Thursday, January 31, 2013

ಜೀವಿತವೆ ನಾಟಕವೊ ಜೀವವೇ ಸೂತ್ರಧಾರ (359)

ಜೀವಿತವೆ ನಾಟಕವೊ ಜೀವವೇ ಸೂತ್ರಧಾರ |
ನಾವು ನೀವವರೆಲ್ಲ ಪಾತ್ರಗಳು ವಿವಿಧ ||
ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ |
ದೇವನಾ ಲೀಲೆಯಿದು - ಮರುಳ ಮುನಿಯ || (೩೫೯)

(ನೀವ್+ಅವರ್+ಎಲ್ಲ)

ಈ ಜೀವನವೆಲ್ಲವೂ ಒಂದು ನಾಟಕವೇ ಹೌದು. ಇದಕ್ಕೆ ಸೂತ್ರಧಾರನಾಗಿರುವುದು ಜೀವ. ನಾವು, ನೀವು ಮತ್ತು ಉಳಿದವರೆಲ್ಲರೂ ವಿವಿಧ ಪಾತ್ರಧಾರಿಗಳು. ಈ ಪ್ರಪಂಚದ ವಿದ್ಯಮಾನವೆ ಒಂದು ರಂಗಮಂಟಪ. ಮನುಷ್ಯರುಗಳ ಕಥೆಯೇ ನಾಟಕದ ದೃಶ್ಯಗಳು. ಇವೆಲ್ಲ ಜಗದೀಶನ ಆಟಗಳಾಗಿವೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This life is a drama and the soul is the Director
You, we and they all are the various characters
This universe of play is the stage and the story of man is the scene
This is all the play of God – Marula Muniya
(Translation from "Thus Sang Marula Muniya" by Sri. Narasimha Bhat)

Wednesday, January 30, 2013

ಪ್ರಕಟರಂಗಸ್ಥಳದಿ ಗೂಢದಲಿ ಚಲಿಸುತ್ತ (358)

ಪ್ರಕಟರಂಗಸ್ಥಳದಿ ಗೂಢದಲಿ ಚಲಿಸುತ್ತ |
ವಿಕಲ ವೇಷಂಗಳನು ನಲಿದು ಬೆರೆಯುತ್ತೆ |
ಸಕಲನಾಗಿಯೆ ಮಿಕ್ಕು ತಾನಲ್ಲಿ ರಹಸಿಯದ
ವಿಕಟ ರಸಿಕನ ನೆನೆಯೋ - ಮರುಳ ಮುನಿಯ || (೩೫೮)

ವ್ಯಕ್ತವಾಗಿರುವ ಈ ಪ್ರಪಂಚವೆಂಬ ನಾಟಕದ ವೇದಿಕೆಯಲ್ಲಿ ಅವ್ಯಕ್ತವಾಗಿ ಸಂಚರಿಸುತ್ತ, ಅಪೂರ್ಣ(ವಿಕಲ)ವಾದ ಪಾತ್ರಗಳನ್ನು ಹಾಕಿ, ಸಂತೋಷಿಸಿ, ಅವುಗಳಲ್ಲಿ ಸೇರಿಕೊಂಡು, ತಾನು ಅಲ್ಲಿ ಸಮಗ್ರವಾಗಿ ಉಳಿದುಕೊಂಡು ರಹಸ್ಯವಾಗಿರುವ ಮತ್ತು ವ್ಯಂಗ್ಯದಿಂದ ಕೂಡಿದ ರಸಿಕನಾದ ಆ ಪರಮೇಶ್ವರನನ್ನು ಜ್ಞಾಪಿಸಿಕೊಳ್ಳುತ್ತಾ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He moves about incognito on the open stage
He moves with all, playing many odd roles
He remains there appearing in all forms
Meditate on this strange artist – Marula Muniya (358)
(Translation from "Thus Sang Marula Muniya" by Sri. Narasimha Bhat)

Tuesday, January 29, 2013

ಸರಸಹೃದಯವ ಸೂರೆಗೊಳುವ ನರ್ತಕಿಯವೊಲ್ (357)

ಸರಸಹೃದಯವ ಸೂರೆಗೊಳುವ ನರ್ತಕಿಯವೊಲ್ |
ಸ್ವರತಾಳಲಯ ಕ್ಲ್‍ಪ್ತಗತಿಯಿನುರುಕಾಲಂ ||
ಮರುಳನವೊಲೊದೆದೆಲ್ಲವನು ಮುರಿಯುತೊಮ್ಮೊಮ್ಮೆ |
ಪರಶಿವಂ ನರ್ತಿಪನೊ - ಮರುಳ ಮುನಿಯ || (೩೫೭)

(ಕ್ಲ್‍ಪ್ತಗತಿಯಿನ್+ಉರುಕಾಲಂ)(ಮರುಳನವೊಲ್+ಒದೆದು+ಎಲ್ಲವನು)(ಮುರಿಯುತ+ಒಮ್ಮೊಮ್ಮೆ)

