Thursday, June 28, 2012

ಅಂತರ್ಧನಂ ಬಾಹ್ಯಧನಕಿಂತ ಮಿಗಿಲೆಂದು (234)

ಅಂತರ್ಧನಂ ಬಾಹ್ಯಧನಕಿಂತ ಮಿಗಿಲೆಂದು |
ಸ್ವಾಂತಶಿಕ್ಷಣೆ ರಾಜ್ಯವಿಧಿಗೆ ಮೇಲೆಂದು ||
ಅಂತಶ್ಯಮಂ ಪ್ರಕೃತಿ ವಿಷಮಗಳ ಹಾಯ್ದಂದು |
ಶಾಂತಿ ನರಮಂಡಲಕೆ - ಮರುಳ ಮುನಿಯ || (೨೩೪)

(ಅಂತರ್+ಧನಂ)(ಮಿಗಿಲ್+ಎಂದು)(ಮೇಲ್+ಎಂದು)(ಅಂತಃ+ಶ್ಯಮಂ)(ಹಾಯ್ದ+ಅಂದು)

ತನ್ನ ಮನಸ್ಸಿಗೆ ಸಿಗುವ ಸಮಾಧಾನ ಮತ್ತು ತೃಪ್ತಿಗಳು, ಹೊರಜಗತ್ತಿನಲ್ಲಿ ದೊರಕುವ ಸಂಪತ್ತುಗಳಿಗಿಂತ ಅಧಿಕವಾದದ್ದೆಂದು ತಿಳಿದ ದಿನ, ತನ್ನ ಮನಸ್ಸನ್ನು ತಾನೇ ದಂಡಿಸಿ ತಿದ್ದುಕೊಳ್ಳುವುದು, ದೇಶದ ನಿಯಮ ಮತ್ತು ಕಟ್ಟಳೆಗಳಿಗಿಂತ ಒಳ್ಳೆಯದೆಂದು ಅರಿವಾದ ದಿನ, ತನ್ನ ಆತ್ಮಸಂಯಮವು, ಪ್ರಕೃತಿಯ ಭಯಂಕರವಾದ ವಿಕೋಪಗಳನ್ನು ದಾಟಿ ಹೋದ ದಿನ, ಮನುಷ್ಯ ಕೋಟಿಗೆ ಶಾಂತಿ ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When we realize that the inner wealth is more valuable than outer wealth
And that self discipline is better than the state control,
And when peace within overcomes all odds outside,
Mankind would be blessed with abiding peace – Marula Muniya
(Translation from "Thus Sang Marula Muniya" by Sri. Narasimha Bhat)

Wednesday, June 27, 2012

ತರಣಿಯುರಿಯದೆ ಜಗಕೆ ತಂಬೆಳಕನೆರೆವಂದು (233)

ತರಣಿಯುರಿಯದೆ ಜಗಕೆ ತಂಬೆಳಕನೆರೆವಂದು |
ಕೊರೆ ಬಿರುಸುಗಳ ತೊರೆದು ಗಾಳಿ ಸುಳಿವಂದು ||
ಪುರುಷ ಹೃದಯಂ ಸತ್ತ್ವಪರಿಪೂರ್ಣವಿರುವಂದು |
ಧರಣಿಗಪ್ಪುದು ಶಾಂತಿ - ಮರುಳ ಮುನಿಯ || (೨೩೩)

(ತರಣಿ+ಉರಿಯದೆ)(ತಂಪು+ಬೆಳಕನು+ಎರೆವಂದು)(ಸತ್ತ್ವಪರಿಪೂರ್ಣ+ಇರುವಂದು)(ಧರಣಿಗೆ+ಅಪ್ಪುದು)

ಸೂರ್ಯ(ತರಣಿ)ನು ಜ್ವಲಿಸಿ ಸುಡದೆ, ಚಂದ್ರನಂತೆ ತಂಪಾದ ಬೆಳಕನ್ನು ಜಗತ್ತಿಗೆ ಸುರಿದ ದಿನ, ಗಾಳಿಯು ಕೊರೆಯದೆ ಮತ್ತು ವೇಗವಾಗಿ ಬೀಸದೆ, ಮೃದುವಾಗಿ ಬೀಸಿದ ದಿನ ಮತ್ತು ಮನುಷ್ಯನ ಹೃದಯ ಸಾರವು ಸಂಪೂರ್ಣವಾಗಿರುವ ದಿನ, ಜಗತ್ತಿ(ಧರಣಿ)ಗೆ ಶಾಂತಿ ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the sun sheds cool light to the world giving up his blazing heat,
When the wind gently blows giving up its sluggishness and fierceness
When human heart becomes saturated with divine spirit
Then the peace descends on the world – Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 26, 2012

ಉಡುರಾಜನುಬ್ಬಿಳಿತ ಬಿಟ್ಟು ದೃಢನಾದಂದು (232)

ಉಡುರಾಜನುಬ್ಬಿಳಿತ ಬಿಟ್ಟು ದೃಢನಾದಂದು |
ಕಡಲಲೆಗಳುರುಳಿಡದೆ ನಿದ್ದೆವೋದಂದು ||
ಗುಡುಗು ಸಿಡಿಲುಗಳುಳಿದು ಬಾನ್ ಮಳೆಯ ಕರೆದಂದು |
ಪೊಡವಿಗಪ್ಪುದು ಶಾಂತಿ - ಮರುಳ ಮುನಿಯ || (೨೩೨)

