Wednesday, February 29, 2012

ಕಾಯ ಭೋಗೈಶ್ವರ್ಯ ಯಶಗೊಳನಾಸಕ್ತಿ (170)

ಕಾಯ ಭೋಗೈಶ್ವರ್ಯ ಯಶಗೊಳನಾಸಕ್ತಿ |
ನ್ಯಾಯ ಧರ್ಮೋದ್ಧಾರದಲ್ಲಿ ಸಮಶಕ್ತಿ ||
ಸ್ವೀಯಾತ್ಮ ಸರ್ವಾತ್ಮವೆನ್ನುವದ್ವಯ ವೃತ್ತಿ |
ನೇಯಂಗಳಿವು ನಿನಗೆ - ಮರುಳ ಮುನಿಯ || (೧೭೦)

(ಭೋಗ+ಐಶ್ವರ್ಯ)(ಯಶಗೊಳ್+ಅನಾಸಕ್ತಿ)(ಧರ್ಮ+ಉದ್ಧಾರದಲ್ಲಿ)(ಸರ್ವಾತ್ಮ+ಎನ್ನುವ+ಅದ್ವಯ)

ದೇಹಸುಖಕ್ಕೆ ಸಂಬಂಧಪಟ್ಟಿರುವುದರಲ್ಲೂ, ಸಿರಿ ಮತ್ತು ಕೀರ್ತಿಗಳನ್ನು ಗಳಿಸುವುದರಲ್ಲೂ ಆಸಕ್ತಿ ಇಲ್ಲದಿರುವುದು. ನ್ಯಾಯ ಮತ್ತು ಧರ್ಮಗಳನ್ನು ಮೇಲಕ್ಕೆ ಹಿಡಿಯುವುದರಲ್ಲಿ ಯೋಗ್ಯವಾದ ಆಸಕ್ತಿ. ತನ್ನ (ಸ್ವೀಯ) ಆತ್ಮ ಮತ್ತು ಎಲ್ಲಾ ಆತ್ಮಗಳೂ ಒಂದೇ ಎನ್ನುವ ಒಂದು ರೀತಿಯ ನಡತೆ. ಇವುಗಳನ್ನು ಪಾಲಿಸುವುದು ನಿನಗೆ ನ್ಯಾಯ (ನೇಯ) ಸಮ್ಮತವಾದುವು.

Tuesday, February 28, 2012

ದ್ವೈತಮದ್ವೈತಂ ವಿಶಿಷ್ಟದದ್ವೈತಮಿವು (169)

ದ್ವೈತಮದ್ವೈತಂ ವಿಶಿಷ್ಟದದ್ವೈತಮಿವು |
ಮಾತೊ ಅನುಭೂತಿಯೋ ? ಒಳಗರಸಿ ನೋಡು ||
ಖ್ಯಾತಿಗಾಯಿತು ತರ್ಕವಾಕ್ಯಾರ್ಥಗಳ ಗಡಕೆ |
ನೀತಿ ಜೀವಿತಕಿರಲಿ - ಮರುಳ ಮುನಿಯ || (೧೬೯)

(ದ್ವೈತಂ+ಅದ್ವೈತಂ)(ವಿಶಿಷ್ಟದದ್ವೈತಂ+ಇವು)(ಖ್ಯಾತಿಗೆ+ಆಯಿತು)(ಜೀವಿತಕೆ+ಇರಲಿ)

ದ್ವೈತ, ಅದ್ವೈತ ಮತ್ತು ವಿಶಿಷ್ಟದದ್ವೈತಗಳು ನುಡಿಗಳೋ, ಅಥವಾ ಸ್ವಂತ ಅನುಭವಗಳಿಂದ ಬಂದಿರುವ ತಿಳಿವುಗಳೋ (ಅನುಭೂತಿ)? ಇದನ್ನು ನಿನ್ನೊಳಗಡೆ ಹುಡುಕಿ (ಅರಸಿ) ನೋಡು. ತರ್ಕ ಮತ್ತು ವಾಕ್ಯಗಳ ಅರ್ಥಗಳ ಲೆಕ್ಕಗಳು, ಪ್ರಸಿದ್ಧಿಗೆ ಉಪಯೋಗವಾದೀತು. ಆದರೆ ಈ ಸಿದ್ಧಾಂತಗಳಿಂದ ಕಲಿತ ಪಾಠಗಳನ್ನು ಜೀವನವನ್ನು ನಡೆಸುವುದಕ್ಕೆ ಉಪಯೋಗಿಸಿಕೊಳ್ಳಬೇಕು.

