Thursday, June 1, 2017

ಹೃದಯ ಹಿಮಘನ ಖಂಡವಂ ಕಾವ್ಯರವಿ ಸೋಕೆ (797)

ಹೃದಯ ಹಿಮಘನ ಖಂಡವಂ ಕಾವ್ಯರವಿ ಸೋಕೆ |
ಮಧುರಾನುಭವ ಸಲಿಲ ಪರಿದು ಚಿಂತೋರ್ಮಿ- ||
ಯುದಿಸಿ ಜೀವನ ತೊಳೆದು ಧರ್ಮದೀವಿಯೊಳಿರಿಸಿ |
ಸೊದೆಯಪ್ಪುದಾತುಮಕೆ - ಮರುಳ ಮುನಿಯ || (೭೯೭)

(ಮಧುರ+ಆನುಭವ)(ಚಿಂತೆ+ಊರ್ಮಿ+ಉದಿಸಿ)(ಧರ್ಮ+ದೀವಿಯ+ಒಳು+ಇರಿಸಿ)(ಸೊದೆ+ಅಪ್ಪುದು+ಆತುಮಕೆ)

ಹೃದಯದ ಘನರೂಪದಲ್ಲಿರುವ ಮಂಜುಗಡ್ಡೆಯ ತುಂಡನ್ನು (ಖಂಡ) ಕಾವ್ಯವೆಂಬ ಸೂರ್ಯ(ರವಿ)ನು ಸ್ಪರ್ಷಿಸಲು, ಸಿಹಿಯಾದ (ಮಧು) ಅನುಭವಗಳ ನೀರು (ಸಲಿಲ) ಹರಿದು, ಯೊಚನೆಗಳ ಅಲೆ(ಊರ್ಮಿ)ಗಳು ಹುಟ್ಟಿ(ಉದಿಸಿ)ಕೊಂಡು, ಬಾಳನ್ನು ಚೊಕ್ಕಟಮಾಡಿ, ಧರ್ಮವೆಂಬ ನಡುಗಡ್ಡೆ(ದೀವಿ)ಯೊಳಗಿಟ್ಟು, ಆತ್ಮಕ್ಕೆ ಅಮೃತ(ಸೊದೆ)ವಾಗುತ್ತದೆ.

 When the sun of poetry touches the ice-berg of heart
The water of sweet emotions flows and the noble thought waves rise
They wash the heart well and light the lamp of dharma there
This is an ambrosial experience to the self – Marula Muniya (797)
(Translation from "Thus Sang Marula Muniya" by Sri. Narasimha Bhat)

Monday, July 18, 2016

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ (796)

ಕೃಷ್ಣಶಿಲೆಯೊಂದು ಕಡೆ ಜಕ್ಕಕಲೆಯೊಂದು ಕಡೆ -|
ಯನ್ಯೋನ್ಯವರಸುತ್ತೆ ಕರೆಯುತ್ತೆ ಜಗದಾ ||
ಪುಣ್ಯದಿಂದೊಡಗೂಡಲಾಗಳುಭಯ ಉಭಯರ ಮುಕ್ತಿ |
ಚೆನ್ನಕೇಶವಮೂರ್ತಿ - ಮರುಳ ಮುನಿಯ || (೭೯೬)

(ಕಡೆ+ಅನ್ಯೋನ್ಯ+ಅರಸುತ್ತೆ)(ಪುಣ್ಯದಿಂದ+ಒಡಗೂಡಲ್+ಆಗಳ್+ಉಭಯ)

ಕಪ್ಪು ಕಲ್ಲು (ಕೃಷ್ಣಶಿಲೆ) ಒಂದುಕಡೆ ಮತ್ತು ಅದನ್ನು ಕಡೆದು ಮೂರ್ತಿಯನ್ನು ಮಾಡುವ ಜಕ್ಕಣಾಚಾರಿಯ ಶಿಲ್ಪಕಲೆ ಮತ್ತೊಂದು ಕಡೆ. ಇವು ಒಂದು ಮತ್ತೊಂದನ್ನು ಹುಡುಕಿಕೊಂಡು ಕರೆಯುತ್ತಾ ಜಗತ್ತಿನ ಪುಣ್ಯದಿಂದ ಸೇರಿಕೊಂಡರೆ, ಆವಾಗ ಅವೆರಡಕ್ಕೂ ಚೆನ್ನಕೇಶವನ ವಿಗ್ರಹದಿಂದ ಮೋಕ್ಷವು ಸಿಗುತ್ತದೆ.

(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dark granite and Jakkana’s sculpture from two different places
Search, call each other and at last due to the
Good fortune of the world they both come together and gain liberation
As the idol of Lord Channakeshava – Marula Muniya (796)
(Translation from "Thus Sang Marula Muniya" by Sri. Narasimha Bhat)

Friday, July 15, 2016

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ (795)

