Tuesday, January 31, 2012

ಇರುವಿಕೆಯೆ ಸತ್ ಅದಾಸ್ತಿಕತೆ ಸತ್ತತ್ತ್ವ(150)

ಇರುವಿಕೆಯೆ ಸತ್ ಅದಾಸ್ತಿಕತೆ ಸತ್ತತ್ತ್ವ-|
ವಿರಬೇಕದಿರ್ದು ನಮ್ಮರಿವೆಟುಕಬೇಕು ||
ಮರೆಯೊಳೇನಿಹುದೊ ಇಲ್ಲವೋ ಅರಿವರಾರ್ |
ಸ್ಛುರಿತತತ್ತ್ವವೊ ಜೀವ - ಮರುಳ ಮುನಿಯ || (೧೫೦)

(ಅದು+ಆಸ್ತಿಕತೆ)(ಸತ್+ತತ್ತ್ವ+ಇರಬೇಕು+ಅದು+ಇರ್ದು)(ನಮ್ಮ+ಅರಿವು+ಎಟುಕಬೇಕು)(ಮರೆಯೊಳ್+ಏನ್+ಇಹುದೊ)(ಅರಿವರ್+ಆರ್)

ಇರುವುದು ಶ್ರೇಷ್ಠವಾದುದು. ಇದನ್ನು ನಂಬುವವರಲ್ಲಿ ಅದು ಆಸ್ತಿಕತೆಯೆಂದೆನ್ನಿಸಿಕೊಳ್ಳುತ್ತದೆ. ಶ್ರೇಷ್ಠವಾದ ಸಾರವಿರಬೇಕು ಅದು ನಮ್ಮ ತಿಳುವಳಿಕೆಗೆ ನಿಲುಕಬೇಕು. ಆವಾಗಲೇ ಅದರ ಇರುವಿಕೆಯ ಅರಿವು ನಮಗುಂಟಾಗುತ್ತದೆ. ಬಚ್ಚಿಟ್ಟುಕೊಂಡಿರುವುದು ಇದೆಯೇ ಅಥವಾ ಇಲ್ಲವೋ ಇದನ್ನು ತಿಳಿದವರ‍್ಯಾರಾದರೂ ಇದ್ದಾರೆಯೇ? ತಿಳಿಯದು. ಆದರೆ ಇಷ್ಟಂತು ನಿಜ, ಜೀವವೆನ್ನುವುದು ಮಿಂಚಿನಂತೆ ಹೊಳೆದ ಪ್ರಕಟಿತ ಸಾರ.

Monday, January 30, 2012

ಇರುವುದೆಂದೆಂದುಮದು ದಿಟದೊಳೊಂದೇ ಒಂದು (149)

ಇರುವುದೆಂದೆಂದುಮದು ದಿಟದೊಳೊಂದೇ ಒಂದು |
ಮೆರೆವುದದು ಎತ್ತೆತ್ತಲುಂ ಲಕ್ಷ ಲಕ್ಷ ||
ಸ್ಥಿರ ಸತ್ಯ ಚರ ಮಾಯೆ ಎರಡಿರುವವೊಲು ತೋರಿ |
ಇರುವುದು ಸ್ಥಿರವೊಂದು - ಮರುಳ ಮುನಿಯ || (೧೪೯)

(ಇರುವುದು+ಎಂದೆಂದುಂ+ಅದು)(ದಿಟದೊಳ್+ಒಂದೇ)(ಎರಡು+ಇರುವ+ವೊಲು)

ಯಾವಾಗಲೂ ಇರತಕ್ಕಂತಹ ವಸ್ತು ಅದು, ಒಂದು, ನಿಜವಾಗಿ ಅದು ಒಂದೇ ಹೌದು. ಆದರೆ ಅದು ಲಕ್ಷಾಂತರ ರೂಪಗಳನ್ನು ತಾಳಿ ಮೆರೆಯುತ್ತದೆ. ಶಾಶ್ವತವಾಗಿರುವ ಸತ್ಯ ಮತ್ತು ಚಲಿಸುವ ಮಾಯೆ ನಮ್ಮ ಕಣ್ಣುಗಳಿಗೆ ಎರಡರಂತೆ ಕಂಡುಬರುತ್ತದೆ. ಶಾಶ್ವತವಾಗಿರುವುದು ಅದು ಒಂದೇ ಒಂದು ಮಾತ್ರ.

