Friday, October 12, 2012

ಶ್ರಯಿಸು ನೀಂ ಸತ್ಯವನೆ ಭಾಗ್ಯವೆಂತಾದೊಡಂ (294)

ಶ್ರಯಿಸು ನೀಂ ಸತ್ಯವನೆ ಭಾಗ್ಯವೆಂತಾದೊಡಂ |
ಬಯಸು ಧರ್ಮವ ಲಾಭವೆಂತು ಪೋದೊಡೆಯುಂ ||
ನಿಯಮಪಾಲನೆಯಿಂದ ಜಯ ಲೋಕಸಂಸ್ಥಿತಿಗೆ |
ಜಯವದು ನಿಜಾತ್ಮಕ್ಕೆ - ಮರುಳ ಮುನಿಯ || (೨೯೪)

(ಭಾಗ್ಯ+ಎಂತಾದೊಡಂ)

ನಿನಗೆಷ್ಟೇ ಸೌಭಾಗ್ಯ ಮತ್ತು ಸಂಪತ್ತುಗಳು ದೊರೆಯುವಂತಿದ್ದರೂ, ಯಾವಾಗಲೂ ಸತ್ಯವನ್ನೇ ಅವಲಂಬಿಸು (ಶ್ರಯಿಸು). ನಿನ್ನ ಲಾಭಗಳೆಷ್ಟು ಹೋದರೂ ಸದಾಕಾಲವೂ ಧರ್ಮಾಚರಣೆಯನ್ನೇ ಅಪೇಕ್ಷಿಸು. ಕಟ್ಟುಪಾಡು ಮತ್ತು ಕಟ್ಟಳೆಗಳನ್ನು ಅನುಸರಿಸುವುದರಿಂದಲೇ ಪ್ರಪಂಚಕ್ಕೆ ಒಳ್ಳೆಯ ಸ್ಥಿತಿ ಉಂಟಾಗುತ್ತದೆ. ಅದು ತನ್ನ ಆತ್ಮಕ್ಕೆ ಗೆಲುವನ್ನು ತಂದುಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")


Whatever may be your fortune, take refuge only in Truth
Stick to Dharma even though you suffer losses
Pursuing rules and regulations ensures healthy upkeep of the world,
It brings success to one’s own self – Marula Muniya

(Translation from "Thus Sang Marula Muniya" by Sri. Narasimha Bhat)

Thursday, October 11, 2012

ಪ್ರೀತಿಸಲು ಬಿಡುವಿಲ್ಲ ನೀತಿಕಥೆ ಬೇಕಿಲ್ಲ (293)

ಪ್ರೀತಿಸಲು ಬಿಡುವಿಲ್ಲ ನೀತಿಕಥೆ ಬೇಕಿಲ್ಲ |
ಮಾತಂಗಡಿಯ ಕೊಳ್ಳು ಕೊಡುಬಿಡುಗಳಂತೆ ||
ಯಾತ ನಿರ್ಯಾತಂಗಳೇ ದೊಡ್ಡ ಬದುಕಂತೆ |
ಆತುರತೆ ಜಗಕಿಂದು - ಮರುಳ ಮುನಿಯ || (೨೯೩)

(ಬಿಡುವು+ಇಲ್ಲ)(ಮಾತು+ಅಂಗಡಿಯ)(ಕೊಡುಬಿಡುಗಳು+ಅಂತೆ)(ಬದುಕು+ಅಂತೆ)(ಜಗಕೆ+ಇಂದು)

