Wednesday, December 31, 2014

ಗಿಡದೊಳಿಹ ಹೂವ ಸತಿಮುಡಿಯಲೆಳಸುವನೊರ‍್ವ (713)

ಗಿಡದೊಳಿಹ ಹೂವ ಸತಿಮುಡಿಯಲೆಳಸುವನೊರ‍್ವ |
ಗುಡಿಗದನು ಕೊಯ್ದೊಯ್ಯಲೆಳಸುವವನೊರ‍್ವ ||
ಬಿಡುವನಿನ್ನೊರ‍್ವನದನಿರುವೆಡೆಯೆ ಕಂಡೊಲಿದು |
ಬಿಡಿಸಿ ನೀಂ ಮೂಸುವೆಯ? - ಮರುಳ ಮುನಿಯ || (೭೧೩)

(ಗಿಡದೊಳ್+ಇಹ)(ಸತಿಮುಡಿಯಲ್+ಎಳಸುವನ್+ಒರ‍್ವ)(ಕೊಯ್ದು+ಒಯ್ಯಲ್+ಎಳಸುವವನ್+ಒರ‍್ವ)(ಬಿಡುವನ್+ಇನ್ನೊರ‍್ವನ್+ಅದನ್+ಇರುವ+ಎಡೆಯೆ)(ಕಂಡು+ಒಲಿದು)

ಗಿಡದಲ್ಲಿ ಬಿಟ್ಟಿರುವ ಹೂವನ್ನು ನೋಡಿ, ಅದು ತನ್ನ ಮಡದಿಯ ತುರುಬಿನಲ್ಲಿ ಸೊಗಸಾಗಿ ಕಾಣುತ್ತದೆಂದು ಅಪೇಕ್ಷಿಸುವವನೊಬ್ಬ. ಇನ್ನೊಬ್ಬನಾದರೋ ಆ ಹೂವನ್ನು ಕೊಯ್ದು ದೇವಸ್ಥಾನದಲ್ಲಿರುವ ದೇವರಿಗೆ ಅರ್ಪಿಸಬೇಕೆಂದು ಬಯಸುತ್ತಾನೆ. ಮತ್ತೊಬ್ಬನು ಆ ಹೂವು ಅದೇ ಗಿಡದಲ್ಲಿ ನಗುತ್ತಿದ್ದರೆ ಚೆನ್ನೆಂದು ಯೋಚಿಸುತ್ತಾನೆ. ಅವರೆಲ್ಲರಿಗೆಂತ ಬೇರೆಯಾಗಿ ನೀನು ಆ ಹೂವನ್ನು ಗಿಡದಿಂದ ಬಿಡಿಸಿ ಮೂಸಿ ನೋಡುವೆಯೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One wishes to decorate his wife’s braid with the flower in the plant
Another person desires to take and offer it to the deity in the temple
Someone else loves to see the flower smiling in the plant itself.
Would you pull out the petals and smell it? – Marula Muniya (713)
(Translation from "Thus Sang Marula Muniya" by Sri. Narasimha Bhat)

Tuesday, December 30, 2014

ಜಲಧಿಯಲೆವೊಲು ಬಾಳ್ವೆ ನಭದವೊಲು ಪರತತ್ತ್ವ (712)

ಜಲಧಿಯಲೆವೊಲು ಬಾಳ್ವೆ ನಭದವೊಲು ಪರತತ್ತ್ವ |
ಹಲವು ಹರಿಯದವು ನೀಂ ಕೇಳ್ವ ಕೇಳ್ಕೆಗಳು ||
ಸುಲಭದಿಂ ನಿನಗುತ್ತರವನೊಂದು ಸಂಗ್ರಹದ |
ಗುಳಿಗೆಯಲಿ ಕೊಡಲಹುದೆ? - ಮರುಳ ಮುನಿಯ || (೭೧೨)

(ಜಲಧಿ+ಅಲೆವೊಲು)(ನಿನಗೆ+ಉತ್ತರವನ್+ಒಂದು)(ಕೊಡಲ್+ಅಹುದೆ)

