Monday, August 1, 2011

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ (46)

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ |
ಲೇಶದೊಳಗರಸುವೆಯ ರಾಶಿಯಮಿತವನು ? ||
ರಾಶಿಯೆಲ್ಲವ ಕಾಣ್ಬೊಡದರೊಳಗೆ ಕರಗಿ ಬೆರೆ |
ನಾಶವಕ್ಕೆ ಪೃಥಕ್ತ್ವ - ಮರುಳ ಮುನಿಯ || (೪೬)



‎(ಈಶನ+ಇಚ್ಛೆ)(ನೀನು+ಅದರ+ಒಳು+​ಒಂದು)(ಲೇಶದ+ಒಳಗೆ+ಅರಸುವೆಯ)
(ರಾಶಿಯ+ಅಮಿತವನು)(ಕಾಣ್ಬೊಡೆ+ಅ​ದರ+ಒಳಗೆ)

ಪರಮಾತ್ಮನ ಅಪೇಕ್ಷೆ(ಇಚ್ಛೆ)ಯಿಂದ ಈ ಬ್ರಹ್ಮಾಂಡ ಸಾಗರದ ನಿರ್ಮಾಣವಾಗಿದೆ. ನೀನು ಆ ಸಾಗರದ ಒಂದು ಸಣ್ಣ ಕಣ ಮಾತ್ರ. ಹೀಗಿರುವಾಗ, ಈ ಸ್ವಲ್ಪ(ಲೇಶ)ದರಲ್ಲಿ ನೀನು ರಾಶಿಯ ಅಪಾರತೆ(ಅಮಿತ)ಯನ್ನು ಹುಡುಕು(ಅರಸು)ವೆಯೇನು? ಇದು ಅಸಾಧ್ಯವಾದ ಕೆಲಸ. ನೀನಾದರೋ ಒಂದು ಕಣ. ಅದು ಅಪಾರ ರಾಶಿ. ಈ ಸಂಪೂರ್ಣ ರಾಶಿಯನ್ನು ಕಾಣಬೇಕೆಂದರೆ, ನೀನು ಅದರ ಒಳಗೆ ಕರಗಿ ಬೆರೆತು ಹೋಗು. ಯಾವಾಗ ನೀನು ಅದರ ಒಂದು ಭಾಗವಾಗುವೆಯೋ ಆವಾಗ ನೀನು ರಾಶಿಯ ಅಪಾರತೆಯನ್ನು ಕಾಣಲಿಕ್ಕಾಗುತ್ತದೆ. ಈ ಕರಗುವಿಕೆಯಲ್ಲಿ ನಿನಗೆ ಇನ್ನೂ ಒಂದು ಲಾಭ ಉಂಟು. ಅದು, ನಿನ್ನ ಅಹಂ ಮತ್ತು ಬೇರೆತನದ ಅರಿವು(ಪೃಥಕ್ತ್ವ) ನಾಶವಾಗಲಿಕ್ಕೆ ಕಾರಣವಾಗುತ್ತದೆ.

ಕ್ಷಣವಮೂರ್ತಾನಂತ ಕಾಲದುಪಕೃತಿ ಮೂರ್ತಿ (45)

ಕ್ಷಣವಮೂರ್ತಾನಂತ ಕಾಲದುಪಕೃತಿ ಮೂರ್ತಿ |
ಕಣವಮೇಯಾದಿ ವಸ್ತುವಿನಮೇಯಮುಖ ||
ಕ್ಷಣಿಕವನುಪೇಕ್ಷಿಪೆಯ? ಗಮಕವದನಂತಕ್ಕೆ |
ಅಣು ಮಹತ್ಪ್ರತಿನಿಧಿಯೊ - ಮರುಳ ಮುನಿಯ || (೪೫)



(ಕ್ಷಣವು+ಅಮೂರ್ತ+ಅನಂತ)(ಕಾಲದ​+ಉಪಕೃತಿ)(ಕಣವು+ಅಮೇಯ+ಆದಿ)
(ಕ್ಷಣಿಕವನು+ಉಪೇಕ್ಷಿಪೆಯ)(ಗಮಕ​ವದು+ಅನಂತಕ್ಕೆ)(ಮಹತ್+ಪ್ರತಿನಿ​ಧಿಯೊ)

