Friday, February 28, 2014

ಅಸಮತೆಗಮೆಡೆಯುಂಟು ಸೃಷ್ಟಿನಿರ್ವಾಹದಲಿ (580)

ಅಸಮತೆಗಮೆಡೆಯುಂಟು ಸೃಷ್ಟಿನಿರ್ವಾಹದಲಿ |
ವಸುಧೆಯೊಳಗುಂಟೇನು ಚಾಪೆ ಚಪ್ಪಟೆಯು ||
ಕುಸುಮ ಫಲ ಪರ್ಣಂಗಳೊಂದರಂತೊಂದಿಹುವೆ? |
ಪಶು-ಪಕ್ಷಿಗಳದೇನು? - ಮರುಳ ಮುನಿಯ || (೫೮೦)

(ವಸುಧೆ+ಒಳಗೆ+ಉಂಟೇನು)(ಪರ್ಣಂಗಳ್+ಒಂದರಂತೆ+ಒಂದು+ಇಹುವೆ)(ಪಕ್ಷಿಗಳು+ಅದು+ಏನು)

ಪ್ರಪಂಚದ ವ್ಯವಸ್ಥೆಯಲ್ಲಿ ಸಮಾನವಾಗಿಲ್ಲದಿರುವುದಕ್ಕೆ (ಅಸಮತೆ) ಜಾಗ(ಎಡೆ)ವಿದೆ. ಭೂಮಿಯು ಚಾಪೆ, ಚಪ್ಪಟೆಗಳಂತೆ ಮಟ್ಟಸವಾಗಿದೆಯೇನು? ಹೂವು (ಕುಸುಮ) ಹಣ್ಣು(ಫಲ), ಮತ್ತು ಎಲೆ(ಪರ್ಣ)ಗಳು ಒಂದರಂತೆ ಇನ್ನೊಂದು ಇವೆಯೇನು? ಅಂತೆಯೇ ಪಶು, ಪಕ್ಷಿಗಳು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

 Scope there is for inequality in the world arrangement
Is the whole world quite flat like a mat?
Is each flower, fruit or leaf similar to the other?
What about birds and animals? – Marula Muniya (580)
(Translation from "Thus Sang Marula Muniya" by Sri. Narasimha Bhat)

Thursday, February 27, 2014

ಅಸಮತೆಗಮೆಡೆಯುಂಟು ಸೃಷ್ಟಿನಿರ್ವಾಹದಲಿ (579)

ಅಸಮತೆಗಮೆಡೆಯುಂಟು ಸೃಷ್ಟಿನಿರ್ವಾಹದಲಿ |
ವಸುಧೆಯಲಿ ನೋಡು ಗಿರಿಝರಿಯರಣ್ಯಂ ||
ಕುಸುಮ ಫಲ ಪರ್ಣಂಗಳೊಂದರಂತೊಂದಿಹುವೆ? |
ಬಿಸಿ ಚಳಿಯ ಋತುಗಳೇಂ? - ಮರುಳ ಮುನಿಯ || (೫೭೯)

(ಅಸಮತೆಗಂ+ಎಡೆಯುಂಟು)(ಝರಿ+ಅರಣ್ಯಂ)(ಪರ್ಣಂಗಳು+ಒಂದರಂತೆ+ಒಂದು+ಇಹುವೆ)

ಸೃಷ್ಟಿಯು ತನ್ನ ಕೆಲಸವನ್ನು ನಿಭಾಯಿಸುವ ಕ್ರಮದಲ್ಲಿ ಅಸಮಾನತೆಗೆ ಅವಕಾಶ(ಎಡೆ)ವನ್ನು ಕೊಟ್ಟಿದೆ. ಭೂಮಿಯಲ್ಲಿ ಬೆಟ್ಟ(ಗಿರಿ), ಅದರಲ್ಲಿ ಹರಿಯುವ ನದಿ(ಝರಿ), ಕಾಡು (ಅರಣ್ಯ), ಹೂವು(ಕುಸುಮ), ಹಣ್ಣು (ಫಲ) ಮತ್ತು ಎಲೆ(ಪರ್ಣ)ಗಳು ಒಂದರಂತೆ ಮತ್ತೊಂದು ಇವೆಯೇನು? ಹಾಗೆಯೇ ಬೇಸಗೆ ಮತ್ತು ಚಳಿಗಾಲಗಳೆಂಬ ಋತುಗಳೂ ಸಹ ಬೇರೆ ಬೇರೆಯಾಗಿವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Provision there is for inequality in the working of creation,
Observe the mountains, rivers and forests of the world,
Does any flower, fruit or leaf resemble another
of its kind? What about summer and winter? – Marula Muniya
(Translation from "Thus Sang Marula Muniya" by Sri. Narasimha Bhat)

