Friday, August 26, 2011

ಏಕಮೋ ಅನೇಕಮೋ ಸದ್ವಸ್ತುವೆಣಿಸಲಿಕೆ (60)


ಏಕಮೋ ಅನೇಕಮೋ ಸದ್ವಸ್ತುವೆಣಿಸಲಿಕೆ |
ಲೋಕದೊಳನೇಕವದು ಮೂಲದೊಳಗೇಕ ||
ಸಾಕಲ್ಯದಿಂ ಭಜಿಸು ನೀನುಭಯಗಳನೆಂದುಂ |
ಏಕದಿನನೇಕ ನೀಂ - ಮರುಳ ಮುನಿಯ || (೬೦)

(ಸತ್+ವಸ್ತು+ಎಣಿಸಲಿಕೆ)(ಲೋಕದೊಳ್+ಅನೇಕವದು)(ಮೂಲದೊಳಗೆ+ಏಕ)
(ನೀನ್+ಉಭಯಗಳನ್+ಎಂದುಂ)(ಏಕದಿಂ+ಅನೇಕ)

ಪರಮಾತ್ಮನೆಂಬ ಶ್ರೇಷ್ಠವಾದ ವಸ್ತು (ಸತ್+ವಸ್ತು), ಪರಿಗಣಿಸುವಲ್ಲಿ ಒಂದೋ ಅಥವಾ ಅನೇಕವೋ? ಅದು ಈ ನಮ್ಮ ಪ್ರಪಂಚದಲ್ಲಿ ಅನೇಕ ರೂಪಗಳಲ್ಲಿ ಕಾಣಿಸಿಕೊಂಡರೂ, ಮೂಲರೂಪದಲ್ಲಿ ಅದು ಒಂದೇ ಒಂದು ವಸ್ತು. ಸಂಪೂರ್ಣವಾಗಿ (ಸಾಕಲ್ಯ) ನೀನು ಈ ಎರಡನ್ನೂ ಪೂಜಿಸು (ಭಜಿಸು). ನೀನು ಒಂದರಿಂದ ಅನೇಕವಾಗಿರುವ ಮನುಷ್ಯ ಜೀವಿ.

ಹೀಗೆ ವಿಧವಿಧವಾಗಿ ಪ್ರಪಂಚ ಕಾಣುತ್ತಿರುವಾಗ ಇದೆಲ್ಲ ಬೇರೆ ಬೇರೆಯೇ ಅನೇಕವೋ, ಅಥವಾ ಇದಕ್ಕೆಲ್ಲಾ ಮೂಲವಾಗಿರುವುದು ಒಂದೇ ಒಂದೆಯೇ ಎಂಬ ಸಂದೇಹ ಬರುವುದು ಸಹಜ. ಮೇಲಿನ ನೋಟಕ್ಕೆ ಇದೆಲ್ಲಾ ಬೇರೆ ಬೇರೆಯೆಂದೇ ಕಾಣುತ್ತದೆ. ಆದರೆ ವಿಚಾರ ಮಾಡಿನೋಡಿದಾಗ ತತ್ತ್ವ ತಿಳಿದುಬರುತ್ತದೆ. ಇದೆಲ್ಲಾ ಒಂದೇ ಒಂದು; ಯಾವಾಗಲೂ ಇರುವ ವಸ್ತುವಿನಿಂದ ಬಂದಿದ್ದು. ಒಂದೇ ಅನೇಕ ರೂಪಗಳನ್ನು ತಾಳಿದೆ. ಆ ಮೂಲ ವಸ್ತುವನ್ನು ಅದರ ಅನೇಕ ಅವಿರ್ಭಾವವನ್ನು ಗೌರವದಿಂದ ಕಂಡು ಪೂಜಿಸತಕ್ಕದ್ದು ಎಂದು ಹೇಳುತ್ತಾರೆ ಮುನಿಯಗುರು. ಆ ಮೂಲವಸ್ತುವಿನಿಂದ ಬಂದದ್ದೆಲ್ಲವೂ ಗೌರವಾರ್ಹವೆ. ಆ ಮೂಲವಸ್ತುವಿನಿಂದಲೇ ಬಂದವನು ನೀನು ಎಂದು ಅರಿತು ಲೋಕಜೀವನನ್ನು ನಡೆಸತಕ್ಕದ್ದು ಎನ್ನುತ್ತಾರೆ.