ವಿನೋದಮಯವಾದ ಮನಸ್ಸನ್ನು ಕೊಳ್ಳೆಹೊಡೆಯುವ ನೃತ್ಯಗಾತಿಯಂತೆ, ನಾದ, ತಾಳ, ಲಯ ಮತ್ತು ನಿರ್ದಿಷ್ಟ ನಡಿಗೆಗಳಿಂದ ಬಹಳ ಹೊತ್ತು (ಉರುಕಾಲಂ) ದಡ್ಡ(ಮರುಳ)ನಂತೆ ಎಲ್ಲವನ್ನೂ ಒದ್ದು ಕೆಡವಿ, ಕೆಲವು ಸಲ ಅವುಗಳನ್ನು ಭಗ್ನಗೊಳಿಸುತ್ತಾ ಪರಶಿವನು ನರ್ತಿಸುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like a pleasant natured dancing girl determined to capture the hearts of onlookers
He dances for some time with all accuracy in tune, beat and rhythm,
Then suddenly like a man gone mad, He kicks and smashes everything
This is how Lord Shiva dances – Marula Muniya (357)
(Translation from "Thus Sang Marula Muniya" by Sri. Narasimha Bhat)

Friday, January 25, 2013

ಆಟಕೆಂದಳ್ತಿಯಿಂ ಮರಳಿನಲಿ ಮನೆಕಟ್ಟಿ (356)


ಆಟಕೆಂದಳ್ತಿಯಿಂ ಮರಳಿನಲಿ ಮನೆಕಟ್ಟಿ |
ಊಟ ಪಾಟಗಳೆಂದು ನಲಿದಣುಗನೇಕೋ ||
ನಾಟಕವು ಸಾಕೆಂದು ಮನೆಯನೊದೆದೊಡೆವುದಕೆ |
ಸಾಟಿಯೋ ಶಿವನೃತ್ಯ - ಮರುಳ ಮುನಿಯ || (೩೫೬)

(ಆಟಕೆ+ಎಂದು+ಅಳ್ತಿಯಂ)(ಪಾಟಗಳ್+ಎಂದು)(ನಲಿದ+ಅಣುಗನ್+ಏಕೋ)(ಸಾಕು+ಎಂದು)(ಮನೆಯನ್+ಒದೆದು+ಒಡೆವುದಕೆ)

ಈ ಆಟವಾಡುತ್ತೇನೆಂದು ಪ್ರೀತಿಯಿಂದ (ಅಳ್ತಿಯಿಂ) ಮರಳಿನಲ್ಲಿ ಮನೆಯನ್ನು ಕಟ್ಟಿ, ಅದರಲ್ಲೇ ಅಡಿಗೆ ಮಾಡಿದಂತೆ, ಊಟ ಮಾಡಿದಂತೆ ಮತ್ತು ಹಾಡುಗಳನ್ನು ಹೇಳಿದಂತೆ ಬಾಲಕ(ಅಣುಗ)ನು ಸಂತೋಷಿಸುತ್ತಾನೆ. ಆದರೆ ಅದೇಕೋ ನಾಟಕ ತನಗೆ ಸಾಕಾಯಿತೆಂದು ಕಟ್ಟಿದ ಮನೆಯನ್ನು ಒದ್ದು ಪುಡಿಮಾಡಿಬಿಡುತ್ತಾನೆ. ಹೀಗೆಯೇ ಶಿವನ ನೃತ್ಯವೂ ಕೂಡ.

With much interest, a child builds castles with sand
He pretends to cook, eat, sing and enjoy but at the end
He feels like ending the play and kicks off the castle
God’s drama is akin to this – Marula Muniya (356)
(Translation from "Thus Sang Marula Muniya" by Sri. Narasimha Bhat)

Thursday, January 24, 2013

ನಾಟಕವ ನೋಡುವಂಗಾಟದಲಿ ರುಚಿ ಬೇಕು (355)

ನಾಟಕವ ನೋಡುವಂಗಾಟದಲಿ ರುಚಿ ಬೇಕು |
ಬೇಟವೋ ಕಾಟವೋ ಕೆಳೆಯೊ ಪಗೆಯೊ ಅದು ||
ಆಟವೀ ಜಗವೊಂದು ವೇಷ ನೀನದರೊಳಗೆ |
ನೋಟನೋಡುವನು ಶಿವ - ಮರುಳ ಮುನಿಯ || (೩೫೫)

(ನೋಡುವಂಗೆ+ಆಟದಲಿ)(ನೀನ್+ಅದರೊಳಗೆ)

ಈ ಜಗತ್ತಿನ ನಾಟಕವನ್ನು ನೋಡುವವನಿಗೆ ಈ ಆಟದಲ್ಲಿ ಒಂದು ರುಚಿ ಇರಬೇಕು. ಕಾಮಲಾಲಸೆ(ಬೇಟ)ಯೋ, ಉಪದ್ರವಗಳೋ, ಸ್ನೇಹವೋ, ಹಗೆ(ಪಗೆ)ತನವೋ, ಏನಾದರೂ ಸಹ, ಇದು ಒಂದು ಆಟವೆನ್ನುವುದನ್ನು ಜ್ಞಾಪಕದಲ್ಲಿಟ್ಟುಕೊಂಡಿರು. ಜಗತ್ತು ಒಂದು ಆಟ, ನೀನದರೊಳಗೊಬ್ಬ ಪಾತ್ರಧಾರಿ. ಈ ನಾಟಕವನ್ನು ನೋಡುತ್ತಿರುವವನು ಆ ಪರಮೇಶ್ವರ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One should have abiding interest in the drama he witnesses
The theme may be love or harassment, or friendship or enmity
The world is a drama and you too are an actor
The great God is the spectator – Marula Muniya (355)
(Translation from "Thus Sang Marula Muniya" by Sri. Narasimha Bhat)

Wednesday, January 23, 2013

ನವನವೋನ್ಮೇಷದಲಿ ಭುವನನಟನಾಡುತಿರೆ (354)

