Tuesday, April 30, 2013

ಗುಣ ಶಕ್ತಿ ವೈವಿಧ್ಯ ಸಾಜಮಿಹುದದರಿಂದ (413)

ಗುಣ ಶಕ್ತಿ ವೈವಿಧ್ಯ ಸಾಜಮಿಹುದದರಿಂದ |
ಗಣಿತಮದರಿಂ ಸಾಜ ಮನುಷ ಜೀವಿತಕೆ ||
ಗಣದೊಳೊಳ್ಳಿತನೆಣಿಸಿ ಬಿಡಿನರನಹಂಭಾವ- |
ವೆಣಿಸದಿರೆ ತಪ್ಪೇನು? - ಮರುಳ ಮುನಿಯ || (೪೧೩)

(ಸಾಜಂ+ಇಹುದು+ಅದರಿಂದ)(ಗಣಿತಂ+ಅದರಿಂ)(ಗಣದೊಳ್+ಒಳ್ಳಿತನ್+ಎಣಿಸಿ)
(ಬಿಡಿನರನ್+ಅಹಂಭಾವವ+ಎಣಿಸದೆ+ಇರೆ)(ತಪ್ಪು+ಏನು)

ಸ್ವಭಾವ ಮತ್ತು ಬಲಗಳ ವಿವಿಧತೆ ಪ್ರಪಂಚದಲ್ಲಿ ಸಹಜವಾಗಿ ಇದೆ. ಆದ ಕಾರಣ ಮನುಷ್ಯನು ಜೀವಿತದಲ್ಲಿ ನಾನಾ ರೀತಿ ಲೆಕ್ಕಾಚಾರ ಹಾಕುವುದೂ ಸಹಜವೇ ಹೌದು. ಈ ಲೆಕ್ಕಾಚಾರ ಹಾಕುವಿಕೆಯಲ್ಲಿ ಒಳ್ಳೆಯದನ್ನು ಗಣನೆಗೆ ತೆಗೆದುಕೊಂಡು ಒಂಟಿ ಮನುಷ್ಯನ ಅಹಂಭಾವವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೆ ತಪ್ಪೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Variety is natural in the qualities and abilities of men
Countless therefore are the traits of men
Is it not better them to focus on the good traits of the community
And ignore the ego of stray individuals? – Marula Muniya
(Translation from "Thus Sang Marula Muniya" by Sri. Narasimha Bhat)

Monday, April 29, 2013

ಧರಣಿಯೌತಣದಿಂದ ನರನ ಮನಸಿಗೆ ವಿಕೃತಿ (412)

ಧರಣಿಯೌತಣದಿಂದ ನರನ ಮನಸಿಗೆ ವಿಕೃತಿ |
ನರನ ಕೃತ್ಯಂಗಳಿಂ ಧರಣಿಗಂ ವಿಕೃತಿ ||
ಪರಿಣಾಮವನ್ಯೋನ್ಯವಿಂತು ಸಂತತಮಿರಲು |
ಸ್ಥಿರತೆ ಲೋಕಕ್ಕೆಂತು - ಮರುಳ ಮುನಿಯ || (೪೧೨)

(ಧರಣಿಯ+ಔತಣದಿಂದ)(ಪರಿಣಾಮವು+ಅನ್ಯೋನ್ಯ+ಇಂತು)(ಸಂತತಂ+ಇರಲು)(ಲೋಕಕ್ಕೆ+ಎಂತು)

ಭೂಮಿಯು ಮನುಷ್ಯನನ್ನು ರಸಭರಿತವಾದ ಹಬ್ಬದೂಟಕ್ಕೆ ಅಹ್ವಾನಿಸುತ್ತಿರಲು, ಅವನ ಮನಸ್ಸು ಅನೇಕ ವಿಕಾರಗಳಿಗೆ ಒಳಗಾಗುತ್ತದೆ (ವಿಕೃತಿ). ಅಂತೆಯೇ ಮನುಷ್ಯನ ವಿಧ ವಿಧವಾದ ಕೆಲಸ ಮತ್ತು ಕಾರ್ಯಗಳಿಂದ, ಭೂಮಿಯೂ ಸಹ ವಿಕಾರಗಳಿಗೆ ಒಳಗಾಗುತ್ತದೆ. ಈ ರೀತಿ ಪರಸ್ಪರವಾಗಿ ಪರಿಣಾಮ ಯಾವಾಗಲೂ ಇರಲಾಗಿ, ಈ ಜಗತ್ತಿನಲ್ಲಿ ಸ್ಥಿರತೆಯು ಹೇಗೆ ತಾನೆ ಮೂಡೀತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Man’s mind is distracted when he feasts on the bounties of the world
Human actions also cause changes in the world
When, these mutual effects last forever
How can the world remain the same forever? – Marula Muniya
(Translation from "Thus Sang Marula Muniya" by Sri. Narasimha Bhat)

Friday, April 26, 2013

ವ್ಯತ್ಯಯವನಾನುತಿರೆ ಭೂನಭೋಗ್ರಹ ವೀಥಿ (411)

