Tuesday, July 31, 2012

ಕಂಗಳಿಗೆ ಮೆಯ್ದೋರಿ ಕರೆಗೆ ಮಾರುಲಿಯುಲಿದು (254)

ಕಂಗಳಿಗೆ ಮೆಯ್ದೋರಿ ಕರೆಗೆ ಮಾರುಲಿಯುಲಿದು |
ಸಂಕಟದಿ ಬಂದು ಬಳಿಯಿರುವೆ ನಾನೆಂದು ||
ಸಂಗಡಿಗನಾಗಲೊಲ್ಲದ ದೈವವಾರ‍್ಗೇನು ? |
ತಿಂಗಳಿಲ್ಲದೆ ಶಶಿಯೆ - ಮರುಳ ಮುನಿಯ || (೨೫೪)

(ಮೆಯ್+ತೋರಿ)(ಮಾರುಲಿ+ಉಲಿದು)(ನಾನ್+ಎಂದು)(ಸಂಗಡಿಗನ್+ಆಗಲು+ಒಲ್ಲದ)(ದೈವವು+ಆರ‍್ಗೇನು)(ತಿಂಗಳು+ಇಲ್ಲದೆ)

ನಮ್ಮ ಕಣ್ಣುಗಳಿಗೆ ಕಾಣಿಸಿಕೊಂಡು, ನಮ್ಮ ಕೂಗುಗಳಿಗೆ ಪ್ರತಿಧ್ವನಿಸಿ(ಮಾರುಲಿ), ನಾವು ಕಷ್ಟ, ತಾಪತ್ರಯ ಮತ್ತು ದುಃಖಗಳಲ್ಲಿರುವಾಗ ತಾನು ನಮ್ಮ ಹತ್ತಿರವಿರುವೆನೆಂದು ಬಂದು ನಮ್ಮ ಜೊತೆಗಾರನಾಗಲು ಇಚ್ಛಿಸಿದ ದೈವದಿಂದ ನಮಗೆ ಆಗಬೇಕಾದದ್ದೇನೂ ಇಲ್ಲ. ಬೆಳದಿಂಗಳನ್ನು (ತಿಂಗಳ್) ಕೊಡದ ಚಂದ್ರನಿಂದೇನುಪಯೋಗ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

 Of what use is God who doesn’t physically appear before our eyes?
Who doesn’t respond to our call with a favorable reply,
And who doesn’t stand by our side as a companion at time of distress?
Who needs the moon without moonlight? – Marula Muniya
(Translation from "Thus Sang Marula Muniya" by Sri. Narasimha Bhat)

Monday, July 30, 2012

ಜೀವ ಜೀವಂ ಬೇರೆ ಜೀವಚರಿತಂ ಬೇರೆ (253)

ಜೀವ ಜೀವಂ ಬೇರೆ ಜೀವಚರಿತಂ ಬೇರೆ |
ಜೀವಿಸೈ ನಿನ್ನಂತೆ ನೀನು ನೈಜದಲಿ ||
ಪಾವನಂಬರೆಸು ಜೀವವ ದಿವಸದಿಂ ದಿನಕೆ |
ದೈವಕ್ಕೆ ತಲೆಬಾಗು - ಮರುಳ ಮುನಿಯ || (೨೫೩)

ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಯೂ ಪ್ರತ್ಯೇಕವಾಗಿರುತ್ತದೆ. ಒಂದು ಜೀವಿಯಂತೆ ಮತ್ತೊಂದು ಜೀವಿ ಇಲ್ಲ. ಹಾಗೆಯೇ ಅವುಗಳ ನಡವಳಿಕೆಯೂ ಬೇರೆ ಬೇರೆ ತರಹವಾಗಿರುತ್ತವೆ. ನೀನು ನಿನ್ನಂತೆಯೇ ಸಹಜ(ನೈಜ)ವಾಗಿ ಜೀವನವನ್ನು ನಡೆಸು. ದಿನದಿಂದ ದಿನಕ್ಕೆ ನಿನ್ನ ಜೀವವನ್ನು ಪಾವನಗೊಳಿಸು, ದೈವಕ್ಕೆ ಶರಣಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Every soul is different from the other and each has its own past
Live your life like yourself, safeguarding your identity
Make your life purer and purer from day to day,
Bow before God at all times – Marula Muniya
(Translation from "Thus Sang Marula Muniya" by Sri. Narasimha Bhat)

Friday, July 27, 2012

ಉದ್ಯಮದಿ ಸಂಯಮಂ ಪೌರುಷನಯದ್ವಯಂ (252)

