Thursday, June 16, 2011

ದೈವವೊಂದೇ ಸತ್ತ್ವವದರ ನೆರಳೆ ಜಗತ್ತು (26)

ದೈವವೊಂದೇ ಸತ್ತ್ವವದರ ನೆರಳೆ ಜಗತ್ತು |
ಆವಗಮದೆಲ್ಲೆಡೆಯು ಗೂಢಮಿರುತಿಹುದು ||
ನೋವು ಸಾವುಗಳೆಲ್ಲವಿರುವುದರ ದವಲತ್ತು |
ನಾವದಕೆ ಮಣಿವಮೆಲೊ- ಮರುಳ ಮುನಿಯ || (೨೬)

 (ದೈವವು+ಒಂದೇ)(ಸತ್ತ್ವ+ಅದರ)(ಆವಗಮ್+ಅದು+ಎಲ್ಲೆಡೆಯು)(ಗೂಢಮ್+ಇರುತ+ಇಹುದು)(ಸಾವುಗಳು+ಎಲ್ಲ+ಇರುವುದರ)(ನಾವು+ಅದಕೆ)(ಮಣಿವಂ+ಎಲೊ)


ದೇವರು ಒಂದೇ ಸತ್ತ್ವ. ಆ ಸತ್ತ್ವದ ನೆರಳೇ ಈ ಜಗತ್ತು. ಈ ಸತ್ತ್ವವು ಯಾವಾಗಲೂ (ಆವಗ್ಂ) ಎಲ್ಲೆಲ್ಲಿಯೂ (ಎಲ್ಲೆಡೆಯು) ರಹಸ್ಯ(ಗೂಢ)ವಾಗೇ ಇರುತ್ತದೆ. ನಾವುಗಳು ಪಡುವ ನೋವು ಮತ್ತು ಅನುಭವಿಸುವ ಸಾವುಗಳೆಲ್ಲವೂ ಇದರ ಅಧಿಕಾರದ ದರ್ಪ(ದವಲತ್ತು)ದಿಂದ ನಡೆಯುತ್ತದೆ. ನಾವು ಈ ರಹಸ್ಯವಾಗಿರುವ ಸತ್ತ್ವಕ್ಕೆ ನಮಸ್ಕರಿಸೋಣ (ಮಣಿವಂ).

Wednesday, June 15, 2011

ದೇವನೋ ಧರ್ಮವೋ ಕಾಲವೋ ಕರ್ಮವೋ (25)

ದೇವನೋ ಧರ್ಮವೋ ಕಾಲವೋ ಕರ್ಮವೋ |
ದೇವಿಯೋ ತತ್ತ್ವವೋ ಸ್ವಾಮಿಯೋ ವಿಭುವೋ ||
ಪಾವನಾತ್ಮವೋ ಸಾಕ್ಷಿಯೋ ಪರಬ್ರಹ್ಮವೋ |
ಆವಗಂ ನತಿಯವಗೆ -ಮರುಳ ಮುನಿಯ || (೨೫)

(ಪಾವನ+ಆತ್ಮವೋ)(ನತಿ+ಅವಗೆ)

 ಅವನನ್ನು ನಾವು ನಾನಾ ವಿಧವಾದ ಹೆಸರುಗಳಿಂದ ಗುರುತಿಸಬಹುದು. ಅವನು ದೇವರಾಗಿರಬಹುದು. ಧರ್ಮದ ಪ್ರತಿರೂಪವಾಗಿರಬಹುದು. ಅಕ್ಷಯವಾಗಿರುವ ಕಾಲವಾಗಿರಬಹುದು, ಅವನನ್ನೇ ಕರ್ಮವೆಂದೆನ್ನಬಹುದು. ಪೂಜಿಸಲ್ಪಡುವ ದೇವಿಯೆಂದೆನ್ನಬಹುದು. ಗಹನವಾದ ಸಿದ್ಧಾಂತವೇ ಅವನೆನ್ನಬಹುದು. ಗುರುವೆಂದೆನ್ನಬಹುದು. ಒಡೆಯ(ವಿಭು)ನೆಂದೆನ್ನಬಹುದು. ಪವಿತ್ರವಾದ (ಪಾವನ) ಆತ್ಮವೆಂದೆನ್ನಬಹುದು. ಈ ಲೋಕದಲ್ಲಿ ನಡೆಯುವ ಆಗುಹೋಗುಗಳಿಗೆಲ್ಲಾ ಸಾಕ್ಷಿಯೆಂದೆನ್ನಬಹುದು ಅಥವಾ ಅವನನ್ನು ನಾವು ಪರಬ್ರಹ್ಮನೆಂದು ಗುರುತಿಸಬಹುದು. ಅವನು ಈ ಮೇಲ್ಕಂಡ ಯಾರೇ ಆಗಲಿ ಯಾವಾಗಲೂ (ಆವಗ್ಂ) ಅವನಿಗೆ ನಮಸ್ಕಾರ (ನತಿ).

