Thursday, May 31, 2012

ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ? (216)

ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ? |
ದುಗುಡವಿಳಿವುದಜೀರ್ಣ ಪೊಡೆಯಿನಿಳಿದಂತೆ ||
ಜಗವ ನೋಯಿಪ ರುಜೆಗೆ ನಿನ್ನ ಮರುಕದಿನೇನು ? |
ಅಘಮಲವ ಕಳೆಯೆ ಹಿತ - ಮರುಳ ಮುನಿಯ || (೨೧೬)

(ದುಗುಡ+ಇಳಿವುದು+ಅಜೀರ್ಣ)(ಪೊಡೆಯಿನ್+ಇಳಿದಂತೆ)(ಮರುಕದಿನ್+ಏನು)

ಮಗುವನ್ನು ನೋಯಿಸುವ ಕಾಯಿಲೆ(ರುಜೆ)ಗೆ ತಾಯಿಯ ಕಣ್ಣೀರು ಔಷದಿ(ಮದ್ದು) ಆದೀತೇನು? ಮಗುವಿಗೆ ಆಗಿರುವ ಅಜೀರ್ಣರೋಗವು ಹೊಟ್ಟೆ(ಪೊಡೆ)ಯಿಂದ ಇಳಿದಾಗ ತಾಯಿಯ ದುಃಖವು (ದುಗುಡ) ಉಪಶಮನವಾಗುವುದು. ಹಾಗೆಯೇ ಈ ಪ್ರಪಂಚವನ್ನು ನೋಯಿಸುವ ಬೇನೆ(ರುಜೆ)ಗಳು ನಿನ್ನ ಅನುಕಂಪದಿಂದ ಕಡಿಮೆಯಾಗುವವೇನು? ಪಾಪದ ಕೊಳೆ(ಅಘಮಲ)ಗಳನ್ನು ನಾಶ ಮಾಡಿದಾಗ ಒಳಿತುಂಟಾಗುತ್ತದೆ.

Wednesday, May 30, 2012

ಅತ್ತತ್ತು ಸಗ್ಗಕ್ಕೆ ಹತ್ತುವಾಶೆಯನು ಬಿಡು (215)

ಅತ್ತತ್ತು ಸಗ್ಗಕ್ಕೆ ಹತ್ತುವಾಶೆಯನು ಬಿಡು |
ತುತ್ತು ಸುರಹಾಸ್ಯಕ್ಕೆ ನಿರ್ವೀರ್ಯ ಭಕ್ತಿ ||
ಉತ್ಥಾನದಿಂ ಬಾಳು ತತ್ತ್ವದಲಿ ಮನವಿರಿಸೆ |
ಸತ್ತ್ವೋನ್ನತಿಯೆ ಸಗ್ಗ - ಮರುಳ ಮುನಿಯ || (೨೧೫)

(ಅತ್ತು+ಅತ್ತು)(ಹತ್ತುವ+ಆಶೆಯನು)(ಸತ್ತ್ವ+ಉನ್ನತಿಯೆ)

ಕೇವಲ ಶೋಕದಿಂದಲೇ ಸ್ವರ್ಗಕ್ಕೆ ಏರುವ ಆಸೆಯನ್ನಿಟ್ಟುಕೊಳ್ಳಬೇಡ. ಸಾಹಸ ಮತ್ತು ಸಾಮರ್ಥ್ಯಗಳಿಂದ ಕೂಡಿರದ ಭಕ್ತಿಯು ದೇವತೆಗಳ ಹಾಸ್ಯಕ್ಕೆ ಈಡಾಗುತ್ತದೆ ಅಷ್ಟೆ. ಪರಮತತ್ತ್ವದಲ್ಲಿ ನಿನ್ನ ಮನಸ್ಸನ್ನು ಇರಿಸಿ ಔನತ್ಯ(ಉತ್ಥಾನ)ದಿಂದ ಜೀವನವನ್ನು ನಡೆಸು. ಸಾಮರ್ಥ್ಯವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋದರೆ ಅದೇ ಸ್ವರ್ಗ.