ಸಮುದ್ರ(ಜಲಧಿ)ದ ಅಲೆಯಂತೆ ನಮ್ಮ ಜೀವನವಾದರೆ, ಆಕಾಶ(ನಭ)ದಂತೆ ಎಟುಕದ ಎತ್ತರದಲ್ಲಿ ಪರಮಾತ್ಮನ ತತ್ತ್ವವು ಅಡಗಿಕೊಂಡಿದೆ. ನೀನು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಪರಿಹಾರ ದೊರೆಯಲು ಸಾಧ್ಯವಿಲ್ಲ. ಹೀಗಿರುವಾಗ ನಿನ್ನ ಸಮಸ್ಯೆಗಳಿಗೆ ಸಂಕ್ಷಿಪ್ತವಾಗಿ ಪರಿಹಾರವನ್ನು ಒಂದು ಗುಳಿಗೆಯ ರೂಪದಲ್ಲಿ ಕೊಡಲಾಗುತ್ತದೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our life is a sea wave and the supreme truth is like the endless sky
Many of your questions can never be answered.
Is it easily possible to give you a brief answer
In the form of a capsule? – Marula Muniya (712)
(Translation from "Thus Sang Marula Muniya" by Sri. Narasimha Bhat)

Wednesday, December 24, 2014

ಅತಿಶಯದ ಮನ್ನಣೆಯ ಜಗದಿ ನೀಂ ಪಡೆಯುವಡೆ (711)

ಅತಿಶಯದ ಮನ್ನಣೆಯ ಜಗದಿ ನೀಂ ಪಡೆಯುವಡೆ |
ಮೃತನಾಗು! ನಿನಗಂದು ಮಿತ್ರಬಂಧುಗಳು ||
ಇತರರ‍್ಗೆ ತೋರದಾದರವನೆರೆವರು ಹೆಣಕೆ |
ಕೃತಕೃತ್ಯವಲ್ತೆ ಶವ? - ಮರುಳ ಮುನಿಯ || (೭೧೧)

(ತೋರದ+ಆದರವನ್+ಎರೆವರು)

ಈ ಜಗತ್ತಿನಲ್ಲಿ ಹೆಚ್ಚಾದ ಗೌರವವನು ನೀನು ಪಡೆಯಬೇಕೆಂದಿದ್ದರೆ, ಸಾವನಪ್ಪಿಬಿಡು. ಆವಾಗ ನಿನ್ನ ಸ್ನೇಹಿತರು ಮತ್ತು ನೆಂಟರಿಷ್ಟರು ಬೇರೆ ಯಾರಿಗೂ ತೋರಿಸದಂತಹ ಗೌರವ(ಅದರ)ವನ್ನು ನಿನ್ನ ಹೆಣಕ್ಕೆ ತೋರಿಸುತ್ತಾರೆ. ಹೆಣವೇ ಮಾಡಬೇಕಾದುದನ್ನು ಮಾಡಿ ಮುಗಿಸಿ ಕೃತಾರ್ಥವಾಯಿತಲ್ಲವೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You had better die if you clamour for honour in this world,
Your friends and relatives then will shower ample honour on you corpse
Which they don’t show to those who are alive.
Is not the dead body blessed? – Marula Muniya (711)
(Translation from "Thus Sang Marula Muniya" by Sri. Narasimha Bhat)

Tuesday, December 23, 2014

ಲೀನಮಾಗಿಹುದಂತು ವಿಶದಮೀ ಕನ್ನಡಂ (710)

ಲೀನಮಾಗಿಹುದಂತು ವಿಶದಮೀ ಕನ್ನಡಂ |
ಕ್ಷೋಣಿಯೊಳಗೆಂದನಾ ಸುಕವಿ ನೃಪತುಂಗಂ ||
ನೀನುಮಂತು ವಿಲೀನ ವಿಶ್ವಜನಜೀವನದಿ |
ದಾನದಿಂದಲೆ ವಿಶದ - ಮರುಳ ಮುನಿಯ || (೭೧೦)

(ಲೀನಂ+ಆಗಿ+ಇಹುದು+ಅಂತು)(ವಿಶದಂ+ಈ)(ಕ್ಷೋಣಿ+ಒಳಗೆ+ಎಂದನ್+ಆ)(ನೀನುಂ+ಅಂತು)

