Thursday, April 30, 2015

ಹಗೆ ಬೇರೆ ನಿನಗಿಲ್ಲ ಕೆಳೆ ಬೇರೆ ನಿನಗಿಲ್ಲ (768)

ಹಗೆ ಬೇರೆ ನಿನಗಿಲ್ಲ ಕೆಳೆ ಬೇರೆ ನಿನಗಿಲ್ಲ ||
ಸೊಗವೊ ದುಗಡವೊ ನಿನಗೆ ನೀಂ ಮಾಡಿದಂತೆ ||
ಬಿಗಿ ಮನಸಿನಲೆತವಂ ಬಿಗಿಯಿಂದ್ರಿಯಂಗಳಂ |
ಜಗಕೆ ನೀನೊಡನಾಡಿ - ಮರುಳ ಮುನಿಯ || (೭೬೮)

(ಮನಸಿನ+ಅಲೆತವಂ)(ಬಿಗಿ+ಇಂದ್ರಿಯಂಗಳಂ)(ನೀನ್+ಒಡನಾಡಿ)

ನಿನಗೆ ಬೇರೆ ಯಾರೂ ವೈರಿಗಳಿಲ್ಲ. ಹಾಗೆಯೇ ಬೇರೆ ಯಾರೂ ಸ್ನೇಹಿತ(ಕೆಳೆ)ರೂ ಸಹ ಇಲ್ಲ. ಸುಖ ಮತ್ತು ದುಃಖಗಳು ನೀನು ಮಾಡಿದಂತೆ ಆಗುತ್ತವೆ. ನಿನ್ನ ಮನಸ್ಸು ದಿಕ್ಕುಗೆಟ್ಟು ಗಾಳಿಪಟದಂತೆ ಅಲೆಯುವುದನ್ನು ಹಿಡಿತದಲ್ಲಿಟ್ಟಿಕೊ. ಹಾಗೆಯೇ ಇಂದ್ರಿಯಗಳ ಚೇಷ್ಟೆಯನ್ನು ಸಹ ಕಟ್ಟಿನಿಲ್ಲಿಸಿಕೊಂಡಿರು. ಆವಾಗ ನೀನು ಇಡೀ ಲೋಕಕ್ಕೆ ಸ್ನೇಹಿತನಾಗುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You have no other friend and no other foe
Your happiness or sorrow is your own creation
Restrain your straying mind and flying senses,
You are then a faithful companion to the world – Marula Muniya (768)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, April 29, 2015

ಸ್ವಾಂತದಿರ‍್ಕೊರಲೊಂದೆ ಪದವ ಪಾಡುವನಾಗು (767)

ಸ್ವಾಂತದಿರ‍್ಕೊರಲೊಂದೆ ಪದವ ಪಾಡುವನಾಗು |
ಸಂತತ ಜಗದ್ಗ್ರಂಥಿ ಸಡಿಲಿದವನಾಗು ||
ಅಂತರಾತ್ಮದಿನಿತರಮೊಂದುಮಿಲ್ಲದನಾಗು |
ಶಾಂತಿಸಂಸ್ಥಿತನಾಗು - ಮರುಳ ಮುನಿಯ || (೭೬೭)

(ಸ್ವಾಂತದ+ಇರ‍್ಕ+ಒರಲ್+ಒಂದೆ)(ಪಾಡುವನ್+ಆಗು)(ಜಗತ್+ಗ್ರಂಥಿ)(ಸಡಿಲಿದವನ್+ಆಗು)(ಅಂತರಾತ್ಮದಿನ್+ಇತರಂ+ಒಂದುಂ+ಇಲ್ಲದನ್+ಆಗು)(ಶಾಂತಿಸಂಸ್ಥಿತನ್+ಆಗು)

ನಿನ್ನ ಮನಸ್ಸಿ(ಸ್ವಾಂತ)ನ ಕೂಗಿನಿಂದ (ಒರಲ್) ಒಂದೇ ಹಾಡನ್ನು ಹಾಡುವನಾಗು. ಸದಾಕಾಲವೂ ಜಗತ್ತಿನ ಒಡನೆ ಇರುವ ಗಂಟುಗಳನ್ನು ಸಡಿಲಿಸಿಕೊಂಡು ಇರು. ನಿನ್ನ ಅಂತರಾತ್ಮವೊಂದನ್ನು ಬಿಟ್ಟು, ಇನ್ಯಾವುದನ್ನೂ ಇಲ್ಲದವನಾಗು. ಸದಾ ನೆಮ್ಮದಿಯ ಸ್ಥಿತಿಯನ್ನು ಹೊಂದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sing a happy song when you are in yourself and the throat cooperates
Keep all the worldly bonds always loose,
Have nothing else in your indwelling self,
Be ever established in peace – Marula Muniya (767)
(Translation from "Thus Sang Marula Muniya" by Sri. Narasimha Bhat)

Tuesday, April 28, 2015

ಹೊಟ್ಟೆಪಾಡಿಗದೊಂದು ಸದ್ಯ ದುಡಿವುದ್ಯೋಗ (766)