(ಉಡುರಾಜನ+ಉಬ್ಬು+ಇಳಿತ)(ದೃಢನ್+ಆದಂದು)(ಕಡಲ್+ಅಲೆಗಳ್+ಉರುಳಿಡದೆ)(ಸಿಡಿಲುಗಳ್+ಉಳಿದು)(ಪೊಡವಿಗೆ+ಅಪ್ಪುದು)

ಚಂದ್ರ(ಉಡುರಾಜ)ನು ವರ್ಧಿಸುವುದು ಮತ್ತು ಕ್ಷೀಣಿಸುವುದನ್ನು ಬಿಟ್ಟು ಬಲಶಾಲಿಯಾದ ದಿನ, ಸಮುದ್ರದ ಅಲೆಗಳು ಉರುಳದೆ ನಿಶ್ಚಲವಾದ ದಿನ, ಗುಡುಗು ಮತ್ತು ಸಿಡಿಲುಗಳು ಇರದೆ ಆಕಾಶವು ಮಳೆ ಹೊಯ್ದ ದಿನ, ಜಗತ್ತಿಗೆ (ಶಾಂತಿ) ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the moon remains the same without waxing and waning,
When the sea waves sleep without rolling and roaring
When the sky pours with no lightning and thunder
Then peace descends on the world – Marula Muniya
(Translation from "Thus Sang Marula Muniya" by Sri. Narasimha Bhat)

Friday, June 22, 2012

ಶಾಂತಿ ಜಗಕಿಲ್ಲದ ಅಶಾಂತಿಯದು ನಿನಗೇಕೆ? (231)

ಶಾಂತಿ ಜಗಕಿಲ್ಲದ ಅಶಾಂತಿಯದು ನಿನಗೇಕೆ? |
ಸಂತಾಪದಿಂದೆ ಸಂತಸವನೊಗೆಯಿಪೆಯಾ ? ||
ಅಂತರಂಗದೊಳೊ ಬಾಹ್ಯದೊಳೊ ಶಾಂತಿಯ ಮೂಲ |
ಸ್ವಾಂತಸುಸ್ಥಿತಿ ಶಾಂತಿ - ಮರುಳ ಮುನಿಯ || (೨೩೧)

(ಸಂತಸವನ್+ಒಗೆಯಿಪೆಯಾ)

ಶಾಂತವಾಗಿರುವ ಜಗತ್ತಿಗೇ ಇಲ್ಲದಿರುವ ಅಶಾಂತಿ ನಿನಗೇಕೆ ಬಂತು? ದುಃಖ(ಸಂತಾಪ)ದಿಂದ ಸಂತೋಷವನ್ನು ಹುಟ್ಟಿ(ಒಗೆ)ಸಲು ಪ್ರಯತ್ನಿಸುತ್ತಿರುವೆಯೇನು? ಶಾಂತಿಯ ಹುಟ್ಟು ನಿನ್ನ ಅಂತರಂಗದೊಳಗೆ ಇದೆಯೋ ಅಥವಾ ಬಾಹ್ಯ ಪ್ರಪಂಚದಲ್ಲಿ ಇದೆಯೋ? ಚಿಂತಿಸು. ನಿನ್ನ ಮನಸ್ಸನ್ನು ಒಳ್ಳೆಯ ಸ್ಥಿತಿಯಲ್ಲಿಟ್ಟುಕೊಳ್ಳುವುದೇ ಶಾಂತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why do you want to unrest that ruins the peace of the world?
Can you produce happiness from burning grief?
The root of peace within the heart and out in the world
Is the well settled state of one’s own mind? – Marula Muniya
(Translation from "Thus Sang Marula Muniya" by Sri. Narasimha Bhat)

Thursday, June 21, 2012

ಭೋಗೇಚ್ಛೆಯಿಂ ಗೃಹಾರಾಮಧನಲೋಭಗಳು (230)

ಭೋಗೇಚ್ಛೆಯಿಂ ಗೃಹಾರಾಮಧನಲೋಭಗಳು |
ತ್ಯಾಗದಿಂ ಲೋಕಕಾರುಣ್ಯ ಪುಣ್ಯಗಳು ||
ರಾಗದುದ್ವೇಗವಿರದುಭಯಪ್ರವೃತ್ತಿಗಳ |
ಯೋಗದಿಂ ಶಾಂತಿಸುಖ - ಮರುಳ ಮುನಿಯ || (೨೩೦)

(ಭೋಗ+ಇಚ್ಛೆಯಿಂ)(ಗೃಹ+ಆರಾಮ)(ರಾಗದ+ಉದ್ವೇಗ+ಇರದ+ಉಭಯ)

