Wednesday, April 30, 2014

ನೀತಿನಿಷ್ಠಂಗೆ ಜಯವಂತೆ, ರಾಮನೆ ಸಾಕ್ಷಿ (611)

ನೀತಿನಿಷ್ಠಂಗೆ ಜಯವಂತೆ, ರಾಮನೆ ಸಾಕ್ಷಿ |
ಸೀತೆಯಂ ಪಡೆದನಲ ಕಡೆಗೆ ಲಂಕೆಯಲಿ ||
ನೂತನ ಯುವೋತ್ಸಾಹವಂದು ಕುಂದಿತ್ತೇನೊ |
ಆತುರಂ ದೋಷವಲ - ಮರುಳ ಮುನಿಯ || (೬೧೧)

(ಯುವ+ಉತ್ಸಾಹ+ಅಂದು)(ದೋಷ+ಅಲ)

ನೀತಿಯನ್ನು ನಿಷ್ಠವಂತನಾಗಿ ಪಾಲಿಸುವವನಿಗೆ ಎಂದೆಂದಿಗೂ ಜಯವೆಂದು ಜಗತ್ತು ಹೇಳುತ್ತಾ ಬಂದಿದೆ. ಇದಕ್ಕೆ ಪುರಾವೆಯಾಗಿ ಶ್ರೀರಾಮನ ಚರಿತೆಯನ್ನು ಹೇಳಲಾಗುತ್ತದೆ. ಶ್ರೀರಾಮಚಂದ್ರನು ನೀತಿನಿಷ್ಠೆಯಿಂದ ಇದ್ದಿದ್ದರಿಂದ ಕಟ್ಟಕಡೆಗೆ ಶ್ರೀಲಂಕೆಯಲ್ಲಿ ಸೀತೆಯನ್ನು ಪಡೆಯಲು ಸಾಧ್ಯವಾಯಿತು ಅಲ್ಲವೆ? ಈಗಿನ ಕಾಲದಲ್ಲಿ ನಾವು ಕಾಣುತ್ತಿರುವ ಯುವಜನರ ಉತ್ಸಾಹ ಆವತ್ತು ಕಡಿಮೆಯಾಗಿತ್ತೋ ಏನೋ? ಆತುರದಲ್ಲಿ ಕೆಲಸ ಮಾಡುವುದು ದೋಷಕಾರಿ ಆಗುತ್ತದೆ, ಅಲ್ಲವೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“One who is just will become victorious” Shri Rama himself proved
He could at last get Sita back in Lanka
But, perhaps his youthful enthusiasm must have ebbed by that time
Is not over eagerness a fault at times? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, April 29, 2014

ಸದಸದ್ವಿವೇಕವನು ಭಕ್ತರೊಳು ಮಾಡಿಪಂ (610)

ಸದಸದ್ವಿವೇಕವನು ಭಕ್ತರೊಳು ಮಾಡಿಪಂ |
ಚಿದನಂತೆ ಭಾಸುರಂ ಸರ್ವಜನಸಂಸ್ಥಂ ||
ಹೃದಯಾಂತರಂಗದಾವಾಸಿ ಲೀಲಾಲೋಲ |
ಪದವನೀಂ ನಂಬೆಲೆವೊ - ಮರುಳ ಮುನಿಯ || (೬೧೦)

(ಹೃದಯ+ಅಂತರಂಗದ+ಆವಾಸಿ)(ನಂಬು+ಎಲೆವೊ)

ಒಳ್ಳೆಯ ವಿವೇಚನಾಶಕ್ತಿ ಭಕ್ತರಲ್ಲಿರುವಂತೆ ಎಲ್ಲಾ ಜನರಲ್ಲೂ ನೆಲೆಸಿರುವ (ಸಂಸ್ಥಂ) ಸೂರ್ಯ(ಭಾಸುರಂ)ನು ಉಂಟುಮಾಡುತ್ತಾನೆ. ಸರ್ವರ ಹೃದಯಗಳ ಅಂತರಂಗದಲ್ಲಿ ವಾಸಿಸುತ್ತಿರುವ ಮತ್ತು ಲೀಲಾವಿನೋದನಾದ ಭಗವಂತನಲ್ಲಿ ನಂಬಿಕೆಯನ್ನಿಡು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He blesses his devotees with the wisdom to discern the real from the unreal
He is the infinite radiance of knowledge dwelling in every being
He resides in the hearts of all and always happily sports.
Have full faith in His sacred feet – Marula Muniya (610)
(Translation from "Thus Sang Marula Muniya" by Sri. Narasimha Bhat)

