Friday, November 30, 2012

ಹಿತಬೋಧಕರು ಸಾಲದುದರಿಂದಲಲ್ಲ ವೀ (322)

ಹಿತಬೋಧಕರು ಸಾಲದುದರಿಂದಲಲ್ಲ ವೀ-|
ಕ್ಷಿತಿಗೆ ದುರ್ದಶೆ ಬಂದುದವಿಧೇಯರಿಂದ ||
ದ್ಯುತಿ ಕಣ್ಣೊಳಿರ್ದೊಡೇಂ ಶಿರದಿ ಮದ್ಯರಸಂಗ- |
ಳತಿಶಯಂ ಸೇರಿರಲು - ಮರುಳ ಮುನಿಯ || (೩೨೨)

(ಸಾಲದು+ಅದರಿಂದಲ್+ಅಲ್ಲ)(ಬಂದುದು+ಅವಿಧೇಯರಿಂದ)(ಕಣ್ಣೊಳ್+ಇರ್ದೊಡೇಂ)(ಮದ್ಯರಸಂಗಳ್+ಅತಿಶಯಂ)

ಒಳ್ಳೆಯದನ್ನು ಹೇಳುವವರು ಸಾಲದಿರುವುದರಿಂದಲ್ಲ, ಆದರೆ ಹೇಳಿದುದ್ದನ್ನು ಪಾಲಿಸದಿರುವವರಿಂದ, ಬದುಕಿಗೆ ಕೆಟ್ಟಸ್ಥಿತಿ ಬಂತು. ಮೆದುಳಿನಲ್ಲಿ ವಿಪರೀತವಾಗಿ ಮಾದಕದ್ರವ್ಯಗಳ ಪರಿಣಾಮ (ಶಿರದಿ ಮದ್ಯರಸಂಗಳ್) ಸೇರಿಕೊಂಡಿರುವಾಗ, ಕಣ್ಣುಗಳಲ್ಲಿ ಕಾಂತಿ(ದ್ಯುತಿ)ಯಿದ್ದರೂ ಏನು ಉಪಯೋಗ?

(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our earth now is in a pitiable condition not because of the
Dearth of good advisers but because of disobedient people,
It is no use of the light shining in the eyes
When the head is reeling with excessive intoxication – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 29, 2012

ಈ ದಿನದ ಸುಖಕೆ ನೀನಿಂದಿನಾ ಲಾಭಕ್ಕೆ (321)

ಈ ದಿನದ ಸುಖಕೆ ನೀನಿಂದಿನಾ ಲಾಭಕ್ಕೆ |
ಗೈದ ಕರ್ಮದ ಭೂತವಿಂದೆ ಮಲಗುವುದೇಂ? ||
ಕಾದು ಹೊಂಚಿಟ್ಟೆಂದೊ ನಿನ್ನನೆತ್ತಲೊ ಪಿಡಿದು |
ವೇಧಿಸದೆ ತೆರೆಳದದು - ಮರುಳ ಮುನಿಯ || (೩೨೧)

(ನೀನ್+ಇಂದಿನಾ)(ಭೂತ+ಇಂದೆ)(ಹೊಂಚಿಟ್ಟು+ಎಂದೊ)(ನಿನ್ನನ್+ಎತ್ತಲೊ)(ತೆರೆಳದು+ಅದು)

ಈವತ್ತಿನ ನಿನ್ನ ಸಂತೋಷ ಮತ್ತು ನೆಮ್ಮದಿಗಳಿಗೆ ಮತ್ತು ನಿನ್ನ ಈವತ್ತಿನ ಲಾಭಕ್ಕೋಸ್ಕರ ನೀನು ಹಿಂದೆ ಮಾಡಿದ ಕರ್ಮಗಳ ಫಲಗಳು ಸುಮ್ಮನಿರುತ್ತವೆಯೇನು? ಅವುಗಳು ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡು ಕಾದಿದ್ದು ನಿನ್ನನ್ನು ಯಾವುದೋ ಒಂದು ಸಮಯದಲ್ಲಿ ಹಿಡಿದು ಬಾಧಿಸದೆ(ವೇಧಿ) ಹೋಗುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Will the ghost of what you have done for today’s happiness and profit
Sleep today itself and take no revenge? What do you think?
It will bide time, pounce upon you at the right moment
And smash you before leaving you alone – Marula Muniya
(Translation from "Thus Sang Marula Muniya" by Sri. Narasimha Bhat)

Wednesday, November 28, 2012

ಕೃತಕರ್ಮಫಲ ಶೇಷವಂ ಜೀವಿಗುಣಿಸುವುದು (320)

ಕೃತಕರ್ಮಫಲ ಶೇಷವಂ ಜೀವಿಗುಣಿಸುವುದು |
ಇತರ ಜೀವಿಗತಿಗದನಿಮಿತ್ತವೆನಿಸುವುದು ||
ಸತತ ಧರ್ಮದಿ ಜಗವನೆಲ್ಲ ತಾಂ ಪೊರೆಯುವುದು |
ತ್ರಿತಯವಿದು ದೈವಗತಿ - ಮರುಳ ಮುನಿಯ || (೩೨೦)

(ಜೀವಿಗೆ+ಉಣಿಸುವುದು)(ಜೀವಿಗತಿಗೆ+ಅದು+ಅನಿಮಿತ್ತ+ಎನಿಸುವುದು)

ಹಿಂದಿನ ಜನ್ಮಗಳಲ್ಲಿ ಮಾಡಿದ ಉಳಿಕಗಳ ಪರಿಣಾಮಗಳನ್ನು ಅನುಭವಿಸುವಂತೆ ಮಾಡುವುದು. ಪ್ರಪಂಚದಲ್ಲಿರುವ ಬೇರೆ ಜೀವಿಗಳಿಗೆ ಇದನ್ನು ಆಕರಣವೆನ್ನಿಸುವುದು. ನಿರಂತರವಾದ ಧರ್ಮಪಾಲನೆಯಿಂದ ಪ್ರಪಂಚವೆಲ್ಲವನ್ನೂ ಕಾಪಾಡುವುದು. ಪ್ರಪಂಚದಲ್ಲಿ ದೇವರ ಸಂಕಲ್ಪ ಕ್ರಿಯೆಗಳು ಈ ರೀತಿ ಮೂರು ರೂಪಗಳನ್ನು ತಾಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Fate feeds a being with the fruits of his past karma
Fate makes it a cause to shape the lives of other beings
He sustains all the world with dharma
Thus threefold are the functions of Destiny – Marula Muniya
(Translation from "Thus Sang Marula Muniya" by Sri. Narasimha Bhat)

Tuesday, November 27, 2012

ತನ್ನ ತಾ ಗೆಲದೆ ಲೋಕದೊಳೆಲ್ಲ ಗೆಲುವವನು (319)

ತನ್ನ ತಾ ಗೆಲದೆ ಲೋಕದೊಳೆಲ್ಲ ಗೆಲುವವನು |
ಮುನ್ನ ರಾವಣನಹನು ನರರು ನಗುತಿಹರು ||
ತಿನ್ನುವನು ಜಗವ ತಾಂ ತನಗೆ ತುತ್ತಾಗುವನು |
ಪುಣ್ಯವೇನಿದರಲ್ಲಿ - ಮರುಳ ಮುನಿಯ || (೩೧೯)

(ಲೋಕದೊಳ್+ಎಲ್ಲ)(ಗೆಲುವ+ಅವನು)(ರಾವಣನ್+ಅಹನು)(ತುತ್ತು+ಆಗುವನು)(ಪುಣ್ಯ+ಏನ್+ಇದರಲ್ಲಿ)