Monday, February 27, 2012

ದ್ವೈತಂ ವಿಶಿಷ್ಟದದ್ವೈತಮದ್ವೈತಮಿವು (168)

ದ್ವೈತಂ ವಿಶಿಷ್ಟದದ್ವೈತಮದ್ವೈತಮಿವು |
ಮಾತೊ ಬರಿದಹ ಮಾತೊ ನಿನಗೆ ಹೃದಯಾನು-||
ಭೂತಮಿಹವಾರ್ತೆಯೋ ಜೀವನೀತಿಯ ತೋರ್ಪ |
ಜ್ಯೋತಿಯೋ ಜೀವನದಿ - ಮರುಳ ಮುನಿಯ || (೧೬೮)

(ವಿಶಿಷ್ಟದದ್ವೈತಂ+ಅದ್ವೈತಂ+ಇವು)(ಬರಿದು+ಅಹ)(ಹೃದಯ+ಅನುಭೂತಂ+ಇಹವಾರ್ತೆಯೋ)

ದ್ವೈತ, ವಿಶಿಷ್ಟದದ್ವೈತ ಮತ್ತು ಅದ್ವೈತಗಳು ನುಡಿಗಳೋ ಅಥವಾ ಏನು ಅರ್ಥವಿಲ್ಲದ ನುಡಿಗಳೋ ಅಥವಾ ಅವುಗಳು ನಿನ್ನ ಜೀವನದಲ್ಲಿ ನಿನಗೆ ಹೃದಯದ ಅನುಭಗಳನ್ನು ಕೊಡುವ ಸುದ್ದಿಗಳೋ ಮತ್ತು ಜೀವನದ ನೀತಿ ನಿಯಮಗಳನ್ನು ತೋರಿಸುವ ದೀಪಗಳೋ? ಇದನ್ನು ವಿಚಾರ ಮಾಡಿತಿಳಿ.

Friday, February 24, 2012

ಗುಣ ಬೇರೆ ಬಲ ಬೇರೆ ಗುರಿ ಬೇರೆ ರುಚಿ ಬೇರೆ (167)

ಗುಣ ಬೇರೆ ಬಲ ಬೇರೆ ಗುರಿ ಬೇರೆ ರುಚಿ ಬೇರೆ |
ಋಣ ಸೂತ್ರ ಗತಿ ಬೇರೆ ಪೂರ್ವಕಥೆ ಬೇರೆ ||
ಮನುಜ ಮನುಜಂಗಮಿಂತಾತ್ಮ ಯೋಗ್ಯತೆ ಬೇರೆ |
ಅನುವರಿಯೆ ಸಾರ್ಥಕ್ಯ - ಮರುಳ ಮುನಿಯ || (೧೬೭)

(ಮನುಜಂಗೆ+ಇಂತು+ಆತ್ಮ)(ಅನು+ಅರಿಯೆ)

ಒಬ್ಬ ಮನುಷ್ಯನಿಗೂ ಮತ್ತೊಬ್ಬ ಮನುಷ್ಯನಿಗೂ ಬೇರೆ ಬೇರೆ ಸ್ವಭಾವ ಶಕ್ತಿ ಉದ್ದೇಶ ಮತ್ತು ರುಚಿಗಳಿರುತ್ತವೆ. ಹಾಗೆಯೇ ಅವರ ಪೂರ್ವಜನ್ಮಗಳ ಕಥೆಗಳೂ ಹಾಗೂ ಅವುಗಳ ಸಾಲ(ಋಣ)ಗಳ ನಿಯಮಗಳ ಚಲನಗಳೂ ಸಹ ಬೇರೆ ಬೇರೆಯಾಗಿರುತ್ತವೆ. ಹೀಗೆ ಒಬ್ಬೊಬ್ಬರಿಗೂ ಅವರ ಆತ್ಮದ ಅರ್ಹತೆಗಳೂ ಬೇರೆ ಬೇರೆ ಇರುತ್ತದೆ. ಇದರ ಕ್ರಮ(ಅನು)ವನ್ನು ತಿಳಿದುಕೊಂಡರೆ ಆಗ ಬಾಳು ಸಾರ್ಥಕವೆಂದೆನ್ನಿಸುತ್ತದೆ.

Thursday, February 23, 2012

ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ (166)

ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ |
ಧುರರಂಗಮವರೀರ‍್ವರಿಗೆ (ಮರ್ತ್ಯ) ಹೃದಯ ||
ತೆರೆಮರೆಯೊಳಿರುತವರು ಸಭ್ಯವೇಷದ ಭಟರ |
ಹರಿಬ ತಿಳಿಸುವುದುಂಟು - ಮರುಳ ಮುನಿಯ || (೧೬೬)

(ಅರೆದೈವ+ಅರೆದೈತ್ಯ)(ನರನ್+ಎನಿಪ್ಪ)(ಧುರರಂಗಂ+ಅವರೀರ‍್ವರಿಗೆ)(ತೆರೆಮರೆಯೊಳ್+ಇರುತ+ಅವರು)(ತಿಳಿಸುವುದು+ಉಂಟು)

ಮನುಷ್ಯನೆಂದೆನಿಕೊಳ್ಳುವ ಈ ಆಶ್ಚರ್ಯಕರವಾದ ಜೀವಿ, ಅರ್ಧ ಭಾಗ ದೈವಾಂಶವಾಗಿಯೂ ಮತ್ತು ಇನ್ನರ್ಧಭಾಗ ಅಸುರಾಂಶ(ದೈತ್ಯ)ನಾಗಿಯೂ ಇದ್ದಾನೆ. ಇಂತಹ ಮನುಷ್ಯನ ಹೃದಯವೇ ಇವರಿಬ್ಬರ ರಣ(ಧುರ)ರಂಗ. ಪರದೆಯ ಹಿಂದೆ ಬಚ್ಚಿಟ್ಟುಕೊಂಡಿರುವ ಇವರು ಸಭ್ಯವೇಷವನ್ನು ಹಾಕಿಕೊಂಡಿರುವ ಯೋಧರ ಸಂಚು(ಹರಿಬ)ಗಳನ್ನು ಬಯಲುಪಡಿಸುತ್ತಾರೆ.