Wednesday, January 25, 2012

ನರತೆಯೇಂ ದೈವಾಂಶ ಜೀವಾಂಶ ಮಿಶ್ರಣಂ (148)

ನರತೆಯೇಂ ದೈವಾಂಶ ಜೀವಾಂಶ ಮಿಶ್ರಣಂ |
ಇರುವೆಲ್ಲದರ ಸಮಷ್ಟಿ ಜ್ವಾಲೆ ದೈವಂ ||
ಉರಿಯಿಂದ ಹೊರಬಿದ್ದು ಕರಿಯಪ್ಪ ಕಿಡಿ ಜೀವ |
ಮರಳಿ ಕರಿಯುರಿಯಕ್ಕೆ - ಮರುಳ ಮುನಿಯ || (೧೪೮)

(ದೈವ+ಅಂಶ)(ಜೀವ+ಆಂಶ)(ಇರುವ+ಎಲ್ಲದರ)(ಕರಿ+ಅಪ್ಪ)(ಕರಿ+ಉರಿ+ಅಕ್ಕೆ)

ಮನುಷ್ಯತೆ ಎನ್ನುವುದು ಏನು? ಅದು ಜೀವ ಮತ್ತು ದೈವ ಭಾಗಗಳನ್ನು ಸೇರಿಸಿ ಮಾಡಿರುವ ವಸ್ತು. ಜಗತ್ತಿನ ಎಲ್ಲದರ ಸಮಗ್ರವಾಗಿರುವ ಬೆಂಕಿಯ ಉರಿಯೇ(ಜ್ವಾಲೆ) ದೈವ. ಈ ಬೆಂಕಿಯ ಉರಿಯಿಂದ ಹೊರಗಡೆ ಬಿದ್ದ ಜೀವ ಇದ್ದಲು (ಕರಿ) ಆಗಿಹೋಗುತ್ತದೆ. ಅದೇ ಜೀವವು ಪುನಃ ಇದ್ದಲಿನಿಂದ ಬೆಂಕಿಯಜ್ವಾಲಯಾಗುತ್ತದೆ.

Tuesday, January 24, 2012

ಇಹುದೆಸೆವು(ದಪ್ಪು)ದಾಕೃತಿಯ ತಳೆವುದು ಪೆಸರ (147)

ಇಹುದೆಸೆವು(ದಪ್ಪು)ದಾಕೃತಿಯ ತಳೆವುದು ಪೆಸರ |
ವಹಿಪುದೆಂಬೈದು ಗುಣ ಜೀವಲಕ್ಷಣಗಳ್ ||
ಗ್ರಹಿಸು ಮೊದಲಿನ ಮೂರು ಬೊಮ್ಮನವು ಮಿಕ್ಕೆರಡು |
ಕುಹುಕ ಮಾಯೆಯವೆಂದು - ಮರುಳ ಮುನಿಯ || (೧೪೭)

(ಇಹುದು+ಎಸೆವುದು+ಅಪ್ಪುದು+ಆಕೃತಿಯ)(ವಹಿಪುದು+ಎಂಬ+ಐದು)(ಮಾಯೆ+ಅವು+ಎಂದು)

ಅಸ್ತಿ, ಭಾತಿ, ಪ್ರಿಯ, ನಾಮ, ರೂಪ -ಇವೈದು ಜೀವ ಲಕ್ಷಣಗಳು. ಅಸ್ತಿ-ಸತ್, ಭಾತಿ-ಚಿತ್, ಪ್ರಿಯ-ಆನಂದ ಈ ಮೂರು ಬ್ರಹ್ಮಲಕ್ಷಣಗಳು. ನಾಮರೂಪಗಳೆರಡೂ ಮಾಯಾಜನ್ಯವಾದವು.

ಇರುವುದು (ಅಸ್ತಿ) ಎಸೆವುದು (ಭಾತಿ) ಅಣ್ಬುದು (ಪ್ರಿಯ) ಆಕೃತಿಯ ತಳೆವುದು (ರೂಪ) ಪೆಸರವಹಿಪುದು (ನಾಮ) ಎಂಬ ಈ ಐದು ಗುಣಗಳು ಜೀವಿಯ ಲಕ್ಷಣಗಳಾಗಿವೆ. ಇವುಗಳಲ್ಲಿ ಅಸ್ತಿ, ಭಾತಿ ಮತ್ತು ಪ್ರಿಯ ಎಂಬ ಮೂರು ಗುರುತು ಮತ್ತು ಸ್ವಭಾವಗಳು ಪರಮಾತ್ಮನಿಗೆ ಸಂಬಂಧಿಸಿವೆ. ಉಳಿದ ಎರಡು (ನಾಮ ಮತ್ತು ರೂಪ) ಇಂದ್ರಜಾಲ ಮತ್ತು ಭ್ರಮೆಗಳೆಂದು ತಿಳಿ.