Wednesday, February 26, 2014

ಸಮತೆ ಸಮತೆಯೆನುತ್ತೆ ಬೊಬ್ಬೆಯಿಡುತಿದೆ ಲೋಕ (578)

ಸಮತೆ ಸಮತೆಯೆನುತ್ತೆ ಬೊಬ್ಬೆಯಿಡುತಿದೆ ಲೋಕ |
ಯಮಲಾರ್ಥದಾಕರ್ಷೆಯಾಘೋಷಣೆಯಲಿ ||
ಕ್ರಮವೆಲ್ಲರಿಗಮೊಂದೆ ಗುಣಗಣನೆಗೆನುತಮು- |
ತ್ತಮನಿಲ್ಲ ತನಗೆಂದು - ಮರುಳ ಮುನಿಯ || (೫೭೮)

(ಯಮಲ+ಅರ್ಥದ+ಆಕರ್ಷೆಯ+ಆ+ಘೋಷಣೆಯಲಿ)(ಕ್ರಮವು+ಎಲ್ಲರಿಗಂ+ಒಂದೆ)(ಗುಣಗಣನೆಗೆ+ಎನುತಂ+ಉತ್ತಮನ್+ಇಲ್ಲ)

ಎಲ್ಲೆಲ್ಲಿಯೂ ಸಮಾನತೆಯಿರಬೇಕೆಂಬ ದ್ವಂದಾರ್ಥ(ಯಮಲಾರ್ಥ)ಗಳನ್ನು ತರುವ ಆಕರ್ಷಣೆ(ಆಕರ್ಷೆ)ಯ ಡಂಗುರ(ಘೋಷಣೆ)ದಲ್ಲಿ ಜಗತ್ತು ಈವತ್ತು ಚೀರಾಡುತ್ತಿದೆ. ಎಲ್ಲರಿಗೂ ಗುಣಗಣನೆಗೆ ಒಂದೇ ನಿಯಮವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎನ್ನುತ್ತಿದೆ. ತನಗಿಂತ ಉತ್ತಮನಾದವ ಇನ್ನೊಬ್ಬನಿಲ್ಲವೆಂಬ ಭಾವದಿಂದ ಅದು ಚೀರಾಡುತ್ತಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Equality, equality shouts the whole world from house tops,
The slogan is quite fascinating with two meanings,
“The merits of all should be judged by same norms”
You say so but insist that no one else is better than you – Marula Muniya
(Translation from "Thus Sang Marula Muniya" by Sri. Narasimha Bhat)

Tuesday, February 25, 2014

ಎರಡು ಸಿರಿ ನರನಿರವನಾಳುವುವು ಲೋಕದಲಿ (577)

ಎರಡು ಸಿರಿ ನರನಿರವನಾಳುವುವು ಲೋಕದಲಿ |
ಹೊರಗೊಂದು ಪೇಟೆಯಿನ್ನೊಂದೊಳಗೆ ಹೃದಯ ||
ಪಿರಿದನೊಂದನು ಮಾಡೆ ಕಿರಿದಪ್ಪುದಿನ್ನೊಂದು |
ತರತಮವ ನೋಡಿ ತಿಳಿ - ಮರುಳ ಮುನಿಯ || (೫೭೭)

(ನರನ+ಇರವನ್+ಆಳುವುವು)(ಹೊರಗೆ+ಒಂದು)(ಪೇಟೆ+ಇನ್ನೊಂದು+ಒಳಗೆ)(ಪಿರಿದನ್+ಒಂದನು)(ಕಿರಿದು+ಅಪ್ಪುದು+ಇನ್ನೊಂದು)

