Thursday, May 31, 2012

ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ? (216)

ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ? |
ದುಗುಡವಿಳಿವುದಜೀರ್ಣ ಪೊಡೆಯಿನಿಳಿದಂತೆ ||
ಜಗವ ನೋಯಿಪ ರುಜೆಗೆ ನಿನ್ನ ಮರುಕದಿನೇನು ? |
ಅಘಮಲವ ಕಳೆಯೆ ಹಿತ - ಮರುಳ ಮುನಿಯ || (೨೧೬)

(ದುಗುಡ+ಇಳಿವುದು+ಅಜೀರ್ಣ)(ಪೊಡೆಯಿನ್+ಇಳಿದಂತೆ)(ಮರುಕದಿನ್+ಏನು)

ಮಗುವನ್ನು ನೋಯಿಸುವ ಕಾಯಿಲೆ(ರುಜೆ)ಗೆ ತಾಯಿಯ ಕಣ್ಣೀರು ಔಷದಿ(ಮದ್ದು) ಆದೀತೇನು? ಮಗುವಿಗೆ ಆಗಿರುವ ಅಜೀರ್ಣರೋಗವು ಹೊಟ್ಟೆ(ಪೊಡೆ)ಯಿಂದ ಇಳಿದಾಗ ತಾಯಿಯ ದುಃಖವು (ದುಗುಡ) ಉಪಶಮನವಾಗುವುದು. ಹಾಗೆಯೇ ಈ ಪ್ರಪಂಚವನ್ನು ನೋಯಿಸುವ ಬೇನೆ(ರುಜೆ)ಗಳು ನಿನ್ನ ಅನುಕಂಪದಿಂದ ಕಡಿಮೆಯಾಗುವವೇನು? ಪಾಪದ ಕೊಳೆ(ಅಘಮಲ)ಗಳನ್ನು ನಾಶ ಮಾಡಿದಾಗ ಒಳಿತುಂಟಾಗುತ್ತದೆ.

Wednesday, May 30, 2012

ಅತ್ತತ್ತು ಸಗ್ಗಕ್ಕೆ ಹತ್ತುವಾಶೆಯನು ಬಿಡು (215)

ಅತ್ತತ್ತು ಸಗ್ಗಕ್ಕೆ ಹತ್ತುವಾಶೆಯನು ಬಿಡು |
ತುತ್ತು ಸುರಹಾಸ್ಯಕ್ಕೆ ನಿರ್ವೀರ್ಯ ಭಕ್ತಿ ||
ಉತ್ಥಾನದಿಂ ಬಾಳು ತತ್ತ್ವದಲಿ ಮನವಿರಿಸೆ |
ಸತ್ತ್ವೋನ್ನತಿಯೆ ಸಗ್ಗ - ಮರುಳ ಮುನಿಯ || (೨೧೫)

(ಅತ್ತು+ಅತ್ತು)(ಹತ್ತುವ+ಆಶೆಯನು)(ಸತ್ತ್ವ+ಉನ್ನತಿಯೆ)

ಕೇವಲ ಶೋಕದಿಂದಲೇ ಸ್ವರ್ಗಕ್ಕೆ ಏರುವ ಆಸೆಯನ್ನಿಟ್ಟುಕೊಳ್ಳಬೇಡ. ಸಾಹಸ ಮತ್ತು ಸಾಮರ್ಥ್ಯಗಳಿಂದ ಕೂಡಿರದ ಭಕ್ತಿಯು ದೇವತೆಗಳ ಹಾಸ್ಯಕ್ಕೆ ಈಡಾಗುತ್ತದೆ ಅಷ್ಟೆ. ಪರಮತತ್ತ್ವದಲ್ಲಿ ನಿನ್ನ ಮನಸ್ಸನ್ನು ಇರಿಸಿ ಔನತ್ಯ(ಉತ್ಥಾನ)ದಿಂದ ಜೀವನವನ್ನು ನಡೆಸು. ಸಾಮರ್ಥ್ಯವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋದರೆ ಅದೇ ಸ್ವರ್ಗ.