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ |
ಲೋಕವೃತ್ತಿಯನಯವದಾತ್ಮ ನೀತಿಯದು ||
ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ |
ವ್ಯಾಕುಲತೆ ತಪ್ಪೀತೆ? - ಮರುಳ ಮುನಿಯ || (೭೯೫)
(ಲೋಕವೃತ್ತಿಯನಯವು+ಅದು+ಆತ್ಮ)
ಸದಾಕಾಲವೂ ನಮಗೆ ಬೇಕಾಗಿರುವದಕ್ಕೋಸ್ಕರ ತಪಿಸುತ್ತಿದ್ದರೆ, ಜಗಳಕ್ಕೆ ಅವಕಾಶ ಉಂಟಾಗುತ್ತದೆ. ಅದೇ ತೃಪ್ತಿಯಿಂದ ಸಾಕು ಎಂದರೆ, ಅದು ನೆಮ್ಮದಿಗೆ ದಾರಿಯಾಗುತ್ತದೆ. ಈ ರೀತಿಯ ಸೂಕ್ಷ್ಮತೆಯಿಂದ ಪ್ರಪಂಚದ ವ್ಯವಹಾರಗಳಲ್ಲಿ ನಡೆದುಕೊಳ್ಳುವ ಒಳ್ಳೆಯ ನಿಯಮಗಳನ್ನೇ ನಮ್ಮ ಆತ್ಮದ ಉದ್ಧಾರಕ್ಕೂ ಬಳಸಿಕೊಳ್ಳಬೇಕು. ಬೇಕೆನ್ನುವುದನ್ನು ಕಲಿತುಕೊಂಡು, ಸಾಕೆನ್ನುವುದನ್ನು ಮರೆತರೆ ದುಃಖ(ವ್ಯಾಕುಲತೆ)ಕ್ಕೆ ಈಡಾಗದೇ ಇರುತ್ತೇವೆಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Conflict when man says "I want, I want" and peace when he feels "enough, enough"
This is the smooth style of social conduct and the proper policy for self
But how can man avoid distress when he learns only to demand
And forgets to feel enough? - Marula Muniya (795)
(Translation from "Thus Sang Marula Muniya" by Sri. Narasimha Bhat)

Wednesday, June 1, 2016

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ (794)

ಪಾಶ ಪಾಶಗಳಾಗಿ ತಲೆಯೊಳಿರಲದು ತುಂಬ ।
ಲೇಸೆಂಬೆ ತರುಬೆಂದು ಪೆಣಲೆಂದು ಹೂವ ॥
ಪಾಶವದು ಬೇರೆ ಅಂಗಗಳೊಳಲ್ಲವೇನದಕೆ ।
ಹೇಸುವುದದೇನೆಲವೊ - ಮರುಳ ಮುನಿಯ ॥ (794)

(ತಲೆಯ+ಒಳು+ಇರಲು+ಅದು)(ಅಂಗಗಳ+ಒಳ್+ಅಲ್ಲ+ಏನ್+ಅದಕೆ)(ಹೇಸುವುದು+ಅದು+ಏನ್+ಎಲವೊ)

ಹಗ್ಗ, ಹಗ್ಗಗಳಂತೆ ತಲೆಯ ತುಂಬ ಕೂದಲುಗಳಿದ್ದರೆ, ಅದು ಅಂದ(ಲೇಸು)ವಾಗಿ ಕಾಣುತ್ತದೆಂದು ಮುಡಿಯನ್ನು(ತುರುಬು) ಹೆಣೆದು, ಅದಕ್ಕೆ ಹೂವನ್ನು ಮುಡಿಸುತ್ತಾರೆ. ಅದೇ ಕೂದಲು ದೇಹದ ಬೇರೆ ಅಂಗಗಳಲ್ಲಿ ಇದ್ದರೆ, ಅದು ನೇಣುಹಗ್ಗದಂತಾಗಿ, ನೋಡುವವರಿಗೆ ಅಸಹ್ಯಕರವಾಗಿ(ಹೇಸುವುದು) ಕಾಣುತ್ತದೆ ಅಲ್ಲವೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
People admire it as braid or plait and decorate it with flowers,
But when the rope like hair grows in other parts of the body
Why should they detest it ? - Marula Muniya (794)
(Translation from "Thus Sang Marula Muniya" by Sri. Narasimha Bhat)

Thursday, May 5, 2016

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು (793)

ಕುಚ್ಚು ಕುಚ್ಚಾಗಿ ತಲೆಗೂದಲನು ಹೆಣೆಯುವರು ।
ಮೆಚ್ಚಿಕೊಳ್ಳುವರದನು ನೋಳ್ಪ ಜನರೆಲ್ಲ ॥
ಬಚ್ಚೆಂಬರದು ಬೇರೆ ತಾವಿನೊಳು ಬೆಳೆದಿರಲು ।
ಹುಚ್ಚಲ್ಲವೇನೊ ಇದು? - ಮರುಳ ಮುನಿಯ ॥ (೭೯೩)

(ಮೆಚ್ಚಿಕೊಳ್ಳುವರ್+ಅದನು)(ಬಚ್ಚು+ಎಂಬರ್+ಅದು)(ತಾವಿನ+ಒಳು)

ತಲೆಯ ಕೂದಲನ್ನು ಕುಚ್ಚು ಕುಚ್ಚುಗಳನ್ನಾಗಿ ವಿಂಗಡಿಸಿ ಜಡೆಯನ್ನು ಹೆಣೆಯುತ್ತಾರೆ. ಆವಾಗ ಆ ಜಡೆಯು ನೋಡುವವರ ಕಣ್ಣುಗಳಿಗೆ ಅಂದವಾಗಿ ಕಂಡು, ಅದು ಅವರ ಮೆಚ್ಚಿಗೆಗೆ ಪಾತ್ರವಾಗುತ್ತದೆ. ಆದರೆ ಅದೇ ಕೂದಲು ದೇಹದ ಬೇರೆಯ ಜಾಗ(ತಾವು)ದಲ್ಲಿ ಬೆಳೆದಿದ್ದರೆ, ಅದನ್ನು ಮುಚ್ಚಿಟ್ಟಿಕೋ(ಬಚ್ಚು) ಎಂದೆನ್ನುತ್ತಾರೆ. ಇದು ಒಂದು ಹುಚ್ಚು ಕೆಲಸವಲ್ಲವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the hair grows thick and long on head,
The people who see, appreciate and admire such hair
Want to hide the hair grown in some other body parts,
Is this not sheer madness? - Marula Muniya || (793)
(Translation from "Thus Sang Marula Muniya" by Sri. Narasimha Bhat)