ಉದ್ಯಮದಿ ಸಂಯಮಂ ಪೌರುಷನಯದ್ವಯಂ |
ಸದ್ಯೋಚಿತಪ್ರಕಾರವನರಿತ ಸಾಸಂ ||
ಆದ್ಯಕರ್ತನನುಗ್ರಹಿಸಲಹುದು ಪುರುಷಂಗೆ |
ಸದ್ವಿಜಯಮೈ ದಿಟದಿ - ಮರುಳ ಮುನಿಯ || (೨೫೨)

(ಸದ್ಯ+ಉಚಿತ+ಪ್ರಕಾರವನ್+ಅರಿತ)(ಆದ್ಯಕರ್ತನ್+ಅನುಗ್ರಹಿಸಲ್+ಅಹುದು)(ಸತ್+ವಿಜಯಮೈ)

ಕೆಲಸ ಮಾಡುವುದರಲ್ಲಿ ಹತೋಟಿ ಮತ್ತು ಧೀರತನದ ಎರಡು ನಾಜೂಕತೆಗಳು, ಆಯಾ ಸಮಯಕ್ಕೆ ಯೋಗ್ಯವಾದದ್ದನ್ನು ಮಾಡುವ ರೀತಿಗಳನ್ನು ತಿಳಿದು ಪರಾಕ್ರಮಗಳನ್ನು ತೋರಿಸುವುದು, ಪ್ರಮುಖ ಮತ್ತು ಶ್ರೇಷ್ಠನಾಗಿರುವ ಭಗವಂತನು ಇವುಗಳನ್ನು ಪುರುಷನಿಗೆ ಅನುಗ್ರಹಿಸಲು, ಅವನಿಗೆ ನಿಜವಾಗಿ ಒಳ್ಳೆಯ ಯಶಸ್ಸು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Surrender to God in every difficulty you face in life
God only makes and unmakes everything
There is nothing except God’s omnipotent authority
God alone is your best refuge – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 26, 2012

ಜೀವನದ ಕಷ್ಟದಲಿ ದೈವವನೆ ನಂಬಿ ನೀಂ (251)

ಜೀವನದ ಕಷ್ಟದಲಿ ದೈವವನೆ ನಂಬಿ ನೀಂ |
ದೈವ ಮಾಡಿಪುದೆಲ್ಲವನು ತಡೆವುದೆಲ್ಲ ||
ದೈವದಧಿಕಾರದಿಂ ಪೆರತೊಂದುಮಿರದಲ್ಲಿ |
ದೈವವೇ ಪರಮಗತಿ - ಮರುಳ ಮುನಿಯ || (೨೫೧)

(ಮಾಡಿಪುದು+ಎಲ್ಲವನು)(ದೈವದ+ಅಧಿಕಾರದಿಂ)(ಪೆರತು+ಒಂದುಂ+ಇರದು+ಅಲ್ಲಿ)

ಜೀವನವನ್ನು ನಡೆಸುವಾಗ ಬರುವ ಕಷ್ಟಗಳಲ್ಲಿ ನೀನು ದೈವದಲ್ಲಿ ವಿಶ್ವಾಸವನ್ನಿಡು. ಈ ಪ್ರಪಂಚದಲ್ಲಿ ಎಲ್ಲವನ್ನೂ ನಡೆಸುವುದು ಮತ್ತು ತಡೆಯುವುದೂ ಸಹ ದೈವವೇ. ದೈವದ ಅಧಿಕಾರವನ್ನು ಬಿಟ್ಟು ಬೇರೆ ಯಾವುದರ ಅಧಿಕಾರವೂ ಇಲ್ಲಿಲ್ಲ. ದೈವವನ್ನು ನಂಬುವುದೇ ಶ್ರೇಷ್ಠವಾದ ಮೋಕ್ಷವನ್ನು ಹೊಂದುವುದಕ್ಕೆ ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Surrender to God in every difficulty you face in life
God only makes and unmakes everything
There is nothing except God’s omnipotent authority
God alone is your best refuge – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 25, 2012

ಉದ್ಯಾನದುಜ್ಜುಗೆಯ ದುಡಿತಕ್ಕೆ ಫಲವೇನು ? (250)

ಉದ್ಯಾನದುಜ್ಜುಗೆಯ ದುಡಿತಕ್ಕೆ ಫಲವೇನು ? |
ನಿತ್ಯ ಕಿಸಲಯ ಕುಸುಮ ನವಸೃಷ್ಟಿ ವೀಕ್ಷೆ ||
ಉದ್ಯತನ್ ಬ್ರಹ್ಮನಂತನವರತ ಸೃಷ್ಟಿಯಲಿ |
ಸದ್ಯಸ್ಕತಾ ತೋಷಿ - ಮರುಳ ಮುನಿಯ || (೨೫೦)