Wednesday, February 22, 2012

ಸತ್ಯವೊಂದನೆ ಕೇಳ್ವ ಹಟದ ನೆವದಿಂ ಹೆರರ (165)

ಸತ್ಯವೊಂದನೆ ಕೇಳ್ವ ಹಟದ ನೆವದಿಂ ಹೆರರ |
ಕುತ್ಸಿತವ ಹೇಳಿಸು(ತೊಳಗೆ) ನಗುವರಿರರೆ ||
ಪ್ರತ್ಯಕ್ಷಕಳುಕುವಾಶೆಗಳು ಮನಸಿನ ಕುಳಿಯ |
ಗುಪ್ತದಿಂ ಚೇಷ್ಟಿಸವೆ? - ಮರುಳ ಮುನಿಯ || (೧೬೫)
 
(ಹೇಳಿಸುತ+ಒಳಗೆ)(ನಗುವರ್+ಇರರೆ)(ಪ್ರತ್ಯಕ್ಷಕೆ+ಅಳುಕುವ+ಅಶೆಗಳು)
 
ನಿಜವನ್ನು ಮಾತ್ರ ಕೇಳುವ ಹಟದ ನೆಪದಿಂದ, ಬೇರೆಯವರ (ಹೆರರ) ನಿಂದೆಗಳನ್ನು(ಕುತ್ಸಿತ) ಹೇಳುತ್ತಾ ಒಳಗಡೆ ನಗುವರು ಇರಲಾರರೇನು? ಎದುರಿಗೆ ಕಾಣಿಸಲು ಹಿಂಜರಿಯುವ (ಅಳುಕುವ) ಬಯಕೆಗಳು ಮನಸ್ಸಿನ ಒಳಗೆ ಅಡಗಿರುವ ಆಸೆ(ಗುಳಿ)ಗಳನ್ನು ಗುಟ್ಟಿನಲ್ಲಿ (ಗುಪ್ತದಿಂ) ಕಾರ್ಯನಿರ್ವಹಿಸುವಂತೆ ಮಾಡಲಾರವೇನು?

Tuesday, February 21, 2012

ಸಂಕ್ಷೋಭಿತವನುಳಿದು ಲೋಕ ಜೀವಿತವೇನು (164)

ಸಂಕ್ಷೋಭಿತವನುಳಿದು ಲೋಕ ಜೀವಿತವೇನು |
ಕಾಂಕ್ಷಿತವನುಳಿದು ಮಾನವ ಶಕ್ತಿಯೇನು ? ||
ಧ್ವಾಂಕ್ಷ ಪ್ರಸಂಗವದು ನಡೆಗೆ ಸೃಷ್ಟಿಯ ಪಥದಿ |
ಶಿಕ್ಷಿಸಿಕೊ ನಿನ್ನ ನೀಂ - ಮರುಳ ಮುನಿಯ || (೧೬೪)

(ಸಂಕ್ಷೋಭಿತವನ್+ಉಳಿದು)(ಕಾಂಕ್ಷಿತವನ್+ಉಳಿದು)

ತಳಮಳ(ಸಂಕ್ಷೋಭೆ)ವಿಲ್ಲದಿರುವ ಪ್ರಪಂಚದ ಜೀವನದಲ್ಲಿ ಸ್ವಾರಸ್ಯವೇನೂ ಇರುವುದಿಲ್ಲ. ಅಂತೆಯೇ ಬಯಕೆ(ಕಾಂಕ್ಷಿತ)ಗಳಿಲ್ಲದ ಮನುಷ್ಯನ ಶಕ್ತಿಗಳಿಂದ ಏನು ಉಪಯೋಗ? ಕಾಗೆ, ಬಕಪಕ್ಷಿಗಳು (ಧ್ವಾಂಕ್ಷ) ಸೃಷ್ಟಿಯ ಮಾರ್ಗದಲ್ಲಿ ನಡೆವಂತೆ, ನಿನ್ನನ್ನು ನೀನೇ ತಿದ್ದುಕೊಂಡು ನಡೆ.

Friday, February 17, 2012

ಅಲುಗದದಿರದ ಗಿರಿಯ ಮುಖ ಧೀರ ಗಂಭೀರ (163)

ಅಲುಗದದಿರದ ಗಿರಿಯ ಮುಖ ಧೀರ ಗಂಭೀರ |
ಕುಲುಕಿ ಬಳುಕುವ ಬಳ್ಳಿ ಸರಸದೊಯ್ಯಾರ ||
ಬಲ ಘನತೆ ಸೇವ್ಯವೋ ಚೆಲುವೊಲವು ಸೇವ್ಯವೋ ? |
ಬೆಲೆಯಾವುದಾತ್ಮಕೆಲೊ - ಮರುಳ ಮುನಿಯ || (೧೬೩)

(ಅಲುಗದೆ+ಅದಿರದ)(ಸರಸದ+ಒಯ್ಯಾರ)(ಚೆಲುವು+ಒಲವು)(ಬೆಲೆ+ಯಾವುದ್+ಆತ್ಮಕೆ+ಎಲೊ)