ನವನವೋನ್ಮೇಷದಲಿ ಭುವನನಟನಾಡುತಿರೆ |
ನವಭಾವ ನವರೂಪ ನವನಾಮವಮರೆ ||
ವಿವೃತಿಗೆಂದದನು ನೀಂ ಪಿಡಿವ ಮುನ್ನಮೆ ವಸ್ತು |
ನವವಿವರ್ತಿತಮಿಹುದೊ - ಮರುಳ ಮುನಿಯ || (೩೫೪)

(ಭುವನನಟನ+ಆಡುತ+ಇರೆ)(ನವನಾಮವಂ+ಅಮರೆ)(ವಿವೃತಿಗೆ+ಎಂದ್+ಅದನು)(ನವವಿವರ್ತಿತಂ+ಇಹುದೊ)

ಹೊಸ ಹೊಸ ರಂಗುಗಳಲ್ಲಿ (ನವನವೋನ್ಮೇಷ) ಈ ಜಗನ್ನಾಟಕಕಾರನಾದ ನಟರಾಜನು ನಟಿಸುತ್ತ, ಹೊಸ ಭಾವನೆ, ಹೊಸ ಆಕಾರ ಮತ್ತು ಹೊಸ ಹೆಸರುಗಳನ್ನು ಕೂಡಿಸಿಕೊಳ್ಳಲು (ಅಮರೆ) ಅದರ ವಿವರಣೆ(ವಿವೃತಿ)ಯನ್ನು ನೀನು ತಿಳಿಯುವುದಕ್ಕೆ ಮುಂಚೆಯೇ ಆ ನಾಟಕದ ವಸ್ತು ಹೊಸದಾಗಿ ಬದಲಾಯಿಸಲ್ಪಟ್ಟಿರುತ್ತದೆ (ವಿವರ್ತಿತ).
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Cosmic Dancer is dancing with new zeal every moment
New emotions, new forms and new names are displayed
Before you chose and take up one for analysis
It changes quickly into another – Marula Muniya (354)
(Translation from "Thus Sang Marula Muniya" by Sri. Narasimha Bhat)

Tuesday, January 22, 2013

ಹಾಸ್ಯದಿನೊ ಕರುಣೆಯಿನೊ ರಾಗದಿನೊ ರೌದ್ರದಿನೊ (353)

ಹಾಸ್ಯದಿನೊ ಕರುಣೆಯಿನೊ ರಾಗದಿನೊ ರೌದ್ರದಿನೊ |
ಲಾಸ್ಯ ವಿಪರೀತ ಶತವೆಸಗುತಿರೆ ನಟನಂ ||
ದೃಶ್ಯವ ದಿದೃಕ್ಷು ಪಿಡಿಯುವ ಮುನ್ನ ತನುವಿಪ- |
ರ್ಯಸ್ಯಮಿರಲರಿವೆಂತು - ಮರುಳ ಮುನಿಯ || (೩೫೩)

(ಶತ+ಎಸಗುತ+ಇರೆ)(ವಿಪರ್ಯಸ್ಯಂ+ಇರಲ್+ಅರಿವು+ಎಂತು)

ಹಾಸ್ಯ ಮಾಡುತ್ತಲೋ, ಮರುಕ ತೋರಿಸುತ್ತಲೋ, ಪ್ರೀತಿಯಿಂದಲೋ ಅಥವಾ ಸಿಟ್ಟಿನಿಂದಲೋ, ನರ್ತನವು (ಲಾಸ್ಯ) ಅತಿಯಾಗಿ ನೂರಾರು ಹೆಜ್ಜೆಗಳನ್ನು ಪ್ರಯೋಗಿಸುತ್ತಿರಲು, ನೃತ್ಯದ ಈ ನೋಟವನ್ನು ವೀಕ್ಷಕನು (ದಿದೃಕ್ಷು) ನೋಡಿ ಅರ್ಥ ಮಾಡಿಕೊಳ್ಳುವುದಕ್ಕೆ ಮುಂಚೆಯೇ ದೇಹಭಂಗಿಯು ಬದಲಾವಣೆಯಾದಲ್ಲಿ (ವಿಪರ್ಯಸ್ಯ) ಅದನ್ನು ಇವನು ಹೇಗೆ ತಿಳಿದುಕೊಳ್ಳಲು ಸಾಧ್ಯ ?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The dancer may be committing hundreds of mistakes
While depicting humor, compassion, love and anger
But how can the spectators detect the flaws if the bodily expressions
Change too fast for them to notice the discrepancies – Marula Muniya
(Translation from "Thus Sang Marula Muniya" by Sri. Narasimha Bhat)

Monday, January 21, 2013

ಪದನೃತ್ತಗತಿಗುಂಟು ಕಾಲಯತಿಲಯ ನಿಯತಿ (352)

ಪದನೃತ್ತಗತಿಗುಂಟು ಕಾಲಯತಿಲಯ ನಿಯತಿ |
ವದನರುಚಿಗುಂಟೆ ನಿಯಮಕ್ರಮ ನಿಬಂಧಂ ? ||
ವಿಧಿಯುಂ ವಿಪರ‍್ಯಯಮುವೊಂದಿರ‍್ಪನಟನದಲಿ |
ವಿದಿತವಾರ‍್ಗದರಾಳ - ಮರುಳ ಮುನಿಯ || (೩೫೨)

