Friday, July 11, 2014

ಜೀವ ಜೀವಮುವೊಂದು ಕೃಕಲಾಸ ಚಲವರ್ಣಿ (643)

ಜೀವ ಜೀವಮುವೊಂದು ಕೃಕಲಾಸ ಚಲವರ್ಣಿ |
ಭೂವಿಯದ್ವ್ಯಾಮರ್ದ ವಿಕೃತ ಮಧ್ಯಚರಿ ||
ಜೀವ ಜೀವಕೆ ಭೇದವಂತು ಭೋಜನ ಭೇದ |
ವ್ಯಾವರ್ತಿಸಖಿಲದಿಂ - ಮರುಳ ಮುನಿಯ || (೬೪೩)

(ಭೂ+ವಿಯತ್+ವ್ಯಾಮ+ಅರ್ದ)(ಭೇದ+ಅಂತು)(ವ್ಯಾವರ್ತಿಸು+ಅಖಿಲದಿಂ)

ಜೀವ ಮತ್ತು ಜೀವಿಯು ಕ್ಷಣಕ್ಷಣಕ್ಕೂ ಬಣ್ಣವನ್ನು ಬದಲಾಯಿಸುತ್ತಿರುವ ಒಂದು ಊಸರವಳ್ಳಿ(ಕೃಕಲಾಸ)ಯಂತೆ ಇರುತ್ತವೆ. ಭೂಮಿ ಮತ್ತು ಆಕಾಶ(ವಿಯತ್)ಗಳ ನಡುವಿನ ಒಂದು ಮಾರಿನಷ್ಟು(ವ್ಯಾಮ) ಜಾಗದಲ್ಲಿ ಬದಲಾವಣೆ ಹೊಂದಿದ ರೂಪದಲ್ಲಿ ಅವು ಚಲಿಸುತ್ತವೆ. ಒಂದು ಜೀವಕ್ಕೂ ಮತ್ತೊಂದು ಜೀವಿಗೂ ಈ ರೀತಿ ಅವು ಭುಜಿಸುವ ಬಗೆಯಲ್ಲಿಯೂ ವ್ಯತ್ಯಾಸಗಳಿರುತ್ತವೆ. ಇವು ಎಲ್ಲವೂ ಸಂಪೂರ್ಣವಾಗಿ ಪುನರಾವರ್ತಿತವಾಗುತ್ತಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Every being is a chameleon that frequently changes its colours
This being moves in all the space between the earth and the sky
The difference between soul and soul is like the difference form meal to meal
Surround the soul with the all pervading One – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 9, 2014

ಶ್ರಾವಿಯುಂ ಗಾಯಕನುಮೊಡವೆರೆತು ಸಂಗೀತ (642)

ಶ್ರಾವಿಯುಂ ಗಾಯಕನುಮೊಡವೆರೆತು ಸಂಗೀತ |
ಭಾವದ ಸಮಾಧಿಯೊಳಗೈಕ್ಯವಡೆವಂತೆ ||
ಜೀವವಿಶ್ವಗಳು ತತ್ತ್ವದ ನೆಲೆಯೊಳೊಂದಹುದು |
ದೈವಪ್ರಸಾದವೆಲೊ - ಮರುಳ ಮುನಿಯ || (೬೪೨)

(ಗಾಯಕನುಂ+ಒಡವೆರೆತು)(ಸಮಾಧಿ+ಒಳಗೆ+ಐಕ್ಯವಡೆವಂತೆ)(ನೆಲೆಯ+ಒಳು+ಒಂದು+ಅಹುದು)

ಹಾಡುವವನು ಮತ್ತು ಹಾಡನ್ನು ಆಲಿಸುವವರಿಬ್ಬರ ಸೇರುವಿಕೆಯಿಂದ ಸಂಗೀತವು ಜನಿಸಿ ಭಾವನೆಗಳ ಏಕಾಗ್ರತೆಯಲ್ಲಿ ಒಂದಾಗಿ ಸೇರುವಂತೆ, ಜೀವ ಮತ್ತು ಪ್ರಪಂಚಗಳು ತತ್ತ್ವದ ಆಶ್ರಯದಲ್ಲಿ ಒಂದುಗೂಡುತ್ತವೆ. ಇದು ಪರಮಾತ್ಮನ ಅನುಗ್ರಹ ಕಣಯ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The musician and the audience come together and become one
In the unifying emotional absorption of music.
Likewise the soul and the universe become one in the Absolute
When rains the grace of God – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 8, 2014