Tuesday, May 29, 2012

ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು (214)

ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು |
ವರಲಕ್ಷಣಂ ಸಹಜ ಸರ್ವ ಧರ್ಮಕ್ಕಂ ||
ಚರಿಸು ನೀನದನು ಬಿಡದನುದಿನದ ಜೀವನದಿ |
ಪರಮಗತಿಯದರಿಂದೆ - ಮರುಳ ಮುನಿಯ || (೨೧೪)

(ಸಂತೋಷಂ+ಇವು)(ನೀನ್+ಅದನು)(ಬಿಡದೆ+ಅನುದಿನದ)(ಪರಮಗತಿ+ಅದರಿಂದೆ)

ಅಹಂಭಾವವಿಲ್ಲದಿರುವುದು ಮತ್ತು ಸ್ವಧರ್ಮವನ್ನು ಪಾಲಿಸುವುದು ನಿನಗೆ ಪ್ರತಿನಿತ್ಯದ ಸುಖ ಮತ್ತು ಸಂತೋಷಗಳನ್ನು ಕೊಡುತ್ತದೆ. ಇವು ಎಲ್ಲಾ ಧರ್ಮಗಳಿಗೂ ಸಹಜವಾಗಿರುವ ಶ್ರೇಷ್ಠವಾದ ಲಕ್ಷಣಗಳು. ಆದ್ದರಿಂದ ನೀನು ಅವುಗಳನ್ನು ನಿನ್ನ ಜೀವನದಲ್ಲಿ ಸದಾಕಾಲವೂ ಆಚರಿಸು. ಇದರಿಂದ ನೀನು ಮೋಕ್ಷವನ್ನು ಹೊಂದುತ್ತೀಯೆ.

Monday, May 28, 2012

ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ (213)

ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ |
ಮೂಲೋಕದೊಳಗೆ ಹೊರಗೆಲ್ಲೆಡೆಯುಮಲೆತ ||
ಚಾಲಿಪ್ಪುದೆಲ್ಲವನು ಕೇಳ್ವರಾರಾರದನು ? |
ಮೂಲದ ರಹಸ್ಯವದು - ಮರುಳ ಮುನಿಯ || (೨೧೩)

(ಸತ್+ಚಿತ್+ಪರಬ್ರಹ್ಮ+ಉಸಿರುವ)(ಹೊರಗೆ+ಎಲ್ಲೆಡೆಯುಂ+ಅಲೆತ)(ಚಾಲಿಪ್ಪುದು+ಎಲ್ಲವನು)(ಕೇಳ್ವರ್+ಆರಾರು+ಅದನು)(ರಹಸ್ಯ+ಅದು)

ಗಾಳಿಯು ಶ್ರೇಷ್ಠ, ಚೈತನ್ಯನಾದ ಆ ಪರಬ್ರಹ್ಮನು ಉಸಿರುವ ಆಟ. ಅದು ಮೂರು ಲೋಕಗಳ ಒಳಗೆ, ಹೊರಗೆ ಮತ್ತು ಎಲ್ಲಾ ಕಡೆಗಳಲ್ಲಿಯೂ ಸಂಚರಿಸುತ್ತದೆ. ಅದು ಎಲ್ಲವನ್ನೂ ಚಲಿಸುವಂತೆ ಮಾಡುತ್ತದೆ. ಅದನ್ನು ಕೇಳುವವರು ಯಾರಿರುವರು ? ಅದು ಆದಿಯ ಗುಟ್ಟು.