ವ್ಯತ್ಯಯವನಾನುತಿರೆ ಭೂನಭೋಗ್ರಹ ವೀಥಿ |
ರಥ್ಯೆಯೊಂದರೊಳೆಂತು ಮನುಜಗತಿ ನಿಲ್ಗುಂ ||
ನಿತ್ಯವೀ ಸೃಷ್ಟಿನದಿಯದರ ನೀರಲೆಮಾತ್ರ |
ಪ್ರತ್ಯೇಕವನುಚಣಂ - ಮರುಳ ಮುನಿಯ || (೪೧೧)

(ವ್ಯತ್ಯಯವನ್+ಆನುತ+ಇರೆ)(ಭೂ+ನಭೋ+ಗ್ರಹ)(ರಥ್ಯೆ+ಒಂದರೊಳ್+ಎಂತು)(ಸೃಷ್ಟಿನದಿ+ಅದರ)
(ನೀರ್+ಅಲೆಮಾತ್ರ)(ಪ್ರತ್ಯೇಕ+ಅನುಚಣಂ)

ಭೂಮಿ ಮತ್ತು ಆಕಾಶದಲ್ಲಿರುವ ಗ್ರಹಗಳ ಪಥ(ವೀಥಿ)ಗಳು ಪರಿವರ್ತಿಸುತ್ತಿರುವಾಗ ಮನುಷ್ಯನ ಚಲನೆಯು ಒಂದೇ ಒಂದು ದಾರಿ(ರಥ್ಯೆ)ಯಲ್ಲಿ ಇರಲು ಹೇಗೆ ಸಾಧ್ಯ? ಈ ಸೃಷ್ಟಿ ಎನ್ನುವುದು ಸ್ಥಿರ ಮತ್ತು ನಿರಂತರವಾಗಿ ಹರಿಯುತ್ತಿರುವ ನದಿ. ಆದರೆ ಅದರ ನೀರಿನ ಅಲೆಯು ಮಾತ್ರ ಪ್ರತಿಕ್ಷಣ(ಅನುಚಣ)ವೂ ಬೇರೆ ಬೇರೆ ಆಗುತ್ತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The course of the earth and the orbits of other heavenly bodies are constantly changing
How then can human conduct move only on the beaten track?
This river of creation is eternal but its water waves
Go on changing every moment – Marula Muniya
(Translation from "Thus Sang Marula Muniya" by Sri. Narasimha Bhat)

Thursday, April 25, 2013

ಮಾಡುದದ ಮತ್ತೆ ಮಾಡಳ್ ಪ್ರಕೃತಿ ಕೃತಿಚತುರೆ (410)

ಮಾಡುದದ ಮತ್ತೆ ಮಾಡಳ್ ಪ್ರಕೃತಿ ಕೃತಿಚತುರೆ |
ಗೂಢ ಭೇದವನಿರಿಸಿಹಳು ರೂಪ ಸಮದೊಳ್ ||
ಮೋಡವೆರಡು ಕ್ಷಣದೊಳೊಂದಂದವಿದ್ದೀತೆ? |
ಕ್ರೀಡೆ ವಿವಿಧತೆ ನವತೆ - ಮರುಳ ಮುನಿಯ || (೪೧೦)

(ಭೇದವನ್+ಇರಿಸಿಹಳು)(ಮೋಡ+ಎರಡು)(ಕ್ಷಣದೊಳ್+ಒಂದು+ಅಂದ+ಇದ್ದೀತೆ)

ಜಾಣತನ ಮತ್ತು ಕುಶಲತೆಯಿಂದ ಕೆಲಸವನ್ನು ಮಾಡುವ ಪ್ರಕೃತಿಯು ತಾನು ಒಂದು ಸಲ ಮಾಡಿದ್ದುದನ್ನು ಪುನಃ ಮಾಡುವುದಿಲ್ಲ. ರಹಸ್ಯವಾಗಿರುವ ವ್ಯತ್ಯಾಸಗಳನ್ನು ಸಮಾನವಾಗಿರುವ ಆಕೃತಿಗಳಲ್ಲಿ ಅವಳು ಇರಿಸಿದ್ದಾಳೆ. ಒಂದು ಮೋಡವು ಎರಡು ಕ್ಷಣಗಳಲ್ಲಿ ಒಂದೇ ರೀತಿಯಲ್ಲಿ ಇರುತ್ತದೆಯೇನು? ಈ ರೀತಿ ನಾನಾಬಗೆಯಿಂದ ಕೂಡಿರುವ ಆಟವೇ ಜಗತ್ತಿಗೆ ಹೊಸತನವನ್ನು ತಂದುಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature, the talented artist doesn’t create the same thing again
Subtle differences she preserves in the seemingly similar things
Do any two clouds ever look alike even for a moment?
Play is variety and novelty – Marula Muniya
(Translation from "Thus Sang Marula Muniya" by Sri. Narasimha Bhat)

Wednesday, April 24, 2013

ಸಾಂತ ಜಗವಿದನಂತದೊಂದು ದರ್ಶನಖಂಡ (409)