Wednesday, October 14, 2015

ಅರಸು ನಿನ್ನೊಳಹಂತೆ ಎಲ್ಲಿಹುದೊ ಎಂತಿಹುದೊ (792)

ಅರಸು ನಿನ್ನೊಳಹಂತೆ ಎಲ್ಲಿಹುದೊ ಎಂತಿಹುದೊ |
ಸಿರಿಯಾಶೆ ಸುಖದಾಶೆ ಬಂಧುಜನದಾಶೆ ||
ಬಿರುದು ಯಶದಾಶೆಗಳು ಬೇರೆ ರೂಪದಲಿಪ್ಪ |
ಗರುವವೆಲ್ಲವದಹುದು - ಮರುಳ ಮುನಿಯ || (೭೯೨)

(ನಿನ್ನ+ಒಳು+ಅಹಂತೆ)(ಎಲ್ಲಿ+ಇಹುದೊ)(ಎಂತು+ಇಹುದೊ)(ಗರುವ+ಎಲ್ಲ+ಅದು+ಅಹುದು)

ನಿನ್ನೊಳಗಡೆ ಅಹಂಭಾವವು ಎಲ್ಲಿ ಮತ್ತು ಯಾವ ರೂಪದಲ್ಲಿದೆಯೆಂದು ಹುಡುಕು. ಐಶ್ವರ್ಯವನ್ನು ಸಂಪಾದಿಸುವ ಆಶೆ, ಸುಖವನ್ನನುಭವಿಸುವ ಆಶೆ, ಬಂಧುಜನಗಳ ಜೊತೆ ಸಂಭ್ರಮದಿಂದಿರುವ ಬಯಕೆ, ಹೆಸರು, ಕೀರ್ತಿ ಮತ್ತು ಗೆಲುವುಗಳನ್ನು ಗಳಿಸುವ ಅಪೇಕ್ಷೆಗಳು, ಇವುಗಳೆಲ್ಲವೂ ಬೇರೆ ಬೇರೆ ರೂಪದಲ್ಲಿರುವ ಅಹಂಕಾರಗಳೇ ಹೌದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Search out the ego in you and find out where and how it is,
The craving for wealth, sensual pleasures and loving relations
The craving for fame and titles are all egoism
Masquerading in various guises – Marula Muniya (792)
(Translation from "Thus Sang Marula Muniya" by Sri. Narasimha Bhat)

Friday, September 4, 2015

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು (791)

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು |
ಬಿಡುಗೊಳದ ಮನುಜಮಾನಸರಾಶಿಯೊಂದು ||
ಅಡಿಗಡುಗಳುಂಟು ನೀರ‍್ಗದನೆಳೆವ ಭಟರುಂಟು |
ತಡೆಯುಂಟೆ ನರಮನಕೆ? - ಮರುಳ ಮುನಿಯ || (೭೯೧)

(ಕಡಲ್+ಎರಡು)(ನೀರ+ರಾಶಿ+ಅದು+ಒಂದು)(ಮನುಜ+ಮಾನಸರಾಶಿ+ಒಂದು)(ಅಡಿಗಡುಗಳು+ಉಂಟು)(ನೀರ‍್ಗೆ+ಅದನ್+ಎಳೆವ)(ಭಟರು+ಉಂಟು)(ತಡೆ+ಉಂಟೆ)

ಸೃಷ್ಟಿಯಲ್ಲಿ ಎರಡು ಸಮುದ್ರಗಳಿವೆ. ಒಂದು ನೀರಿನರಾಶಿ. ಮತ್ತೊಂದು ನಿರಂತರವಾಗಿ ಹರಿಯುತ್ತಿರುವ ಮನುಷ್ಯನ ಮನಸ್ಸಿನ ವಿಚಾರಧಾರೆ. ಆ ನೀರಿನ ಕೆಳಗಡೆ ಗಡಿಗಳಿವೆ(ಅಡಿಗಡುಗಳು). ಅದನ್ನು ನೀರಿಗೆ ಎಳೆಯುವ ಸೇವಕರೂ ಇದ್ದಾರೆ. ಮನುಷ್ಯನ ಮನಸ್ಸಿಗೆ ತಡೆಗಳಿಲ್ಲ. ಅದು ಎಲ್ಲಿ ಬೇಕಾದರೂ ಹಾರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two oceans in creation, one is the vast mass of water
The other is the restless mass of human mind,
Bottom and borders there are to the ocean and brave men there are to measure them,
But who is there to check human mind? - Marula Muniya (791)
(Translation from "Thus Sang Marula Muniya" by Sri. Narasimha Bhat)

Thursday, September 3, 2015

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ (790)

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ |
ಸಾಸರೋಷಗಳಹುದು ದೋಷ ಭೀಷಣವು ||
ಸೈಸೇನು ಸೋಲಲ್ಲ ಅನ್ಯಾಯದೊಪ್ಪಲ್ಲ |
ಸೈಸುತೆದುರಿಸು ವಿಧಿಯ - ಮರುಳ ಮುನಿಯ || (೭೯೦)

(ಸಾಸ+ರೋಷಗಳ್+ಅಹುದು)(ಸೈಸುತ+ಎದುರಿಸು)

