Tuesday, May 31, 2011

ಕನ್ನಡಿಯೆದುರು ನಿಂತು ಮಾನವನು ತನ್ನ ಲಾ- (16)

ಕನ್ನಡಿಯೆದುರು ನಿಂತು ಮಾನವನು ತನ್ನ ಲಾ-|
ವಣ್ಯಗಳ ನೋಡಿ ನೋಡುತ ಹಿಗ್ಗುವಂತೆ ||
ಚಿನ್ಮಯಂ ಸೃಷ್ಟಿ ಚಿತ್ರದಿ ತನ್ನ ವೀರ್ಯ ಸಂ-|
ಪನ್ನತೆಯನನುಭವಿಪ - ಮರುಳ ಮುನಿಯ || (೧೬)

  (ಸಂಪನ್ನತೆಯನು+ಅನುಭವಿಪ)

 ಮನುಷ್ಯನು ಕನ್ನಡಿಯ ಮುಂದೆ ನಿಂತುಕೊಂಡು ತನ್ನ ಸೊಗಸು ಮತ್ತು ಸೌಂದರ್ಯಗಳನ್ನು(ಲಾವಣ್ಯ) ನೋಡುತ್ತ ಸಂತೋಷಿಸುವಂತೆ (ಹಿಗ್ಗುವಂತೆ), ಪರಬ್ರಹ್ಮ (ಚಿನ್ಮಯ)ನೂ ಸಹ ಸೃಷ್ಟಿಯ ರಚನೆಯಲ್ಲಿ ತನ್ನ ಪರಾಕ್ರಮ (ವೀರ್ಯ) ಮತ್ತು ಸಿರಿಸಂಪತ್ತುಗಳನ್ನು (ಸಂಪನ್ನತೆಯನು) ಅನುಭವಿಸುತ್ತಾನೆ.

Friday, May 27, 2011

ಚರಚರ್ಯಲೋಕದೊಳ್ ಸ್ಥಿರ ಪುರುಷತನವೊಂದು (15)

ಚರಚರ್ಯಲೋಕದೊಳ್ ಸ್ಥಿರ ಪುರುಷತನವೊಂದು |
ಪುರುಷತ್ವದೊಳ್ ಸ್ಥಿರಂ ಪ್ರಗತಿಮತಿಯೊಂದು ||
ಸ್ಥಿರಲಕ್ಷ್ಯವಾಪಥದೊಳಾತ್ಮದುನ್ನತಿಯೊಂದು |
ಪರಮಸ್ಥಿರಂ ಬ್ರಹ್ಮ -ಮರುಳ ಮುನಿಯ || (೧೫)

(ಸ್ಥಿರಲಕ್ಷ್ಯವು++ಪಥದ+ಒಳ್+ಆತ್ಮದ+ಉನ್ನತಿ+ಒಂದು)

ಚಲಿಸುವ ಮತ್ತು ಚಂಚಲವಾಗಿರುವ (ಚರಚರ್ಯ) ಪ್ರಪಂಚದಲ್ಲಿ ಸ್ಥಿರವಾಗಿರುವ ಪುರುಷತ್ವವು ಒಂದು ಲಕ್ಷಣ. ಒಂದು ವಿಧವಾದ ಗುಣ. ಈ ಶೌರ್ಯ(ಪುರುಷತ್ವ)ದಲ್ಲಿ ಪ್ರಗತಿಯ ಬುದ್ಧಿ ಎನ್ನುವ ಇನ್ನೊಂದು ಲಕ್ಷಣವು ಸ್ಥಿರವಾಗಿದೆ. ಈ ಪ್ರಗತಿಯ ಬುದ್ಧಿ ಇರುವುದರಿಂದಲೇ ಮನುಜನ ಏಳಿಗೆ. ಇಲ್ಲದಿದ್ದಲ್ಲಿ ಇಲ್ಲ. ಈ ದೃಢವಾದ ಮತ್ತು ನಿಶ್ಚಿತವಾದ ಗುರಿಯನ್ನು ಹೊಂದುವ ಮಾರ್ಗದಲ್ಲಿ ಆತ್ಮದ ಉನ್ನತಿಯಾಗಬೇಕು. ಈ ಆತ್ಮದ ಉನ್ನತಿಯಿಂದಲೇ ಒಬ್ಬ ಮನುಷ್ಯನ ಜಗತ್ತು ವಿಸ್ತಾರವಾಗಿ ಸರ್ವವೂ ತನ್ನಾತ್ಮದೊಂದು ಭಾಗವೇ ಎನ್ನುವ ಭಾವನೆಯು ಉಂಟಾಗುತ್ತದೆ. ಅವನು ಈ ವಿಧದಲ್ಲಿ ಉನ್ನತಿಗೇರಿದಂತೆ ಅವನ ಸಣ್ಣತನವು ಸವೆದುಹೋಗುತ್ತದೆ. ಪರಬ್ರಹ್ಮನು ಶಾಶ್ವತ.