(ಉದ್ಯಾನದ+ಉಜ್ಜುಗೆಯ)(ಬ್ರಹ್ಮನಂತೆ+ಅನವರತ)

ಒಂದು ಉಪವನದಲ್ಲಿ ಕೆಲಸ ಮಾಡುವವನ ದುಡಿಮೆಗೆ ಫಲವೇನು ? ಪ್ರತಿದಿನವೂ ಹೊಸ ಹೊಸದಾಗಿ ಹುಟ್ಟುವ ಹೂವುಗಳು ಅರಳುವುದು (ಕಿಸ), ಬಾಡುವುದು (ಲಯ) ಮತ್ತು ಹೊಸ ಸೃಷ್ಟಿಯನ್ನು ಉತ್ಪಾದಿಸುವುದನ್ನು ನೋಡುವುದೇ (ವೀಕ್ಷೆ) ಅವನ ಕೆಲಸಕ್ಕೆ ಪ್ರತಿಫಲ. ಕರ್ತವ್ಯನಿಷ್ಠ ವ್ಯಕ್ತಿಯೂ ಸಹ ಪರಬ್ರಹ್ಮನಂತೆ ನಿರಂತರವಾದ ಈ ಸೃಷ್ಟಿಯಲ್ಲಿ, ಆಯಾ ಸಮಯದಲ್ಲಿ ತನಗೆ ದೊರೆತಿರುವುದನ್ನು ಕಂಡು ಅನುಭವಿಸಿ ಸಂತೋಷಿಸುತ್ತಾನೆ (ಸದ್ಯಸ್ಕತಾತೋಷಿ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the reward for the gardener’s assiduous labour?
Witnessing new tender leaves and flowers every day.
Brahma likewise is ever busy with creation
He enjoys every moment of happiness – Marula Muniya
(Translation from "Thus Sang Marula Muniya" by Sri. Narasimha Bhat)

Tuesday, July 24, 2012

ಬೇಸಿಗೆಯೊಳೆಂದೊ ಸಂಜೆಯೊಳಾವಗಮೊ ಮೆಲನೆ (249)

ಬೇಸಿಗೆಯೊಳೆಂದೊ ಸಂಜೆಯೊಳಾವಗಮೊ ಮೆಲನೆ |
ಬೀಸಿ ತಂಗಾಳಿ ತಾನಾಗಿ ಬರುವಂತೆ ||
ಈಶಕೃಪೆ ಬೀಸೀತು ಮನದಳಲ ನೀಗೀತು |
ಸೈಸು ನೀನದುವರಂ - ಮರುಳ ಮುನಿಯ || (೨೪೯)

(ಬೇಸಿಗೆಯೊಳ್+ಎಂದೊ)(ಸಂಜೆಯೊಳ್+ಆವಗಮೊ)(ಮನದ+ಅಳಲ)(ನೀನ್+ಅದುವರಂ)

ಸೆಕೆಗಾಲದಲ್ಲಿ ಯಾವಾಗಲೋ ಒಂದು ಸಲ, ಸಾಯಂಕಾಲದ ಯಾವುದೋ ಒಂದು ಹೊತ್ತಿನಲ್ಲಿ, ನಿಧಾನವಾಗಿ ತಂಪಾದ ಗಾಳಿಯು ತಾನೇ ತಾನಾಗಿ ಬೀಸಿಕೊಂಡು ಬಂದು ನಮಗೆ ಸಂತೋಷ ಮತ್ತು ತೃಪ್ತಿಯನ್ನುಂಟುಮಾಡುವಂತೆ ಪರಮಾತ್ಮನ ಅನುಗ್ರಹವೆಂಬ ಗಾಳಿಯೂ ಸಹ ಬೀಸಿ ಮನಸ್ಸಿನ ದುಃಖ(ಅಳಲ್) ಮತ್ತು ಚಿಂತೆಗಳನ್ನು ಕಳೆಯಬಹುದು. ನೀನು ಅಲ್ಲಿಯವರೆಗೆ ನಿನ್ನ ಪಾಲಿಗೆ ಬಂದ ದುಃಖ ಮತ್ತು ದುಮ್ಮಾನಗಳನ್ನು ಸಹಿಸಿಕೊಂಡಿರು (ಸೈಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like the cool breeze that comes blowing slowly at its own free will
Sometimes on some summer evenings
God’s grace would come and blow off your sorrows
Endure everything patiently till then – Marula Muniya
(Translation from "Thus Sang Marula Muniya" by Sri. Narasimha Bhat)