Monday, April 28, 2014

ನಿತ್ಯನಿರ್ಮಲ ಸತ್ತ್ವಝರಿಯೊಂದು ನಿನ್ನಯಾ (609)

ನಿತ್ಯನಿರ್ಮಲ ಸತ್ತ್ವಝರಿಯೊಂದು ನಿನ್ನಯಾ |
ಪ್ರಾಕ್ತನಮಲೀಮಸದ ಜೀವನಾಪಗೆಯ ||
ಪ್ರತ್ಯಹದಿ ಸೇರುತ್ತಲದನು ಪೊಸತಾಗಿಪುದು |
ಪ್ರತ್ಯಯಿಸು ನೀನದನು - ಮರುಳ ಮುನಿಯ || (೬೦೯)

(ನಿನ್ನಯ+ಆ)(ಜೀವನ+ಆಪಗೆಯ)(ಸೇರುತ್ತಲ್+ಅದನು)(ಪೊಸತು+ಆಗಿಪುದು)(ನೀನ್+ಅದನು)

ಸದಾಕಾಲವೂ ಸ್ವಚ್ಛವಾಗಿರುವ ಸಾತ್ತ್ವಿಕಶಕ್ತಿಯ ಹೊಳೆಯೊಂದು, ನಿನ್ನ ಆ ಪ್ರಾಚೀನ ಜನ್ಮದ (ಪ್ರಾಕ್ತನದ) ಪಾಪ (ಮಲೀಮಸ)ದ ಜೀವನವೆಂಬ ನದಿಯನ್ನು (ಆಪಗೆಯ) ಪ್ರತಿನಿತ್ಯವೂ (ಪ್ರತ್ಯಹದಿ) ಕೂಡಿಕೊಳ್ಳುತ್ತಾ ಅದನ್ನು ಹೊಸದಾಗಿಸುವಂತೆ ಮಾಡುತ್ತದೆ. ನೀನು ಅದರಲ್ಲಿ ವಿಶ್ವಾಸವಿಡು (ಪ್ರತ್ಯಯಿಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A river of ever-pure energy everyday mingles with the river of your soul
That has been soiled by its own past karma,
Renew it again and again and rejuvenates it
Have faith in the rejuvenating river – Marula Muniya (609)
(Translation from "Thus Sang Marula Muniya" by Sri. Narasimha Bhat)

Friday, April 25, 2014

ದ್ವೈತಲೀಲೆಗಳ ಪಡುತದ್ವೈತದಲಿ ನೆಲಸಿ (608)

ದ್ವೈತಲೀಲೆಗಳ ಪಡುತದ್ವೈತದಲಿ ನೆಲಸಿ |
ಭೌತ ಸಂಸ್ಕೃತಿಗಳಿನತೀತಪದಕೇರಿ ||
ಭೀತಿಯೆತ್ತಲುಮಿಲ್ಲದಂತಿರುವ ಶಾಂತಾತ್ಮ |
ಚಾತುರ್ಮಯವನು ಗಳಿಸೊ - ಮರುಳ ಮುನಿಯ || (೬೦೮)

(ಪಡುತ+ಅದ್ವೈತದಲಿ)(ಸಂಸ್ಕೃತಿಗಳಿನ್+ಅತೀತಪದಕೆ+ಏರಿ)(ಭೀತಿಯೆತ್ತಲುಂ+ಇಲ್ಲದಂತಿರುವ)(ಶಾಂತ+ಆತ್ಮ)