Thursday, August 25, 2011

ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ (59)


ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ |
ಮಾವ ಮಾವಂದಿರಿಂದಗಣಿತಾದಿಗಳಿಂ ||
ಜೀವವೊಂದುದಿಸಿಹುದು ಹೀರಿ ಸಾರಗಳನಿತ-|
ನಾವನೆಣಿಸುವನದನು - ಮರುಳ ಮುನಿಯ || (೫೯)

(ಮಾವಂದಿರಿಂದ+ಅಗಣಿತಾದಿಗಳಿಂ)(ಜೀವವೊಂದು+ಉದಿಸಿಹುದು)
(ಸಾರಗಳನ್+ಅನಿತನ್+ಅವನ್+ಎಣಿಸುವನ್+ಅದನು)

ಸಾವಿರಾರು ವಂಶ(ಕುಲ)ಗಳಿಂದ, ತಾಯಿ ತಂದೆಯರು, ಅತ್ತೆ ಮಾವಂದಿರು ಮತ್ತು ಲೆಕ್ಕಕ್ಕೆ ಸಿಗದಿರುವ ಇತ್ಯಾದಿಗಳಿಂದ (ಅಗಣಿತಾದಿಗಳಿಂ), ಒಂದು ಜೀವವು ಈ ಪ್ರಪಂಚದಲ್ಲಿ ಹುಟ್ಟಿದೆ (ಉದಿಸಿಹುದು). ಇದು ಸ್ವಲ್ಪ ಸ್ವಲ್ಪ (ಅನಿತು) ಸಾರಗಳನ್ನು ಇವರೆಲ್ಲರಿಂದ ಹೀರಿಕೊಂಡು ಹುಟ್ಟಿದೆ. ಇದನ್ನು ಲೆಕ್ಕ ಹಾಕಲಿಕ್ಕೆ ಯಾರಿಂದ ಸಾಧ್ಯ?

Wednesday, August 24, 2011

ಜಗವಿಹುದನಾದಿಯದು ಮೊದಲಿಲ್ಲ ಕೊನೆಯಿಲ್ಲ (58)


ಜಗವಿಹುದನಾದಿಯದು ಮೊದಲಿಲ್ಲ ಕೊನೆಯಿಲ್ಲ |
ಯುಗದಿಂದ ಯುಗಕೆ ಹರಿವುದು ಜೀವ ನದಿವೊಲ್ ||
ಅಘಪುಣ್ಯಗಳ ಬೇರ್ಗಳೆಂದಿನಿಂ ಬಂದಿಹವೊ |
ಬಗೆ ಮುಂದೆ ಗತಿಯೆಂತೊ - ಮರುಳ ಮುನಿಯ || (೫೮)

(ಜಗ+ಇಹುದು+ಅನಾದಿ+ಅದು)(ಬೇರ್ಗಳ್+ಎಂದಿನಿಂ)

ಜಗತ್ತು ಪುರಾತನ ಕಾಲ(ಅನಾದಿ)ದಿಂದಲೂ ಇದೆ. ಅದಕ್ಕೆ ಮೊದಲು ಮತ್ತು ಕೊನೆಗಳಿಲ್ಲ. ಒಂದು ಯುಗದಿಂದ ಇನ್ನೊಂದು ಯುಗಕ್ಕೆ ಇದು ಜೀವನದಿಯಂತೆ ಹರಿಯುತ್ತಿದೆ. ಪಾಪ (ಅಘ) ಮತ್ತು ಪುಣ್ಯಗಳ ಬೇರುಗಳು ಎಂದಿನಿಂದ ಬಂದಿರುವುವೋ ನಮಗೆ ತಿಳಿಯದು. ಮುಂದಿನ ಅವಸ್ಥೆ ಹೇಗೆ ಎಂದೂ ತಿಳಿಯದು.

Tuesday, August 23, 2011

ನಮ್ಮ ರವಿ ಭೂಗೋಲಗಳಿನಾಚೆ ನೂರಾರು (57)


ನಮ್ಮ ರವಿ ಭೂಗೋಲಗಳಿನಾಚೆ ನೂರಾರು |
ನೂರ‍್ಮಡಿಯ ಬಲದ ರವಿ ಭೂಗ್ರಹಗಳಿಹುವು ||
ಹೊಮ್ಮಿಸುವಳಿನ್ನೆಷ್ಟನೋ ಪ್ರಕೃತಿ ಮರಮರಳಿ |
ಬ್ರಹ್ಮಶಕ್ತಿಯಪಾರ - ಮರುಳ ಮುನಿಯ || (೫೭)

(ಭೂಗೋಲಗಳಿನ್+ಆಚೆ)(ಭೂಗ್ರಹಗಳ್+ಇಹುವು)(ಹೊಮ್ಮಿಸುವಳ್+ಇನ್ನೆಷ್ಟನೋ)(ಬ್ರಹ್ಮಶಕ್ತಿಯು+ಅಪಾರ)

ನಾವು ಈಗ ಜೀವಿಸುತ್ತಿರುವ ಸೂರ್ಯ ಮತ್ತು ಭೂಗೋಲಗಳಿಂದ ಆಚೆಗೆ, ನೂರಾರು ಮತ್ತು ನೂರುಪಟ್ಟು ಹೆಚ್ಚು ಶಕ್ತಿ ಇರುವ ಸೂರ್ಯ ಮತ್ತು ಭೂಗ್ರಹಗಳಿವೆ. ಪ್ರಕೃತಿಯು ಪುನಃ ಪುನಃ ಇನ್ನೂ ಎಷ್ಟೆಷ್ಟೋ ಸೂರ್ಯ ಮತ್ತು ಭೂಗ್ರಹಗಳನ್ನು ಉಂಟಾಗುವಂತೆ ಮಾಡುತ್ತಾಳೆ. ಬ್ರಹ್ಮಶಕ್ತಿ ಬಹಳ ಅಧಿಕವಾದದ್ದು (ಅಪಾರ).