ಸಾಂತ ಜಗವಿದನಂತದೊಂದು ದರ್ಶನಖಂಡ |
ಸ್ವಾಂತಕರಿದಾಕಾರ ಮಿತಿಯಿರದ ವಸ್ತು ||
ಆಂತರವ ನೋಡಲಾಖಂಡದೊಳಗಮನಂತ |
ತಂತುವೊಳು ಪಟದಂತೆ - ಮರುಳ ಮುನಿಯ || (೪೦೯)

(ಜಗ+ಇದು+ಅನಂತದ+ಒಂದು)(ಸ್ವಾಂತಕೆ+ಅರಿದು+ಆಕಾರ)(ನೋಡಲ್+ಆ+ಖಂಡದೊಳಗೆ+ಅನಂತ)

ಅನಂತವಾದದ್ದರಲ್ಲಿ ಕಾಣುವ ಒಂದಂಶವಾಗಿರುವ ನಶ್ವರದ ಪ್ರಪಂಚ ಇದು. ತಿಳಿಯಲಾಗದ ಸ್ವರೂಪ ಮತ್ತು ಮಿತಿ ಇಲ್ಲದಿರುವ ಪದಾರ್ಥವನ್ನು ಮನಸ್ಸಿಗೆ (ಸ್ವಾಂತಕೆ) ತಿಳಿಯಲು ಸಾಧ್ಯವಿಲ್ಲ (ಅರಿದು). ನಮ್ಮ ಮನಸ್ಸಿನೊಳಗಡೆ ಇಳಿದು ನೋಡಿದರೆ ಆ ಆಂಶಿಕವಾಗಿರುವುದರಲ್ಲೂ ನಾವು ಅನಂತವನ್ನು ಕಾಣುತ್ತೇವೆ. ಇದು ಒಂದು ವಸ್ತ್ರ(ಪಟ)ದಲ್ಲಿರುವ ದಾರ(ತಂತು)ವನ್ನು ಕಂಡಂತೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The finite world is only a finite segment of the Infinite
Unable is the mind to grasp the limitless and the formless
But when you reflect, you would find the Infinite in the future
As the cloth hiding in the yarn – Marula Muniya
(Translation from "Thus Sang Marula Muniya" by Sri. Narasimha Bhat)

Tuesday, April 23, 2013

ವಿಶ್ವವೇಂ ನಶ್ವರವೆ? ಬರಿಗಾಳಿ ಸುಳಿಯೆ? ಇದು (408)


ವಿಶ್ವವೇಂ ನಶ್ವರವೆ? ಬರಿಗಾಳಿ ಸುಳಿಯೆ? ಇದು |
ನಶ್ವರಾಕಾರಿಗಳ ಶಾಶ್ವತಗ್ರಾಮ ||
ಐಶ್ವರ್ಯವೊಂದೊಂದು ಗಳಿಗೆಯೊಳಮಮರಿಹುದು |
ವಿಶ್ವಾತ್ಮಲಕ್ಷ್ಯನಿಗೆ - ಮರುಳ ಮುನಿಯ || (೪೦೮)

(ನಶ್ವರ+ಆಕಾರಿಗಳ)(ಐಶ್ವರ್ಯಂ+ಒಂದೊಂದು)(ಗಳಿಗೆಯೊಳಂ+ಅಮರ್+ಇಹುದು)

ಈ ಪ್ರಪಂಚವು ಕ್ಷಣಿಕವಾದದ್ದು ನಾಶವಾಗತಕ್ಕಂತದ್ದು ತಾನೆ? ಇದು ಕೇವಲ ಗಾಳಿ ಮತ್ತು ಅದರ ಆವರ್ತನೆಯೇ? ಇದು ಕ್ಷಣಿಕವಾಗಿ ನಾಶವಾಗತಕ್ಕಂತಹ (ನಶ್ವರ) ವಿಧವಿಧವಾದ ರೂಪಗಳನ್ನು ತೊಟ್ಟಿಕೊಂಡಿರುವವರ, ಆದರೆ ಎಂದೆಂದಿಗೂ ಇರತಕ್ಕಂತಹ (ಶಾಶ್ವತ) ಒಂದು ಹಳ್ಳಿ (ಗ್ರಾಮ). ಜಗತ್ತನ್ನು ಗಮನವಿಟ್ಟು ನೋಡುವವನಿಗೆ ಈ ಗ್ರಾಮದಲ್ಲಿ ಸಿರಿಸಂಪತ್ತುಗಳು ಒಂದೊಂದು ಗಳಿಗೆಯೂ ಆಕ್ರಮಿಸಿಕೊಂಡಿರುವುದು ತಿಳಿಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Is the world transitory? Is it a mere whirling wind?
This world is the eternal abode of ephemeral forms
Fortune is treasured in every hour to one
Whose destination is the Universal Soul – Marula Muniya
(Translation from "Thus Sang Marula Muniya" by Sri. Narasimha Bhat)

Monday, April 22, 2013

ಭಾನು ನಿಯತಾವರ್ತನೆಯಿನನಂತತೆ ಕಾಲ (407)


ಭಾನು ನಿಯತಾವರ್ತನೆಯಿನನಂತತೆ ಕಾಲ |
ಮಾನವಾಗಿಸಿ ಕಾಲಯೋನಿಯಿನನಂತಂ ||
ಪ್ರಾಣಿರೂಪದಿ ಜನಿಪವೊಲು ತೋರಿಪ ನಿಸರ್ಗ - |
ದಾನಂತ್ಯ ಲೀಲೆಯೆಲೊ - ಮರುಳ ಮುನಿಯ || (೪೦೭)