ದ್ವೈತದ ಆಟಗಳನ್ನು ಅನುಭವಿಸುತ್ತ ಆದರೆ ಅದ್ವೈತಭಾವದಲ್ಲಿ ಮನಸ್ಸಿಟ್ಟು ಪಂಚ ಭೂತಗಳಿಗೆ ಸಂಬಂಧಿಸಿದ ನಾಗರೀಕತೆಯ ಭೌತಿಕ ಸಾಧನೆಗಳಿಂದ ಅವುಗಳನ್ನು ಮೀರಿದ ಸ್ಥಾನಕ್ಕೇರಿ, ಎಲ್ಲೆಲ್ಲಿಯೂ ಭಯವೇ ಇಲ್ಲದಂತಿರುವ, ಶಾಂತಿಯಿಂದಿರುವ ಆತ್ಮಸ್ಥೈರ್ಯವನ್ನು ಗಳಿಸುವ ಚಾತುರ್ಯವನ್ನು ಗಳಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Staying established in advaitha through sporting in dwaitha
Rising to a state high above the level of materialism
Remaining established in perfect peace and fearlessness
Is the skill that you ought to acquire – Marula Muniya (608)
(Translation from "Thus Sang Marula Muniya" by Sri. Narasimha Bhat)

Thursday, April 24, 2014

ಸೃಷ್ಟಿರುಚಿಗಳ ಜಲಕ್ಷೀರಭೇದಕೆ ಹಂಸ (607)

ಸೃಷ್ಟಿರುಚಿಗಳ ಜಲಕ್ಷೀರಭೇದಕೆ ಹಂಸ |
ದಷ್ಟ ಹೃದಯವ್ರಣಕೆ ಜಾಂಗುಲಿಕ ವೈದ್ಯ ||
ದೃಷ್ಟ ರೂಪಗಳೊಳಗದೃಷ್ಟಸತ್ಯದ ಸಾಕ್ಷಿ |
ಶ್ರೇಷ್ಠ್ಯಜ್ಞನೋ ಯೋಗಿ - ಮರುಳ ಮುನಿಯ || (೬೦೭)

(ರೂಪಗಳ್+ಒಳಗೆ+ಅದೃಷ್ಟಸತ್ಯದ)(ಶ್ರೇಷ್ಠ+ಯಜ್ಞನೋ)

ಸೃಷ್ಟಿಯ ಸವಿಗಳಲ್ಲಿರುವ ಹಾಲು ಮತ್ತು ನೀರುಗಳ ವ್ಯತ್ಯಾಸವನ್ನು ತಿಳಿಯಲು ಹಂಸಪಕ್ಷಿಯ ನ್ಯಾಯ. ಹೃದಯದ ಹುಣ್ಣ(ವ್ರಣ)ನ್ನು ಕಚ್ಚಿ(ದಷ್ಟ)ರುವುದಕ್ಕೆ ವಿಷದ (ಜಂಗುಲಿಕ) ಚಿಕಿತ್ಸೆ. ಕಾಣುವ (ದೃಷ್ಟ) ಆಕಾರಗಳ ಒಳಗೆ ಕಾಣದಿರುವ ಸತ್ಯದ ಪುರಾವೆ (ಸಾಕ್ಷಿ). ಇವುಗಳನ್ನು ತಿಳಿದಂಥವನೇ ಶ್ರೇಷ್ಠನಾದ ಯೋಗಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The yogi is the swan separating the milk from the water in creation,
He is the physician curing the wound of the heart caused by poisonous serpent-bite
He can see the invisible truth present in all the visible forms
He is endowed with Supreme Vision – Marula Muniya (607)
(Translation from "Thus Sang Marula Muniya" by Sri. Narasimha Bhat)

Tuesday, April 22, 2014

ಏನ ಸಾಧಿಸಿದೊಡೇನೇನ ಭೇದಿಸಲೇನು? (606)

ಏನ ಸಾಧಿಸಿದೊಡೇನೇನ ಭೇದಿಸಲೇನು ? |
ಮಾನವಂ ತನ್ನ ತಾನರಿಯದಿರುವಂದು ||
ಕ್ಷೋಣಿಯೈಸಿರಿಯ ಬೆಲೆ ತನ್ನ ಬೆಲೆಯಿಂದಲ್ತೆ |
ತಾನಿಳಿಯಲಾವುದೇಂ? - ಮರುಳ ಮುನಿಯ || (೬೦೬)