ಸಹಿಸು(ಸೈಸು)ವವನೇ ಜಯಿಸುತ್ತಾನೆ. ತಾಳುಮೆಯೇ ಮೇಲೇಳುವುದು. ತಾಳಿದವನು ಬಾಳಿಯಾನು. ವಿಚಾರಶೂನ್ಯ ಅಪೇಕ್ಷೆ (ಸಾಸ) ಮತ್ತು ಕೋಪ(ರೋಷ)ಗಳಿಂದ, ತಪ್ಪು ಮತ್ತು ಭಯಂಕರ(ಭೀಷಣ) ಅನಾಹುತಗಳಾಗಬಹುದು. ಸಹಿಸಿಕೊಂಡಿರುವುದು ಸೋತುಹೋದಂತೇನಲ್ಲ. ಅದು ಅನ್ಯಾಯವನ್ನು ಒಪ್ಪಿಕೊಂಡಂತೆಯೂ ಅಲ್ಲ. ಆದುದ್ದರಿಂದ ಸಹಿಸಿಕೊಂಡೇ ವಿಧಿಯನ್ನು ಎದುರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He who endures wins, patience itself is excellence,
Mad adventure and anger may end is dangerous blunder
Endurance isn’t defeat and acquiescence isn’t injustice
Endure and bravely face the Fate – Marula Muniya (790)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, September 2, 2015

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ (789)

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ |
ಸಹಿಸು ಬೇಡದ ಬಂದ ಪಾಡನೆಲ್ಲ |
ಸಹನೆ ನಿನ್ನಾತ್ಮವನು ಗಟ್ಟಿಪಡಿಪಭ್ಯಾಸ |
ವಿಹಿತವದು ಮನುಜಂಗೆ - ಮರುಳ ಮುನಿಯ || (೭೮೯)

(ಗಟ್ಟಿಪಡಿಪ+ಅಭ್ಯಾಸ)

ಒಂದು ಜೀವಕ್ಕೆ ಗೆಲುವು ಸಹನೆಯಿಂದ ಬರುತ್ತದೆ. ಆದುದ್ದರಿಂದ ನೀನು ಕೇಳಿಕೊಳ್ಳದಿದ್ದರೂ ಸಹ ನಿನ್ನ ಪಾಲಿಗೆ ಬಂದುದ್ದನೆಲ್ಲಾವನ್ನೂ ನೀನು ಸಹನೆಯಿಂದ ತಾಳಿಕೊ. ಅದು ನಿನ್ನ ಆತ್ಮವನ್ನು ಗಟ್ಟಿಗೊಳಿಸುವ ಸಾಧನವಾಗಿದೆ. ಮನುಷ್ಯನಿಗೆ ಬಾಳಲು ಯೋಗ್ಯವಾದ ಮಾರ್ಗ ಅದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Endurance itself is success in life and therefore endure all that comes to you
Endure all joys and sorrows that come to you unmasked
Endurance is an exercise that strengthens your self
It is quite essential to man – Marula Muniya (789)
(Translation from "Thus Sang Marula Muniya" by Sri. Narasimha Bhat)

Tuesday, September 1, 2015

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ (788)

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ |
ಎತ್ತರದಲೆಯ ತೆರೆಯ ಬೀಳೇಳು ಕಡಲು ||
ಉತ್ತಮನು ಲೀಲೆಯಂ ಲೀಲೆಯೆಂದಾಡುವನು |
ಅತ್ತು ನಿಂತರು (ಕೆಲರು)-ಮರುಳ ಮುನಿಯ || (೭೮೮)

(ಎತ್ತರದ+ಅಲೆಯ)(ಬೀಳ್+ಏಳು)

ಸತ್ತ್ವ, ರಜಸ್ಸು ಮತ್ತು ತಮೋಗುಣಗಳು ಒಂದರ ಜೊತೆ ಇನ್ನೊಂದು ಸ್ಪರ್ಧಿಸುತ್ತಿರುವುದೇ ಈ ಜಗತ್ತಿನ ಆಟ. ಸಮುದ್ರದಲ್ಲಿ ಒಂದು ತೆರೆಯು ಮೇಲಕ್ಕೆ ಎದ್ದು ಪುನಃ ಕೆಳಕ್ಕೆ ಬೀಳುತ್ತದೆ. ಶ್ರೇಷ್ಠವಾಗಿ ಜೀವನವನ್ನು ನಡೆಸುವವನು, ಇದು ಒಂದು ಆಟವೆಂದು ತಿಳಿದುಕೊಂಡು ಆ ಆಟವನ್ನು ನಿಯಮಗಳಿಗನುಸಾರವಾಗಿ ಚೆನ್ನಾಗಿ ಆಡುತ್ತಾನೆ. ಮಿಕ್ಕವರು ದುಃಖಿಸುತ್ತಾ ಇರುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world play is a competition among satva, rajas and tamas
The sea is just the rise and fall of high waves
The wise considers this play as play
But others waste their lives in grieving – Marula Muniya (788)
(Translation from "Thus Sang Marula Muniya" by Sri. Narasimha Bhat)

Tuesday, August 25, 2015

ಪುರುಷನೋಲಗವೆಲ್ಲ ಮರಣದೂಳಿಗವೆನುತ (787)

ಪುರುಷನೋಲಗವೆಲ್ಲ ಮರಣದೂಳಿಗವೆನುತ |
ಕೊರಗುತಿರಲಪ್ಪುದೇನ್? (ಅದು ತಪ್ಪಿತೇನು?)||
ನರಜನುಮ ಪರಿಶುದ್ಧಿಯವಕಾಶವರಿತದನು |
ಪರಿಪುಷ್ಟಿಯನು ಗಳಿಸು - ಮರುಳ ಮುನಿಯ || (೭೮೭)

(ಪುರುಷನ+ಓಲಗವೆಲ್ಲ)(ಮರಣದ+ಊಳಿಗ+ಎನುತ)(ಕೊರಗುತ+ಇರಲ್+ಅಪ್ಪುದು+ಏನ್)(ಪರಿಶುದ್ಧಿಯ+ಅವಕಾಶ+ಅರಿತು+ಅದನು)