ಈ ರೀತಿಯ ಸುಖಾಭಿಲಾಷೆಗಳಿಂದ ಮನೆ, ತೋಟ (ಆರಾಮ), ಸಂತೋಷ, ಐಶ್ವರ್ಯಗಳ ದುರಾಸೆ ಮತ್ತು ಕೃಪಣತೆಗಳುಂಟಾಗುತ್ತವೆ. ಇವುಗಳನ್ನು ತೊರೆಯುವದರಿಂದ ಪ್ರಪಂಚದ ದಯೆ ಮತ್ತು ಪುಣ್ಯಗಳನ್ನು ಸಂಪಾದಿಸುತ್ತೇವೆ. ಆಸಕ್ತಿ, ಉದ್ರೇಕಗಳೆರಡೂ ಇರದಿರುವಂತಹ ಜೀವನ ವಿಧಾನವನ್ನು ರೂಢಿಸಿಕೊಳ್ಳುವುದರಿಂದ ಶಾಂತಿ ಮತ್ತು ಸುಖಗಳು ದೊರೆಯುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Craving for house, garden and wealth springs from the desire for the sense enjoyment,
Compassion towards all beings and other virtues spring from renunciation,
Harmonious coordination of both devoid of desire-born excitement
Brings peace and happiness – Marula Muniya
(Translation from "Thus Sang Marula Muniya" by Sri. Narasimha Bhat)

Wednesday, June 20, 2012

ಅಂತರಾತ್ಮದಿನಿಂದ್ರಿಯದ ಲೋಕ ಮಿಗಿಲೆಂಬ (229)

ಅಂತರಾತ್ಮದಿನಿಂದ್ರಿಯದ ಲೋಕ ಮಿಗಿಲೆಂಬ |
ಸಂತೃಪ್ತಿಗಿಂತ ಸಂಪತ್ತು ಪಿರಿದೆಂಬ ||
ಸ್ವಾಂತ ಶೋಧನೆಗಿಂತ ಭೋಗಾಪ್ತಿ ವರವೆಂಬ |
ಭ್ರಾಂತಿಯಳಿದೊಡೆ ಶಾಂತಿ - ಮರುಳ ಮುನಿಯ || (೨೨೯)

(ಅಂತರಾತ್ಮದಿನ್+ಇಂದ್ರಿಯದ)(ಭೋಗ+ಆಪ್ತಿ)(ಭ್ರಾಂತಿ+ಅಳಿದೊಡೆ)

ಅಂತರಾತ್ಮನಿಗಿಂತ ಇಂದ್ರಿಯದಿಂದ ಕೂಡಿರುವ ಜೀವನವೇ ದೊಡ್ಡದೆನ್ನುವ, ಆನಂದ, ತೃಪ್ತಿಗಳಿಗಿಂತ ಐಶ್ವರ್ಯವೇ ಹಿರಿದೆನ್ನುವ, ತನ್ನ ಸ್ವಂತ ಮನಸ್ಸನ್ನು ಶುದ್ಧಿಗೊಳಿಸುವುದಕ್ಕಿಂತ ಪ್ರಪಂಚದಲ್ಲಿರುವುದನ್ನು ಸುಖಿಸುವುದೇ ಶ್ರೇಷ್ಠವೆಂಬ, ತಪ್ಪುಗ್ರಹಿಕೆಗಳು ನಾಶವಾದರೆ ಶಾಂತಿ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world of senses is superior to the self within
Wealth is much better than self contentment
Sense enjoyment is preferable to self-introspection
Peace reigns when this delusion departs - Marula Muniya
(Translation from "Thus Sang Marula Muniya" by Sri. Narasimha Bhat)

Tuesday, June 19, 2012

ಕೆರೆಗೆ ಸಾಧನ ಕಡಲು ಸಿದ್ಧಿ ನೀರಿನೊಳೈಕ್ಯ (228)

ಕೆರೆಗೆ ಸಾಧನ ಕಡಲು ಸಿದ್ಧಿ ನೀರಿನೊಳೈಕ್ಯ |
ನರನ ಸಾಧನೆ ಲೋಕ ಸಿದ್ಧಿಯಾತ್ಮೈಕ್ಯ ||
ಪರದಿಂದ ಬಂದವಂ ಪರಕೆ ಮರಳುವುದೆ ಗುರಿ |
ಸ್ಮರಿಸುವುದು ನೀನಿದನು - ಮರುಳ ಮುನಿಯ || (೨೨೮)

(ನೀರಿನೊಳ್+ಐಕ್ಯ)(ಸಿದ್ಧಿಯಾತ್ಮ+ಐಕ್ಯ)(ನೀನ್+ಇದನು)

ಕೆರೆಯ ಸಾಧನೆ, ಅದು ಸಮುದ್ರದ ನೀರಿನಲ್ಲಿ ಸೇರುವ ಗುರಿ. ಮನುಷ್ಯನ ಸಾಧನೆ ಈ ಪ್ರಪಂಚದ ಆತ್ಮಗಳಲ್ಲಿ ಒಂದಾಗಿಹೋಗುವ ಗುರಿ. ಪರಲೋಕದಿಂದ ಬಂದವನಾದ ಅವನು ಪರಲೋಕಕ್ಕೆ ವಾಪಸು ಹೋಗುವುದೇ ಅವನ ಗುರಿ. ನೀನು ಅದನ್ನು ನೆನಪಿಸಿಕೊಳ್ಳುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Lake’s Endeavour is to reach the sea and merging in the sea is its fulfillment
Man’s Endeavour is to live in the world and merging in the Atmans in his fulfillment
He has come from the Supreme and going back to It is his Goal
Remember this always – Marula Muniya
(Translation from "Thus Sang Marula Muniya" by Sri. Narasimha Bhat)