ಹೊಟ್ಟೆಪಾಡಿಗದೊಂದು ಸದ್ಯ ದುಡಿವುದ್ಯೋಗ |
ಕಷ್ಟದಲಿ ಪಾಲ್ಗೊಂಡು ನಗು ನಗಿಪ ಸತಿಯಳ್ ||
ನಿಷ್ಠೆ ಪೂಜೆಯಗೊಂಡು ಧೈರ್ಯತುಂಬುವ ದೈವ- |
ವಿಷ್ಟಿರಲು ಚಿಂತೆಯೇಂ? - ಮರುಳ ಮುನಿಯ || (೭೬೬)

(ಹೊಟ್ಟೆಪಾಡಿಗೆ+ಅದು+ಒಂದು)(ದುಡಿವ+ಉದ್ಯೋಗ)(ದೈವವಿಷ್ಟು+ಇರಲು)

ನಿನ್ನ ಅನ್ನ, ವಸತಿ, ವಸ್ತ್ರಗಳಿಗೆ ಸಾಕಾಗುವಷ್ಟು ವರಮಾನ ತರುವ ಸದ್ಯಕ್ಕಿರುವ ಒಂದು ಉದ್ಯೋಗ. ನಿನ್ನ ಕಷ್ಟಕಾಲದಲ್ಲಿ ಸಹಭಾಗಿನಿಯಾಗಿ ಸಂತಸ ತರುವ ಸತಿ. ಶ್ರದ್ಧೆ(ನಿಷ್ಠೆ)ಯಿಂದ ಪರಮಾತ್ಮನನ್ನು ಆರಾಧಿಸಿದಾಗ ಧೈರ್ಯವನ್ನು ತುಂಬುವ ದೇವರು. ಇವಿಷ್ಟೂ ನಿನ್ನ ಜೀವನದಲ್ಲಿ ಇದ್ದಮೇಲೆ ಚಿಂತೆ ಏಕೆ ಮಾಡಬೇಕು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A job at present to earn the daily bread,
A wife to share your sufferings and to keep you happy,
A deity to accept your faithful worship and to infuse self-confidence,
Why do you worry when you have all these? – Marula Muniya (766)
(Translation from "Thus Sang Marula Muniya" by Sri. Narasimha Bhat)

Wednesday, April 22, 2015

ಬಂದ ಸುಖವನು ಬಿಡದೆ ಬಾರದುದ ಬೇಕೆನದೆ (765)

ಬಂದ ಸುಖವನು ಬಿಡದೆ ಬಾರದುದ ಬೇಕೆನದೆ |
ದಂದುಗಂಬಡದೆ ಮನದೆಚ್ಚರವ ಬಿಡದೆ ||
ಸಂದುದನದೇಕೆನದೆ ಮುಂದದೇಂಗತಿಯೆನದೆ |
ಹೊಂದಿಕೊಳೊ ಬಂದುದಕೆ - ಮರುಳ ಮುನಿಯ || (೭೬೫)

(ಸಂದುದನ್+ಅದು+ಏಕೆ+ಎನದೆ)(ಮುಂದೆ+ಅದು+ಏಂ+ಗತಿಯೆನದೆ)

ನಿನಗೆ ಈಗ ದೊರಕಿರುವ ಸುಖ ಮತ್ತು ಸಂತೋಷಗಳನ್ನು ಕಳೆದುಕೊಳ್ಳದೆ, ನಿನಗೆ ಸಿಗದಿರುವ ಸುಖ ಮತ್ತು ಸಂತೋಷಗಳನ್ನು ಬಯಸದೆ, ತೊಂದರೆಗಳನ್ನು ಅನುಭವಿಸದೆ, ಮನಸ್ಸಿನ ಜಾಗ್ರತಾವಸ್ಥೆಯನ್ನು ಬಿಡದೆ, ನಿನಗೆ ಬಂದಿರುವುದನ್ನು ಅದು ಏಕೆಂದು ಪ್ರಶ್ನಿಸದೆ, ಭವಷ್ಯತ್ತಿನ ಬಗ್ಗೆ ಅತಿಯಾಗಿ ಚಿಂತಿಸದೆ, ನಿನಗಿರುವದಕ್ಕೆ ಒಗ್ಗಿಕೊಂಡು ಬಾಳು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Reject not the happiness that comes to you and crave not for that which doesn’t come
Do not be dejected in affliction, and be ever vigilant in mind,
Sorrow not for the past and worry not for the future,
Adjust yourself to the situation that arise in life – Marula Muniya (765)
(Translation from "Thus Sang Marula Muniya" by Sri. Narasimha Bhat)

Tuesday, April 21, 2015

ಜೀವ ತಾಂ ಬ್ರಹ್ಮದೈಶ್ವರ್ಯವದ ಗೌರವಿಸು (764)

ಜೀವ ತಾಂ ಬ್ರಹ್ಮದೈಶ್ವರ್ಯವದ ಗೌರವಿಸು |
ಜೀವದಶೆಯುಚ್ಚ ನೀಚಗಳ ನೀನರಿತು ||
ಜೀವಿತೋದ್ಧೃತಿಯನಾದನಿತಾಗಿಸೆಲ್ಲರ‍್ಗೆ |
ಜೀವಸಾಹ್ಯವೆ ಧರ್ಮ - ಮರುಳ ಮುನಿಯ || (೭೬೪)

