Wednesday, January 18, 2012

ಸ್ವಚ್ಛಚೈತನ್ಯಸಾಗರದ ವೀಚಿಯೊ ನೀನು (143)

ಸ್ವಚ್ಛಚೈತನ್ಯಸಾಗರದ ವೀಚಿಯೊ ನೀನು |
ಸಚ್ಚಿದಾನಂದಸರಿದೂರ್ಮಿ ಕಣ ನೀನು ||
ಅಚ್ಛೇದ್ಯ ದಿವ್ಯತರು ಸುಮಪರಾಗವೊ ನೀನು |
ಅಚ್ಯುತಾಮೃತಬಿಂದು - ಮರುಳ ಮುನಿಯ || (೧೪೩)

(ಸತ್+ಚಿತ್+ಆನಂದಸರಿತ್+ಊರ್ಮಿ)(ಅಚ್ಯುತ+ಅಮೃತಬಿಂದು)

ನೀನು ಶುದ್ಧವಾದ ಚೇತನ ಸಮುದ್ರದ ಒಂದು ಅಲೆ (ವೀಚಿ) ಮತ್ತು ಆ ಪರಮಾತ್ಮನೆಂಬ ಹೊಳೆಯ (ಸರಿತ್) ಒಂದು ಅಲೆ(ಊರ್ಮಿ)ಯ ಸೂಕ್ಷ್ಮ ಅಂಶ. ಕತ್ತರಿಸಲಾಗದ (ಅಚ್ಛೇದ್ಯ) ಶ್ರೇಷ್ಠ (ದಿವ್ಯ) ಗಿಡ(ತರು)ದ ಹೂವಿ(ಸುಮ)ನ ಪರಾಗವೂ ನೀನೆ ಮತ್ತು ನಷ್ಟವಾಗದಿರುವಂತಹ (ಅಚ್ಯುತ) ಅಮೃತದ ಒಂದು ಹನಿ (ಬಿಂದು).

Tuesday, January 17, 2012

ಪರವಸ್ತುವೊಂದು ತಾನೆರಡಾಗಿ ಲೀಲೆಯಲಿ (142)

ಪರವಸ್ತುವೊಂದು ತಾನೆರಡಾಗಿ ಲೀಲೆಯಲಿ |
ಪುರುಷನೆಂದುಂ ಪ್ರಕೃತಿಯೆಂದುಮನ್ಯೋನ್ಯಂ ||
ಅರಸುತ್ತೆ ಮರಸುತ್ತೆ ಸೇರುತಗಲುತಮಂತು |
ಸರಸವಾಡುತ್ತಿಹುದೊ - ಮರುಳ ಮುನಿಯ || (೧೪೨)

(ತಾನ್+ಎರಡು+ಆಗಿ)(ಪ್ರಕೃತಿಯೆಂದುಂ+ಅನ್ಯೋನ್ಯಂ)(ಸೇರುತ+ಅಗಲುತಂ+ಅಂತು)(ಸರಸ+ಆಡುತ್ತಿಹುದೊ)

ಶ್ರೇಷ್ಠವಾದ ಒಂದು ಪದಾರ್ಥವು, ಅದೇ ಎರಡಾಗಿ ಜಗತ್ತಿನ ಕ್ರೀಡೆಗಳಲ್ಲಿ ಪುರುಷ ಮತ್ತು ಪ್ರಕೃತಿಗಳೆಂಬ ಹೆಸರುಗಳಿಂದ ಪರಸ್ಪರ ಸ್ನೇಹದಿಂದಿರುತ್ತದೆ. ಅದು ಹುಡುಕುತ್ತಾ (ಅರಸುತ್ತ), ಮರೆಯಾಗುತ್ತಾ, ಕೂಡುತ್ತಾ ಮತ್ತು ಬೇರೆ ಬೇರೆಯಾಗುತ್ತಾ ಚೆಲ್ಲಾಟವಾಡುತ್ತದೆ.

