ಆವಾವ ಜನ್ಮಂಗಳಜ್ಜಮುತ್ತಜ್ಜದಿರೊ
ಆವಿರ‍್ಭವಿಪರಿಂದು ಮಗ ಮೊಮ್ಮೊಗರೆನಿಸಿ ||
ಆವಗಂ ಸಾವಿರೂಟೆಯೆ ನೀರ‍್ಗಳಿಂ ನಮ್ಮ |ಜೀವನದಿ ಬೆಳೆಯುವುದೊ - ಮರುಳ ಮುನಿಯ || (೫೧)
(ಜನ್ಮಂಗಳ+ಅಜ್ಜ)(ಆವಿರ‍್ಭವಿಪರ್+ಇಂದು)(ಸಾವಿರ+ಊಟೆಯೆ)
ಒಂದೊಂದು ಜೀವವೂ ಪ್ರಕೃತಿ ಪುರುಷ ವಿಲಾಸವೆಂಬ ಮಹಾ ಸಮುದ್ರದ ಒಂದು ಅಲೆ ಎಂದು ಹೇಳಿದೆವಲ್ಲವೇ , ಇಂದು ಮಗ ಮತ್ತು ಮೊಮ್ಮಕ್ಕಳಾಗಿ ಹುಟ್ಟುತ್ತಾರೆ (ಅವಿರ‍್ಭವಿಪರು). ಯಾವಾಗಲೂ (ಆವಗಂ) ಸಾವಿರಾರು ಚಿಲುಮೆ(ಊಟೆ)ಗಳ ನೀರುಗಳಿಂದ ನಮ್ಮ ಜೀವವೆಂಬ ನದಿ ವೃದ್ಧಿ ಹೊಂದುತ್ತದೆ. ನಾವು ಕಾಣುವ ಅಲೆ ಎಲ್ಲಿಂದಲೋ ಬೀಸಿದ ಗಾಳಿಯ ಪರಿಣಾಮವಾಗಿ ಉಂಟಾದ ತರಂಗಮಾಲೆಯ ಒಂದು ಅಲೆ. ಅದು ಸಮುದ್ರದಿಂದ ಸ್ವತಂತವಲ್ಲ. ಅದು ತಾನೇ ಉಂಟಾದದ್ದೂ ಅಲ್ಲ - ಹಿಂದಿನ ತರಂಗಗಳ ಪರಿಣಾಮ ಹೀಗೆ. ಈಗ ಕಾಣುತ್ತಿರುವ ಒಬ್ಬ ಮನುಷ್ಯನ ದೇಹ ಮನಸ್ಸುಗಳಲ್ಲಿ ಅವನ ಅಪ್ಪ ತಾತ ಮುತ್ತಜ್ಜ ಮುಂತಾದವರೆಲ್ಲ ದೇಹ ಪ್ರಕೃತಿ ಮನೋಭಾವಗಳು ಅವಿರ್ಭವಿಸಿರುತ್ತವೆ. ಒಂದು ನದಿ ಹೇಗೆ ಅನೇಕ ನದಿಗಳ ಹಳ್ಳಗಳ ನೀರನ್ನು ಸೇರಿಸಿಕೊಂಡು ಮುಂದೆ ಹರಿಯುವುದೋ ಹಾಗೆ ನಮ್ಮ ಜೀವ ನದಿಯೂ ನಮ್ಮ ಇಂದಿನ ವಂಶದವರ ಗುಣಗಳನ್ನು ಕೂಡಿಕೊಂಡೇ ಮುಂದೆ ಸಾಗುತ್ತದೆ. ನಾವು ತಿಳಿದು ಕೊಂಡಷ್ಟು ನಾವು ಸ್ವತಂತ್ರರಲ್ಲ.
(ಮರುಳ ಮುನಿಯನ ಕಗ್ಗಕ್ಕೆ ಒಂದು ವಿವರಣೆ: ಡಿ.ಆರ್.ವೆಂಕಟರಮಣನ್)
No comments:
Post a Comment