Tuesday, May 29, 2012

ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು (214)

ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು |
ವರಲಕ್ಷಣಂ ಸಹಜ ಸರ್ವ ಧರ್ಮಕ್ಕಂ ||
ಚರಿಸು ನೀನದನು ಬಿಡದನುದಿನದ ಜೀವನದಿ |
ಪರಮಗತಿಯದರಿಂದೆ - ಮರುಳ ಮುನಿಯ || (೨೧೪)

(ಸಂತೋಷಂ+ಇವು)(ನೀನ್+ಅದನು)(ಬಿಡದೆ+ಅನುದಿನದ)(ಪರಮಗತಿ+ಅದರಿಂದೆ)

ಅಹಂಭಾವವಿಲ್ಲದಿರುವುದು ಮತ್ತು ಸ್ವಧರ್ಮವನ್ನು ಪಾಲಿಸುವುದು ನಿನಗೆ ಪ್ರತಿನಿತ್ಯದ ಸುಖ ಮತ್ತು ಸಂತೋಷಗಳನ್ನು ಕೊಡುತ್ತದೆ. ಇವು ಎಲ್ಲಾ ಧರ್ಮಗಳಿಗೂ ಸಹಜವಾಗಿರುವ ಶ್ರೇಷ್ಠವಾದ ಲಕ್ಷಣಗಳು. ಆದ್ದರಿಂದ ನೀನು ಅವುಗಳನ್ನು ನಿನ್ನ ಜೀವನದಲ್ಲಿ ಸದಾಕಾಲವೂ ಆಚರಿಸು. ಇದರಿಂದ ನೀನು ಮೋಕ್ಷವನ್ನು ಹೊಂದುತ್ತೀಯೆ.

Monday, May 28, 2012

ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ (213)

ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ |
ಮೂಲೋಕದೊಳಗೆ ಹೊರಗೆಲ್ಲೆಡೆಯುಮಲೆತ ||
ಚಾಲಿಪ್ಪುದೆಲ್ಲವನು ಕೇಳ್ವರಾರಾರದನು ? |
ಮೂಲದ ರಹಸ್ಯವದು - ಮರುಳ ಮುನಿಯ || (೨೧೩)

(ಸತ್+ಚಿತ್+ಪರಬ್ರಹ್ಮ+ಉಸಿರುವ)(ಹೊರಗೆ+ಎಲ್ಲೆಡೆಯುಂ+ಅಲೆತ)(ಚಾಲಿಪ್ಪುದು+ಎಲ್ಲವನು)(ಕೇಳ್ವರ್+ಆರಾರು+ಅದನು)(ರಹಸ್ಯ+ಅದು)

ಗಾಳಿಯು ಶ್ರೇಷ್ಠ, ಚೈತನ್ಯನಾದ ಆ ಪರಬ್ರಹ್ಮನು ಉಸಿರುವ ಆಟ. ಅದು ಮೂರು ಲೋಕಗಳ ಒಳಗೆ, ಹೊರಗೆ ಮತ್ತು ಎಲ್ಲಾ ಕಡೆಗಳಲ್ಲಿಯೂ ಸಂಚರಿಸುತ್ತದೆ. ಅದು ಎಲ್ಲವನ್ನೂ ಚಲಿಸುವಂತೆ ಮಾಡುತ್ತದೆ. ಅದನ್ನು ಕೇಳುವವರು ಯಾರಿರುವರು ? ಅದು ಆದಿಯ ಗುಟ್ಟು.