Monday, July 23, 2012

ಕಡಲ ಪನಿಯೊಂದು ಕಡಲನು ತಣಿಪ ಮರ್ಯಾದೆ (248)

ಕಡಲ ಪನಿಯೊಂದು ಕಡಲನು ತಣಿಪ ಮರ್ಯಾದೆ |
ಗಿಡದ ಹೂವೊಂದು ಗಿಡವನರ್ಚಿಸುವ ರೀತಿ ||
ಪೊಡವಿಯನ್ನು ಮಣ್ಣ ಹಿಡಿಯೊಂದು ಪೂಜಿಪ ಸೊಗಸು |
ಬಡಜೀವ ದೇವನನು - ಮರುಳ ಮುನಿಯ || (೨೪೮)

(ಗಿಡವನು+ಅರ್ಚಿಸುವ)

ಸಮುದ್ರದ ನೀರಿನ ಹನಿಯು ಹೇಗೆ ಸಮುದ್ರವನ್ನು ತೃಪ್ತಿಪಡಿಸುವಂತಹ ಸೌಜನ್ಯದ ವರ್ತನೆಯನ್ನು ತೋರುತ್ತದೆಯೋ, ಗಿಡದಲ್ಲಿ ಬಿಟ್ಟಿರುವ ಹೂವು ಆ ಗಿಡವನ್ನು ಹೇಗೆ ಆರಾಧಿಸುವುದೋ ಮತ್ತು ಭೂಮಿಯನ್ನು ಒಂದು ಹಿಡಿ ಮಣ್ಣು ಯಾವ ಸೊಗಸಿನಿಂದ ಪೂಜಿಸುತ್ತದೆಯೋ, ಇದೇ ರೀತಿ ಒಂದು ಬಡಜೀವವು ಪರಮಾತ್ಮನನ್ನು ಆರಾಧಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The etiquette of a seawater drop cooling all the sea
The manner of a flower worshipping flower plant,
The grace of a handful of soil adoring the whole earth
Are present in a poor soul worshipping God – Marula Muniya
(Translation from "Thus Sang Marula Muniya" by Sri. Narasimha Bhat)

Friday, July 20, 2012

ರಾಘವಾಕೃತಿಯ ತಾಂ ಕಣ್ಣಾರೆ ಕಾಣದಿರೆ (247)

ರಾಘವಾಕೃತಿಯ ತಾಂ ಕಣ್ಣಾರೆ ಕಾಣದಿರೆ |
ತ್ಯಾಗರಾಜನ ಮುಖದೆ ಲಲಿತ ಭಾವಗಳು ||
ರಾಗರಾಗಗಳಾಗಿ ಪರಿದು ಬರುತಿರ‍್ದಪುವೆ ? |
ವಾಗ್ಗೇಯ ಸತ್ಯವದು - ಮರುಳ ಮುನಿಯ || (೨೪೭)

(ರಾಘವ+ಆಕೃತಿಯ)(ಕಾಣದೆ+ಇರೆ)

ರಾಮನ ಸುಂದರವಾದ ರೂಪವನ್ನು ತನ್ನ ಕಣ್ಣುಗಳಿಂದ ಸ್ವತಃ ನೋಡದಿದ್ದಲ್ಲಿ, ತ್ಯಾಗರಾಜರ ಬಾಯಿಂದ ಮನೋಹರ ಮತ್ತು ಕೋಮಲವಾದ ಭಾವನೆಗಳು ವಿಧವಿಧವಾದ ರಾಗಗಳಲ್ಲಿ ಹರಿದು ಬರಲು ಸಾಧ್ಯವಾಗುತ್ತಿತ್ತೇನು ? ಇದು ಕೃತಿರಚಿಸಿ ಹಾಡುವವನಲ್ಲಿ ಕಂಡುಬರುವ ಸತ್ಯವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If Thyagaraja had not seen the vision of Shri Rama with his own eyes,
How could have the graceful emotions flowed out
Through his face in so many moving tunes?
What he sang was the truth he experienced – Marula Muniya
(Translation from "Thus Sang Marula Muniya" by Sri. Narasimha Bhat)

Thursday, July 19, 2012

ಕಣ್ಣ ತುಂಬಲು ಕೇಶವಾಕಾರವಿರದೆ ಜ- (246)

ಕಣ್ಣ ತುಂಬಲು ಕೇಶವಾಕಾರವಿರದೆ ಜ- |
ಕ್ಕಣ್ಣನಾ ಬೇಲೂರ ದೇಗುಲದೊಳೆಂತಾ- ||
ಚನ್ನೆಯರ ಮನ್ನೆಯರ ರಸಿಕ ಪ್ರಸನ್ನೆಯರ |
ಸನ್ನೆಗಳ ತರಲಾಯ್ತು? - ಮರುಳ ಮುನಿಯ || (೨೪೬)