(ಗತಿಗೆ+ಉಂಟು)(ಕಾಲ+ಯತಿ+ಲಯ)(ರುಚಿಗೆ+ಉಂಟೆ)(ವಿಪರ‍್ಯಯಮುಂ+ಒಂದಿರ‍್ಪ)(ವಿದಿತ+ಆರ‍್ಗೆ+ಅದರ+ಆಳ)

ನರ್ತನದ ಹೆಜ್ಜೆ(ಪದ)ಯ ನಡಿಗೆಗೆ, ಸಮಯ, ನಿಲುಗಡೆ ಮತ್ತು ಲಯದ ನಿಯಮಗಳಿವೆ. ಆದರೆ ಬಾಯಿರುಚಿಗೂ ಸಹ ನಿಯಮ ಕ್ರಮ ಮತ್ತು ಕಟ್ಟುಪಾಡುಗಳಿವೆಯೋ? ವಿಧಿ ಮತ್ತು ವಿಪರ್ಯಾಸಗಳೆರಡೂ ಒಂದಾಗಿರುವ ನರ್ತನದಲ್ಲಿ ಅವುಗಳ ಆಳವು ಯಾರಿಗೆ ತಿಳಿಯುತ್ತದೆ?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There are rules governing time, pause and rhythm in dance
But are there rules and restrictions in tastes and gluttony?
Who can understand the deep meaning of the dance in which
Fate joins hands with unruly perversions – Marula Muniya (352)
(Translation from "Thus Sang Marula Muniya" by Sri. Narasimha Bhat)

Friday, January 18, 2013

ಸನ್ನಿಭತೆ ನರನರರ‍್ಗುಂಟು ಕೆಲವಂಶದಲಿ (351)

ಸನ್ನಿಭತೆ ನರನರರ‍್ಗುಂಟು ಕೆಲವಂಶದಲಿ |
ಭಿನ್ನತೆಯುಮದರೊಡನೆ ಕೆಲವಂಶದಲಿ ||
ಚಿಹ್ನಮಿಶ್ರಣವೆ ದೃಷ್ಟಿಭ್ರಾಂತಿಯಾಗೆ ಜಗ |
ದನ್ಯೂನ ನಾಟಕವೊ - ಮರುಳ ಮುನಿಯ || (೩೫೧)

(ಕೆಲ+ಅಂಶದಲಿ)(ಭಿನ್ನತೆಯುಂ+ಅದರೊಡನೆ)(ಭ್ರಾಂತಿ+ಆಗೆ)(ಜಗದ+ಅನ್ಯೂನ)

ಒಬ್ಬ ಮನುಷ್ಯನಿಗೂ ಮತ್ತೊಬ್ಬನಿಗೂ ಕೆಲವು ಅಂಶಗಳಲ್ಲಿ ಮಾತ್ರ ಹೋಲಿಕೆ(ಸನ್ನಿಭತೆ)ಗಳಿರುತ್ತವೆ. ಅದೇ ರೀತಿ ಇನ್ನೂ ಕೆಲವು ಅಂಶಗಳಲ್ಲಿ ಭೇದ(ಭಿನ್ನತೆ)ಗಳಿರುತ್ತವೆ. ಈ ಗುರುತುಗಳ ಬೆರೆಸುವಿಕೆಯಿಂದ ನೋಟಕ್ಕೆ ತಪ್ಪು ಗ್ರಹಿಕೆಯುಂಟಾಗುವುದೇ ಈ ಜಗತ್ತಿನ ಅಖಂಡ ನಾಟಕ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Similarities among men exist in some respects,
Differences among men also exist in some other respects,
The cosmic drama continues perfectly well even when
The jumbled signs cause confusing vision – Marula Muniya (351)
(Translation from "Thus Sang Marula Muniya" by Sri. Narasimha Bhat)

Thursday, January 17, 2013

ಜಂತುದೇಹದ ಯಂತ್ರ ಸಾಮಾನ್ಯ ರಚನೆಯೊಳು (350)

ಜಂತುದೇಹದ ಯಂತ್ರ ಸಾಮಾನ್ಯ ರಚನೆಯೊಳು |
ಸ್ವಾಂತ ತಂತ್ರದ ಚೋದ್ಯವಿರಿಸಿಹಳ್ ಪ್ರಕೃತಿ ||
ಹಂತವೇರಲ್ ಜನ್ಮನಿಶ್ರೇಣಿಯೊಳ್ ಜೀವ |
ತಂತ್ರ ಪಟುತರವಹುದು - ಮರುಳ ಮುನಿಯ || (೩೫೦)

(ಚೋದ್ಯ+ಇರಿಸಿ+ಇಹಳ್)(ಹಂತ+ಏರಲ್)(ಪಟುತರ+ಅಹುದು)

ಪ್ರಾಣಿಯ ದೇಹವೆಂಬ ಯಂತ್ರದ ವಿಶೇಷವಲ್ಲದ ಈ ರಚನೆಯಲ್ಲಿ, ಮನಸ್ಸು (ಸ್ವಾಂತ) ಎನ್ನುವ ಉಪಾಯದ ಸೋಜಿಗ(ಚೋದ್ಯ)ವನ್ನು ಪ್ರಕೃತಿಯು ಇರಿಸಿರುವಳು. ಜನ್ಮಗಳ ಏಣಿ(ನಿಶ್ರೇಣಿ)ಗಳನ್ನು ಜೀವವು ಹತ್ತಲು ಈ ಉಪಾಯವು ಸಮರ್ಥವಾದ ಸಾಧನ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In the ordinary machine of the body of a living being
Nature has set a device, the wonder called mind
When the soul climbs higher and higher in the ladder of births
The device within attains excellence – Marula Muniya (350)
(Translation from "Thus Sang Marula Muniya" by Sri. Narasimha Bhat)