(ನಿಯತ+ಆವರ್ತನೆಯಿನ್+ಅನಂತತೆ)(ಕಾಲಯೋನಿಯಿಂ+ಅನಂತಂ)(ನಿಸರ್ಗದ+ಆನಂತ್ಯ)

ಸೂರ್ಯನ (ಭಾನು) ನಿಯಮಕ್ಕೆ (ನಿಯತ) ಒಳಪಟ್ಟ ಸುತ್ತುವಿಕೆ(ಆವರ್ತನೆ)ಯಿಂದ ಕಾಲವನ್ನು ಅನಂತಕ್ಕೆ ಅಳತೆಯನ್ನಾಗಿಸಿ, ಕಾಲಗರ್ಭ(ಕಾಲಯೋನಿ)ದಿಂದ, ಜೀವಿಗಳ ಜನನವಾಗುವಂತೆ ತೋರಿಸುವುದು ಪ್ರಕೃತಿಯ ಅಂತ್ಯವಿಲ್ಲದಿರುವ ಆಟ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Every day sun rises regularly making
The infinite time measurable and from the womb of time
The infinite takes birth as living beings.
This is all the endless play of Nature - Marula Muniya
(Translation from "Thus Sang Marula Muniya" by Sri. Narasimha Bhat)

Friday, April 19, 2013

ದಿನದಿನದೊಳಂ ಪುನರ್ಜನುಮವೆತ್ತುತ್ತಿಹರು (406)


ದಿನದಿನದೊಳಂ ಪುನರ್ಜನುಮವೆತ್ತುತ್ತಿಹರು |
ಮನುಜನುಂ ಪ್ರಕೃತಿಯುಂ ಸಂಸರ್ಗವಶದಿಂ ||
ಗುಣ ಶಕ್ತಿಯೋಗ ಭೇದಂಗಳಿಂ ನವನವತೆ - |
ಯನವರತಮೊದಗಿಹುದು - ಮರುಳ ಮುನಿಯ || (೪೦೬)

(ಪುನರ್ಜನುಂ+ಎತ್ತುತ್ತ+ಇಹರು)(ನವನವತೆ+ಅನವರತಂ+ಒದಗಿಹುದು)

ಮನುಷ್ಯನು ಮತ್ತು ಪ್ರಕೃತಿಯೂ ಸಹ ಒಬ್ಬರೊಬ್ಬರು ಸಂಬಂಧ (ಸಂಸರ್ಗ) ಹೊಂದುತ್ತ ಪ್ರತಿನಿತ್ಯವೂ ಮತ್ತೆ ಮತ್ತೆ ಹೊಸದಾಗಿ ಹುಟ್ಟಿ ಬರುತ್ತಿರುವರು. ಸ್ವಭಾವ ಮತ್ತು ಬಲಗಳ ಸಂಯೋಗ ವಿಯೋಗಗಳಿಂದ ಈ ಜಗತ್ತು ಸದಾ ನವ ನವೀನವಾಗಿರುವ ಭಾಗ್ಯವನ್ನು ಹೊಂದಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Every day is a new birth to man and Nature due to changing association
Novelty is ever present in both men and Nature
On account of the association of qualities and abilities
And differences in them - Marula Muniya (406)
(Translation from "Thus Sang Marula Muniya" by Sri. Narasimha Bhat)

Thursday, April 18, 2013

ಒಂಟಿ ಬಾಳರೆಬಾಳು ಕರೆಕರೆಯ ಕೊರಗುಬಾಳ್ (405)


ಒಂಟಿ ಬಾಳರೆಬಾಳು ಕರೆಕರೆಯ ಕೊರಗುಬಾಳ್ |
ನಂಟು ಬಾಳೇನ್ ಕುಂಟ ಕಾದಾಟ ಗೋಳು ||
ಅಂಟಿರ‍್ದುಮಂಟದದು ಜಾಣಬಾಳ್ ಬ್ರಹ್ಮನದು |
ತುಂಟಾಟವೋ ಲೋಕ - ಮರುಳ ಮುನಿಯ || (೪೦೫)

(ಬಾಳ್+ಅರೆಬಾಳು)(ಬಾಳ್+ಏನ್)(ಅಂಟಿರ‍್ದುಂ+ಅಂಟದು+ಅದು)(ತುಂಟ+ಆಟವೋ)