Monday, June 18, 2012

ಅಲೆಯಿರದ ಕಡಲುಂಟೆ ಅಲೆಯದೇಂ ಚಲಚಲನ (227)

ಅಲೆಯಿರದ ಕಡಲುಂಟೆ ಅಲೆಯದೇಂ ಚಲಚಲನ |
ಚಲನೆಯೇಂ ಪ್ರಕೃತಿಕೃತಸಲಿಲಸ್ವಭಾವ ||
ಅಲೆದಲೆದು ಕಡೆಗೆ ತಾಂ ಜಲಧಿಯಲಿ ವಿಲಯಿಪುದು |
ಅಲೆಗೆ ಜಲಧಿಯೆ ಮುಕ್ತಿ - ಮರುಳ ಮುನಿಯ || (೨೨೭)

(ಕಡಲ್+ಉಂಟೆ)(ಅಲೆ+ಅದೇಂ)(ಅಲೆದು+ಅಲೆದು)

ಒಂದು ಸಮುದ್ರವಿದ್ದಲ್ಲಿ ಅದರ ಅಲೆಗಳೂ ಇರಬೇಕು. ಇದು ಪ್ರಕೃತಿನಿಯಮ. ಅಲೆಯೆನ್ನುವುದು ನೀರಿನ ಸಂಚಾರಗತಿಯಷ್ಟೆ. ಈ ಚಲನೆಯೆನ್ನುವುದು ನೀರಿನ (ಸಲಿಲ) ಪ್ರಕೃತಿಗುಣ. ಅಲೆದಲೆದು ಕೊನೆಗೆ ಸಮುದ್ರದಲ್ಲಿ ಸೇರಿ ಒಂದಾಗಿ ಹೋಗುವುದೇ ಆ ಅಲೆಗೆ ಮೋಕ್ಷ.
 (ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can there be a sea without waves? What is a wave but moving water?
Movement is the very nature of water
Moving on and on, at last the wave loses itself in the sea
The sea itself is salvation to the wave - Marula Muniya
(Translation from "Thus Sang Marula Muniya" by Sri. Narasimha Bhat)

Friday, June 15, 2012

ನರನುಮಂತಲೆಯವೋಲ್ ಪರಿಪರಿದು ಬಸವಳಿದು (226)

ನರನುಮಂತಲೆಯವೋಲ್ ಪರಿಪರಿದು ಬಸವಳಿದು |
ಬೆರೆತು ಜನಜೀವನದಿ ತನ್ನತನವಳಿಯೆ ||
ಚರ ಜಗನ್ಮೂಲದ ಸ್ಥಿರತತ್ತ್ವವನು ಬಯಸಿ |
ಕರಗುವುದೆ ಮುಕ್ತಿಪದ - ಮರುಳ ಮುನಿಯ || (೨೨೬)

(ನರನುಮಂತು+ಎಲೆಯವೋಲ್)(ತನ್ನತನವ+ಅಳಿಯೆ)(ಜಗತ್+ಮೂಲದ)

ಮನುಷ್ಯನೂ ಸಹ ನೀರಿನ ಅಲೆಗಳಂತೆ ಹರಿದು, ಸುಸ್ತಾಗಿ ಜನಜೀವನದಲ್ಲಿ ಒಂದಾಗಿ ಸೇರಿಕೊಂಡು ತಾನೇ ಬೇರೆ ಎನ್ನುವ ಅಭಿಪ್ರಾಯವನ್ನು ಕಳೆದುಕೊಂಡು, ಚಲಿಸುತ್ತಿರುವ ಜಗತ್ತಿನ ಆದಿ ಮತ್ತು ಹುಟ್ಟಿನ ಸ್ಥಿರ ಸಿದ್ಧಾಂತವನ್ನು ಅಪೇಕ್ಷಿಸಿ ಅದರಲ್ಲಿ ಕರಗಿಹೋಗುವುದೇ ಮೋಕ್ಷಕ್ಕೆ ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A water wave flows on and on and finally gets exhausted
Likewise a man’s losing his separate identity living with fellow beings
And melting himself yearning for the Eternal Truth,
The every root of the all this changing world is liberation – Marula Muniya
(Translation from "Thus Sang Marula Muniya" by Sri. Narasimha Bhat)


Thursday, June 14, 2012

ಕರ್ಮವೋ ದೈವಸಂಪ್ರೀತಿಯೋ ಸುಕೃತವೋ (225)

ಕರ್ಮವೋ ದೈವಸಂಪ್ರೀತಿಯೋ ಸುಕೃತವೋ |
ಧರ್ಮಮಪ್ಪುದು ಜೀವ ಬಂಧ ಶೈಥಿಲ್ಯಂ ||
ನಿರ್ಮಮತೆಯಿಂದಲದು ಬಂಧಮೋಚಕಮಹುದು |
ನಿರ್ಮಮತೆ ಮುಕ್ತಿಯಲೆ - ಮರುಳ ಮುನಿಯ || (೨೨೫)