Monday, January 23, 2012

ಸಾಸಿರ ಮೊಗಂಗಳಿಂ ಸಿಹಿಯುಣುತ ಕಹಿಯುಣುತ (146)

ಸಾಸಿರ ಮೊಗಂಗಳಿಂ ಸಿಹಿಯುಣುತ ಕಹಿಯುಣುತ |
ಸಾಸಿರ ಮೊಗಂಗಳಿಂದಳುತ ನಗುನಗುತ ||
ಸಾಸಿರದೊಡಲುಗಳಿಂ ಪಡುತ ಪಡಿಸುತ್ತಲಿಹ |
ಸಾಸಿರದೊಳೊರ್ವನಾರ್ ? - ಮರುಳ ಮುನಿಯ || (೧೪೬)

(ಮೊಗಂಗಳಿಂದ+ಅಳುತ)(ಸಾಸಿರದ+ಒಡಲುಗಳಿಂ)(ಪಡಿಸುತ್ತಲ್+ಇಹ)(ಸಾಸಿರದೊಳ್+ಒರ್ವನ್+ಆರ್)

ಸಾವಿರಾರು ಮುಖಗಳಿಂದ ಜೀವನದ ಸಿಹಿ ಮತ್ತು ಕಹಿಗಳನ್ನು ಅನುಭವಿಸುತ್ತಾ, ಸಹಸ್ರಾರು ಮುಖಗಳಿಂದ ದುಃಖಿಸುತ್ತಾ ಮತ್ತು ಸುಖಿಸುತ್ತಾ, ಸಾವಿರಾರು ದೇಹ(ಒಡಲು)ಗಳಿಂದ ತನಗೆ ಬಂದ ಪಾಡುಗಳನ್ನು ಅನುಭವಿಸುತ್ತ ಮತ್ತು ಇತರರನ್ನು ಪಾಡು ಪಡಿಸುತ್ತಲಿರುವ ಸಾವಿರಾರುಗಳಲ್ಲಿ ಇರುವ ಒಬ್ಬನೇ ಒಬ್ಬನು ಯಾರು ?

Friday, January 20, 2012

ಕೋಡೆರಡು ಚಂದ್ರಮಗೆ ನಡುವೆ ಕಪ್ಪಿನ ಕಣಿವೆ (145)

ಕೋಡೆರಡು ಚಂದ್ರಮಗೆ ನಡುವೆ ಕಪ್ಪಿನ ಕಣಿವೆ |
ನೋಡು ಹುಣ್ಣಿಮೆಯಂದು ತುಂಬಿಹುದು ಬಿಂಬ ||
ಮೋಡವನು ತನಗೆ ತಾಂ ಮುಸುಕಿಕೊಂಡಾತ್ಮ ತಾ| |
ನಾಡುತಿಹುದೆರಡೆನಿಸಿ - ಮರುಳ ಮುನಿಯ || (೧೪೫)

(ಕೋಡು+ಎರಡು)(ಮುಸುಕಿಕೊಂಡು+ಆತ್ಮ)(ತಾನ್+ಆಡುತ+ಇಹುದು+ಎರಡು+ಎನಿಸಿ)

ಎರಡೂ ಅರ್ಧ ಚಂದ್ರಗಳ ಮಧ್ಯ ಒಂದು ಅಮಾವಾಸ್ಯೆ ಬರುತ್ತದೆ. ಹುಣ್ಣಿಮೆಯ ರಾತ್ರಿ ನೀನು ಪೂರ್ಣಚಂದ್ರನನ್ನು ನೋಡಬಹುದು. ಇದೇ ರಿತಿ ಮೋಡವನ್ನು ತನಗೆ ತಾನೇ ಕವಿಸಿಕೊಂಡು ಆತ್ಮವು ಎರಡೆಂಬಂತೆ ಆಡುತ್ತದೆ.