ಈಗಿನ ಜನಜೀವನದ ಸ್ಥಿಥಿಯು ರೀತಿಯಾಗಿದೆ. ಅವರಿಗೆ ದಯೆ, ಕರುಣೆ ಮತ್ತು ಪ್ರೇಮಗಳನ್ನು ತೋರಿಸಲು ಸಮಯವಿಲ್ಲ. ಒಳ್ಳೆಯ ನಡತೆ ಮತ್ತು ಸದಾಚಾರಗಳನ್ನು ಹೇಳುವ ಕಥೆಗಳು ಅವರಿಗೆ ಬೇಡವಾಗಿದೆ. ಮಾತು ಅಂಗಡಿಯಲ್ಲಿ ಕೊಂಡುಕೊಳ್ಳುವ ಮತ್ತು ಕೊಟ್ಟು ತೆಗೆದುಕೊಳ್ಳುವ ವಸ್ತುವಿನಂತೆ ಆಗಿಹೋಗಿದೆ. ಹೋಗುವುದು ಮತ್ತು ಬರುವುದು, ಕೊಡುವುದು ಮತ್ತು ತೆಗೆದುಕೊಳ್ಳುವುದು, ಇವುಗಳೇ ಒಂದು ಬೃಹತ್ ಜೀವನವಾಗಿ ಇವರಿಗೆ ಕಾಣಿಸುತ್ತಿದೆ. ಜನರಿಗೆ ಯಾವುದಕ್ಕೂ ಸಮಯವಿಲ್ಲ ಮತ್ತು ಸದಾಕಾಲವೂ ಆತುರರಾಗಿಯೇ ಇರುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is no time for mutual human love and no one needs moral stories,
Mutual talk is just like business transactions in shops,
Just coming and going have become great events of life,
All people are always in a hurry – Marula Muniya (293)

(Translation from "Thus Sang Marula Muniya" by Sri. Narasimha Bhat)

Friday, October 5, 2012

ಮುಗಿಲಿಗೇರೆನುತಿಹರು ತತ್ತ್ವೋಪದೇಶಕರು (292)

ಮುಗಿಲಿಗೇರೆನುತಿಹರು ತತ್ತ್ವೋಪದೇಶಕರು |
ಬಿಗಿವುದಿಳೆಗೆಲ್ಲರನು ರೂಢಿಸಂಕೋಲೆ ||
ಗಗನ ಧರೆಯಿಂತು ದಡವಾಗೆ ಪರಿವುದು ನಡುವೆ |
ಜಗದ ಜೀವಿತದ ನದಿ - ಮರುಳ ಮುನಿಯ || (೨೯೨)

(ಮುಗಿಲಿಗೆ+ಏರ್+ಎನುತ+ಇಹರು)(ತತ್ತ್ವ+ಉಪದೇಶಕರು)(ಬಿಗಿವುದು+ಇಳೆಗೆ+ಎಲ್ಲರನು)(ದಡ+ಆಗೆ)

ಸಿದ್ಧಾಂತವನ್ನು ಬೋಧಿಸುವವರೆಲ್ಲರೂ ಆಕಾಶದೆತ್ತರಕ್ಕೇರಬೇಕೆಂದು ಹೇಳುತ್ತಾರೆ. ಆದರೆ ದಿನನಿತ್ಯದ ಅಭ್ಯಾಸಗಳ ಶೃಂಖಲೆ(ಸಂಕೋಲೆ)ಯು, ಎಲ್ಲರನ್ನೂ ಹಿಡಿದು ಜಗತ್ತಿಗೆ ಬಂಧಿಸುತ್ತದೆ. ಈ ರೀತಿಯಾಗಿ ಆಕಾಶ ಮತ್ತು ಭೂಮಿ(ಧರೆ)ಗಳು ದಡವಾಗಲು ಅವುಗಳ ಮಧ್ಯೆ ನಮ್ಮೆಲ್ಲರ ಜೀವನವೆಂಬ ನದಿಯು ಹರಿಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Great preachers exhort us to live a skyhigh ideal life
But the shackles of worldly ways bind us to the world.
The river of worldly life thus flows between the two banks
Of the earth and sky – Marula Muniya (292)
(Translation from "Thus Sang Marula Muniya" by Sri. Narasimha Bhat)

Thursday, October 4, 2012

ರಾಮಚಂದ್ರನ ಚರಿತೆ ಲೋಕಧರ್ಮಾದರ್ಶ (291)

ರಾಮಚಂದ್ರನ ಚರಿತೆ ಲೋಕಧರ್ಮಾದರ್ಶ |
ಶ್ಯಾಮಸುಂದರ ಚರಿತೆ ವಿಷಮ ಸಮಯನಮ ||
ಸೋಮೇಶ್ವರನ ರೂಪ ನಿರ್ದ್ವಂದ್ವ ಶಾಂತಿಮಯ |
ಈ ಮೂವರನು ಭಜಿಸೊ - ಮರುಳ ಮುನಿಯ || (೨೯೧)

