Monday, April 6, 2015

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ (754)

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ |
ರುಂದ್ರ ರಾಸಿಕ್ಕದಿಂದಾತ್ಮಗತಿ ಭಂಗ ||
ದ್ವಂದ್ವದ ಸಮನ್ವಯದ ಬಂಧುರತೆಯಿಂದೆ ನೀಂ |
ಸಾಂದ್ರಾತ್ಮ ಜೀವಿಯಿರು - ಮರುಳ ಮುನಿಯ || (೭೫೪)

(ರಾಸಿಕ್ಕದಿಂದ+ಆತ್ಮಗತಿ)(ಸಾಂದ್ರ+ಆತ್ಮ)

ಇಂದ್ರಿಯಗಳನ್ನು ಪ್ರತಿಬಂಧಿಸಿ (ನಿರೋಧ) ನಡೆಯುವುದರಿಂದ ವಿನೋದಕರವಾದ ಜೀವನವು ಮುರಿದುಬೀಳುತ್ತದೆ. ಘೋರ ರೀತಿಯಲ್ಲಿ (ರುಂದ್ರ) ಇಂದ್ರಿಯ ಸುಖಾಭಿಲಾಶೆಗಳನ್ನು ಅನುಭವಿಸುವುದರಿಂದ, ಆತ್ಮದ ಸಹಜಗತಿ ಕುಂಠಿತವಾಗುತ್ತದೆ. ವೈರುದ್ದ್ಯದ ಹೊಂದಾಣಿಕೆ(ಸಮನ್ವಯ)ಯ ಸುಂದರತೆ(ಬಂಧುರತೆ)ಯಿಂದ ನೀನು ಉನ್ನತವಾದ ಆತ್ಮವನ್ನು ಹೊಂದಿರುವ ಜೀವಿಯಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Suppression of senses jeopardizes happy harmonious life,
Excessive lasciviousness hinders the pilgrimage of self,
Harmoniously coordinate all dualities of life
And be a well-saturated soul – Marula Muniya (754)
(Translation from "Thus Sang Marula Muniya" by Sri. Narasimha Bhat)

Friday, April 3, 2015

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ (753)

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ |
ರಸದಾಶೆಯಿರದೆ ಹಸಿವಿನಲ್ಲಿ ಹುರುಪಿಲ್ಲ ||
ಅಸಮರುಚಿಯಿರದಂದು ರಸವಿವೇಕಿತೆಯಿಲ್ಲ |
ವಿಷಮವಿಂತುಪಯುಕ್ತ - ಮರುಳ ಮುನಿಯ || (೭೫೩)

(ಹಸಿವು+ಇರಿಯದೆ+ಇರೆ)(ಜೀವವು+ಎದ್ದು)(ನಡೆವಂತೆ+ಇಲ್ಲ)(ರಸದ+ಆಶೆ+ಇರದೆ)(ಹುರುಪು+ಇಲ್ಲ)(ಅಸಮರುಚಿ+ಇರದಂದು)(ವಿಷಮ+ಇಂತು+ಉಪಯುಕ್ತ)

ಹಸಿವು ಎನ್ನುವುದು ಜೀವಿಯನ್ನು ತಿವಿದು ಎಬ್ಬಿಸದಿದ್ದರೆ, ಜೀವಿಯು ಎದ್ದು ತನ್ನ ಹಸಿವನ್ನು ತಣಿಸಲು ಆಹಾರವನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಜಗತ್ತಿನ ರುಚಿಗಳನ್ನು ಉಣುವ ಬಯಕೆಗಳಿಲ್ಲದಿದ್ದಲ್ಲಿ ಆ ಹಸಿವನ್ನು ತಣಿಸುವುದರಲ್ಲಿ ಯಾವ ಉತ್ಸಾಹ(ಹುರುಪು)ವೂ ಇರುವುದಿಲ್ಲ. ಬೇರೆ ಬೇರೆ ರುಚಿಗಳಿಲ್ಲದಿದ್ದಲ್ಲಿ ರಸ ರುಚಿಗಳ ಬಗ್ಗೆ ವಿವೇಕಿತನವಿರುವುದಿಲ್ಲ. ಈ ಬಗೆಯಾಗಿ ಅಸಮತೆಯ ಗುಣ ಬಾಳಿಗೆ ಉಪಯುಕ್ತವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If hunger doesn’t spur us we do not get up and walk,
Without desire for delicious dishes, hunger is quite uninteresting,
Without variety in tastes there’s no scope for joyful discrimination
Unevenness thus has its own uses – Marula Muniya (753)
(Translation from "Thus Sang Marula Muniya" by Sri. Narasimha Bhat)