Tuesday, May 24, 2011

ಕೊಂಬೆರೆಂಬೆಗಳೆಲೆಗಳಲುಗುವುವು ಮೇಲುಗಡೆ (14)

ಕೊಂಬೆರೆಂಬೆಗಳೆಲೆಗಳಲುಗುವುವು ಮೇಲುಗಡೆ |
ಕಂಬದಂತಚಲವಲೆ ಮರದ ಬುಡ ಮುಂಡ ||
ಜೃಂಭಿಪುದು ಜೀವಾಳಿ ಮಾಯಾನಿಲದೊಳಂತು |
ಕಂಪಿಸನು ಪರಬೊಮ್ಮ - ಮರುಳ ಮುನಿಯ || (೧೪)

(ಕೊಂಬೆರೆಂಬೆಗಳ+ಎಲೆಗಳು+ಅಲುಗುವುವು)(ಕಂಬದಂತೆ+ಅಚಲವು+ಅಲೆ)(ಮಾಯ+ಅನಿಲದೊಳು+ಅಂತು)

 ಮರದ ತುದಿಯಲ್ಲಿ ಹಾಗೂ ಮೇಲ್ಭಾಗದಲ್ಲಿ ಬೆಳೆದಿರುವ ಕೊಂಬೆ ಮತ್ತು ರೆಂಬೆಗಳಲ್ಲಿರುವ ಎಲೆಗಳು ಅಲುಗಾಡುತ್ತವೆ. ಆದರೆ ಮರದ ಬುಡ ಮತ್ತು ಮುಂಡಭಾಗ ಕಂಬದಂತೆ ಅಲುಗಾಡದೆ(ಅಚಲ) ನಿಂತಿರುತ್ತದೆ. ಮಾಯೆಯೆಂಬ ಗಾಳಿ(ಮಾಯಾನಿಲ)ಯಲ್ಲಿ ಪ್ರಪಂಚದಲ್ಲಿರುವ ಜೀವರಾಶಿಗಳು(ಜೀವಾಳಿ) ಹೀಗೆ ವೃದ್ಧಿಯಾಗುತ್ತದೆ(ಜೃಂಭಿಪುದು). ಆದರೆ ಪರಬ್ರಹ್ಮನು ನಡುಗದೆ ಸ್ಥಿರವಾಗಿ ನಿಂತಿರುತ್ತಾನೆ.

Monday, May 23, 2011

ಸತತ ಕಲ್ಲೋಲಮುಖ ನೋಡು ಮೇಲ್ಗಡೆ ಜಲಧಿ (13)

ಸತತ ಕಲ್ಲೋಲಮುಖ ನೋಡು ಮೇಲ್ಗಡೆ ಜಲಧಿ |
ವಿತತ ಶಾಂತಿಯ ರಾಶಿಯದು ತೆರೆಗಳಡಿಯೋಳ್ ||
ಕೃತಕ ಸಂಸಾರಿ ದಶೆ ಮೇಲಂತು ಬೊಮ್ಮಂಗೆ |
ಸ್ವತ ಅವನು ನಿಶ್ಚೇಷ್ಟ - ಮರುಳ ಮುನಿಯ || (೧೩)

(ತೆರೆಗಳ+ಅಡಿಯೋಳ್)