ಈ ಪ್ರಪಂಚದಲ್ಲಿ ಮನುಷ್ಯನ ಇರುವಿಕೆಯ ಸ್ಥಿತಿಯನ್ನು ಎರಡು ಸಂಪತ್ತುಗಳು ಆಳುತ್ತವೆ. ಒಂದು ಹೊರಗಡೆಯ ಸಂತೆಯ ಗಲಾಟೆಗಳಲ್ಲಿದ್ದರೆ, ಇನ್ನೊಂದು ಹೃದಯದೊಳಗಿರುತ್ತದೆ. ಒಂದನ್ನು ದೊಡ್ಡದ(ಪಿಡಿದು)ನ್ನಾಗಿ ಮಾಡಿದರೆ, ಮತ್ತೊಂದು ಚಿಕ್ಕ(ಕಿರಿದು)ದಾಗುತ್ತದೆ. ಈ ಅಂತರ(ತರತಮ)ವನ್ನು ನೀನು ಪರೀಕ್ಷಿಸಿ ತಿಳಿದುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two kind of wealth control the life of men on the earth
A market place outside and another inside the heart
If you give more importance to once, the other becomes less important
Think well and discriminate between the two – Marula Muniya (577)
(Translation from "Thus Sang Marula Muniya" by Sri. Narasimha Bhat)

Monday, February 24, 2014

ಎಣಿಪುದೊಳಿತನು ಕೇಡನು ದ್ವಂದ್ವಮೆಲ್ಲವನು (576)

ಎಣಿಪುದೊಳಿತನು ಕೇಡನು ದ್ವಂದ್ವಮೆಲ್ಲವನು |
ತನಗದೆಂತೆಂದೆಂಬ ಪದದಿನೆಲ್ಲವನು ||
ಜನಿಪುದು ಶುಭಾಶುಭದ್ವಂದ್ವಂಗಳದರಿಂದೆ |
ಪುಣ್ಯಪಾಪಗಳಂತು - ಮರುಳ ಮುನಿಯ || (೫೭೬)

(ಎಣಿಪುದು+ಒಳಿತನು)(ದ್ವಂದ್ವಂ+ಎಲ್ಲವನು)(ತನಗೆ+ಅದು+ಎಂತು+ಎಂದು+ಎಂಬ)(ಪದದಿನ್+ಎಲ್ಲವನು)(ಶುಭ+ಅಶುಭ+ದ್ವಂದ್ವಂಗಳ್+ಅದರಿಂದೆ)(ಪುಣ್ಯಪಾಪಗಳ್+ಅಂತು)

ಒಳ್ಳೆಯದು, ಕೆಡಕುಗಳೆಂಬ ತದ್ವಿರುದ್ಧಗಳು ತನಗೆ ಹೇಗೆ ಅನ್ವಯವಾಗುತ್ತದೆನ್ನುವ ಭಾವದಿಂದ ಅವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಂಗಳ (ಶುಭ) ಮತ್ತು ಅನಿಷ್ಟ(ಅಶುಭ)ಕಾರಕವಾದ ವಿರುದ್ಧ ಪರಿಣಾಮಗಳು ಮತ್ತು ಪುಣ್ಯ-ಪಾಪಗಳೂ ಸಹ ಇದೇ ರೀತಿ ಹುಟ್ಟುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Think of good and evil and all pairs of opposites
Applying them first to your own self as a model
All auspicious and inauspicious pairs of opposites
All sins and virtues arise from that – Marula Muniya
(Translation from "Thus Sang Marula Muniya" by Sri. Narasimha Bhat)

Friday, February 21, 2014

ಫಲಪುಷ್ಪ ಸವಿವಂದು ಗಿಡದ ಬೇರೆಣಿಸದಿರು (575)

ಫಲಪುಷ್ಪ ಸವಿವಂದು ಗಿಡದ ಬೇರೆಣಿಸದಿರು |
ಮಲಸಾರ ಬುಡದೊಳಿರೆ ಮೇಲೆ ರಸಗಂಧ ||
ಕೆಲ ಚೆಲುವು ಹೊಲಸಿಂದೆ ಕೆಲ ಹೊಲಸು ಚೆಲುವಿಂದೆ |
ಇಳೆಯ ಕೆಣಕುವುದೇಕೆ? - ಮರುಳ ಮುನಿಯ || (೫೭೫)

(ಬೇರ್+ಎಣಿಸದೆ+ಇರು)(ಬುಡದೊಳ್+ಇರೆ)(ಕೆಣಕುವುದು+ಏಕೆ)

ಹೂವು ಮತ್ತು ಹಣ್ಣುಗಳನ್ನು ನೀನು ಸವಿಯುವಾಗ ಆ ಗಿಡದ ಬೇರುಗಳ ಬಗ್ಗೆ ಚಿಂತಿಸಬೇಡ. ಗಿಡದ ಬುಡದಲ್ಲಿ ಗೊಬ್ಬರವಿದ್ದರೂ ಸಹ ಗಿಡದ ಮೇಲೆ ರಸ ಮತ್ತು ಸುಗಂಧಗಳಿವೆ. ಕೆಲವು ಸೊಗಸು ಹೊಲಸಿನಿಂದುಂಟಾದರೆ, ಕೆಲವು ಹೊಲಸುಗಳು ಚೆಲುವಿನಿಂದಾಗುತ್ತವೆ. ನೀನು ಭೂಮಿ(ಇಳೆ)ಯನ್ನು ಏಕೆ ಕೆಣಕುತ್ತೀಯೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Count not the roots when you enjoy fruits and flowers
Sweetness and fragrance above but filthy manure at the roots
Some beautiful things from filth and filth from beautiful things
Why do you dig up the earth to enjoy the beauty above? – Marula Muniya
(Translation from "Thus Sang Marula Muniya" by Sri. Narasimha Bhat)

Thursday, February 20, 2014

ವಾಮಚರ‍್ಯೆಗಳಿರ‍್ಪುದುಂಟು ಮೈಮೆಯ ತಳದಿ (574)

ವಾಮಚರ‍್ಯೆಗಳಿರ‍್ಪುದುಂಟು ಮೈಮೆಯ ತಳದಿ |
ಗ್ರಾಮಸಾರವ ಕೊಳ್ಳದಾರಾಮವುಂಟೆ ? ||
ತಾಮರಸವನು ಬೇಳ್ಪೊಡದರ ಕೀಳ್‍ಕೆಸರಮರೆ |
ಶ್ಯಾಮಸಿತ ದಾಂಪತ್ಯ - ಮರುಳ ಮುನಿಯ || (೫೭೪)

(ವಾಮಚರ‍್ಯೆಗಳ್+ಇರ‍್ಪುದು+ಉಂಟು)(ಕೊಳ್ಳದೆ+ಆರಾಮ+ಉಂಟೆ)(ಬೇಳ್ಪೊಡೆ+ಅದರ)(ಕೀಳ್‍ಕೆಸರ್+ಅಮರೆ)

ಮಹಿಮೆ(ಮೈಮೆ)ಗಳ ತಳಭಾಗದಲ್ಲಿ ಪ್ರತಿಕೂಲ(ವಾಮ) ನಡತೆಗಳು ಇರುವುದುಂಟು. ತ್ಯಾಜ್ಯನೀರನ್ನು ಉಪಯೋಗಿಸದೆ ತೋಟವು(ಆರಾಮ) ಬೆಳೆಯಲು ಸಾಧ್ಯವೇನು? ತಾವರೆಯ ಹೂ(ತಾಮರಸ)ವನ್ನು ಅಪೇಕ್ಷಿಸುವಾಗ ಅದರ ಬಳ್ಳಿಯ ಬುಡದಲ್ಲಿರುವ ಕೆಸರನ್ನು ನೀನು ಮರೆಯಬೇಕು. ದಾಂಪತ್ಯ ಜೀವನದಲ್ಲೂ, ಇದೇ ರೀತಿ ಕಪ್ಪು(ಶ್ಯಾಮ) ಬಿಳುಪು(ಸಿತ)ಗಳು ಕೂಡಿರುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Some misconduct there may be at the bottom of greatness,
Is there any garden that does not draw sustenance from sewage?
If you wish to pluck a lotus, forget the slush at its root
Married life is a mixture of black and white – Marula Muniya
(Translation from "Thus Sang Marula Muniya" by Sri. Narasimha Bhat)

Wednesday, February 19, 2014

ನಗುನಗುತ ಕರೆಯುವವೊಲಾಡುತಿತ್ತು ಗುಲಾಬಿ (573)

ನಗುನಗುತ ಕರೆಯುವವೊಲಾಡುತಿತ್ತು ಗುಲಾಬಿ |
ಸೊಗದ ವಾಸನೆಗೆಂದು ಪಿಡಿಯೆ ನಿರ್ಗಂಧ ||
ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು |
ಜಗದ ಸಂಗತಿಯಷ್ಟು - ಮರುಳ ಮುನಿಯ || (೫೭೩)