Friday, May 25, 2012

ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು (212)

ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು |
ಧೀಯುಕ್ತಿ ಸಂಧಾನವದುವೆ ವಿಜ್ಞಾನ ||
ಮೇಯಗಳ ಮೀರ‍್ದ ಸತ್ತ್ವಕ್ಕಾತ್ಮ ಸಂಸ್ಕೃತಿಯೆ |
ನೇಯವದುವೆ ತಪಸ್ಸು - ಮರುಳ ಮುನಿಯ || (೨೧೨)

(ಸಂಧಾನ+ಅದುವೆ)(ಸತ್ತ್ವಕ್ಕೆ+ಆತ್ಮ)(ನೇಯ+ಅದುವೆ)

ಮನುಷ್ಯನ ದೇಹವೆಂಬ ಯಂತ್ರವನ್ನು ಪರೀಕ್ಷಿಸಲು ಬುದ್ಧಿಶಕ್ತಿ(ಧೀ) ಮತ್ತು ತಂತ್ರಗಳ ಹೊಂದಾಣಿಕೆ. ಅದೇ ವಿಜ್ಞಾನವೆಂದೆನ್ನಿಸಿಕೊಳ್ಳುತ್ತದೆ. ನಮಗೆ ತಿಳಿಯಬಹುದಾದ ವಸ್ತು(ಮೇಯ)ಗಳನ್ನು ಮೀರಿದ ಸಾರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆತ್ಮದ ವಿಕಾಸ ಮತ್ತು ಪಕ್ವತೆಯೇ ಗುರಿ(ನೇಯ). ಅದೇ ತಪಸ್ಸು.

Thursday, May 24, 2012

ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ (211)

ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ |
ಕಣವೊಂದರಿಂ ಭ್ರೂಣ ಪಿಂಡಾಂಗ ವಿವೃತಿ ||
ಜನಿಪುವದರಿಂ ಲೋಮ ನಖ ದಂತ ಶುಕ್ರಗಳು |
ತನುವೃದ್ಧಿಯುಂ ಕ್ರಮದೆ - ಮರುಳ ಮುನಿಯ || (೨೧೧)

(ವ್ಯಕ್ತಿಯೊಳಂ+ಇರ‍್ಪುದ+ಅನುಪೂರ್ವಿ)(ಪಿಂಡ+ಅಂಗ)(ಜನಿಪುವು+ಅದರಿಂ)

ಮನುಷ್ಯನ ದೇಹದಲ್ಲಿ ವ್ಯವಸ್ಥಿತವಾಗಿ ಬಂದಿರುವ ಸೂಕ್ಷ್ಮಕಣ ಒಂದರಿಂದ ಪ್ರತಿವ್ಯಕ್ತಿಯಲ್ಲಿ ಭ್ರೂಣ ಮತ್ತು ಪಿಂಡಗಳು ಒಂದಾದನಂತರ ಒಂದು ಬರುತ್ತವೆ. ಅದರಿಂದ ದೇಹದ ಮೇಲಿನ ಕೂದಲುಗಳು (ಲೋಮ), ಉಗುರು(ನಖ), ಹಲ್ಲು (ದಂತ) ಮತ್ತು ಶುಕ್ಲಶೋಣಿತ(ಶುಖ)ಗಳು ಹುಟ್ಟುತ್ತವೆ. ಈ ರೀತಿಯಾಗಿ ದೇಹದ ಬೆಳವಣಿಗೆಯು (ತನುವೃದ್ಧಿ) ಒಂದು ಕ್ರಮದಲ್ಲಿ ಆಗುತ್ತದೆ.

Wednesday, May 23, 2012

ದೈವವನುವಹುದೆಂತು ಕರ್ಮವೊಳಿತಹುದೆಂತು (210)

ದೈವವನುವಹುದೆಂತು ಕರ್ಮವೊಳಿತಹುದೆಂತು |
ಜೀವದಿ ವಿವೇಕ ವಿಜ್ಞಾನಮಿಲ್ಲದಿರೆ? ||
ದೈವ ನೆರವಾದೀತು ಕರ್ಮಋಣ ಕರಗೀತು |
ಜೀವಿಯೆಚ್ಚರದಿನಿರೆ - ಮರುಳ ಮುನಿಯ || (೨೧೦)

(ದೈವ+ಅನು+ಅಹುದು+ಎಂತು)(ಕರ್ಮ+ಒಳಿತು+ಅಹುದು+ಎಂತು)(ವಿಜ್ಞಾನಂ+ಇಲ್ಲದೆ+ಇರೆ)(ನೆರವು+ಆದೀತು)(ಎಚ್ಚರದಿನ್+ಇರೆ)