 ಸಮುದ್ರದ(ಜಲಧಿ) ಮೇಲ್ಭಾಗ ಬೃಹತ್ ಅಲೆಗಳ(ಕಲ್ಲೋಲ) ನೋಟದಿಂದ ಕೂಡಿರುತ್ತದೆ. ಆದರೆ ಆ ಅಲೆಗಳ ತಳದಲ್ಲಿ ವಿಸ್ತಾರವಾದ (ವಿತತ) ನೆಮ್ಮದಿಯ ರಾಶಿ ಇರುತ್ತದೆ. ಅಂತೆಯೇ ಹೊರನೋಟಕ್ಕೆ ಬ್ರಹ್ಮನಿಗೆ ಅಸಹಜವಾದ(ಕೃತಕ) ಸಂಸಾರಿಯ ಸ್ಥಿತಿ. ವಾಸ್ತವದಲ್ಲಿ ಹಾಗೂ ಆಂತರ್ಯದಲ್ಲಿ ಪರಬ್ರಹ್ಮ ತಾನು ಸ್ಥಾವರ (ಕ್ರಿಯಾತೀತ).

Friday, May 20, 2011

ಉಸಿರೇನು ಹಸಿವೇನು ಅಳುವೇನು ನಗುವೇನು (12)

ಉಸಿರೇನು ಹಸಿವೇನು ಅಳುವೇನು ನಗುವೇನು |
ಬಿಸಿಯೇನು ತಣಿವೇನು ಹೊಸಹೊಳಪದೇನು ||
ಅಸುವಿನೆಲ್ಲನುಭವಂಗಳು ಬ್ರಹ್ಮ ಚೈತನ್ಯ |
ರಸವಿಸರವಲ್ಲವೇ -ಮರುಳ ಮುನಿಯ || (೧೨)

(ಅಸುವಿನ+ಎಲ್ಲ+ಅನುಭವಂಗಳು)

ನಾವುಗಳು ಉಸಿರಾಡುವ ಕ್ರಿಯೆ, ನಮಗೆ ಹಸಿವಾಗುವ ಅನುಭವ, ನಮಗೆ ಉಂಟಾಗುವ ದುಃಖ ಮತ್ತು ಸಂತೋಷಗಳು, ಇಂದ್ರಿಯ ಅನುಭವಗಳಿಂದಾಗುವ ಬಿಸಿ, ತಂಪು, ಕಾಂತಿ ಪ್ರಖರತೆಗಳು ಮತ್ತು ಈ ರೀತಿ ಜೀವಕ್ಕೆ (ಅಸು) ಆಗುವ ವಿಧ ವಿಧವಾದ ಅನುಭವಗಳೆಲ್ಲವೂ ಆ ಪರಬ್ರಹ್ಮನ ಶಕ್ತಿ(ಚೈತನ್ಯ)ಯಿಂದ ಆಗುತ್ತವೆ. ಅವನ ಸಾರ ವಿಸ್ತಾರ(ವಿಸರ)ವಾಗಿ ಹಬ್ಬಿ ಹರಡುತ್ತಿರುತ್ತದೆ.

Wednesday, May 18, 2011

ಈಶ್ವರನೆನಿಪ್ಪವನ ಬೆಂಗಡೆಯೆ ತಾಂ ಬ್ರಹ್ಮ (11)


ಈಶ್ವರನೆನಿಪ್ಪವನ ಬೆಂಗಡೆಯೆ ತಾಂ ಬ್ರಹ್ಮ |
ಶಾಶ್ವತಂ ಬ್ರಹ್ಮ ತಾತ್ಕಾಲಿಕಂ ದೇವರ್ ||
ವಿಶ್ವಮಂ ನಿರ್ಮಿಸಿಯೆ ನಿರ್ವಹಿಪನೀಶ್ವರಂ |
ನಿಷ್ಕ್ರಿಯಂ ಪರಬೊಮ್ಮ -ಮರುಳ ಮುನಿಯ || (೧೧)


(ಈಶ್ವರನ್+ಎನಿಪ್ಪವನ) (ನಿರ್ವಹಿಪನ್+ಈಶ್ವರಂ)