Tuesday, June 14, 2011

ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ (24)

ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ |
ನೂರು ನೂರಾಕೃತಿ ವಿಲಾಸ ವಿಭವಗಳಿಂ- ||
ದಾರಾಧನೆಯನಾವನಂಗೀಕರಿಪನೊ ಅವ-|
ನೋರುವಂಗೀ ನಮನ -ಮರುಳ ಮುನಿಯ || (೨೪)


(ವಿಭವಗಳಿಂದ+ಆರಾಧನೆಯನು+ಆವನ್+ಅಂಗೀಕರಿಪನೊ)(ಅವನ್+ಓರುವಂಗೆ+ಈ)


 ನೂರಾರು ಗುಡಿಗಳಲ್ಲಿ ನೂರಾರು ಹೆಸರುಗಳಲ್ಲಿ, ನೂರಾರು ಆಕಾರ, ಬೆಡಗು ಮತ್ತು ವೈಭವ(ವಿಭವ)ಗಳಿಂದ ಯಾವನು ಪೂಜೆಯನ್ನು (ಆರಾಧನೆ) ಒಪ್ಪಿಸಿಕೊಳ್ಳುತ್ತಿರುವನೋ ಆ ಒಬ್ಬನಿಗೆ (ಓರುವಂಗೆ) ಈ ನಮಸ್ಕಾರವನ್ನು ಸಲ್ಲಿಸುತ್ತಿದ್ದೇನೆ.

Monday, June 13, 2011

ಒಬ್ಬಂಟಿ ದೈವವದು ಹಬ್ಬದೂಟವನೆಳಸಿ (23)

ಒಬ್ಬಂಟಿ ದೈವವದು ಹಬ್ಬದೂಟವನೆಳಸಿ |
ಇಬ್ಬರಾಟಕ್ಕಿಳಿದು ಹಲವಾಗಿ ಮತ್ತೆ ||
ದಿಬ್ಬಣವ ನಡಸುತಿಹುದುಬ್ಬಿದೀ ಲೋಕದಲಿ |
ಅದ್ಭುತಕೆ ನಮಿಸೆಲವೊ-ಮರುಳ ಮುನಿಯ || (೨೩)

 (ದೈವವು+ಅದು)(ಹಬ್ಬದ+ಊಟವನು+ಎಳಸಿ)(ಇಬ್ಬರ+ಆಟಕ್ಕೆ+ಇಳಿದು) (ನಡಸುತ+ಇಹುದು+ಉಬ್ಬಿದ+ಈ)(ನಮಿಸು+ಎಲವೊ)

 ಒಬ್ಬನೇ ಒಬ್ಬನಾಗಿರುವ ದೈವವು ಹಬ್ಬದ ಊಟವನ್ನು ಬಯಸಿ(ಎಳಸಿ) ಎರಡು ಮಂದಿ ಆಡುವ ಆಟವನ್ನಾಡಲು ಪ್ರಾರಂಭಿಸಿ, ಅದರಿಂದ ಅದು ಬಹುಮಂದಿಯಾಯಿತು. ಆ ದೈವವೇ ಪುನಃ ಮದುವೆಯ ಮೆರವಣಿಗೆ(ದಿಬ್ಬಣ)ಯನ್ನು, ಹಿಗ್ಗಿ ಬೀಗುತ್ತಿರುವ ಈ ಪ್ರಪಂಚದಲ್ಲಿ ನಡೆಸುತ್ತಿದೆ. ಈ ಅದ್ಭುತವಾಗಿರುವ ಸೋಜಿಗಕ್ಕೆ ನಮಸ್ಕರಿಸು.