(ಬ್ರಹ್ಮದ+ಐಶ್ವರ್ಯ+ಆದ)(ನೀನ್+ಅರಿತು)(ಜೀವಿತ+ಉದ್ಧೃತಿಯನ್+ಆದನಿತು+ಆಗಿಸು+ಎಲ್ಲರ‍್ಗೆ)

ಜೀವವು ಬ್ರಹ್ಮನ ಸಿರಿ, ಅದನ್ನು ಆದರಿಸು ಮತ್ತು ಮನ್ನಣೆ ಮಾಡು. ಜೀವದ ಸ್ಥಿತಿಯ ಶ್ರೇಷ್ಠತೆ ಮತ್ತು ಕೀಳುಗಳನ್ನು ನೀನು ತಿಳಿದುಕೊಂಡು, ಸರ್ವರ ಜೀವಿತದ ಏಳಿಗೆಗೆ ಆದಷ್ಟು ಪ್ರಯತ್ನಿಸು. ಒಂದು ಜೀವಿಯು ಇನ್ನೊಂದು ಜೀವಿಗೆ ಸಹಾಯ (ಸಾಹ್ಯ) ಮಾಡುವುದೇ ಧರ್ಮದ ನಿಜವಾದ ಲಕ್ಷಣ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Soul is the wealth of Brahma and you should respect it,
Understanding the rise and fall of the soul,
Help all as much as you can to elevate their souls to excellence,
Helping other beings itself is dharma – Marula Muniya (764)
(Translation from "Thus Sang Marula Muniya" by Sri. Narasimha Bhat) #dvg,#kagga

Monday, April 20, 2015

ಸೊಗವ ಪಸರಿಸಬೇಕು ಹಗೆಯ ಹೋಗೊಡಬೇಕು (763)

ಸೊಗವ ಪಸರಿಸಬೇಕು ಹಗೆಯ ಹೋಗೊಡಬೇಕು |
ಸೊಗವನಾಂತಾ ಕೃತಜ್ಞನ ಮೊಗದಿನೊಗೆವಾ ||
ನಗುಗಳಾನಂದಮಯ ಶಿವನೊಡಲ ಹೊಳಪಾಗಿ |
ಜಗವ ಕಂಗೊಳಿಯಿಪುವೊ - ಮರುಳ ಮುನಿಯ || (೭೬೩)

(ಸೊಗವನ್+ಆಂತ+ಆ)(ಮೊಗದಿಂ+ಒಗೆವ+ಆ)(ನಗುಗಳ್+ಆನಂದಮಯ)(ಶಿವನ+ಒಡಲ)(ಹೊಳಪು+ಆಗಿ)

ಸುಖ ಮತ್ತು ಸಂತೋಷಗಳನ್ನು ಎಲ್ಲೆಲ್ಲಿಯೂ ಹರಡ(ಪಸರಿಸ)ಬೇಕು. ದ್ವೇಷ ಮತ್ತು ಅಸೂಯೆಗಳನ್ನು ಹೊರದೂಡಬೇಕು. ಸುಖ ಮತ್ತು ಸಂತೋಷಗಳನ್ನು ಹೊಂದಿದ ಕೃತಜ್ಞನ ಮುಖ(ಮೊಗ)ದಿಂದ ಹೊರಹೊಮ್ಮಿದ ನಗೆಗಳು, ಸಂತೋಷ ತುಂಬಿರುವ ಶಿವನ ದೇಹದ ಕಾಂತಿಯಾಗಿ, ಪ್ರಪಂಚವನ್ನು ಪ್ರಕಾಶಿಸಿ, ಮನೋಹರವಾಗಿ ಕಾಣುವಂತೆ ಮಾಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

We ought to spread happiness and drive away all enmity
The smiles shining then on the faces of the grateful persons,
Shine like the radiance of Shiva, the embodiment of happiness
And illuminate the world – Marula Muniya || (763)
(Translation from "Thus Sang Marula Muniya" by Sri. Narasimha Bhat)

Friday, April 17, 2015

ದೇವರೆನುವೊಂದು ಬೇರಿರ‍್ದೊಡೇನಿರದೊಡೇನ್ (762)

ದೇವರೆನುವೊಂದು ಬೇರಿರ‍್ದೊಡೇನಿರದೊಡೇನ್? |
ಜೀವನವೆ ದೈವಮಹಿಮೆಗೆ ಸಾಕ್ಷಿಯಲ್ತೆ? ||
ತೀವಿ ಸೌಂದರ್ಯಗಾಂಭೀರ್ಯಂಗಳಿಂ ಬಾಳಿ |
ದೇವ ಸಮನೆನಿಸು ನೀಂ - ಮರುಳ ಮುನಿಯ || (೭೬೨)

(ದೇವರ್+ಎನುವ+ಒಂದು)(ಬೇರೆ+ಇರ‍್ದೊಡೇನ್+ಇರದೊಡೆ+ಏನ್)(ಸಾಕ್ಷಿ+ಅಲ್ತೆ)