ಕ್ಷಣ ಎನ್ನುವುದಕ್ಕೆ ಆಕಾರವಿಲ್ಲ (ಅಮೂರ್ತ) ಮತ್ತು ಅದಕ್ಕೆ ಕೊನೆಯೂ ಇಲ್ಲ (ಅನಂತ). ಸಮಯದ ನೆರವಿನಿಂದ (ಉಪಕೃತಿ) ಮೂರ್ತಿಯು ದೊರಕುತ್ತದೆ. ಕಣವು ಅಳೆತಕ್ಕೆ ಸಿಗದಂತಹ (ಅಮೇಯ) ಪದಾರ್ಥದ, ಅಳೆತಕ್ಕೆ ಸಿಗುವ (ಮೇಯ) ಮುಖ. ಅಶಾಶ್ವತ(ಕ್ಷಣಿಕ)ವಾಗಿರುವುದನ್​ನು ನೀನು ಅಲಕ್ಷಿಸುವೆಯೇನು (ಉಪೇಕ್ಷಿಪೆಯ)? ಶಾಶ್ವತವಾಗಿರುವುದಕ್ಕೆ (ಅನಂತ) ಅದು ಸಾಕ್ಷಿ (ಗಮಕ). ಏಕೆಂದರೆ ಕ್ಷಣಿಕವಾಗಿರುವುದರಿಂದ ನಾವು ಶಾಶ್ವತವಾಗಿರುವುದರ ಇರುವಿಕೆಯನ್ನು ತಿಳಿಯಬಹುದು. ಇಲ್ಲದಿದ್ದರೆ ಇಲ್ಲ. ಅಣು ಇದರ ಮಹತ್ತಿನ ಪ್ರತಿನಿಧಿ.

Monday, July 25, 2011

ಲೋಕ ಜೀವನದೊಳೇಕೀಭವಿಸುತಂ ಪ್ರ- (44)

ಲೋಕ ಜೀವನದೊಳೇಕೀಭವಿಸುತಂ ಪ್ರ-|
ತ್ಯೇಕ ತಾನೆಂಬೆಣಿಕೆಗೆಡೆಗೊಡದೆ ಮನದಿ ||
ಸಾಕಲ್ಯ ಲೋಕದಲಿ ತನ್ನತಾಂ ಮರೆತಿರ‍್ಪ |
ನಾಕಾಶದಿಂ ಮೇಲೆ -ಮರುಳ ಮುನಿಯ || (೪೪)

 ‎(ಜೀವನದ+ಒಳು+ಏಕೀಭವಿಸುತಂ)(ತಾ​ನ್+ಎಂಬ+ಎಣಿಕೆಗೆ+ಎಡೆಗೊಡದೆ)
(ಮರೆತಿರ‍್ಪನ್+ಆಕಾಶದಿಂ)

ಪರಮಾತ್ಮನು ಪ್ರಪಂಚದ ಜೀವನದಲ್ಲಿ ಒಂದಾಗಿರುತ್ತ (ಏಕೀಭವಿಸುತಂ), ತಾನೇ ಬೇರೆ ಎಂಬ ಆಲೋಚನೆಗೆ ತನ್ನ ಮನಸ್ಸಿನಲ್ಲಿ ಆಸ್ಪದವನ್ನು ಕೊಡದೆ, ಪರಿಪೂರ್ಣ (ಸಾಕಲ್ಯ) ಲೋಕದಲ್ಲಿ ತನ್ನನ್ನು ತಾನೇ ಮರೆತು ಆಕಾಶದ ಮೇಲಿರುವನು.

