Tuesday, March 31, 2015

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ (751)

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ |
ಇನ್ನೊರ‍್ವನಿರಲನ್ಯತನವಿಲ್ಲದಿಲ್ಲ ||
ಅನ್ಯಮನವಿರೆ ಭಿನ್ನಮತ ಘರ್ಷೆಯಿರದಿಲ್ಲ |
ಭಿನ್ನದೊಳಭಿನ್ನನಿರು - ಮರುಳ ಮುನಿಯ || (೭೫೧)

(ಜೊತೆಗೆ+ಇನ್ನೊರ‍್ವನ್+ಇರದೆ)(ಇನ್ನೊರ‍್ವನ್+ಇರಲ್+ಅನ್ಯತನ+ಇಲ್ಲದೆ+ಇಲ್ಲ)(ಅನ್ಯಮನ+ಇರೆ)(ಘರ್ಷೆ+ಇರದೆ+ಇಲ್ಲ)(ಭಿನ್ನದ+ಒಳ್+ಅಭಿನ್ನನ್+ಇರು)

ಒಬ್ಬಂಟಿ ಜೀವನವು ಬೇಸರದಿಂದ ಕೂಡಿರುತ್ತದೆ. ತನ್ನ ಜೊತೆಗೆ ಸಂಗಡಿಗನೊಬ್ಬನಿದ್ದರೇನೇ ಜೀವನಕ್ಕೆ ರುಚಿ ಬರುವುದು. ಆದರೆ ಈ ರೀತಿಯಾಗಿ ಸಂಗಡಿಗನಿದ್ದರೂ ಸಹ, ಪ್ರತ್ಯೇಕತನ ಇದ್ದೇ ಇರುತ್ತದೆ. ಪ್ರತ್ಯೇಕವಾದ ಮನಸ್ಸಿರಲಾಗಿ, ಅಭಿಪ್ರಾಯ ವ್ಯತ್ಯಾಸಗಳು(ಭಿನ್ನಮತ) ಮತ್ತೂ ತಿಕ್ಕಾಟ(ಘರ್ಷೆ)ಗಳು ಇದ್ದೇ ಇರುತ್ತವೆ. ಆದ್ದರಿಂದ ನೀನು ಮಾತ್ರ ವ್ಯತ್ಯಾಸಗಳಲ್ಲಿ(ಭಿನ್ನದೊಳ್) ಘರ್ಷೆಣೆಯುಂಟಾಗದಂತೆ ಏಕಾತ್ಮವಾಗಿ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When there’s no companion there is no sweetness in life
Sense of separateness may persist even when there’s a companion
Other minds may cause different opinions and conflicts
But remain unruffled in spite of the outside splits – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment