+ಅನುಗೊಳಿಪ)

ಬೇರೆಯವರು ತಮ್ಮದೇ ಆದ ಬೆಳಕಿನಲ್ಲಿ ಜೀವನವನ್ನು ನಡೆಸುತ್ತಿರುವಾಗ, ತನ್ನ ನೆರಳನ್ನು ಅವರ ಮೇಲೆ ಬೀಳದಂತೆ ನಡೆಯುವ, ತನಗೆ ಬಂದಿರುವ ಭಾರವನ್ನು ಇತರರ ಹೆಗಲಿಗೇರಿಸದಂತೆ ಬಾಳ್ವೆಯನ್ನು ನಡೆಸುವ, ತನ್ನ ಅಂತರಂಗವನ್ನು ಅರ್ಥಮಾಡಿಕೊಂಡು, ತನ್ನಲ್ಲಿರುವ ಒಳ್ಳೆಯ ಶಕ್ತಿ ಸಾಮರ್ಥ್ಯಗಳನ್ನು ಬಾಹ್ಯ ಜಗತ್ತಿಗೆ ಉಪಯೋಗವಾಗುವ ಹಾಗೆ ಬಳಸುವ ವಿಧಾನಗಳೇ ಸ್ವಾತಂತ್ರ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Without allowing one’s own shadow to mar the light of others,
Without shifting one’s own burden on to the shoulders of others,
Understanding one’s own self and coordinating its good with that of others
This life process is true freedom – Marula Muniya (687)
(Translation from "Thus Sang Marula Muniya" by Sri. Narasimha Bhat)

Wednesday, October 29, 2014

ಗೀತರಾಗಂ ನಾದಮಾನದಿಂ ರುಚಿಪಂತೆ (686)

ಗೀತರಾಗಂ ನಾದಮಾನದಿಂ ರುಚಿಪಂತೆ |
ಮಾತು ಛಂದಸು ಕೂಡಿ ಪದ್ಯವಪ್ಪಂತೆ ||
ಸ್ರೋತಂ ತಟಾನುಗತಿಯಿಂ ಯೋಗ್ಯವೆನಿಪಂತೆ |
ಸ್ವಾತಂತ್ರ್ಯ ಶಾಸ್ತಿಯಿಂ - ಮರುಳ ಮುನಿಯ || (೬೮೬)

(ಪದ್ಯವು+ಅಪ್ಪಂತೆ)(ತಟ+ಅನುಗತಿಯಿಂ)(ಯೋಗ್ಯ+ಎನಿಪಂತೆ)

ಹಾಡು ಮತ್ತು ರಾಗಗಳು ಮಧುರವಾದ ಧ್ವನಿಯಿಂದಲೊಡಗೂಡಿ ನಮಗೆ ಸವಿಯನ್ನು ಉಂಟುಮಾಡುವಂತೆ, ಮಾತು ಮತ್ತು ಛಂದಸ್ಸು ಕೂಡಿ ಒಂದು ಪದ್ಯವಾಗುವಂತೆ, ನದಿಯ ಪ್ರವಾಹ(ಸ್ರೋತ)ವು ಅದರ ದಡ(ತಟ)ಗಳ ನಿಯಂತ್ರಣದಿಂದ ಅನುಕೂಲವೆನ್ನಿಸುವಂತೆ, ಸ್ವಾತಂತ್ರ್ಯದ ಪ್ರಯೋಜನವು ನಿಯಮಪಾಲನೆಯಿಂದ ಸಾರ್ಥಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Songs and tunes in measured tones become melodious,
Words arranged in suitable meter becomes song
River flowing between its banks becomes useful,
Likewise freedom flowers with discipline – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 28, 2014

ಪ್ರಾತರನಿಲಂ ಸುಳಿಯೆ ನೂತನಾರುಣನೊಲಿಯೆ (685)

ಪ್ರಾತರನಿಲಂ ಸುಳಿಯೆ ನೂತನಾರುಣನೊಲಿಯೆ |
ಪ್ರೀತಿಮೆರೆದರಳುತಿಹ ನನಗೆ ಮರದೆಲೆಯಿಂ ||
ಆತಂಕ ತಾಕದಿರಲಾ ಆತ್ಮವಿಕಸನಮೆ |
ಸ್ವಾತಂತ್ರ್ಯದುಪಯೋಗ - ಮರುಳ ಮುನಿಯ || (೬೮೫)