ಎರಡು ಪಕ್ಕಗಳು ನಿನ್ನ ಜೀವನದ ಪಾಂಥಕ್ಕೆ (43)

ಎರಡು ಪಕ್ಕಗಳು ನಿನ್ನ ಜೀವನದ ಪಾಂಥಕ್ಕೆ |
ಪರತತ್ತ್ವವೊಂದು ಲೋಕದ ಮಾಯೆಯೊಂದು ||
ತೊರೆಯಲಾಗದು ನೀನದಾವುದನು ನಿಚ್ಚಮುಂ |
ಮರೆಯ ಬೇಡೊಂದನುಂ - ಮರುಳ ಮುನಿಯ || (೪೩)



(ತೊರೆಯಲು+ಆಗದು)(ನೀನು+ಅದು+ಆ​ವುದನು)(ಬೇರೆ+ಒಂದನುಂ)

ನಿನ್ನ ಜೀವನದ ದಾರಿಗೆ (ಪಾಂಥಕ್ಕೆ) ಎರಡು ಪಕ್ಕಗಳಿವೆ. ಪರಮಾತ್ಮನ ಸತ್ತ್ವ ಒಂದು ಮತ್ತು ಈ ಪ್ರಪಂಚದ ಮಾಯೆ ಇನ್ನೊಂದು. ನೀನು ಯಾವಾಗಲೂ (ನಿಚ್ಚಮುಂ) ಈ ಯಾವುದನ್ನೂ ಬಿಡಲಾಗುವುದಿಲ್ಲ. ನೀನು ಇವೆರಡನ್ನೂ ನಿಭಾಯಿಸಲೇಬೇಕು. ಆದುದರಿಂದ ಇವೆರಡರಲ್ಲಿ ಯಾವುದೊಂದನ್ನೂ ಮರೆಯಬೇಡ.

ಉದಧಿಯಲಿ ನದಿನದಗಳುದಕ ಭೇದಗಳೈಕ್ಯ (42)

ಉದಧಿಯಲಿ ನದಿನದಗಳುದಕ ಭೇದಗಳೈಕ್ಯ |
ಬದುಕಿನಲಿ ಮತ(ರೀತಿ)ಭೇದಂಗಳೈಕ್ಯ ||
ಸಮದಲಾತ್ಮದೊಳೆಲ್ಲ ಲೋಕಭೇದಗಳೈಕ್ಯ |
ಇದಿರಿಗಿಹುದೇಕಾತ್ಮ - ಮರುಳ ಮುನಿಯ || (೪೨)



(ನದಿನದಗಳಾ+ಉದಕ)(ಭೇದಗಳೂ+ಐಕ್​ಯ)(ಭೇದಂಗಳೂ+ಐಕ್ಯ)(ಸಮದಲ+ಆತ್ಮ​ದ+ಒಳು+ಎಲ್ಲ)(ಲೋಕಭೇದಗಳು+ಐಕ್ಯ​)(ಇದಿರಿಗೆ+ಇಹುದು+ಏಕಾತ್ಮ)

ಹೆಣ್ಣು ನದಿ ಮತ್ತು ಗಂಡು ನದಿ(ನದ)ಗಳ ನೀರು(ಉದಕ)ಗಳ ವ್ಯತ್ಯಾಸಗಳು (ಭೇದಗಳು) ಅವು ಸಮುದ್ರ (ಉಧದಿ)ವನ್ನು ಸೇರಿದ ತಕ್ಷಣ ಮರೆಯಾಗಿ ಹೋಗುತ್ತವೆ. ಹಾಗೆಯೇ ನಮ್ಮ ದಿನನಿತ್ಯದ ಜೀವನದಲ್ಲಿಯೂ ಸಹ ವಿಧವಿಧವಾದ ವಿಚಾರ ಮತ್ತು ರೀತಿಗಳ ವ್ಯತ್ಯಾಸಗಳು ಸಮರಸಗೊಳ್ಳುತ್ತವೆ. ನಿರ್ಮಲ ಮತ್ತು ಪವಿತ್ರ(ಸಮದಲ)ವಾಗಿರುವ ಆತ್ಮದ ಒಳಗೆ ಈ ಪ್ರಪಂಚದ ವ್ಯತ್ಯಾಸಗಳೆಲ್ಲವೂ ಒಂದಾಗಿಹೋಗುತ್ತವೆ. ನಮ್ಮಗಳ ಎದುರಿನಲ್ಲಿ (ಇದಿರಿಗೆ) ಇರುವುದು ಭೇಧವಿಲ್ಲದ ಒಂದೇ ಒಂದು (ಏಕ) ಆತ್ಮ, ಅದು ಪರಮಾತ್ಮ.

ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು (41)

ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು |
ಮಾನಗಳು ಮೇಯಗಳು ಪ್ರಕೃತಿ ಮಾಯೆಗಳು ||
ಭಾನಗಳಭಾನಗಳು ಪೂಜ್ಯಗಳಪೂಜ್ಯಗಳು |
ಸೂನೃತಗಳಘಬೀಜ - ಮರುಳ ಮುನಿಯ || (೪೧)



‎(ಲೀನ+ಇಹುವು+ಈಶನಲಿ)(ಭಾನುಗಳು​+ಅಭಾನಗಳು)(ಪೂಜ್ಯಗಳು+ಅಪೂಜ್ಯಗ​ಳು)(ಸೂನೃತಗಳ+ಅಘಬೀಜ)

ಪರಮಾತ್ಮನಲಿ ನಿಜ ಮತ್ತು ಸುಳ್ಳು(ಮಿಥ್ಯೆ)ಗಳು, ಅಳತೆ(ಮಾನ)ಗಳು, ಜ್ಞಾನ(ಭಾನ) ಮತ್ತು ಅಜ್ಞಾನಗಳು (ಅಭಾನಗಳು), ಪೂಜಿಸಲ್ಪಡತಕ್ಕುವು ಮತ್ತು ಪೂಜಿಸಲ್ಪಡಬಾರದವು ಸೇರಿಹೋಗಿವೆ. ಅವನು ಹೀಗೆ ಸತ್ಯವೂ ಹಿತವೂ ಆದ ಪುಣ್ಯ (ಸೂನೃತ) ಮತ್ತು ಪಾಪಗಳ (ಅಘ) ಉತ್ಪತ್ತಿಸ್ಥಾನಕಾರ(ಬೀಜ)ನಾಗಿರ​ುವನು.

Monday, July 18, 2011

ರಸಭಾಂಡವೀ ಲೋಕ ರಸಲೋಲುಪನು ಶಿವನು (40)

ರಸಭಾಂಡವೀ ಲೋಕ ರಸಲೋಲುಪನು ಶಿವನು |
ಕುಸುಮಗಳು ಜೀವಿಗಳು ಬಗೆಬಗೆಯ ಮಧುವು ||
ಹಸಿದನವೊಲೊಂದೊಂದನುಂ ಬಿಡದೆ ಸವಿಪನಾ-|
ಪಶುಪತಿಯೊ ರಸಪತಿಯೊ-ಮರುಳ ಮುನಿಯ || (೪೦)

(ರಸಭಾಂಡವು+ಈ)(ಹಸಿದನವೊಲು+ಒಂದು+ಒಂದನುಂ)(ಸವಿಪನು+ಆ)

ಈ ಪ್ರಪಂಚವು ಒಂದು ರಸ ತುಂಬಿದ ಪಾತ್ರೆ(ರಸಭಾಂಡ). ಪರಮಾತ್ಮನಾದರೋ ಈ ರಸವನ್ನು ಸವಿಯುವುದರಲ್ಲಿ ಅತಿಶಯವಾದ ಆಸಕ್ತಿ(ಲೋಲುಪ)ಯುಳ್ಳವನು. ಜಗತ್ತಿನಲ್ಲಿ ಹಲವಾರು ವಿಧವಿಧವಾದ ಹೂವುಗಳು, ಜೀವಿಗಳು ಮತ್ತು ಮಕರಂದಗಳಿವೆ. ಬಹಳವಾಗಿ ಹಸಿದಿರುವವನಂತೆ ಯಾವುದೇ ಒಂದು ಪದಾರ್ಥವನ್ನು ಬಿಡದೆ ಎಲ್ಲವನ್ನೂ ಪರಮಾತ್ಮನು ಸವಿಯುತ್ತಾನೆ. ಈ ರೀತಿಯಾಗಿ ಸವಿಯುವವನನ್ನು ಪಶುಪತಿಯೆಂದು ಕರೆಯೆಬೇಕೊ ಅಥವಾ ರಸಪತಿಯೆಂದೆನ್ನಬೇಕೋ ತಿಳಿಯುತ್ತಿಲ್ಲ.