Thursday, April 2, 2015

ಸ್ವೀಯ ಪರಕೀಯವೆಂಬಿಂದ್ರಿಯ ವಿಷಯವೆಂಬ (752)

ಸ್ವೀಯ ಪರಕೀಯವೆಂಬಿಂದ್ರಿಯ ವಿಷಯವೆಂಬ |
ಕಾಯ ಮಾನಸವೆಂಬ ರಸಿಕ ರಸವೆಂಬ ||
ಪ್ರೇಯಸೀ ಪ್ರಿಯವೆಂವ ಪ್ರಕೃತಿ ಪೂರುಷರೆಂಬ |
ಮಾಯೆಯಿಂ ದ್ವಂದ್ವಜಗ - ಮರುಳ ಮುನಿಯ || (೭೫೨)

(ಪರಕೀಯ+ಎಂಬ+ಇಂದ್ರಿಯ)

ತನ್ನದು (ಸ್ವೀಯ) ಮತ್ತು ಇತರರದು (ಪರಕೀಯ) ಎನ್ನುವ, ಇಂದ್ರಿಯ ಮತ್ತು ಭೋಗಭಿಲಾಷೆಗಳೆಂಬ, ದೇಹ ಮತ್ತು ಮನಸ್ಸು ಎನ್ನುವ, ರಸಗಳನ್ನು ಅಸ್ವಾದಿಸುವವನು ಮತ್ತು ರಸ ರುಚಿಗಳೆಂಬ, ಪ್ರಿಯೆ ಮತ್ತು ಪ್ರಯಕರ ಎಂಬ ಮತ್ತು ಪ್ರಕೃತಿ ಮತ್ತು ಪುರುಷ ಎನ್ನುವ, ಮಾಯೆಯ ಆಟದಿಂದ ಈ ಜಗತ್ತಿನ ವಿರುದ್ಧ ಜೋಡಿಗಳು ಮಾಡಲ್ಪಟ್ಟಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dualities like the akin and the alien, senses and sense of objects,
Body and mind, beauty and love of beauty
The beloved and lover, Nature and Master of Nature
This whole world of dualities stems from Maya – Marula Muniya (752)
(Translation from "Thus Sang Marula Muniya" by Sri. Narasimha Bhat)

Tuesday, March 31, 2015

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ (751)

ತನ್ನ ಜೊತೆಗಿನ್ನೊರ‍್ವನಿರದೆ ಬಾಳ್ ಸವಿಯಿಲ್ಲ |
ಇನ್ನೊರ‍್ವನಿರಲನ್ಯತನವಿಲ್ಲದಿಲ್ಲ ||
ಅನ್ಯಮನವಿರೆ ಭಿನ್ನಮತ ಘರ್ಷೆಯಿರದಿಲ್ಲ |
ಭಿನ್ನದೊಳಭಿನ್ನನಿರು - ಮರುಳ ಮುನಿಯ || (೭೫೧)

(ಜೊತೆಗೆ+ಇನ್ನೊರ‍್ವನ್+ಇರದೆ)(ಇನ್ನೊರ‍್ವನ್+ಇರಲ್+ಅನ್ಯತನ+ಇಲ್ಲದೆ+ಇಲ್ಲ)(ಅನ್ಯಮನ+ಇರೆ)(ಘರ್ಷೆ+ಇರದೆ+ಇಲ್ಲ)(ಭಿನ್ನದ+ಒಳ್+ಅಭಿನ್ನನ್+ಇರು)