ದೇವರು ಎನ್ನುವ ಒಂದು ವಸ್ತು ಬೇರೆ ಇದ್ದರೆ ಅಥವಾ ಇಲ್ಲದಿದ್ದರೇನಂತೆ. ನಾವು ನಡೆಸುತ್ತಿರುವ ಜೀವನವೇ ಅವನ ಹಿರಿಮೆಗೆ ಪುರಾವೆ ಅಲ್ಲವೇನು? ಸೊಗಸು ಮತ್ತು ಘನತೆಗಳಿಂದ ಕೂಡಿದ ತುಂಬು ಜೀವನವನ್ನು ನಡೆಸಿ, ನೀನು ಪರಮಾತ್ಮನಿಗೆ ಯೋಗ್ಯನೆಂದೆನ್ನಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What if an entity called God exists or not?
Is not this life a living proof of God’s greatness?
Live a full life with great grace and grandeur
And grow high to the stature of God – Marula Muniya (762)
(Translation from "Thus Sang Marula Muniya" by Sri. Narasimha Bhat)

Wednesday, April 15, 2015

ದೃಷ್ಟಿ ವಿಸ್ತೃತಮಾಗಿ ದಿಕ್ತಟಂಗಳ ಹಾಯ್ದು (761)

ದೃಷ್ಟಿ ವಿಸ್ತೃತಮಾಗಿ ದಿಕ್ತಟಂಗಳ ಹಾಯ್ದು |
ಸೃಷ್ಟಿಯೆಲ್ಲವನಾತ್ಮಭಾವವಾವರಿಸೆ ||
ಇಷ್ಟವೇಂ ಕಷ್ಟವೇನಾ ಮಹೈಕ್ಯಜ್ಞಂಗೆ |
ತುಷ್ಟನವನೇಗಳುಂ - ಮರುಳ ಮುನಿಯ || (೭೬೧)

(ವಿಸ್ತೃತಂ+ಆಗಿ)(ದಿಕ್+ತಟಂಗಳ)(ಸೃಷ್ಟಿಯೆಲ್ಲವನ್+ಆತ್ಮಭಾವ+ಆವರಿಸೆ)(ಇಷ್ಟ+ಏಂ)(ಕಷ್ಟ+ಏನ್+ಆ)(ಮಹ+ಐಕ್ಯಜ್ಞಂಗೆ)(ತುಷ್ಟನ್+ಅವನ್+ಏಗಳುಂ)

ನೋಡತಕ್ಕಂತಹ ನೋಟವು ವಿಸ್ತಾರಗೊಂಡು (ವಿಸ್ತೃತ), ದಿಗಂತ(ದಿಕ್ತಟ)ವನ್ನು ದಾಟಿ, ಸೃಷ್ಟಿಯ ಎಲ್ಲವೂ ಒಂದೇ ಎಂಬ ಆತ್ಮಭಾವನೆ ಆವರಿಸಿಕೊಳ್ಳಲು, ಸರ್ವವೂ ಬ್ರಹ್ಮವೇ ಎಂದು ತಿಳಿದವನಿಗೆ (ಐಕ್ಯಜ್ಞ) ಯಾವುದು ಇಷ್ಟ ಮತ್ತು ಇನ್ಯಾವುದು ಕಷ್ಟ? ಅವನು ಸದಾ (ಏಗಳುಂ) ಸಂತೃಪ್ತ(ತುಷ್ಟ)ನಾಗಿರುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When one’s vision expands and crosses the horizons
When his self sentiments fills and pervades the whole universe
The great unifier, the all embracing self rises above all joys and sorrows
Ever content is he – Marula Muniya (761)
(Translation from "Thus Sang Marula Muniya" by Sri. Narasimha Bhat)

Tuesday, April 14, 2015

ವಕ್ತ್ರಶಿರ ಕರ್ಣಾಕ್ಷಿಕರಪದಾದ್ಯಂಗಗಳು (760)

ವಕ್ತ್ರಶಿರ ಕರ್ಣಾಕ್ಷಿಕರಪದಾದ್ಯಂಗಗಳು |
ಮರ್ತ್ಯಸಾಮಾನ್ಯಂಗಳೆಲ್ಲರ‍್ಗಮಿಹವು ||
ಪೃಥ್ವೀಜೆ ಶೂರ್ಪಣಖಿಯರ‍್ಗೆ ರೇಖಾ ಮಾತ್ರ |
ವೆತ್ಯಾಸ ರೂಪದಲಿ - ಮರುಳ ಮುನಿಯ || (೫೭೦)

(ಕರ್ಣ+ಅಕ್ಷಿ+ಕರ+ಪದ+ಆದಿ+ಅಂಗಗಳು)(ಮರ್ತ್ಯಸಾಮಾನ್ಯಂಗಳ್+ಎಲ್ಲರ‍್ಗಂ+ಇಹವು)

ಮುಖ (ವಕ್ತ್ರ), ತಲೆ (ಶಿರ), ಕಿವಿ (ಕರ್ಣ), ಕಣ್ಣು (ಅಕ್ಷಿ), ಕೈ (ಕರ), ಕಾಲು (ಪದ) ಮತ್ತು ದೇಹದ ಇತ್ಯಾದಿ ಭಾಗಗಳು ಮನುಷ್ಯ (ಮರ್ತ್ಯ)ರೆಲ್ಲರಿಗೂ ಸಮಾನವಾಗಿರುತ್ತದೆ. ಸೀತೆ (ಪೃಥ್ವೀಜೆ) ಮತ್ತು ಶೂರ್ಪಣಖಿಯರಿಗೆ ರೂಪಸಾಮ್ಯದಲ್ಲಿ ಒಂದೇ ಒಂದು ಗೆರೆಯಷ್ಟು ಮಾತ್ರ ವ್ಯತ್ಯಾಸ ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Physical organs like face, head, ears, eyes, hands and feet
Are common to all men and almost all men posses them
The difference in appearances between Seetha and Shoorpanakha
Was only of a thin line – Marula Muniya (760)
(Translation from "Thus Sang Marula Muniya" by Sri. Narasimha Bhat)