ಒಬ್ಬನೇ ಜೀವನವನ್ನು ನಡೆಸುವುದು ದೋಷ ತುಂಬಿದ ವ್ಯಥೆಗೊಂಡಿರುವ ಜೀವನವೇ ಹೌದು. ಇತರರ ಜೊತೆ ಸೇರಿ ಜೀವನವನ್ನು ನಡೆಸುವುದು ಕುಂಟುತ್ತಾ ಜಗಳವಾಡಿಕೊಂಡು ದುಃಖದಿಂದಿರುವ ಜೀವನ. ಸೃಷ್ಟಿಕರ್ತನಾದ ಬ್ರಹ್ಮನ ಜೀವನವಾದರೋ, ಪ್ರಪಂಚಕ್ಕೆ ಸೇರಿಕೊಂಡು ಸೇರದಿರುವಂತಹ ಬುದ್ಧಿವಂತಿಕೆಯ ಜೀವನ. ಅದು ನೀರಿನಲ್ಲಿರುವ ತಾವರೆಯ ಎಲೆಯಂತಹ ಬಾಳು. ಈ ಪ್ರಪಂಚವು ತಂಟೆಕೋರರಿಂದ ಕೂಡಿರುವ ಆಟ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Solitary life is life incomplete; it is a troubled sorrowful life
Life with kith and kin is a warring wailing life
The wise leads an unattached yet seemingly attached life
The world is but Brahma’s prank – Marula Muniya (405)
(Translation from "Thus Sang Marula Muniya" by Sri. Narasimha Bhat)

Wednesday, April 10, 2013

ಏನಿಂದು ಜನದ ಗತಿಯೇತಕಸ್ವಸ್ಥಮತಿ (404)

ಏನಿಂದು ಜನದ ಗತಿಯೇತಕಸ್ವಸ್ಥಮತಿ |
ಬೇನೆ ಪಿರಿತೆಂದುಮರಿಯದುದೇತಕಿಂದು? ||
ತಾಣಗೆಟ್ಟಲೆಯುತಿರ‍್ಪ ಪ್ರೇತದಂತೇಕೆ |
ಮಾನವನ ತಲ್ಲಣವೊ - ಮರುಳ ಮುನಿಯ || (೪೦೪)

(ಗತಿಯೇತಕೆ+ಅಸ್ವಸ್ಥಮತಿ)(ಪಿರಿತು+ಎಂದುಂ+ಅರಿಯದು+ಅದೇತಕಿಂದು)(ತಾಣಗೆಟ್ಟು+ಅಲೆಯುತ+ಇರ‍್ಪ)(ಪ್ರೇತದಂತೆ+ಏಕೆ)

ಪ್ರಪಂಚದಲ್ಲಿ ವಾಸಿಸುತ್ತಿರುವ ಜನಗಳ ಅವಸ್ಥೆಗಳು ಏಕೆ ಹೀಗಾಗಿವೆ? ಅವರು ಏತಕ್ಕಾಗಿ ವ್ಯಾಧಿಪೀಡಿತರಾಗಿದ್ದಾರೆ? ಈಗಾಗಲೇ ಕಾಯಿಲೆಯು ಉಲ್ಬಣಗೊಂಡಿದೆಯೆಂದು ಅವರು ಏತಕ್ಕಾಗಿ ತಿಳಿಯಲಾರರು? ಈ ಮನುಷ್ಯರ ತಳಮಳವು ತನ್ನ ಸ್ಥಾಳವನ್ನು ಬಿಟ್ಟು ಅಲೆಯುತ್ತಿರುವ ಪಿಶಾಚಿಯಂತೇಕಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the date of people today? Why are their minds so agitated?
Why don’t they realize that their sickness is serious?
Why is mankind so alarmed like a wandering ghost
That has lost its shelter? – Marula Muniya (404)
(Translation from "Thus Sang Marula Muniya" by Sri. Narasimha Bhat)

Tuesday, April 9, 2013

ಅಬ್ಬಬ್ಬ ಲೋಕವೇಂ ಬೊಬ್ಬೆಯಿಡುತಿಹುದಿಂತು (403)

ಅಬ್ಬಬ್ಬ ಲೋಕವೇಂ ಬೊಬ್ಬೆಯಿಡುತಿಹುದಿಂತು |
ತಬ್ಬಿಬ್ಬಲಾಗಿಹುದು ನೆಲೆಗಾಣದಿಹುದು ||
ಮಬ್ಬಿನಲಿ ಭೂತ ಚೀರಾಡುತಲೆವಂತಿಹುದು |
ತಬ್ಬಲಿಯೆ ಶಿವಸೃಷ್ಟಿ? - ಮರುಳ ಮುನಿಯ || (೪೦೩)

(ಬೊಬ್ಬೆಯಿಡುತ+ಇಹುದು+ಇಂತು)(ತಬ್ಬಿಬ್ಬಲ್+ಆಗಿ+ಇಹುದು)(ನೆಲೆಗಾಣದೆ+ಇಹುದು)(ಚೀರಾಡುತ+ಅಲೆವಂತೆ+ಇಹುದು)

"ಅಬ್ಬಬ್ಬ!" ಈ ರೀತಿಯಾಗಿ ಪ್ರಪಂಚವು ಬೊಬ್ಬೆಯಿಡುತ್ತಾ ಇದೆ. ಇದು ಒಂದು ಆಶ್ರಯವನ್ನು ಕಾಣದೆ ದಿಗ್ಭ್ರಮೆಗೊಂಡಿದೆ. ನಸುಗತ್ತಲೆಯಲ್ಲಿ ಒಂದು ಭೂತವು ಕಿರಿಚಾಡುತ್ತಾ ಅಲೆಯುತ್ತಿರುವಂತೆ ಕಾಣುತ್ತಿದೆ. ಪರಮಾತ್ಮನು ಸೃಷ್ಟಿಸಿದ ಈ ಪ್ರಪಂಚವು ದಿಕ್ಕಿಲ್ಲದ ಅನಾಥ(ತಬ್ಬಲಿ) ಶಿಶುವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Alas, Alas! Why does the world howl like this?
It looks confused and is unable to find its base
It appears as though a screaming devil is groping in the gloom!
Is God’s creation and orphan? – Marula Muniya
(Translation from "Thus Sang Marula Muniya" by Sri. Narasimha Bhat)