Monday, August 22, 2011

ಎಂತು ನಾಂ ಕಾಡಿದೊಡಮಿವನಳಿಯದುಳಿದಿರ‍್ಪನ್ (56)


ಎಂತು ನಾಂ ಕಾಡಿದೊಡಮಿವನಳಿಯದುಳಿದಿರ‍್ಪನ್ |
ಎಂತಪ್ಪ ಧೀರನಿವನೇನಮೃತಸಾರನ್ ! ||
ಇಂತೆನುತೆ ಮರ್ತ್ಯರೊಳೆ ಪಂಥ ಹೂಡಿಪನು ವಿಧಿ |
ಸಂತತ ಸ್ಪರ್ಧೆಯದು - ಮರುಳ ಮುನಿಯ || (೫೬)

(ಕಾಡಿದೊಡಂ+ಇವನ್+ಅಳಿಯದೆ+ಉಳಿದಿರ‍್ಪನ್)(ಧೀರನ್+ಇವನು+ಏನ್+ಅಮೃತ+ಸಾರನ್)(ಇಂತು+ಎನುತೆ)

"ಇವನನ್ನು ನಾನು ಎಷ್ಟು ಪೀಡಿಸಿದರೂ (ಕಾಡಿದೊಡಂ) ಸಹ ಇವನು ನಾಶವಾಗದೆ (ಅಳಿಯದೆ) ಇನ್ನೂ ಉಳಿದಿರುವನಲ್ಲಾ ! ಇವನು ಯಾವ ರೀತಿಯ (ಎಂತಪ್ಪ) ಧೀರ? ಇವನೇನು ಅಮೃತವನ್ನು ಸೇವಿಸಿರುವನೋ?" ಹೀಗೆ ಹೇಳುತ್ತ ಮನುಷ್ಯರ ಜೊತೆ ವಿಧಿಯು ಪಂಥವನ್ನು ಹೂಡಿರುವನು. ಯಾವಾಗಲೂ (ಸಂತತ) ಇರುವಂತಹ ಸ್ಪರ್ಧೆ ಇದು.

Friday, August 19, 2011

ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ (55)


ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ |
ಮತ್ತೆ ತಾಂ ತೆನೆಯೊಳೇಳ್ವಂತೆ ನರಕುಲದ ||
ಸತ್ತ್ವ ಕಣವಿಲ್ಲಲ್ಲಿ ತಮಕಿಳಿದೊಡಂ ತಾನೆ |
ಮತ್ತೆದ್ದು ಮೆರೆಯುವುದು - ಮರುಳ ಮುನಿಯ || (೫೫)

(ಗೊಬ್ಬರ+ಆಗಿ)(ನೆಲಕೆ+ಇಳಿದು)(ಮಣ್+ಆಗಿ)(ತೆನೆಯ+ಒಳು+ಏಳ್ವಂತೆ)
(ಕಣವು+ಇಲ್ಲಿ+ಅಲ್ಲಿ)(ತಮಕೆ+ಇಳಿದೊಡಂ)(ಮತ್ತೆ+ಎದ್ದು)

ಭತ್ತವು ಹೇಗೆ ಗೊಬ್ಬರವಾಗಿ ನೆಲದೊಳಕ್ಕಿಳಿದು ಮಣ್ಣಾಗಿ ಪುನಃ ಭತ್ತದ ತೆನೆಯಾಗಿ ವಿಜೃಂಭಿಸುವುದೋ, ಹಾಗೆಯೇ ಮನುಷ್ಯ ಕುಲದ ಸತ್ತ್ವದ ಕಣವು ಅಲ್ಲಲ್ಲಿ ಪೂರ್ತಿಯಾಗಿ ಕಾಣದಂತೆ ಕೆಳಕ್ಕೆ (ತಮಕೆ) ಇಳಿದರೆ ತಾನೆ ಅದು ಪುನಃ ಎದ್ದು ಮೆರೆಯಲು ಸಾಧ್ಯ.