Wednesday, January 16, 2013

ಯಂತ್ರದೊಳಗಣ ಯಂತ್ರ ತಂತ್ರದೊಳಗಣ ತಂತ್ರ (349)

ಯಂತ್ರದೊಳಗಣ ಯಂತ್ರ ತಂತ್ರದೊಳಗಣ ತಂತ್ರ |
ಜಂತುವಿದು ಸೃಷ್ಟಿಯಾ ರಸಕಲಾಗ್ರಂಥ ||
ತಂತುಕಾರಳೆ ಸೃಷ್ಟಿ ರಾಟೆಯಂತ್ರವ ತಿರುಹೆ ? |
ಮಂತ್ರಯೋಗಿನಿಯವಳು - ಮರುಳ ಮುನಿಯ || (೩೪೯)

(ಯಂತ್ರದ+ಒಳಗಣ)(ತಂತ್ರದ+ಒಳಗಣ)(ಜಂತು+ಇದು)(ಸೃಷ್ಟಿಯ+ಆ)

ಯಂತ್ರದ ಒಳಗಿರುವ ಯಂತ್ರ ಮತ್ತು ಅದರಿಂದ ಸಾಧಿಸುವ ಉಪಾಯಗಳ ಒಳಗಿರುವ ಯುಕ್ತಿಗಳಿಂದ ಆದದ್ದು ಈ ಪ್ರಾಣಿ. ಇದು ಸೃಷ್ಟಿಯ ಸಾರಗಳ ಲಲಿತವಿದ್ಯೆಗಳ ಕೃತಿ. ನೂಲು ತೆಗೆಯುವವಳು (ತಂತುಕಾರಳು) ಈ ಸೃಷ್ಟಿಯ ಚರಕ ಯಂತ್ರವನ್ನು ತಿರುಗಿಸುತ್ತಾಳೆ. ಇವಳು ಮಂತ್ರಸಾಧಕಿಯಾದ ಯೋಗಿನಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This living being is a machine within machine
Technique within technique and a volume of arts and aesthetics
Nature turns the spinning wheel and spins the yarn
She is a sage singing divine words – Marula Muniya (349)
(Translation from "Thus Sang Marula Muniya" by Sri. Narasimha Bhat)

Friday, January 11, 2013

ಕಾಲವೆಂಬುದನಂತನದಿಯದರ ಅಲೆ ಸಾಂತ (348)

ಕಾಲವೆಂಬುದನಂತನದಿಯದರ ಅಲೆ ಸಾಂತ |
ವೇಳೆಯದು ಯುಗ ವರ್ಷ ಮಾಸ ದಿನ ಗಳಿಗೆ ||
ಪೀಳಿಗೆಗಳವರೊಡನೆ (ಸಕಲ) ಜನಪದ ಜನರು |
ಲೀಲೆಯದು ಲೆಕ್ಕವಿದು - ಮರುಳ ಮುನಿಯ || (೩೪೮)

(ಕಾಲ+ಎಂಬುದು+ಅನಂತ+ನದಿ+ಅದರ)(ವೇಳೆ+ಅದು)(ಪೀಳಿಗೆಗಳು+ಅವರ+ಒಡನೆ)(ಲೀಲೆ+ಅದು)(ಲೆಕ್ಕ+ಇದು)

ಕಾಲ ಎನ್ನುವುದು ಕೊನೆಯಿಲ್ಲದಿರುವ ಸಾಗರ. ಅದರೆ ಆ ಸಾಗರದ ಅಲೆಗಳಿಗೆ ಅಂತ್ಯವಿದೆ (ಸಾಂತ). ಯುಗ, ವರ್ಷ, ತಿಂಗಳು, ದಿವಸ ಮತ್ತು ಗಳಿಗೆಗಳು, ಈ ಕಾಲವನ್ನು ಅಳೆಯುವ ಮಾಪನವಷ್ಟೆ. ವಂಶಗಳು, ಎಲ್ಲಾ ಜನಸಮುದಾಯಗಳು ಮತ್ತು ಜನಗಳು ಇ...ದರಲ್ಲಿ ಬಂದು ಹೋಗುತ್ತವೆ. ಇದೇ ಒಂದು ಆಟ ಮತ್ತು ಇದೇ ಒಂದು ತೆರನಾದ ಲೆಕ್ಕಾಚಾರ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Times is an endless river but the waves rise, fall and end
Era, year, month, day and hour are different periods
Generations, all communities, all people flow through the periods
This is an account of the endless play – Marula Muniya (348)
(Translation from "Thus Sang Marula Muniya" by Sri. Narasimha Bhat)

Thursday, January 10, 2013

ತೆರಪೆಲ್ಲಿ ಕಾಲದಲಿ? ಬಿಡುವೆಲ್ಲಿ ಸೃಷ್ಟಿಯಲಿ (347)

ತೆರಪೆಲ್ಲಿ ಕಾಲದಲಿ? ಬಿಡುವೆಲ್ಲಿ ಸೃಷ್ಟಿಯಲಿ |
ಮರಣ ಜನನಗಳು ಸುಖದುಃಖಗಳು ಸುಕೃತ ||
ದುರಿತಗಳು ವಾಂಛೆ ಪ್ರಯತ್ನಗಳೀಯೆಂಟು - |
ಮಿರದಿರೆ ಕ್ಷಣವುಂಟೆ ? - ಮರುಳ ಮುನಿಯ || (೩೪೭)

