Monday, July 25, 2011

ಲೋಕ ಜೀವನದೊಳೇಕೀಭವಿಸುತಂ ಪ್ರ- (44)

ಲೋಕ ಜೀವನದೊಳೇಕೀಭವಿಸುತಂ ಪ್ರ-|
ತ್ಯೇಕ ತಾನೆಂಬೆಣಿಕೆಗೆಡೆಗೊಡದೆ ಮನದಿ ||
ಸಾಕಲ್ಯ ಲೋಕದಲಿ ತನ್ನತಾಂ ಮರೆತಿರ‍್ಪ |
ನಾಕಾಶದಿಂ ಮೇಲೆ -ಮರುಳ ಮುನಿಯ || (೪೪)

 ‎(ಜೀವನದ+ಒಳು+ಏಕೀಭವಿಸುತಂ)(ತಾ​ನ್+ಎಂಬ+ಎಣಿಕೆಗೆ+ಎಡೆಗೊಡದೆ)
(ಮರೆತಿರ‍್ಪನ್+ಆಕಾಶದಿಂ)

ಪರಮಾತ್ಮನು ಪ್ರಪಂಚದ ಜೀವನದಲ್ಲಿ ಒಂದಾಗಿರುತ್ತ (ಏಕೀಭವಿಸುತಂ), ತಾನೇ ಬೇರೆ ಎಂಬ ಆಲೋಚನೆಗೆ ತನ್ನ ಮನಸ್ಸಿನಲ್ಲಿ ಆಸ್ಪದವನ್ನು ಕೊಡದೆ, ಪರಿಪೂರ್ಣ (ಸಾಕಲ್ಯ) ಲೋಕದಲ್ಲಿ ತನ್ನನ್ನು ತಾನೇ ಮರೆತು ಆಕಾಶದ ಮೇಲಿರುವನು.

ಎರಡು ಪಕ್ಕಗಳು ನಿನ್ನ ಜೀವನದ ಪಾಂಥಕ್ಕೆ (43)

ಎರಡು ಪಕ್ಕಗಳು ನಿನ್ನ ಜೀವನದ ಪಾಂಥಕ್ಕೆ |
ಪರತತ್ತ್ವವೊಂದು ಲೋಕದ ಮಾಯೆಯೊಂದು ||
ತೊರೆಯಲಾಗದು ನೀನದಾವುದನು ನಿಚ್ಚಮುಂ |
ಮರೆಯ ಬೇಡೊಂದನುಂ - ಮರುಳ ಮುನಿಯ || (೪೩)



(ತೊರೆಯಲು+ಆಗದು)(ನೀನು+ಅದು+ಆ​ವುದನು)(ಬೇರೆ+ಒಂದನುಂ)

ನಿನ್ನ ಜೀವನದ ದಾರಿಗೆ (ಪಾಂಥಕ್ಕೆ) ಎರಡು ಪಕ್ಕಗಳಿವೆ. ಪರಮಾತ್ಮನ ಸತ್ತ್ವ ಒಂದು ಮತ್ತು ಈ ಪ್ರಪಂಚದ ಮಾಯೆ ಇನ್ನೊಂದು. ನೀನು ಯಾವಾಗಲೂ (ನಿಚ್ಚಮುಂ) ಈ ಯಾವುದನ್ನೂ ಬಿಡಲಾಗುವುದಿಲ್ಲ. ನೀನು ಇವೆರಡನ್ನೂ ನಿಭಾಯಿಸಲೇಬೇಕು. ಆದುದರಿಂದ ಇವೆರಡರಲ್ಲಿ ಯಾವುದೊಂದನ್ನೂ ಮರೆಯಬೇಡ.