ತವಿಸುಗೆ ಹರಿಶ್ಚಂದ್ರನಳುತಿರ‍್ಕೆ ಚಂದ್ರಮತಿ (39)

ತವಿಸುಗೆ ಹರಿಶ್ಚಂದ್ರನಳುತಿರ‍್ಕೆ ಚಂದ್ರಮತಿ |
ಧವನ ನೆನೆದಲೆದಾಡುತಿರ‍್ಕೆ ದಮಯಂತಿ ||
ಕುವರನಳಿಯೆ ಸುಭದ್ರೆ ಫಲುಗುಣರ್‌ಗೋಳಿಡುಗೆ |
ಶಿವನಿಗದು ನವರುಚಿಯೊ - ಮರುಳ ಮುನಿಯ || (೩೯)

(ಹರಿಶ್ಚಂದ್ರನು+ಅಳುತ+ಇರ‍್ಕೆ)(ನೆನೆದು+ಅಲೆದಾಡುತ+ಇರ‍್ಕೆ)(ಕುವರನು+ಅಳಿಯೆ)
(ಫಲುಗುಣರ್+ಗೋಳ್+ಇಡುಗೆ)(ಶಿವನಿಗೆ+ಅದು)

ತನಗೆ ಒದಗಿದ ದುರ್ದಶೆಯನ್ನು ಕುರಿತು ಪರಿತಪಿಸು(ತವಿಸು)ತ್ತಿದ್ದ ರಾಜಾ ಹರಿಶ್ಚಂದ್ರನನ್ನು ಕಂಡು ಅವನ ಪತ್ನಿ ರಾಣಿ ಚಂದ್ರಮತಿಯೂ ಅಳುತ್ತಿರುವುದು, ಮರೆಯಾದ ಪತಿ(ಧವ) ನಳ ಮಹಾರಾಜನನ್ನು ಸ್ಮರಿಸಿಕೊಂಡು ಅವನ ಪತ್ನಿ ದಮಯಂತಿಯು ಅವನನ್ನು ಹುಡುಕಿಕೊಂಡು ಅಲೆದಾಡುತ್ತಿರುವುದು, ತಮ್ಮ ತನಯನಾದ ಅಭಿಮನ್ಯುವು, ಚಕ್ರವ್ಯೂಹದಿಂದ ಹೊರಬರಲಾಗದೆ ಕುರುಕ್ಷೇತ್ರ ಯುದ್ಧದಲ್ಲಿ ಮರಣವನ್ನಪ್ಪಲು, ತಾಯಿ ತಂದೆಯರಾದ ಸುಭದ್ರೆ ಮತ್ತು ಅರ್ಜುನ(ಫಲುಗುಣ)ರು ಗೋಳಿಡುತ್ತಿರುವುದು.. ಪರಮಾತ್ಮನಿಗೆ ಇವುಗಳು ಹೊಸ ರುಚಿಯಾಗಿ ತೋರುತ್ತದೆ.

ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಈ ಪ್ರಪಂಚದಲ್ಲಿ ನಡೆಯುವ ಎಲ್ಲಾ ಆಗುಹೋಗುಗಳೂ ಆ ಭಗವಂತನಿಗೆ ಗೊತ್ತಿಲ್ಲದೇ ನಡೆಯುತ್ತಿರುವುದಿಲ್ಲ. ಸುಖ,ದುಃಖ,ಅಳು,ನಗು ಎಲ್ಲವೂ ಆ ಭಗವಂತನ ಲೀಲೆಯೇ.

ದಶಮುಖನ ಕಾಮಾಂಧ್ಯ ಕುರುಪತಿಯ ಲೋಭಾಂದ್ಯ (38)

ದಶಮುಖನ ಕಾಮಾಂಧ್ಯ ಕುರುಪತಿಯ ಲೋಭಾಂದ್ಯ |
ಕುಶಿಕಜನ ತಪದುರುಬು ಮೋಹದುರುಬುಗಳು ||
ರುಷೆಯೊ ರುಜಿವನೊ ರಿಕ್ತತೆಯೊ ರಾಗಚೇಷ್ಟೆಗಳೊ |
ರಸದೂಟ ಶಿವನಿಗದು - ಮರುಳ ಮುನಿಯ || (೩೮)