(ಧರ್ಮಂ+ಅಪ್ಪುದು)(ನಿರ್ಮಮತೆ+ಇಂದಲ್+ಅದು)(ಬಂಧಮೋಚಕಂ+ಅಹುದು)(ಮುಕ್ತಿ+ಅಲೆ)

ಕರ್ಮವೋ, ದೈವದ ಅತಿಯಾದ ಪ್ರೀತಿಯೋ, ಪುಣ್ಯಫಲ ಅಥವಾ ಅದೃಷ್ಟವೋ, ಸಂಸಾರಬಂಧನದ ಸಡಿಲವಾಗುವಿಕೆಯಿಂದ ಉದಯವಾಗುತ್ತದೆ. ಅಹಂಕಾರ ಮತ್ತು ಸ್ವಾರ್ಥಗಳ ಇಲ್ಲದಿರುವಿಕೆಯಿಂದ ಆ ಬಂಧನವು ಕಟ್ಟುಗಳಿಂದ ವಿಮೋಚನೆ ಹೊಂದುತ್ತದೆ. ಈ ರೀತಿಯ ನಿರಹಂಕಾರ ಮತ್ತು ನಿಸ್ವಾರ್ಥಗಳೇ ಮೋಕ್ಷ ಕಣಯ್ಯ.

(Translation from "Thus Sang Marula Muniya" by Sri. Narasimha Bhat)
Religious rituals, God’s grace, or virtuous deeds
Anything that loosens the bonds binding the soul is dharma,
Backed by detachment, it liberates the soul
Detachment itself is liberation – Marula Muniya

Wednesday, June 13, 2012

ಹೃದಯವೊಂದಕ್ಷಿ ಜೀವಕೆ ಧಿಷಣೆಯೊಂದಕ್ಷಿ (224)

ಹೃದಯವೊಂದಕ್ಷಿ ಜೀವಕೆ ಧಿಷಣೆಯೊಂದಕ್ಷಿ |
ಉದಿಪುದೆರಡೊಂದೆ ಮೂರನೆ ಸಂವಿದಕ್ಷಿ ||
ಅದರಿಂದತೀಂದ್ರಿಯಾಖಂಡ ಸತ್ಯಾನುಭವ- |
ವದೆ ಶಾಶ್ವತಾನಂದ - ಮರುಳ ಮುನಿಯ || (೨೨೪)

(ಹೃದಯ+ಒಂದು+ಅಕ್ಷಿ)(ಧಿಷಣೆ+ಒಂದು+ಅಕ್ಷಿ)(ಉದಿಪುದು+ಎರಡು+ಒಂದೆ)(ಸಂವಿತ್+ಅಕ್ಷಿ)(ಅದರಿಂದ+ಅತೀಂದ್ರಿಯ+ಅಖಂಡ)(ಸತ್ಯಾನುಭವ+ಅದೆ)(ಶಾಶ್ವತ+ಆನಂದ)

ಪ್ರಪಂಚದಲ್ಲಿರುವ ಜೀವಕ್ಕೆ ಅದರ ಹೃದಯ ಒಂದು ಕಣ್ಣಾದರೆ (ಅಕ್ಷಿ), ಬುದ್ಧಿಶಕ್ತಿ(ಧಿಷಣೆ)ಯು ಇನ್ನೊಂದು ಕಾಣ್ಣಾಗುತ್ತದೆ. ಇವೆರಡೂ ಸರಿಯಾಗಿ ಮೇಳವಿಸಲಾಗಿ ಮೂರನೆಯ ಜ್ಞಾನನೇತ್ರ(ಸಂವಿತ್+ಅಕ್ಷಿ)ವು ಹುಟ್ಟುತ್ತದೆ. ಈ ಜ್ಞಾನನೇತ್ರದಿಂದ ಇಂದ್ರಿಯಕ್ಕೆ ನಿಲುಕದಂತಹ ಪೂರ್ಣವಾಗಿರುವ ಸತ್ಯದ ಅನುಭವವುಂಟಾಗುತ್ತದೆ. ಇದರಿಂದ ಶಾಶ್ವತವಾದ ಸಂತೋಷವು ದೊರಕುತ್ತದೆ.

(Translation from "Thus Sang Marula Muniya" by Sri. Narasimha Bhat)
Heart of emotions and head of intellect are the two eyes of the soul
The third eye of supersensory wisdom opens when the two eyes become one
From that flows unbroken experience of the supersensory Truth
That truth itself is eternal bliss - Marula Muniya

Monday, June 11, 2012

ಜೀವದೊಡಗೂಡಿ ಬಂದಿರ‍್ಪ ವಾಸನೆಗಳಿಂ (223)

ಜೀವದೊಡಗೂಡಿ ಬಂದಿರ‍್ಪ ವಾಸನೆಗಳಿಂ - |
ದಾವಿರ್ಭವಿಪ್ಪುದೀ ಸಂಸಾರ ವೃಕ್ಷ ||
ಸಾವುದಾತರು ವಾಸನೆಯ ಬೇರ ಸುಟ್ಟಂದು |
ಭಾವನಾಶವೆ ಮೋಕ್ಷ - ಮರುಳ ಮುನಿಯ || (೨೨೩)