ಈಶ್ವರನೆನಿಸಿಕೊಳ್ಳುವನ ಹಿನ್ನೆಲೆಯಾಗಿರುವವನು (ಬೆಂಗಡೆಯೆ) ಬ್ರಹ್ಮ. ಈ ಪದ್ಯದಲ್ಲಿ ಈಶ್ವರ, ಬ್ರಹ್ಮರನ್ನು ಬೇರೆ ಬೇರೆ ಅರ್ಥದಲ್ಲಿ ಬಳಸಿದ್ದಾರೆ. ಮೊದಲು ಬ್ರಹ್ಮನಾಗಿದ್ದವನೇ ಈವಾಗ ಈಶ್ವರನೆನಿಸಿಕೊಂಡಿದ್ದಾನೆ. ಬ್ರಹ್ಮನಾದರೋ ಶಾಶ್ವತವಾಗಿರುವವನು, ದೇವರು ಮಾತ್ರ ತಾತ್ಕಾಲಿಕ. ಏಕೆಂದರೆ ಈ ಪ್ರಪಂಚವನ್ನು ನಿರ್ಮಾಣ ಮಾಡಿ ಅದನ್ನು ನಿಭಾಯಿಸುವವನು (ನಿರ್ವಹಿಪನ್) ಈಶ್ವರನು. ಬ್ರಹ್ಮನಾದರೋ ಬೇರೆ ಯಾವ ಕೆಲಸವನ್ನೂ ಮಾಡಲಾರ.

Tuesday, May 17, 2011

ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ (10)


ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ |
ಮನನಾನುಸಂಧಾನಕಾದುದೀ ಕಗ್ಗ ||
ನೆನೆನೆನೆಯುತೊಂದೊಂದು ಪದ್ಯವನದೊಮ್ಮೊಮ್ಮೆ |
ಅನುಭವಿಸಿ ಚಪ್ಪರಿಸೊ - ಮರುಳ ಮುನಿಯ || (೧೦)


(ಮನನ+ಅನುಸಂಧಾನಕೆ+ಅದುದು+ಈ)(ನೆನೆನೆನೆಯುತ+ಒಂದು+ಒಂದು) (ಪದ್ಯವನು+ಅದು+ಒಮ್ಮೊಮ್ಮೆ)

ಹಿಂದಿನ ಕಗ್ಗದಲ್ಲಿ ಈ ಕಗ್ಗಗಳು ಬಾಯ್‍ಚಪಲಕ್ಕೋಸ್ಕರ ಬೆಳೆದದ್ದು ಎಂದು ಹೇಳಿದ ಮಾತ್ರಕ್ಕೆ ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಇದು ಒಂದು ವಿನೋದ(ಬಿನದ) ಕಥೆಯಲ್ಲ. ಹೃದಯದ ರಸವು ಬೆಟ್ಟದಿಂದ ಹರಿದು ಬರುತ್ತಿರುವ ಪ್ರವಾಹದಂತೆ (ನಿರ್ಝರಿ) ಹರಿದು ಬರುತ್ತಿರುವುದೋ ಅಲ್ಲ. ಚಿಂತನೆ (ಮನನ) ಮತ್ತು ಅನುಸರಿಸು (ಅನುಸಂಧಾನ)ವುದಕ್ಕಾಗಿ ಈ ಕಗ್ಗವನ್ನು ಬರೆಯಲಾಗಿದೆ. ಆದುದ್ದರಿಂದ ಒಂದೊಂದು ಪದ್ಯವನ್ನು ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾ, ಬಾಯಲ್ಲಿ ಚಪ್ಪರಿಸು. ಆವಾಗಲೇ ಅವುಗಳ ಸ್ವರಸ್ಯದ ಅರಿವು ನಿನಗೆ ಉಂಟಾಗುತ್ತದೆ.

Thursday, May 12, 2011

ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ (9)

ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ |
ಹಿಗ್ಗಿ ಬೆಳಸಿದ ಬಾಲದಂತೆ ಸಿಗ್ಗುಳಿದು ||
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ಧಾಳಿ |
ಉಗ್ಗು ಬಾಯ್ಚಪಲವಿದು - ಮರುಳ ಮುನಿಯ || ()

 ಕಗ್ಗ+ಇದು)(ಸಿಗ್ಗು+ಉಳಿದು)(ಬಾಯ್+ಚಪಲ+ಇದು)