Friday, May 25, 2012

ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು (212)

ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು |
ಧೀಯುಕ್ತಿ ಸಂಧಾನವದುವೆ ವಿಜ್ಞಾನ ||
ಮೇಯಗಳ ಮೀರ‍್ದ ಸತ್ತ್ವಕ್ಕಾತ್ಮ ಸಂಸ್ಕೃತಿಯೆ |
ನೇಯವದುವೆ ತಪಸ್ಸು - ಮರುಳ ಮುನಿಯ || (೨೧೨)

(ಸಂಧಾನ+ಅದುವೆ)(ಸತ್ತ್ವಕ್ಕೆ+ಆತ್ಮ)(ನೇಯ+ಅದುವೆ)

ಮನುಷ್ಯನ ದೇಹವೆಂಬ ಯಂತ್ರವನ್ನು ಪರೀಕ್ಷಿಸಲು ಬುದ್ಧಿಶಕ್ತಿ(ಧೀ) ಮತ್ತು ತಂತ್ರಗಳ ಹೊಂದಾಣಿಕೆ. ಅದೇ ವಿಜ್ಞಾನವೆಂದೆನ್ನಿಸಿಕೊಳ್ಳುತ್ತದೆ. ನಮಗೆ ತಿಳಿಯಬಹುದಾದ ವಸ್ತು(ಮೇಯ)ಗಳನ್ನು ಮೀರಿದ ಸಾರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆತ್ಮದ ವಿಕಾಸ ಮತ್ತು ಪಕ್ವತೆಯೇ ಗುರಿ(ನೇಯ). ಅದೇ ತಪಸ್ಸು.

Thursday, May 24, 2012

ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ (211)

ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ |
ಕಣವೊಂದರಿಂ ಭ್ರೂಣ ಪಿಂಡಾಂಗ ವಿವೃತಿ ||
ಜನಿಪುವದರಿಂ ಲೋಮ ನಖ ದಂತ ಶುಕ್ರಗಳು |
ತನುವೃದ್ಧಿಯುಂ ಕ್ರಮದೆ - ಮರುಳ ಮುನಿಯ || (೨೧೧)

(ವ್ಯಕ್ತಿಯೊಳಂ+ಇರ‍್ಪುದ+ಅನುಪೂರ್ವಿ)(ಪಿಂಡ+ಅಂಗ)(ಜನಿಪುವು+ಅದರಿಂ)

ಮನುಷ್ಯನ ದೇಹದಲ್ಲಿ ವ್ಯವಸ್ಥಿತವಾಗಿ ಬಂದಿರುವ ಸೂಕ್ಷ್ಮಕಣ ಒಂದರಿಂದ ಪ್ರತಿವ್ಯಕ್ತಿಯಲ್ಲಿ ಭ್ರೂಣ ಮತ್ತು ಪಿಂಡಗಳು ಒಂದಾದನಂತರ ಒಂದು ಬರುತ್ತವೆ. ಅದರಿಂದ ದೇಹದ ಮೇಲಿನ ಕೂದಲುಗಳು (ಲೋಮ), ಉಗುರು(ನಖ), ಹಲ್ಲು (ದಂತ) ಮತ್ತು ಶುಕ್ಲಶೋಣಿತ(ಶುಖ)ಗಳು ಹುಟ್ಟುತ್ತವೆ. ಈ ರೀತಿಯಾಗಿ ದೇಹದ ಬೆಳವಣಿಗೆಯು (ತನುವೃದ್ಧಿ) ಒಂದು ಕ್ರಮದಲ್ಲಿ ಆಗುತ್ತದೆ.