(ಜೀವದ+ಒಡಗೂಡಿ)(ಬಂದು+ಇರ‍್ಪ)(ವಾಸನೆಗಳಿಂದ+ಆವಿರ್ಭವಿಪ್ಪುದು+ಈ)(ಸಾವುದು+ಆ+ತರು)

ಸಂಸಾರವೆಂಬ ವೃಕ್ಷವು ಜೀವಿಯ ಜೊತೆಯಲ್ಲಿ ಸೇರಿಕೊಂಡು ಬಂದಿರುವ ಪೂರ್ವಜನ್ಮದ ವಾಸನೆಯೆಂಬ ಬೇರಿನಿಂದ ಹುಟ್ಟಿ ಬಂದಿದೆ (ಅವಿರ್ಭವಿಪ್ಪುದು). ಆ ಪೂರ್ವಜನ್ಮಗಳ ವಾಸನೆಯೆಂಬ ಬೇರನ್ನು ಸಂಪೂರ್ಣವಾಗಿ ಸುಟ್ಟುಹಾಕಿದ ದಿನ ಈ ಸಂಸಾರವೆಂಬ ವೃಕ್ಷವು (ತರು) ಸಾಯುತ್ತದೆ (ಸಾವುದು). ಈ ಭಾವನೆಗಳ ನಶಿಸುವಿಕೆಯೇ ಮೋಕ್ಷ.

(Translation from "Thus Sang Marula Muniya" by Sri. Narasimha Bhat)
The tree of family takes birth and grows
Due to the past tendencies that have come with the soul
The tree shalll die when the root of the tendencies are burnt
The annihilation of emotional attachment is salvation - Marula Muniya (223)

Friday, June 8, 2012

ವಿಜ್ಞಾನವೊಂದಿಹುದು ಪರತತ್ತ್ವ ದರ್ಶನಕೆ (222)

ವಿಜ್ಞಾನವೊಂದಿಹುದು ಪರತತ್ತ್ವ ದರ್ಶನಕೆ |
ಚಿದ್ಗ್ರಂಥಿತಯಂತ್ರವದಕಿಹುದು ಶುಚಿಸದನು ||
ದೃಗ್ದೃಶ್ಯ ದರ್ಶನತ್ರಯವೈಕ್ಯವಾದಂದು |
ಹೃದ್ಗುಹೆಯೊಳಾನಂದ - ಮರುಳ ಮುನಿಯ || (೨೨೨)

(ವಿಜ್ಞಾನ+ಒಂದು+ಇಹುದು)(ಚಿತ್+ದ್ಗ್ರಂಥಿತಯಂತ್ರ+ಅದಕೆ+ಇಹುದು)(ಶುಚಿಸೆ+ಅದನು)(ದೃಕ್+ದೃಶ್ಯ)(ದರ್ಶನತ್ರಯ+ಐಕ್ಯ+ಆದಂದು)(ಹೃತ್+ಗುಹೆಯೊಳ್+ಆನಂದ)

ಪರಮಾತ್ಮನ ನಿಜಸ್ಥಿತಿಯನ್ನು ಕಾಣಲಿಕ್ಕೆ ವಿಜ್ಞಾನವೂ ಒಂದು ದಾರಿ. ಅಂತಃಕರಣ(ಚಿತ್) ಎನ್ನುವ ಹುರಿಗೊಳಿಸಿದ(ಗ್ರಥಿತ) ಯಂತ್ರ ಅದಕ್ಕೆ ಇದೆ. ಅದನ್ನು ಚೊಕ್ಕಟಗೊಳಿಸು. ನೋಡುವವನು(ದೃಕ್), ನೋಡಲ್ಪಡುವುದು (ದೃಶ್ಯ) ಮತ್ತು ಅರಿವಿನ ನೋಟ(ದರ್ಶನ) ಇವು ಮೂರೂ ಸೇರಿ ಒಂದೇ ಆದಂದು, ಮನುಷ್ಯನ ಹೃದಯದ ಗುಹೆಯೊಳಗೆ ಆನಂದವನ್ನು ಕಾಣಬಹುದು.

(Translation from "Thus Sang Marula Muniya" by Sri. Narasimha Bhat)
Scientific method for realizing the Supreme Truth there is,
Clean the apparatus arranged by the heart for the purpose
Bliss fills the cave of heart when the seer, the seen 
And the seeing process merge into one – Marula Muniya (222)

Thursday, June 7, 2012

ತನುವೆಚ್ಚರಿರಲು ಮನನಿದ್ರಿಸೆ ಸಮಾಧಿಯದು (221)

ತನುವೆಚ್ಚರಿರಲು ಮನನಿದ್ರಿಸೆ ಸಮಾಧಿಯದು |
ಮನವೆಚ್ಚರಿರಲು ತನು ನಿದ್ರಿಸಿರೆ ಯೋಗ ||
ತನುಮನಸುಗಳು ಲೋಕಭಾರವೆನದಿರೆ ಶಾಂತಿ |
ಅನಿತರಜ್ಞತೆ ಮುಕ್ತಿ - ಮರುಳ ಮುನಿಯ || (೨೨೧)