Thursday, August 18, 2011

ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ (54)


ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ |
ಮಣಿ ಮರಳು ಶಿಲೆಗಳಲಿ ಶುನಕ ಹರಿಣದಲಿ ||
ಗುಣ ಶಕ್ತಿ ವಿವಿಧತೆಯನನುವಂಶವಿರಿಸಿರ್ಪು - |
ದನ್ಯೋನ್ಯತೆಯ ಕಲಿಸೆ - ಮರುಳ ಮುನಿಯ || (೫೪)

(ವಿವಿಧತೆಯನು+ಅನುವಂಶ+ಇರಿಸಿ+ಇರ್ಪುದು+ಅನ್ಯೋನ್ಯತೆಯ)

ಹುಲ್ಲು (ತೃಣ), ಸಸ್ಯ, ಗಿಡಮರಗಳು, ಚಿನ್ನ(ಕನಕ), ಕಬ್ಬಿಣ, ರತ್ನ(ಮಣಿ), ಮರಳು, ಕಲ್ಲು(ಶಿಲೆ), ನಾಯಿ(ಶುನಕ) ಮತ್ತು ಜಿಂಕೆ ಇತ್ಯಾದಿಗಳಲ್ಲಿ, ಇವುಗಳು ಪರಸ್ಪರ ಪ್ರೀತಿಸುವುದನ್ನು ಕಲಿಯಲು, ಅನುವಂಶಿಕತೆಯು(ಅನುವಂಶ) ಬಗೆಬಗೆಯ ಸ್ವಭಾವ ಮತ್ತು ಬಲಾಬಲಗಳನ್ನು ಇಟ್ಟಿದೆ.

ಮೂಲಚೇತನದ ಮೂಟೆಗಳೆಲ್ಲ ವಸ್ತುಗಳು (53)


ಮೂಲಚೇತನದ ಮೂಟೆಗಳೆಲ್ಲ ವಸ್ತುಗಳು |
ಸ್ಥೂಲದಿಂ ಸೂಕ್ಷ್ಮಗಳು ಸೂಕ್ಷ್ಮದಿಂ ಸ್ಥೂಲ ||
ಕಾಲ ದೇಶಾಸಂಗ ಪರಿವರ್ತ್ಯ ಜಡಜೀವ |
ಮಾಲಾಪ್ರವಾಹವದು -ಮರುಳ ಮುನಿಯ || (೫೩)

ಮೂಲಶಕ್ತಿಯ ಮೂಟೆಗಳೆಲ್ಲವೂ ನಮಗೆ ಈ ಪ್ರಪಂಚದಲ್ಲಿರುವ ವಸ್ತುಗಳಾಗಿ ಕಂಡುಬರುತ್ತದೆ. ಇವು ದಪ್ಪ(ಸ್ಥೂಲ)ದರಿಂದ ಸಣ್ಣ (ಸೂಕ್ಷ್ಮ) ಮತ್ತು ಸಣ್ಣದರಿಂದ ದಪ್ಪ ಆಗಬಲ್ಲವು. ಒಂದು ಸಣ್ಣ ಬೀಜದಿಂದ ಒಂದು ಬೃಹತ್ ಮರ ಮತ್ತು ಆ ಮರದಿಂದ ಪುನಃ ಒಂದು ಸಣ್ಣ ಬೀಜ ಹುಟ್ಟುತ್ತದೆ. ಜಡವಾಗಿರುವ ಜೀವವು ಕಾಲ, ಸ್ಥಳ ಮತ್ತು ಸಂಪರ್ಕದಿಂದ ಪರಿವರ್ತನೆಗೊಳ್ಳುತ್ತದೆ. ಬೀಜ ಮರವಾಗುವ ಉದಾಹರಣೆಯನ್ನು ತೆಗೆದುಕೊಂಡರೆ, ಅ ಬೀಜವನ್ನು ಒಂದು ಸ್ಥಳದಲ್ಲಿ ನೆಡಬೇಕು. ಅದಕ್ಕೆ ನೀರು, ಗೊಬ್ಬರ, ಸೂರ್ಯನ ಬೆಳಕು ಇತ್ಯಾದಿಗಳು ಸೇರಬೇಕು. ಹಾಗಾದಾಗ ಸ್ವಲ್ಪ ಸಮಯದ ನಂತರ ಅದು ಗಿಡವಾಗಿ ಬೆಳೆಯಬಹುದು. ಈ ರೀತಿಯಾಗಿ ಅದು ಪರಿವರ್ತನೆಗೊಳ್ಳುತ್ತದೆ. ಸಾಲು ಸಾಲಾಗಿ ಬರುವ ಪ್ರವಾಹ (ಮಾಲಾಪ್ರವಾಹ)ಗಳಿಂದ ಪ್ರಕೃತಿಯಲ್ಲಿ ಪರಿವರ್ತನೆಗಳಾಗುತ್ತವೆ. ಇದಕ್ಕೆ ಮೂಲಚೇತನ ಪರಮಾತ್ಮನೆಂಬುದನ್ನು ಮರೆಯಬಾರದು.