Monday, April 13, 2015

ಕ್ಷಣವೆರಡಕೆರಡುಗತಿ ಕಾಲಪ್ರವಾಹದಲಿ (759)

ಕ್ಷಣವೆರಡಕೆರಡುಗತಿ ಕಾಲಪ್ರವಾಹದಲಿ |
ಕಣವೆರಡರಂದವೆರಡುಸಬು ರಾಶಿಯಲಿ ||
ದಿನದಿಂದ ದಿನ ಬೇರೆ ನರನಿಂದ ನರ ಬೇರೆ |
ಅನುರೂಪಿದಶೆ ಬಾಹ್ಯ - ಮರುಳ ಮುನಿಯ || (೭೫೯)

(ಕ್ಷಣ+ಎರಡಕೆ+ಎರಡುಗತಿ)(ಕಣ+ಎರಡರ+ಅಂದ+ಎರಡು+ಉಸಬು)

ಕಾಲ ಪ್ರವಾಹದಲ್ಲಿ ಒಂದೊಂದು ಕ್ಷಣವೂ ಬೇರೆ ಬೇರೆ ಮಾರ್ಗಗಳಲ್ಲಿ ಚಲಿಸುತ್ತಿರುತ್ತದೆ. ಒಂದು ಮರಳಿನ (ಉಸಬು) ರಾಶಿಯಲ್ಲಿ ಒಂದೊಂದು ಕಣವೂ ಬೇರೆ ಬೇರೆ ತರಹವಿರುವಂತೆ, ಒಂದು ದಿನದಂತೆ ಮತ್ತೊಂದು ದಿನವಿರುವುದಿಲ್ಲ. ಅದೇ ರೀತಿ ಒಬ್ಬ ಮನುಷ್ಯನು ಇನ್ನೊಬ್ಬನಿಗಿಂತ ಭಿನ್ನವಾಗಿರುತ್ತಾನೆ. ಹೊರ(ಬಾಹ್ಯ)ನೋಟದ ಸ್ಥಿತಿ(ದಶೆ)ಗೆ ಮಾತ್ರ ಒಬ್ಬರು ಇನ್ನೊಬ್ಬರಂತೆ ಕಾಣಿಸಿಕೊಳ್ಳುತ್ತಾನೆ. ಹೊರ(ಬಾಹ್ಯ)ನೋಟದ ಸ್ಥಿತಿ(ದಶೆ)ಗೆ ಮಾತ್ರ ಒಬ್ಬರು ಇನ್ನೊಬ್ಬರಂತೆ ಕಾಣಿಸಿಕೊಳ್ಳುತ್ತಾರೆ (ಅನುರೂಪ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Different are the paths of any two moments in the tide of time,
Different is the beauty of any two particles in a heap of sand
Day and day are different, man and man are different
Similarity is only an outward appearance – Marula Muniya (759)
(Translation from "Thus Sang Marula Muniya" by Sri. Narasimha Bhat)

Friday, April 10, 2015

ವ್ಯಕ್ತಿತೆಯೇ ವಿಶ್ವವೃಕ್ಷದೊಳನುದಿನದ ಕುಸುಮ (758)

ವ್ಯಕ್ತಿತೆಯೇ ವಿಶ್ವವೃಕ್ಷದೊಳನುದಿನದ ಕುಸುಮ |
ಮೌಕ್ತಿಕವದೀ ಜಗಜ್ಜಲಧಿಕುಹರಗಳೊಳ್ ||
ಪ್ರತ್ಯೇಕ ಜೀವಕಂ ಪ್ರತ್ಯೇಕವಿಹುದು ಗತಿ |
ಮುಕ್ತಿ ವೈಯಕ್ತಿಕವೊ - ಮರುಳ ಮುನಿಯ || (೭೫೮)

(ವಿಶ್ವವೃಕ್ಷದ+ಒಳು+ಅನುದಿನದ)(ಮೌಕ್ತಿಕವು+ಅದು+ಈ)(ಜಗತ್+ಜಲಧಿ+ಕುಹರಗಳ್+ಒಳ್)