ಜೀವಿಯಲ್ಲಿ ಯುಕ್ತಾಯುಕ್ತ ವಿವೇಚನೆ ಮತ್ತು ವಿಜ್ಞಾನವಿರದಿದ್ದಲ್ಲಿ ದೈವವು ಹೇಗೆ ತಾನೇ ಸಹಾಯಕವಾದೀತು? ಹಾಗೆಯೇ ನಮ್ಮ ಕರ್ಮಗಳು ಒಳಿತಾಗುವುದೆಂತು ? ಜೀವಿಯು ಜಾಗರೂಕನಾಗಿ ವರ್ತಿಸಿದರೆ ದೈವವು ಸಹಾಯ ಮಾಡಬಹುದು ಮತ್ತು ಪೂರ್ವಜನ್ಮಗಳ ಕರ್ಮದ ಋಣಗಳು ಕರಗಿಹೋಗಬಹುದು.

Tuesday, May 22, 2012

ಶ್ವಾಸಕೋಶದಲಿ ನೀಂ ತಂದುಸಿರು ಪೂರ್ವಕೃತ (209)

ಶ್ವಾಸಕೋಶದಲಿ ನೀಂ ತಂದುಸಿರು ಪೂರ್ವಕೃತ |
ಬೀಸಿ ಬರ‍್ಪಾಕಾಶದೆಲರು ನವ ಸತ್ತ್ವ ||
ಈಶಪದ ಸುರಭಿವಾತದೆ ನಿನ್ನ ಹಳೆಯ ದು- |
ರ್ವಾಸನೆಗಳೋಡವೇಂ? - ಮರುಳ ಮುನಿಯ || (೨೦೯)

(ತಂದ+ಉಸಿರು)(ಬರ‍್ಪ+ಆಕಾಶದ+ಎಲರು)(ದುರ್ವಾಸನೆಗಳ್+ಓಡವೇಂ)

ಜನನ ಕಾಲದಿಂದಲೂ ನಿನ್ನ ಶ್ವಾಸಕೋಶದಲ್ಲಿರುವ ಗಾಳಿಯು ನಿನ್ನ ಪೂರ್ವಜನ್ಮದ ಕೃತ್ಯಗಳಿಂದ ಬಂದಿದೆ. ಆಕಾಶದಿಂದ ರಭಸವಾಗಿ ಬೀಸಿ ಬರುತ್ತಿರುವ ಗಾಳಿ ಹೊಸ ತಿರುಳನ್ನು (ಸತ್ತ್ವ) ತರುತ್ತದೆ. ಪರಮಾತ್ಮನ ಚರಣದ ಸುಗಂಧಿತ (ಸುರಭಿ) ಗಾಳಿಯಿಂದ ನಿನ್ನ ಪೂರ್ವದ ಕೆಟ್ಟ ವಾಸನೆಗಳು ಪಲಾಯನವಾಗಲಾರವೇನು?

Friday, May 18, 2012

ಮೃತಿಯೆನ್ನೆ ರೂಪಾಂತರಾಪ್ತಿಯೆನುವುದು ತತ್ತ್ವ (208)

ಮೃತಿಯೆನ್ನೆ ರೂಪಾಂತರಾಪ್ತಿಯೆನುವುದು ತತ್ತ್ವ |
ಮತಿ ಕಂಡುಮದಕೆ ಮನಸೋಲದಿರೆ ನೈಜ ||
ಹಿತ ಮನಕೆ ಪೂರ್ವಪರಿಚಿತ ವಸ್ತುವದು ಲಯಿಸ- |
ಲಿತರರೂಪಿಂದೇನು ? - ಮರುಳ ಮುನಿಯ || (೨೦೮)

(ಕಂಡು+ಅದಕೆ)(ಮನಸೋಲದೆ+ಇರೆ)(ವಸ್ತು+ಅದು)(ಲಯಿಸಲ್+ಇತರರೂಪಿಂದ+ಏನು )