(ಕಾಮ+ಆಂಧ್ಯ)(ಲೋಭ+ಆಂದ್ಯ)(ತಪದ+ಉರುಬು)(ಮೋಹದ+ಉರುಬುಗಳು)(ರಸದ+ಊಟ)

ಸೀತೆಯ ಮೇಲಿನ ಕಾಮದಿಂದ ಕುರುಡನಾದ ರಾವಣ(ದಶಮುಖ), ಸಕಲ ಸಾಮ್ರಾಜ್ಯಕ್ಕೂ ತಾನು ಮಾತ್ರ ಅಧಿಪತಿಯಾಗಬೇಕೆಂಬ ದುರ್ಯೋಧನ (ಕುರುಪತಿ)ನ ಅತ್ಯಾಸೆಯಿಂದ ಆದ ಕುರುಡುತನ, ಬ್ರಹ್ಮರ್ಷಿ ಪದವಿ ಪಡೆಯಲು ವಿಶ್ವಾಮಿತ್ರ(ಕುಶಿಕಜ) ಋಷಿ ಮಾಡಿದ ತಪಸ್ಸಿನ ತೀವ್ರತೆ ಮತ್ತು ಮೈಮರೆಯುವಂತಹ ಪರಾಕ್ರಮಗಳು. ಇವುಗಳಿಂದ ಆಗುವ ರೋಷಗಳೋ (ರುಷೆಯೊ), ಬೇನೆಗಳೋ (ರುಜಿನವೊ), ಬಡತನವೋ (ರಿಕ್ತಿತೆಯೊ) ಅಥವಾ ಪ್ರೀತಿ ಮತ್ತು ಸಂತೋಷ(ರಾಗ)ಗಳಿಂದ ಕೂಡಿದ ಸರಸಗಳೋ, ಇವುಗಳು ಪರಮಾತ್ಮನಿಗೆ ಮಾತ್ರ ಮೃಷ್ಟಾನ್ನ ಭೋಜನ ಸವಿದಂತೆನ್ನಿಸುತ್ತದೆ.

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ (37)

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ |
ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು ||
ಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳ |
ತಣ್ಣಗಿರುವನು ಶಿವನು - ಮರುಳ ಮುನಿಯ || (೩೭)

(ಚಿಣ್ಣರ+ಆಟ+ಎನೆ)(ತಣ್ಣಗೆ+ಇರುವನು)

ನೀನು ಅತ್ತು ಕಣ್ಣೀರನ್ನು ಸುರಿಸಬಹುದು, ಕೋಪಿಸಿಕೊಂಡು ರೇಗಬಹುದು, ಹೊರಾಡಬಹುದು, ಇತರರನ್ನು ಕೊಲ್ಲಬಹುದು ಮತ್ತು ನೀನೇ ಇತರರಿಂದ ಕೊಲ್ಲಲ್ಪಡಬಹುದು. ನಿನ್ನ ಪಾಂಡಿತ್ಯವನ್ನು ಪ್ರದರ್ಶಿಸಬಹುದು (ಬಿನ್ನಣಿಸು), ಇಷ್ಟಾರ್ಥಗಳನ್ನು ಪಡೆಯುವುದಕ್ಕೋಸ್ಕರ ಹಂಬಲಿಸಿ ಬೇಡಿಕೊಳ್ಳಬಹುದು, ಕಷ್ಟಪಟ್ಟು ಕೆಲಸ ಮಾಡಬಹುದು, ಹೆದರಬಹುದು (ಬೆದರು) ಮತ್ತು ಗರ್ವದಿಂದ ಸಂತೋಷಿಸಬಹುದು (ಬೀಗು). ನೀನು ಏನು ಬೇಕಾದರೂ ಮಾಡಬಹುದು. ಆದರೆ ಇವುಗಳನ್ನು ತನ್ನ ಮಕ್ಕಳ (ಚಿಣ್ಣರ) ಆಟವೆಂದುಕೊಂಡು, ನೀನು ನಿನ್ನ ಪಾಲಿಗೆ ಬಂದ ಅವಸ್ಥೆಯನ್ನು ಅನುಭವಿಸೆಂದು, ಪರಮಾತ್ಮನು ತೆಪ್ಪಗಿದ್ದುಬಿಡುತ್ತಾನೆ.