(ಕೇಶವ+ಆಕಾರ+ಇರದೆ)(ಜಕ್ಕಣ್ಣನು+ಆ)(ದೇಗುಲದೊಳು+ಎಂತು+ಆ)(ತರಲು+ಆಯ್ತು)

ತನ್ನ ಕಣ್ಣುಗಳನ್ನು ತುಂಬಲು ಚೆನ್ನಕೇಶವನ ಆಕಾರ ಅವನ ಮನಸ್ಸಿನಲ್ಲಿಲ್ಲರದಿದ್ದಲ್ಲಿ ಜಕ್ಕಣಾಚಾರಿ ಶಿಲ್ಪಿಯು ಬೇಲೂರಿನ ದೇವಸ್ಥಾನದೊಳಗೆ ಚೆಲುವೆಯರ ಮತ್ತು ಗೌರವಾನ್ವಿತ ರಸಿಕರನ್ನು ಮೆಚ್ಚಿಸುವ ಕೋಮಲೆಯರ ಭಂಗಿ ಭಣಿತಗಳನ್ನು ತರಲು ಹೇಗೆ ಶಕ್ಯವಾಗುತ್ತಿತ್ತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If the images of Keshava had not filled his eyes
How could Jakkanna bring out the attractive postures and signals?
Of the beautiful dignified graceful, happy maidens
Inside the temple of Bellur? – Marula Muniya
(Translation from "Thus Sang Marula Muniya" by Sri. Narasimha Bhat)

Wednesday, July 18, 2012

ಮೆಚ್ಚಿದರು ಮೂರ‍್ಮಂದಿ ಪೆಚ್ಚೆಂದರಾರ‍್ಮಂದಿ (245)

ಮೆಚ್ಚಿದರು ಮೂರ‍್ಮಂದಿ ಪೆಚ್ಚೆಂದರಾರ‍್ಮಂದಿ |
ಸ್ವಚ್ಚಮತಿಗಿದು ಹುಚ್ಚು ಹುಚ್ಚು ಕೃತಿ ತಾನೇ? ||
ನೆಚ್ಚಿ ಬಾಳ್ವಜ್ಞಂಗೆ ಕಗ್ಗ ಮರುಕಗ್ಗ ರುಚಿ |
ಅಚ್ಯುತ ಹಸಾದ ರುಚಿ - ಮರುಳ ಮುನಿಯ || (೨೪೫)

(ಮೂರ್+‍ಮಂದಿ)(ಪೆಚ್ಚು+ಎಂದರು+ಆರ‍್+ಮಂದಿ)(ಸ್ವಚ್ಚಮತಿಗೆ+ಇದು)(ಬಾಳ್ವ+ಅಜ್ಞಂಗೆ)

ಕಗ್ಗವನ್ನು ಮೂರು ಜನರು ಓದಿ ಸಂತೋಷಪಟ್ಟರೆ, ಆರು ಮಂದಿ ಅದು ದಡ್ಡತನ (ಪೆಚ್ಚು) ಎಂದರು. ಶುದ್ಧ ಮತ್ತು ಶುಭ್ರವಾಗಿರುವ ಬುದ್ಧಿಗೆ ಇದು ಒಂದು ಹುಚ್ಚು ಕೃತಿಯೆಂದು ತೋರಬಹುದು. ಆದರೆ ಇದರ ತತ್ತ್ವಗಳನ್ನೇ ನಂಬಿ (ನೆಚ್ಚಿ) ಬಾಳನ್ನು ನಡೆಸುತ್ತಿರುವನಿಗೆ ಮಂಕುತಿಮ್ಮನ ಕಗ್ಗ ಮತ್ತು ಮರುಳಮುನಿಯನ ಕಗ್ಗಗಳು ಆಸ್ವಾದಕರವಾಗಿ ಕಾಣುತ್ತವೆ. ಪರಮಾತ್ಮನ ಚ್ಯುತಿಯಿಲ್ಲದಿರುವ ಪ್ರಸಾದವು (ಹಸಾದ) ಅವನಿಗೆ ಬಹು ರುಚಿಕರವಾಗಿ ಕಾಣುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The three admired it, but the six ridiculed it as quite foolish
Of course to the wise sage this is somewhat a childish work
But both the Kaggas are liked by the unsophisticated lover of life
Blessed  is God’s grace – Marula Muniya
(Translation from "Thus Sang Marula Muniya" by Sri. Narasimha Bhat)