Monday, April 8, 2013

ಈ ದಡದಿನಾದಡಕ್ಕಾದಡದಿನೀದಡ (402)

ಈ ದಡದಿನಾದಡಕ್ಕಾದಡದಿನೀದಡ - |
ಕ್ಕೋಡಾಡುವುದು ಕಡಲಿನಲೆಸಾಲು ಬಿಡದೆ ||
ಸಾಧಿಪ್ಪುದೇನನದು ಕದಲುತಿತ್ತತ್ತಲುಂ |
ಆದರ್ಶ ನಮಗದುವೆ - ಮರುಳ ಮುನಿಯ || (೪೦೨)

(ಸಾಧಿಪ್ಪುದು+ಏನನ್+ಅದು)(ಕದಲುತ+ಇತ್ತ+ಅತ್ತಲುಂ)(ನಮಗೆ+ಅದುವೆ)

ಒಂದು ದಡದಿಂದ ಮತ್ತೊಂದು ದಡಕ್ಕೆ ಮತ್ತು ಆ ದಡದಿಂದ ಪುನಃ ಈ ದಡಕ್ಕೆ ಅಲೆಗಳ ಸಾಲುಗಳು ಸ್ವಲ್ಪವೂ ವಿರಾಮವಿಲ್ಲದೆ ಸಮುದ್ರದಲ್ಲಿ ಸಂಚರಿಸುತ್ತವೆ. ಪ್ರಪಂಚದಲ್ಲಿ ವಾಸಿಸುತ್ತಿರುವ ಜೀವಿಗಳ ಒದ್ದಾಟಗಳೂ ಸಹ ಈ ಬಗೆಯಲ್ಲಿಯೇ ನಡೆಯುತ್ತವೆ. ಈ ಬಗೆಯಾಗಿ ಒಂದು ಸ್ಥಳ ಬಿಟ್ಟು ಎಲ್ಲಿಲ್ಲಿಯೋ ಸರಿಯುವುದರಿಂದ ಅದು ಏನನ್ನು ತಾನೇ ಸಾಧಿಸುತ್ತದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Rows of waves in the ocean ceaselessly move
From this shore to that and from that shore to this
What do they achieve by moving ceaselessly from place to place?
This seems to be our ideal as well! – Marula Muniya
(Translation from "Thus Sang Marula Muniya" by Sri. Narasimha Bhat) (402)

Friday, April 5, 2013

ಈ ದಡದಿನಾದಡಕ್ಕಾದಡದಿನೀದಡ (401)

ಈ ದಡದಿನಾದಡಕ್ಕಾದಡದಿನೀದಡ - |
ಕ್ಕೋಡುತೆಡೆಬಿಡದಲೆವುದಲೆಸಾಲು ಕಡಲೊಳ್ ||
ಆ ಧೋರಣೆಯೆ ಜಗದಿ ಜೀವಿಗಳ ಪರಿದಾಟ |
ನೋಡು ನೀನಾಳದಲಿ - ಮರುಳ ಮುನಿಯ || (೪೦೧)

(ದಡದಿನ್+ಆ+ದಡಕ್ಕೆ+ಆ+ದಡದಿನ್+ಈ+ದಡಕ್ಕೆ+ಓಡುತ+ಎಡೆಬಿಡದೆ+ಅಲೆವುದು+ಅಲೆಸಾಲು)(ನೀನ್+ಆಳದಲಿ)

ಒಂದು ದಡದಿಂದ ಮತ್ತೊಂದು ದಡಕ್ಕೆ ಮತ್ತು ಆ ದಡದಿಂದ ಪುನಃ ಈ ದಡಕ್ಕೆ ಅಲೆಗಳ ಸಾಲುಗಳು ಸ್ವಲ್ಪವೂ ವಿರಾಮವಿಲ್ಲದೆ ಸಮುದ್ರದಲ್ಲಿ ಸಂಚರಿಸುತ್ತವೆ. ಪ್ರಪಂಚದಲ್ಲಿ ವಾಸಿಸುತ್ತಿರುವ ಜೀವಿಗಳ ಒದ್ದಾಟಗಳೂ ಸಹ ಈ ಬಗೆಯಲ್ಲಿಯೇ ನಡೆಯುತ್ತವೆ. ಈ ಬಗೆಯಾಗಿ ಒಂದು ಸ್ಥಳ ಬಿಟ್ಟು ಎಲ್ಲಿಲ್ಲಿಯೋ ಸರಿಯುವುದರಿಂದ ಅದು ಏನನ್ನು ತಾನೇ ಸಾಧಿಸುತ್ತದೆ? ಆದರೆ ನೀನು ನೀರಿನ ಆಳದಲ್ಲಿ ಗಮನಿಸಿ ನೋಡು ಎಂದು ಡಿವಿಜಿಯವರು ಹೇಳುತ್ತಿದ್ದಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Waves after waves rush from this shore to that
And from that shore to this in the vast ocean
Beings in this world likewise swing from side to side
Reflect deep on this phenomenon – Marula Muniya
(Translation from "Thus Sang Marula Muniya" by Sri. Narasimha Bhat)