ಮನುಷ್ಯನ ದರ್ಬಾರು ಮತ್ತು ದೌಲತ್ತುಗಳೆಲ್ಲವೂ (ಓಲಗ) ಕೊನೆಗೆ ಒಂದು ದಿನ ಸಾವನ್ನು ಅಪ್ಪಲು ನಡೆಸುತ್ತಿರುವ ಚಾಕರಿ ಎಂದೆನುತ್ತಾ, ದುಃಖಿಸುತ್ತಿದ್ದರೇನು ಬಂತು? ಇದನ್ನು ತಪ್ಪಿಸಲಾಗುವುದೇನು? ಮನುಷ್ಯ ಜನ್ಮವು ಅವನು ಅತ್ಯಂತ ಶುದ್ಧನಾಗಲು ಪರಮಾತ್ಮನು ಕೊಟ್ಟಿರುವ ಒಂದು ಸದಾವಕಾಶ. ಇದನ್ನು ನೀನು ತಿಳಿದುಕೊಂಡು ನಿನ್ನ ಜೀವನವು ಸಮೃದ್ಧಿಯಾಗುವಂತೆ (ಪರಿಪುಷ್ಟ) ಮಾಡಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Even a royal life of man is mere menial service under master Death
What do you gain by grieving so?
Human life is an opportunity for purification
Know this and acquire excellence – Marula Muniya (787)
(Translation from "Thus Sang Marula Muniya" by Sri. Narasimha Bhat)


Friday, August 14, 2015

ಪೂರ್ವಜನ್ಮದ ಕರ್ಮಮನುಭವಿಸಲಹುದೀಗ (786)

ಪೂರ್ವಜನ್ಮದ ಕರ್ಮಮನುಭವಿಸಲಹುದೀಗ |
ಭಾವಿ ಕಾಲವುಮಿಹುದು ಶೇಷ ಮಿಕ್ಕಿರಲು ||
ಜೀವಕ್ಕೆ ಹಿಂದುಂಟು ಮುಂದುಂಟು ಮುಗಿವಿಲ್ಲ |
ಆವಗಂ ನೆನೆದು ಬಾಳ್ - ಮರುಳ ಮುನಿಯ || (೭೮೬)

(ಕರ್ಮಂ+ಅನುಭವಿಸಲ್+ಅಹುದು+ಈಗ)(ಕಾಲವುಂ+ಇಹುದು)(ಹಿಂದು+ಉಂಟು)(ಮುಂದು+ಉಂಟು)()

ನಾವು ಈವಾಗ ನಮ್ಮ ಹಿಂದಿನ ಜನ್ಮಗಳ ಕರ್ಮಗಳ ಫಲಗಳನ್ನನುಭವಿಸಲು ಹುಟ್ಟಿದ್ದೇವೆ. ಆದರೆ ಆ ಕರ್ಮಫಲಗಳ ಋಣಶೇಷಗಳಿನ್ನೂ ಇರುವುದರಿಂದ, ಭವಿಷ್ಯತ್ತಿನಲ್ಲೂ ನಾವು ಅವುಗಳನ್ನು ತೀರಿಸಬೇಕಾಗುತ್ತದೆ. ಒಂದು ಜೀವಕ್ಕೆ ಭೂತ ಮತ್ತು ಭವಿಷ್ಯತ್ತುಗಳೆರಡೂ ಇವೆ. ಮುಕ್ತಾಯ ಮಾತ್ರ ಇಲ್ಲ. ಇದನ್ನು ನೀನು ಎಂದೆಂದಿಗೂ ಜ್ಞಾಪಕದಲ್ಲಿಟ್ಟುಕೊಂಡು ನಿನ್ನ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You should experience the fruit of Karma of your past lives
You have your future lives if any balance still remains
A soul has a past and a future but it has no end
Keep this in mind always and live- Marula Muniya (786)
(Translation from "Thus Sang Marula Muniya" by Sri. Narasimha Bhat)

Tuesday, July 21, 2015

ಹಳೆಯ ಮನೆ ಮಳೆಯ ಹೊಡೆತದಿನುರುಳಿ ಮಣ್ಣಪ್ಪು(785)

ಹಳೆಯ ಮನೆ ಮಳೆಯ ಹೊಡೆತದಿನುರುಳಿ ಮಣ್ಣಪ್ಪು-|
ದಿಳೆಗೆ ದಿನದಿನದ ಪಾಡದರೊಳತಿಶಯವೇಂ? ||
ಅಳಿದ ಮನೆಯನು ಮರಳಿ ಕಟ್ಟಿ ನಿಲ್ಲಿಸಿ ಬಾಳ |
ಬೆಳಗಿದೊಡೆ ಸುಕೃತ ಕಥೆ - ಮರುಳ ಮುನಿಯ || (೭೮೫)

(ಹೊಡೆತದಿಂ+ಉರುಳಿ)(ಮಣ್ಣ್+ಅಪ್ಪುದು+ಇಳೆಗೆ)(ಪಾಡು+ಅದರೊಳ್+ಅತಿಶಯ+ಏಂ)