Wednesday, May 23, 2012

ದೈವವನುವಹುದೆಂತು ಕರ್ಮವೊಳಿತಹುದೆಂತು (210)

ದೈವವನುವಹುದೆಂತು ಕರ್ಮವೊಳಿತಹುದೆಂತು |
ಜೀವದಿ ವಿವೇಕ ವಿಜ್ಞಾನಮಿಲ್ಲದಿರೆ? ||
ದೈವ ನೆರವಾದೀತು ಕರ್ಮಋಣ ಕರಗೀತು |
ಜೀವಿಯೆಚ್ಚರದಿನಿರೆ - ಮರುಳ ಮುನಿಯ || (೨೧೦)

(ದೈವ+ಅನು+ಅಹುದು+ಎಂತು)(ಕರ್ಮ+ಒಳಿತು+ಅಹುದು+ಎಂತು)(ವಿಜ್ಞಾನಂ+ಇಲ್ಲದೆ+ಇರೆ)(ನೆರವು+ಆದೀತು)(ಎಚ್ಚರದಿನ್+ಇರೆ)

ಜೀವಿಯಲ್ಲಿ ಯುಕ್ತಾಯುಕ್ತ ವಿವೇಚನೆ ಮತ್ತು ವಿಜ್ಞಾನವಿರದಿದ್ದಲ್ಲಿ ದೈವವು ಹೇಗೆ ತಾನೇ ಸಹಾಯಕವಾದೀತು? ಹಾಗೆಯೇ ನಮ್ಮ ಕರ್ಮಗಳು ಒಳಿತಾಗುವುದೆಂತು ? ಜೀವಿಯು ಜಾಗರೂಕನಾಗಿ ವರ್ತಿಸಿದರೆ ದೈವವು ಸಹಾಯ ಮಾಡಬಹುದು ಮತ್ತು ಪೂರ್ವಜನ್ಮಗಳ ಕರ್ಮದ ಋಣಗಳು ಕರಗಿಹೋಗಬಹುದು.

Tuesday, May 22, 2012

ಶ್ವಾಸಕೋಶದಲಿ ನೀಂ ತಂದುಸಿರು ಪೂರ್ವಕೃತ (209)

ಶ್ವಾಸಕೋಶದಲಿ ನೀಂ ತಂದುಸಿರು ಪೂರ್ವಕೃತ |
ಬೀಸಿ ಬರ‍್ಪಾಕಾಶದೆಲರು ನವ ಸತ್ತ್ವ ||
ಈಶಪದ ಸುರಭಿವಾತದೆ ನಿನ್ನ ಹಳೆಯ ದು- |
ರ್ವಾಸನೆಗಳೋಡವೇಂ? - ಮರುಳ ಮುನಿಯ || (೨೦೯)

(ತಂದ+ಉಸಿರು)(ಬರ‍್ಪ+ಆಕಾಶದ+ಎಲರು)(ದುರ್ವಾಸನೆಗಳ್+ಓಡವೇಂ)

ಜನನ ಕಾಲದಿಂದಲೂ ನಿನ್ನ ಶ್ವಾಸಕೋಶದಲ್ಲಿರುವ ಗಾಳಿಯು ನಿನ್ನ ಪೂರ್ವಜನ್ಮದ ಕೃತ್ಯಗಳಿಂದ ಬಂದಿದೆ. ಆಕಾಶದಿಂದ ರಭಸವಾಗಿ ಬೀಸಿ ಬರುತ್ತಿರುವ ಗಾಳಿ ಹೊಸ ತಿರುಳನ್ನು (ಸತ್ತ್ವ) ತರುತ್ತದೆ. ಪರಮಾತ್ಮನ ಚರಣದ ಸುಗಂಧಿತ (ಸುರಭಿ) ಗಾಳಿಯಿಂದ ನಿನ್ನ ಪೂರ್ವದ ಕೆಟ್ಟ ವಾಸನೆಗಳು ಪಲಾಯನವಾಗಲಾರವೇನು?

