Monday, July 18, 2016

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ (796)

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ -|
ಯನ್ಯೋನ್ಯವರಸುತ್ತೆ ಕರೆಯುತ್ತೆ ಜಗದಾ ||
ಪುಣ್ಯದಿಂದೊಡಗೂಡಲಾಗಳುಭಯ ಉಭಯರ ಮುಕ್ತಿ |
ಚೆನ್ನಕೇಶವಮೂರ್ತಿ - ಮರುಳ ಮುನಿಯ || (೭೯೬)

(ಕಡೆ+ಅನ್ಯೋನ್ಯ+ಅರಸುತ್ತೆ)(ಪುಣ್ಯದಿಂದ+ಒಡಗೂಡಲ್+ಆಗಳ್+ಉಭಯ)

ಕಪ್ಪು ಕಲ್ಲು (ಕೃಷ್ಣಶಿಲೆ) ಒಂದುಕಡೆ ಮತ್ತು ಅದನ್ನು ಕಡೆದು ಮೂರ್ತಿಯನ್ನು ಮಾಡುವ ಜಕ್ಕಣಾಚಾರಿಯ ಶಿಲ್ಪಕಲೆ ಮತ್ತೊಂದು ಕಡೆ. ಇವು ಒಂದು ಮತ್ತೊಂದನ್ನು ಹುಡುಕಿಕೊಂಡು ಕರೆಯುತ್ತಾ ಜಗತ್ತಿನ ಪುಣ್ಯದಿಂದ ಸೇರಿಕೊಂಡರೆ, ಆವಾಗ ಅವೆರಡಕ್ಕೂ ಚೆನ್ನಕೇಶವನ ವಿಗ್ರಹದಿಂದ ಮೋಕ್ಷವು ಸಿಗುತ್ತದೆ.

(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dark granite and Jakkana’s sculpture from two different places
Search, call each other and at last due to the
Good fortune of the world they both come together and gain liberation
As the idol of Lord Channakeshava – Marula Muniya (796)
(Translation from "Thus Sang Marula Muniya" by Sri. Narasimha Bhat)

Friday, July 15, 2016

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ (795)

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ |
ಲೋಕವೃತ್ತಿಯನಯವದಾತ್ಮ ನೀತಿಯದು ||
ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ |
ವ್ಯಾಕುಲತೆ ತಪ್ಪೀತೆ? - ಮರುಳ ಮುನಿಯ || (೭೯೫)
(ಲೋಕವೃತ್ತಿಯನಯವು+ಅದು+ಆತ್ಮ)
ಸದಾಕಾಲವೂ ನಮಗೆ ಬೇಕಾಗಿರುವದಕ್ಕೋಸ್ಕರ ತಪಿಸುತ್ತಿದ್ದರೆ, ಜಗಳಕ್ಕೆ ಅವಕಾಶ ಉಂಟಾಗುತ್ತದೆ. ಅದೇ ತೃಪ್ತಿಯಿಂದ ಸಾಕು ಎಂದರೆ, ಅದು ನೆಮ್ಮದಿಗೆ ದಾರಿಯಾಗುತ್ತದೆ. ಈ ರೀತಿಯ ಸೂಕ್ಷ್ಮತೆಯಿಂದ ಪ್ರಪಂಚದ ವ್ಯವಹಾರಗಳಲ್ಲಿ ನಡೆದುಕೊಳ್ಳುವ ಒಳ್ಳೆಯ ನಿಯಮಗಳನ್ನೇ ನಮ್ಮ ಆತ್ಮದ ಉದ್ಧಾರಕ್ಕೂ ಬಳಸಿಕೊಳ್ಳಬೇಕು. ಬೇಕೆನ್ನುವುದನ್ನು ಕಲಿತುಕೊಂಡು, ಸಾಕೆನ್ನುವುದನ್ನು ಮರೆತರೆ ದುಃಖ(ವ್ಯಾಕುಲತೆ)ಕ್ಕೆ ಈಡಾಗದೇ ಇರುತ್ತೇವೆಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Conflict when man says "I want, I want" and peace when he feels "enough, enough"
This is the smooth style of social conduct and the proper policy for self
But how can man avoid distress when he learns only to demand
And forgets to feel enough? - Marula Muniya (795)
(Translation from "Thus Sang Marula Muniya" by Sri. Narasimha Bhat)