ಒಂದು ಹಳೆಯ ಮನೆಯು ಮಳೆಯ ಹೊಡೆತದಿಂದ ಬಿದ್ದು ಭೂಮಿ(ಇಳೆ)ಯಲ್ಲಿ ಸೇರಿಕೊಂಡು ಅದರ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ನಮ್ಮ ದಿನನಿತ್ಯದ ಅವಸ್ಥೆಗಳೂ ಇದಕ್ಕಿಂತ ಬೇರೆಯೇನಲ್ಲ? ಬಿದ್ದು ನಾಶವಾಗಿ ಹೋಗಿರುವ ಮನೆಯನ್ನು ಪುನಃ ಎತ್ತಿ ಕಟ್ಟಿ ಅದರಲ್ಲಿ ವಾಸಿಸುವವರ ಬಾಳು ಬೆಳಗುವಂತೆ ಮಾಡುವುದೇ ಪುಣ್ಯದ ಕೆಲಸ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old house crumbling under heavy rain
And becoming one with the earth is an everyday occurrence
And there’s no wonder in it, But reconstructing the fallen house
And lighting up one’s life is noble righteous act- Marula Muniya (785)
(Translation from "Thus Sang Marula Muniya" by Sri. Narasimha Bhat)

Thursday, July 16, 2015

ಸಹಿಸುವುದು ಸವಿಯುವುದು ಕಹಿಯೂಟ ಸವಿಯುವುದು (784)

ಸಹಿಸುವುದು ಸವಿಯುವುದು ಕಹಿಯೂಟ ಸವಿಯುವುದು |
ಬಹುವಾಯಿತೆಂದೆನದೆ ಕಹಿಯ ಸಹಿಸುವುದು ||
ಕಹಿ-ಸಿಹಿಗಳೆರಡಲ್ಲಮೊಂದೆಯೆನಿಪನ್ನೆಗಂ |
ಸಹಿಸುವುದು ಬಂದುದನು - ಮರುಳ ಮುನಿಯ || (೭೮೪)

(ಬಹು+ಆಯಿತು+ಎಂದು+ಎನದೆ)(ಸಿಹಿಗಳು+ಎರಡಲ್ಲಂ+ಒಂದೆ+ಎನಿಪ+ಅನ್ನೆಗಂ)

ಬಂದುದ್ದನ್ನು ತಾಳ್ಮೆಯಿಂದ ಸಹಿಸುವುದು. ಸಿಹಿಯಾದುದನ್ನು ಸವಿಯುವುದು. ಕಹಿಯಾಗಿರುವ ಊಟವನ್ನು ಮಾಡಿಯೂ ತಾಳ್ಮೆಯಿಂದಿರುವುದು. ಇದು ನನಗೆ ಸಾಕಾಯಿತೆನ್ನದೆ ಆ ಕಹಿಯನ್ನು ತಾಳಿಕೊಳ್ಳುವುದು. ಕಹಿ ಮತ್ತು ಸಿಹಿಗಳು ಬೇರೆ ಅಲ್ಲ, ಎರಡೂ ನನಗೆ ಸಮಾನ ಎಂಬ ಭಾವ ಸಿದ್ಧಿಸುವವರೆಗೂ ತಾಳ್ಮೆಯಿಂದಿದ್ದು, ಬಂದುದ್ದನ್ನೆಲ್ಲ ಸಹಿಸುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Enduring enduring and enjoying even bitter food
Enduring bitterness, without grumbling that it is too bitter
Enduring everything till sweetness and bitterness become the same to you,
Endure everything that comes your way – Marula Muniya (784)
(Translation from "Thus Sang Marula Muniya" by Sri. Narasimha Bhat)

Wednesday, July 1, 2015

ಒಳಿತು ಕೇಡುಗಳೆರಡು ನಿನ್ನನುಭವದ ರೀತಿ (783)

ಒಳಿತು ಕೇಡುಗಳೆರಡು ನಿನ್ನನುಭವದ ರೀತಿ |
ಕಳವಳದಿನಾಚೆ ಮೇಲಿಹುದು ಪರಸತ್ತ್ವ ||
ಕಳಚು ನೀಂ ಸ್ವಾರ್ಥವನು ಬಳಕೆಯಾಚಾರವನು |
ತೊಳಗು ನಿಃಸ್ವಾರ್ಥದಲಿ - ಮರುಳ ಮುನಿಯ || (೭೮೩)

(ಕೇಡುಗಳ್+ಎರಡು)(ಕಳವಳದಿಂ+ಆಚೆ)(ಬಳಕೆ+ಆಚಾರವನು)

ಒಳ್ಳೆಯದು ಮತ್ತು ಕೆಡಕುಗಳು ನಿನ್ನ ಅನುಭವಗಳ ಬಗೆಗಳ ಮೇಲೆ ಅವಲಂಬಿಸಿರುತ್ತವೆ. ತಳಮಳಗಳ ಸ್ಥಿತಿ ಮೀರಿ ಪರಮಾತ್ಮನ ಅಸ್ತಿತ್ತ್ವ ಇರುತ್ತದೆ. ನೀನು ಸ್ವಪ್ರಯೋಜನವನ್ನು ಮತ್ತು ರೂಢಿಯಲ್ಲಿರುವ ಸಂಪ್ರದಾಯಗಳನ್ನು ಬಿಟ್ಟು ಪರೋಪಕಾರದಲ್ಲಿ ನಿರತನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Good and evil depend on how you experience things,
The Truth is far above all anxieties and worries
Give up selfishness and the worn out customs
And shine with the glory of selflessness – Marula Muniya (783)
(Translation from "Thus Sang Marula Muniya" by Sri. Narasimha Bhat)

Thursday, June 25, 2015

ತರಣಿ ಜಲವಾಯುಗಳ ಸಿರಿಯೆನುವನೇ ನರನು(782)

ತರಣಿ ಜಲವಾಯುಗಳ ಸಿರಿಯೆನುವನೇ ನರನು?|
ಸರಿಸಮದೊಳೆಲ್ಲರಿಂಗಿಹ ಪುರುಳು ಪುರುಳೇಂ? ||
ಹೆರರಿಗಿಲ್ಲದೆ ತನ್ನಮಾತ್ರಕಿಹ ಸಿರಿಯೆ ಸಿರಿ |
ತರತಮವೆ ಜನದೆಣಿಕೆ - ಮರುಳ ಮುನಿಯ || (೭೮೨)