 ಈ ಕಗ್ಗವು ಲಂಕೆಯಲ್ಲಿ ಹನುಮಂತನು ನಾಚಿಕೆ (ಸಿಗ್ಗು) ಬಿಟ್ಟು (ಉಳಿದು) ಸಂತೋಷ (ಹಿಗ್ಗು)ದಿಂದ ಬೆಳೆಸಿದ ಬಾಲದಂತೆ ಬೆಳೆಯುತ್ತಾ ಇದೆ. ಇದು ಬೆಳೆಯುವುದಕ್ಕೆ ಕಾರಣವನ್ನು ಮಾನ್ಯ ಡಿ.ವಿ.ಜಿ.ಯವರು ಕೊಡುತ್ತಾರೆ. ಈ ಪ್ರಪಂಚದ ಪ್ರಶ್ನೆಗಳ ಧಾಳಿ ನುಗ್ಗಿ ಬರುತ್ತಿರುವಾಗ ತನ್ನ ಬಾಯಿಯ ಚಪಲವನ್ನು ತೀರಿಸಿಕೊಳ್ಳುವುದಕ್ಕಾಗಿ ಈ ಮಾತುಗಳು ಉಕ್ಕಿ(ಉಗ್ಗು) ಬರುತ್ತಿವೆ ಎನ್ನುತ್ತಾರೆ. ಈ ರೀತಿಯಾಗಿ ಹೊಸ ಹೊಸ ಪ್ರಶ್ನೆಗಳು ಪ್ರಪಂಚದಲ್ಲಿ ಹುಟ್ಟಿಕೊಳ್ಳುತ್ತಿರುವಾಗ ಬೇರೆ ಗತ್ಯಂತರವಿಲ್ಲದೆ ಆ ಪ್ರಶ್ನೆಗಳಿಗೆ ಸಮಾಧಾನಗಳನ್ನು ಹುಡುಕುವುದಕ್ಕೋಸ್ಕರ ಕಗ್ಗವು ಬೆಳೆಯಬೇಕಾಯಿತು.

Wednesday, May 11, 2011

ಮರುಳ ಮುನಿಯನ ಕನಸು ಸರಳ ಬಾಳ್ವೆಯ ಕನಸು (8)

ಮರುಳ ಮುನಿಯನ ಮನಸು ಸರಳ ಬಾಳ್ವೆಯ ಕನಸು |
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು ||
ಕೆರೆಯಿನೆದ್ದಲೆಯೆರಚಿ ತಣಿವು ತುಂತುರನಿನಿತು |
ಮರಳಿ ತೆರೆ ಸೇರ‍್ವುದಲ - ಮರುಳ ಮುನಿಯ || (೮)

(ಕೆರೆಯಿನ್+ಎದ್ದ+ಅಲೆ+ಎರಚಿ)(ತುಂತುರಂ+ಇನಿತು)(ಸೇರ‍್ವುದು+ಅಲ)

ಮರುಳ ಮುನಿಯನ ಮನಸ್ಸು ಕಾಣಬಯಸಿದ್ದು ಸರಳವಾಗಿ ಜೀವನವನ್ನು ನಡೆಸುವ ಕನಸು. ಅದು ವಿನೋದ, ಸತ್ಯ, ವಿನಯ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುವ ಸುಖ ಮತ್ತು ಚೆಲುವುಗಳ ಕನಸು. ಕೆರೆಯಿಂದ ಎದ್ದ ಒಂದು ಅಲೆಯು ಸ್ವಲ್ಪ ತುಂತುರು ಹನಿಗಳನ್ನು ತನ್ನ ಹತ್ತಿರವಿರುವವರ ಮೇಲೆ ಚುಮುಕಿಸಿ, ತಂಪನ್ನು ನೀಡಿ ಪುನಃ ಕೆರೆಯನ್ನು ಸೇರುವಂತೆ, ತಾನು ಈ ಜಗತ್ತಿನಲ್ಲಿ ತನ್ನ ಸಂಪರ್ಕಕ್ಕೆ ಬಂದ ಜನಗಳಿಗೆ ತಂಪನ್ನು ನೀಡಿ, ಪುನಃ ಭಗವಂತನಲ್ಲಿ ಲೀನವಾಗುವ ಕನಸು.