Friday, January 13, 2012

ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು (141)

ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು? |
ಜೀವವೊಂದಿನ್ನೊಂದನರಿತು ಗುರುತಿಸುವಾ ||
ಭಾವನಾ ಸಂಬಂಧ ಶಕ್ತಿ ಸೂತ್ರದ ಮುಂದೆ |
ಆವಸಾಕ್ಷ್ಯವದೇಕೆ ? - ಮರುಳ ಮುನಿಯ || (೧೪೧)

(ಜೀವವು+ಒಂದು+ಇನ್ನೊಂದನು+ಅರಿತು)(ಆವಸಾಕ್ಷ್ಯ+ಅದು+ಏಕೆ)

ಕೋಟ್ಯಾಂತರ ಜೀವಿಗಳ ಸಮುದಾಯವನ್ನು (ಸಮಷ್ಟಿ) ಬಿಟ್ಟು ದೇವರಿರುವನೇನು ? ಒಂದು ಜೀವವು ಮತ್ತೊಂದು ಜೀವವನ್ನು ಅರ್ಥಮಾಡಿಕೊಂಡು ಗುರುತಿಸುವ ಆ ಭಾವನೆಗಳ ಬಾಂಧವ್ಯ ಬಲದ ಮುಂದೆ, ದೇವರ ಇರುವಿಕೆಗೆ ಇನ್ಯಾವ ಸಾಕ್ಷ್ಯಗಳೂ ಬೇಕಿಲ್ಲ.

Wednesday, January 11, 2012

ನಾನು ನೀನವನು ತಾನೆನುತ ಗುರುತಿಸಿಕೊಳುವ (140)

ನಾನು ನೀನವನು ತಾನೆನುತ ಗುರುತಿಸಿಕೊಳುವ |
ಭಾನಶಕ್ತಿ ಸಮಾನವೆಲ್ಲ ಜೀವರಿಗಂ ||
ನಾನಾ ಪ್ರಪಂಚಗಳನಂತೊಂದುಗೂಡಿಪಾ |
ಜ್ಞಾನಸೂತ್ರವೆ ಬೊಮ್ಮ - ಮರುಳ ಮುನಿಯ || (೧೪೦)

(ನೀನ್+ಅವನು)(ತಾನ್+ಎನುತ)(ಸಮಾನ+ಎಲ್ಲ)(ಪ್ರಪಂಚಗಳನ್+ಅಂತು+ಒಂದುಗೂಡಿಪ+ಆ)

ನಾನು, ನೀನು, ಅವನು ಮತ್ತು ತಾನು ಎಂದು ಗುರುತಿಸಿಕೊಂಡು ಕಾಣಿಸಿಕೊಳ್ಳುವ ಸಾಮರ್ಥ್ಯ (ಭಾನಶಕ್ತಿ) ಎಲ್ಲ ಜೀವಗಳಿಗೂ ಸಮಾನವಾಗಿದೆ. ಅನೇಕ ಪ್ರಪಂಚಗಳನ್ನು ಹೀಗೆ ಒಂದುಗೂಡಿಸುವ ತಿಳುವಳಿಕೆಯ ಸೂತ್ರವೇ ಆ ಪರಬ್ರಹ್ಮ.

Tuesday, January 10, 2012

ಹುಟ್ಟದಿರುವನು ನೀನು ಸಾಯದಿರುವನು ನೀನು (139)

ಹುಟ್ಟದಿರುವನು ನೀನು ಸಾಯದಿರುವನು ನೀನು |
ಹುಟ್ಟುಸಾವುಗಳಾಟವಾಡುವನು ನೀನು ||
ಕೆಟ್ಟುದೊಳಿತುಗಳೆರಡುಮಂಟದಿರ‍್ಪನು ನೀನು |
ಒಟ್ಟು ವಿಶ್ವವೆ ನೀನು - ಮರುಳ ಮುನಿಯ || (೧೩೯)

(ಹುಟ್ಟುಸಾವುಗಳ+ಆಟ+ಆಡುವನು)(ಕೆಟ್ಟುದು+ಒಳಿತುಗಳ್+ಎರಡುಂ+ಅಂಟದೆ+ಇರ‍್ಪನು)