ಈ ಜಗತ್ತಿನ ಕೋಟಿ ಕೋಟಿ ಕನ್ನಡಿಗರಲ್ಲಿ ಕನ್ನಡವು ಮ್ರೆಯುತ್ತಿದೆ. ಈ ರೀತಿ ಕನ್ನಡ ಭಾಷೆಯು ಪ್ರಪಂಚ(ಕ್ಷೋಣಿ)ದಲ್ಲಿ ಸೇರಿಕೊಂಡು ಹೋಗಿದ್ದರೂ, ಸ್ಪಷ್ಟ(ವಿಶದ)ವಾಗಿ ಗೋಚರಿಸುತ್ತದೆ ಎಂದು ಶ್ರೇಷ್ಠ ಕವಿ ನೃಪತುಂಗನು ಹೇಳಿರುವನು. ಹಾಗೆಯೇ ಜಗತ್ತಿನ ಕೋಟ್ಯಾಂತರ ಜನರಲ್ಲಿ ನೀನು ಲೀನನಾಗಿದ್ದು ದಾನದಿಂದ ಮತ್ತು ಕೊಡುಗೆಗಳಿಂದ ಅವ್ಯಕ್ತನಾಗಿ ಕಾಣಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Poet Nrumatunga sang that Kannada is very well-known
And it lives merged all over the world.
You too should likewise be one with the life of the whole humanity
And become noteworthy by charity – Marula Muniya (710)
(Translation from "Thus Sang Marula Muniya" by Sri. Narasimha Bhat)

Monday, December 22, 2014

ಕುಸುಮ ಕಣ್‍ಮೂಗಿಂಗೆ ವಿಶದ ಕಸದೊಳು ಲೀನ (709)

ಕುಸುಮ ಕಣ್‍ಮೂಗಿಂಗೆ ವಿಶದ ಕಸದೊಳು ಲೀನ |
ವಿಶದ ರಸನೆಗೆ ಬೆಲ್ಲ ಕಬ್ಬಿನಲಿ ಲೀನ ||
ಕುಶಲಗುಣದಿಂ ವಿಶದ ಜಗದ ಜೀವದಿ ಲೀನ |
ಹೆಸರು ಬೇಡೊಳಿತಿರಲಿ - ಮರುಳ ಮುನಿಯ || (೭೦೯)

(ಬೇಡ+ಒಳಿತು+ಇರಲಿ)

ಹೂವು(ಕುಸುಮ) ನಮ್ಮ ಕಣ್ಣು ಮತ್ತು ಮೂಗುಗಳಿಗೆ ಚೆಲುವಾಗಿ ಕಾಣುತ್ತದೆ ಮತ್ತು ಸುಗಂಧ ಬೀರುತ್ತದೆ. ಆದರೆ ಅದು ಬಾಡಿಹೋದ ನಂತರ ಕಸದೊಳಗೆ ಸೇರಿ ಅದರ ಇರುವಿಕೆಯೇ ಇಲ್ಲದಂತಾಗುತ್ತದೆ. ಅದೇ ರೀತಿ ಬೆಲ್ಲದ ಸವಿಯು ನಮ್ಮ ನಾಲಿಗೆ(ರಸನೆ)ಗೆ ವ್ಯಕ್ತವಾದರೂ, ಅದು ಕಬ್ಬಿನಲ್ಲಿದ್ದಾಗ ನಮಗೆ ಕಾಣಿಸದಂತಿರುತ್ತದೆ. ಆದ್ದರಿಂದ ಜಾಣ್ಮೆಯಿಂದ ಸಫಲ ರೀತಿಯಲ್ಲಿ ಜಗತ್ತಿಗೆ ಕಾಣಿಸಿಕೊಂಡು ಜಗತ್ತಿನ ಜೀವನದಲ್ಲಿ ಸೇರಿಕೊಂಡು ಹೋಗು. ಹೆಸರಿನ ಪ್ರಸಿದ್ಧಿಗಾಗಿ ಶ್ರಮಿಸದೆ ಸದಾ ತೆರೆಮರೆಯಲ್ಲಿದ್ದು ಲೋಕಕ್ಕೆ ಒಳಿತನ್ನು ಮಾಡುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A flower is conspicuous for eyes and nose but it becomes unseen in rubbish
Jaggery can be tasted by tongue but in sugarcane it remains unseen
One becomes well-known with his excellent virtues
And becomes one in the life of the world,
Shun name and fame but cling to goodness – Marula Muniya (709)
(Translation from "Thus Sang Marula Muniya" by Sri. Narasimha Bhat)