Thursday, June 9, 2011

ಇರುವುದೊಂದೆಂದೆಂದುಮೆತ್ತೆತ್ತಲುಂ ಮರೆಯೊಳ್ (22)

ಇರುವುದೊಂದೆಂದೆಂದುಮೆತ್ತೆತ್ತಲುಂ ಮರೆಯೊಳ್ |
ಇರುವುದದು ಹೆರುವುದದು ಹೊರುವುದೆಲ್ಲವದು ||
ಪಿರಿದು ತಾನಾಗಿರುವ ಕಿರಿದೆನಿಪುದೆಲ್ಲವನು |
ಶರಣು ಅವೊಂದಕ್ಕೆ - ಮರುಳ ಮುನಿಯ || (೨೨)
 (ಇರುವುದು+ಒಂದು+ಎಂದೆಂದುಂ+ಎತ್ತೆತ್ತಲುಂ) (ಹೊರುವುದು+ಎಲ್ಲ+ಅದು) (ಕಿರಿದು+ಎನಿಪುದು+ಎಲ್ಲವನು)

 ಆ ಬ್ರಹ್ಮ ವಸ್ತು ಒಂದೇ ಒಂದು ಹೌದು. ಅದು ಎಲ್ಲೆಲ್ಲಿಯೂ ಮತ್ತು ಎಂದೆಂದಿಗೂ ಇರುವ ವಸ್ತು. ಅದು ಬಚ್ಚಿಟ್ಟುಕೊಂಡಿರುತ್ತದೆ. ಅದು ಇರುತ್ತದೆ, ಸೃಷ್ಟಿಕಾರ್ಯವನ್ನು ಮಾಡುತ್ತದೆ ಮತ್ತು ಭೂಮಿಯ ರಕ್ಷಣಾಭಾರವನ್ನು ಹೊರುತ್ತದೆ. ಅದು ಹಿರಿದಾ(ಪಿರಿದು)ಗಿದ್ದು ಪ್ರಪಂಚದಲ್ಲಿರುವ ಮಿಕ್ಕೆಲ್ಲವನ್ನೂ ಚಿಕ್ಕದೆಂದಿ(ಕಿರಿದು)ನಿಸುವಂತೆ ಮಾಡುತ್ತದೆ. ಆ ವಸ್ತುವಿಗೆ ನಮಸ್ಕರಿಸು.

Wednesday, June 8, 2011

ಒಂದಿರುವುದೆಂದೆಂದುಮೊಂದು ತಾನೇ ತಾನು (21)

ಒಂದಿರುವುದೆಂದೆಂದುಮೊಂದು ತಾನೇ ತಾನು |
ಹಿಂದೆನಿಪುದಿಲ್ಲ ಮುಂದೆನಿಪುದಿಲ್ಲೆತ್ತಲ್ ||
ಸಂದಿನಲಿ ಬಯಲಿನಲಿ ಬೀಡಿನಲಿ ಕಾಡಿನಲಿ |
ವಂದಿಸೊ ಅದೊಂದಕ್ಕೆ-ಮರುಳ ಮುನಿಯ || (೨೧)

 (ಒಂದಿರುವುದು+ಎಂದೆಂದುಂ+ಒಂದು) (ಹಿಂದೆ+ಎನಿಪುದು+ಇಲ್ಲ) (ಮುಂದೆ+ಎನಿಪುದು+ಇಲ್ಲ+ಎತ್ತಲ್)

 ಎಂದೆಂದಿಗೂ ತಾನೇ ತಾನಾಗಿ ಇರುವಂತಹ ವಸ್ತು ಒಂದೇ ಒಂದು ಇದೆ. ಅದು ಪರಬ್ರಹ್ಮ ವಸ್ತು. ಅದಕ್ಕೆ ಹಿಂದೆ ಎನ್ನಿಸುವುದು ಯಾವುದೂ ಇಲ್ಲ. ಮುಂದೆ ಎನ್ನಿಸುವುದೂ ಎಲ್ಲಿಯೂ ಕಾಣಸಿಗುವುದಿಲ್ಲ. ಸಂದುಗೊಂದುಗಳಲ್ಲಿ, ವಿಸ್ತಾರವಾಗಿರುವ ಬಯಲಿನಲ್ಲಿ, ಎಲ್ಲರೂ ವಾಸಿಸುವ ಮನೆ(ಬೀಡು)ಗಳಲ್ಲಿ, ಕಡೆಗೆ ಕಾಡುಮೇಡುಗಳಲ್ಲಿ ಹಾಗೆಯೇ ನೀನು ಎಲ್ಲಿದ್ದರೆ ಅಲ್ಲೇ ಆ ವಸ್ತುವಿಗೆ ನಮಸ್ಕರಿಸು.

Monday, June 6, 2011

ಸಾಗರಂ ಬ್ರಹ್ಮವದರಿಂದೆ ತಾತ್ಕಾಲದುಪ- (20)

ಸಾಗರಂ ಬ್ರಹ್ಮವದರಿಂದೆ ತಾತ್ಕಾಲದುಪ- |
ಯೋಗಕಾಗಿಹ ಕಾಲ್ವೆಯೆಲ್ಲ ದೇವರ‍್ಕಳ್ ||
ವಾಗೀಶ ಲಕ್ಷ್ಮೀಶ ಗೌರೀಶಮುಖರೆಲ್ಲ |
ರಾಗ ಭೋಗಕ್ಕಲ್ತೆ - ಮರುಳ ಮುನಿಯ || (೨೦)

(ಬ್ರಹ್ಮ+ಅದರಿಂದೆ)(ತಾತ್ಕಾಲದ+ಉಪಯೋಗಕೆ+ಆಗಿಹ)(ಭೋಗಕ್ಕೆ+ಅಲ್ತೆ)

ಸಾಗರ ಬ್ರಹ್ಮ. ಆ ಜಲಾಶಯದಿಂದ ಹೊರಡುವ ಆ ಸಮಯಕ್ಕೆ ಮಾತ್ರ ಉಪಯೋಗವಾಗುವ ಕಾಲುವೆಗಳೆಲ್ಲವೂ ದೇವರುಗಳಿದ್ದಂತೆ. ಬ್ರಹ್ಮ(ವಾಗೀಶ), ವಿಷ್ಣು(ಲಕ್ಷ್ಮೀಶ) ಮತ್ತು ಶಿವ(ಗೌರೀಶ)ರ ಮುಖಗಳೆಲ್ಲವೂ ಪ್ರೀತಿ(ರಾಗ) ಮತ್ತು ಸುಖಾನುಭವ(ಭೋಗ)ಗಳಿಗೋಸ್ಕರ ತಾನೆ?

Friday, June 3, 2011

ಲೀನಂ ಪರಬ್ರಹ್ಮದೊಳಗಿರ್ದನಾತ್ಮ ತಾಂ (19)

ಲೀನಂ ಪರಬ್ರಹ್ಮದೊಳಗಿರ್ದನಾತ್ಮ ತಾಂ |
ಕ್ಷೋಣೀವಿಲಾಸದೊಳು ತಾನು ಬೇರೆನಿಪಾ ||
ಮಾನುಷ್ಯವನು ತಳೆದು ನಾನಾಕೃತಿಯ ತಾಳಿ |
ಹೀನತೆಯ ಪಡುತಿಹನೊ - ಮರುಳ ಮುನಿಯ || (೧೯)

(ಪರಬ್ರಹ್ಮದೊಳಗೆ+ಇರ್ದನ್+ಆತ್ಮ)(ಬೇರೆ+ಎನಿಪಾ)(ನಾನಾ+ಆಕೃತಿಯ)(ಪಡುತ+ಇಹನೊ)

 ಪರಬ್ರಹ್ಮನಲ್ಲಿ ಸಂಪೂರ್ಣವಾಗಿ ಸೇರಿಹೋಗಿದ್ದ ಆತ್ಮನು ಈ ಪ್ರಪಂಚ(ಕ್ಷೋಣೀ)ದ ವಿನೋದಗಳಲ್ಲಿ ತಾನು ಬೇರೆಯೇ ಎನ್ನಿಸುವ ಮನುಷ್ಯಜನ್ಮವನ್ನು (ಮಾನುಷ್ಯವನು) ಪಡೆದು (ತಳೆದು) ವಿಧ ವಿಧವಾದ ಆಕಾರಗಳನ್ನು ಧರಿಸಿಕೊಂಡು ಹೀನದಶೆಯನ್ನು ಅನುಭವಿಸುತ್ತಿರುವನು.