ನೀನು ಹುಟ್ಟದೆ ಇರುವವನು. ನೀನು ಸಾಯುವುದೂ ಇಲ್ಲ. ಹುಟ್ಟು ಮತ್ತು ಸಾವುಗಳ ಆಟವನ್ನು ಮಾತ್ರ ನೀನು ಆಡುತ್ತಿರುವೆ. ಕೆಟ್ಟದು ಮತ್ತು ಒಳ್ಳೆಯದು, ಇವೆರಡಕ್ಕೂ ಅಂಟಿಕೊಳ್ಳದವನು ನೀನು. ಸಕಲ ಜಗತ್ತೇ ನೀನು.

Monday, January 9, 2012

ಇರುವುದೆಲ್ಲಕು ಮೊದಲು ಬೀಜವದು ಮೂಲವದು (138)

ಇರುವುದೆಲ್ಲಕು ಮೊದಲು ಬೀಜವದು ಮೂಲವದು |
ಬರುವುದದರಿಂದೆಲ್ಲ ಜಗ ಜೀವ ಗಾಳಿ ||
ನೆರೆದು ಧರಿಸಿರುವುದದು ಪೊರೆವುದದು ಕರಗಿಪುದು |
ಮೆರೆವುದದು ನಿನ್ನೊಳಗೆ - ಮರುಳ ಮುನಿಯ || (೧೩೮)

(ಇರುವುದು+ಎಲ್ಲಕು)(ಬರುವುದು+ಅದರಿಂದ+ಎಲ್ಲ)(ಧರಿಸಿ+ಇರುವುದು+ಅದು)(ಮೆರೆವುದು+ಅದು)

ಎಲ್ಲದಕ್ಕೂ ಮೊತ್ತಮೊದಲನೆಯದಾಗಿ ಇರುವುದೇ ಅದು. ಅದೇ ಬಿತ್ತ ಮತ್ತು ಹುಟ್ಟು. ಅದರಿಂದಲೇ ಪ್ರಪಂಚ, ಗಾಳಿ ಮತ್ತು ಜೀವಗಳು ಬರುತ್ತವೆ. ಅದು ಉಕ್ಕಿ(ನೆರೆ) ಎಲ್ಲವನ್ನೂ ಹೊತ್ತಿವೆ, ಕಾಪಾಡುತ್ತದೆ ಮತ್ತು ತನ್ನಲ್ಲೇ ಒಂದಾಗಿಸಿ ಕರಗಿಸಿಕೊಳ್ಳುತ್ತದೆ. ಅದು ನಿನ್ನೊಳಗೆ ಮೆರೆಯುತ್ತದೆ.

Friday, January 6, 2012

ಪ್ರೇಮ ಪರಿಚರ್ಯೆಗಳನುಳಿದ ಪಶುಕಾಮುಕತೆ (137)

ಪ್ರೇಮ ಪರಿಚರ್ಯೆಗಳನುಳಿದ ಪಶುಕಾಮುಕತೆ |
ಕಾಮನೀಯಕ ತಾರತಮ್ಯ ಮರೆತಾಶೆ ||
ಭ್ರಾಮಗತಿಯೆ ಪ್ರಗತಿಯೆಂಬ ಮೂರ್ಖಶ್ರದ್ಧೆ |
ಪಾಮರ ವಿಜೃಂಭವಿವು - ಮರುಳ ಮುನಿಯ || (೧೩೭)

(ಪರಿಚರ್ಯೆಗಳನ್+ಉಳಿದ)(ವಿಜೃಂಭ+ಇವು)

ಅನುರಾಗ ಮತ್ತು ಶುಶ್ರೂಷೆಗಳಿಂದ ಹೊರತಾದ ಕೇವಲ ಮೃಗೀಯವಾದ ಭೋಗಾಪೇಕ್ಷೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಮರೆತು ರಮಣೀಯತೆಯನ್ನು ಆಶಿಸುವುದು. ದೋಷಪೂರ್ಣ ವರ್ತನೆಯೇ(ಭ್ರಾಮಗತಿಯೇ) ಏಳಿಗೆಯೆಂಬ ಮೂಢ ವಿಶ್ವಾಸ. ತಿಳಿವಳಿಕೆ ಇಲ್ಲದವರ (ಪಾಮರ) ಮೆರೆದಾಟ(ವಿಜೃಂಭ)ಗಳ ರೀತಿ ಇದು.