Thursday, January 19, 2012

ಇಹನೊ ಇಲ್ಲವೊ ದೇವರಿರ‍್ದೊಡೇನಿರದೊಡೇಂ (144)

ಇಹನೊ ಇಲ್ಲವೊ ದೇವರಿರ‍್ದೊಡೇನಿರದೊಡೇಂ |
ಅಹಮೆಂಬುದೊಂದು ನಿನ್ನೊಳೆ ನುಡಿವುದಲ್ತೆ ||
ಇಹದಿ ನಾನಾನೆನ್ನುವೆಲ್ಲ ಚೈತನ್ಯ ತಾಂ |
ಮಹದಾದಿ ದೈವವೆಲೊ - ಮರುಳ ಮುನಿಯ || (೧೪೪)

(ದೇವರು+ಇರ‍್ದೊಡೆ+ಏಂ+ಇರದೊಡೆ+ಏಂ)(ಅಹಂ+ಎಂಬುದು+ಒಂದು)(ನಿನ್ನ+ಒಳೆ)(ನುಡಿವುದು+ಅಲ್ತೆ)(ನಾನ್+ನಾನ್+ಎನ್ನುವ+ಎಲ್ಲ)(ಮಹತ್+ಆದಿ)(ದೈವ+ಎಲೊ)

ದೇವರಿದ್ದಾನೆಯೋ ಇಲ್ಲವೋ ಅವನಿದ್ದರೇನಂತೆ? ಅಥವಾ ಇಲ್ಲದಿದ್ದರೇನಂತೆ? ನಾನು (ಅಹಂ) ಎನ್ನುವ ಭಾವನೆ ನಿನ್ನೊಳಗೆ ನುಡಿಯುತ್ತಿದೆಯಲ್ಲವೆ? ಈ ಜಗತ್ತಿನಲ್ಲಿ ನಾನು, ನಾನು ಎನ್ನುವ ಚೇತನವೇ ಹಿರಿಯ ಮತ್ತು ದೊಡ್ಡದಾದ ಮತ್ತು ಮೂಲಕರ್ತೃವಾದ (ಮಹತ್+ಆದಿ) ದೈವ ಕಣಯ್ಯ.

Wednesday, January 18, 2012

ಸ್ವಚ್ಛಚೈತನ್ಯಸಾಗರದ ವೀಚಿಯೊ ನೀನು (143)

ಸ್ವಚ್ಛಚೈತನ್ಯಸಾಗರದ ವೀಚಿಯೊ ನೀನು |
ಸಚ್ಚಿದಾನಂದಸರಿದೂರ್ಮಿ ಕಣ ನೀನು ||
ಅಚ್ಛೇದ್ಯ ದಿವ್ಯತರು ಸುಮಪರಾಗವೊ ನೀನು |
ಅಚ್ಯುತಾಮೃತಬಿಂದು - ಮರುಳ ಮುನಿಯ || (೧೪೩)

(ಸತ್+ಚಿತ್+ಆನಂದಸರಿತ್+ಊರ್ಮಿ)(ಅಚ್ಯುತ+ಅಮೃತಬಿಂದು)

ನೀನು ಶುದ್ಧವಾದ ಚೇತನ ಸಮುದ್ರದ ಒಂದು ಅಲೆ (ವೀಚಿ) ಮತ್ತು ಆ ಪರಮಾತ್ಮನೆಂಬ ಹೊಳೆಯ (ಸರಿತ್) ಒಂದು ಅಲೆ(ಊರ್ಮಿ)ಯ ಸೂಕ್ಷ್ಮ ಅಂಶ. ಕತ್ತರಿಸಲಾಗದ (ಅಚ್ಛೇದ್ಯ) ಶ್ರೇಷ್ಠ (ದಿವ್ಯ) ಗಿಡ(ತರು)ದ ಹೂವಿ(ಸುಮ)ನ ಪರಾಗವೂ ನೀನೆ ಮತ್ತು ನಷ್ಟವಾಗದಿರುವಂತಹ (ಅಚ್ಯುತ) ಅಮೃತದ ಒಂದು ಹನಿ (ಬಿಂದು).