ಅಲ್ಲಾಡದೆ ಮತ್ತು ನಡುಗದೆ ನಿಂತಿರುವ ಪರ್ವತದ ಮುಂಭಾಗದ ಗಾಂಭೀರ್ಯದ ನೋಟ ಒಂದುಕಡೆಯಾದರೆ ಅಲುಗಾಡಿಸುತ್ತಾ ತೊನೆದಾಟುವ ಲತೆಯ ವಿನೋದವಾದ ಚೆಲ್ಲಾಟ ಮತ್ತು ಬೆಡಗು ಮತ್ತೊಂದು ಕಡೆ. ಇವೆರಡರಲ್ಲಿ ಪೂಜಿಸಲಿಕ್ಕೆ ಅರ್ಹವಾದದು(ಸೇವ್ಯ) ಪರ್ವತದ ಶಕ್ತಿ ಮತ್ತು ಘನತೆಗಳೋ ಅಥವಾ ಲತೆಯ ಸೌಂದರ್ಯ ಮತ್ತು ಪ್ರೀತಿಗಳೋ? ಆತ್ಮವು ಇವುಗಳಲ್ಲಿ ಯಾವುದಕ್ಕೆ ಬೆಲೆಯನ್ನು ಕೊಡಬೇಕು ?

Thursday, February 16, 2012

ಮರುಳು ಬಿಸಿಲಕ್ಷಿಯೀತ್ರಯದೊಂದು ಸಂಸರ್ಗ (162)

ಮರುಳು ಬಿಸಿಲಕ್ಷಿಯೀತ್ರಯದೊಂದು ಸಂಸರ್ಗ |
ಮರುವೊಳ್ ಮರೀಚೆಕೆಯನಾಗಿಪುದು ಮೃಗಕೆ ||
ಸ್ಥಿರಬೊಮ್ಮ ಚರಮಾಯೆ ನಿನ್ನ ದೃಕ್ಕೋಣವಿವು |
ನೆರೆಯೆ ವಿಶ್ವದ ಚಿತ್ರ - ಮರುಳ ಮುನಿಯ || (೧೬೨)

(ಬಿಸಿಲ್+ಅಕ್ಷಿ+ಈ+ತ್ರಯದ+ಒಂದು)(ಮರೀಚೆಕೆಯನ್+ಆಗಿಪುದು)(ದೃಕ್ಕೋಣ+ಇವು)

ಮರಳು, ಸೂರ್ಯನ ಪ್ರಖರತೆ ಮತ್ತು ಕಣ್ಣು(ಅಕ್ಷಿ)ಗಳು, ಇವು ಮೂರೂ ಸೇರಿ ಒಂದು ಸಂಪರ್ಕ(ಸಂಸರ್ಗ)ವನ್ನುಂಟುಮಾಡಿ, ಮರುಭೂಮಿಯಲ್ಲಿ ಮೃಗಕ್ಕೆ ಬಿಸಿಲ್ಗುದುರೆ(ಮರೀಚೆಕೆ)ಯನ್ನು ಗೋಚರಿಸುವಂತೆ ಮಾಡುತ್ತದೆ. ಅಂತೆಯೇ ಎಂದೆಂದಿಗೂ ಶಾಶ್ವತವಾಗಿರುವ ಪರಬ್ರಹ್ಮ, ಚಲಿಸುವ ಮಾಯೆ ಮತ್ತು ನೀನು ನೋಡುವ ದೃಷ್ಟಿಕೋನ(ದೃಕ್ಕೋಣ)ಗಳೆಲ್ಲವೂ ಸೇರಿದಾಗ ನಿನಗೆ ಪ್ರಪಂಚದ ಚಿತ್ರವು ಕಾಣಸಿಗುತ್ತದೆ.

Wednesday, February 15, 2012

ಒಂದೆ ನಾಲಗೆ ನೂರು ಸವಿಗಳನು ಸವಿಯುವುದು (161)

ಒಂದೆ ನಾಲಗೆ ನೂರು ಸವಿಗಳನು ಸವಿಯುವುದು |
ಒಂದೆ ಮನ ನೂರೆಂಟು ಕನಸ ಕಾಣುವುದು ||
ಒಂದೆ ಬೊಮ್ಮದಿನುಣ್ಮಿದೊಂದೆ ಮಾಯೆಯಿನೆ ನಿ-|
ನ್ನಂದ ಕುಂದುಗಳೆಲ್ಲ - ಮರುಳ ಮುನಿಯ || (೧೬೧)

(ಬೊಮ್ಮದಿನ್+ಉಣ್ಮಿದ+ಒಂದೆ)(ನಿನ್ನ+ಅಂದ)(ಕುಂದುಗಳ್+ಎಲ್ಲ)

ಒಂದೇ ಒಂದು ನಾಲಿಗೆ ಇರುವುದಾದರೂ, ಅದು ನೂರಾರು ರುಚಿಗಳನ್ನು ಸವಿಯಬಲ್ಲುದು. ಒಂದೇ ಒಂದು ಮನಸ್ಸು ನೂರಾರು ಕನಸುಗಳನ್ನು ಕಾಣಬಲ್ಲುದು. ನಿನ್ನ ಚೆಲುವು ಮತ್ತು ಕೊರತೆಗಳೆಲ್ಲವೂ ಒಬ್ಬನೇ ಒಬ್ಬನಾದ ಪರಬ್ರಹ್ಮನಿಂದ ಹೊರಹೊಮ್ಮಿದ ಮಾಯೆಯಿಂದ ಆಗಿವೆ.