ಒಬ್ಬಂಟಿ ಜೀವನವು ಬೇಸರದಿಂದ ಕೂಡಿರುತ್ತದೆ. ತನ್ನ ಜೊತೆಗೆ ಸಂಗಡಿಗನೊಬ್ಬನಿದ್ದರೇನೇ ಜೀವನಕ್ಕೆ ರುಚಿ ಬರುವುದು. ಆದರೆ ಈ ರೀತಿಯಾಗಿ ಸಂಗಡಿಗನಿದ್ದರೂ ಸಹ, ಪ್ರತ್ಯೇಕತನ ಇದ್ದೇ ಇರುತ್ತದೆ. ಪ್ರತ್ಯೇಕವಾದ ಮನಸ್ಸಿರಲಾಗಿ, ಅಭಿಪ್ರಾಯ ವ್ಯತ್ಯಾಸಗಳು(ಭಿನ್ನಮತ) ಮತ್ತೂ ತಿಕ್ಕಾಟ(ಘರ್ಷೆ)ಗಳು ಇದ್ದೇ ಇರುತ್ತವೆ. ಆದ್ದರಿಂದ ನೀನು ಮಾತ್ರ ವ್ಯತ್ಯಾಸಗಳಲ್ಲಿ(ಭಿನ್ನದೊಳ್) ಘರ್ಷೆಣೆಯುಂಟಾಗದಂತೆ ಏಕಾತ್ಮವಾಗಿ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When there’s no companion there is no sweetness in life
Sense of separateness may persist even when there’s a companion
Other minds may cause different opinions and conflicts
But remain unruffled in spite of the outside splits – Marula Muniya
(Translation from "Thus Sang Marula Muniya" by Sri. Narasimha Bhat)

Monday, March 30, 2015

ದ್ವಂದ್ವವಿರೆ ಸುಂದರತೆ ಸುಂದರತೆಯಿಂದಾಶೆ (750)

ದ್ವಂದ್ವವಿರೆ ಸುಂದರತೆ ಸುಂದರತೆಯಿಂದಾಶೆ |
ಸಂದೀಪಿಸುವುದಾಶೆ ಜೀವಿತವ ಜೀವಂ ||
ಬಂಧುತೆಯನಾಗಿಪುದು ಬಾಂಧವ್ಯ ಸಂಸಾರ |
ದ್ವಂದ್ವ ಬಂಧನ ಸೃಷ್ಟಿ - ಮರುಳ ಮುನಿಯ || (೭೫೦)

(ದ್ವಂದ್ವ+ಇರೆ)(ಸುಂದರತೆ+ಇಂದ+ಆಶೆ)(ಸಂದೀಪಿಸುವುದು+ಆಶೆ)(ಬಂಧುತೆಯನ್+ಆಗಿಪುದು)

ತದ್ವಿರುದ್ಧತೆಗಳಿಂದ ಜೀವನಕ್ಕೆ ಸೊಗಸು ಬರುತ್ತದೆ. ಈ ಸೊಗಸನ್ನು ಹೊಂದಲು ಆಶೆಗಳು ಉದ್ಭವವಾಗುತ್ತವೆ. ಈ ರೀತಿಯಾಗಿ ಜೀವಿತವನ್ನು ಜೀವವು ಸೇರಲು ಆಶೆಯು ಕಾರಣಭೂತವಾಗುತ್ತದೆ. ನೆಂಟಸ್ತಿಕೆ ಮತ್ತು ಕುಟುಂಬ ಜೀವನಗಳು ಸಂಬಂಧಗಳನ್ನು ಉಂಟುಮಾಡುತ್ತವೆ. ಹೀಗೆ ಸೃಷ್ಟಿಯೆಲ್ಲ ಸಂಕೀರ್ಣ ಬಂಧನದಿಂದ ಕೂಡಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Beauty flowers from duality and from beauty arise desires,
Desires light up our lives and souls,
Desires build up relations and family is a formation of relations
This creation is a bond of dualities – Marula Muniya (750)
(Translation from "Thus Sang Marula Muniya" by Sri. Narasimha Bhat)