ಮರಣಿಸುವುದೇನೆಂದರೆ ಪುನಃ ಬೇರೆ ರೂಪವನ್ನು ಪಡೆಯುವುದು ಎಂದು ತತ್ತ್ವ ಹೇಳುತ್ತದೆ. ಬುದ್ಧಿಶಕ್ತಿಯು ಅದನ್ನು ನೋಡಿದರೂ ಸಹ ಮನಸ್ಸು ಅದಕ್ಕೆ ಮಾರುಹೋಗದಿದ್ದರೆ ಅದು ಸಹಜ. ಮನಸ್ಸಿಗೆ ಬೇಕಾದ, ಮೊದಲು ಪರಿಚಯವುಳ್ಳ ವಸ್ತುವು, ನಾಶವಾಗಲು (ಲಯಿಸು) ನಾವು ಬೇರೆ ರೂಪವನ್ನು ಕಟ್ಟಿಕೊಂಡು ಏನು ಉಪಯೋಗ?

Monday, May 14, 2012

ಎರಡರೆಕ್ಷಣಮಾನುಮೊಂದೆ ದಶೆಯೊಳಗಿರದು (207)

ಎರಡರೆಕ್ಷಣಮಾನುಮೊಂದೆ ದಶೆಯೊಳಗಿರದು |
ತೊರೆಯ ನೀರಂತೆ ಪೊಸ ಪೊಸದಾಗುತೆ ಜಗಂ ||
ಪರಿಯುತಿಹುದೆಡೆ ಬಿಡದೆ ಧಾರೆಯಿಂದೊಂದೆನಿಸಿ |
ಸ್ಥಿರಚರವೊ ಸೃಷ್ಟಿನದಿ - ಮರುಳ ಮುನಿಯ || (೨೦೭)

(ಎರಡು+ಅರೆಕ್ಷಣಮಾನುಂ+ಒಂದೆ)(ದಶೆಯೊಳಗೆ+ಇರದು)(ಪೊಸದು+ಆಗುತೆ)(ಪರಿಯುತಿಹುದು+ಎಡೆ)(ಧಾರೆಯಿಂದ+ಒಂದು+ಎನಿಸಿ)

ಈ ಪ್ರಪಂಚದಲ್ಲಿರುವ ಯಾವ ವಸ್ತುವೂ, ಒಂದು ಕ್ಷಣ (ಎರಡು ಅರೆಕ್ಷಣಂ) ಮಾತ್ರವೂ ಒಂದೇ ಸ್ಥಿತಿಯಲ್ಲಿರಲಾರದು. ಹೊಳೆಯ ನೀರು ಹರಿದು ಹರಿದು ಸದಾಕಾಲವೂ ಹೊಸದಾಗುತ್ತಿರುವಂತೆ, ಈ ಜಗತ್ತೂ ಸಹ ನಿರಂತರವಾಗಿ ಹರಿಯುತ್ತಿರುವ ಧಾರೆಯಿಂದ ಒಂದೆನ್ನಿಸಿಕೊಂಡು ಹರಿಯುತ್ತಿದೆ. ಈ ಸೃಷ್ಟಿಯ ನದಿ ಅಚಲವಾಗಿಯೂ ಮತ್ತು ಚಲಿಸುತ್ತಲೂ ಇರುತ್ತದೆ.

Friday, May 11, 2012

ಭೂಜದಂಗ ವಿಕಾಸ ಪಾರಂಪರಿಯ ನೋಡು (206)

ಭೂಜದಂಗ ವಿಕಾಸ ಪಾರಂಪರಿಯ ನೋಡು |
ಬೀಜದಿಂದಗೆ ಕಡ್ಡಿ ಚಿಗುರು ತರುವಾಯಿಂ ||
ರಾಜಿಪುದು ನೆನೆ ಹೂವು ಮರಳಿ ಕಾಯೊಳು ಬೀಜ |
ಸಾಜವೀಕ್ರಮ ವಿವೃತಿ - ಮರುಳ ಮುನಿಯ || (೨೦೬)

(ಭೂಜದ+ಅಂಗ)(ಬೀಜದಿಂದ+ಅಗೆ)(ಸಾಜ+ಈ+ಕ್ರಮ)