Thursday, December 18, 2014

ವಿಶದನುಂ ಲೀನನುಂ ನೀನಾಗು ಲೋಕದಲಿ (708)

ವಿಶದನುಂ ಲೀನನುಂ ನೀನಾಗು ಲೋಕದಲಿ |
ಕುಶಲಗುಣದಿಂ ವಿಶದಮೌನದಿಂ ಲೀನ ||
ಹೆಸರಿಗೈಸಿರಿಗಾದ ಘಾಸಿಬೆಮರಿಂ ಲೋಕ- |
ದುಸಿರ ನೀಂ ಕೆಡಿಸದಿರು - ಮರುಳ ಮುನಿಯ || (೭೦೮)

(ಹೆಸರಿಗೆ+ಐಸಿರಿಗೆ+ಆದ)(ಲೋಕದ+ಉಸಿರ)(ಕೆಡಿಸದೆ+ಇರು)

ಈ ಜಗತ್ತಿನಲ್ಲಿ ಸ್ಪಷ್ಟ(ವಿಶದ)ವಾಗಿ ಕಾಣಿಸಿಕೊಳ್ಳುವವನೂ ಮತ್ತು ಕಣ್ಣುಗಳಿಗೆ ಕಾಣಿಸಿಕೊಳ್ಳದೆ ಅಡಗಿಕೊಂಡಿರುವವನೂ (ಲೀನ) ಆಗು. ಚತುರತೆಯಿಂದ ಕೂಡಿದ ಸ್ವಭಾವಗಳಿಂದ ನೀನು ಸ್ಪಷ್ಟವಾಗಿ ಕಾಣಿಸಿಕೊಳ್ಳಬಲ್ಲೆ. ಮಾತನಾಡದೆ ಮೌನದಿಂದದಿರುವುದರಿಂದ ಇತರರ ಕಣ್ಣುಗಳಿಗೆ ನೀನು ಕಾಣಿಸಿಕೊಳ್ಳದೆ ಅಡಗಿರಬಲ್ಲೆ. ಬಿರುದು ಮತ್ತು ಹೆಸರುಗಳನ್ನೂ ಮತ್ತು ಸಿರಿ, ಸಂಪತ್ತು(ಐಸಿರಿ)ಗಳನ್ನೂ ಗಳಿಸಲು ಆಯಾಸದಿಂದ ಸುರಿಸಿದ (ಘಾಸಿ)ಬೆವರಿನಿಂದ ಜಗತ್ತಿನ ವಾತಾವರಣವನ್ನು ನೀನು ಹಾಳುಮಾಡಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Be conspicuous in the world with your excellent virtues
And be inconspicuous by merging silently in the world.
Pollute not the breath of humanity with your stinking sweat
Caused in your struggle for fame and wealth – Marula Muniya (708)
(Translation from "Thus Sang Marula Muniya" by Sri. Narasimha Bhat) 

Monday, December 15, 2014

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ (707)

ತತ್ತ್ವ ಭಾಸ್ಕರ ದೀಪ್ತಿಯೆರಡೆಡೆಗೆ ಜೀವಕ್ಕೆ |
ಮಸ್ತಕದ ಗಿರಿಶಿಖರದಲಿ ಶಾಸ್ತ್ರವೊಂದು ||
ಹೃತ್ಸಾನುವೊಳ್ ಕಾವ್ಯ ನಿಂತು ಹಿತಮಿರೆ ತಂಗಿ |
ಮೃಚ್ಛಿಲೆಗೆ ಸಂಸ್ಕಾರ - ಮರುಳ ಮುನಿಯ || (೭೦೭)

(ದೀಪ್ತಿ+ಎರಡು+ಎಡೆಗೆ)(ಹೃತ್+ಸಾನು+ಒಳ್)(ಹಿತಂ+ಇರೆ)(ಮೃತ್+ಶಿಲೆ)