ಪ್ರತಿಯೊಬ್ಬ ವ್ಯಕ್ತಿಯ ಸ್ವಂತ ವ್ಯಕ್ತಿತ್ವವೆಂಬುದೇ ಈ ಪ್ರಪಂಚದ ವೃಕ್ಷದಲ್ಲಿ ಪ್ರತಿದಿನವೂ ಕಾಣಿಸಿಕೊಳ್ಳುವ ಹೂವು. ಜಗತ್ತಿನ ಸಮುದ್ರದ ಆಳದಲ್ಲಿರುವ (ಕುಹರ) ಮುತ್ತು(ಮೌಕ್ತಿಕ)ಗಳಿವು. ಪ್ರತಿಯೊಬ್ಬ ಜೀವಿಗೂ ಪ್ರತ್ಯೇಕವಾದ ಗುರಿ ನಿಯಮಿಸಲ್ಪಟ್ಟಿದೆ. ಮುಕ್ತಿ ಮಾರ್ಗಗಳು ಆಯಾಯ ವ್ಯಕ್ತಿಗೆ ಸಂಬಂಧಸಿದ ವಿಚಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Individuality is the flower blossoming everyday in the tree of the world
It is the pearl in the caves of the world ocean,
Every soul has its own road to tread,
Salvation is to be achieved by each individual soul – Marula Muniya (758)
(Translation from "Thus Sang Marula Muniya" by Sri. Narasimha Bhat)

Thursday, April 9, 2015

ನಾರಿಕೇಳವ ನೋಡು ಹೊರಗೆ ಗಡಸಿನ ಹೊದಕೆ (757)

ನಾರಿಕೇಳವ ನೋಡು ಹೊರಗೆ ಗಡಸಿನ ಹೊದಕೆ |
ನೀರಲೆವುದದರುದರದಲಿ ಸೃಷ್ಟಿಯಂತು ||
ಶಾರೀರ ಕೃತಿಗಳಲಿ ನಿಯಮವ ತೋರಿ |
ಸ್ವೈರವೆನಿಪಳು ಮನವ - ಮರುಳ ಮುನಿಯ || (೭೫೭)

(ನೀರ್+ಅಲೆವುದು+ಅದರ+ಉದರದಲಿ)(ಸ್ವೈರ+ಎನಿಪಳು)

ತೆಂಗಿನಕಾಯಿ(ನಾರಿಕೇಳ)ಯ ಹೊರಗಿನ ಚಿಪ್ಪು ಗಟ್ಟಿಯಾಗಿದ್ದರೂ ಸಹ ಅದರ ಒಳಗಡೆ ಮೃದುವಾದ ತಿರುಳು ಕೂಡಿ ಎಳನೀರು ತುಂಬಿರುತ್ತದೆ. ಸೃಷ್ಟಿಯ ವಿಚಾರ ಯಾವಾಗಲೂ ಹೀಗೆಯೇ ಇರುತ್ತದೆ. ದೇಹ (ಶಾರೀರ)ದ ಹೊರಗಿನ ರಚನೆಗಳಲ್ಲಿ ಹೋಲಿಕೆಗಳು ಕಾಣಿಸಿಕೊಳ್ಳುವ ನಿಯಮಗಳನ್ನು ತೋರಿಸಿ, ಮನಸ್ಸಿನೊಳಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಇಚ್ಛೆ(ಸ್ವೈರ)ಯಂತೆ ನಡೆಯುವವರೆಂದೆನ್ನಿಸುವಳು ಪ್ರಕೃತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Observe a coconut, the husk and shell covering it is quite hard
But sweet water moves in its bosom and so is Nature,
She displays similarities in its outward physical forms
But the mind within is different and free – Marula Muniya (757)
(Translation from "Thus Sang Marula Muniya" by Sri. Narasimha Bhat)

Wednesday, April 8, 2015

ಪ್ರಾಪಂಚಿಕದ ವಸ್ತು ವರ್ಗಂಗಳೊಳು ತೋರು- (756)

ಪ್ರಾಪಂಚಿಕದ ವಸ್ತು ವರ್ಗಂಗಳೊಳು ತೋರು- |
ವೌಪಮ್ಯವೇನದಾಮೂಲಾಗ್ರಮಲ್ತು ||
ಆಪಾತಮಾತ್ರವನು ಪರಕಿಸಲ್ ವ್ಯಕ್ತಿಯಲಿ |
ಸೋಪಾಧಿಕವೊ ಸಾಮ್ಯ - ಮರುಳ ಮುನಿಯ || (೭೫೬)

(ವರ್ಗಂಗಳ್+ಒಳು)(ತೋರುವ+ಔಪಮ್ಯ+ಏನ್+ಅದು+ಆಮೂಲಾಗ್ರಂ+ಅಲ್ತು )

ಪ್ರಪಂಚದ ಪದಾರ್ಥ ಮತ್ತು ಅವುಗಳ ಮೇಲ್ನೋಟಕ್ಕೆ ತೋರುವ ಹೋಲಿಕೆ(ಔಪಮ್ಯ)ಗಳು ಬುಡದಿಂದ ತುದಿಯವರೆಗೆ(ಆಮೂಲಾಗ್ರ) ಒಂದೇ ತರಹವಿರುವುದಿಲ್ಲ. ಒಬ್ಬ ವ್ಯಕ್ತಿಯ ಹೊರನೋಟ(ಆಪಾತ)ವನ್ನು ಮಾತ್ರ ನಾವು ಪರೀಕ್ಷಿಸಿ ನೋಡಿದಾಗ ಅಡ್ಡಿ ಅಡಚಣೆಗಳ ಜೊತೆ (ಸೋಪಾಧಿ) ಸಾದೃಶ್ಯಗಳು (ಸಾಮ್ಯ) ಸಹ ಕಾಣಿಸಿಕೊಳ್ಳುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Similarities in the various things of nature
Are not comprehensive and absolute but only relative,
If we observe the outward similarities seen in individuals
It becomes evident that they are only relative – Marula Muniya (756)
(Translation from "Thus Sang Marula Muniya" by Sri. Narasimha Bhat)

Tuesday, April 7, 2015

ನೆಲ ಪರಿಯುತಿರೆ ಮನೆಯು (ನಿಂತೀತೆ ಮುರಿದದೆಯೆ?)