Tuesday, August 16, 2011

ತನುವೇನು ಮನವೇನು ಘನವೇನು ರಸವೇನು (52)


ತನುವೇನು ಮನವೇನು ಘನವೇನು ರಸವೇನು |
ಗುಣವೇನು ಜಡವೇನು ಜೀವಬಲವೇನು ||
ಅನವಧಿಕ ಮೂಲ ಸ್ವಯಂಭೂತ ಚೈತನ್ಯ |
ಧುನಿಯ ಶೀಕರವೆಲ್ಲ - ಮರುಳ ಮುನಿಯ || (೫೨)

ದೇಹ, ಮನಸ್ಸು, ಘನವಸ್ತು, ರಸಪದಾರ್ಥ, ವಸ್ತುಗಳ ಸ್ವಭಾವಗಳು, ಜಡವಸ್ತುಗಳು ಮತ್ತು ಜೀವಗಳ ಶಕ್ತಿಗಳು, ಇವುಗಳೆಲ್ಲವೂ ಅಪರಿಮಿತ(ಅನವಧಿಕ)ವಾದ, ಆದಿಯಿಂದ ತಾನೇ ತಾನು (ಸ್ವಯಂಭೂತ) ಹುಟ್ಟಿರುವ ಶಕ್ತಿಗಳು. ಇವುಗಳೆಲ್ಲವೂ ಪರಮಾತ್ಮನೆಂಬ ಹೊಳೆ(ಧುನಿ)ಯ ತುಂತುರು ಹನಿ(ಶೀಕರ)ಗಳು.

Friday, August 5, 2011

ಆವಾವ ಜನ್ಮಂಗಳಜ್ಜಮುತ್ತಜ್ಜದಿರೊ (51)

ಆವಾವ ಜನ್ಮಂಗಳಜ್ಜಮುತ್ತಜ್ಜದಿರೊ
ಆವಿರ‍್ಭವಿಪರಿಂದು ಮಗ ಮೊಮ್ಮೊಗರೆನಿಸಿ ||
ಆವಗಂ ಸಾವಿರೂಟೆಯೆ ನೀರ‍್ಗಳಿಂ ನಮ್ಮ |
ಜೀವನದಿ ಬೆಳೆಯುವುದೊ - ಮರುಳ ಮುನಿಯ || (೫೧)

 (ಜನ್ಮಂಗಳ+ಅಜ್ಜ)(ಆವಿರ‍್ಭವಿಪರ್+ಇಂದು)(ಸಾವಿರ+ಊಟೆಯೆ)

 ಒಂದೊಂದು ಜೀವವೂ ಪ್ರಕೃತಿ ಪುರುಷ ವಿಲಾಸವೆಂಬ ಮಹಾ ಸಮುದ್ರದ ಒಂದು ಅಲೆ ಎಂದು ಹೇಳಿದೆವಲ್ಲವೇ  , ಇಂದು ಮಗ ಮತ್ತು ಮೊಮ್ಮಕ್ಕಳಾಗಿ ಹುಟ್ಟುತ್ತಾರೆ (ಅವಿರ‍್ಭವಿಪರು). ಯಾವಾಗಲೂ (ಆವಗಂ) ಸಾವಿರಾರು ಚಿಲುಮೆ(ಊಟೆ)ಗಳ ನೀರುಗಳಿಂದ ನಮ್ಮ ಜೀವವೆಂಬ ನದಿ ವೃದ್ಧಿ ಹೊಂದುತ್ತದೆ. ನಾವು ಕಾಣುವ ಅಲೆ ಎಲ್ಲಿಂದಲೋ ಬೀಸಿದ ಗಾಳಿಯ ಪರಿಣಾಮವಾಗಿ ಉಂಟಾದ ತರಂಗಮಾಲೆಯ ಒಂದು ಅಲೆ. ಅದು ಸಮುದ್ರದಿಂದ ಸ್ವತಂತವಲ್ಲ. ಅದು ತಾನೇ ಉಂಟಾದದ್ದೂ ಅಲ್ಲ - ಹಿಂದಿನ ತರಂಗಗಳ ಪರಿಣಾಮ ಹೀಗೆ. ಈಗ ಕಾಣುತ್ತಿರುವ ಒಬ್ಬ ಮನುಷ್ಯನ ದೇಹ ಮನಸ್ಸುಗಳಲ್ಲಿ ಅವನ ಅಪ್ಪ ತಾತ ಮುತ್ತಜ್ಜ ಮುಂತಾದವರೆಲ್ಲ ದೇಹ ಪ್ರಕೃತಿ ಮನೋಭಾವಗಳು ಅವಿರ್ಭವಿಸಿರುತ್ತವೆ. ಒಂದು ನದಿ ಹೇಗೆ ಅನೇಕ ನದಿಗಳ ಹಳ್ಳಗಳ ನೀರನ್ನು ಸೇರಿಸಿಕೊಂಡು ಮುಂದೆ ಹರಿಯುವುದೋ ಹಾಗೆ ನಮ್ಮ ಜೀವ ನದಿಯೂ ನಮ್ಮ ಇಂದಿನ ವಂಶದವರ ಗುಣಗಳನ್ನು ಕೂಡಿಕೊಂಡೇ ಮುಂದೆ ಸಾಗುತ್ತದೆ. ನಾವು ತಿಳಿದು ಕೊಂಡಷ್ಟು ನಾವು ಸ್ವತಂತ್ರರಲ್ಲ.
(ಮರುಳ ಮುನಿಯನ ಕಗ್ಗಕ್ಕೆ ಒಂದು ವಿವರಣೆ: ಡಿ.ಆರ್.ವೆಂಕಟರಮಣನ್)