Tuesday, May 10, 2011

ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ (7)

ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ |
ಸುರಿವೆನೆನ್ನೆದೆಚೀಲದೆಲ್ಲ ಪುರುಳುಗಳ |
ಸರಿ ನೋಡಿ ಕೊಡುವ ಸಜ್ಜನರಿಹರೆ ಲೋಕದಲಿ |
ಶರಣಪ್ಪೆನವರಿಂಗೆ - ಮರುಳ ಮುನಿಯ || ()

 ಸುರಿವೆನು+ಎನ್ನ+ಎದೆಯ+ಚೀಲದ+ಎಲ್ಲ)(ಸಜ್ಜನರು+ಇಹರೆ)(ಶರಣು+ಅಪ್ಪೆಂ+ಆವರಿಂಗೆ)

 ನಾನು ಮರುಳಮುನಿಯ, ಮಂಕುತಿಮ್ಮನ ಬಳಿಕ ಬಂದವನು. ನನ್ನ ಹೃದಯದ ಚೀಲದಲ್ಲಿರುವ ಸಕಲ ಸಾರ(ಪುರುಳು)ಗಳನ್ನು ಈ ಕೃತಿಯಲ್ಲಿ ಸುರಿಯುತ್ತೇನೆ. ಇದರ ಒಪ್ಪು ತಪ್ಪುಗಳನ್ನು ನೋಡಿ ಕೊಡುವಂತಹ ಸಂಭಾವಿತ ಜನರು ಈ ಲೋಕದಲ್ಲಿ ಇರುವರೇನು? ಹಾಗಿದ್ದಲ್ಲಿ ಅವರಿಗೆ ಶರಣು ಎನ್ನುತ್ತೇನೆ.

Monday, May 9, 2011

ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ (6)

ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ |
ಕೊರಗೆನ್ನೆದೆಯ ತಿತ್ತಿಯೊಳಗೆ ತುಂಬಿಹುದು |
ಸುರಿವೆನದನಿಲ್ಲಿ ಸಾಧುಗಳು ಸರಿಪೇಳರೇಂ |
ಗುರುವಲೇ ಜಗ ನಮಗೆ -ಮರುಳ ಮುನಿಯ || ()

 ಕೊರಗು+ಎನ್ನ+ಎದೆಯ)(ತಿತ್ತಿ+ಒಳಗೆ)(ತುಂಬಿ+ಇಹುದು)(ಸುರಿವೆನ್+ಅದನ್+ಇಲ್ಲಿ)

 ಮರುಳಮುನಿಯನೆಂಬ ನಾನು ಮಂಕುತಿಮ್ಮನ ತಮ್ಮ. ನನ್ನ ಎದೆಯ ತಿದಿ(ತಿತ್ತಿ)ಯ ಒಳಗಡೆ ಒಂದು ವ್ಯಥೆ (ಕೊರಗು) ತುಂಬಿಕೊಂಡಿದೆ. ಆ ವ್ಯಥೆಯನ್ನು ನಾನು ಇಲ್ಲಿ ಹೇಳಿಕೊಳ್ಳುತ್ತಿದ್ದೇನೆ. ಸಾಧುಗಳು ಇದಕ್ಕೆ ಪರಿಹಾರವನ್ನು ವಿಚಾರಮಾಡಿ ಹೇಳಲಿ. ಜಗತ್ತೇ ನಮಗೆ ಗುರು ಅಲ್ಲವೇ?

Friday, May 6, 2011

ದ್ವಂದ್ವ ತರ್ಕದಿನಾಚೆ ಶುಭ ಅಶುಭದಿಂದಾಚೆ (5)

ದ್ವಂದ್ವ ತರ್ಕದಿನಾಚೆ ಶುಭ ಅಶುಭದಿಂದಾಚೆ |
ಇಂದ್ರಿಯ ಸ್ಪರ್ಶನದ ಸುಖ ದುಃಖದಾಚೆ ||
ಸಂದಿರ್ಪುದೊಂದು ದಶೆಯದು ನಿತ್ಯಸೌಖ್ಯದಶೆ |
ಎಂದುಮರಸದನು ನೀ -ಮರುಳ ಮುನಿಯ || (೫)

(ಎಂದುಮ್+ಅರಸು+ಅದನು)