ನೆಲ ಪರಿಯುತಿರೆ ಮನೆಯು (ನಿಂತೀತೆ ಮುರಿದದೆಯೆ?)|
ಜಲ ಪರಿಯದಿರೆ ಜನರ್ ಕುಡಿಯಲಹುದೇನು? ||
ಜ್ವಲನ ತಂಪಾಗುವನೆ ಬಿಸಿಕೊಡುವರಾರಾಗ? |
ಕೆಲಸಮೊರ‍್ವರಿಗೊಂದು - ಮರುಳ ಮುನಿಯ || (೭೫೫)

(ಪರಿಯುತ+ಇರೆ)(ಪರಿಯದೆ+ಇರೆ)(ಕುಡಿಯಲ್+ಅಹುದು+ಏನು)(ತಂಪು+ಆಗುವನೆ)(ಬಿಸಿಕೊಡುವರ್+ಆರ್+ಆಗ)(ಕೆಲಸಂ+ಒರ‍್ವರಿಗೆ+ಒಂದು)

ಭೂಮಿಯು ಸ್ಥಿರವಾಗಿ ನಿಲ್ಲದೆ ನೀರಿನ ಪ್ರವಾಹದಂತೆ ಹರಿಯುತ್ತಿದ್ದರೆ, ಅದರ ಮೇಲೆ ಕಟ್ಟಿರುವ ಮನೆಯು ಮುರಿಯದೆ ನಿಂತುಕೊಳ್ಳಲಾದೀತೇನು? ಹಾಗೆಯೇ ನೀರು ಎಲ್ಲೂ ಹರಿಯದೆ ಒಂದೇ ಕಡೆ ನಿಂತುಕೊಂಡುಬಿಟ್ಟರೆ, ವಿವಿಧ ಪ್ರದೇಶದಲ್ಲಿರುವ ಜನರಿಗೆ ಕುಡಿಯಲು ನೀರು ಇರಲಾರದು. ಬೆಂಕಿಯು(ಜ್ವಲ) ಉಷ್ಣತೆಯನ್ನು ಕೊಡದೆ ತಣ್ಣಗಿದ್ದಲ್ಲಿ ಇನ್ಯಾರು ತಾನೆ ಶಾಖ ದೊರಕಿಸುತ್ತಾರೆ? ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕಾರ್ಯವನ್ನು ಭಗವಂತನು ಗೊತ್ತುಪಡಿಸಿದ್ದಾನೆ. ಅವರು ಅದರಂತೆಯೇ ನಡೆದುಕೊಳ್ಳಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Won’t the house collapse when the earth itself starts swaying?
What will the people drink when there’s no rainfall and flow of water?
Who will produce heat when fire itself becomes cold?
Each has its own quality and duty – Marula Muniya (755)
(Translation from "Thus Sang Marula Muniya" by Sri. Narasimha Bhat)

Monday, April 6, 2015

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ (754)

ಇಂದ್ರಿಯನಿರೋಧದಿಂ ಸರಸ ಜೀವನ ಭಂಗ |
ರುಂದ್ರ ರಾಸಿಕ್ಕದಿಂದಾತ್ಮಗತಿ ಭಂಗ ||
ದ್ವಂದ್ವದ ಸಮನ್ವಯದ ಬಂಧುರತೆಯಿಂದೆ ನೀಂ |
ಸಾಂದ್ರಾತ್ಮ ಜೀವಿಯಿರು - ಮರುಳ ಮುನಿಯ || (೭೫೪)

(ರಾಸಿಕ್ಕದಿಂದ+ಆತ್ಮಗತಿ)(ಸಾಂದ್ರ+ಆತ್ಮ)

ಇಂದ್ರಿಯಗಳನ್ನು ಪ್ರತಿಬಂಧಿಸಿ (ನಿರೋಧ) ನಡೆಯುವುದರಿಂದ ವಿನೋದಕರವಾದ ಜೀವನವು ಮುರಿದುಬೀಳುತ್ತದೆ. ಘೋರ ರೀತಿಯಲ್ಲಿ (ರುಂದ್ರ) ಇಂದ್ರಿಯ ಸುಖಾಭಿಲಾಶೆಗಳನ್ನು ಅನುಭವಿಸುವುದರಿಂದ, ಆತ್ಮದ ಸಹಜಗತಿ ಕುಂಠಿತವಾಗುತ್ತದೆ. ವೈರುದ್ದ್ಯದ ಹೊಂದಾಣಿಕೆ(ಸಮನ್ವಯ)ಯ ಸುಂದರತೆ(ಬಂಧುರತೆ)ಯಿಂದ ನೀನು ಉನ್ನತವಾದ ಆತ್ಮವನ್ನು ಹೊಂದಿರುವ ಜೀವಿಯಾಗಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Suppression of senses jeopardizes happy harmonious life,
Excessive lasciviousness hinders the pilgrimage of self,
Harmoniously coordinate all dualities of life
And be a well-saturated soul – Marula Muniya (754)
(Translation from "Thus Sang Marula Muniya" by Sri. Narasimha Bhat)