ಪುರುಷ ಪ್ರಕೃತಿಯರ ಪರಸ್ಪರಾನ್ವೇಷಣೆಯೆ (50)

ಪುರುಷ ಪ್ರಕೃತಿಯರ ಪರಸ್ಪರಾನ್ವೇಷಣೆಯೆ
ನಿರವಧಿಕ ವಿಶ್ವ ಜೀವ ವಿಲಾಸ ಜಲಧಿ ||
ತೆರೆಯೊಂದು ನಾನಾಸಮುದ್ರದೊಳಗೆಂದಿರ‍್ಪ |
ಸರಸತೆಯೆ ಸದ್ಗತಿಯೊ - ಮರುಳ ಮುನಿಯ || (೫೦)

(ಪರಸ್ಪರ+ಅನ್ವೇಷಣೆಯೆ)(ತೆರೆ+ಒಂದು)(ನಾನಾ ಸಮುದ್ರದ+ಒಳಗೆ+ಎಂದಿರ‍್ಪ) 

 ಪುರುಷ ಮತ್ತು ಪ್ರಕೃತಿಯರ ಒಬ್ಬರನೊಬ್ಬರ ಹುಡುಕುವಿಕೆಯೇ (ಅನ್ವೇಷಣೆಯೆ) ಪ್ರಪಂಚದ ಜೀವಿಗಳ ಮಿತಿಯಿಲ್ಲದ (ನಿರವಧಿಕ) ಕ್ರೀಡೆ. ಒಂದೇ ಒಂದು ಅಲೆಯು ಅನೇಕ ಸಮುದ್ರಗಳಲ್ಲಿ ಇರುವ ಚೆಲ್ಲಾಟವೇ ಅದಕ್ಕೆ ಮೋಕ್ಷ ದೊರಕುವಂತೆ ಮಾಡುತ್ತದೆ. ಒಂದು ಆತ್ಮವು ಬೇರೆ ಬೇರೆ ಸ್ಥಳಗಳಲ್ಲಿ ಜನ್ಮತಾಳಿ ಆಟವಾಡಿ ಮೋಕ್ಷವನ್ನು ಪಡೆಯುತ್ತದೆ.

Monday, August 1, 2011

ಸಂತಾನ ಸಾವಿರಗಳೊಂದೆ ಬೀಜದೊಳಡಕ (49)

ಸಂತಾನ ಸಾವಿರಗಳೊಂದೆ ಬೀಜದೊಳಡಕ |
ಸ್ವಾಂತವೊಂದರೊಳೆ ಭಾವ ಸಹಸ್ರವಡಕ ||
ಸಾಂತ ನರದೇಹದೊಳನಂತ ಚೇತನವಡಕ |
ಚಿಂತಿಸೀ ಸೂಕ್ಷವನು - ಮರುಳ ಮುನಿಯ || (೪೯)



‎(ಸಾವಿರಗಳು+ಒಂದೆ)(ಬೀಜದ+ಒಳು+​ಅಡಕ)(ಸ್ವಾಂತ+ಒಂದರ+ಒಳೆ)(ಸಹಸ್​ರವು+ಅಡಕ)
(ನರದೇಹದ+ಒಳು+ಅನಂತ)(ಚೇತನವು+ಅ​ಡಕ)(ಚಿಂತಿಸು+ಈ)

ಒಂದೇ ಒಂದು ಬೀಜದಿಂದ ಸಾವಿರಾರು ಸಂತಾನಗಳು ಉತ್ಪತ್ತಿಯಾಗುತ್ತವೆ. ಒಂದು ಮನಸ್ಸಿನ (ಸ್ವಾಂತ) ಒಳಗಡೆ ಸಹಸ್ರಾರು ಆಲೋಚನೆಗಳು ಅಡಗಿರುತ್ತವೆ. ಕೊನೆಗಳ್ಳತಕ್ಕಂತಹ (ಸಾಂತ) ಮನುಷ್ಯನ ದೇಹದಲ್ಲಿ ಕೊನೆಯಿಲ್ಲದ (ಅನಂತ) ಚೈತನ್ಯ(ಚೇತನ)ಗಳು ಅಡಕವಾಗಿವೆ. ಈ ವಿಚಾರವನ್ನು ಕುರಿತು ಯೋಚಿಸು.