(ಸಾಧಿಸಿದೊಡೆ+ಏನ್+ಏನ+ಭೇದಿಸಲ್+ಏನು)(ತಾನ್+ಅರಿಯದೆ+ಇರುವಂದು)(ಕ್ಷೋಣಿ+ಐಸಿರಿಯ)(ಬೆಲೆಯಿಂದ+ಅಲ್ತೆ)(ತಾನ್+ಇಳಿಯಲ್+ಆವುದೇಂ)

ಮಾನವನು ತನ್ನನ್ನು ತಾನು ತಿಳಿದುಕೊಳ್ಳದಿರುವಾಗ ಅವನು ಏನನ್ನು ಸಾಧಿಸಿದರೇನು ಅಥವಾ ಏನನ್ನು ಭೇದಿಸಿದರೇನು ಬಂತು? ಭೂಮಿ(ಕ್ಷೋಣಿ)ಯ ಸಿರಿ ಸಂಪತ್ತುಗಳ ಬೆಲೆ, ಮಾನವನಿಂದಲೇ ಬರುವುದು. ತನ್ನ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಮಾನವನ್ನು ಕೆಳಕ್ಕೆ ಇಳಿದು ಹೋದರೆ ಯಾವುದಕ್ಕೂ ಬೆಲೆಯೇ ಇಲ್ಲದಾಗುವುದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Whatever may be his achievements, whatever may be his inventions
Aren’t they all worthless until man realizes his own self?
Is not the value of worldly wealth based on his own value?
Does not everything become worthless when one’s own self degenerates? – Marula Muniya
(Translation from "Thus Sang Marula Muniya" by Sri. Narasimha Bhat)

Monday, April 21, 2014

ಪ್ರಗಥಿಪಥಕೆರಡಂಚು ನಿಗಮಾರ್ಥಕೃತವೊಂದು (605)

ಪ್ರಗಥಿಪಥಕೆರಡಂಚು ನಿಗಮಾರ್ಥಕೃತವೊಂದು |
ಜಗದಂಶ ವಿಜ್ಞಾನಕೃತವೊಂದು ನಡುವೆ ||
ಸುಗಮ ತೋರ‍್ದಂತೆ ನೀಂ ಚರಿಸಿರ‍್ಕೆಲಂಗಳಂ |
ಬಗೆದೊಂದೆಯಾತ್ರೆಯೆನೆ - ಮರುಳ ಮುನಿಯ || (೬೦೫)

(ಪ್ರಗಥಿಪಥಕೆ+ಎರಡು+ಅಂಚು)(ನಿಗಮ+ಅರ್ಥಕೃತ+ಒಂದು)(ಜಗತ್+ಅಂಶ)(ಚರಿಸು+ಇರ‍್ಕೆಲಂಗಳಂ)(ಬಗೆದು+ಒಂದೆ+ಯಾತ್ರೆ+ಯೆನೆ)

ಏಳಿಗೆಯ ದಾರಿಗೆ ಎರಡು ತುದಿಗಳಿವೆ. ವೇದಗಳ ಉಪಯೋಗದಿಂದ ಬಂದಿರುವುದು ಒಂದು ತುದಿ ಆದರೆ, ಪ್ರಪಂಚದ ಭಾಗಗಳಿಗೆ ಸೇರಿರುವ ವಿಜ್ಞಾನವು ಮಾಡಿದ ಕೆಲಸಗಳು ಮತ್ತೊಂದು ತುದಿ. ಇವುಗಳ ಮಧ್ಯೆ ನಿನಗೆ ಅನುಕೂಲವಾಗಿ ತೋರಿದಂತೆ ನೀನು ಎರಡೂ ಬದಿಗಳಲ್ಲೂ ಅದು ಒಂದೇ ಯಾತ್ರೆಯೆಂದು ತಿಳಿದು ಸಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two sides to the road of progress; one is the side of spiritual scriptures,
The other is the side of scientific study of the physical world,
Smoothly walk on both the sides considering
Them as part of one journey – Marula Muniya (605)
(Translation from "Thus Sang Marula Muniya" by Sri. Narasimha Bhat)