ತತ್ತ್ವ ಮತ್ತು ಸೂರ್ಯನ ಕಿರಣಗಳು ಜೀವದ ಎರಡು ಬದಿಗಳು ಇದ್ದಂತೆ ಶಿರಸ್ಸೆಂಬ(ಮಸ್ತಕ) ಬೆಟ್ಟದ ತುದಿಯಲ್ಲಿ ಶಾಸ್ತ್ರ ಮತ್ತು ಹೃದಯವೆಂಬ ಬೆಟ್ಟದ ತಪ್ಪಲಿ(ಸಾನು)ನಲ್ಲಿ ಕಾವ್ಯವು ಹಿತವಾಗಿ ನೆಲೆಯೂರಿದರೆ ಮಣ್ಣು (ಮೃತ್) ಮತ್ತು ಕಲ್ಲು(ಶಿಲೆ)ಗಳಿಂದ ಕೂಡಿದ ಈ ದೇಹದ ಶುದ್ಧ ಮಾಡುವಿಕೆಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The sum of divine truth shines at two places in man,
The sunbeams settle as shastras on the hill top of humanhead
The rays as poetry fall into hillside valley giving comfort
Both refine the soil and stone in the human being – Marula Muniya (707)
(Translation from "Thus Sang Marula Muniya" by Sri. Narasimha Bhat)

Thursday, December 11, 2014

ಪ್ರಗತಿ ಸಂಸ್ಥಿತಿಗಳನ್ಯೋನ್ಯ ಮಿತಿಯಿಂ ಧರ್ಮ (706)

ಪ್ರಗತಿ ಸಂಸ್ಥಿತಿಗಳನ್ಯೋನ್ಯ ಮಿತಿಯಿಂ ಧರ್ಮ |
ಜಗದ ರಥಸೌತ್ಯದಲಿ ಧರ್ಮ ಚತುರನಿರೆ ||
ಲಗಿತವಾಗೆಯಿನಶ್ವವೇಗವಂ ನಿಯಮಿಸನೆ |
ಸುಗಮಪಥ ಸಮಗತಿಗೆ - ಮರುಳ ಮುನಿಯ || (೭೦೬)

(ಸಂಸ್ಥಿತಿಗಳ್+ಅನ್ಯೋನ್ಯ)(ಚತುರನ್+ಇರೆ)(ಲಗಿತವಾಗೆಯಿನ್+ಅಶ್ವವೇಗವಂ)

ಈ ಜಗತ್ತೆಂಬ ರಥದ ಸಾರಥ್ಯ(ಸೌತ್ಯ)ದಲ್ಲಿ ಧರ್ಮಕುಶಲನಿದ್ದಲ್ಲಿ, ಏಳಿಗೆ ಮತ್ತು ಒಳ್ಳೆಯ ಸ್ಥಿತಿಗಳ ಪರಸ್ಪರ ಮಿತವರ್ತನೆಯಿಂದ ಧರ್ಮದ ಆಚರಣೆಯಾಗುತ್ತದೆ. ಇಂಥ ಧರ್ಮಚತುರನು ತೆಳುವಾದ ಲಗಾಮಿನಿಂದ ಅಶ್ವದ ರಭಸದ ವೇಗವನ್ನು ನಿಯಂತ್ರಿಸಿದರೆ, ರಥವು ಸುಲಭವಾದ ದಾರಿಯಲ್ಲಿ ಕ್ಷೇಮಕರವಾದ ರೀತಿಯಲ್ಲಿ ಸಾಗುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dharma prospers when progress and established
condition keep each other proper limits
When and expert in dharma drives the chariot of worldly affairs
Wouldn't he control the speeding horses with bridle?
For uniform speed and comfortable journey? – Marula Muniya (706)
(Translation from "Thus Sang Marula Muniya" by Sri. Narasimha Bhat)

Wednesday, December 10, 2014

ಅಂಗಾಂಗದೊಂದು ಪರಿಮಾಣ ನಿಯತಿ ರೂಪ (705)

ಅಂಗಾಂಗದೊಂದು ಪರಿಮಾಣ ನಿಯತಿ ರೂಪ |
ಸಂಗೀತ ನಾದಲಯಗಳದೊಂದು ನಿಯತಿ ||
ಸಂಘ ಜೀವಿತದಿ ಜನದೊಂದು ನಿಯತಿಯೆ ಧರ್ಮ |
ಮಂಗಲವೊ ನಿಯತಿಯಿಂ - ಮರುಳ ಮುನಿಯ || (೭೦೫)