(ಸರಿಸಮದೊಳ್+ಎಲ್ಲರಿಂಗೆ+ಇಹ)(ಹೆರರಿಗೆ+ಇಲ್ಲದೆ)(ತನ್ನಮಾತ್ರಕೆ+ಇಹ)(ಜನದ+ಎಣಿಕೆ)

ಸೂರ್ಯ, ನೀರು ಮತ್ತು ಗಾಳಿಗಳನ್ನು ತನಕೆ ದೊರಕಿರುವ ಸಿರಿ, ಸಂಪತ್ತುಗಳೆಂದು ಮನುಷ್ಯನು ಭಾವಿಸುವನೇನು? ಪ್ರತಿಯೊಬ್ಬ ಜೀವಿಗೂ ಸರಿಸಮಾನವಾಗಿ ಸಿಗುವಂತಹ ಸಾರಗಳನ್ನು ಅವನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇತರರಿಗಿರದ ಮತ್ತು ತನಗೆ ಮಾತ್ರ ಇರುವಂತಹ ಸಿರಿ ಸಂಪತ್ತುಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಈ ಬಗೆಯ ಹೆಚ್ಚು ಕಡಿಮೆಗಳನ್ನೇ ಅವನು ಲೆಕ್ಕ ಹಾಕುವನು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Does man consider the sun, water and air as wealth?
Are the precious things that all men equally possess not wealth?
Real wealth is what possesses when all others don’t possess it?
With this perverse view men are busy comparing and contrasting – Marula Muniya (782)
(Translation from "Thus Sang Marula Muniya" by Sri. Narasimha Bhat)

Thursday, June 11, 2015

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು (781)

ಟಂಕಕವ ಮೊದಲು ನಿರವಿಸಿದವಂ ಪೊಸತೊಂದು |
ಬೆಂಕಿಯಂ ನರ ಸೋದರರ ನಡುವೆ ತಂದಂ ||
ಅಂಕುರಿಸಿತಂದದರಿನೊಂದಸೂಯಾ ಸ್ಪರ್ಧೆ |
ಸಂಕಟವದನುಪಮವೊ - ಮರುಳ ಮುನಿಯ || (೭೮೧)

(ಪೊಸತು+ಒಂದು)(ಅಂಕುರಿಸಿತು+ಅಂದು+ಅದರಿನ್+ಒಂದು+ಅಸೂಯಾ)(ಸಂಕಟ+ಅದು+ಅನುಪಮವೊ)

ಮೊಟ್ಟಮೊದಲಿಗೆ ನಾಣ್ಯವನ್ನು ಮುದ್ರಿಸಿದವನು (ಟಂಕಕ) ಒಂದು ಹೊಸ (ಪೊಸ) ಬೆಂಕಿಯನ್ನು ಮನುಷ್ಯರ ಸೋದರ ಭಾವಗಳಲ್ಲಿ ತಂದಿಡಲು ಕಾರಣನಾದನು. ಹಣವನ್ನು ಗಳಿಸಲು ಅವತ್ತಿನ ದಿನ ಹೊಟ್ಟೆಕಿಚ್ಚಿ(ಅಸುಯಾ)ನಿಂದ ಕೂಡಿದ ಒಂದು ಸ್ಪರ್ಧೆಯು ಮನುಷ್ಯ ಮನುಷ್ಯರ ನಡುವೆ ಹುಟ್ಟಿತು (ಅಂಕುರಿಸಿತು). ಇದರಿಂದ ಉಂಟಾದ ಸಂಕಟಗಳಿಗೆ ಸಮನಾದ ಬೇರೆ ದುಃಖಗಳೇ ಇಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The man who first invented the first coin in human history,
Brought a new fire to burn the hearts of his human brothers,
From money has sprouted the fire of jealousy and cut-throat competition
The affliction it causes is incomparable – Marula Muniya (781)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, June 10, 2015

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ (780)

ಕಮನಕಾರಣಿ ಸೃಷ್ಟಿ ಪೋಷಿಪಳ್ ಸ್ವಾರ್ಥತೆಯ |
ಸ್ವಮತಿಯತ್ನದಿನೆ ನಿಃಸ್ವಾರ್ಥಗುಣ ನಿನಗೆ ||
ಮಮತೆಯಿಂದಾತ್ಮ ಸಂಕೋಚ ನಿರ್ಮಮತೆಯಿಂ- |
ದಮಿತಾತ್ಮ ವಿಸ್ತಾರ - ಮರುಳ ಮುನಿಯ || (೭೮೦)

(ಮಮತೆಯಿಂದ+ಆತ್ಮ)(ನಿರ್ಮಮತೆಯಿಂದ+ಅಮಿತ+ಆತ್ಮ)