Thursday, April 4, 2013

ಅರಿವೆಗೆಂದೆಳೆದ ನೂಲುರುಳುರುಳೆಯಾಗಿ ಕೈ (400)


ಅರಿವೆಗೆಂದೆಳೆದ ನೂಲುರುಳುರುಳೆಯಾಗಿ ಕೈ |
ಕೊರಳು ಕಾಲ್ಗಳ ಸುತ್ತಿ ಬಿಗಿದು ತೊಡಕಾಗಿ ||
ಸೆರೆವಿಡಿಯೆ ದಿಕ್ಕುತೋರದಿರೆ ಕಣ್ಕಣ್ ಬಿಡುತೆ |
ಕಿರುಚುತಿರುವನು ನರನು - ಮರುಳ ಮುನಿಯ || (೪೦೦)

(ಅರಿವೆಗೆ+ಎಂದು+ಎಳೆದ)(ನೂಲು+ಉರುಳು+ಉರುಳೆ+ಆಗಿ)

ಬಟ್ಟೆ(ಅರಿವೆ)ಯನ್ನು ನೇಯುವುದಕ್ಕೋಸ್ಕರ ತೆಗೆದುಕೊಂಡು ಬಂದ ದಾರವನ್ನು ಎಳೆದಾಗ, ಅದು ಉರುಳು ಉರುಳಾಗಿ ಅದನ್ನು ತಂದ ಮನುಷ್ಯನ ಕೈ, ಕತ್ತು ಮತ್ತು ಕಾಲುಗಳನ್ನು ಆವರಿಸಿಕೊಂಡು, ಬಿಗಿದು ಸಿಕ್ಕಾಗಿ, ಅವನು ಬಂಧಿಸಲ್ಪಟ್ಟಾಗ, ಅವನು ದಿಕ್ಕು ತೋರದೆ ದಿಗ್ಭ್ರಾಂತನಾಗಿ ಕಿರುಚುತ್ತಿದ್ದಾನೆ. ಹೀಗಾಗಿದೆ ಈ ಜಗತ್ತಿನಲ್ಲಿ ಮನುಷ್ಯನ ಬಾಳುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The yarn spun for cloth twists itself into numerous noses
It tightens around hands, neck and legs and binds
Human being then blinks and blinks knowing not what to do
And cries in utter helplessness – Marula Muniya (400)
(Translation from "Thus Sang Marula Muniya" by Sri. Narasimha Bhat)

Wednesday, April 3, 2013

ಧನಿಯ ವಾಂತಿಯ ನಾತ ನೆರೆಮನೆಯ ಬಡವಂಗೆ (399)

ಧನಿಯ ವಾಂತಿಯ ನಾತ ನೆರೆಮನೆಯ ಬಡವಂಗೆ |
ಉಣದ ಬಡವನ ಹಸಿವು ಗೋಳು ಧನಿಕಿವಿಗೆ ||
ವಿನಿಮಯವಿದನ್ಯೋನ್ಯ ವಿಧಿಯ ಮಾರ್ಕಟ್ಟೆಯಲಿ |
ಅಣಕಿಗರ ಸಂತೆ ಜಗ - ಮರುಳ ಮುನಿಯ || (೩೯೯)

(ವಿನಿಮಯ+ಇದು+ಅನ್ಯೋನ್ಯ)

ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ಬಡವನಿಗೆ ದೊರಕುವುದು ಧನಿಕರು ತಿಂದು ತೇಗಿ ವಾಂತಿ ಮಾಡಿದ ದುರ್ವಾಸನೆ. ಆದರೆ ಶ್ರೀಮಂತನ ಕಿವಿಗೆ ಕೇಳಿಸುವುದು ಪಕ್ಕದ ಮನೆಯಲ್ಲಿ ವಾಸಿಸುತ್ತ ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವ ಬಡವನ ಅಳು. ವಿಧಿಯ ಮಾರುಕಟ್ಟೆಯಲ್ಲಿ ಅವು ಪರಸ್ಪರ ಬದಲಾಗುತ್ತವೆ. ಈ ಜಗತ್ತದರೋ, ಇವರಿಬ್ಬರನ್ನು ಕುಚೋದ್ಯ ಮತ್ತು ಅಪಹಾಸ್ಯ ಮಾಡುವವರಿಂದ ತುಂಬಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The stench of the vomit of the rich reaches the poor neighbourer’s house
The wail of the starving poor pinches the ears of the rich
These are mutually exchanged in the market of Fate
This world is a mockers’ market – Marula Muniya (399)
(Translation from "Thus Sang Marula Muniya" by Sri. Narasimha Bhat)