Friday, May 18, 2012

ಮೃತಿಯೆನ್ನೆ ರೂಪಾಂತರಾಪ್ತಿಯೆನುವುದು ತತ್ತ್ವ (208)

ಮೃತಿಯೆನ್ನೆ ರೂಪಾಂತರಾಪ್ತಿಯೆನುವುದು ತತ್ತ್ವ |
ಮತಿ ಕಂಡುಮದಕೆ ಮನಸೋಲದಿರೆ ನೈಜ ||
ಹಿತ ಮನಕೆ ಪೂರ್ವಪರಿಚಿತ ವಸ್ತುವದು ಲಯಿಸ- |
ಲಿತರರೂಪಿಂದೇನು ? - ಮರುಳ ಮುನಿಯ || (೨೦೮)

(ಕಂಡು+ಅದಕೆ)(ಮನಸೋಲದೆ+ಇರೆ)(ವಸ್ತು+ಅದು)(ಲಯಿಸಲ್+ಇತರರೂಪಿಂದ+ಏನು )

ಮರಣಿಸುವುದೇನೆಂದರೆ ಪುನಃ ಬೇರೆ ರೂಪವನ್ನು ಪಡೆಯುವುದು ಎಂದು ತತ್ತ್ವ ಹೇಳುತ್ತದೆ. ಬುದ್ಧಿಶಕ್ತಿಯು ಅದನ್ನು ನೋಡಿದರೂ ಸಹ ಮನಸ್ಸು ಅದಕ್ಕೆ ಮಾರುಹೋಗದಿದ್ದರೆ ಅದು ಸಹಜ. ಮನಸ್ಸಿಗೆ ಬೇಕಾದ, ಮೊದಲು ಪರಿಚಯವುಳ್ಳ ವಸ್ತುವು, ನಾಶವಾಗಲು (ಲಯಿಸು) ನಾವು ಬೇರೆ ರೂಪವನ್ನು ಕಟ್ಟಿಕೊಂಡು ಏನು ಉಪಯೋಗ?

Monday, May 14, 2012

ಎರಡರೆಕ್ಷಣಮಾನುಮೊಂದೆ ದಶೆಯೊಳಗಿರದು (207)

ಎರಡರೆಕ್ಷಣಮಾನುಮೊಂದೆ ದಶೆಯೊಳಗಿರದು |
ತೊರೆಯ ನೀರಂತೆ ಪೊಸ ಪೊಸದಾಗುತೆ ಜಗಂ ||
ಪರಿಯುತಿಹುದೆಡೆ ಬಿಡದೆ ಧಾರೆಯಿಂದೊಂದೆನಿಸಿ |
ಸ್ಥಿರಚರವೊ ಸೃಷ್ಟಿನದಿ - ಮರುಳ ಮುನಿಯ || (೨೦೭)

(ಎರಡು+ಅರೆಕ್ಷಣಮಾನುಂ+ಒಂದೆ)(ದಶೆಯೊಳಗೆ+ಇರದು)(ಪೊಸದು+ಆಗುತೆ)(ಪರಿಯುತಿಹುದು+ಎಡೆ)(ಧಾರೆಯಿಂದ+ಒಂದು+ಎನಿಸಿ)

ಈ ಪ್ರಪಂಚದಲ್ಲಿರುವ ಯಾವ ವಸ್ತುವೂ, ಒಂದು ಕ್ಷಣ (ಎರಡು ಅರೆಕ್ಷಣಂ) ಮಾತ್ರವೂ ಒಂದೇ ಸ್ಥಿತಿಯಲ್ಲಿರಲಾರದು. ಹೊಳೆಯ ನೀರು ಹರಿದು ಹರಿದು ಸದಾಕಾಲವೂ ಹೊಸದಾಗುತ್ತಿರುವಂತೆ, ಈ ಜಗತ್ತೂ ಸಹ ನಿರಂತರವಾಗಿ ಹರಿಯುತ್ತಿರುವ ಧಾರೆಯಿಂದ ಒಂದೆನ್ನಿಸಿಕೊಂಡು ಹರಿಯುತ್ತಿದೆ. ಈ ಸೃಷ್ಟಿಯ ನದಿ ಅಚಲವಾಗಿಯೂ ಮತ್ತು ಚಲಿಸುತ್ತಲೂ ಇರುತ್ತದೆ.