ಉದಧಿಯಲಿ ನದಿನದಗಳುದಕ ಭೇದಗಳೈಕ್ಯ (42)

ಉದಧಿಯಲಿ ನದಿನದಗಳುದಕ ಭೇದಗಳೈಕ್ಯ |
ಬದುಕಿನಲಿ ಮತ(ರೀತಿ)ಭೇದಂಗಳೈಕ್ಯ ||
ಸಮದಲಾತ್ಮದೊಳೆಲ್ಲ ಲೋಕಭೇದಗಳೈಕ್ಯ |
ಇದಿರಿಗಿಹುದೇಕಾತ್ಮ - ಮರುಳ ಮುನಿಯ || (೪೨)



(ನದಿನದಗಳಾ+ಉದಕ)(ಭೇದಗಳೂ+ಐಕ್​ಯ)(ಭೇದಂಗಳೂ+ಐಕ್ಯ)(ಸಮದಲ+ಆತ್ಮ​ದ+ಒಳು+ಎಲ್ಲ)(ಲೋಕಭೇದಗಳು+ಐಕ್ಯ​)(ಇದಿರಿಗೆ+ಇಹುದು+ಏಕಾತ್ಮ)

ಹೆಣ್ಣು ನದಿ ಮತ್ತು ಗಂಡು ನದಿ(ನದ)ಗಳ ನೀರು(ಉದಕ)ಗಳ ವ್ಯತ್ಯಾಸಗಳು (ಭೇದಗಳು) ಅವು ಸಮುದ್ರ (ಉಧದಿ)ವನ್ನು ಸೇರಿದ ತಕ್ಷಣ ಮರೆಯಾಗಿ ಹೋಗುತ್ತವೆ. ಹಾಗೆಯೇ ನಮ್ಮ ದಿನನಿತ್ಯದ ಜೀವನದಲ್ಲಿಯೂ ಸಹ ವಿಧವಿಧವಾದ ವಿಚಾರ ಮತ್ತು ರೀತಿಗಳ ವ್ಯತ್ಯಾಸಗಳು ಸಮರಸಗೊಳ್ಳುತ್ತವೆ. ನಿರ್ಮಲ ಮತ್ತು ಪವಿತ್ರ(ಸಮದಲ)ವಾಗಿರುವ ಆತ್ಮದ ಒಳಗೆ ಈ ಪ್ರಪಂಚದ ವ್ಯತ್ಯಾಸಗಳೆಲ್ಲವೂ ಒಂದಾಗಿಹೋಗುತ್ತವೆ. ನಮ್ಮಗಳ ಎದುರಿನಲ್ಲಿ (ಇದಿರಿಗೆ) ಇರುವುದು ಭೇಧವಿಲ್ಲದ ಒಂದೇ ಒಂದು (ಏಕ) ಆತ್ಮ, ಅದು ಪರಮಾತ್ಮ.

ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು (41)

ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು |
ಮಾನಗಳು ಮೇಯಗಳು ಪ್ರಕೃತಿ ಮಾಯೆಗಳು ||
ಭಾನಗಳಭಾನಗಳು ಪೂಜ್ಯಗಳಪೂಜ್ಯಗಳು |
ಸೂನೃತಗಳಘಬೀಜ - ಮರುಳ ಮುನಿಯ || (೪೧)



‎(ಲೀನ+ಇಹುವು+ಈಶನಲಿ)(ಭಾನುಗಳು​+ಅಭಾನಗಳು)(ಪೂಜ್ಯಗಳು+ಅಪೂಜ್ಯಗ​ಳು)(ಸೂನೃತಗಳ+ಅಘಬೀಜ)

ಪರಮಾತ್ಮನಲಿ ನಿಜ ಮತ್ತು ಸುಳ್ಳು(ಮಿಥ್ಯೆ)ಗಳು, ಅಳತೆ(ಮಾನ)ಗಳು, ಜ್ಞಾನ(ಭಾನ) ಮತ್ತು ಅಜ್ಞಾನಗಳು (ಅಭಾನಗಳು), ಪೂಜಿಸಲ್ಪಡತಕ್ಕುವು ಮತ್ತು ಪೂಜಿಸಲ್ಪಡಬಾರದವು ಸೇರಿಹೋಗಿವೆ. ಅವನು ಹೀಗೆ ಸತ್ಯವೂ ಹಿತವೂ ಆದ ಪುಣ್ಯ (ಸೂನೃತ) ಮತ್ತು ಪಾಪಗಳ (ಅಘ) ಉತ್ಪತ್ತಿಸ್ಥಾನಕಾರ(ಬೀಜ)ನಾಗಿರ​ುವನು.