Wednesday, June 1, 2016

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ (794)

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ ।
ಲೇಸೆಂಬೆ ತರುಬೆಂದು ಪೆಣಲೆಂದು ಹೂವ ॥
ಪಾಶವದು ಬೇರೆ ಅಂಗಗಳೊಳಲ್ಲವೇನದಕೆ ।
ಹೇಸುವುದದೇನೆಲವೊ - ಮರುಳ ಮುನಿಯ ॥ (794)

(ತಲೆಯ+ಒಳು+ಇರಲು+ಅದು)(ಅಂಗಗಳ+ಒಳ್+ಅಲ್ಲ+ಏನ್+ಅದಕೆ)(ಹೇಸುವುದು+ಅದು+ಏನ್+ಎಲವೊ)

ಹಗ್ಗ, ಹಗ್ಗಗಳಂತೆ ತಲೆಯ ತುಂಬ ಕೂದಲುಗಳಿದ್ದರೆ, ಅದು ಅಂದ(ಲೇಸು)ವಾಗಿ ಕಾಣುತ್ತದೆಂದು ಮುಡಿಯನ್ನು(ತುರುಬು) ಹೆಣೆದು, ಅದಕ್ಕೆ ಹೂವನ್ನು ಮುಡಿಸುತ್ತಾರೆ. ಅದೇ ಕೂದಲು ದೇಹದ ಬೇರೆ ಅಂಗಗಳಲ್ಲಿ ಇದ್ದರೆ, ಅದು ನೇಣುಹಗ್ಗದಂತಾಗಿ, ನೋಡುವವರಿಗೆ ಅಸಹ್ಯಕರವಾಗಿ(ಹೇಸುವುದು) ಕಾಣುತ್ತದೆ ಅಲ್ಲವೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
People admire it as braid or plait and decorate it with flowers,
But when the rope like hair grows in other parts of the body
Why should they detest it ? - Marula Muniya (794)
(Translation from "Thus Sang Marula Muniya" by Sri. Narasimha Bhat)

Thursday, May 5, 2016

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು (793)

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು ।
ಮೆಚ್ಚಿಕೊಳ್ಳುವರದನು ನೋಳ್ಪ ಜನರೆಲ್ಲ ॥
ಬಚ್ಚೆಂಬರದು ಬೇರೆ ತಾವಿನೊಳು ಬೆಳೆದಿರಲು ।
ಹುಚ್ಚಲ್ಲವೇನೊ ಇದು? - ಮರುಳ ಮುನಿಯ ॥ (೭೯೩)

(ಮೆಚ್ಚಿಕೊಳ್ಳುವರ್+ಅದನು)(ಬಚ್ಚು+ಎಂಬರ್+ಅದು)(ತಾವಿನ+ಒಳು)

ತಲೆಯ ಕೂದಲನ್ನು ಕುಚ್ಚು ಕುಚ್ಚುಗಳನ್ನಾಗಿ ವಿಂಗಡಿಸಿ ಜಡೆಯನ್ನು ಹೆಣೆಯುತ್ತಾರೆ. ಆವಾಗ ಆ ಜಡೆಯು ನೋಡುವವರ ಕಣ್ಣುಗಳಿಗೆ ಅಂದವಾಗಿ ಕಂಡು, ಅದು ಅವರ ಮೆಚ್ಚಿಗೆಗೆ ಪಾತ್ರವಾಗುತ್ತದೆ. ಆದರೆ ಅದೇ ಕೂದಲು ದೇಹದ ಬೇರೆಯ ಜಾಗ(ತಾವು)ದಲ್ಲಿ ಬೆಳೆದಿದ್ದರೆ, ಅದನ್ನು ಮುಚ್ಚಿಟ್ಟಿಕೋ(ಬಚ್ಚು) ಎಂದೆನ್ನುತ್ತಾರೆ. ಇದು ಒಂದು ಹುಚ್ಚು ಕೆಲಸವಲ್ಲವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
The people who see, appreciate and admire such hair
Want to hide the hair grown in some other body parts,
Is this not sheer madness? - Marula Muniya || (793)
(Translation from "Thus Sang Marula Muniya" by Sri. Narasimha Bhat)