(ತನು+ಎಚ್ಚರ+ಇರಲು)(ಸಮಾಧಿ+ಅದು)(ಮನ+ಎಚ್ಚರ+ಇರಲು)(ಲೋಕಭಾರ+ಎನದೆ+ಇರೆ)(ಅನಿತರ+ಅಜ್ಞತೆ)

ದೇಹ ಎಚ್ಚರವಾಗಿರುವಾಗ ಮನಸ್ಸು ನಿದ್ದೆ ಮಾಡುತ್ತಿದ್ದರೆ ಅದು ಸಮಾಧಿ ಸ್ಥಿತಿ ಎಂದೆನ್ನಿಸಿಕೊಳ್ಳುತ್ತದೆ. ಆದರೆ ಮನಸ್ಸು ಜಾಗ್ರತದಿಂದಿರುವಾಗ ದೇಹವು ನಿದ್ರಿಸಿದ್ದರೆ ಅದು ಯೋಗಸ್ಥಿತಿಯಾಗುತ್ತದೆ. ದೇಹ ಮತ್ತು ಮನಸ್ಸುಗಳು ಈ ಪ್ರಪಂಚವು ಭಾರ ಎನ್ನದೆ ಜೀವನವನ್ನು ನಡೆಸಿದರೆ ಶಾಂತಿ ದೊರೆಯುತ್ತದೆ. ಇನ್ನೊಂದಿದೆ ಎಂದು ತಿಳಿಯದಿರುವ (ಅನಿತರ ಜ್ಞಾನ) ಸ್ಥಿತಿಯೇ ಮೋಕ್ಷ.

(Translation from "Thus Sang Marula Muniya" by Sri. Narasimha Bhat)
If body is awake when mind is asleep it is Samadhi
If the mind remains awake when body is asleep it is Yoga
Peace would reign when body and mind do not feel the weight of the world
Non-awareness of separateness itself is salvation – Marula Muniya

Wednesday, June 6, 2012

ಸುಂದರ ಕುರೂಪಗಳ ಮೈತ್ರಿಮಾತ್ಸರ್ಯಗಳ (220)

ಸುಂದರ ಕುರೂಪಗಳ ಮೈತ್ರಿಮಾತ್ಸರ್ಯಗಳ |
ಬಂಧು ಪರಕೀಯಗಳ ಲಾಭ ಲೋಭಗಳ ||
ದಂದುಗಗಳುಬ್ಬೆಗದಿ ಬೆಮರಿಸದಿರಾತ್ಮವಂ |
ದ್ವಂದ್ವಹಾನಿಯೆ ಮುಕ್ತಿ - ಮರುಳ ಮುನಿಯ || (೨೨೦)

(ದಂದುಗಗಳ+ಉಬ್ಬೆಗದಿ)(ಬೆಮರಿಸದೆ+ಇರೆ+ಆತ್ಮವಂ)

ಸುಂದರ ಮತ್ತು ಕುರೂಪಗಳ, ಸ್ನೇಹ (ಮೈತ್ರಿ) ಮತ್ತು ಅಸೂಯೆ (ಮಾತ್ಸರ್ಯ)ಗಳ, ಬಂಧು ಮತ್ತು ಪರಕೀಯರುಗಳ, ಲಾಭ ಮತ್ತು ಜಿಪುಣತನಗಳ, ತೊಂದರೆಗಳು (ದಂದುಗ) ಚಿಂತೆಯನ್ನುಂಟುಮಾಡಿ (ಉಬ್ಬೆಗಿಸಿ) ಆತ್ಮವನ್ನು ಹೆದರಿಸದೆ, ಸುರೂಪ, ಕುರೂಪ, ಸ್ನೇಹ-ಅಸೂಯೆ ಮುಂತಾದ ಈ ವಿರುದ್ಧ ಜೋಡಿಗಳನ್ನು ಇಲ್ಲವಾಗಿಸಿದರೆ, ಅದೇ ಮೋಕ್ಷ.

Translation from "Thus Sang Marula Muniya" by Sri. Narasimha Bhat

Do not make the Atman sweat in the heat of difficulties
Caused by beauty and ugliness, firendship and jealousy
The akin and the alien, profit and greed
Conquering the pairs of opposites itself is salvation - Marula Muniya

Tuesday, June 5, 2012

ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? (219)

ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? |
ಲೀಲೆ ಜಗವೆನ್ನಲದು ಪರಿ ಪರಿ ಪರೀಕ್ಷೆ ||
ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ |
ಬಾಳುವುದೆ ಗೆಲವೆಲವೊ - ಮರುಳ ಮುನಿಯ || (೨೧೯)

(ಬೇರೆ+ಆಯ್ತು+ಎಂದು)(ಗೋಳಾಡುವುದು+ಅದು+ಏಕೆ)(ಜಗ+ಎನ್ನಲ್+ಅದು)(ತಾಳ್+ಎಲ್ಲವನು)(ಗೆಲವು+ಎಲವೊ)

ಕಾಲವು ಬದಲಾಯಿಸುತ್ತಿದೆಯೆಂದು ದುಃಖಿಸುವುದೇಕೆ? ಈ ಜಗತ್ತು ಅವನ ಆಟವೆಂದರೆ ಅದರಲ್ಲಿ ವಿಧ ವಿಧವಾದ ಪರೀಕ್ಷೆಗಳಿರುತ್ತವೆ. ಇವುಗಳೆಲ್ಲವನ್ನೂ ಸಂಯಮದಿಂದ ಸಹಿಸಿಕೊಂಡು ಸಾಮರ್ಥ್ಯದಿಂದ ಜೀವನವನ್ನು ನಡೆಸುವುದೇ ಗೆಲವು.