ಸರ್ವೋಽಹಮಿಂದೆ ನಿರ್ಮೂಲಮಪ್ಪುದಹಂತೆ (48)

ಸರ್ವೋಽಹಮಿಂದೆ ನಿರ್ಮೂಲಮಪ್ಪುದಹಂತೆ|
ನಿರ್ವಿಕಾರದ ಶಾಂತಿ ನಿರಹಂತೆಯಿಂದೆ ||
ನಿರ್ವಾಂಛೆ ಶಾಂತಿಯಿಂದದು ಸರ್ವಸಮದೃಷ್ಟಿ|
ಸರ್ವಾತ್ಮ್ಯವಾನಂದ - ಮರುಳ ಮುನಿಯ || (೪೮)



(ಸರ್ವೋಽಹಂ+ಇಂದೆ)(ನಿರ್ಮೂಲಂ+​ಅಪ್ಪುದು+ಅಹಂತೆ)(ಶಾಂತಿಯಿಂದ+ಅ​ದು)

ಸರ್ವವೂ ನಾನೇ ಎಂಬ ಭಾವನೆಯಿಂದ (ಸರ್ವೋಽಹಂ) ಅಹಂಕಾರವು (ಅಹಂತೆ) ನಿರ್ಮೂಲವಾಗುತ್ತದೆ. ಈ ಅಹಂಕಾರ ಭಾವನೆ ಇಲ್ಲದಿರುವುದರಿಂದ ತಳಮಳವಿಲ್ಲದ ನೆಮ್ಮದಿ ದೊರಕುತ್ತದೆ. ಬಯಕೆಗಳಿಲ್ಲದಿರುವುದರಿಂದ (ನಿರ್ವಾಂಛೆ), ನೆಮ್ಮದಿ ಮತ್ತು ಎಲ್ಲರನ್ನೂ ಸಮನಾಗಿ ನೋಡುವ ಭಾವನೆಯುಂಟಾಗಿ ಆನಂದಕ್ಕೆ ಕಾರಣವಾಗುತ್ತದೆ.

ಏಕದಿನನೇಕಗಳು ಸಾಕಾರನಾಮಗಳು (47)

ಏಕದಿನನೇಕಗಳು ಸಾಕಾರನಾಮಗಳು |
ಲೋಕವಿದು ನೋಡೆ ನೀಂ (ಕೃತ್ಸ್ನ ದರ್ಶನದಿಂ) ||
ಏಕದೊಳ್ ನೀನು ಸಾಕಲ್ಯವನ್ನನುಭವಿಸೆ |
ಸಾಕಲ್ಯಯೋಗವದು - ಮರುಳ ಮುನಿಯ || (೪೭)



(ಏಕದಿಂ+ಅನೇಕಗಳು) (ಸಾಕಲ್ಯವನ್+ಅನುಭವಿಸೆ)

ನೀನು ಪೂರ್ಣವಾಗಿ(ಕೃತ್ಸ್ನ ದರ್ಶನದಿಂ) ಈ ಪ್ರಪಂಚವನ್ನು ಕಂಡಾಗ, ಇದು ಒಂದರಿಂದ ಬಹುವಾಗಿ ಆಗಿರುವ ವಿಧವಿಧವಾದ ರೂಪ (ಸಾಕಾರ) ಮತ್ತು ಹೆಸರು(ನಾಮ)ಗಳಿಂದ ಕೂಡಿರುವ ಪ್ರಪಂಚವೆಂದು ತಿಳಿಯುತ್ತದೆ. ನಿನ್ನ ಏಕತೆಯಲ್ಲಿಯೇ ನೀನು ಪ್ರಪಂಚದೆಲ್ಲವನ್ನೂ ಅನುಭವಿಸಿದಲ್ಲಿ ಪರಿಪೂರ್ಣತೆ(ಸಾಕಲ್ಯ)ಯ ಪ್ರಾಪ್ತಿಯಾಗುತ್ತದೆ.

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ (46)

ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ |
ಲೇಶದೊಳಗರಸುವೆಯ ರಾಶಿಯಮಿತವನು ? ||
ರಾಶಿಯೆಲ್ಲವ ಕಾಣ್ಬೊಡದರೊಳಗೆ ಕರಗಿ ಬೆರೆ |
ನಾಶವಕ್ಕೆ ಪೃಥಕ್ತ್ವ - ಮರುಳ ಮುನಿಯ || (೪೬)



‎(ಈಶನ+ಇಚ್ಛೆ)(ನೀನು+ಅದರ+ಒಳು+​ಒಂದು)(ಲೇಶದ+ಒಳಗೆ+ಅರಸುವೆಯ)
(ರಾಶಿಯ+ಅಮಿತವನು)(ಕಾಣ್ಬೊಡೆ+ಅ​ದರ+ಒಳಗೆ)