Tuesday, January 17, 2012

ಪರವಸ್ತುವೊಂದು ತಾನೆರಡಾಗಿ ಲೀಲೆಯಲಿ (142)

ಪರವಸ್ತುವೊಂದು ತಾನೆರಡಾಗಿ ಲೀಲೆಯಲಿ |
ಪುರುಷನೆಂದುಂ ಪ್ರಕೃತಿಯೆಂದುಮನ್ಯೋನ್ಯಂ ||
ಅರಸುತ್ತೆ ಮರಸುತ್ತೆ ಸೇರುತಗಲುತಮಂತು |
ಸರಸವಾಡುತ್ತಿಹುದೊ - ಮರುಳ ಮುನಿಯ || (೧೪೨)

(ತಾನ್+ಎರಡು+ಆಗಿ)(ಪ್ರಕೃತಿಯೆಂದುಂ+ಅನ್ಯೋನ್ಯಂ)(ಸೇರುತ+ಅಗಲುತಂ+ಅಂತು)(ಸರಸ+ಆಡುತ್ತಿಹುದೊ)

ಶ್ರೇಷ್ಠವಾದ ಒಂದು ಪದಾರ್ಥವು, ಅದೇ ಎರಡಾಗಿ ಜಗತ್ತಿನ ಕ್ರೀಡೆಗಳಲ್ಲಿ ಪುರುಷ ಮತ್ತು ಪ್ರಕೃತಿಗಳೆಂಬ ಹೆಸರುಗಳಿಂದ ಪರಸ್ಪರ ಸ್ನೇಹದಿಂದಿರುತ್ತದೆ. ಅದು ಹುಡುಕುತ್ತಾ (ಅರಸುತ್ತ), ಮರೆಯಾಗುತ್ತಾ, ಕೂಡುತ್ತಾ ಮತ್ತು ಬೇರೆ ಬೇರೆಯಾಗುತ್ತಾ ಚೆಲ್ಲಾಟವಾಡುತ್ತದೆ.

Friday, January 13, 2012

ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು (141)

ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು? |
ಜೀವವೊಂದಿನ್ನೊಂದನರಿತು ಗುರುತಿಸುವಾ ||
ಭಾವನಾ ಸಂಬಂಧ ಶಕ್ತಿ ಸೂತ್ರದ ಮುಂದೆ |
ಆವಸಾಕ್ಷ್ಯವದೇಕೆ ? - ಮರುಳ ಮುನಿಯ || (೧೪೧)

(ಜೀವವು+ಒಂದು+ಇನ್ನೊಂದನು+ಅರಿತು)(ಆವಸಾಕ್ಷ್ಯ+ಅದು+ಏಕೆ)

ಕೋಟ್ಯಾಂತರ ಜೀವಿಗಳ ಸಮುದಾಯವನ್ನು (ಸಮಷ್ಟಿ) ಬಿಟ್ಟು ದೇವರಿರುವನೇನು ? ಒಂದು ಜೀವವು ಮತ್ತೊಂದು ಜೀವವನ್ನು ಅರ್ಥಮಾಡಿಕೊಂಡು ಗುರುತಿಸುವ ಆ ಭಾವನೆಗಳ ಬಾಂಧವ್ಯ ಬಲದ ಮುಂದೆ, ದೇವರ ಇರುವಿಕೆಗೆ ಇನ್ಯಾವ ಸಾಕ್ಷ್ಯಗಳೂ ಬೇಕಿಲ್ಲ.

Wednesday, January 11, 2012

ನಾನು ನೀನವನು ತಾನೆನುತ ಗುರುತಿಸಿಕೊಳುವ (140)

ನಾನು ನೀನವನು ತಾನೆನುತ ಗುರುತಿಸಿಕೊಳುವ |
ಭಾನಶಕ್ತಿ ಸಮಾನವೆಲ್ಲ ಜೀವರಿಗಂ ||
ನಾನಾ ಪ್ರಪಂಚಗಳನಂತೊಂದುಗೂಡಿಪಾ |
ಜ್ಞಾನಸೂತ್ರವೆ ಬೊಮ್ಮ - ಮರುಳ ಮುನಿಯ || (೧೪೦)

(ನೀನ್+ಅವನು)(ತಾನ್+ಎನುತ)(ಸಮಾನ+ಎಲ್ಲ)(ಪ್ರಪಂಚಗಳನ್+ಅಂತು+ಒಂದುಗೂಡಿಪ+ಆ)

ನಾನು, ನೀನು, ಅವನು ಮತ್ತು ತಾನು ಎಂದು ಗುರುತಿಸಿಕೊಂಡು ಕಾಣಿಸಿಕೊಳ್ಳುವ ಸಾಮರ್ಥ್ಯ (ಭಾನಶಕ್ತಿ) ಎಲ್ಲ ಜೀವಗಳಿಗೂ ಸಮಾನವಾಗಿದೆ. ಅನೇಕ ಪ್ರಪಂಚಗಳನ್ನು ಹೀಗೆ ಒಂದುಗೂಡಿಸುವ ತಿಳುವಳಿಕೆಯ ಸೂತ್ರವೇ ಆ ಪರಬ್ರಹ್ಮ.