Friday, March 27, 2015

ಏತಕಿಂತಿದೆ ಜಗದ್ರಚನೆಯೆಂದೆನ್ನದಿರು (749)

ಏತಕಿಂತಿದೆ ಜಗದ್ರಚನೆಯೆಂದೆನ್ನದಿರು |
ಹೇತು ಕರ್ತೃವನರಿತು ನಿನಗಪ್ಪುದೇನು? ||
ನೀತಿಯೇನೆಂದು (ಲೋಕ) ಪ್ರಕೃತದಲಿ ಹಿತದ |
ರೀತಿಯನು ಬಗೆದು ತಿಳಿ - ಮರುಳ ಮುನಿಯ || (೭೪೯)

(ಏತಕೆ+ಇಂತು+ಇದೆ)(ಜಗದ್ರಚನೆ+ಎಂದು+ಎನ್ನದಿರು)(ಕರ್ತೃವನ್+ಅರಿತು)(ನಿನಗೆ+ಅಪ್ಪುದು+ಏನು)

ಜಗತ್ತನ್ನು ಈ ರೀತಿಯಾಗಿ ಏಕೆ ನಿರ್ಮಿಸಲಾಗಿದೆ ಎಂದೆನ್ನಬೇಡ. ಜಗತ್ತನ್ನು ರಚಿಸಿದವನ ಉದ್ದೇಶಗಳನ್ನು ನೀನು ತಿಳಿದುಕೊಂಡು ಆಗಬೇಕಾಗಿರುವುದೇನು? ಸದ್ಯದ ಪ್ರಪಂಚದ ನೀತಿ ನಿಯಮಗಳು ಏನೆಂಬುದನ್ನು ಮತ್ತು ಲೋಕಕ್ಕೆ ಹಿತವಾಗಿರುವುದರ ರೀತಿಯನ್ನು ಯೋಚಿಸಿ ತಿಳಿದಿಕೊಂಡರೆ ಅಷ್ಟು ಸಾಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ask not why the world is arranged like this,
What do you gain by knowing the cause and the Creator?
Reflect on and find out your proper present duty
And the proper way to work for the world’s welfare – Marula Muniya (749)
(Translation from "Thus Sang Marula Muniya" by Sri. Narasimha Bhat)

Thursday, March 26, 2015

ದೇವನುದ್ದೇಶವೇನೆಂದೆನಲು ನೀನಾರು? (748)

ದೇವನುದ್ದೇಶವೇನೆಂದೆನಲು ನೀನಾರು? |
ಅವಶ್ಯಕವೆ ನಿನ್ನನುಜ್ಞೆಯಾತಂಗೆ? ||
ಆವುದೋ ಪ್ರಭುಚಿತ್ತವೇನೋ ಅವನ ನಿಮಿತ್ತ |
ಸೇವಕಂಗೇತಕದು? - ಮರುಳ ಮುನಿಯ || (೭೪೮)

(ದೇವನ+ಉದ್ದೇಶ+ಏನೆಂದು+ಎನಲು)(ನೀನ್+ಆರು)(ನಿನ್ನ+ಅನುಜ್ಞೆ+ಆತಂಗೆ)(ಪ್ರಭುಚಿತ್ತ+ಏನೋ)
(ಸೇವಕಂಗೆ+ಏತಕೆ+ಅದು)