Thursday, January 5, 2012

ಸಂಸಾರಿ ಬಾಹ್ಯದೊಳಗಾಂತರ್ಯದಿ ವಿರಾಗಿ (136)

ಸಂಸಾರಿ ಬಾಹ್ಯದೊಳಗಾಂತರ್ಯದಿ ವಿರಾಗಿ |
ಹಂಸೆ ಜೀವನದ ಪಾಲ್ನೀರ ಭೇದದಲಿ ||
ಪಾಂಸು ಮಾತ್ರದಿ ಸಕಲ ವಿಶ್ವಸಂದರ್ಶಿ(ಸುವ) |
ಅಂಶದಲಿ ಪೂರ್ಣದೃಶಿ - ಮರುಳ ಮುನಿಯ || (೧೩೬)

(ಬಾಹ್ಯದೊಳಗೆ+ಆಂತರ್ಯದಿ)

’ಹಂಸೆ ಜೀವನದ ಪಾಲ್ನೀರಭೇದದಲಿ’ ಹಾಲು ನೀರನ್ನು ಬೆರೆಸಿಟ್ಟರೆ ಹಂಸಪಕ್ಷಿ ಹಾಲನ್ನು ಕುಡಿದು ನೀರನ್ನು ಬೇರ್ಪಡಿಸಿ ಬಿಟ್ಟಿರುವುದಂತೆ. ಇದು ಹಂಸಕ್ಷೀರ ನ್ಯಾಯ.

ಅವನು ಹೊರಗಿನ ಪ್ರಪಂಚಕ್ಕೆ ಗೃಹಸ್ಥನಾದರೂ ಒಳಮನಸ್ಸಿಗೆ ಅವನು ವಿರಕ್ತ. ಹಾಲು ಮತ್ತು ನೀರನ್ನು ಬೆರೆಸಿ ಕೊಟ್ಟರೆ, ಒಂದು ಹಂಸಪಕ್ಷಿಯು ಹೇಗೆ ಹಾಲನ್ನು ಮಾತ್ರ ಬೇರ್ಪಡಿಸಿ ಕುಡಿಯುತ್ತದೋ, (ಹಂಸಕ್ಷೀರನ್ಯಾಯದಂತೆ) ಅವನು ಆ ರೀತಿ ಇರುತ್ತಾನೆ. ಒಂದು ಧೂಳು ಕಣ(ಪಾಂಸು)ದಿಂದ ಅವನು ಸಂಪೂರ್ಣ ಪ್ರಪಂಚವನ್ನು ಅರಿಯುತ್ತಾನೆ. ಒಂದು ಸಣ್ಣ ಭಾಗದಿಂದ ಪೂರ್ಣತೆಯನ್ನು ನೋಡುತ್ತಾನೆ (ಪೂರ್ಣದೃಶಿ).

Wednesday, January 4, 2012

ಸೃಷ್ಟಿಚರಿತೆಯನಾದಿ ಜೀವಯಾತ್ರೆಯನಾದಿ (135)

ಸೃಷ್ಟಿಚರಿತೆಯನಾದಿ ಜೀವಯಾತ್ರೆಯನಾದಿ |
ಶಿಷ್ಟಕರ್ಮದ ಜಟಿಲ ಸೂತ್ರಗಳನಾದಿ ||
ನಷ್ಟವಹುವೀಯನಾದಿಭ್ರಾಂತಿ ಮೂಲಗಳು |
ದೃಷ್ಟಾತ್ಮತತ್ತ್ವಂಗೆ - ಮರುಳ ಮುನಿಯ || (೧೩೫)