(ಲೋಕಧರ್ಮ+ಆದರ್ಶ)

ರಾಮನ ಚರಿತ್ರೆ ಪ್ರಪಂಚಕ್ಕೆ ಆದರ್ಶವಾದದ್ದು. ಶ್ರೀಕೃಷ್ಣ ಪರಮಾತ್ಮನ ಚರಿತ್ರೆಯು ಸಂಕಟಕಾಲ (ವಿಷಮಸಮಯ)ಗಳನ್ನು ಯುಕ್ತಿಯಿಂದ ನಿಭಾಯಿಸುವುದನ್ನು ತೋರಿಸಿಕೊಡುತ್ತದೆ. ಈಶ್ವರನ ಆಕಾರವಾದರೋ ಭೇದಭಾವಗಳನ್ನು ತೊರೆದು ಹಾಕಿ ಸಮತಾಸ್ವರೂಪದಿಂದ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ನೀನು ಈ ಮೂವರನ್ನೂ ಅರಾಧಿಸು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Shri Rama’s life is a shining example of ideal human conduct in the world
Shri Krishna’s conduct is a model of human conduct in different matters in different situations
Shiva’s very appearance is an embodiment of peace and transcendence
Offer your prayer to all the three – Marula Muniya (291)
(Translation from "Thus Sang Marula Muniya" by Sri. Narasimha Bhat)

Wednesday, October 3, 2012

ಮಲವಿರದ ಮೈಯಿರದು ಕೊಳೆಯಿರದ ಮನವಿರದು (290)

ಮಲವಿರದ ಮೈಯಿರದು ಕೊಳೆಯಿರದ ಮನವಿರದು |
ಗಳಿಗೆ ಗಳಿಗೆಯ ಬೆವರೆ ಬಾಳಿಕೆಯ ಕುರುಹು ||
ಕೊಳೆವುದಚ್ಚರಿಯಲ್ಲ, ಕೊಳೆಯದಿಹುದಚ್ಚರಿಯೊ |
ಜಳಕವಾಗಿಸು ಬಾಳ್ಗೆ - ಮರುಳ ಮುನಿಯ || (೨೯೦)

(ಕೊಳೆವುದು+ಅಚ್ಚರಿಯಲ್ಲ)(ಕೊಳೆಯದೆ+ಇಹುದು+ಅಚ್ಚರಿಯೊ)(ಜಳಕ+ಆಗಿಸು)

ಹೊಲಸು ಆಗದೆ ಇರುವ ದೇಹ ಇರುವುದಿಲ್ಲ. ಕಶ್ಮಲವಿರದಿರುವ ಮನಸ್ಸೂ ಇರುವುದಿಲ್ಲ. ಪ್ರತಿ ಕ್ಷಣಕ್ಕೂ ಮೈ ಬೆವರುವುದೇ ನಾವು ಬಳುತ್ತಿದ್ದೇವೆ ಎನ್ನುವುದರ ಚಿಹ್ನೆ. ಕಶ್ಮಲವಾಗುವುದು ಆಶ್ಚರ್ಯವೇನಲ್ಲ, ಕಶ್ಮಲವಾಗದಿರುವುದು ಆಶ್ಚರ್ಯಕರವಾದ ವಿಷಯ. ಆದ್ದರಿಂದ ಈ ಕಶ್ಮಲವನ್ನು ಕಳೆಯಲು ಇರುವ ಉಪಾಯವೆಂದರೆ ನಿನ್ನ ಬಾಳನ್ನು ಸ್ನಾನ ಮಾಡಿಸಿ ಶುದ್ಧಗೊಳಿಸಿಕೊಳ್ಳುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There is no body without filth and no mind without impurities
The sweat oozing out now and then is a sign of life,
Becoming filthy is not unusual but not becoming filthy is unusual
Bathe and clean your life – Marula Muniya || (290)
(Translation from "Thus Sang Marula Muniya" by Sri. Narasimha Bhat)