ಪರಮಾತ್ಮನ ಅಭಿಪ್ರಾಯ ಮತ್ತು ಗುರಿಗಳೇನೆಂದು ಕೇಳಲು ನೀನಾರು? ನಿನ್ನ ಒಪ್ಪಿಗೆಯ (ಅನುಜ್ಞೆ) ಅವಶ್ಯಕತೆ ಅವನಿಗಿದೆಯೇನು? ಒಡೆಯ(ಪ್ರಭು)ನ ಮನಸ್ಸು (ಚಿತ್ತ) ಹೇಗಿರುವುದೋ, ಅವನ ಕಾರಣಗಳೇನಿವೆಯೋ, ಅದರ ಬಗ್ಗೆ ಸೇವಕನಾದ ನಿನಗೆ ಚಿಂತೆ ಏಕೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who are you to enquire into the intentions of God?
Is your command necessary for Him to act?
What’s in the mind of the Master? What’s the cause of His action?
Asking like this is none of the servant’s business – Marula Muniya (748)
(Translation from "Thus Sang Marula Muniya" by Sri. Narasimha Bhat)

Wednesday, March 25, 2015

ಅರಸುತ್ತ ತತ್ತ್ವವನು ಬಹುದೂರ ಚರಿಸದಿರು (747)

ಅರಸುತ್ತ ತತ್ತ್ವವನು ಬಹುದೂರ ಚರಿಸದಿರು |
ಅರಿವಿಗೆಟುಕಿದನಿತ್ತನೆಡೆಬಿಡದೆ ಚರಿಸು ||
ತರುವಿನವೊಲರಿವು ತಾನಾಗಿ ಬೆಳೆವುದು ಸಾಜ |
ಹೊರಗುಂಟೆ ಬೇರ್ ಸಸಿಗೆ - ಮರುಳ ಮುನಿಯ || (೭೪೭)

(ಚರಿಸದೆ+ಇರು)(ಅರಿವಿಗೆ+ಎಟುಕಿದನ್+ಇತ್ತನ್+ಎಡೆಬಿಡದೆ)(ತರುವಿನ+ವೊಲ್+ಅರಿವು)(ಹೊರಗೆ+ಉಂಟೆ)

ಪರಮಾತ್ಮನ ತತ್ತ್ವವನ್ನು ಹುಡುಕುತ್ತಾ ಬಹಳ ದೂರ ಹೋಗಬೇಡ. ನಿನ್ನ ತಿಳುವಳಿಕೆ ಬಂದುದನ್ನು ಆದಷ್ಟು ನಿರಂತರವಾಗಿ ಆಚರಿಸು. ಗಿಡ, ಮರ(ತರು)ಗಳಂತೆ ತಿಳುವಳಿಕೆ(ಅರಿವು)ಯೂ ಸಹ ಸಹಜವಾಗಿ ನಿನ್ನಲ್ಲಿ ಬೆಳೆಯಬೇಕು. ಒಂದು ಸಸಿಗೆ ಬೇರು ಹೊರಗಡೆ ಇರುತ್ತದೇನು? ಅದು ಸಹಜವಾಗಿ ಒಳಗಡೆಯೇ ಬೆಳೆಯುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Go not too far exploring the Truth in remote regions,
Practice regularly what you understand well,
Your knowledge has to grow naturally on its own like a tree,
Do the roots of a plant grow above ground – Marula Muniya
(Translation from "Thus Sang Marula Muniya" by Sri. Narasimha Bhat)

Tuesday, March 24, 2015

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ (746)

ಆತುರಿಸದಿರು ಮುಕ್ತಿಗಾತುರಿಸದಿರು ತತ್ತ್ವ- |
ಕಾತುರಿಸಬೇಡಾತ್ಮ ಪರಿಪಾಕಕೆಂದುಂ ||
ಆತುರಾನ್ನದೊಳರ್ಧಪಕ್ವಾತಿಪಕ್ವಗಳು |
ಯಾತನೆಗೆ ಮೂಲವಲೆ - ಮರುಳ ಮುನಿಯ || (೭೪೬)

(ಆತುರಿಸದೆ+ಇರು)(ಮುಕ್ತಿಗೆ+ಆತುರಿಸದೆ+ಇರು)(ತತ್ತ್ವಕೆ+ಆತುರಿಸಬೇಡ+ಆತ್ಮ)(ಪರಿಪಾಕಕೆ+ಎಂದುಂ)(ಆತುರ+ಅನ್ನದ+ಒಳ್+ಅರ್ಧಪಕ್ವ+ಅತಿಪಕ್ಷಗಳು)(ಮೂಲ+ಅಲೆ)