Monday, July 18, 2011

ರಸಭಾಂಡವೀ ಲೋಕ ರಸಲೋಲುಪನು ಶಿವನು (40)

ರಸಭಾಂಡವೀ ಲೋಕ ರಸಲೋಲುಪನು ಶಿವನು |
ಕುಸುಮಗಳು ಜೀವಿಗಳು ಬಗೆಬಗೆಯ ಮಧುವು ||
ಹಸಿದನವೊಲೊಂದೊಂದನುಂ ಬಿಡದೆ ಸವಿಪನಾ-|
ಪಶುಪತಿಯೊ ರಸಪತಿಯೊ-ಮರುಳ ಮುನಿಯ || (೪೦)

(ರಸಭಾಂಡವು+ಈ)(ಹಸಿದನವೊಲು+ಒಂದು+ಒಂದನುಂ)(ಸವಿಪನು+ಆ)

ಈ ಪ್ರಪಂಚವು ಒಂದು ರಸ ತುಂಬಿದ ಪಾತ್ರೆ(ರಸಭಾಂಡ). ಪರಮಾತ್ಮನಾದರೋ ಈ ರಸವನ್ನು ಸವಿಯುವುದರಲ್ಲಿ ಅತಿಶಯವಾದ ಆಸಕ್ತಿ(ಲೋಲುಪ)ಯುಳ್ಳವನು. ಜಗತ್ತಿನಲ್ಲಿ ಹಲವಾರು ವಿಧವಿಧವಾದ ಹೂವುಗಳು, ಜೀವಿಗಳು ಮತ್ತು ಮಕರಂದಗಳಿವೆ. ಬಹಳವಾಗಿ ಹಸಿದಿರುವವನಂತೆ ಯಾವುದೇ ಒಂದು ಪದಾರ್ಥವನ್ನು ಬಿಡದೆ ಎಲ್ಲವನ್ನೂ ಪರಮಾತ್ಮನು ಸವಿಯುತ್ತಾನೆ. ಈ ರೀತಿಯಾಗಿ ಸವಿಯುವವನನ್ನು ಪಶುಪತಿಯೆಂದು ಕರೆಯೆಬೇಕೊ ಅಥವಾ ರಸಪತಿಯೆಂದೆನ್ನಬೇಕೋ ತಿಳಿಯುತ್ತಿಲ್ಲ.

ತವಿಸುಗೆ ಹರಿಶ್ಚಂದ್ರನಳುತಿರ‍್ಕೆ ಚಂದ್ರಮತಿ (39)

ತವಿಸುಗೆ ಹರಿಶ್ಚಂದ್ರನಳುತಿರ‍್ಕೆ ಚಂದ್ರಮತಿ |
ಧವನ ನೆನೆದಲೆದಾಡುತಿರ‍್ಕೆ ದಮಯಂತಿ ||
ಕುವರನಳಿಯೆ ಸುಭದ್ರೆ ಫಲುಗುಣರ್‌ಗೋಳಿಡುಗೆ |
ಶಿವನಿಗದು ನವರುಚಿಯೊ - ಮರುಳ ಮುನಿಯ || (೩೯)

(ಹರಿಶ್ಚಂದ್ರನು+ಅಳುತ+ಇರ‍್ಕೆ)(ನೆನೆದು+ಅಲೆದಾಡುತ+ಇರ‍್ಕೆ)(ಕುವರನು+ಅಳಿಯೆ)
(ಫಲುಗುಣರ್+ಗೋಳ್+ಇಡುಗೆ)(ಶಿವನಿಗೆ+ಅದು)