ವಿರುದ್ಧ ಜಟಿಲ (ದ್ವಂದ್ವ) ತರ್ಕಗಳ ಆಚೆ, ಶುಭ ಮತ್ತು ಅಶುಭಗಳ ಆಚೆ ಮತ್ತು ನಮ್ಮ ಇಂದ್ರಿಯಗಳಿಗೆ ನಿಲುಕುವ ಸುಖ ಮತ್ತು ದುಃಖಗಳ ಆಚೆ, ಒಂದು ಸ್ಥಿತಿ(ದೆಶೆ)ಯು ಕೂಡಿಕೊಂಡಿದೆ. ಅದೇ ಸದಾ ನೆಮ್ಮದಿ, ಆರೋಗ್ಯ ಮತ್ತು ಸಂತೋಷದಿಂದಿರುವಂತಹ ಸ್ಥಿತಿ. ಎಂದೆಂದಿಗೂ ಆ ಸ್ಥಿತಿಯನ್ನು ನೀನು ಕಾಣಲು ಎತ್ನಿಸು (ಅರಸು).

Thursday, May 5, 2011

ಶ್ರೀಮಂತನಾವನೀ ಭುವನ ಮುಕುರದಿ ನಿಜ (4)

ಶ್ರೀಮಂತನಾವನೀ ಭುವನ ಮುಕುರದಿ ನಿಜ |
ಸ್ವಾಮಿತೆಯ ಲೀಲೆಗಳ ನೋಡಿ ನಲಿಯಲ್ಕೀ ||
ಭೂಮ ಪ್ರಪಂಚವಂ ನಿರವಿಸಿದನೋ ಅವನ |
ನಾಮರಸುವಂ ಬಾರೊ - ಮರುಳ ಮುನಿಯ || (೪)

(ಶ್ರೀಮಂತನ್+ಆವನ್+ಈ) (ನಲಿಯಲ್ಕೆ+ಈ) (ಆವನಮ್+ಆಂ+ಅರಸುವಂ)

ಸರ್ವೈಶ್ವರಯುಕ್ತನಾದ ಯಾವನು ಈ ಪ್ರಪಂಚವೆಂವ (ಭುವನ) ಕನ್ನಡಿಯಲ್ಲಿ ತನ್ನ ಒಡೆತನದಲ್ಲಿರುವ ತಾನೇ ಸೃಷ್ಟಿಸಿದ ಲೀಲಾವಿನೋದಗಳನ್ನು ಕಂಡು ಆನಂದಿಸಲು, ಈ ಭವ್ಯ ಮತ್ತು ವೈವಿಧ್ಯಮಯವೂ ವಿಶಾಲವೂ ಆದ (ಭೂಮ) ಜಗತ್ತನ್ನು ನಿರ್ಮಾಣ ಮಾಡಿದನೋ ಅವನನ್ನು ನಾವು ಹುಡುಕೋಣ ಬಾ.

Wednesday, May 4, 2011

ಈ ಭುವನ ಮುಕುರದೊಳಗಾವಾಸಿತಂ ತನ್ನ (3)

ಈ ಭುವನ ಮುಕುರದೊಳಗಾವಾಸಿತಂ ತನ್ನ |
ವೈಭವ ವಿಲಾಸಗಳ ಕಾಣಲೆಂದೆಳಸಿ ||
ಈ ಭಿದುರ ಭಿತ್ತಿಗಳ ನಿರವಿಸದನೋ ಅವನ |
ಶೋಭೆಗೆರಗುವ ಬಾರೊ - ಮರುಳಮುನಿಯ || (೩)

(ಮುಕುರದ+ಒಳಗೆ+ಆವಾಸಿತಂ) (ಕಾಣಲ+ಎಂದು+ಎಳಸಿ) (ಶೋಭೆಗೆ+ಎರಗುವ)

ಈ ಪ್ರಪಂಚವೆಂಬ ಕನ್ನಡಿಯ ಒಳಗೆ ವಾಸಿಸುತ್ತಿರುವ ಪರಮಾತ್ಮನು ತನ್ನ ವೈಭವ ಮತ್ತು ವಿಲಾಸಗಳನ್ನು ಕಾಣಲೆಂದು ಬಯಸಿ, ಈ ಭಂಗುರವಾದ (ಭಿದುರ) ಆಶ್ರಯಸ್ಥಾನ(ಭಿತ್ತಿ)ಗಳನ್ನು ನಿರ್ಮಾಣ ಮಾಡಿದನೋ (ನಿರವಿಸಿದನೋ) ಅವನ ಆ ಕಾಂತಿ ಮತ್ತು ಚೆಲುವುಗಳಿಗೆ ನಮಸ್ಕರಿಸೋಣ ಬಾ.