Wednesday, April 16, 2014

ವೇದಿತೆಯೆ ಜೀವಿತತೆ ಲೋಕಸಹವಸದಾ (604)

ವೇದಿತೆಯೆ ಜೀವಿತತೆ ಲೋಕಸಹವಸದಾ - |
ಮೋದಗಳೆ ಖೇದಗಳೆ ಜೀವನದ ಭಾಗ್ಯಂ ||
ಮಾದನವನಾಗಿಸುವ ವೇದನೆಯ ಬೆಳಸಿಕೊಳೊ |
ವೇದನೆಯೆ ಚಿತ್ಸತ್ತ್ವ - ಮರುಳ ಮುನಿಯ || (೬೦೪)

(ಲೋಕಸಹವಸದ+ಆಮೋದಗಳೆ)(ಮಾದನ+ಅವನ+ಆಗಿಸುವ)(ಚಿತ್ಸತ್ತ್ವ)

ಜ್ಞಾನಿಯಾಗಿ ಬದುಕುವುದು ನಿಜವಾದ ಜೀವನ. ಈ ಪ್ರಪಂಚದಲ್ಲಿ ಬದುಕಿ ಬಾಳುವಾಗ ಬರುವ ಸುಖ ದುಃಖಗಳೇ ಜೀವನದ ಸಂಪತ್ತು. ಅಮಲು (ಮಾದನ) ಬರದಂತಹ ಅತಿರೇಕವಿಲ್ಲದ ಜ್ಞಾನ(ವೇದನೆ)ವನ್ನು ಬೆಳೆಸಿಕೊ. ಜ್ಞಾನವೇ ಪರಮಾತ್ಮನ ಚಿತ್‍ಸತ್‍ಸ್ವರೂಪ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Deep understanding is the essence of human life,
Joys and sorrows are the real fortunes of life,
Enrich yourself with wisdom without becoming heady.
Knowledge is the real essence of life – Marula Muniya (604)
(Translation from "Thus Sang Marula Muniya" by Sri. Narasimha Bhat) 

Tuesday, April 15, 2014

ರಾಜಯೋಗದ ಮಾರ್ಗ ಹಿತಮಿತಿಗಳಭ್ಯಾಸ (603)

ರಾಜಯೋಗದ ಮಾರ್ಗ ಹಿತಮಿತಿಗಳಭ್ಯಾಸ |
ನೈಜಕನುವಾದ ಶೋಧನೆ ಪರಿಷ್ಕಾರ ||
ಯೋಜಿಸಿಹುದಲ್ಲಿ ಶುಚಿ ಭೋಗದೊಡನೆ ವಿರಾಗ |
ಸಾಜವರಿತಾ ಶಿಕ್ಷೆ - ಮರುಳ ಮುನಿಯ || (೬೦೩)

(ಹಿತಮಿತಿಗಳ+ಅಭ್ಯಾಸ)(ನೈಜಕೆ+ಅನು+ಆದ)(ಯೋಜಿಸಿಹುದು+ಅಲ್ಲಿ)(ಸಾಜ+ಅರಿತ+ಆ)

ಹಿತವಾಗಿರುವುದನ್ನು ಅತಿಯಾಗದಂತೆ ರೂಢಿ ಮಾಡಿಕೊಳ್ಳುವ ದಾರಿ ರಾಜಯೋಗ. ಸತ್ಯಾನ್ವೇಷಣೆಗೆ ಬೇಕಾದ ಆತ್ಮಶೋಧನೆ ಮತ್ತು ಜೀವನ ಪರಿಷ್ಕಾರ ಅದರಲ್ಲಿದೆ. ನೈರ್ಮಲ್ಯ ಮತ್ತು ಪಾವಿತ್ರ್ಯತೆಗಳಿಂದ ಸುಖದುಃಖಗಳನ್ನು ಅನುಭವಿಸುವುದರ ಜೊತೆ ವೈರಾಗ್ಯತೆಯನ್ನು ಹೊಂದಿಸಿದೆ. ಸಹಜವಾಗಿರುವುದನ್ನು ತಿಳಿದುಕೊಂಡು ಪಾಲಿಸುವ ಶಿಕ್ಷೆ ಅದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The path of Raja Yoga is a practice beneficial and moderate
It is an exploration and reformation agreeable to the realities
Dispassion and pure enjoyment are amicably arranged in it
It is training agreeable to your nature – Marula Muniya (603)
(Translation from "Thus Sang Marula Muniya" by Sri. Narasimha Bhat)