ತನಗೆ ಒದಗಿದ ದುರ್ದಶೆಯನ್ನು ಕುರಿತು ಪರಿತಪಿಸು(ತವಿಸು)ತ್ತಿದ್ದ ರಾಜಾ ಹರಿಶ್ಚಂದ್ರನನ್ನು ಕಂಡು ಅವನ ಪತ್ನಿ ರಾಣಿ ಚಂದ್ರಮತಿಯೂ ಅಳುತ್ತಿರುವುದು, ಮರೆಯಾದ ಪತಿ(ಧವ) ನಳ ಮಹಾರಾಜನನ್ನು ಸ್ಮರಿಸಿಕೊಂಡು ಅವನ ಪತ್ನಿ ದಮಯಂತಿಯು ಅವನನ್ನು ಹುಡುಕಿಕೊಂಡು ಅಲೆದಾಡುತ್ತಿರುವುದು, ತಮ್ಮ ತನಯನಾದ ಅಭಿಮನ್ಯುವು, ಚಕ್ರವ್ಯೂಹದಿಂದ ಹೊರಬರಲಾಗದೆ ಕುರುಕ್ಷೇತ್ರ ಯುದ್ಧದಲ್ಲಿ ಮರಣವನ್ನಪ್ಪಲು, ತಾಯಿ ತಂದೆಯರಾದ ಸುಭದ್ರೆ ಮತ್ತು ಅರ್ಜುನ(ಫಲುಗುಣ)ರು ಗೋಳಿಡುತ್ತಿರುವುದು.. ಪರಮಾತ್ಮನಿಗೆ ಇವುಗಳು ಹೊಸ ರುಚಿಯಾಗಿ ತೋರುತ್ತದೆ.

ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಈ ಪ್ರಪಂಚದಲ್ಲಿ ನಡೆಯುವ ಎಲ್ಲಾ ಆಗುಹೋಗುಗಳೂ ಆ ಭಗವಂತನಿಗೆ ಗೊತ್ತಿಲ್ಲದೇ ನಡೆಯುತ್ತಿರುವುದಿಲ್ಲ. ಸುಖ,ದುಃಖ,ಅಳು,ನಗು ಎಲ್ಲವೂ ಆ ಭಗವಂತನ ಲೀಲೆಯೇ.

ದಶಮುಖನ ಕಾಮಾಂಧ್ಯ ಕುರುಪತಿಯ ಲೋಭಾಂದ್ಯ (38)

ದಶಮುಖನ ಕಾಮಾಂಧ್ಯ ಕುರುಪತಿಯ ಲೋಭಾಂದ್ಯ |
ಕುಶಿಕಜನ ತಪದುರುಬು ಮೋಹದುರುಬುಗಳು ||
ರುಷೆಯೊ ರುಜಿವನೊ ರಿಕ್ತತೆಯೊ ರಾಗಚೇಷ್ಟೆಗಳೊ |
ರಸದೂಟ ಶಿವನಿಗದು - ಮರುಳ ಮುನಿಯ || (೩೮)

(ಕಾಮ+ಆಂಧ್ಯ)(ಲೋಭ+ಆಂದ್ಯ)(ತಪದ+ಉರುಬು)(ಮೋಹದ+ಉರುಬುಗಳು)(ರಸದ+ಊಟ)