(ತೆರಪು+ಎಲ್ಲಿ)(ಬಿಡುವು+ಎಲ್ಲಿ)(ಪ್ರಯತ್ನಗಳು+ಈ+ಎಂಟುಂ+ಇರದೆ+ಇರೆ)

ಕಾಲಕ್ಕೆ ವಿರಾಮ(ತೆರಪು) ಎಲ್ಲಿದೆ? ಹಾಗೆಯೇ ಸೃಷ್ಟಿಯ ಕೆಲಸಕ್ಕೂ ಸಹ ಬಿಡುವೆಲ್ಲಿದೆ? ಹುಟ್ಟು ಮತ್ತು ಸಾವುಗಳು, ಸಂತೋಷ ಮತ್ತು ನೋವುಗಳು, ಪುಣ್ಯಕಾರ್ಯಗಳು, ಪಾಪ (ದುರಿತ) ಕರ್ಮಗಳು, ಆಸೆಗಳು (ವಾಂಛೆ) ಮತ್ತು ಪ್ರಯತ್ನಗಳು, ಈ ಎಂಟು ಕರ್ಮಗಳು ಸ್ತಬ್ಧವಾಗಿ ಅರೆಕ್ಷಣವಾದರೂ ಇರುವುದು ಉಂಟೇ?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where is interlude in time, where leisure in creation?
Is there a single moment without these eight?
Births and deaths, happiness and sorrow, fortunes
And misfortunes desire and Endeavour? – Marula Muniya (347)
(Translation from "Thus Sang Marula Muniya" by Sri. Narasimha Bhat)

Wednesday, January 9, 2013

ಪ್ರಾಕ್ಕರ್ಮತಂತು ನಿನ್ನಡಿಯ ಬಿಗಿದಿರೆ ಮರಕೆ (346)

ಪ್ರಾಕ್ಕರ್ಮತಂತು ನಿನ್ನಡಿಯ ಬಿಗಿದಿರೆ ಮರಕೆ |
ಹಕ್ಕಿ ನೀಂ ನೆಗೆನೆಗೆದು ಕಿತ್ತಾಡದಿಹೆಯ ? ||
ರೆಕ್ಕೆ ಬಲವಿದ್ದಂತೆ ಜಗ್ಗುತಿರೆ ಪರಿಯದೇ |
ನುಕ್ಕಾದೊಡಂ ತಂತು - ಮರುಳ ಮುನಿಯ || (೩೪೬)

(ಪ್ರಾಕ್+ಕರ್ಮತಂತು)(ನಿನ್ನ+ಅಡಿಯ)(ಬಿಗಿದು+ಇರೆ)(ಕಿತ್ತಾಡದೆ+ಇಹೆಯ)(ಬಲ+ಇದ್ದಂತೆ)(ಜಗ್ಗುತ+ಇರೆ)(ನುಕ್ಕೆ+ಆದೊಡಂ)

ನಿನ್ನ ಪೂರ್ವ(ಪ್ರಾಕ್)ದ ಕರ್ಮಗಳ ಎಳೆಯು ನಿನ್ನ ಕಾಲುಗಳನ್ನು ಮರಕ್ಕೆ ಬಿಗಿದಿರಲು, ನೀನೆಂಬ ಹಕ್ಕಿಯು (ತಂತು) ನೆಗೆ ನೆಗೆದು ಕಿತ್ತು, ಹಾರಲು ಪ್ರಯತ್ನಿಸದಿರುವೆಯೇನು? ನಿನ್ನ ರೆಕ್ಕೆಗಳಲ್ಲಿ ಎಷ್ಟು ಶಕ್ತಿ ಇದೆಯೋ ಅಷ್ಟನ್ನೂ ಉಪಯೋಗಿಸಿ ನೀನು ಬಿಡಿಸಿಕೊಳ್ಳಲು ಜಗ್ಗುತ್ತಿರಲು, ದಾರವು ತುಂಡಾಗಿ ಹೋಗುವುದರ ಜೊತೆಗೆ (ನುಕ್ಕಾದೊಡಂ) ರೆಕ್ಕೆಯು ಸಹ ಹರಿಯದಿರುವುದೇನು?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You are a bird tied to a tree with the string of past Karma
You jump, ho? Pull and struggle to free yourself
When you jump with all the strength of your sides
Even the string of steel would break – Marula Muniya (346)
(Translation from "Thus Sang Marula Muniya" by Sri. Narasimha Bhat)

Tuesday, January 8, 2013

ತರಣಿ ಶಶಿಯದಿರುತಿರೆ ತಿರೆಯದಿರಲಿರಲಹುದೆ (345)

ತರಣಿ ಶಶಿಯದಿರುತಿರೆ ತಿರೆಯದಿರಲಿರಲಹುದೆ |
ನರದೇಹ ಚಿತ್ತಂಗಳಂದದಿರದಿಹುವೆ? ||
ಸುರಲೋಕ ನರಲೋಕವನ್ಯೋನ್ಯ ಕೀಲುಗಳು |
ಚರವಿಚರ ಸಮಗಳವು - ಮರುಳ ಮುನಿಯ || (೩೪೫)

(ಶಶಿ+ಅದಿರುತಿರೆ)(ತಿರೆ+ಅದಿರಲ್+ಇರಲ್+ಅಹುದೆ)(ಚಿತ್ತಂಗಳ್+ಅಂದು+ಅದಿರದೆ+ಇಹುವೆ)(ನರಲೋಕ+ಅನ್ಯೋನ್ಯ)(ಸಮಗಳು+ಅವು)