ತನ್ನನ್ನು ತಾನೇ ಜಯಿಸಿಕೊಳ್ಳದೆ ಪ್ರಪಂಚದಲ್ಲಿರುವುದೆಲ್ಲವನು ಗೆಲ್ಲುವವನು, ಎಂಬುದಕ್ಕೆ ಮೊದಲ ಉದಾಹರಣೆ ಎಂದರೆ ರಾವಣ. ಮಿಕ್ಕ ಎಲ್ಲಾ ಜನರು ಅವನನ್ನು ನೋಡಿ ನಗುತ್ತಿದ್ದಾರೆ. ಜಗತ್ತನ್ನು ನುಂಗಿ ನೀರು ಕುಡಿಯಲು ಯತ್ನಿಸುವವನು ತನಗೆ ತಾನೇ ಕವಳವಾಗುತ್ತಾನೆ. ಇದರಲ್ಲಿ ಪುಣ್ಯದ ಪ್ರಶ್ನೆಯೇನೂ ಉದ್ಭವಿಸುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If a person conquers everything in the world except his own self
People will nickname him Ravana and will ridicule him
He who eats the world will have to eat himself at last
What is the virtue in it? – Marula Muniya
(Translation from "Thus Sang Marula Muniya" by Sri. Narasimha Bhat)

Monday, November 26, 2012

ಕಾರ್ಮುಗಿಲು ನಿನ್ನ ಕುರುಡಾಗಿಪ್ಪುದರಗಳಿಗೆ (318)

ಕಾರ್ಮುಗಿಲು ನಿನ್ನ ಕುರುಡಾಗಿಪ್ಪುದರಗಳಿಗೆ |
ಕರ್ಮಪಟಲವುಮಂತು ಸುಳಿದು ಪಾರುವುದು ||
ನಿರ್ಮಲಂ ಗಗನಮಪ್ಪಂದು ತೂಂಕಡಿಸದಿರು |
ಪೆರ‍್ಮೆಯದು ಪುರುಷತೆಗೆ - ಮರುಳ ಮುನಿಯ || (೩೧೮)

(ಕುರುಡು+ಆಗಿಪ್ಪುದು+ಅರಗಳಿಗೆ)(ಕರ್ಮಪಟಲವುಂ+ಅಂತು)(ಗಗನಂ+ಅಪ್ಪಂದು)(ತೂಂಕಡಿಸದೆ+ಇರು)(ಪೆರ‍್ಮೆ+ಅದು)
ಕಪ್ಪು ಮೋಡಗಳು (ಕಾರ್ಮುಗಿಲು) ಒಂದು ಅರ್ಧಗಳಿಗೆಯಷ್ಟು ಸಮಯ ನಿನ್ನನ್ನು ಕುರುಡನನ್ನಾಗಿಸಿಸುತ್ತವೆ. ಕರ್ಮದ ಪೊರೆ(ಪಟಲ)ಯೂ ಸಹ ಇದೇ ರೀತಿ ಸುಳಿದು ಹಾರುತ್ತದೆ. ಕಪ್ಪು ಮೋಡಗಳು ಕರಗಿ ಆಕಾಶವು ಸ್ವಚ್ಛವಾಗಿರುವಾಗ ನೀನು ತೂಕಡಿಸಬೇಡ. ಅದು ನಿನ್ನ ಪುರುಷತ್ವವನ್ನು ಹಿರದ(ಪೆರ‍್ಮೆ)ನ್ನಾಗಿಸುವ ಸಮಯ. ಅದನ್ನು ಕಳೆದುಕೊಳ್ಳಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dark clouds may blind your vision for a short time
The veil of Karma likewise may hover for sometime and disappear
But do not doze when the sky become cloudless
This would add to the greatness of man – Marula Muniya || (318)
(Translation from "Thus Sang Marula Muniya" by Sri. Narasimha Bhat)

Friday, November 23, 2012

ಗೈದ ಪಾಪದ ನೆನಪಿನಿರಿತವಾತ್ಮಕೆ ಮದ್ದು (317)

ಗೈದ ಪಾಪದ ನೆನಪಿನಿರಿತವಾತ್ಮಕೆ ಮದ್ದು |
ಆದೊಡೆಳುವೇಂ ಪಾಲೆ ಜೀವ ಪೋಷಣೆಗೆ? ||
ರೋದನೆಯನುಳಿದಾತ್ಮಶೋಧನೆಯನಾಗಿಪುದು |
ಸಾಧು ನಿಷ್ಕ್ರುತಿಮಾರ್ಗ - ಮರುಳ ಮುನಿಯ || (೩೧೭)

(ನೆನಪಿನ+ಇರಿತ+ಆತ್ಮಕೆ)(ಆದೊಡು+ಅಳುವೇಂ)(ರೋದನೆಯಂ+ಉಳಿದ+ಆತ್ಮಶೋಧನೆಯನ್+ಆಗಿಪುದು) 

ಮಾಡಿದ ಹೀನಕಾರ್ಯಗಳ ಚುಚ್ಚುವ ನೆನಪು ಆತ್ಮಕ್ಕೆ ಔಷದಿ ಆಗುತ್ತದೆ. ಆದರೆ ಅಳುವುದು ಜೀವವನ್ನು ಪೋಷಿಸುವ ಹಾಲಿನಂತಾಗಲು ಸಾಧ್ಯವೇನು? ಅಳುವನ್ನು (ರೋದನೆಯನ್) ತೊರೆದ ಆತ್ಮವನ್ನು ಶುದ್ಧಿಮಾಡುವಿಕೆ ಉತ್ತಮವಾದ (ಸಾಧು) ಪರಿಹಾರದ (ನಿಷ್ಕ್ರುತಿ) ದಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The stabbing memories of the past sins are medicines to the sick soul
But can sorrow offer nourishment to life like milk?
In doing soul-searching and giving up all wailing
Lies the proper remedial course – Marula Muniya
(Translation from "Thus Sang Marula Muniya" by Sri. Narasimha Bhat)

Thursday, November 22, 2012

ಪೌರುಷ ಪ್ರಗತಿಮಾರ್ಗಗಳ ನೋಡೇಸುಜನ (316)

ಪೌರುಷ ಪ್ರಗತಿಮಾರ್ಗಗಳ ನೋಡೇಸುಜನ |
ದೂರದಿಂ ಕಂಡು ಶುಭ ಮೇರುಶಿಖರವನು ||
ಧೀರ ಸಾಹಸದಿಂದೆ ಪಾರಮಾರ್ಥಿಕದಿಂದೆ |
ದಾರಿಪಂಜುವೊಲಿರು - ಮರುಳ ಮುನಿಯ || (೩೧೬)

(ನೋಡೆ+ಏಸುಜನ)(ದಾರಿಪಂಜುವೊಲ್+ಇರು)

ಶೌರ್ಯ ಮತ್ತು ಏಳಿಗೆಗಳ ದಾರಿಗಳನ್ನು ಕಾಣಲು, ಎಷ್ಟೋ ಜನರು ದೂರದಿಂದ ಮಂಗಳಕರವಾದ ಮೇರುಪರ್ವತದ ಶಿಖರವನ್ನು ನೋಡಿ ತಮ್ಮ ಧೈರ್ಯ, ಸಾಹಸ ಮತ್ತು ಪರಲೋಕಕ್ಕೆ ಅನುಗುಣವಾದ ಧರ್ಮದಿಂದ, ಆ ಹಾದಿಗೆ, ದಾರಿದೀಪ(ಪಂಜು)ಗಳಿಂತಿರುವರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Seeing the summit of the auspicious Mount Meru
How many people are inspired to scale new heights
And walk the path of progress and valour! With the spirit of adventure
And spiritual vision they live as beacon-lights – Marula Muniya
(Translation from "Thus Sang Marula Muniya" by Sri. Narasimha Bhat)

ವಿಧಿಯನೆದುರಿಸಿ ಹೋರಿ ಪುರುಷತೆಯ ತುದಿಗೇರಿ (315)