ಆಸೆಯನ್ನು ಹುಟ್ಟಿಸಲು ಕಾರಣಕರ್ತಳಾದ(ಕಮನಕಾರಣಿ) ಸೃಷ್ಟಿಯು ಮನುಷ್ಯನಲ್ಲಿ ಸ್ವಾರ್ಥತೆಯನ್ನು ಪೋಷಿಸುತ್ತಾಳೆ. ನಿನ್ನ ಸ್ವಂತ ಬುದ್ಧಿಯ ಉಪಯೋಗದಿಂದ ನೀನು ನಿನ್ನ ನಿಃಸ್ವಾರ್ಥ ಸ್ವಭಾವಗಳನ್ನು ಬೆಳಿಸಿಕೊಳ್ಳಬೇಕು. ಮಮಕಾರದಿಂದ ನಿನ್ನ ಆತ್ಮವು ಕುಗ್ಗಿಹೋಗುತ್ತದೆ. ಮಮಕಾರವಿಲ್ಲದಿರುವುದರಿಂದ ನಿನ್ನ ಆತ್ಮವು ಅಪಾರವಾಗಿ ವಿಸ್ತಾರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature who feeds desire fosters selfishness,
Selfishness is acquired only through hard self-effort,
Contraction of self by attachment and its infinite expansion
Through non-attachment – Marula Muniya (780)
(Translation from "Thus Sang Marula Muniya" by Sri. Narasimha Bhat)

Tuesday, June 9, 2015

ಜೇನು ಕಪ್ಪುರ ಕೇಸರಗಳು ಪಾಲಿನೊಳು (779)

ಜೇನು ಕಪ್ಪುರ ಕೇಸರಗಳು ಪಾಲಿನೊಳು |
ಲೀನ ವಿಶದಗಳಾಗಿ, ನಿರಹಮಹ ಸ್ವಾರ್ಥಂ ||
ಜ್ಞಾನಿ ಹಿತಕರನಿಹನು ಲೋಕಕ್ಕೆ ನಿಃಸ್ವಾರ್ಥ |
ಲೀನ ವಿಶದದ ಬಾಳು - ಮರುಳ ಮುನಿಯ || (೭೭೯)

(ವಿಶದಗಳ್+ಆಗಿ)(ನಿರಹಂ+ಅಹ)(ಹಿತಕರನ್+ಇಹನು)

ಜೇನುತುಪ್ಪ, ಪಚ್ಚ ಕರ್ಪೂರ ಮತ್ತು ಕೇಸರಿಗಳು ಹಾಲಿನಲ್ಲಿ ಬೆರೆತು ಕರಗಿಹೋದರೂ ಸಹ ಆ ಹಾಲನ್ನು ಆಸ್ವಾದಿಸುವವನ ನಾಲಿಗೆಗೆ ಸ್ಪಷ್ಟವಾಗಿ (ವಿಶದ) ಅವುಗಳ ಇರುವಿಕೆಯು ತಿಳಿಯುತ್ತದೆ. ಅದೇ ರೀತಿ ನಿರಹಂಕಾರ (ನಿರಹ) ಮತ್ತು ಸ್ವಾರ್ಥಗಳೂ ಸಹ, ಮನುಷ್ಯ ಜೀವಿಯಲ್ಲಿ ಅಡಗಿದ್ದರೂ ವ್ಯಕ್ತವಾಗುತ್ತಾ ಇರುತ್ತವೆ. ಜ್ಞಾನಿಯಾದರೋ ಸ್ವಾರ್ಥರಹಿತನಾಗಿ ಜಗತ್ತಿಗೇ ಒಳ್ಳೆಯದನ್ನು ಮಾಡುವವನಾಗಿರುತ್ತಾನೆ. ಅವನ ಜೀವನವು ಜಗತ್ತಿನಲ್ಲಿ ಸೇರಿಕೊಂಡು ಹೋಗಿದ್ದರೂ ಸಹ ಅವನ ಸ್ವಭಾವ ಮತ್ತು ಕಾರ್ಯಗಳು ಇತರರಿಗೆ ಸ್ಪಷ್ಟವಾಗಿ ಕಾಣಿಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Honey, camphor and saffron dissolved in milk can’t be seen
But the sweetness and fragrance can be enjoyed,
Similarly the selfishness of a wise a sage gets dissolved and his selfishness only shines
He gives help and happiness to the world – Marula Muniya (778)
(Translation from "Thus Sang Marula Muniya" by Sri. Narasimha Bhat)

Monday, June 8, 2015

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ (778)

ಕಲಬೆರಕೆ ಜೀವಗತಿಯೊಳಿತಲ್ಲದುಗಳ ಬೆರಕೆ |
ಬೆಳಕು ನೆರಳಿನ ಬೆರಕೆ ಹುಳಿಸು ಸಿಹಿ ಬೆರಕೆ ||
ತಿಳಿವು ಮಬ್ಬಿನ ಬೆರಕೆ ಕೊಳಕು ಚೊಕ್ಕಟ ಬೆರಕೆ |
ಕಲಿ ಸೈಸಲುಭಯವನು - ಮರುಳ ಮುನಿಯ || (೭೭೮)

(ಜೀವಗತಿ+ಒಳಿತು+ಅಲ್ಲದುಗಳ)(ಸೈಸಲು+ಉಭಯವನು)

ಜೀವನದ ನಡಗೆಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಬೆರೆತಿರುತ್ತವೆ. ಅದು ಬೆಳಕು ಮತ್ತು ನೆರಳು, ಹುಳಿ ಮತ್ತು ಸಿಹಿ, ತಿಳುವಳಿಕೆ ಮತ್ತು ಅಜ್ಞಾನ, ಮಲಿನ ಮತ್ತು ನೈರ್ಮಲ್ಯ, ಇವುಗಳಂತೆ ಜತೆಗೂಡಿರುತ್ತವೆ. ಈ ಎರಡೂ ಬಗೆಗಳನ್ನು ಸಹಿಸುವುದನ್ನು ಕಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The course of life is a mixture, a mixture of good and evil,
A mixture of light and shade, a mixture of sour and sweetness,
A mixture of knowledge and ignorance, a mixture of the clean and the unclean
Learn to endure both – Marula Muniya (778)
(Translation from "Thus Sang Marula Muniya" by Sri. Narasimha Bhat)