ಸೂರ್ಯ(ತರಣಿ) ಮತ್ತು ಚಂದ್ರ(ಶಶಿ)ರುಗಳು ನಡುಗುತ್ತಿರುವಾಗ ಭೂಮಿ(ತಿರೆ)ಯು ನಡುಗದಿರಲು ಸಾಧ್ಯವೇನು? ಮನುಷ್ಯನ ದೇಹ ಮತ್ತು ಮನಸ್ಸುಗಳು ಸಹ ಆವಾಗ ನಡುಗದಿರಲು ಸಾಧ್ಯವೇನು? ದೇವತೆಗಳ ಮತ್ತು ಮನುಷ್ಯರ ಲೋಕಗಳು ಒಂದಕ್ಕೊಂದು ಹೊಂದಿಕೆಯಾಗುವ ಕೀಲುಗಳು. ಅವು ಸರಿಯಾದ ಮತ್ತು ತಪ್ಪು ದಾರಿಗಳಲ್ಲಿ ಸಂಚರಿಸುವ(ಚರವಿಚರ) ಸಮಾನವಾದ ಲೋಕಗಳು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can the earth remain steady when the sun and moon tremble?
Don’t the body and mind of man become unsteady then?
Heaven and earth function like bolts to each other
Their movements are sometimes correct and sometimes incorrect – Marula Muniya (345)
(Translation from "Thus Sang Marula Muniya" by Sri. Narasimha Bhat)

Monday, January 7, 2013

ಚಪ್ಪರವ ಪಿಡಿಯದಿಹ ಬಳ್ಳಿಕರಡಾಗಿ ನೆಲ (344)

ಚಪ್ಪರವ ಪಿಡಿಯದಿಹ ಬಳ್ಳಿಕರಡಾಗಿ ನೆಲ - |
ವಪ್ಪಿ ಹೂಕಾಯ್ಬಿಡದವೊಲ್ ನರಂ ತನ್ನ ||
ದುರ್ಬಲದಿ ಸಾಕಾರದೈವಬಲವರಸದಿರೆ |
ತಬ್ಬಲಿವೊಲಳುತಿಹನೊ - ಮರುಳ ಮುನಿಯ || (೩೪೪)

(ಪಿಡಿಯದೆ+ಇಹ)(ನೆಲ+ಅಪ್ಪಿ)(ಹೂಕಾಯಿ+ಬಿಡದವೊಲ್)(ಸಾಕಾರ+ದೈವಬಲವ+ಅರಸದೆ+ಇರೆ)
(ತಬ್ಬಲಿವೊಲ್+ಅಳುತಿಹನೊ)

ನೆಲದಲ್ಲಿ ಬೆಳೆದಿರುವ ಲತೆಯು ಚಪ್ಪರವನ್ನು ಗಟ್ಟಿಯಾಗಿ ಅಪ್ಪಿಕೊಳ್ಳದೆ ಒಣಗಿ ಬಡಕಲಾಗಿ (ಕರಡಾಗಿ) ನೆಲವನ್ನೇ ಅಪ್ಪಿಕೊಂಡು, ಹೂ ಮತ್ತು ಕಾಯಿಗಳು ಬಿಡದಿರುವಂತೆ, ಮನುಷ್ಯನು ತನ್ನ ಬಲಹೀನತೆಯಿಂದ ಪಾರಾಗಲು, ಸಾಕಾರವಾಗಿರುವ ದೈವಶಕ್ತಿಯನ್ನು ಹುಡುಕಿ ಆಶ್ರಯಿಸದಿದ್ದಲ್ಲಿ, ತಾಯಿ, ತಂದೆಯರುಗಳಿಲ್ಲದಿರುವ ತಬ್ಬಲಿಯಂತೆ ಗೋಳಾಡುತ್ತಾ ಇರುತ್ತಾನೆ ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The creeper that doesn’t rise up and spread on the trellis above
Bites the dust and fails to yield flowers and fruits and likewise
The weak human being who doesn’t seek the God with forms
Wails like an orphan – Marula Muniya (344)
(Translation from "Thus Sang Marula Muniya" by Sri. Narasimha Bhat)

Friday, January 4, 2013

ಜಗದ ಯಂತ್ರದ ಚಕ್ರಕೀಲ್ಗಳದಿರುವುದುಂಟು (343)

ಜಗದ ಯಂತ್ರದ ಚಕ್ರಕೀಲ್ಗಳದಿರುವುದುಂಟು |
ಪ್ರಗತಿಫಲಿತದಿ ವಿಗತಿ ಬೀಜವಿಹುದುಂಟು ||
ತ್ರಿಗುಣ ಕೃತ್ರಿಮ ಮನುಜರಚನೆಯೊಳಗಿರಲಾಗಿ |
ವೆಗಡು ತಪ್ಪದೊ ನಮಗೆ - ಮರುಳ ಮುನಿಯ || (೩೪೩)

(ಕೀಲ್ಗಳ್+ಅದಿರುವುದು+ಉಂಟು)(ಬೀಜ+ಇಹುದು+ಉಂಟು)(ಮನುಜರಚನೆಯೊಳಗೆ+ಇರಲಾಗಿ)