(ಸೃಷ್ಟಿಚರಿತೆ+ಅನಾದಿ)(ಜೀವಯಾತ್ರೆ+ಅನಾದಿ)(ಸೂತ್ರಗಳ್+ಅನಾದಿ)
(ನಷ್ಟ+ಅಹುವು+ಈ+ಅನಾದಿಭ್ರಾಂತಿ)(ದೃಷ್ಟ+ಆತ್ಮ+ತತ್ತ್ವಂಗೆ)

ಜಗತ್ತಿನ ನಿರ್ಮಾಣದ ಇತಿಹಾಸಕ್ಕೆ ಮೊದಲಿಲ್ಲ ಮತ್ತು ಅದು ಬಹಳ ಪುರಾತನವಾದುದು. ಜೀವಿಗಳ ಪ್ರಯಾಣವೂ ಅಷ್ಟೇ. ಒಳ್ಳೆಯ (ಶಿಷ್ಟ) ಕರ್ಮಗಳ ಕಠಿಣ (ಜಟಿಲ) ನಿಯಮಗಳೂ ಪುರಾತನವಾದುದು ಮತ್ತು ಮೊದಲಿಲ್ಲದುದು. ಆತ್ಮದರ್ಶನವನ್ನು ಪಡೆದ ಜ್ಞಾನಿಗೆ (ದೃಷ್ಟಾತ್ಮತತ್ತ್ವಂಗೆ) ಈ ಪುರಾತನದ ಮತ್ತು ಮೊದಲಿಲ್ಲದ ಮೂಲಗಳ ತಪ್ಪುಗ್ರಹಿಕೆಗಳುಂಟಾಗುವುದಿಲ್ಲ.

Tuesday, January 3, 2012

ಮೋಹಪಾಶಗಳೆಳೆಯೆ ಮಮತೆಯಂಕುಶವಿರಿಯೆ (134)

ಮೋಹಪಾಶಗಳೆಳೆಯೆ ಮಮತೆಯಂಕುಶವಿರಿಯೆ |
ಆಹುತಂ ತಾನಹಂ ಭವಶಿಖೆಗೆ ಮೂಢಂ ||
ಸೋಽಹಮಭಿಮತದ ಸರ್ವಾತ್ಮತ್ವದಿಂ ಜಗಕೆ |
ಸಾಹ್ಯವೀವಂ ಜ್ಞಾನಿ - ಮರುಳ ಮುನಿಯ || (೧೩೪)

(ಮೋಹಪಾಶಗಳ್+ಎಳೆಯೆ)(ಮಮತೆ+ಅಂಕುಶ+ಇರಿಯೆ)(ತಾನ್+ಅಹಂ)(ಸೋಽಹಂ+ಅಭಿಮತದ)(ಸಾಹ್ಯ+ಈವಂ)

ಮೋಹವೆಂಬ ಬಂಧನಗಳು ಮನುಷ್ಯನನ್ನು ಎಳೆಯಲು ಮಮತೆಯೆಂಬ ಅಂಕುಶವು ಅವನನ್ನು ತಿವಿಯಲು, ಸಂಸಾರ (ಭವ)ವೆಂಬ ಬೆಂಕಿ(ಶಿಖ)ಗೆ ಮೂರ್ಖನು ತಾನಾಗಿ ತಾನು ಬಲಿ(ಆಹುತಂ)ಯಾಗುತ್ತಾನೆ. ತಾನೇ ಪರಮಾತ್ಮ(ಸೋಽಹಂ)ನೆಂಬ ಅಭಿಪ್ರಾಯ (ಅಭಿಮತ)ದಿಂದ ಕೂಡಿದ ಮತ್ತು ಪ್ರಪಂಚದ ಎಲ್ಲ ಆತ್ಮಗಳೂ ಒಂದೇ ಎಂಬ ಭಾವನೆಯಿಂದ ಬುದ್ಧಿವಂತನು ಪ್ರಪಂಚಕ್ಕೆ ಸಹಾಯ(ಸಾಹ್ಯ)ಕನಾಗುತ್ತಾನೆ.