Thursday, June 2, 2011

ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು (18)


ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು |
ಮುಳುಗಿ ತಡಕಾಡಿ ಮೇಲ್ಬಂದು ದಡ ಸೇರ‍್ವ ||
ಕಡಲಾಡಿವೋಲ್ಬೊಮ್ಮಚೈತನ್ಯವಾಡುವುದು |
ಪೊಡವಿಯಾ ಮಡುವಿನಲಿ - ಮರುಳ ಮುನಿಯ || (೧೮)

(ಕಣ್+ಮೂಗುಗಳ) (ಕಡಲಾಡಿ+ವೋಲ್+ಬೊಮ್ಮ+ಚೈತನ್ಯವು+ಆಡುವುದು)

ಕಣ್ಣು ಮತ್ತು ಮೂಗುಗಳನ್ನು ಬಿಗಿದುಕೊಂಡು ಸಮುದ್ರ(ಕಡಲು)ದೊಳಕ್ಕೆ ಅದರಲ್ಲಿ ಮುಳುಗಿ ತಡಕಾಡಿ ನಂತರ ಮೇಲೆ ಬಂದು ದಡವನ್ನು ಸೇರುವ ಕಡಲಾನ್ವೇಷಕನಂತೆ (ಕಡಲಾಡಿ) ಪರಬ್ರಹ್ಮನ ಚೇತನದ ಶಕ್ತಿ ಈ ಪ್ರಪಂಚದ (ಪೊಡವಿ) ಮಡುವಿನಲ್ಲಿ ಆಡುತ್ತಿರುತ್ತದೆ.

Wednesday, June 1, 2011

ಇರುವುದೊಂದೋ ಎರಡೊ ಎರಡರಂತೆಸೆವೊಂದೊ (17)

ಇರುವುದೊಂದೋ ಎರಡೊ ಎರಡರಂತೆಸೆವೊಂದೊ |
ಅರೆಮರೆಯೊಳಿಪ್ಪುದೇನದು ಲೆಕ್ಕಕಿಲ್ಲ ||
ಸ್ಥಿರದಿರ್ಕೆಯೇ ಇರ‍್ಕೆ ಧರಣಿಯೊಳ್ ಸ್ಥಿರಮೆಲ್ಲಿ? |
ಪರಮಾತ್ಮನೇ ಸ್ಥಿರವು - ಮರುಳ ಮುನಿಯ || (೧೭)

 (ಇರುವುದು+ಒಂದೋ) (ಎರಡರಂತೆ+ಎಸೆವ+ಒಂದೊ) (ಅರೆಮರೆಯೊಳು+ಇಪ್ಪುದು+ಏನದು) (ಸ್ಥಿರದ+ಇರ್ಕೆಯೇ) (ಧರಣಿಯ+ಒಳ್)(ಸ್ಥಿರಂ+ಎಲ್ಲಿ)

 ಪ್ರಪಂಚದಲ್ಲಿರುವುದು ಒಂದೋ ಅಥವಾ ಎರಡೊ? ಇಲ್ಲ ಎರಡರಂತೆ ಶೋಭಿಸುವ (ಎಸೆವ) ಒಂದೇ ಒಂದೊ? ಪರಮಾತ್ಮನು ಒಬ್ಬನೇ ಆದರೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡು ಮೆರೆಯುತ್ತಿರುವನೋ? ಅರ್ಧಂಬರ್ಧ ಮರೆಯಲ್ಲಿರುವುದನ್ನು ಗಣನೆಗೆ ತೆಗೆದುಕೊಳ್ಳಲಿಕ್ಕಾಗುವುದಿಲ್ಲ. ಅವು ಬೇಕಾದಷ್ಟಿವೆ. ಯಾವುದು ನಿಶ್ಚಿತವಾಗಿ ಕಾಣುತ್ತದೋ ಅಥವಾ ನಮ್ಮನುಭವಕ್ಕೆ ಬರುವುದೋ ಅದನ್ನು ಮಾತ್ರ ನಾವು ಗಣನೆಗೆ ತೆಗೆದುಕೊಳ್ಳಲು ಸಾಧ್ಯ. ದೃಢವಾಗಿರುವುದರ ಇರುವಿಕೆಯೇ ನಿಜವಾದ ಇರುವಿಕೆ. ಆದರೆ ಈ ಭೂಮಿಯಲ್ಲಿ ಎಲ್ಲವೂ ಪ್ರತಿಕ್ಷಣ ಬದಲಾಗುತ್ತಿರುವಾಗ ದೃಢವಾಗಿರುವುದು ಯಾವುದೂ ಇಲ್ಲ. ಪರಮಾತ್ಮನೊಬ್ಬನೇ ದೃಢವಾಗಿರುವುದು. ಮಿಕ್ಕಿದ್ದೆಲ್ಲವೂ ಪ್ರತಿಕ್ಷಣವೂ ಬದಲಾಗುತ್ತಿರುತ್ತದೆ.