ಜಗತ್ತಿನ ಯಂತ್ರದ ಕೀಲುಗಳು ಕಂಪಿಸುವುದುಂಟು. ಪ್ರಗತಿಯ ಫಲಿತಾಂಶಗಳಲ್ಲಿ ಹಿನ್ನಡೆ(ವಿಗತಿ)ಯ ಬೀಜವೂ ಇದೆ. ಮೂರು ಸ್ವಭಾವಗಳ ಕುಟಿಲತೆಯು ಮನುಷ್ಯನ ಸೃಷ್ಟಿಯಲ್ಲಿ ಇರಲು, ಅಸಹ್ಯವಾದ ಸೀಕಲು ವಾಸನೆ(ವೆಗಟು)ಯನ್ನು ನಾವು ತಪ್ಪಿಸಿಕೊಳ್ಳಲಾರೆವು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The wheels and joint of the world machine may sometimes shake
The seeds of regression may sometimes lay hiding in the fruit of progress
The deceptive three gunas are the ingrained in human nature
And therefore we can’t escape suffering – Marula Muniya
(Translation from "Thus Sang Marula Muniya" by Sri. Narasimha Bhat)

Wednesday, January 2, 2013

ಪ್ರಕೃತಿ ಮನುಜನ ಮಾತೆಯವಳುದರ ಹುಳಿಯಾಗೆ (342)

ಪ್ರಕೃತಿ ಮನುಜನ ಮಾತೆಯವಳುದರ ಹುಳಿಯಾಗೆ |
ವಿಕೃತನಾಗನೆ ಹಸುಳೆಯಂತರಂಗದಲಿ? ||
ಸ್ವಕೃತ ಧರ್ಮದಿನವಂ ಪ್ರಕೃತಿಯಂ ಮೀರ‍್ದಂದು |
ನಿಕೃತಿ ತಪ್ಪುವುದಿಳೆಗೆ - ಮರುಳ ಮುನಿಯ || (೩೪೨)
(ಮಾತೆ+ಅವಳ್+ಉದರ)(ಹುಳಿ+ಆಗೆ)(ವಿಕೃತನ್+ಆಗನೆ)(ಹಸುಳೆ+ಅಂತರಂಗದಲಿ)(ಧರ್ಮದಿನ್+ಅವಂ)(ಮೀರ‍್ದ+ಅಂದು)(ತಪ್ಪುವುದು+ಇಳೆಗೆ)

ಪ್ರಕೃತಿಯು ಮನುಷ್ಯನ ತಾಯಿ. ಅವಳ ಜಠರ(ಉದರ)ವು ಹುಳಿಯಾದರೆ, ಅವಳ ಶಿಶು(ಹಸುಳೆ)ವಾದ ಮನುಷ್ಯನು ಒಳಭಾಗದಲ್ಲಿ ವಿಕಾರ(ವಿಕೃತ)ನಾಗದಿರುವನೇನು? ತಾನು ಪಾಲಿಸಿದ ಧರ್ಮದನುಸರಣೆಯಿಂದ, ಅವನು ಪ್ರಕೃತಿಯನ್ನು ದಾಟಿ ಹೋದಾಗ ಭೂಮಿಗೆ (ಇಳೆಗೆ) ವಂಚನೆ(ನಿಕೃತಿ)ಯು ತಪ್ಪುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature is man’s mother but won’t the child’s inner system
Become distorted when her womb turns sour?
The world will be out of danger when man rises above his nature
By his own righteous conduct – Marula Muniya (342)
(Translation from "Thus Sang Marula Muniya" by Sri. Narasimha Bhat)

Tuesday, January 1, 2013

ಹಾಸ್ಯಬೀಜವೊ ಜೀವ ಸಸ್ಯವದರಿಂದೆಲ್ಲ (341)

ಹಾಸ್ಯಬೀಜವೊ ಜೀವ ಸಸ್ಯವದರಿಂದೆಲ್ಲ |
ವಿಶ್ವಮಾಯಾವಿಜೃಂಭಣೆಯಿಂದ ಲೋಕ ||
ಹಾಸ್ಯ ವಿಪರೀತವೇ ಬಿನದವೀಶ್ವರನಿಂಗೆ |
ನಿಶ್ಚಿತದ ತತ್ತ್ವವಿದು - ಮರುಳ ಮುನಿಯ || (೩೪೧)

(ಸಸ್ಯ+ಅದರಿಂದ+ಎಲ್ಲ)(ಬಿನದ+ಈಶ್ವರನಿಂಗೆ)(ತತ್ತ್ವ+ಇದು)

ಜೀವವೆನ್ನುವುದು ಹಾಸ್ಯವೆಂಬ ಬೀಜದಿಂದ ಉತ್ಪತ್ತಿಯಾಗಿದೆ. ಅದರಿಂದಲೇ ಮಿಕ್ಕ ಸಸ್ಯಗಳು ಜನಿಸುತ್ತದೆ. ವಿಶ್ವ ಮಾಯೆಯ ಆಡಂಬರದ ಪ್ರದರ್ಶನದಿಂದ (ವಿಜೃಂಭಣೆ) ಈ ಲೋಕವುಂಟಾಗಿದೆ. ವಿಪರೀತವಾದ ಹಾಸ್ಯವು ಪರಮಾತ್ಮನಿಗೆ ವಿನೋದ(ಬಿನದ)ಕರವಾಗಿ ತೋರುತ್ತದೆ. ಖಚಿತವಾದ ಸಿದ್ಧಾಂತವಿದು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Humor is the seed from which springs the life vegetation
This world is a parade of the universal Maya
Excessive humor is just an amusement to God
This is an absolute truth – Marula Muniya (341)
(Translation from "Thus Sang Marula Muniya" by Sri. Narasimha Bhat)