Tuesday, April 8, 2014

ಗಾಳಿಪಟವೋ ನಿನ್ನ ಬಾಳು ಪೂರ್ವಾಜಿತವೆ (602)

ಗಾಳಿಪಟವೋ ನಿನ್ನ ಬಾಳು ಪೂರ್ವಾಜಿತವೆ |
ನೂಲದನು ಮೇಲಕೇಳಿಪುದು ಬಾನೆಲರು ||
ಬೀಳುವಳುಕಾದಂದು ಶಿವನೊಲವ ಬೇಡಿ ನೀಂ |
ತೋಳ ಚಳಕವ ನಡಸು - ಮರುಳ ಮುನಿಯ || (೬೦೨)

(ನೂಲ್+ಅದನು)(ಮೇಲಕೆ+ಏಳಿಪುದು)(ಬಾನ್+ಎಲರು)(ಬೀಳುವ+ಅಳುಕು+ಆದಂದು)(ಶಿವನ+ಒಲವ)

ನೀನು ನಡೆಸುತ್ತಿರುವ ಜೀವನವು ಒಂದು ಗಾಳಿಪಟದಂತೆ ದಿಕ್ಕು ದೆಸೆ ಅರಿಯದೆ ಹಾರಿ ಹೋಗುತ್ತಿರುತ್ತದೆ. ನಿನ್ನ ಪ್ರಾಚೀನ ಕರ್ಮಗಳೇ ಅದರ ದಾರ. ಈ ಗಾಳಿಪಟವನ್ನು ಮೇಲಕ್ಕೆ ಹತ್ತಿಸುವುದು ಆಕಾಶ(ಬಾನ್)ದಲ್ಲಿರುವ ಗಾಳಿ(ಎಲರು). ಏಳು ಬೀಳುಗಳು ಮತ್ತು ಭಯಗಳುಂಟಾದಾಗ (ಅಳುಕು) ಪರಮಾತ್ಮನ ಪ್ರೀತಿಯನ್ನು ಬೇಡಿ ನಿನ್ನ ತೋಳಿನ ಚಾತುರ್ಯವನ್ನು ಪ್ರದರ್ಶಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Your life is a kite held by the thread of past karma
The blowing wind lifts it up in the sky
When you become afraid of falling down, pray for the mercy of God
And display the sleight of your hands – Marula Muniya (602)
(Translation from "Thus Sang Marula Muniya" by Sri. Narasimha Bhat)

Friday, April 4, 2014

ಗಾಧೇಯ ತಪಕಡ್ಡವಿಡೆ ಮೇನಕಾದಿಗಳ (601)

ಗಾಧೇಯ ತಪಕಡ್ಡವಿಡೆ ಮೇನಕಾದಿಗಳ-|
ನಾದಿತೇಯರ್ ಕಳುಹಿದಂತೆ ಮಾಯೆಗಳು ||
ರೋಧಗಳನಾಗಿಪುವು ನಿನ್ನ ವ್ರತಂಗಳ್ಗೆ |
ಸಾಧನೆಗೆ ದೃಢನಿಲ್ಲೊ - ಮರುಳ ಮುನಿಯ || (೬೦೧)

(ತಪಕೆ+ಅಡ್ಡ+ಇಡೆ)(ಮೇನಕೆ+ಆದಿಗಳನ್+ಆದಿತೇಯರ್)(ರೋಧಗಳನ್+ಆಗಿಪುವು)