ಪರಮಾತ್ಮನ ಅಪೇಕ್ಷೆ(ಇಚ್ಛೆ)ಯಿಂದ ಈ ಬ್ರಹ್ಮಾಂಡ ಸಾಗರದ ನಿರ್ಮಾಣವಾಗಿದೆ. ನೀನು ಆ ಸಾಗರದ ಒಂದು ಸಣ್ಣ ಕಣ ಮಾತ್ರ. ಹೀಗಿರುವಾಗ, ಈ ಸ್ವಲ್ಪ(ಲೇಶ)ದರಲ್ಲಿ ನೀನು ರಾಶಿಯ ಅಪಾರತೆ(ಅಮಿತ)ಯನ್ನು ಹುಡುಕು(ಅರಸು)ವೆಯೇನು? ಇದು ಅಸಾಧ್ಯವಾದ ಕೆಲಸ. ನೀನಾದರೋ ಒಂದು ಕಣ. ಅದು ಅಪಾರ ರಾಶಿ. ಈ ಸಂಪೂರ್ಣ ರಾಶಿಯನ್ನು ಕಾಣಬೇಕೆಂದರೆ, ನೀನು ಅದರ ಒಳಗೆ ಕರಗಿ ಬೆರೆತು ಹೋಗು. ಯಾವಾಗ ನೀನು ಅದರ ಒಂದು ಭಾಗವಾಗುವೆಯೋ ಆವಾಗ ನೀನು ರಾಶಿಯ ಅಪಾರತೆಯನ್ನು ಕಾಣಲಿಕ್ಕಾಗುತ್ತದೆ. ಈ ಕರಗುವಿಕೆಯಲ್ಲಿ ನಿನಗೆ ಇನ್ನೂ ಒಂದು ಲಾಭ ಉಂಟು. ಅದು, ನಿನ್ನ ಅಹಂ ಮತ್ತು ಬೇರೆತನದ ಅರಿವು(ಪೃಥಕ್ತ್ವ) ನಾಶವಾಗಲಿಕ್ಕೆ ಕಾರಣವಾಗುತ್ತದೆ.

ಕ್ಷಣವಮೂರ್ತಾನಂತ ಕಾಲದುಪಕೃತಿ ಮೂರ್ತಿ (45)

ಕ್ಷಣವಮೂರ್ತಾನಂತ ಕಾಲದುಪಕೃತಿ ಮೂರ್ತಿ |
ಕಣವಮೇಯಾದಿ ವಸ್ತುವಿನಮೇಯಮುಖ ||
ಕ್ಷಣಿಕವನುಪೇಕ್ಷಿಪೆಯ? ಗಮಕವದನಂತಕ್ಕೆ |
ಅಣು ಮಹತ್ಪ್ರತಿನಿಧಿಯೊ - ಮರುಳ ಮುನಿಯ || (೪೫)



(ಕ್ಷಣವು+ಅಮೂರ್ತ+ಅನಂತ)(ಕಾಲದ​+ಉಪಕೃತಿ)(ಕಣವು+ಅಮೇಯ+ಆದಿ)
(ಕ್ಷಣಿಕವನು+ಉಪೇಕ್ಷಿಪೆಯ)(ಗಮಕ​ವದು+ಅನಂತಕ್ಕೆ)(ಮಹತ್+ಪ್ರತಿನಿ​ಧಿಯೊ)

ಕ್ಷಣ ಎನ್ನುವುದಕ್ಕೆ ಆಕಾರವಿಲ್ಲ (ಅಮೂರ್ತ) ಮತ್ತು ಅದಕ್ಕೆ ಕೊನೆಯೂ ಇಲ್ಲ (ಅನಂತ). ಸಮಯದ ನೆರವಿನಿಂದ (ಉಪಕೃತಿ) ಮೂರ್ತಿಯು ದೊರಕುತ್ತದೆ. ಕಣವು ಅಳೆತಕ್ಕೆ ಸಿಗದಂತಹ (ಅಮೇಯ) ಪದಾರ್ಥದ, ಅಳೆತಕ್ಕೆ ಸಿಗುವ (ಮೇಯ) ಮುಖ. ಅಶಾಶ್ವತ(ಕ್ಷಣಿಕ)ವಾಗಿರುವುದನ್​ನು ನೀನು ಅಲಕ್ಷಿಸುವೆಯೇನು (ಉಪೇಕ್ಷಿಪೆಯ)? ಶಾಶ್ವತವಾಗಿರುವುದಕ್ಕೆ (ಅನಂತ) ಅದು ಸಾಕ್ಷಿ (ಗಮಕ). ಏಕೆಂದರೆ ಕ್ಷಣಿಕವಾಗಿರುವುದರಿಂದ ನಾವು ಶಾಶ್ವತವಾಗಿರುವುದರ ಇರುವಿಕೆಯನ್ನು ತಿಳಿಯಬಹುದು. ಇಲ್ಲದಿದ್ದರೆ ಇಲ್ಲ. ಅಣು ಇದರ ಮಹತ್ತಿನ ಪ್ರತಿನಿಧಿ.