ಒಂದು ಮರದ (ಭೂಜದ) ಭಾಗಗಳು ಅರಳುವ ಪರಂಪರೆ(ಪಾರಂಪರಿ)ಯನ್ನು ನೋಡು. ಬೀಜದಿಂದ ಮೊಳಕೆ(ಅಗೆ), ಕಡ್ಡಿ, ಚಿಗುರು, ನಂತರ ಮೊಗ್ಗು(ನನೆ) ಮತ್ತು ಹೂವುಗಳು ಮೆರೆಯುತ್ತವೆ (ರಾಜಿಪುದು). ಪುನಃ ಕಾಯಿಯೊಳಗೆ ಬೀಜ ಇರುತ್ತದೆ. ಈ ಪರವರ್ತನೆಯು (ವಿವೃತಿ) ಪ್ರಪಂಚದಲ್ಲಿ ಸಹಜವಾಗಿರುವ (ಸಾಜ) ಕ್ರಮ.

Thursday, May 10, 2012

ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ (205)

ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ |
ಸ್ಪೃಶ್ಯ ಹೃನ್ನಾಡಿಯೊಳಗಸ್ಪೃಶ್ಯಸತ್ತ್ವ ||
ವಿಶ್ವ ಜೀವಂಗಳೊಳಗಂತು ಗೂಢದ ಚಿತ್ತು |
ಶಾಶ್ವತ ರಹಸ್ಯವದು - ಮರುಳ ಮುನಿಯ || (೨೦೫)

(ಘಟದೊಳಗೆ+ಅದೃಶ್ಯ)(ಹೃನ್ನಾಡಿಯೊಳಗೆ+ಅಸ್ಪೃಶ್ಯ)(ಜೀವಂಗಳೊಳಗೆ+ಅಂತು)(ರಹಸ್ಯ+ಅದು)

ಕಣ್ಣಿಗೆ ಗೋಚರವಾಗುವ (ದೃಶ್ಯ) ದೇಹ(ತನು)ವೆಂಬ ಗಡಿಗೆ(ಘಟ)ಯೊಳಗೆ ಅಗೋಚರವಾದ (ಅದೃಶ್ಯ) ಮನಸ್ಸಿನ ಒಂದು ಬಲವಿದೆ. ಹೃದಯದಿಂದ ಹರಿಯುವ ಧಮನಿಗಳನ್ನು ನಾವು ಮುಟ್ಟಿನೋಡಲು ಸಾಧ್ಯ. ಆದರೆ ಅವುಗಳ ಸಾಮರ್ಥ್ಯವನ್ನು ಮುಟ್ಟಿ ನೋಡಲು ಸಾಧ್ಯವಿಲ್ಲ. ಈ ರೀತಿಯಾಗಿ ಪ್ರಪಂಚದ ಜೀವಿಗಳ ಒಳಗೆ ಬಚ್ಚಿಟ್ಟುಕೊಂಡಿರುವ ಚೈತನ್ಯವು ಹರಿಯುತ್ತಿದೆ. ಇದು ಎಂದೆಂದಿಗೂ ಇರುವ ಗುಟ್ಟು.

Wednesday, May 9, 2012

ಸೃಷ್ಟಿ ಬೀಜವನಾದಿ ಸೃಷ್ಟಿಸತ್ತ್ವವನಂತ (204)

ಸೃಷ್ಟಿ ಬೀಜವನಾದಿ ಸೃಷ್ಟಿಸತ್ತ್ವವನಂತ |
ಚೇಷ್ಟೆ ಸುಪ್ತಿಗಳ ಪರ್ಯಾಯವದರ ಕಥೆ ||
ಪುಷ್ಟವದರಿಂ ಕಂಪು ವಿಶ್ವ ಮಾಯಾವೃಕ್ಷ |
ಶಿಷ್ಟಮಿಹುದು ಪರಾತ್ಮ - ಮರುಳ ಮುನಿಯ || (೨೦೪)