Tuesday, February 14, 2012

ವೈಣಿಕಂ ಶೇಷಣ್ಣ ತಾನೆಳೆದ ನಾದದಲಿ (160)

ವೈಣಿಕಂ ಶೇಷಣ್ಣ ತಾನೆಳೆದ ನಾದದಲಿ |
ಲೀನನಾಗುತೆ ತಾನೆ ಮೈಯ ಮರೆತಂತೆ ||
ತಾನೆ ಗೈದೀಜಗದ ನಗುವಳುಗಳೊಳು ತಾನೆ |
ಆನಂದಿಪನು ಬೊಮ್ಮ - ಮರುಳ ಮುನಿಯ || (೧೬೦)

(ತಾನ್+ಎಳೆದ)(ಲೀನನ್+ಆಗುತೆ)(ಗೈದ+ಈ+ಜಗದ)(ನಗು+ಅಳುಗಳೊಳು)

ಪ್ರಸಿದ್ಧ ವೈಣಿಕರಾದ ಶೇಷಣ್ಣನವರು ತಾವೇ ತಂತಿ ಮೀಟಿ ಮೂಡಿಸಿದ ವೀಣೆಯ ನಾದದಲ್ಲಿ ಪೂರ್ತಿಯಾಗಿ ಬೆರೆತು ತಮ್ಮನ್ನು ತಾವೇ ಮರೆತಂತೆ, ತಾನೇ ನಿರ್ಮಿಸಿದ (ಗೈದ) ಈ ಪ್ರಪಂಚದ ದುಃಖ ಮತ್ತು ಸಂತೊಷಗಳಲ್ಲಿ ಆ ಪರಬ್ರಹ್ಮನು ಆನಂದದಿಂದಿರುತ್ತಾನೆ.

Monday, February 13, 2012

ಮೇಯಗರ್ಭದೊಳೊಂದಮೇಯವಾವುದೊ ನಿಂತು (159)

ಮೇಯಗರ್ಭದೊಳೊಂದಮೇಯವಾವುದೊ ನಿಂತು |
ಕಾಯಕವ ನಡಸುತಿರ‍್ಪುದು ವಿಶ್ವವಾಗಿ ||
ಮಾಯೆಯುಡಿಗೆಯನುಟ್ಟು ತನ್ನ ತಾನೇ ಮರೆತು |
ಆಯಸಂಗೊಳುತಿಹುದು - ಮರುಳ ಮುನಿಯ || (೧೫೯)

(ಮೇಯಗರ್ಭದೊಳ್+ಒಂದು+ಅಮೇಯವು+ಆವುದೊ)(ನಡಸುತ+ಇರ‍್ಪುದು)(ಮಾಯೆಯ+ಉಡಿಗೆಯನ್+ಉಟ್ಟು)(ಆಯಸಂಗೊಳುತ+ಇಹುದು)

ತಿಳಿಯಲು ಸಾಧ್ಯವಾಗಿರುವಂತಹದರೊಳಗೆ, ತಿಳಿಯಲಸಾಧ್ಯವಾದಂತಹ ವಸ್ತುವಿದ್ದು, ಅದು ಪ್ರಪಂಚವೆಂದೆನ್ನಿಸಿಕೊಂಡು ಕೆಲಸಗಳನ್ನು ನಡೆಸುತ್ತಿದೆ. ಅದು ಮಾಯೆಯೆಂಬ ದಿರಿಸನ್ನು(ಉಡಿಗೆ) ತೊಟ್ಟುಕೊಂಡು ತನ್ನನ್ನು ತಾನೇ ಮರೆತು ಆಯಾಸಗೊಳ್ಳುತ್ತಿದೆ.

Friday, February 10, 2012

ಜನುಮ ಜನುಮಾಂತರಂಗಳ ಲೆಕ್ಕಗಳನಿಟ್ಟು (158)

ಜನುಮ ಜನುಮಾಂತರಂಗಳ ಲೆಕ್ಕಗಳನಿಟ್ಟು |
ಋಣವ ನಿನ್ನಿಂ ತೆರಿಸಿಕೊಳಲು ಕಾದಿರುವಾ ||
ಗಣಿತಸೂತ್ರದ ಶೂರನೇಂ ಬೊಮ್ಮ ಬೇರೆ ಹಿರಿ-|
(ತನ ನಯ)ವವನದಿಲ್ಲ? - ಮರುಳ ಮುನಿಯ || (೧೫೮)

(ಲೆಕ್ಕಗಳನ್+ಇಟ್ಟು)(ಕಾದಿರುವ+ಆ)(ನಯವು+ಅವನದಿಲ್ಲ)

ಹಿಂದಿನ ಮತ್ತು ಮುಂದಿನ ಅನೇಕ ಜನ್ಮಗಳ ಲೆಕ್ಕಾಚಾರಗಳನ್ನಿಟ್ಟುಕೊಂಡು, ಅವುಗಳ ಸಾಲ(ಋಣ)ಗಳನ್ನು ನಿನ್ನಿಂದ ತೆಗೆದುಕೊಳ್ಳಲು ಕಾದುಕೊಂಡಿರುವ ಆ ಲೆಕ್ಕಾಚಾರ ನಿಯಮಗಳ (ಸೂತ್ರ) ಧೀರನೇನು ಈ ಪರಬ್ರಹ್ಮನೆನ್ನುವನು? ಇವನಲ್ಲಿ ಇತರ ಯಾವ ದೊಡ್ಡತನ ಮತ್ತು ನೀತಿ(ನಯ)ಗಳಿಲ್ಲವೇನು?

