Tuesday, March 20, 2012

ಹೃದಯಾನುಭವ ಪಿರಿದೊ? ಬುದ್ಧಿಸಾಹಸ ಪಿರಿದೊ? (177)

ಹೃದಯಾನುಭವ ಪಿರಿದೊ? ಬುದ್ಧಿಸಾಹಸ ಪಿರಿದೊ? ||
ಅಧಿಕನೇಂ ಶಿವನೊ? ವಿಷ್ಣುವೊ? ಮೂರ್ಖತರ್ಕ ||
ಹದದಿನವು ಕಣ್ಣೆರಡರಂತೊಂದುಗೂಡಿದಂ- |
ದುದಿಸುವುದು ಪರಮಾರ್ಥ - ಮರುಳ ಮುನಿಯ || (೧೭೭)

(ಹೃದಯ+ಅನುಭವ)(ಹದದಿನ್+ಅವು)(ಕಣ್ಣು+ಎರಡರಂತೆ+ಒಂದುಗೂಡಿದಂದು+ಉದಿಸುವುದು)

ಹೃದಯಕ್ಕೆ ಆಗುವ ಅನುಭವಗಳು ಹಿರಿದೋ? ಅಥವಾ ಬುದ್ಧಿಶಕ್ತಿ, ಧೈರ್ಯ ಮತ್ತು ಶೌರ್ಯಗಳು ಹಿರಿದೋ? ಶಿವನು ದೊಡ್ಡವನೋ ಅಥವಾ ವಿಷ್ಣುವು ದೊಡ್ಡವನೋ ಎನ್ನುವ ವಾದವನ್ನು ಮಾಡುವುದು ಮೂರ್ಖತನ ಮತ್ತು ಹಟವಾದವಾಗುತ್ತದೆ. ಎರಡು ಕಣ್ಣುಗಳೂ ಸೇರಿ ಒಂದು ವಸ್ತುವನ್ನು ಕ್ರಮದಿಂದ ನೋಡುವಂತೆ, ಹೃದಯದ ಅನುಭವ ಮತ್ತು ಬುದ್ಧಿ ಸಾಹಸಗಳೆರಡೂ ಸಮರಸದಿಂದ ಒಂದಾಗಿ ಸೇರಿದಾಗ, ಪರಮಾತ್ಮನ ತತ್ತ್ವವು ಗೋಚರಿಸುತ್ತದೆ.

No comments:

Post a Comment