Tuesday, January 10, 2012

ಹುಟ್ಟದಿರುವನು ನೀನು ಸಾಯದಿರುವನು ನೀನು (139)

ಹುಟ್ಟದಿರುವನು ನೀನು ಸಾಯದಿರುವನು ನೀನು |
ಹುಟ್ಟುಸಾವುಗಳಾಟವಾಡುವನು ನೀನು ||
ಕೆಟ್ಟುದೊಳಿತುಗಳೆರಡುಮಂಟದಿರ‍್ಪನು ನೀನು |
ಒಟ್ಟು ವಿಶ್ವವೆ ನೀನು - ಮರುಳ ಮುನಿಯ || (೧೩೯)

(ಹುಟ್ಟುಸಾವುಗಳ+ಆಟ+ಆಡುವನು)(ಕೆಟ್ಟುದು+ಒಳಿತುಗಳ್+ಎರಡುಂ+ಅಂಟದೆ+ಇರ‍್ಪನು)

ನೀನು ಹುಟ್ಟದೆ ಇರುವವನು. ನೀನು ಸಾಯುವುದೂ ಇಲ್ಲ. ಹುಟ್ಟು ಮತ್ತು ಸಾವುಗಳ ಆಟವನ್ನು ಮಾತ್ರ ನೀನು ಆಡುತ್ತಿರುವೆ. ಕೆಟ್ಟದು ಮತ್ತು ಒಳ್ಳೆಯದು, ಇವೆರಡಕ್ಕೂ ಅಂಟಿಕೊಳ್ಳದವನು ನೀನು. ಸಕಲ ಜಗತ್ತೇ ನೀನು.

Monday, January 9, 2012

ಇರುವುದೆಲ್ಲಕು ಮೊದಲು ಬೀಜವದು ಮೂಲವದು (138)

ಇರುವುದೆಲ್ಲಕು ಮೊದಲು ಬೀಜವದು ಮೂಲವದು |
ಬರುವುದದರಿಂದೆಲ್ಲ ಜಗ ಜೀವ ಗಾಳಿ ||
ನೆರೆದು ಧರಿಸಿರುವುದದು ಪೊರೆವುದದು ಕರಗಿಪುದು |
ಮೆರೆವುದದು ನಿನ್ನೊಳಗೆ - ಮರುಳ ಮುನಿಯ || (೧೩೮)

(ಇರುವುದು+ಎಲ್ಲಕು)(ಬರುವುದು+ಅದರಿಂದ+ಎಲ್ಲ)(ಧರಿಸಿ+ಇರುವುದು+ಅದು)(ಮೆರೆವುದು+ಅದು)

ಎಲ್ಲದಕ್ಕೂ ಮೊತ್ತಮೊದಲನೆಯದಾಗಿ ಇರುವುದೇ ಅದು. ಅದೇ ಬಿತ್ತ ಮತ್ತು ಹುಟ್ಟು. ಅದರಿಂದಲೇ ಪ್ರಪಂಚ, ಗಾಳಿ ಮತ್ತು ಜೀವಗಳು ಬರುತ್ತವೆ. ಅದು ಉಕ್ಕಿ(ನೆರೆ) ಎಲ್ಲವನ್ನೂ ಹೊತ್ತಿವೆ, ಕಾಪಾಡುತ್ತದೆ ಮತ್ತು ತನ್ನಲ್ಲೇ ಒಂದಾಗಿಸಿ ಕರಗಿಸಿಕೊಳ್ಳುತ್ತದೆ. ಅದು ನಿನ್ನೊಳಗೆ ಮೆರೆಯುತ್ತದೆ.