Thursday, February 9, 2012

ಇರುವುದದು ನೆರೆವುದದು ಭರಿಪುದದು ಪೊರೆವುದದು (157)

ಇರುವುದದು ನೆರೆವುದದು ಭರಿಪುದದು ಪೊರೆವುದದು |
ಅರಿವೆಲ್ಲವಲುಗೆಲ್ಲವಾರ‍್ಪೆಲ್ಲವದರಿಂ ||
ತರಣಿ ಶಶಿ ತಾರೆಗಳು ಜಲವಗ್ನಿವಾಯುಗಳು |
ಸ್ಫುರಿಪುವದರಿಂದೆಲ್ಲ - ಮರುಳ ಮುನಿಯ || (೧೫೭)

(ಅರಿವೆಲ್ಲ+ಅಲುಗೆಲ್ಲ+ಆರ‍್ಪೆಲ್ಲ+ಅದರಿಂ)(ಸ್ಫುರಿಪುವು+ಅದರಿಂದ+ಎಲ್ಲ)

ಪರಮಾತ್ಮನೆಂಬ ವಸ್ತು ಇದೆ. ಅದೇ ವಸ್ತುವೇ ಎಲ್ಲೆಲ್ಲೂ ತುಂಬಿ(ನೆರೆ)ಕೊಳ್ಳುತ್ತದೆ. ಎಲ್ಲವನ್ನೂ ಹೊತ್ತುಕೊಳ್ಳುತ್ತದೆ (ಭರಿಪು) ಮತ್ತು ಕಾಪಾಡುತ್ತದೆ (ಪೊರೆ). ನಮ್ಮಗಳ ತಿಳುವಳಿಕೆಗಳೆಲ್ಲವೂ, ಚರ ವಸ್ತುಗಳೆಲ್ಲವೂ ಮತ್ತು ಪರಾಕ್ರಮ ಮತ್ತು ಸಾಮರ್ಥ್ಯ(ಅರ್ಪು)ಗಳೆಲ್ಲವೂ ಅದರಿಂದಲೇ ಆಗುತ್ತವೆ. ಸೂರ್ಯ (ತರಣಿ), ಚಂದ್ರ (ಶಶಿ), ನಕ್ಷತ್ರ(ತಾರೆ)ಗಳು, ನೀರು(ಜಲ), ಬೆಂಕಿ (ಅಗ್ನಿ) ಮತ್ತು ಗಾಳಿ(ವಾಯು)ಗಳೆಲ್ಲವೂ ಅದರಿಂದಲೇ ಉಂಟಾಗಿವೆ.

Wednesday, February 8, 2012

ಜಗಬೇಕು ಬ್ರಹ್ಮಕ್ಕೆ ಬೇಡದಿರೆ ಸೃಜಿಸುವುದೆ (156)

ಜಗಬೇಕು ಬ್ರಹ್ಮಕ್ಕೆ ಬೇಡದಿರೆ ಸೃಜಿಸುವುದೆ ? |
ಬಗೆಬಗೆಯ ಜೀವಲೀಲೆಗಳದರ ಸರಸ ||
ಜಗವ ತೊರೆಯೆಂಬವರೆ ನೀಂ ಬೆದಕುತಿಹುದೇನು ? |
ಸಿಗದೆ ಕಣ್ಗದು ಜಗದಿ ? - ಮರುಳ ಮುನಿಯ || (೧೫೬)

(ಬೇಡದೆ+ಇರೆ)(ಜೀವಲೀಲೆಗಳು+ಅದರ)(ಬೆದಕುತಿಹುದು+ಏನು)(ಕಣ್ಗೆ+ಅದು)

ಬ್ರಹ್ಮನಿಗೆ ಜಗತ್ತು ಬೇಕು. ಅದಕ್ಕೋಸ್ಕರವೇ ಅವನು ಈ ಜಗತ್ತನ್ನು ಸೃಷ್ಟಿಸಿ(ಸೃಜಿಸು)ದ್ದಾನೆ. ವಿಧವಿಧವಾದ ಜೀವಿಗಳ ಆಟಗಳು ಬ್ರಹ್ಮನ ವಿನೋದವಾದ ಚೆಲ್ಲಾಟ. ಈ ಜಗತ್ತಿನಲ್ಲಿ ಬಾಳಿ ಉಪಯೋಗವಿಲ್ಲ, ಇದನ್ನು ಬಿಟ್ಟು ಹೋಗುವುದೇ ಒಳಿತು ಎನ್ನುವ ನೀವೆಲ್ಲ ಏನನ್ನು ತಾನೇ ಹುಡುಕುತ್ತಿದ್ದೀರಿ? ಅದು ಜಗತ್ತಿನಲ್ಲಿ ನಿಮ್ಮ ಕಣ್ಣುಗಳಿಗೆ ಸಿಗುವುದಿಲ್ಲವೇ?