ದೇಹದ ಒಂದೊಂದು ಭಾಗಗಳೂ ಒಂದೊಂದು ನಿಶ್ಚಿತ(ನಿಯತ)ವಾದ ಅಳತೆಯಲ್ಲಿ(ಪರಿಮಾಣ)ರುವುದರಿಂದ ಅದು ಒಂದು ಸುಂದರವಾದ ಆಕಾರವನ್ನು ಹೊಂದುತ್ತದೆ. ಹಾಡುಗಾರಿಕೆ ಮತ್ತು ಮಧುರವಾದ ಧ್ವನಿಗಳ ಲಯಗಳು ನಿಯಮಗಳಿಗೆ ಒಳಪಟ್ಟಿವೆ. ಅದೇ ರೀತಿ ಒಂದು ಸಮಾಜದಲ್ಲಿ ಜೀವನವನ್ನು ನಡೆಸುತ್ತಿರುವಾಗ ಅಲ್ಲಿಯ ಜನಗಳು ಪಾಲಿಸಬೇಕಾದ ನಿಯಮಗಳೇ ಧರ್ಮ. ಈ ರೀತಿಯ ನಿಯಮಪಾಲನೆಯಿಂದ ಶುಭವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Arrangement of body parts proportionately is handsomeness,
Orderly arrangement of notes and rhythm is music,
Orderly arrangement and rules regarding life in community is dharma,
Prosperity and happiness from proper regulations – Marula Muniya (705)
(Translation from "Thus Sang Marula Muniya" by Sri. Narasimha Bhat)

Thursday, December 4, 2014

ಎಡದಡಿಯನಿಡುವಂದು ಬಲದೆಡೆಯ ಮರೆಯದಿರು (704)

ಎಡದಡಿಯನಿಡುವಂದು ಬಲದೆಡೆಯ ಮರೆಯದಿರು |
ಅಡಿಯ ಬಲಕಿಡುವಂದು ಮರೆಯಬೇಡೆಡವ ||
ನಡುದಾರಿ ನಡೆಯುತಂತೆರಡು ಕಡೆ ನೆನಪಿರಲಿ |
ದೃಢ ಸಮನ್ವಯ ಯೋಗ - ಮರುಳ ಮುನಿಯ || (೭೦೪)

(ಎಡದ+ಅಡಿಯನ್+ಇಡುವಂದು)(ಬಲದ+ಎಡೆಯ)(ಮರೆಯದೆ+ಇರು)(ಬಲಕೆ+ಇಡುವಂದು)(ನಡೆಯುತ+ಅಂತೆ+ಎರಡು)

ಎಡಗಡೆ ಹೆಜ್ಜೆ ಇಡುವಾಗ ಬಲಭಾಗವನ್ನು ಮರೆಯಬೇಡ, ಹಾಗೂ ಬಲಗಡೆ ಹೆಜ್ಜೆ ಇಡುವಾಗ ಎಡಬಾಗವನ್ನು ಮರೆಯಬೇಡ. ರಸ್ತೆಯ ಮಧ್ಯೆಯಲ್ಲಿ ನಡೆಯುತ್ತಿರುವಾಗ ಎಡ ಮತ್ತು ಬಲ, ಎರಡೂ ಕಡೆಗಳನ್ನೂ ಗಮನಿಸುತ್ತಿರು. ಈ ರೀತಿ ಸ್ಥಿರಚಿತ್ತದಿಂದ ಸಮನ್ವಯ ದೃಷ್ಟಿಯಲ್ಲಿ ಮುಂದೆ ಸಾಗುವುದೇ ಯೋಗ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When you keep the left foot forward forget not the right side,
When you put the right foot forget not the left,
Walk along the middle path, remembering both the sides
Firm coordination is yoga – Marula Muniya (704)
(Translation from "Thus Sang Marula Muniya" by Sri. Narasimha Bhat)

Wednesday, December 3, 2014

ಏಕತೆಗಮೆಡೆಯುಂಟನೇಕತೆಗಮೆಡೆಯುಂಟು (703)

ಏಕತೆಗಮೆಡೆಯುಂಟನೇಕತೆಗಮೆಡೆಯುಂಟು |
ಲೋಕ ಜೀವನದ ಸುಖ ಶಾಂತಿ ಸಾಧನೆಯೊಳ್ ||
ಕೈಕಾಲು ಬೇರ‍್ಬೇರೆ ಸೇವಿಪ್ಪ ಬಾಳೊಂದು |
ಸಾಕಲ್ಯ ದೃಷ್ಟಿ ಸರಿ - ಮರುಳ ಮುನಿಯ || (೭೦೩)