ಸ್ತ್ರೀ ಪುರುಷ ಭೇದ ನೋಡು ಪರಸ್ಪರೋದ್ರೋಕಿ (641)

ಸ್ತ್ರೀ ಪುರುಷ ಭೇದ ನೋಡು ಪರಸ್ಪರೋದ್ರೋಕಿ |
ರೂಪಗುಣ ವಿವಿಧತೆಯಿನನ್ಯೋನ್ಯ ವಾಂಛೆ ||
ಸಂಪೂರ್ಣವಹುದೊಂದು ಜೀವವಿನ್ನೊಂದೊದವೆ |
ತಾಪವಂತೊದವದಿರೆ - ಮರುಳ ಮುನಿಯ || (೬೪೧)

(ಪರಸ್ಪರ+ಉದ್ರೋಕಿ)(ವಿವಿಧತೆಯಿನ್+ಅನ್ಯೋನ್ಯ)(ಸಂಪೂರ್ಣ+ಅಹುದು+ಒಂದು)(ಜೀವ+ಇನ್ನೊಂದು+ಒದವೆ)(ತಾಪ+ಅಂತುಉ+ಒದವದೆ+ಇರೆ)

ಗಂಡು ಮತ್ತು ಹೆಣ್ಣುಗಳ ವ್ಯತ್ಯಾಸಗಳನ್ನು ಗಮನಿಸು. ಆ ವ್ಯತ್ಯಾಸಗಳು ಒಬ್ಬರಿಂದೊಬ್ಬರು ಉದ್ರೇಕಗೊಳ್ಳುವಂತೆ ಮಾಡುತ್ತವೆ. ಅಂಗಾಂಗ ರೂಪ ಮತ್ತು ಮನೋಭಾವಗಳ ವಿವಿಧತೆಯಿಂದ ಪರಸ್ಪರ ಬಯಕೆ, ಪ್ರೀತಿಗಳುಂಟಾಗುತ್ತವೆ. ಒಂದು ಜೀವವು ಇನ್ನೊಂದು ಜೀವವನ್ನು ಕೂಡಿಕೊಂಡು ಸಮೃದ್ಧಿ(ಒದವು) ಹೊಂದಿದರೆ ಅದು ಸಂಪೂರ್ಣತೆಯನ್ನು ಹೊಂದುತ್ತದೆ. ಈ ರೀತಿಯಾಗದಿದ್ದರೆ ಅವುಗಳಿಗೆ ಸಂಕಟ(ತಾಪ)ವುಂಟಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The dissimilarities between man and woman ignite mutual fascination,
Desire for each other due to differences in physical features and natures,
Man or woman each becomes complete only when aided by the other
But anguish burns in each other when unaided by the other – Marula Muniya
(Translation from "Thus Sang Marula Muniya" by Sri. Narasimha Bhat)

Monday, July 7, 2014

ದಿನದಂತೆ ದಿನವಿಲ್ಲ ಮನದಂತೆ ಮನವಿಲ್ಲ (640)

ದಿನದಂತೆ ದಿನವಿಲ್ಲ ಮನದಂತೆ ಮನವಿಲ್ಲ |
ಜನಜನವು ಚಣಚಣವು ನವನವ್ಯಸೃಷ್ಟಿ ||
ಗುಣರುಚಿಗೆ ಮುಪ್ಪಿಲ್ಲವನುಭವಕೆ ಮಿತಿಯಿಲ್ಲ |
ಅನವರತ ಚಲಿತ ಜಗ - ಮರುಳ ಮುನಿಯ || (೬೪೦)