Friday, April 3, 2015

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ (753)

ಹಸಿವಿರಿಯದಿರೆ ಜೀವವೆದ್ದು ನಡೆವಂತಿಲ್ಲ |
ರಸದಾಶೆಯಿರದೆ ಹಸಿವಿನಲ್ಲಿ ಹುರುಪಿಲ್ಲ ||
ಅಸಮರುಚಿಯಿರದಂದು ರಸವಿವೇಕಿತೆಯಿಲ್ಲ |
ವಿಷಮವಿಂತುಪಯುಕ್ತ - ಮರುಳ ಮುನಿಯ || (೭೫೩)

(ಹಸಿವು+ಇರಿಯದೆ+ಇರೆ)(ಜೀವವು+ಎದ್ದು)(ನಡೆವಂತೆ+ಇಲ್ಲ)(ರಸದ+ಆಶೆ+ಇರದೆ)(ಹುರುಪು+ಇಲ್ಲ)(ಅಸಮರುಚಿ+ಇರದಂದು)(ವಿಷಮ+ಇಂತು+ಉಪಯುಕ್ತ)

ಹಸಿವು ಎನ್ನುವುದು ಜೀವಿಯನ್ನು ತಿವಿದು ಎಬ್ಬಿಸದಿದ್ದರೆ, ಜೀವಿಯು ಎದ್ದು ತನ್ನ ಹಸಿವನ್ನು ತಣಿಸಲು ಆಹಾರವನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಜಗತ್ತಿನ ರುಚಿಗಳನ್ನು ಉಣುವ ಬಯಕೆಗಳಿಲ್ಲದಿದ್ದಲ್ಲಿ ಆ ಹಸಿವನ್ನು ತಣಿಸುವುದರಲ್ಲಿ ಯಾವ ಉತ್ಸಾಹ(ಹುರುಪು)ವೂ ಇರುವುದಿಲ್ಲ. ಬೇರೆ ಬೇರೆ ರುಚಿಗಳಿಲ್ಲದಿದ್ದಲ್ಲಿ ರಸ ರುಚಿಗಳ ಬಗ್ಗೆ ವಿವೇಕಿತನವಿರುವುದಿಲ್ಲ. ಈ ಬಗೆಯಾಗಿ ಅಸಮತೆಯ ಗುಣ ಬಾಳಿಗೆ ಉಪಯುಕ್ತವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If hunger doesn’t spur us we do not get up and walk,
Without desire for delicious dishes, hunger is quite uninteresting,
Without variety in tastes there’s no scope for joyful discrimination
Unevenness thus has its own uses – Marula Muniya (753)
(Translation from "Thus Sang Marula Muniya" by Sri. Narasimha Bhat)

Thursday, April 2, 2015

ಸ್ವೀಯ ಪರಕೀಯವೆಂಬಿಂದ್ರಿಯ ವಿಷಯವೆಂಬ (752)

ಸ್ವೀಯ ಪರಕೀಯವೆಂಬಿಂದ್ರಿಯ ವಿಷಯವೆಂಬ |
ಕಾಯ ಮಾನಸವೆಂಬ ರಸಿಕ ರಸವೆಂಬ ||
ಪ್ರೇಯಸೀ ಪ್ರಿಯವೆಂವ ಪ್ರಕೃತಿ ಪೂರುಷರೆಂಬ |
ಮಾಯೆಯಿಂ ದ್ವಂದ್ವಜಗ - ಮರುಳ ಮುನಿಯ || (೭೫೨)

(ಪರಕೀಯ+ಎಂಬ+ಇಂದ್ರಿಯ)

ತನ್ನದು (ಸ್ವೀಯ) ಮತ್ತು ಇತರರದು (ಪರಕೀಯ) ಎನ್ನುವ, ಇಂದ್ರಿಯ ಮತ್ತು ಭೋಗಭಿಲಾಷೆಗಳೆಂಬ, ದೇಹ ಮತ್ತು ಮನಸ್ಸು ಎನ್ನುವ, ರಸಗಳನ್ನು ಅಸ್ವಾದಿಸುವವನು ಮತ್ತು ರಸ ರುಚಿಗಳೆಂಬ, ಪ್ರಿಯೆ ಮತ್ತು ಪ್ರಯಕರ ಎಂಬ ಮತ್ತು ಪ್ರಕೃತಿ ಮತ್ತು ಪುರುಷ ಎನ್ನುವ, ಮಾಯೆಯ ಆಟದಿಂದ ಈ ಜಗತ್ತಿನ ವಿರುದ್ಧ ಜೋಡಿಗಳು ಮಾಡಲ್ಪಟ್ಟಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dualities like the akin and the alien, senses and sense of objects,
Body and mind, beauty and love of beauty
The beloved and lover, Nature and Master of Nature
This whole world of dualities stems from Maya – Marula Muniya (752)
(Translation from "Thus Sang Marula Muniya" by Sri. Narasimha Bhat)