Friday, January 6, 2012

ಪ್ರೇಮ ಪರಿಚರ್ಯೆಗಳನುಳಿದ ಪಶುಕಾಮುಕತೆ (137)

ಪ್ರೇಮ ಪರಿಚರ್ಯೆಗಳನುಳಿದ ಪಶುಕಾಮುಕತೆ |
ಕಾಮನೀಯಕ ತಾರತಮ್ಯ ಮರೆತಾಶೆ ||
ಭ್ರಾಮಗತಿಯೆ ಪ್ರಗತಿಯೆಂಬ ಮೂರ್ಖಶ್ರದ್ಧೆ |
ಪಾಮರ ವಿಜೃಂಭವಿವು - ಮರುಳ ಮುನಿಯ || (೧೩೭)

(ಪರಿಚರ್ಯೆಗಳನ್+ಉಳಿದ)(ವಿಜೃಂಭ+ಇವು)

ಅನುರಾಗ ಮತ್ತು ಶುಶ್ರೂಷೆಗಳಿಂದ ಹೊರತಾದ ಕೇವಲ ಮೃಗೀಯವಾದ ಭೋಗಾಪೇಕ್ಷೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಮರೆತು ರಮಣೀಯತೆಯನ್ನು ಆಶಿಸುವುದು. ದೋಷಪೂರ್ಣ ವರ್ತನೆಯೇ(ಭ್ರಾಮಗತಿಯೇ) ಏಳಿಗೆಯೆಂಬ ಮೂಢ ವಿಶ್ವಾಸ. ತಿಳಿವಳಿಕೆ ಇಲ್ಲದವರ (ಪಾಮರ) ಮೆರೆದಾಟ(ವಿಜೃಂಭ)ಗಳ ರೀತಿ ಇದು.

Thursday, January 5, 2012

ಸಂಸಾರಿ ಬಾಹ್ಯದೊಳಗಾಂತರ್ಯದಿ ವಿರಾಗಿ (136)

ಸಂಸಾರಿ ಬಾಹ್ಯದೊಳಗಾಂತರ್ಯದಿ ವಿರಾಗಿ |
ಹಂಸೆ ಜೀವನದ ಪಾಲ್ನೀರ ಭೇದದಲಿ ||
ಪಾಂಸು ಮಾತ್ರದಿ ಸಕಲ ವಿಶ್ವಸಂದರ್ಶಿ(ಸುವ) |
ಅಂಶದಲಿ ಪೂರ್ಣದೃಶಿ - ಮರುಳ ಮುನಿಯ || (೧೩೬)

(ಬಾಹ್ಯದೊಳಗೆ+ಆಂತರ್ಯದಿ)

’ಹಂಸೆ ಜೀವನದ ಪಾಲ್ನೀರಭೇದದಲಿ’ ಹಾಲು ನೀರನ್ನು ಬೆರೆಸಿಟ್ಟರೆ ಹಂಸಪಕ್ಷಿ ಹಾಲನ್ನು ಕುಡಿದು ನೀರನ್ನು ಬೇರ್ಪಡಿಸಿ ಬಿಟ್ಟಿರುವುದಂತೆ. ಇದು ಹಂಸಕ್ಷೀರ ನ್ಯಾಯ.

ಅವನು ಹೊರಗಿನ ಪ್ರಪಂಚಕ್ಕೆ ಗೃಹಸ್ಥನಾದರೂ ಒಳಮನಸ್ಸಿಗೆ ಅವನು ವಿರಕ್ತ. ಹಾಲು ಮತ್ತು ನೀರನ್ನು ಬೆರೆಸಿ ಕೊಟ್ಟರೆ, ಒಂದು ಹಂಸಪಕ್ಷಿಯು ಹೇಗೆ ಹಾಲನ್ನು ಮಾತ್ರ ಬೇರ್ಪಡಿಸಿ ಕುಡಿಯುತ್ತದೋ, (ಹಂಸಕ್ಷೀರನ್ಯಾಯದಂತೆ) ಅವನು ಆ ರೀತಿ ಇರುತ್ತಾನೆ. ಒಂದು ಧೂಳು ಕಣ(ಪಾಂಸು)ದಿಂದ ಅವನು ಸಂಪೂರ್ಣ ಪ್ರಪಂಚವನ್ನು ಅರಿಯುತ್ತಾನೆ. ಒಂದು ಸಣ್ಣ ಭಾಗದಿಂದ ಪೂರ್ಣತೆಯನ್ನು ನೋಡುತ್ತಾನೆ (ಪೂರ್ಣದೃಶಿ).