ಗಾಧಿಯ ಮಗನಾದ ವಿಶ್ವಾಮಿತ್ರನು ಮಾಡುತ್ತಿದ್ದ ಘೋರವಾದ ತಪಸ್ಸಿಗೆ ಅಡ್ಡಿಯನ್ನುಂಟುಮಾಡಲು, ಮೇನಕೆ ಮೊದಲಾದ ಅಪ್ಸರೆಯರುಗಳನ್ನು ದೇವತೆಗಳು (ಅದಿತೇಯರ್) ಕಳುಹಿಸಿದಂತೆ, ಪ್ರಪಂಚದ ಮಾಯೆಗಳು, ನೀನು ಮಾಡುವ ವ್ರತಗಳಿಗೆ ಅಡ್ಡಿ(ರೋಧ) ಆತಂಕಗಳನ್ನು ಉಂಟುಮಾಡುತ್ತವೆ. ನೀನು ಅವುಗಳಿಗೆ ಹೆದರದೆ ನೀನು ಸಾಧಿಸಬೇಕಾದ ಕೆಲಸವನ್ನು ಗಟ್ಟಿಯಾಗಿ ನಿಂತು ಮಾಡು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Gods of heaven deputed heavenly damsels like Menaka
To place hurdles on the path of Gadheya’s penance
Likewise the worldly illusions are obstacles to your austerities
But you should stay firm in the pursuit of dharma – Marula Muniya
(Translation from "Thus Sang Marula Muniya" by Sri. Narasimha Bhat)

Thursday, April 3, 2014

ದುರಿತಕ್ಷಯಕ್ಕೆಂದು ಮಾಡೆಲ್ಲ ಮಾಳ್ಕೆಗಳ (600)

ದುರಿತಕ್ಷಯಕ್ಕೆಂದು ಮಾಡೆಲ್ಲ ಮಾಳ್ಕೆಗಳ |
ಪೊರೆವನಿಳೆಯನು ನೀನೆ ? ಶಿವನದಧಿಕಾರ ||
ಧರುಮವನು ಬಿಡದೆ ನೀಂ ದುಡಿ ಗಳಿಸು ನಿರ್ವಹಿಸು |
ಮರೆಯದಾತ್ಮದ ಹಿತವ - ಮರುಳ ಮುನಿಯ || (೬೦೦)

(ದುರಿತ+ಕ್ಷಯಕ್ಕೆ+ಎಂದು)(ಪೊರೆವನ್+ಇಳೆಯನು)(ಶಿವನದು+ಅಧಿಕಾರ)(ಮರೆಯದೆ+ಆತ್ಮದ)

ನೀವು ಮಾಡುವ ಎಲ್ಲಾ ಕೆಲಸ(ಮಾಳ್ಕೆ) ಕಾರ್ಯಗಳನ್ನು ಪಾಪ(ದುರಿತ)ಗಳನ್ನು ನಶಿಸು(ಕ್ಷಯ)ವುದಕ್ಕೋಸ್ಕರ ಮಾತ್ರವೇ ಮಾಡು. ಭೂಮಿ(ಇಳೆ)ಯನ್ನು ಕಾಪಾಡು(ಪೊರೆ)ವವನು ನೀನೇನು? ಅದು ಶಿವನ ಆಡಳಿತದ ವ್ಯಾಪ್ತಿಯಲ್ಲಿ ಬರುತ್ತದೆ. ನೀನು ಮಾಡಬೇಕಾದ ಧರ್ಮವನ್ನು, ಆತ್ಮಕ್ಕೆ ಒಳ್ಳೆಯದಾಗಿರುವುದನ್ನು ಮರೆಯದೆ ಆಚರಿಸು, ಶ್ರಮಿಸು, ಸಂಪಾದಿಸು ಮತ್ತು ನಿಭಾಯಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Perform all virtuous acts to wash off your sins
Are you the protector of the world? It is the responsibility of Shiva
Work, earn and manage all your affairs without straying away from dharma
But forget not the wellbeing of your Soul – Marula Muniya
(Translation from "Thus Sang Marula Muniya" by Sri. Narasimha Bhat)

Wednesday, April 2, 2014

ಲೋಕಮೈತ್ರಿಗೆ ತಪ್ಪದೇಕಾಂತದಲಿ ನಿಂತು (599)