ವಿಧಿಯನೆದುರಿಸಿ ಹೋರಿ ಪುರುಷತೆಯ ತುದಿಗೇರಿ |
ಬದುಕಿನೆಲ್ಲನುಭವಗಳಿಂ ಪಕ್ವನಾಗಿ ||
ಹೃದಯದಲಿ ಜಗದಾತ್ಮನಂ ಭಜಿಪ ನಿರ್ದ್ವಂದ್ವ - |
ನಧಿಪುರುಷನೆನಿಸುವನೊ - ಮರುಳ ಮುನಿಯ || (೩೧೫)

(ವಿಧಿಯನ್+ಎದುರಿಸಿ)(ತುದಿಗೆ+ಏರಿ)(ಬದುಕಿನ+ಎಲ್ಲ+ಅನುಭವಗಳಿಂ)(ನಿರ್ದ್ವಂದ್ವನ್+ಅಧಿಪುರುಷನ್+ಎನಿಸುವನೊ)

ವಿಧಿಯನ್ನು ಎದುರಿಸಿ, ಅದರ ಜೊತೆ ಹೋರಾಡಿ, ಪುರುಷತೆಯ ಉನ್ನತ ಶಿಖರವನ್ನು ಹತ್ತಿ, ಬಾಳಿನ ಸಕಲ ಅನುಭವಗಳಿಂದ ಮಾಗಿ, ತನ್ನ ಹೃದಯದಲ್ಲಿ ಪರಮಾತ್ಮನನ್ನು ಅರಾಧಿಸುವ ಮತ್ತು ಸುಖ ದುಃಖಾದಿ ದ್ವಂದ್ವರಹಿತನಾಗಿರುವವನು (ನಿರ್ದ್ವಂದ್ವ) ಪುರುಷೋತ್ತಮ(ಅಧಿಪುರುಷ)ನೆಂದೆನ್ನಿಸಿಕೊಳ್ಳುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who bravely fights Fate and reaches the acme of human state
One who has become fully ripe imbibing all the experience of life
One who always prays to the universal soul in heart
And rises above dualities is the Superhuman Self – Marula Muniya
(Translation from "Thus Sang Marula Muniya" by Sri. Narasimha Bhat)

ಶಿರವ ಬಾಗದೆ ನಿಂದು ನಿನ್ನ ವಿಧಿ ಬಡಿವಂದು (314)

ಶಿರವ ಬಾಗದೆ ನಿಂದು ನಿನ್ನ ವಿಧಿ ಬಡಿವಂದು |
ಸರಸಿಯಾಗಿಯೆ ಜಗದ್ವಂದ್ವಗಳ ಹಾಯ್ದು ||
ಪುರುಷಪದದಿಂದೆ ನೀನಧಿಪುರುಷ ಪದಕೇರು |
ಗುರಿಯದುವೆ ಜಾಣಂಗೆ - ಮರುಳ ಮುನಿಯ || (೩೧೪)

ನಿನ್ನನ್ನು ವಿಧಿಯು ಶಿಕ್ಷಿಸುವಾಗ, ನೀನು ನಿನ್ನ ತಲೆಯನ್ನು ಬಗ್ಗಿಸದೆ ನಿಂತು, ರಸಿಕನಾಗಿಯೇ ಈ ಜಗತ್ತಿನ ಜಟಿಲತೆಗಳನ್ನು ದಾಟಿ, ಪುರುಷನ ಸ್ಥಾನದಿಂದ ಪುರುಷೋತ್ತಮ (ಅಧಿಪುರುಷ)ನ ಸ್ಥಾನಕ್ಕೆ ಅರ್ಹನಾಗು. ಬುದ್ಧಿವಂತನಾದವನಿಗೇ ಇದೇ ಧ್ಯೇಯವಾಗಿರಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ -ತಾತ್ಪರ್ಯ")

Standing erect with your head held high when Fate whacks you
Cross the pairs of opposites with unfailing cheerfulness
Rise from the human state to the Superhuman plane
This itself is the goal for the wise – Marula Muniya (314)
(Translation from "Thus Sang Marula Muniya" by Sri. Narasimha Bhat)

ಸೀಮೆ ಜಗಕೆಲ್ಲಿಹುದು ವ್ಯೋಮದೊಳಗೇನಿಲ್ಲ (313)

ಸೀಮೆ ಜಗಕೆಲ್ಲಿಹುದು ವ್ಯೋಮದೊಳಗೇನಿಲ್ಲ |
ನೇಮಿಯಿರದಾಚಕ್ರದಲಿ ನಾಭಿ ನೀನು ||
ನಾಮರೂಪಾಭಾಸ ನಭದ ಮೇಘವಿಲಾಸ |
ಸ್ಥೇಮಿ ಚಿನ್ಮಯ ನೀನು - ಮರುಳ ಮುನಿಯ || (೩೧೩)

(ಜಗಕೆ+ಎಲ್ಲಿ+ಇಹುದು)(ವ್ಯೋಮದೊಳಗೆ+ಏನಿಲ್ಲ)(ನೇಮಿಯಿರದ+ಆ+ಚಕ್ರದಲಿ)(ನಾಮರೂಪ+ಆಭಾಸ)

ಈ ಜಗತ್ತಿನ ಗಡಿ (ಸೀಮೆ) ಎಲ್ಲಿಯವರೆಗಿದೆ? ಅದು ಆಕಾಶಕ್ಕೆ (ವ್ಯೋಮ) ಸೀಮಿತವಾಗಿಲ್ಲ. ಸುತ್ತುಬಳೆ (ನೇಮಿ) ಇಲ್ಲದಿರುವ ಈ ಚಕ್ರದಲ್ಲಿ ನೀನು ಗಾಲಿಯ ಗುಂಬ. ಹೆಸರು ಮತ್ತು ಆಕಾರಗಳ ಭ್ರಾಂತಿ ಆಕಾಶ(ನಭ)ದಲ್ಲಿರುವ ಮೋಡ(ಮೇಘ)ಗಳ ಕ್ರೀಡೆ. ಪರಮಾತ್ಮನೇ ಸ್ಥಿರ (ಸ್ಥೇಮಿ).
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where lies the boundary of universe? Is there anything that is not in the sky?
You are the hub of a wheel that has no rim
The outer appearance of names and forms is akin to the playfulness of clouds in the sky
You are the Eternal omniscient entity – Marula Muniya (313)
(Translation from "Thus Sang Marula Muniya" by Sri. Narasimha Bhat)

ಜೀವಕೆ ನಮೋಯೆನ್ನು ದೈವ ತಾಂ ಜೀವವಲ (312)

ಜೀವಕೆ ನಮೋಯೆನ್ನು ದೈವ ತಾಂ ಜೀವವಲ |
ಜೀವತವನಂತ ಚಿತ್ಸತ್ತ್ವ ಲೀಲೆಯಲ ||
ಜೀವಹೊರತೇಂ ದೈವ, ದೈವಹೊರತೇಂ ಜೀವ |
ಜೀವಕ್ಕೆ ಜಯವೆನ್ನು - ಮರುಳ ಮುನಿಯ || (೩೧೨)

(ಜೀವತವು+ಅನಂತ)(ಚಿತ್+ಸತ್ತ್ವ+ಲೀಲೆ+ಅಲ)(ಜಯ+ಎನ್ನು)

ಜೀವಕ್ಕೆ ನಮಸ್ಕರಿಸು, ಏಕೆಂದರೆ ದೇವರೇ ತಾನೆ ಜೀವಿಯ ರೂಪವನ್ನು ತೊಟ್ಟು ಕೊಂಡಿರುವುದು. ಬದುಕಿಗೆ ಅಂತ್ಯವಿಲ್ಲ. ಅದು ಪರಮಾತ್ಮನ ಸಾರದ ಒಂದು ಆಟ ತಾನೆ. ಜೀವವನ್ನು ತೊರೆದು ದೈವವಿರಲಾರದು. ಅಂತೆಯೇ ದೈವವನ್ನು ತೊರೆದು ಜೀವವೂ ಇರಲಾರದು. ಜೀವಕ್ಕೆ ಜಯವಾಗಲಿ ಎನ್ನು.

(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Say “salutation to soul”, is not God Himself in soul?
Is not life a deathless sport of the Godself?
What is God without soul and soul without God?
Proclaim “Victory, victory to soul” – Marula Muniya (312)
(Translation from "Thus Sang Marula Muniya" by Sri. Narasimha Bhat)

ಭಾವದ ವಿಕಾರಂಗಳಳಿದ ಜೀವವೆ ದೈವ (311)

ಭಾವದ ವಿಕಾರಂಗಳಳಿದ ಜೀವವೆ ದೈವ |
ಭಾವವೇಂ ದೈವದೊಂದುಚ್ಛಸನ ಹಸನ ||
ಜೀವಿತಂ ದ್ವಂದ್ವ ದೈವತ್ವದೊಳದ್ವಂದ್ವ |
ಜೀವರೂಪಿಯೊ ದೈವ - ಮರುಳ ಮುನಿಯ || (೩೧೧)

(ವಿಕಾರಂಗಳ್+ಅಳಿದ)(ದೈವದ+ಒಂದು+ಉಚ್ಛಸನ)(ದೈವತ್ವದೊಳು+ಅದ್ವಂದ್ವ)

ಭಾವನೆಗಳ ವ್ಯತ್ಯಾಸಗಳು ನಾಶವಾಗಿರುವ ಜೀವವೇ ದೈವ. ಭಾವನೆಗಳು ದೈವದ ಕೇವಲ ಒಂದು ನಿಶ್ವಾಸ(ಉಚ್ಛಸನ) ಮತ್ತು ನಗು(ಹಸನ)ಗಳಿಷ್ಟೆ. ಜೀವನವೆನ್ನುವುದು ಬೇರೆ ಬೇರೆ ವಿರುದ್ಧ ಗತಿಗಳಿಂದ ಕೂಡಿದ ಜೋಡಿಗಳು (ದ್ವಂದ್ವ). ಆದರೆ ದೈವತ್ವದೊಳಗಿರುವುದು ಅವಿರುದ್ಧವಾದ ಏಕತೆ(ಅದ್ವಂದ್ವ). ದೈವವು ಜೀವಿಯ ರೂಪವನ್ನು ತೊಟ್ಟುಕೊಂಡಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The soul, freed from all distorted emotions is God
Human emotions are nothing but the breaths and smiles of God
Human life is replete with dualities but God is nondual
God is in the form of self – Marula Muniya (311)
(Translation from "Thus Sang Marula Muniya" by Sri. Narasimha Bhat)

ಪುರುಷಮತಿಯೊಳ್ ಧರ್ಮ ಪ್ರಕೃತಿಯೊಳ್ ಧರ್ಮಮೇಂ ? (310)

ಪುರುಷಮತಿಯೊಳ್ ಧರ್ಮ ಪ್ರಕೃತಿಯೊಳ್ ಧರ್ಮಮೇಂ ? |
ಸರಿಯೆ ಜೀವಿಗೆ ಜೀವನಂ ಜೀವಿಯಹುದು ? ||
ಪಿರಿದು ಧರ್ಮಂ ಪ್ರಕೃತಿತಂತ್ರದಿಂದದರಿಂದೆ |
ಶಿರವೊ ಸೃಷ್ಟಿಗೆ ನರನು - ಮರುಳ ಮುನಿಯ || (೩೧೦)

(ಜೀವಿ+ಅಹುದು)(ಪ್ರಕೃತಿತಂತ್ರದಿಂದ+ಅದರಿಂದೆ)

ಮನುಷ್ಯನ ಬುದ್ಧಿ ಮತ್ತು ಮನಸ್ಸಿನಲ್ಲಿ ಧರ್ಮದ ಬಗ್ಗೆ ಒಂದು ನಿರ್ದಿಷ್ಟವಾದ ಕಲ್ಪನೆ ಇದೆ. ಆದರೆ ನಿಸರ್ಗದಲ್ಲಿ ಧರ್ಮ ಯಾವುದು? ಒಂದು ಜೀವಿಗೆ ಜೀವನವು ಇನ್ನೊಂದು ಜೀವಿಯಿಂದಲೇ ಎನ್ನುವುದು ಸರಿಯೇನು? ಪ್ರಕೃತಿಯ ಉಪಾಯ ಮತ್ತು ಕುಶಲತೆಗಳಿಗಿಂತ ಹಿರಿದಾದದ್ದು ಧರ್ಮ. ಆದ್ದರಿಂದ ಸೃಷ್ಟಿಗೆ ಶಿಖರಪ್ರಾಯನಾಗಿರುವನು ಈ ಮನುಷ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dharma’s abode is human mind, is there dharma in Nature?
It is proper for an animal to live just like a living being
Dharma is far greater than the mechanism of Nature
Hence, man is the crown of creation – Marula Muniya
(Translation from "Thus Sang Marula Muniya" by Sri. Narasimha Bhat)

ಅಪರಿಪಕ್ವದ ರಚನೆ ಜಗವಿದು ವಿಧಾತನದು (309)

ಅಪರಿಪಕ್ವದ ರಚನೆ ಜಗವಿದು ವಿಧಾತನದು |
ನಿಪುಣ ನಾನಿದನು ಪಕ್ವಿಪೆನೆಂದು ಮನುಜಂ ||
ಚಪಲದಿಂ ಪೆಣಗಾಡಿ ವಿಪರೀತವಾಗಿಪನು |
ಉಪವಿಧಾತನೊ ನರನು - ಮರುಳ ಮುನಿಯ || (೩೦೯)

(ಪಕ್ವಿಪೆನ್+ಎಂದು)(ವಿಪರೀತ+ಆಗಿಪನು)

ಬ್ರಹ್ಮ(ವಿಧಾತ)ನು ಸೃಷ್ಟಿಸಿರುವ ಈ ಜಗತ್ತು ಚೆನ್ನಾಗಿಲ್ಲ. ನಾನು ಬಹಳ ಚತುರನಾದದ್ದರಿಂದ ಈ ಜಗತ್ತನ್ನು ಚೆನ್ನಾಗಿ ಮಾಡುತ್ತೇನೆಂದು ಮನುಷ್ಯನು ಹೊರಡುತ್ತಾನೆ. ಚಂಚಲತೆಯಿಂದ ಹೆಣಗಾಡಿ(ಪೆಣಗಾಡಿ) ಅದನ್ನು ತಿರುವು ಮುರುವು ಮಾಡಿಬಿಡುತ್ತಾನೆ. ಮನುಷ್ಯನೆಂಬ ಇವನು ಒಬ್ಬ ಚಿಕ್ಕ ಬ್ರಹ್ಮನೇ ಸರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This universe of the Creator is an imperfect work
I would make it perfect so thinks the wayward man
With all this fickleness he struggles and makes all things topsy turvy
He acts like a subcreator – Marula Muniya
(Translation from "Thus Sang Marula Muniya" by Sri. Narasimha Bhat)

ಸೃಷ್ಟಿಚಿತ್ರದ ನಡುವೆ ನರನದೊಂದುಪಸೃಷ್ಟಿ (308)

ಸೃಷ್ಟಿಚಿತ್ರದ ನಡುವೆ ನರನದೊಂದುಪಸೃಷ್ಟಿ |
ಚೇಷ್ಟಿಪ್ಪುದವನ ಕೈ ಪ್ರಕೃತಿಕೃತಿಗಳಲಿ ||
ಸೊಟ್ಟಗಿರೆ ನೆಟ್ಟಗಿಸಿ ನೆಟ್ಟಗಿರೆ ಸೊಟ್ಟಿಪುದು |
ಪುಟ್ಟು ಬೊಮ್ಮನೊ ನರನು - ಮರುಳ ಮುನಿಯ || (೩೦೮)

(ನರನದೊಂದು+ಉಪಸೃಷ್ಟಿ)(ಚೇಷ್ಟಿಪ್ಪುದು+ಅವನ)

ಸೃಷ್ಟಿಯ ಚಿತ್ರಗಳ ನಡುವೆ ಮನುಷ್ಯನದೂ ಒಂದು ಚಿಕ್ಕ ರಚನೆ. ನಿಸರ್ಗದ ರಚನೆಗಳಲ್ಲಿ ಇವನೂ ಸಹ ಕೈಯಾಡಿಸುತ್ತಾನೆ. ಸೊಟ್ಟಾಗಿರುವುದನ್ನು ನೆಟ್ಟಗಾಗಿಸಿ. ನೆಟ್ಟಗಿರುವುದನ್ನು ಸೊಟ್ಟಗೆ ಮಾಡುತ್ತಾನೆ. ಈ ರೀತಿಯಾಗಿ ಮನುಷ್ಯನೂ ಸಹ ಹುಟ್ಟಿನಿಂದಲೇ ಒಬ್ಬ ಪರಬ್ರಹ್ಮ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Amidst the gargantuan picture of creation, man’s is a secondary creation
Human hands meddle in the works of Nature
He straightens the curved and bends the straight
Man has become a mini Brahma – Marula Muniya
(Translation from "Thus Sang Marula Muniya" by Sri. Narasimha Bhat)

ತರುವಲ್ಕದಂತೆ ನರಮಮತೆ ಜೀವಕೆ ಕವಚ (307)

ತರುವಲ್ಕದಂತೆ ನರಮಮತೆ ಜೀವಕೆ ಕವಚ |
ಬಿರುಸಾಗಲದು ತಾನೆ ಬಾಳ್ಗೆ ಸಂಕೋಲೆ ||
ಪರುಷತೆಯ ಮೇಲೇಳ್ದ ಪುರುಷತೆಯೆ ಕಲ್ಪಲತೆ |
ಸರಸತೆಯೆ ಮರಕಂದ - ಮರುಳ ಮುನಿಯ || (೩೦೭)

(ಬಿರುಸು+ಆಗಲು+ಅದು)(ಮೇಲೆ+ಏಳ್ದ)

ಮರಕ್ಕೆ ತೊಗಟೆ(ವಲ್ಕ) ಹೇಗೋ ಹಾಗೆ, ಮನುಷ್ಯನ ಮಮಕಾರವು ಅವನಿಗೆ ಒಂದು ಹೊದಿಕೆಯಾಗಿರುತ್ತದೆ. ಆದರೆ ಅದು ಬಹಳ ಗಟ್ಟಿ(ಬಿರುಸು)ಯಾದಲ್ಲಿ ಅದು ಜೀವನಕ್ಕೆ ಒಂದು ಕೈಕೋಳವಾಗುತ್ತದೆ. ಬಿರುಸುತನದಿಂದ ಮೇಲಕ್ಕೆ ಎದ್ದ ಪುರುಷತೆಯೇ ನಮ್ಮ ಅಭೀಷ್ಟಗಳನ್ನೀಡೇರಿಸುವ ಬಳ್ಳಿ (ಕಲ್ಪಲತೆ). ವಿನೋದ ಮತ್ತು ಚೇಷ್ಟೆಗಳೇ ಹೂವಿನ ರಸ (ಮಕರಂದ).
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Human attachment is a protective armour like treebark
But it binds like chain when it becomes too hard
Human valour that grows from hard strength is a
Wish fulfilling creeper and affability is its nectar – Marula Muniya
(Translation from "Thus Sang Marula Muniya" by Sri. Narasimha Bhat)

ಮಾನ್ಯವಲ್ತೆನಗೆ ವಧೆಯಿಂ ಬರ‍್ಪ ಜಯವೆಂದು (306)

ಮಾನ್ಯವಲ್ತೆನಗೆ ವಧೆಯಿಂ ಬರ‍್ಪ ಜಯವೆಂದು |
ಸಂನ್ಯಾಸದಾಭಾಸಿ ಪಾರ್ಥನಾದಂದು ||
ಅನ್ಯಾಯ ಸಹನೆ ವೈರಾಗ್ಯವೆಂತಹುದೆಂದು - |
ಪನ್ಯಸಿಸಿದಂ ಕೃಷ್ಣ - ಮರುಳ ಮುನಿಯ || (೩೦೬)

(ಮಾನ್ಯವಲ್ತು+ಎನಗೆ)(ಸಂನ್ಯಾಸದ+ಆಭಾಸಿ)(ಪಾರ್ಥನಾದ+ಅಂದು)(ವೈರಾಗ್ಯ+ಎಂತು+ಅಹುದು+ಎಂದು+ಉಪನ್ಯಸಿಸಿದಂ)

ಇತರರನ್ನು ವಧಿಸಿ ದೊರೆಯುವ ಗೆಲುವು ತನಗೆ ಒಪ್ಪತಕ್ಕಂತಹುದಲ್ಲವೆಂದು, ಸಂನ್ಯಾಸಿಯಂತೆ ನೋಟಮಾತ್ರಕ್ಕೆ ಕಾಣಿಸುತ್ತಿದ್ದ (ಸನ್ಯಾಸದಾಭಾಸಿ) ಅರ್ಜುನ(ಪಾರ್ಥ)ನು ಹೇಳಿದಾಗ, ಅನ್ಯಾಯಗಳನ್ನು ಸಹಿಸಿಕೊಳ್ಳುವುದು ಹೇಗೆ ವಿರಕ್ತಿಯಾಗುತ್ತದೆಂದು, ಶ್ರೀ ಕೃಷ್ಣ ಪರಮಾತ್ಮನು ಅವನಿಗೆ ಉಪದೇಶಿಸಿದನು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In a fleeting spree of renunciation Partha declared
That the victory gained through cruel killings was unacceptable
Then Krishna in a preaching mood asked him how
Tolerating injustice could be acclaimed as renunciation – Marula Muniya
(Translation from "Thus Sang Marula Muniya" by Sri. Narasimha Bhat)

ಶಾರೀರವೆಂತೊ ಮಾನಸಬಲವುಮಂತು ಮಿತ (305)

ಶಾರೀರವೆಂತೊ ಮಾನಸಬಲವುಮಂತು ಮಿತ |
ಆರಯ್ದು ನೋಡದಕೆ ತಕ್ಕ ಪಥ್ಯಗಳ ||
ವೀರೋಪವಾಸಗಳ ಪೂರ ಜಾಗರಣೆಗಳ |
ಭಾರಕದು ಕುಸಿದೀತು - ಮರುಳ ಮುನಿಯ || (೩೦೫)

(ಶಾರೀರವು+ಎಂತೊ)(ಮಾನಸಬಲವುಂ+ಅಂತು)(ಆರ್+ಅಯ್ದು)(ವೀರ+ಉಪವಾಸಗಳ)(ಭಾರಕೆ+ಅದು)

ಮನುಷ್ಯನ ಶರೀರಶಕ್ತಿಯು ಹೇಗೆ ಒಂದು ಎಲ್ಲೆಗೆ ಒಳಪಟ್ಟಿದೆಯೋ, ಅವನ ಮನಸ್ಸಿನ ಶಕ್ತಿಯೂ ಹಾಗೆಯೇ ಒಂದು ಮಿತಿಗೆ ಒಳಪಟ್ಟಿದೆ. ಅದಕ್ಕೆ ಐದಾರು ಉಚಿತವಾದ ಆಹಾರ ನಿಯಮಗಳುಂಟು. ಭಯಂಕರವಾದ ಉಪವಾಸ ಮತ್ತು ಸಂಪೂರ್ಣವಾಗಿ ನಿದ್ರೆ ಮಾಡದಿರುವ ವೃತಗಳ ಭಾರದಿಂದ ಅದು ಕುಸಿದು ಹೋದೀತು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like physical strength, strength of mind is also limited
Carefully choose proper diet for both
Severe fasting and fullnight sleepless vigil
May cause their breakdown – Marula Muniya (305)
(Translation from "Thus Sang Marula Muniya" by Sri. Narasimha Bhat)

ಸುಡು ಕಾಮಮೂಲವನು ಸುಡಲಾಗದೊಡೆ ಬೇಗ (304)

ಸುಡು ಕಾಮಮೂಲವನು ಸುಡಲಾಗದೊಡೆ ಬೇಗ |
ಕೊಡು ಕಾಮಿತವನೆಂದು ಬೇಡು ದೈವವನು ||
ಕೆಡುವುದೀ ಜೀವ ಕೊರಗಿ ಕಾಯುತ ಕರಟಿ |
ನಡೆವುದಿಹ ತೋರ‍್ಕೆಯಿಂ - ಮರುಳ ಮುನಿಯ || (೩೦೪)

(ಸುಡಲ್+ಆಗದ+ಒಡೆ)(ಕಾಮಿತವನ್+ಎಂದು)(ಕೆಡುವುದು+ಈ)(ನಡೆವುದು+ಇಹ)

ವಿಷಯಲಾಭಿಲಾಷೆ ಮತ್ತು ಬಯಕೆಗಳ ಬೇರುಗಳನ್ನು ಸುಟ್ಟುಹಾಕು. ಈ ಕೆಲಸಗಳನ್ನು ಮಾಡಲಾಗದಿದ್ದಲ್ಲಿ, ನೀನು ಅಪೇಕ್ಷಿಸಿದ್ದನ್ನು ತ್ವರಿತವಾಗಿ ನೀಡೆಂದು ದೇವರಲ್ಲಿ ಕೇಳಿಕೊ. ಇಲ್ಲದಿದ್ದಲ್ಲಿ ಈ ಜೀವವು ಅತಿಯಾದ ಚಿಂತೆಯಿಂದ ಸೊರಗಿ ಕಾದು, ಕರಕಾಗಿ, ಬೆಳವಣಿಗೆ ನಿಂತುಹೋಗಿ ಕೆಟ್ಟುಹೋಗುತ್ತದೆ. ಆವಾಗ ಅದು ಹೊರನೋಟಕ್ಕೆ ಮಾತ್ರ ನಡೆಯುತ್ತಿರುವಂತೆ ಕಾಣುತ್ತದೆ. ಒಳಗೆ ಕರಕಾಗಿ ಹಾಳಾಗಿ ಹೋಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Burn the roots of desire and if you can’t do so
Pray to God to grant your desires.
Grieving and waiting, the scorched soul would languish
The worldly life appears to go on with pretences – Marula Muniya (304)
(Translation from "Thus Sang Marula Muniya" by Sri. Narasimha Bhat)

ತನಯ ಮಡದಿಯರಿಂಗೆ ಪರಮಗತಿ ತಾನೆಂದು (303)

ತನಯ ಮಡದಿಯರಿಂಗೆ ಪರಮಗತಿ ತಾನೆಂದು |
ಧನಕನಕ ದಾಯನಿಧಿ ದೈವ ಸಮವೆಂದು ||
ಋಣಜಾಲವನು ಬೆಳಸಿ ವಿಪರೀತಗೆಯ್ವಂಗೆ |
ಮನೆಯೆ ಸೆರೆಮನೆಯಹುದೊ - ಮರುಳ ಮುನಿಯ || (೩೦೩)

(ತಾನ್+ಎಂದು)(ಸಮ+ಎಂದು)(ಸೆರೆಮನೆ+ಅಹುದೊ)

ತನ್ನ ಸತಿ ಮತ್ತು ಸುತರಿಗೆ ತಾನೇ ದಿಕ್ಕೆಂದು ಮತ್ತು ಐಶ್ವರ್ಯ, ಹೊನ್ನು, ಆಸ್ತಿ (ದಾಯ) ಮತ್ತು ಕೂಡಿಟ್ಟ ಸಂಪತ್ತುಗಳು ದೇವರಿಗೆ ಸಮಾನವಾದದ್ದೆನ್ನುವ ನಡವಳಿಕೆಗಳಿಂದ ಋಣದ ಬಲೆಯನ್ನು ಬೆಳೆಸೆ, ಅದನ್ನೇ ಹೆಚ್ಚು ಮಾಡುವವನಿಗೆ, ತನ್ನ ಗೃಹವೇ ಕಾರಾಗೃಹವಾಗಿ, ಅವನು ಈ ಪ್ರಪಂಚಕ್ಕೆ ಶಾಶ್ವತವಾಗಿ ಬಂಧಿಸಲ್ಪಡುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

To one who thinks that he alone is the sole protector of his wife and children
And to one who worships, money, gold and property as though they are semi-god
And strengthen the bonds of Karma committing excesses
His own house becomes his prison – Marula Muniya (303)
(Translation from "Thus Sang Marula Muniya" by Sri. Narasimha Bhat)

ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ (302)

ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ |
ಅಳುವ ನೀನೊರಸಿದುದು ನಗುವ ನಗಿಸುದುದು ||
ಒಲಿದು ನೀಂ ನೀಡಿದುದು ನಲವ ನೀನೆಸಗಿದುದು |
ನೆಲಸುವುವು ಬೊಮ್ಮನಲಿ - ಮರುಳ ಮುನಿಯ || (೩೦೨)

(ಒಳಿತು+ಒಂದೆ)(ಉಳಿದೆಲ್ಲ+ಅಳಿಯುವುದೊ)(ನೀನ್+ಒರಸಿದುದು)(ನೀನ್+ಎಸಗಿದುದು)

ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯುವುದು ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ. ಮಿಕ್ಕವೆಲ್ಲವೂ ನಾಶವಾಗಿ ಹೋಗುತ್ತದೆ. ಇತರರ ದುಃಖವನ್ನು ನೀನು ಹೋಗಲಾಡಿಸಿದ್ದು, ನೀನೂ ನಕ್ಕು ಅವರುಗಳನ್ನೂ ನಗಿಸಿದ್ದು, ಪ್ರೀತಿಯಿಂದ ಅವರುಗಳಿಗೆ ನೀನು ಕೊಟ್ಟಿದ್ದು ಮತ್ತು ಸಂತೋಷವನ್ನುಂಟುಮಾಡಿದ್ದು, ಇವುಗಳೆಲ್ಲವೂ ಪರಬ್ರಹ್ಮನಲ್ಲಿ ಶಾಶ್ವತವಾಗಿ ಕಟ್ಟಿಟ್ಟ ಬುತ್ತಿ ಆಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Goodness alone is eternal and all else is subject to annihilation
Your wiping of others’ tears and making them smile
Your generous gifts and your loving acts
Would live forever in Brahma – Marula Muniya (302)
(Translation from "Thus Sang Marula Muniya" by Sri. Narasimha Bhat)

ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ (301)

ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ |
ಶಿಷ್ಟಿಯಿಂದವಳ ಮಾಯಾಪಟವ ಪರಿದು ||
ನಿಷ್ಠುರ ಜಗದ್ದ್ವಂದ್ವಗಳ ದಾಟಿ ಬಾಳ್ವುದೆ ವಿ - |
ಶಿಷ್ಟ ಧರ್ಮಮವಂಗೆ - ಮರುಳ ಮುನಿಯ || (೩೦೧)