(ಏಕತೆಗಂ+ಎಡೆಯುಂಟು+ಅನೇಕತೆಗಂ+ಎಡೆಯುಂಟು)

ಈ ಪ್ರಪಂಚದ ಜೀವನದ ಸುಖ ಸಂತೋಷ ಮತ್ತು ನೆಮ್ಮದಿಗಳ ಗಳಿಸುವಿಕೆಯಲ್ಲಿ ಏಕರೂಪಕ್ಕೂ ವೈವಿಧ್ಯಕ್ಕೂ ಅವಕಾಶಗಳುಂಟು. ಕೈ ಮತ್ತು ಕಾಲುಗಳು ಬೇರೆ ಬೇರೆಯವಾದರೂ ಸಹ, ಅವುಗಳಿಂದ ದೊರೆಯುವ ಪ್ರಯೋಜನ ಪರಸ್ಪರ ಪೂರಕವಾದುದು. ಈ ರೀತಿ ಸಮನ್ವಯ ದೃಷ್ಟಿಯನ್ನು ಬಾಳಲ್ಲಿ ಹೊಂದಿರುವುದೇ ಸರಿಯಾದ ದಾರಿ ಆಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In our endeavour to bring peace and happiness to world life,
There is as much room for unity as there is for diversity,
Hands and legs are separate but the life they serve is the same,
All-encompassing vision is most appropriate – Marula Muniya (703)
(Translation from "Thus Sang Marula Muniya" by Sri. Narasimha Bhat)

Monday, December 1, 2014

ಸವಿ ಬಾಯಿಗೊಪ್ಪುವುದು ಮತ ಮನಸಿಗೊಪ್ಪುವುದು (702)

ಸವಿ ಬಾಯಿಗೊಪ್ಪುವುದು ಮತ ಮನಸಿಗೊಪ್ಪುವುದು |
ಅವರವರ ಶುಚಿ ರುಚಿಗಳವರವರ ದಾರಿ ||
ಬವರವೇತಕ್ಕಿಲ್ಲಿ ಶಿವಗುಡಿಯ ಮಾರ್ಗದಲಿ |
ವಿವಿಧ ಮನ ವಿವಿಧ ಮತ - ಮರುಳ ಮುನಿಯ || (೭೦೨)

(ಬಾಯಿಗೆ+ಒಪ್ಪುವುದು)(ಮನಸಿಗೆ+ಒಪ್ಪುವುದು)(ಬವರವು+ಏತಕ್ಕೆ+ಇಲ್ಲಿ)

ರುಚಿಯಾಗಿರುವ ಪದಾರ್ಥವು ನಾಲಗೆಗೆ ಸರಿಯಾಗಿರುತ್ತದೆ. ಒಳ್ಳೆಯ ವಿಚಾರ ಮತ್ತು ಅಭಿಪ್ರಾಯಗಳು ಮನಸ್ಸಿಗೆ ಒಪ್ಪಿಗೆಯಾಗುತ್ತದೆ. ಲೋಕದಲ್ಲಿ ಅವರವರ ನೈರ್ಮಲ್ಯ, ಪಾವಿತ್ರ್ಯ ಮತ್ತು ಸವಿಗಳು ಅವರವರಿಗೇ ಬಿಟ್ಟಿದ್ದು. ಎಲ್ಲರೂ ಪರಮಾತ್ಮನ ಸಾನ್ನಿಧ್ಯಕ್ಕಾಗಿಯೇ ದೇವಸ್ಥಾನಕ್ಕೆ ಹೋಗುತ್ತಿರುವ ದಾರಿಯಲ್ಲಿ ಕಾದಾಟ-ತಿಕ್ಕಾಟಗಳು ಏಕೆ? ನಾನಾ ಬಗೆಯ ಮನಸ್ಸುಗಳಿದ್ದಂತೆ ನಾನಾ ಬಗೆಯ ಅಭಿಪ್ರಾಯಗಳಿರುತ್ತದೆ. ಅದಕ್ಕಾಗಿ ಕಾದಾಡಬೇಕಾಗಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

That which is agreeable to your tongue is delicious,
That which is agreeable to your mind is your conviction,
Every one chooses his path depending on his taste and purity
Why should we fight on the way to God’s temple?
As many minds so many faiths – Marula Muniya (702)
(Translation from "Thus Sang Marula Muniya" by Sri. Narasimha Bhat)