Tuesday, April 2, 2013

ತೇಗುತಿರುವನು ಧನಿಕ, ಕರುಬುತಿರುವನು ಬಡವ (398)

ತೇಗುತಿರುವನು ಧನಿಕ, ಕರುಬುತಿರುವನು ಬಡವ |
ರೇಗುತಿರುವನು ಬಡವ, ಕೆರಳುವನು ಧನಿಕ ||
ಕೂಗುಗಳು ಧರೆಯೊಳಿಂತನ್ಯೋನ್ಯ ಬೀಜಗಳು |
ರೋಗದುಸಿರುಗಳಂತೆ - ಮರುಳ ಮುನಿಯ || (೩೯೮)

(ತೇಗುತ+ಇರುವನು)(ಕರುಬುತ+ಇರುವನು)(ರೇಗುತ+ಇರುವನು)(ಧರೆಯೊಳ್+ಇಂತು+ಅನ್ಯೋನ್ಯ)(ರೋಗದ+ಉಸಿರುಗಳಂತೆ)

ಶ್ರೀಮಂತನು ತನಗೆ ಈ ಪ್ರಪಂಚದಲ್ಲಿರುವುದನ್ನು ಬೇಕಾದಷ್ಟು ತಿಂದು ಹೊಟ್ಟೆಯನ್ನು ತುಂಬಿಸಿಕೊಂಡು ತೇಗುತ್ತಾನೆ. ಇವನ ಶ್ರೀಮಂತಿಯ ಆಡಂಬರವನ್ನು ಕಂಡು ಬಡವನಾದವನು ಅವನಿಗಿರುವುದು ತನಗೆ ದೊರಕಲಿಲ್ಲವೆಂದು ಹೊಟ್ಟೆಕಿಚ್ಚು(ಕರುಬು) ಪಟ್ಟು ನರಳುತ್ತಾನೆ. ಅಷ್ಟೂ ಸಾಲದೆ ಬಡವನು ಕೋಪದಿಂದ ಕೂಗುತ್ತಿರುತ್ತಾನೆ. ಸಾಹುಕಾರನು ಧನದ ಮದದಿಂದ ಉದ್ರಿಕ್ತನಾಗುತ್ತಿರುತ್ತಾನೆ. ಪ್ರಪಂಚದಲ್ಲಿ ಈ ರೀತಿಯ ಅರಚುವಿಕೆಗಳು ಪರಸ್ಪರವಾಗಿರುವ ಬೀಜಗಳು. ಇವು ಕಾಯಿಲೆ ಮತ್ತು ಅದನ್ನು ಹರಡುವ ಗಾಳಿಯಂತಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The rich are belching and the poor are envying
The poor are furious and the rich are irritated
Ones shout gives birth to another and multiplies
Like the breath full of disease germs – Marula Muniya
(Translation from "Thus Sang Marula Muniya" by Sri. Narasimha Bhat)

Monday, April 1, 2013

ಮರಣವೇ ಮುಗಿವಲ್ಲ, ಜನನವೇ ಮೊದಲಲ್ಲ (397)

ಮರಣವೇ ಮುಗಿವಲ್ಲ, ಜನನವೇ ಮೊದಲಲ್ಲ |
ತೆರೆಯ ಬೀಳೇಳುಗಳು ಕಾಲನದಿಯೊಳವು ||
ಪರಿಪರಿಯ ರೂಪು ತಳೆಯುವುದೊಂದೆ ವಾರಿಕಣ |
ಪರಿದಾಟವದರಾಟ - ಮರುಳ ಮುನಿಯ || (೩೯೭)

(ಮುಗಿವು+ಅಲ್ಲ)(ಮೊದಲ್+ಅಲ್ಲ)(ಬೀಳ್+ಏಳುಗಳು)(ಕಾಲನದಿಯೊಳ್+ಅವು)(ತಳೆಯುವುದು+ಒಂದೆ)(ಪರಿದಾಟ+ಅದರಾಟ)

ಮನುಷ್ಯನು ಸತ್ತು ಹೋಗುವುದೇ ಮುಕ್ತಾಯವಲ್ಲ ಮತ್ತು ಅವನು ಹುಟ್ಟುವುದು ಅವನ ಮೊದಲೂ ಅಲ್ಲ. ಕಾಲವೆಂಬ ನದಿಯೊಳಗೆ ಅಲೆಗಳು ಎದ್ದು ಬೀಳುವಂತೆ ಹುಟ್ಟು ಮತ್ತು ಸಾವುಗಳು ಬಂದು ಹೋಗುತ್ತವೆ. ಒಂದೇ ನೀರಿನ (ವಾರಿ) ಕಣವು ವಿಧವಿಧವಾದ ಆಕಾರಗಳನ್ನು ಧರಿಸಿಕೊಂಡು ಬರುತ್ತದೆ ಅಷ್ಟೆ. ಅದರ ಆಟ, ಒಂದು ಒದ್ದಾಟ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Death is not the very end and birth is not the first beginning
They are just the rise and fall of the waves in the river of time
The same drop of water can assume many different forms
Running from pillar to post s all its play – Marula Muniya (397)
(Translation from "Thus Sang Marula Muniya" by Sri. Narasimha Bhat)