(ಶಿಶು+ಆದೊಡಂ)(ತನ್ನಾ+ಆತ್ಮ)(ಶಿಷ್ಟಿಯಿಂದ+ಅವಳ)(ಧರ್ಮಂ+ಅವಂಗೆ)

ಮನುಷ್ಯನು ಸೃಷ್ಟಿಯ ಮಗುವಾದರೂ ಸಹ, ಅವನು ತನ್ನ ಆತ್ಮದ ಶಿಕ್ಷಣದಿಂದ ಸೃಷ್ಟಿಯ ಮಾಯಾ ತೆರೆಯನ್ನು ಹರಿದು, ಈ ಪ್ರಪಂಚದ ಕಠಿಣವಾದ ದ್ವೈತಭಾವವನ್ನು ಮೀರಿ, ಜೀವನವನ್ನು ನಡೆಸುವುದೇ ಅವನಿಗೆ ಶ್ರೇಷ್ಠವಾದ ಧರ್ಮವಾಗುತ್ತದೆ.
(ಕೃಪೆ: ಶ್ರೀ.ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Even though man is a child of nature
He should tear off the veil of Maya with self-culture and self-control
He should rise above the harsh dualities of the world and live in peace
This is his unique duty – Marula Muniya (301)
(Translation from "Thus Sang Marula Muniya" by Sri. Narasimha Bhat)

ಬಾಳುವೆಯ ಬಯಸದಿರು ಸಾವನುಂ ಬಯಸದಿರು (300)

ಬಾಳುವೆಯ ಬಯಸದಿರು ಸಾವನುಂ ಬಯಸದಿರು |
ವೇಳೆ ವೇಳೆಯು ತೋರ‍್ಪ ಧರ್ಮವೆಸಗುತಿರು ||
ಕಾಲನಾತುರಿಸದನು ಪಾಲುಮಾರದನವನು |
ಆಳು ಕರ್ಮಋಣಕ್ಕೆ - ಮರುಳ ಮುನಿಯ || (೩೦೦)

(ಬಯಸದೆ+ಇರು)(ಧರ್ಮವ+ಎಸಗುತ+ಇರು)(ಕಾಲನ್+ಆತುರಿಸದನು)(ಪಾಲುಮಾರದನ್+ಅವನು)

ಬದುಕು ಮತ್ತು ಜೀವನವನ್ನು ಆಶಿಸಬೇಡ, ಹಾಗೆಯೇ ಸಾವನ್ನೂ ಸಹ ಅಪೇಕ್ಷಿಸಬೇಡ. ಆಯಾ ಕಾಲವು ತೋರಿಸುವ, ಸದಾಚಾರ ಮತ್ತು ಧರ್ಮಗಳನ್ನು ಮಾಡು(ಎಸಗು)ತ್ತಿರು. ಕಾಲನು ಅವಸರಿಸುವುದಿಲ್ಲ, ತ್ವರೆ ಮಾಡುವುದಿಲ್ಲ. ಅವನು ಸೋಮಾರಿಯೂ (ಪಾಲುಮಾರ್) ಅಲ್ಲ. ನಿನ್ನ ಕರ್ಮದ ಋಣಗಳನ್ನು ತೀರಿಸುವುದಕ್ಕಾಗಿ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Desire not life and desire not death
Discharge the duties that come to you from time to time
Kala, the God of time is neither hasty nor lazy
Like a faithful servant, he would discharge the obligations of Karma – Marula Muniya (300)
(Translation from "Thus Sang Marula Muniya" by Sri. Narasimha Bhat)

ಮರಣವನು ಬೇಡದಿರು ಜೀವಿತವ ಬೇಡದಿರು (299)

ಮರಣವನು ಬೇಡದಿರು ಜೀವಿತವ ಬೇಡದಿರು |
ತರುವುದೆಲ್ಲವ ಸಕಾಲಕೆ ಕರ್ಮಚಕ್ರಂ ||
ಪರಿಚಾರನೊಡೆಯನಾಜ್ಞೆಯನಿದಿರು ನೋಳ್ಪವೋ- |
ಲಿರು ತಾಳ್ಮೆಯಿಂ ನಿಂತು - ಮರುಳ ಮುನಿಯ || (೨೯೯)

(ತರುವುದು+ಎಲ್ಲವ)(ಪರಿಚಾರನ್+ಒಡೆಯನ್+ಆಜ್ಞೆಯನ್+ಇದಿರು)(ಅರನೊಡೆಯನಾಜ್ಞೆಯನಿದಿರು)(ನೋಳ್ಪವೋಲ್+ಇರು)

ಸಾವು ಬರಲೆಂದು ನೀನಾಗಿಯೇ ಎಂದೂ ಬಯಸಬೇಡ. ಅಂತೆಯೇ ಹೆಚ್ಚಿನ ಜೀವನವ(ಆಯಸ್ಸು)ನ್ನೂ ಬಯಸಬೇಡ. ನೀನು ಬಯಸಿದರೂ ಬಯಸಿದಿದ್ದರೂ ಕಾಲಧರ್ಮಕ್ಕೆ ತಕ್ಕಂತೆ ನಿನ್ನ ಕರ್ಮಚಕ್ರವು ಎಲ್ಲವನ್ನೂ ತರುತ್ತದೆ. ಸೇವಕ(ಪರಿಚಾರ)ನು ತನ್ನ ಸ್ವಾಮಿಯ ಅಪ್ಪಣೆಯನ್ನು ಎದುರು ನೋಡು(ನೋಳ್ಪ)ತ್ತಿರುವಂತೆ ನೀನೂ ಸಹನೆ(ತಾಳ್ಮೆ)ಯಿಂದ ಕಾದಿರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Pray not for death and pray not for life,
The wheel of Karma would bring you everything in time,
Stand and wait patiently like a servant expecting
His master’s orders – Marula Muniya
(Translation from "Thus Sang Marula Muniya" by Sri. Narasimha Bhat)

ಸತ್ತವರ ಯಶವೊಂದು ಶವಭಾರ ಲೋಕಕ್ಕೆ (298)

ಸತ್ತವರ ಯಶವೊಂದು ಶವಭಾರ ಲೋಕಕ್ಕೆ |
ಒತ್ತುತಿರಲದು ಮೇಲೆ ಯುವಕಗತಿಯೆಂತು ? ||
ಉತ್ತು ನೆಲದಲಿ ಬೆರಸು ಹಳೆ ಜಸವನದು ಬೆಳೆದು |
ಮತ್ತೆ ಹೊಸ ಪೈರಕ್ಕೆ - ಮರುಳ ಮುನಿಯ || (೨೯೮)

(ಒತ್ತುತ+ಇರಲು+ಅದು)(ಜಸವನ್+ಅದು)

ಈಗಾಗಲೇ ನಿಧನರಾಗಿರುವವರ ಕೀರ್ತಿ ಮತ್ತು ಯಶಸ್ಸುಗಳ ಭಾರವನ್ನು ಈ ಲೋಕ ಹೊತ್ತುಕೊಂಡಿದೆ. ಇವು ಮೇಲುಗಡೆಯಿಂದ ಅದುಮುತ್ತಾ ಇರಲು, ಈ ಲೋಕದಲ್ಲಿ ಸದ್ಯಕ್ಕೆ ಜೀವಿಸುತ್ತಿರುವ ಯುವಕರ ಅವಸ್ಥೆ ಏನಾಗುತ್ತದೆ? ಆದುದರಿಂದ ಪ್ರಾಚೀನರ ಯಶಸ್ಸು ಮತ್ತು ಕೀರ್ತಿಗಳನ್ನು ಈಗಿನ ಭೂಮಿಯಲ್ಲಿ ಉತ್ತಿ ಬೆರೆಸು. ಆವಾಗ ಆ ಪೂರ್ವಕಾಲದ ಯಶಸ್ಸು ಮತ್ತು ಕೀರ್ತಿಗಳು ಹೊಸ ಬೆಳೆಯನ್ನು ಬೆಳೆಸಲು ಸಹಾಯಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The fame of the dead is a dead weight on the world,
How can the youth progress when it is weighing them down?
Plough back the old renown, and mix it well in the soil
Let it grow again as a new crop – Marula Muniya
(Translation from "Thus Sang Marula Muniya" by Sri. Narasimha Bhat)