Tuesday, May 3, 2011

ಶ್ರೀಮಜ್ಜಗದ್ದರ್ಪಣದೊಳಾವ ರಾಜಂ ಸ್ವ (2)

ಶ್ರೀಮಜ್ಜಗದ್ದರ್ಪಣದೊಳಾವ ರಾಜಂ ಸ್ವ |
ಸಾಮ್ರಾಜ್ಯ ಬಿಂಬಗಳ ತಾಂ ಕಾಣಲೆಂದು ||
ಈ ಮೋಹನಾಗಾರವಂ ನಿರವಿಸಿದನವನ ||
ನಾಮರಸುವಂ ಬಾರೊ - ಮರುಳಮುನಿಯ || (೨)

(ಶ್ರೀಮತ್+ಜಗತ್+ದರ್ಪಣದೊಳ್+ಆವ)(ಕಾಣಲ್+ಎಂದು)(ಮೋಹನ+ಆಗಾರವಂ)(ನಿರವಿಸಿದಂ+ಅವನಂ+ಆಂ+ಅರಸುವಂ)

ಸಂಪದ್ಭರಿತವಾದ ಈ ಜಗತ್ತೆಂಬ ಕನ್ನಡಿಯಲ್ಲಿ, ಯಾವ ರಾಜನು ತನ್ನ ಸಾಮ್ರಾಜ್ಯದ ನೆರಳು(ಬಿಂಬ)ಗಳನ್ನು ತಾನು ನೋಡಲೆಂದು, ಈ ಆಕರ್ಷಕವಾದ ವಾಸಸ್ಥಳವನ್ನು(ಆಗಾರವಂ) ನಿರೂಪಿಸಿದ್ದಾನೆಯೋ, (ನಿರವಿಸು) ಅವನನ್ನು ನಾವು ಹುಡುಕೋಣ (ಅರಸುವ) ಬಾ.

Monday, May 2, 2011

ಶ್ರೀಮಜ್ಜಗನ್ಮುಕುರ ವಿಸ್ತರದೊಳಾರ್ ತನ್ನ (1)

ಶ್ರೀಮಜ್ಜಗನ್ಮುಕುರ ವಿಸ್ತರದೊಳಾರ್ ತನ್ನ |
ಮೈಮೆಯ ಪ್ರತಿಬಿಂಬ ಚಿತ್ರಗಳ ನೋಡು- ||
ತ್ತಾಮೋದಬಡುತಿಹನೊ ಆತನಡಿದಾವರೆಯ |
ನಾಮರಸುವಂ ಬಾರೊ -ಮರುಳಮುನಿಯ || (೧)

(ಶ್ರೀಮತ್+ಜಗತ್+ಮುಕುರ)(ವಿಸ್ತರದೊಳ್+ಆರ್)(ನೋಡುತ್ತ+ಆಮೋದ+ಪಡುತಿಹನೊ)
(ಆತನ+ಅಡಿದಾವರೆಯ)(ನಾಂ+ಅರಸುವಂ)

ಸಂಪದ್ಭರಿತವಾದ ಈ ಪ್ರಪಂಚವೆಂಬ ಕನ್ನಡಿಯ(ಮುಕುರ) ವಿಸ್ತಾರದಲ್ಲಿ (ವಿಸ್ತರದೊಳ್) ತನ್ನ ಮಹಿಮೆಯ (ಮೈಮೆ) ಪ್ರತಿಬಿಂಬಗಳ ಚಿತ್ರಗಳನ್ನು ನೋಡುತ್ತಾ ಸಂತೋಷಪಡುತ್ತಿರುವವನ (ಆಮೋದ), ಕಮಲದ ಹೂವಿನಂತಿರುವ ಪಾದಗಳನ್ನು (ಅಡಿದಾವರೆ) ನಾವು ಹುಡುಕೋಣ (ಅರಸು) ಬಾ.