ಮೋಕ್ಷವನ್ನು ಪಡೆಯಲು ಆತುರಿಸಬೇಡ. ಪರಮಾತ್ಮನ ತತ್ತ್ವವನ್ನು ಅರಿಯಲು ಆತುರಪಡಬೇಡ. ಆತ್ಮವನ್ನು ಸಂಪೂರ್ಣವಾಗಿ ಪಕ್ವಗೊಳಿಸಲು ಆತುರದ ಕೆಲಸ ಮಾಡಿದರೆ ಆಗುವುದಿಲ್ಲ. ಅಕ್ಕಿಯನ್ನು ಬೇಯಿಸುವಾಗ ಆತುರಪಟ್ಟರೆ, ಕೆಲವು ಭಾಗದಲ್ಲಿರುವ ಅಕ್ಕಿಯು ಅರ್ಧಬೆಂದು ಕೆಲವು ಭಾಗದಲ್ಲಿರುವ ಅಕ್ಕಿಯು ಹೆಚ್ಚಾಗಿ ಬೆಂದುಹೋಗುತ್ತದೆ. ಆತುರದ ಕಾರ್ಯಗಳು ವೇದನೆಗೆ ಕಾರಣವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Hurry not for salvation and hurry not for the realization of the Truth
Hurry not for the ripening and refinement of the soul
Rice cooked in haste may become half cooked or overcooked
Hurry is the root of worry and pain – Marula Muniya
(Translation from "Thus Sang Marula Muniya" by Sri. Narasimha Bhat)

Monday, March 23, 2015

ದುರಿತಲೋಕದಿನಳಿವುದೆಂದೆನುತ ಕೇಳದಿರು (745)

ದುರಿತಲೋಕದಿನಳಿವುದೆಂದೆನುತ ಕೇಳದಿರು |
ಅರಿವರಾರದರ ಹುಟ್ಟೆಂದೊ ಮುಗಿವೆಂದೊ ||
ನೆರವೊ ನೀನದಕೆ ನೆರವಲ್ಲವೋ ಪೇಳದನು |
ಚರಿತೆ ನಿನ್ನದು ಮುಖ್ಯ - ಮರುಳ ಮುನಿಯ || (೭೪೫)
(ದುರಿತ+ಲೋಕದಿನ್+ಅಳಿವುದು+ಎಂದು+ಎನುತ)(ಅರಿವರ್+ಆರ್+ಅದರ)(ನೆರವು+ಅಲ್ಲವೋ)(ಪೇಳ್+ಅದನು)
ಜಗತ್ತಿನಿಂದ ಪಾಪ(ದುರಿತ)ಕಾರ್ಯಗಳು ಎಂದಿಗೆ ಕೊನೆಗೊಳ್ಳುತ್ತವೆಯೆಂದು ಕೇಳಬೇಡ. ಅವು ಯಾವಾಗ ಹುಟ್ಟುವುದೋ ಮತ್ತು ಎಂದಿಗೆ ಮುಗಿಯುತ್ತವೆಯೋ ಯಾರಿಗೂ ತಿಳಿಯದು. ಮುಖ್ಯವಾಗಿ ನೀನು ಆ ಕಾರ್ಯಗಳಿಗೆ ಸಹಾಯಕವಾಗಿರುವೆಯೋ ಇಲ್ಲವೋ, ಅದನ್ನು ಮೊದಲು ಹೇಳು. ಜಗತ್ತಿನಲ್ಲಿ ನೀನು ಹೇಗೆ ನಡೆದುಕೊಳ್ಳುತ್ತಿರುವೆ ಎನ್ನುವುದು ಮುಖ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ask not when sorrow and suffering would come to an end in the world,
Who knows when it started and when it will end?
But make sure whether you support it or oppose it,
Your conduct for the cause is of paramount importance – Marula Muniya (745)
(Translation from "Thus Sang Marula Muniya" by Sri. Narasimha Bhat)