ಸೀತೆಯ ಮೇಲಿನ ಕಾಮದಿಂದ ಕುರುಡನಾದ ರಾವಣ(ದಶಮುಖ), ಸಕಲ ಸಾಮ್ರಾಜ್ಯಕ್ಕೂ ತಾನು ಮಾತ್ರ ಅಧಿಪತಿಯಾಗಬೇಕೆಂಬ ದುರ್ಯೋಧನ (ಕುರುಪತಿ)ನ ಅತ್ಯಾಸೆಯಿಂದ ಆದ ಕುರುಡುತನ, ಬ್ರಹ್ಮರ್ಷಿ ಪದವಿ ಪಡೆಯಲು ವಿಶ್ವಾಮಿತ್ರ(ಕುಶಿಕಜ) ಋಷಿ ಮಾಡಿದ ತಪಸ್ಸಿನ ತೀವ್ರತೆ ಮತ್ತು ಮೈಮರೆಯುವಂತಹ ಪರಾಕ್ರಮಗಳು. ಇವುಗಳಿಂದ ಆಗುವ ರೋಷಗಳೋ (ರುಷೆಯೊ), ಬೇನೆಗಳೋ (ರುಜಿನವೊ), ಬಡತನವೋ (ರಿಕ್ತಿತೆಯೊ) ಅಥವಾ ಪ್ರೀತಿ ಮತ್ತು ಸಂತೋಷ(ರಾಗ)ಗಳಿಂದ ಕೂಡಿದ ಸರಸಗಳೋ, ಇವುಗಳು ಪರಮಾತ್ಮನಿಗೆ ಮಾತ್ರ ಮೃಷ್ಟಾನ್ನ ಭೋಜನ ಸವಿದಂತೆನ್ನಿಸುತ್ತದೆ.

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ (37)

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ |
ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು ||
ಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳ |
ತಣ್ಣಗಿರುವನು ಶಿವನು - ಮರುಳ ಮುನಿಯ || (೩೭)

(ಚಿಣ್ಣರ+ಆಟ+ಎನೆ)(ತಣ್ಣಗೆ+ಇರುವನು)

ನೀನು ಅತ್ತು ಕಣ್ಣೀರನ್ನು ಸುರಿಸಬಹುದು, ಕೋಪಿಸಿಕೊಂಡು ರೇಗಬಹುದು, ಹೊರಾಡಬಹುದು, ಇತರರನ್ನು ಕೊಲ್ಲಬಹುದು ಮತ್ತು ನೀನೇ ಇತರರಿಂದ ಕೊಲ್ಲಲ್ಪಡಬಹುದು. ನಿನ್ನ ಪಾಂಡಿತ್ಯವನ್ನು ಪ್ರದರ್ಶಿಸಬಹುದು (ಬಿನ್ನಣಿಸು), ಇಷ್ಟಾರ್ಥಗಳನ್ನು ಪಡೆಯುವುದಕ್ಕೋಸ್ಕರ ಹಂಬಲಿಸಿ ಬೇಡಿಕೊಳ್ಳಬಹುದು, ಕಷ್ಟಪಟ್ಟು ಕೆಲಸ ಮಾಡಬಹುದು, ಹೆದರಬಹುದು (ಬೆದರು) ಮತ್ತು ಗರ್ವದಿಂದ ಸಂತೋಷಿಸಬಹುದು (ಬೀಗು). ನೀನು ಏನು ಬೇಕಾದರೂ ಮಾಡಬಹುದು. ಆದರೆ ಇವುಗಳನ್ನು ತನ್ನ ಮಕ್ಕಳ (ಚಿಣ್ಣರ) ಆಟವೆಂದುಕೊಂಡು, ನೀನು ನಿನ್ನ ಪಾಲಿಗೆ ಬಂದ ಅವಸ್ಥೆಯನ್ನು ಅನುಭವಿಸೆಂದು, ಪರಮಾತ್ಮನು ತೆಪ್ಪಗಿದ್ದುಬಿಡುತ್ತಾನೆ.

Thursday, July 7, 2011

ಅಕ್ಷಯಾಖಂಡ ನಿರ್ಲಿಪ್ತ ವಸ್ತುವೋ ಶಿವನು (36)

ಅಕ್ಷಯಾಖಂಡ ನಿರ್ಲಿಪ್ತ ವಸ್ತುವೋ ಶಿವನು |
ಶಿಕ್ಷೇರಕ್ಷೇಗಳವನ ಲಕ್ಷಣವೇನಿಪ್ಪಾ ||
ವಿಕ್ಷೆಪಮುಂ ಬ್ರಹ್ಮನಾಟಕ ಭ್ರಮೆಯಂಶ |
ಸಾಕ್ಷಿಮಾತ್ರನೋ ಶಿವನು - ಮರುಳ ಮುನಿಯ || (೩೬)

