Showing posts with label ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ?. Show all posts
Showing posts with label ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ?. Show all posts

Thursday, May 31, 2012

ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ? (216)

ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ? |
ದುಗುಡವಿಳಿವುದಜೀರ್ಣ ಪೊಡೆಯಿನಿಳಿದಂತೆ ||
ಜಗವ ನೋಯಿಪ ರುಜೆಗೆ ನಿನ್ನ ಮರುಕದಿನೇನು ? |
ಅಘಮಲವ ಕಳೆಯೆ ಹಿತ - ಮರುಳ ಮುನಿಯ || (೨೧೬)

(ದುಗುಡ+ಇಳಿವುದು+ಅಜೀರ್ಣ)(ಪೊಡೆಯಿನ್+ಇಳಿದಂತೆ)(ಮರುಕದಿನ್+ಏನು)

ಮಗುವನ್ನು ನೋಯಿಸುವ ಕಾಯಿಲೆ(ರುಜೆ)ಗೆ ತಾಯಿಯ ಕಣ್ಣೀರು ಔಷದಿ(ಮದ್ದು) ಆದೀತೇನು? ಮಗುವಿಗೆ ಆಗಿರುವ ಅಜೀರ್ಣರೋಗವು ಹೊಟ್ಟೆ(ಪೊಡೆ)ಯಿಂದ ಇಳಿದಾಗ ತಾಯಿಯ ದುಃಖವು (ದುಗುಡ) ಉಪಶಮನವಾಗುವುದು. ಹಾಗೆಯೇ ಈ ಪ್ರಪಂಚವನ್ನು ನೋಯಿಸುವ ಬೇನೆ(ರುಜೆ)ಗಳು ನಿನ್ನ ಅನುಕಂಪದಿಂದ ಕಡಿಮೆಯಾಗುವವೇನು? ಪಾಪದ ಕೊಳೆ(ಅಘಮಲ)ಗಳನ್ನು ನಾಶ ಮಾಡಿದಾಗ ಒಳಿತುಂಟಾಗುತ್ತದೆ.