(ಬೀಜ+ಅನಾದಿ)(ಸತ್ತ್ವ+ಅನಂತ)(ಪರ್ಯಾಯ+ಅದರ)(ಪುಷ್ಟ+ಅದರಿಂ)(ಶಿಷ್ಟಂ+ಇಹುದು)

ಈ ಉತ್ಪತ್ತಿಯ ಬೀಜವು ಬಹಳ ಪುರಾತನಕಾಲದಿಂದ ಬಂದಿದೆ ಮತ್ತು ಅದಕ್ಕೆ ಮೊದಲಿಲ್ಲ. ಅದರ ತಿರುಳೂ ಸಹ ಕೊನೆಯಿಲ್ಲದ್ದು. ಚಲನವಲನ ಮತ್ತು ನಿದ್ರಿಸುವಿಕೆಗಳ (ಸುಪ್ತಿ) ಸರದಿಗಳು ಇವುಗಳ ಕಥೆ. ಈ ವಿಶ್ವವೆಂಬ ಮಾಯಾವೃಕ್ಷವು ಇದರಿಂದ ಪುಷ್ಟಿಗೊಂಡು ಸುಗಂಧ(ಕಂಪು)ವನ್ನು ಹರಡುತ್ತದೆ. ಅಲ್ಲಿ ಪರಬ್ರಹ್ಮ ಶುದ್ಧರೂಪದಲ್ಲಿ ಅಳವಟ್ಟಿರುತ್ತಾನೆ.

Tuesday, May 8, 2012

ಥಳಥಳಿಕೆ ವಜ್ರಗುಣ, ವಜ್ರವೇ ಹೊಳಪಲ್ಲ (203)

ಥಳಥಳಿಕೆ ವಜ್ರಗುಣ, ವಜ್ರವೇ ಹೊಳಪಲ್ಲ |
ಹೊಳಪಿರದ ವಜ್ರವನು ಗುರುತಿಸುವುದೆಂತು ? ||
ಬೆಳೆಯುತಳಿಯುತ ಬಾಳ್ವ ಜಗವೆಲ್ಲ ಹೊಳಹೊಳಪು |
ಅಲುಗದಾ ಮಣಿ ಬೊಮ್ಮ - ಮರುಳ ಮುನಿಯ || (೨೦೩)

(ಗುರುತಿಸುವುದು+ಎಂತು)(ಬೆಳೆಯುತ+ಅಳಿಯುತ)

ಪ್ರಕಾಶಿಸುವುದು ವಜ್ರದ ಸಹಜವಾದ ಗುಣ. ಆದರೆ ಈ ಪ್ರಕಾಶಿಸುವಿಕೆಯೇ ವಜ್ರವಲ್ಲ. ಹಾಗಿದ್ದಲ್ಲಿ ಪ್ರಕಾಶಿಸದೆ ಇರುವ ವಜ್ರವನ್ನು ನಾವು ಹೇಗೆ ಗುರುತು ಹಿಡಿಯುವುದು? ವೃದ್ಧಿ ಹೊಂದುತ್ತಾ ಮತ್ತು ನಾಶವಾಗುತ್ತಾ ಬಾಳುತ್ತಿರುವ ಈ ಜಗತ್ತೆಲ್ಲವೂ ಪ್ರಕಾಶವಾಗಿರುವುದೇ ಹೌದು. ಅಲ್ಲಾಡದೆ ಸ್ಥಿರವಾಗಿರುವ ವಜ್ರವೇ ಪರಬ್ರಹ್ಮ.