(ಅಕ್ಷಯ+ಅಖಂಡ) (ಶಿಕ್ಷೇರಕ್ಷೇಗಳು+ಅವನ) (ಲಕ್ಷಣ+ಏನಿಪ್ಪ+) (ಭ್ರಮೆಯ+ಅಂಶ)

 ನಾಶವಾಗದಂತಹ(ಅಕ್ಷಯ), ಪೂರ್ಣವಾಗಿರುವ (ಅಖಂಡ) ಮತ್ತು ನೀರಿನಲ್ಲಿರುವ ಕಮಲದ ಏಲೇಯಂತೇ ಯಾವುದಕ್ಕೂ ಅಂಟಿಕೋಳ್ಳದೇ, ಅನಾಸಕ್ತನಾಗಿರುವ ವಸ್ತು (ನಿರ್ಲಿಪ್ತ) ಪರಮಾತ್ಮ. ದುಷ್ಟರನ್ನು ಶಿಕ್ಷೇಗೇ ಗುರಿಪಡಿಸುವ ಮತ್ತು ಶಿಷ್ಟರನ್ನು ರಕ್ಷಿಸುವುದು ಅವನ ಲಕ್ಷಣಗಳೇನ್ನಿಸುವ ವಿವಿಧಕಾರ್ಯ(ವಿಕ್ಷೆಪಮುಂ)ಗಳು ಈ ಬ್ರಹ್ಮಾಂಡ ನಾಟಕದಲ್ಲಿ ನಡೇಯುತ್ತಿರುವ ಭ್ರಾಂತಿ(ಭ್ರಮೇ)ಯ ಓಂದು ಭಾಗ (ಅಂಶ). ಪರಮಾತ್ಮನಾದರೊ ಇದಕ್ಕೇ ಸಾಕ್ಷಿ ಮಾತ್ರ.

Tuesday, July 5, 2011

ಇರುವೊಂದು ಮೆರೆವೊಂದು ಅರಿವೊಂದು ಮೂರನುಂ (35)

ಇರುವೊಂದು ಮೆರೆವೊಂದು ಅರಿವೊಂದು ಮೂರನುಂ |
ಪೊರುವೊಂದು ಪರಿಕಿಸಿದರರ್ಥವಂ ಮರುಳೆ ||
ಇರುವುದದು ಸತ್ಯ ಮೆರೆವುದು ಲೋಕ ಅರಿವಾತ್ಮ |
ವೊರುವುದೇ ಬ್ರಹ್ಮವನು -ಮರುಳ ಮುನಿಯ || (೩೫)

 (ಇರುವು+ಒಂದು)(ಮೆರೆವು+ಒಂದು)(ಅರಿವು+ಒಂದು)(ಪೊರು+ಒಂದು)(ಪರಿಕಿಸು+ಇದರ+ಅರ್ಥವನು)
(ಇರುವುದು+ಅದು)(ಅರಿವು+ಆತ್ಮ)

 ಶ್ರೇಷ್ಠವಾದದ್ದು ಒಂದು, ಎದ್ದುತೋರುವ ಚೈತನ್ಯವಿನ್ನೊಂದು, ಜ್ಞಾನ ಮತ್ತೊಂದು. ಈ ಮೂರನ್ನು ಹೊರುವುದು ಒಂದಿದೆ. ಇದರ ಅರ್ಥವನ್ನು ಪರೀಕ್ಷಿಸು. ಓ ದಡ್ಡ! ಶ್ರೇಷ್ಠನಾಗಿ ಇರುವುದೇ ಸತ್ಯ. ಎದ್ದು ತೋರುವ ಚೈತನ್ಯವೇ ಈ ಪ್ರಪಂಚ. ಅರಿವು ಆತ್ಮ. ಆದರೆ ಇವೆಲ್ಲವನ್ನು ಹೊರುವುದೇ ಆ ಪರಬ್ರಹ್ಮ.