Tuesday, February 7, 2012

ಬಗೆದು ನೀಂ ಬಾಳುವೊಡೆ ಜಗದ ರಚನೆಯ ನೋಡು (155)

ಬಗೆದು ನೀಂ ಬಾಳುವೊಡೆ ಜಗದ ರಚನೆಯ ನೋಡು |
ಸಗಣಿ ಹಾಲುಗಳೆರಡು, ಕೊಡುವ ಗೋವೊಂದೆ ||
ಅಗಣಿತದಿ ಗಣ್ಯ(ಮ)ಗಣ್ಯಗಣಿತದಿಂದ |
ಜಗವೊಂದೆ ಬಹುರೂಪ - ಮರುಳ ಮುನಿಯ || (೧೫೫)

(ಹಾಲುಗಳು+ಎರಡು)(ಗೋವು+ಒಂದೆ)(ಗಣ್ಯಂ+ಅಗಣ್ಯಂ+ಗಣಿತದಿಂದ)(ಜಗ+ಒಂದೆ)

ಸರಿಯಾಗಿ ನೀನು ಆಲೋಚಿಸಿ ಜೀವನವನ್ನು ನಡೆಸುವವನಾದರೆ, ಈ ಪ್ರಪಂಚ ನಿರ್ಮಾಣವಾಗಿರುವ ರೀತಿಯನ್ನು ನೋಡು. ಒಂದೇ ಹಸುವು ಸಗಣಿ ಮತ್ತು ಹಾಲುಗಳೆರಡನ್ನೂ ಕೊಡುತ್ತದೆ. ಲೆಕ್ಕ ಹಾಕಲಸಾಧ್ಯವಾದದ್ದರಿಂದ, ಲೆಕ್ಕ ಹಾಕಲು ಸಾಧ್ಯವಾದದ್ದು ಮತ್ತು ಲೆಕ್ಕ ಹಾಕಲು ಸಾಧ್ಯವಾದದ್ದರಿಂದ, ಲೆಕ್ಕ ಹಾಕಲಸಾಧ್ಯವಾದದ್ದು ಬರುತ್ತದೆ. ಜಗತ್ತು ಒಂದೇ ಆದರೂ ಅದರಲ್ಲಿ ಬಹು ಆಕಾರಗಳಿವೆ.

Monday, February 6, 2012

ಸಾಕಾರನಾಗದಿಹ ದೈವದಿಂದಾರ‍್ಗೇನು (154)

ಸಾಕಾರನಾಗದಿಹ ದೈವದಿಂದಾರ‍್ಗೇನು? |
ಬೇಕು ಬಡಜೀವಕ್ಕೆ ಸಂಗಡಿಗನೋರ‍್ವಂ ||
ಶೋಕಾರ್ತನೆದೆಯುಲಿವ ಗೂಢ ಚಿಂತೆಗಳ ನೊಲಿ- |
ದಾಕರ್ಣಿಪನೆ ದೈವ - ಮರುಳ ಮುನಿಯ || (೧೫೪)

(ಸಾಕಾರನ್+ಆಗದಿಹ)(ದೈವದಿಂದ+ಆರ‍್ಗೇನು)(ಶೋಕ+ಆರ್ತನ್+ಎದೆ+ಉಲಿವ)(ಚಿಂತೆಗಳನ್+ಒಲಿದು+ಆಕರ್ಣಿಪನೆ)

ಒಂದು ರೂಪ ಮಾತ್ರದಿಂದ (ಸಾಕಾರ) ನಮ್ಮ ಮುಂದುಗಡೆ ಕಾಣಿಸಿಕೊಳ್ಳದಿರುವ ದೇವರಿಂದ ನಮಗೆ ಆಗಬೇಕಾದದ್ದೇನಿಲ್ಲ. ಈ ಬಡಜೀವಕ್ಕೆ ಯಾವಾಗಲೂ ಒಬ್ಬ ಜೊತೆಗಾರನು (ಸಂಗಡಿಗ)ಬೇಕು. ದುಃಖ (ಶೋಕ)ದಿಂದೊಡಗೂಡಿ ಕಷ್ಟದಲ್ಲಿರುವವನ (ಆರ್ತನ್) ಹೃದಯವು ಹೇಳುವ ರಹಸ್ಯವಾಗಿರುವ (ಗೂಢ) ಕಳವಳ ಮತ್ತು ವ್ಯಥೆಗಳನ್ನು ಮನವಿಟ್ಟು (ಒಲಿದು) ಕಿವಿತುಂಬ ಕೇಳಿಸಿಕೊಳ್ಳುವವನೇ (ಆಕರ್ಣಿಪನೆ) ದೇವರು.