ಜಗತ್ತಿನಲ್ಲಿ ಒಂದು ದಿನದಂತೆ ಮತ್ತೊಂದು ದಿನ ಇರುವುದಿಲ್ಲ. ಹಾಗೆಯೇ ಒಂದು ಮನಸ್ಸಿನಂತೆ ಇನ್ನೊಂದು ಮನಸ್ಸಿರುವುದಿಲ್ಲ. ಪ್ರತಿಯೊಂದು ಕ್ಷಣವೂ ಜನಗಳು ಹೊಸ ಹೊಸದಾಗಿ ಸೃಷ್ಟಿಯಾಗುತ್ತಿರುತ್ತಾರೆ. ಸ್ವಭಾವ ಮತ್ತು ರುಚಿಗಳಿಗೆ ಮುಪ್ಪಿಲ್ಲ. ಅವು ಹೊಸ ಹೊಸದಾಗಿ ಬರುತ್ತಲೇ ಇರುತ್ತವೆ. ಅನುಭವಗಳಿಗೆ ಯಾವ ಮಿತಿಯೂ ಇಲ್ಲ. ಯಾವಾಗಲೂ ಹೊಸ, ಹೊಸ, ಅನುಭಗಳಾಗುತ್ತಿರುತ್ತವೆ. ಜಗತ್ತು ಈ ತರಹ ನಿರಂತರವಾಗಿ (ಅನವರತ) ಚಲಿಸುತ್ತಲೇ ಇರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

No two days are alike and no two minds are similar,
Every man and every minute is a new novel creation,
Quality and taste never age and experience has no limits
The world is always vibrantly dynamic – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 3, 2014

ಒಂದರಿಂದೆರಡಹುದು ಲೋಕ ಲೀಲೆಗವಶ್ಯ (639)

ಒಂದರಿಂದೆರಡಹುದು ಲೋಕ ಲೀಲೆಗವಶ್ಯ |
ಹೊಂದಿಕೆಯಿನಿರದೆರಡರಿಂದಹುದನರ್ಥ ||
ಅಂದವದು ಕಣ್ಗೆ ಕೈಗಂದದೆಯೆ ಹಾರುವುದು |
ಸುಂದರದ ಮಾಯೆಯದು - ಮರುಳ ಮುನಿಯ || (೬೩೯)

(ಒಂದರಿಂದ+ಎರಡು+ಅಹುದು)(ಲೀಲೆಗೆ+ಅವಶ್ಯ)(ಹೊಂದಿಕೆಯಿನ್+ಇರದೆ+ಎರಡರಿಂದ+ಅಹುದು+ಅನರ್ಥ)(ಕೈಗೆ+ಅಂದದೆಯೆ)

ಒಂದಾಗಿರುವುದರಿಂದ ಎರಡು ಆಗುವುದು ಲೋಕ ನಾಟಕಕ್ಕೆ ಅಗತ್ಯವಾಗಿದೆ. ಹೊಂದಿಕೆಯಿಂದಿರದಿದ್ದಲ್ಲಿ ಈ ಎರಡರಿಂದ ಕೇಡಾಗುವ ಸಂಭವವುಂಟು. ಅದು ನಮ್ಮ ಕಣ್ಣುಗಳಿಗೆ ಅಂದವಾಗಿ ಕಾಣುತ್ತದೆ. ಆದರೆ ನಮ್ಮ ಕೈಗಳಿಗೆ ನಿಲುಕದೆಯೇ ಹಾರಿಹೋಗುತ್ತದೆ. ಮಾಯೆಯ ಆಕರ್ಷಣೆಯಿದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One becoming two is unavoidable for the world-play to continue,
But discord between the two causes all confusions
It is fascinating to the eyes but it eludes the grasp
It is Maya the elegant – Marula Muniya (639)
(Translation from "Thus Sang Marula Muniya" by Sri. Narasimha Bhat)

Wednesday, July 2, 2014

ನೆಚ್ಚದಿರು ದೈವವನು ಬೆಚ್ಚದಿರದಾರಿಗಂ (638)