ಏಕಾಕಿಯಿರ‍್ದು ಸಾಕಾಲ್ಯಕಾರ‍್ಜಿಸು ಬಲವ (297)

ಏಕಾಕಿಯಿರ‍್ದು ಸಾಕಾಲ್ಯಕಾರ‍್ಜಿಸು ಬಲವ |
ಸಾಕಲ್ಯವೃತ್ತಿಯಿಂದೇಕತೆಗೆ ಬಲವ ||
ಕಾಕಾಕ್ಷಿಯುಗದೇಕಗೋದಲವೊಲಿರೆ ಜಯವು |
ಲೋಕ ನಿರ್ಲೋಕಗಳ - ಮರುಳ ಮುನಿಯ || (೨೯೭)

ಕಾಗೆಗೆ ಎರಡು ಕಣ್ಣುಗಳಿದ್ದರೂ ನೋಡುವ ಶಕ್ತಿಯಿರುವುದು ಒಂದು ಕಣ್ಣುಗುಡ್ಡೆಗೆ ಮಾತ್ರ. ಕಾಗೆ ಎಡಬಲಗಳಿಗೆ ನೋಡುವಾಗ ಈ ಕಣ್ಣುಗುಡ್ಡೆ ಎಡಬಲಗಳಿಗೆ ಸರಿದಾಡುವುದೆಂಬ ನಂಬಿಕೆ ಇದೆ. ಇದಕ್ಕೆ ಕಾಕಾಕ್ಷಿಗೋಳಕ ನ್ಯಾಯ ಎಂದು ಹೆಸರು.

ನೀನು ಒಬ್ಬನೇ ಆದರೂ ಪರಿಪೂರ್ಣತೆಗೋಸ್ಕರ (ಸಾಕಲ್ಯ) ನಿನ್ನ ಶಕ್ತಿಯನ್ನು ಉಪಯೋಗಿಸು. ಎಲ್ಲ ತೆರನಾದ ಮತ್ತು ಎಲ್ಲವೂ ಸೇರಿರುವ (ಸಾಕಲ್ಯ) ಉದ್ಯೋಗದಿಂದ ಏಕತೆಗಾಗಿ ಬಲವನ್ನು ಸಂಪಾದಿಸು. ಕಾಗೆಗೆ ಎರಡು ಕಣ್ಣುಗಳಿದ್ದರೂ ಅದು ಯಾವಾಗಲೂ ಒಂದೇ ಕಣ್ಣಿನಿಂದ ನೋಡುವಂತೆ ನಿನ್ನ ದೃಷ್ಟಿಯೂ ಇದ್ದಲ್ಲಿ, ನಿನಗೆ ಈ ಪ್ರಪಂಚ ಮತ್ತು ಪರಲೋಕಗಳಲ್ಲಿಯೂ ಗೆಲುವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Living alone in solitude, gain strength to live with all in the world
Living with all in the world earn strength to live alone
When you can be like a uniglobal dual eyes of the crow
You can win over the entire universe – Marula Muniya
(Translation from "Thus Sang Marula Muniya" by Sri. Narasimha Bhat)

ಸಜ್ಜೀವನಕೆ ಸೂತ್ರವೆರಡು ಮೂರದು ಸರಳ (296)

ಸಜ್ಜೀವನಕೆ ಸೂತ್ರವೆರಡು ಮೂರದು ಸರಳ |
ಹೊಟ್ಟೆ ಪಾಡಿಗೆ ವೃತ್ತಿ ಸತ್ಯಬಿಡದಿಹುದು ||
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು |
ಮೈತ್ರಿ ಲೋಕಕೆಲ್ಲ - ಮರುಳ ಮುನಿಯ || (೨೯೬)

ಒಳ್ಳೆಯ ಜೀವನವನ್ನು ನಡೆಸಲು ಎರಡು ಮುರು ಸರಳ ಮತ್ತು ಸುಲಭವಾದ ಉಪಾಯಗಳಿವೆ. ಜೀವನವನ್ನು ಪೋಷಿಸುವುದಕ್ಕೋಸ್ಕರ ಒಂದು ಕೆಲಸ ಮತ್ತು ಉದ್ಯೊಗ. ಯಾವಾಗಲೂ ನಿಜವನ್ನೇ ಹೇಳುವುದು. ಪರಮಾತ್ಮನಲ್ಲಿ ಮನಸ್ಸನ್ನು (ಚಿತ್ತ) ನೆಟ್ಟಿರುವುದು ಮತ್ತು ಅದರಿಂದ ಚಿಂತೆಗಳನ್ನು ಹಚ್ಚಿಕೊಳ್ಳದಿರುವುದು. ಪ್ರಪಂಚದೆಲ್ಲದರ ಜೊತೆ ಸ್ನೇಹ(ಮೈತ್ರಿ)ದಿಂದಿರುವುದು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Simple principles two or three for life divine
Pursuing a truthful occupation to earn the daily bread
Bidding farewell to all worries by rooting the mind in God
And extending friendship to the entire world – Marula Muniya
(Translation from "Thus Sang Marula Muniya" by Sri. Narasimha Bhat)

ಅಲುಗಾಡುವೆಲೆ ಮೇಲೆ ನೆಲೆ ನೆಲಸಿ ಬೇರ್ ಕೆಳಗೆ (295)

ಅಲುಗಾಡುವೆಲೆ ಮೇಲೆ ನೆಲೆ ನೆಲಸಿ ಬೇರ್ ಕೆಳಗೆ |
ಚೆಲುವರ್ಧ ಬಲವರ್ಧ ಸೇರಿ ಮರವೊಂದು ||
ತಿಳಿವುದೀ ಪ್ರಕೃತಿ ಸಂಯೋಜನೆಯ ಸೂತ್ರವನು |
ಸುಳುವಹುದು ಬಾಳ ಹೊರೆ - ಮರುಳ ಮುನಿಯ || (೨೯೫)

(ಅಲುಗಾಡುವ+ಎಲೆ)(ಚೆಲುವು+ಅರ್ಧ)(ಬಲವು+ಅರ್ಧ)(ತಿಳಿವುದು+ಈ)(ಸುಳು+ಅಹುದು)

ಒಂದು ಗಿಡದ ಎಲೆಯು ಮೇಲೆ ಅಲುಗಾಡುತ್ತಿರುತ್ತದೆ. ಅದರ ಕೆಳಗೆ ಅದರ ಬೇರು ದೃಢವಾಗಿ ನಿಂತಿರುತ್ತದೆ. ಈ ರೀತಿಯಾಗಿ ಮರವು ಅರ್ಧ ಸೊಗಸು ಮತ್ತು ಅರ್ಧ ಶಕ್ತಿಯಿಂದೊಡಗೂಡಿದೆ. ಪ್ರಕೃತಿಯ ಕ್ರಮವಾಗಿ ಹೊಂದಿಸುವ ನಿಯಮ ಮತ್ತು ಕಟ್ಟಳೆಗಳನ್ನು ಅರಿತರೆ, ಜೀವನದ ಭಾರವು ಹೊರುವುದಕ್ಕೆ ಸುಲಭ (ಸುಳು)ವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ever moving leaves above and firm roots underground
Beauty and strength in equal measure make the complete tree,
Understand this principle of coordination in nature
Then you come to know how to discharge your obligatory duties in life – Marula Muniya
(Translation from "Thus Sang Marula Muniya" by Sri. Narasimha Bhat)