(ಪ್ರಾತರ್+ಅನಿಲಂ)(ನೂತನ+ಅರುಣನ್+ಒಲಿಯೆ)(ಪ್ರೀತಿಮೆರೆದು+ಅರಳುತ+ಇಹ)(ಮರದ+ಎಲೆಯಿಂ)(ತಾಕದೆ+ಇರಲು+ಆ)(ಸ್ವಾತಂತ್ರ್ಯದ+ಉಪಯೋಗ)

ಬೆಳಗಿನ ಗಾಳಿಯು (ಪ್ರಾತರನಿಲಂ) ಬೀಸುತ್ತಿರಲು, ಬಾಲಸೂರ್ಯನು ಆಗ ತಾನೇ ನಲುಮೆಯಿಂದ ಕಾಣಿಸಿಕೊಳ್ಳಲು, ಪ್ರೀತಿಯಿಂದ ಶೋಭಿಸಿ ಅರಳುತ್ತಿರುವ ಮೊಗ್ಗಿಗೆ (ನನೆಗೆ) ಮರದಲ್ಲಿರುವ ಎಲೆಗಳಿಂದ ಅಡ್ಡಿ ಮತ್ತು ಹೆದರಿಕೆಗಳು ಇರದಿರುವಂತೆ ಆತ್ಮವಿಸ್ತಾರವನ್ನು ಹೊಂದುವುದೇ ಸ್ವಾತಂತ್ರ್ಯದ ಸಾರ್ಥಕ ಬಳಕೆಗೆ ನಿದರ್ಶನವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the morning breeze gently blows and the new dawn blesses the world,
The love-showering bud behind the leaves of tree
Blossoms without the least obstruction from the leaves,
Blossoming of the self likewise is the best use of freedom – Marula Muniya
(Translation from "Thus Sang Marula Muniya" by Sri. Narasimha Bhat)

Monday, October 27, 2014

ವರ್ತಮಾನದಿ ತೃಪ್ತಿಯೊಡನುತ್ತಮತೆಯಾಶೆ (684)

ವರ್ತಮಾನದಿ ತೃಪ್ತಿಯೊಡನುತ್ತಮತೆಯಾಶೆ |
ಚಿತ್ತದ ಸಮಾಧಾನ ಹಸ್ತದುದ್ಯೋಗ ||
ಕರ್ತವ್ಯಕಿಂತು ಕಾವಡಿಯ ತೆರದಿಬ್ಭಾರ |
ಯಾತ್ರೆಯದರಿಂ ಪೂರ್ಣ - ಮರುಳ ಮುನಿಯ || (೬೮೪)

(ತೃಪ್ತಿ+ಒಡನೆ+ಉತ್ತಮತೆ+ಆಶೆ)(ಹಸ್ತದ+ಉದ್ಯೋಗ)(ಕರ್ತವ್ಯಕೆ+ಇಂತು)(ತೆರದಿ+ಇಬ್ಭಾರ)(ಯಾತ್ರೆ+ಅದರಿಂ)

ಸದ್ಯದ ಸಂದರ್ಭದಲ್ಲಿ ಸಮಾಧಾನದ ಜೊತೆ ಶ್ರೇಷ್ಠವಾದದು(ಉತ್ತಮತೆ)ದನ್ನು ಹೊಂದುವ ಬಯಕೆ. ಮನಸ್ಸಿನ ನೆಮ್ಮದಿಗೋಸ್ಕರ ಕೈಗೆ ದೊರೆತಿರುವ ಒಂದು ಕೆಲಸ. ತನ್ನ ಪಾಲಿಗೆ ಬಂದಿರುವ ಕೆಲಸಗಳನ್ನು ಮಾಡಲು ಈ ರೀತಿ ಕಾವಡಿ(ಹೆಗಲ ಮೇಲೆ ಹೊರುವ ಎರಡೂ ಕಡೆ ಭಾರವಾಗಿರುವ ಒಂದು ಅಡ್ಡೆ)ಯಂತೆ ಎರಡೂ ಕಡೆ ಭಾರಗಳಿರಲು, ಮನುಷ್ಯನ ಭೂಲೋಕದ ಯಾತ್ರೆ ಪರಿಪೂರ್ಣವಾಗುತ್ತದೆ.

(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Contentment in your present condition with a desire for betterment
Peace of mind and proper work for hands to do
Duties of human life like kavadi have two side-weights
The life pilgrimage becomes complete with these – Marula Muniya
(Translation from "Thus Sang Marula Muniya" by Sri. Narasimha Bhat)