ನೆಚ್ಚದಿರು ದೈವವನು ಬೆಚ್ಚದಿರದಾರಿಗಂ |
ಎಚ್ಚರಿರು ನಿನ್ನ ಸತ್ತ್ವದಲಿ ನೀಂ ನಿಂತು ||
ಅಚ್ಚುಮೆಚ್ಚೇನಾದರಿರಲಿ ಲೋಕಕ್ಕೆ ಬಿಡು |
ರಚ್ಚೆ ನೀನೇ ನಿನಗೆ - ಮರುಳ ಮುನಿಯ || (೬೩೮)

(ನೆಚ್ಚದೆ+ಇರು)(ಬೆಚ್ಚದೆ+ಇರು+ಅದು+ಆರಿಗಂ)(ಎಚ್ಚರ+ಇರು)(ಅಚ್ಚುಮೆಚ್ಚು+ಏನಾದರು+ಇರಲಿ)

ದೈವವನ್ನು(ಅದೃಷ್ಟ/ವಿಧಿ) ನಂಬಿ ನಿನ್ನ ಕೆಲಸಗಳನ್ನು ಮಾಡಬೇಡ. ಹಾಗೆಯೇ ಪ್ರಪಂಚದಲ್ಲಿ ನೀನು ಯಾರಿಗೂ ಹೆದರಲೂ ಬೇಡ. ನಿನ್ನ ಬಲದಲ್ಲಿ ನಂಬಿಕೆಯನ್ನಿಟ್ಟು ಜಾಗರೂಕನಾಗಿ ನಡೆದುಕೊ. ಅತಿಶಯವಾಗಿ ಇಷ್ಟಪಡುವುದೇನಾದರೂ ಇದ್ದಲ್ಲಿ ಅದನ್ನು ಜಗತ್ತಿಗೇ ಬಿಟ್ಟುಕೊಡು. ಒಟ್ಟಿನಲ್ಲಿ ನಿನಗೆ ನೀನೇ ರಕ್ಷೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Don’t rely on Fate and fear not anyone
Be ever vigilant and rely on your own strength
If any happiness comes to you, leave it to the world
You are your own protector – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 1, 2014

ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ (637)

ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ |
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ ||
ಚಟ್ಟಕ್ಕೆ ನಿನ್ನನೇರಿಪ ಮುನ್ನ ನೀನಾಗಿ |
ಕಿತ್ತೆಸೆಯೊ ಕಂತೆಗಳ - ಮರುಳ ಮುನಿಯ || (೬೩೭)

(ವಸ್ತ್ರವೇಷಗಳು+ಎಲ್ಲ)(ನಿನ್ನನು+ಏರಿಪ)(ಕಿತ್ತು+ಎಸೆಯೊ)

ಪ್ರಪಂಚಕ್ಕೆ ನೀನು ಬಂದದ್ದು ಬೆತ್ತಲೆಯಾಗಿಯೇ ಮತ್ತು ಪ್ರಪಂಚದಿಂದ ನೀನು ಹೋಗುವುದೂ ಬೆತ್ತಲೆಯಾಗಿಯೇ ಹೌದು. ಮಧ್ಯ ಇರುವಷ್ಟು ಸಮಯ ನಿನ್ನ ದೇಹಕ್ಕೆ ಬಟ್ಟೆ ಬರೆಗಳನ್ನು ತೊಡಿಸಿ ಸಂತೋಷಪಡುತ್ತಿದ್ದೀಯೆ. ನಿನ್ನನ್ನು ಚಟ್ಟಕ್ಕೆ ಹಾಕುವ ಮುಂಚೆ ನೀನಾಗಿ ನೀನೇ ನಿನ್ನೆಲ್ಲ ಕಂತೆಗಳನ್ನೂ ಕಿತ್ತೆಸೆದು ಮುಕ್ತನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Naked you come to this world and naked you depart it
All clothes and guises are only for a few days in between
Throw off all your burdens yourself
Before you are lifted up to the bier – Marula Muniya
(Translation from "Thus Sang Marula Muniya" by Sri. Narasimha Bhat)