Translation from "Thus Sang Marula Muniya" by Sri. Narasimha Bhat


Why do you wail grumbling that times have worsened?
The sportive world is a series of tests
Endure everything with all restraint under your command
Living like a hero itself is a victory - Marula Muniya

Monday, June 4, 2012

ಧರ್ಮಮುಮಧರ್ಮದವೊಲಿಹುದು ನರಸಾಜದಲಿ (218)

ಧರ್ಮಮುಮಧರ್ಮದವೊಲಿಹುದು ನರಸಾಜದಲಿ |
ನಿರ್ಮಮದೆ ಧರ್ಮಂ ಮಮತ್ವದಿನಧರ್ಮಂ ||
ಮರ್ಮಿ ವಿಶ್ವಪ್ರಕೃತಿ ಕೆಣಕುವಳಧರ್ಮವನು |
ಧರ್ಮ ನಿನ್ನಯ ಪಾಡು - ಮರುಳ ಮುನಿಯ || (೨೧೮)

(ಧರ್ಮಮುಂ+ಅಧರ್ಮದವೊಲ್+ಇಹುದು)(ಮಮತ್ವದಿನ್+ಅಧರ್ಮಂ)(ಕೆಣಕುವಳ್+ಅಧರ್ಮವನು)

ಮನುಷ್ಯನ ಸಹಜ ಪ್ರವೃತ್ತಿಯಲ್ಲಿ ಧರ್ಮವೂ ಸಹ ಅಧರ್ಮದಂತೆಯೇ ಇರುತ್ತದೆ. ನಿಃಸ್ವಾರ್ಥತೆ ಮತ್ತು ನಿರ್ಮೋಹದಿಂದ ಧರ್ಮ, ಸ್ವಾರ್ಥ ಮತ್ತು ಮೋಹದಿಂದ ಅಧರ್ಮ. ಗೋಪ್ಯವಾಗಿ ವರ್ತಿಸುವ(ಮರ್ಮಿ) ಪ್ರಪಂಚದ ಪ್ರಕೃತಿದೇವಿಯು, ಅಧರ್ಮವನ್ನು ಕೆರಳಿಸುತ್ತಾಳೆ. ಧರ್ಮವನ್ನು ನಿನಗೆ ಬಿಟ್ಟದ್ದು.

Friday, June 1, 2012

ಮುನಿ ವಸಿಷ್ಠನ ಪತ್ನಿಯುಡುಪಥದೊಳಿರುವಂತೆ (217)

ಮುನಿ ವಸಿಷ್ಠನ ಪತ್ನಿಯುಡುಪಥದೊಳಿರುವಂತೆ |
ಮನದ ಗವಿಯಾಳದೊಳಗಾತುಮದ ಸೊಡರು ||
ಮಿನುಗುತಿರ‍್ಪುದು ನೋಡು ದರ್ಶನೈಕಾಗ್ರ್ಯದಿಂ |
ನೆನೆದದನು ಬಲವ ಪಡೆ - ಮರುಳ ಮುನಿಯ || (೨೧೭)

(ಪತ್ನಿ+ಉಡುಪಥದೊಳ್+ಇರುವಂತೆ)(ಗವಿ+ಆಳದ+ಒಳಗೆ+ಆತುಮದ)(ಮಿನುಗುತ+ಇರ‍್ಪುದು)(ದರ್ಶನ+ಏಕಾಗ್ರ್ಯದಿಂ)(ನೆನೆದು+ಅದನು)

ವಸಿಷ್ಠಋಷಿಯ ಪತ್ನಿಯಾದ ಅರುಂಧತಿಯು ನಕ್ಷತ್ರವಾಗಿ, ಆಕಾಶ(ಉಡುಪಥ)ದಲ್ಲಿರುವಂತೆ, ಮನಸ್ಸಿನ ಗುಹೆ(ಗವಿ)ಯ ಒಳಗಡೆ ಆತ್ಮದ ದೀಪ(ಸೊಡರು)ವು ಉರಿಯುತ್ತಿರುತ್ತದೆ. ಏಕಾಗ್ರತೆ(ಏಕಾಗ್ರ್ಯ)ಯಿಂದ ಅದು ಹೊಳೆಯುತ್ತಿರುವುದನ್ನು ನೋಡಬಹುದು. ಈ ವಿಚಾರವನ್ನು ನೆನಪಿಸಿಕೊಳ್ಳುತ್ತಾ ನೀನು ಶಕ್ತಿಯನ್ನು ಪಡೆ.