Monday, May 7, 2012

ಮೂಲ ಚೇತನದಿಷ್ಟ ಲೀಲೆಯೇ ವಿಶ್ವಮಿರೆ (202)

ಮೂಲ ಚೇತನದಿಷ್ಟ ಲೀಲೆಯೇ ವಿಶ್ವಮಿರೆ |
ಕಾಲದಾಲೋಚನೆಯ ಮುನ್‍ತಿಳಿಯಲಳವೇ ||
ವೇಳೆ ದೆಸೆ ಗತಿ ನಿಯಮವಿರೆ ಲೀಲೆಯೆಲ್ಲಿಹುದು |
ಕೋಲಾಹಲವಚಿಂತ್ಯ - ಮರುಳ ಮುನಿಯ || (೨೦೨)

(ಚೇತನದ+ಇಷ್ಟ)(ವಿಶ್ವಂ+ಇರೆ)(ಕಾಲದ+ಆಲೋಚನೆಯ)(ತಿಳಿಯಲ್+ಅಳವೇ)(ನಿಯಮ+ಇರೆ)(ಕೋಲಾಹಲ+ಅಚಿಂತ್ಯ)

ಆದಿ ಮತ್ತು ಹುಟ್ಟುಗಳ ಚೈತನ್ಯನಾದ ಪರಮಾತ್ಮನ ಆಟವಾಡಬೇಕೆಂಬ ಬಯಕೆಯೇ ಈ ಪ್ರಪಂಚವಾಗಿರಲು, ಸಮಯದ ಅಭಿಪ್ರಾಯ ಮತ್ತು ಯೋಚನೆಗಳನ್ನು ನಾವು ಮೊದಲೇ ತಿಳಿದುಕೊಳ್ಳಲು ಸಾಧ್ಯವೇ? ಸಮಯ, ದಿಕ್ಕು, ಮತ್ತು ಮಾರ್ಗಗಳ ಕಟ್ಟುಪಾಡುಗಳಿರುವಾಗ ಆಟವೆಲ್ಲಿದೆ? ಕೋಲಾಹಲಗಳು ಹೇಗೆ ನಡೆಯುತ್ತವೆಯೆಂಬುದನ್ನು ಯೋಚಿಸಲಸಾಧ್ಯ.

Friday, May 4, 2012

ಜಗವ ಬಿಡಲೇಕೆ ? ಕಣ್ಣನು ತಿದ್ದುಕೊಳೆ ಸಾಕು (201)

ಜಗವ ಬಿಡಲೇಕೆ ? ಕಣ್ಣನು ತಿದ್ದುಕೊಳೆ ಸಾಕು |
ಮುಗಿಲ ಕಂಡಾಗಿನನ ಮರೆಯದಿರೆ ಸಾಕು ||
ಮಘವಂತನೆಸೆದ ಬಿಲ್ ಬಣ್ಣಗಳ ಹಿಂಬದಿಗೆ |
ಗಗನವಿಹುದೆನೆ ಸಾಕು - ಮರುಳ ಮುನಿಯ || (೨೦೧)

(ಬಿಡಲು+ಏಕೆ)(ಕಂಡಾಗ+ಇನನ)(ಮರೆಯದೆ+ಇರೆ)(ಮಘವಂತನ್+ಎಸೆದ)(ಗಗನ+ಇಹುದು+ಎನೆ)

ಪ್ರಪಂಚವನ್ನು ಬಿಟ್ಟುಬಿಡುವ ಯೋಚನೆಯನ್ನೇಕೆ ಮಾಡುತ್ತಿರುವೆ? ಅದರ ಬದಲು ನಿನ್ನ ಕಣ್ಣುಗಳ ನೋಟವನ್ನು ಸರಿಪಡಿಸಿಕೊಂಡು ಜಗತ್ತನ್ನು ನೀನು ನೋಡಿದರೆ ಸಾಕು. ಮೋಡ(ಮುಗಿಲು)ಗಳನ್ನು ಕಂಡಾಗ ಅದರ ಹಿಂಬದಿಯಲ್ಲಿ ಒಬ್ಬ ಸೂರ್ಯ(ಇನ)ನಿರುವನೆಂಬುದನ್ನು ನೀನು ಮರೆಯದಿದ್ದರೆ ಸಾಕು. ಹಾಗೆಯೇ ಇಂದ್ರ(ಮಘವಂತ)ನು ಎಸೆದ ಕಾಮನಬಿಲ್ಲಿನ ಹಿಂದೆ ಒಂದು ಆಕಾಶವಿರುವುದೆಂದು ಜ್ಞಾಪಿಸಿಕೊಂಡರೆ ಸಾಕು.