Wednesday, January 4, 2012

ಸೃಷ್ಟಿಚರಿತೆಯನಾದಿ ಜೀವಯಾತ್ರೆಯನಾದಿ (135)

ಸೃಷ್ಟಿಚರಿತೆಯನಾದಿ ಜೀವಯಾತ್ರೆಯನಾದಿ |
ಶಿಷ್ಟಕರ್ಮದ ಜಟಿಲ ಸೂತ್ರಗಳನಾದಿ ||
ನಷ್ಟವಹುವೀಯನಾದಿಭ್ರಾಂತಿ ಮೂಲಗಳು |
ದೃಷ್ಟಾತ್ಮತತ್ತ್ವಂಗೆ - ಮರುಳ ಮುನಿಯ || (೧೩೫)

(ಸೃಷ್ಟಿಚರಿತೆ+ಅನಾದಿ)(ಜೀವಯಾತ್ರೆ+ಅನಾದಿ)(ಸೂತ್ರಗಳ್+ಅನಾದಿ)
(ನಷ್ಟ+ಅಹುವು+ಈ+ಅನಾದಿಭ್ರಾಂತಿ)(ದೃಷ್ಟ+ಆತ್ಮ+ತತ್ತ್ವಂಗೆ)

ಜಗತ್ತಿನ ನಿರ್ಮಾಣದ ಇತಿಹಾಸಕ್ಕೆ ಮೊದಲಿಲ್ಲ ಮತ್ತು ಅದು ಬಹಳ ಪುರಾತನವಾದುದು. ಜೀವಿಗಳ ಪ್ರಯಾಣವೂ ಅಷ್ಟೇ. ಒಳ್ಳೆಯ (ಶಿಷ್ಟ) ಕರ್ಮಗಳ ಕಠಿಣ (ಜಟಿಲ) ನಿಯಮಗಳೂ ಪುರಾತನವಾದುದು ಮತ್ತು ಮೊದಲಿಲ್ಲದುದು. ಆತ್ಮದರ್ಶನವನ್ನು ಪಡೆದ ಜ್ಞಾನಿಗೆ (ದೃಷ್ಟಾತ್ಮತತ್ತ್ವಂಗೆ) ಈ ಪುರಾತನದ ಮತ್ತು ಮೊದಲಿಲ್ಲದ ಮೂಲಗಳ ತಪ್ಪುಗ್ರಹಿಕೆಗಳುಂಟಾಗುವುದಿಲ್ಲ.

Tuesday, January 3, 2012

ಮೋಹಪಾಶಗಳೆಳೆಯೆ ಮಮತೆಯಂಕುಶವಿರಿಯೆ (134)

ಮೋಹಪಾಶಗಳೆಳೆಯೆ ಮಮತೆಯಂಕುಶವಿರಿಯೆ |
ಆಹುತಂ ತಾನಹಂ ಭವಶಿಖೆಗೆ ಮೂಢಂ ||
ಸೋಽಹಮಭಿಮತದ ಸರ್ವಾತ್ಮತ್ವದಿಂ ಜಗಕೆ |
ಸಾಹ್ಯವೀವಂ ಜ್ಞಾನಿ - ಮರುಳ ಮುನಿಯ || (೧೩೪)

(ಮೋಹಪಾಶಗಳ್+ಎಳೆಯೆ)(ಮಮತೆ+ಅಂಕುಶ+ಇರಿಯೆ)(ತಾನ್+ಅಹಂ)(ಸೋಽಹಂ+ಅಭಿಮತದ)(ಸಾಹ್ಯ+ಈವಂ)

ಮೋಹವೆಂಬ ಬಂಧನಗಳು ಮನುಷ್ಯನನ್ನು ಎಳೆಯಲು ಮಮತೆಯೆಂಬ ಅಂಕುಶವು ಅವನನ್ನು ತಿವಿಯಲು, ಸಂಸಾರ (ಭವ)ವೆಂಬ ಬೆಂಕಿ(ಶಿಖ)ಗೆ ಮೂರ್ಖನು ತಾನಾಗಿ ತಾನು ಬಲಿ(ಆಹುತಂ)ಯಾಗುತ್ತಾನೆ. ತಾನೇ ಪರಮಾತ್ಮ(ಸೋಽಹಂ)ನೆಂಬ ಅಭಿಪ್ರಾಯ (ಅಭಿಮತ)ದಿಂದ ಕೂಡಿದ ಮತ್ತು ಪ್ರಪಂಚದ ಎಲ್ಲ ಆತ್ಮಗಳೂ ಒಂದೇ ಎಂಬ ಭಾವನೆಯಿಂದ ಬುದ್ಧಿವಂತನು ಪ್ರಪಂಚಕ್ಕೆ ಸಹಾಯ(ಸಾಹ್ಯ)ಕನಾಗುತ್ತಾನೆ.