Friday, February 3, 2012

ನಾನಾ ವಿಕಾರ ಲೀಲೆಗಳ ತಾಳುತ್ತ (153)

ನಾನಾ ವಿಕಾರ ಲೀಲೆಗಳ ತಾಳುತ್ತ |
ತಾನೊಬ್ಬನೇ ನಿಶ್ಚಲಂ ಮೆರೆಯುತತ್ತ ||
ಜ್ಞಾನಿಗೇ ತಾನೇಕ ಯೋಗತತ್ತ್ವವನೀವ |
ದಾನಿಯಾ ಬ್ರಹ್ಮನೆಲೊ - ಮರುಳ ಮುನಿಯ || (೧೫೩)

(ಮೆರೆಯುತ+ಅತ್ತ)(ಯೋಗತತ್ತ್ವವನ್+ಈವ)(ಬ್ರಹ್ಮನ್+ಎಲೊ)

ಬಗೆಬಗೆಯ ರೂಪಾಂತರ(ವಿಕಾರ)ಗಳ, ಆಟಗಳನ್ನು ಧರಿಸುತ್ತಾ, ಆದರೆ ತಾನು ಒಬ್ಬ ಮಾತ್ರ ಅಚಲವಾಗಿ (ನಿಶ್ಚಲ) ಮೆರೆಯುತ್ತಾ, ತಿಳುವಳಿಕೆ ಇರುವವನಿಗೆ ಏಕತಾಭಾವದ ಯೊಗದ ಸಿದ್ಧಾಂತವನ್ನು ನೀಡುವ ದಾನಿ, ಈ ಬ್ರಹ್ಮನೆನ್ನುವನು.

Thursday, February 2, 2012

ನೀರು ಹೊಳೆಯಲಿ ಹರಿದು ಹೊಸಹೊಸದಹುದು (152)

ನೀರು ಹೊಳೆಯಲಿ ಹರಿದು ಹೊಸಹೊಸದಹುದು |
ಸೇರುವುವುಪನದಿಗಳು ನದಿಯು ಹರಿಯುತಿರೆ ||
ಊರುವುದು ಹೊಸ ನೀರು ತಳದ ಒಳಗಿಹುದೂಟೆ |
ತೀರದೂಟೆಯೊ ಆತ್ಮ - ಮರುಳ ಮುನಿಯ || (೧೫೨)

(ಹೊಸಹೊಸದು+ಅಹುದು)(ಸೇರುವುವು+ಉಪನದಿಗಳು)(ಹರಿಯುತ+ಇರೆ)(ಒಳಗೆ+ಇಹುದು+ಊಟೆ)(ತೀರದ+ಊಟೆಯೊ)

ನೀರು ನದಿಯಲ್ಲಿ ಹರಿಯುತ್ತಾ ಆ ನೆಲದ ಸಾರವನ್ನು ತಾನೂ ತೆಗೆದುಕೊಂಡು ಹೊಸದಾಗುತ್ತಾ ಹೋಗುತ್ತದೆ. ಒಂದು ದೊಡ್ಡ ನದಿಯು ಹರಿಯುತ್ತಿರುವಂತೆಯೇ ಅದಕ್ಕೆ ಬೇರೆ ಬೇರೆ ಸಣ್ಣ ಉಪನದಿಗಳೂ ಸಹ ಸೇರಿಕೊಳ್ಳುತ್ತದೆ. ಇದೇ ರೀತಿಯಾಗಿ ಹೊಸ ನೀರು ಕೆಳಗಿರುವ ನೀರಿನ ಚಿಲುಮೆ(ಊಟೆ)ಯಿಂದ ಜಿನುಗುತ್ತಾ ಇರುತ್ತದೆ. ಆತ್ಮವೆನ್ನುವುದು ನಿರಂತರವಾಗಿ ಚಿಮ್ಮುತ್ತಿರುವ ಒಂದು ನೀರಿನ ಬುಗ್ಗೆ (ಊಟೆ).

Wednesday, February 1, 2012

ವ್ಯವಹಾರಲೋಕದೊಡಗೂಡಿರುತ್ತದರೊಳಗೆ (151)

ವ್ಯವಹಾರಲೋಕದೊಡಗೂಡಿರುತ್ತದರೊಳಗೆ |
ಅವಿಕಾರ ತತ್ತ್ವ ಸಂಸ್ಮೃತಿಯ ನೀಂ ಬೆರಸೆ ||
ಭವ ನಿನಗೆ ಬೊಂಬೆ ಶಿಶುಗಪ್ಪಂತೆ ಬರಿಲೀಲೆ |
ಶಿವನೆ ಸಂಸಾರಿಯಲ - ಮರುಳ ಮುನಿಯ || (೧೫೧)
(ವ್ಯವಹಾರಲೋಕದ+ಒಡಗೂಡಿ+ಇರುತ್ತ+ಅದರ+ಒಳಗೆ)
ಈ ವ್ಯವಹಾರ ಪ್ರಪಂಚದಲ್ಲಿ ಸೇರಿಕೊಂಡು ವಿಕಾರಕ್ಕೆ ಎಡೆಗೊಡದೆ ಸಂಸಾರವನ್ನು (ಸಂಸ್ಮೃತಿ) ನಡೆಸುವ ಸಿದ್ಧಾಂತವನ್ನು ನೀನು ಬೆರೆಸಿದ್ದಲ್ಲಿ, ಸಂಸಾರ(ಭವ)ವನ್ನು ನಡೆಸುವ ಕಲೆ ನಿನಗೆ ಒಂದು ಪುಟ್ಟ ಮಗು ಬೊಂಬೆಯ ಜೊತೆ ಆಟವಾಡಿದಷ್ಟು ಲೀಲಾಜಾಲವಾಗುತ್ತದೆ. ಆ ಪರಮಾತ್ಮನೇ ವಿಶ್ವಕುಟುಂಬಿ ಆಗಿದ್ದಾನಲ್ಲವೇ?