ಲೋಕಮೈತ್ರಿಗೆ ತಪ್ಪದೇಕಾಂತದಲಿ ನಿಂತು |
ಸಾಕಲ್ಯವನು ಕಾಣುತೇಕಾಂಶಗಳಲಿ ||
ಪ್ರಾಕೃತದ್ವಂದ್ವಗಳ ಮೀರ‍್ದ ಧರ್ಮದಿ ಚರಿಸೆ |
ಶೋಕ ಭಯವೇಂ ನಿನಗೆ - ಮರುಳ ಮುನಿಯ || (೫೯೯)

(ತಪ್ಪದೆ+ಏಕಾಂತದಲಿ)(ಕಾಣುತ+ಏಕ+ಅಂಶಗಳಲಿ)

ಜಗತ್ತಿನ ಸ್ನೇಹಕ್ಕಾಗಿ ಒಬ್ಬಂಟಿಗನಾಗಿ ತಪ್ಪಿಸಿಕೊಳ್ಳದೇ ನಿಂತುಕೊಂಡು, ಏಕವಾಗಿರುವ ಭಾಗಗಳಲ್ಲಿ ಪರಿಪೂರ್ಣತೆ(ಸಾಕಲ್ಯ)ಯನ್ನು ಕಾಣುತ್ತಾ, ಪ್ರಕೃತಿಯಿಂದಾದ ಸುಖ ದುಃಖಾದಿ ದ್ವಂದ್ವಗಳನ್ನು (ಪ್ರಾಕೃತದ್ವಂದ್ವ) ಮೀರಿದ ಧರ್ಮದಿಂದ ನೀನು ನಡೆದುಕೊಂಡಲ್ಲಿ, ನಿನಗೆ ದುಃಖ ಮತ್ತು ಹೆದರಿಕೆಗಳು ಏಕೆ ಬಂದೀತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Stay in solitude without jeopardizing universal harmony
See the whole in each part meet with,
If you walk the path of dharma rising above the natural dualities
You will be free from the fear of sorrow – Marula Muniya
(Translation from "Thus Sang Marula Muniya" by Sri. Narasimha Bhat)

Tuesday, April 1, 2014

ಆಗಲಿಹುದಾದೀತು ಆದೊಡೇಂ ಪೋದೊಡೇಂ (598)

ಆಗಲಿಹುದಾದೀತು ಆದೊಡೇಂ ಪೋದೊಡೇಂ |
ಈಗಳಿಹ ಕರ್ತವ್ಯವೇನೊ ನೋಡದನು ||
ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್ |
ಜಾಗರೂಕನೊ ಯೋಗಿ - ಮರುಳ ಮುನಿಯ || (೫೯೮)

(ಆಗಲಿಹುದು+ಆದೀತು)(ಆದೊಡೆ+ಏಂ)(ಪೋದೊಡೆ+ಏಂ)(ಈಗಳ್+ಇಹ)(ಕರ್ತವ್ಯ+ಏನೊ)(ನೋಡು+ಅದನು)(ಪ್ರಸ್ತುತ+ಉದ್ಯೋಗದೊಳ್)

ಆಗಬೇಕಾದದ್ದು ಆಗಿಯೇ ತೀರುತ್ತದೆ. ಆದರೆ ಅದು ಆದರೇನು? ಅಥವಾ ಹೋದರೇನು? ಸದ್ಯಕ್ಕೆ ನೀನು ಮಾಡಲೇಬೇಕಾಗಿರುವ ಕೆಲಸವೇನೋ ಅದನ್ನು ಮಾಡು. ತ್ಯಾಗದಲ್ಲಿ, ಸುಖ ದುಃಖಗಳನ್ನು ಅನುಭವಿಸುವುದರಲ್ಲಿ ಮತ್ತು ವರ್ತಮಾನದಲ್ಲಿ ಇರುವ ಕಾಯಕಗಳಲ್ಲಿ ಯೋಗಿಯಾದವನು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What should happen would happen, what does it matter if it happen or not?
See what the present duty is, a yogi is always prompt
And careful in renunciation, in enjoyment
And in the discharge of present duties – Marula Muniya
(Translation from "Thus Sang Marula Muniya" by Sri. Narasimha Bhat)