(ಕರೆಯುವವೊಲ್+ಆಡುತಿತ್ತು)(ವಾಸನೆಗೆ+ಎಂದು)(ಚುಚ್ಚಲಿಲ್ಲ+ಎಂದು)

ಗಿಡದಿ ಆಗತಾನೆ ಅರಳಿರುವ ಒಂದು ಗುಲಾಬಿಯ ಹೂವು ತನ್ನನ್ನು ಹಿಡಿ ಎಂದು ನಗುನಗುತ್ತ ಆಹ್ವಾನಿಸುತ್ತಿರುವಂತೆ ತೋರಿತು. ಆಹ್ಲಾದಕರವಾದ ಸುಗಂಧವನ್ನು ಅಸ್ವಾದಿಸಲೆಂದು ಆ ಗುಲಾಬಿ ಹೂವನ್ನು ಹಿಡಿದಾಗ ಸಿಕ್ಕಿದ್ದು ಎನೂ ವಾಸನೆಯಿಲ್ಲದ ಹೂವು. ಸದ್ಯಕ್ಕೆ ಗುಲಾಬಿಗಿಡದ ಮುಳ್ಳುಗಳು ಚುಚ್ಚಲಿಲ್ಲವೆಂದು ಕೈಗಳನ್ನು ಮುಗಿದೆ. ಜಗತ್ತಿನ ವ್ಯವಹಾರವೂ ಇದೇ ರೀತಿ ನಡೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The smiling role was swaying as though it was inviting me,
I touched it to smell its fragrance but it was scentless,
I thanked the role for not prickling my hands
Similar is the affairs of the world – Marula Muniya
(Translation from "Thus Sang Marula Muniya" by Sri. Narasimha Bhat)

Monday, February 17, 2014

ಬೆರಲೈದು ಸಮವಾಗೆ ಕರೆಮಾಳ್ಪ ಕೆಲಸವೇಂ? (572)

ಬೆರಲೈದು ಸಮವಾಗೆ ಕರೆಮಾಳ್ಪ ಕೆಲಸವೇಂ? |
ಉರಶಿರಗಳೊಂದಾಗೆ ಸತಿಪತಿಯರೆಂತು? ||
ತರತಮವಿವೇಕದಿಂ ಗುಣಲಾಭ ಜೀವನಕೆ |
ಮರೆಯದಿರು ತರತಮವ - ಮರುಳ ಮುನಿಯ || (೫೭೨)

(ಉರಶಿರಗಳ್+ಒಂದಾಗೆ)(ಸತಿಪತಿಯರ್+ಎಂತು)(ಮರೆಯದೆ+ಇರು)

ಕೈಗಳಲ್ಲಿರುವ ಐದೂ ಬೆರಳುಗಳೂ ಒಂದೇ ಸಮನಾಗಿದ್ದರೆ ಕೈಯಿಂದ ಏನಾದರೂ ಕೆಲಸ ಮಾಡಲು ಸಾಧ್ಯವಾಗುತ್ತಿತ್ತೇನು? ಇಲ್ಲ. ಹಾಗೆಯೇ ಗಂಡು ಮತ್ತು ಹೆಣ್ಣಿನ ವಕ್ಷಸ್ಥಳ(ಉರ) ಮತ್ತು ತಲೆ(ಶಿರ)ಗಳೆರಡೂ ಒಂದೇ ರೀತಿ ಇದ್ದರೆ ಪತಿ ಪತ್ನಿಯರು ಹೇಗಾಗುತ್ತಾರೆ? ಈ ರೀತಿಯ ಹೆಚ್ಚು ಕಡಿಮೆಗಳ(ತರತಮ) ಗುಣದೋಷ ಪರಿಶೀಲನೆಗಳಿಂದ ಜೀವನಕ್ಕೆ ಬೇರೆ ಬೇರೆ ಸ್ವಭಾವಗಳ ಪ್ರಯೋಜನ ಉಂಟಾಗುತ್ತದೆ. ಆದುದರಿಂದ ಈ ಅಂತರಭೇದಗಳ ತಿಳುವಳಿಕೆಯನ್ನು ಮರೆಯಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What work can the hand do when all the five fingers are alike?
How can husband and wife be so if their heads and breasts are alike?
Proper discrimination is beneficial to human life
Forget not the differences based on quality – Marula Muniya
(Translation from "Thus Sang Marula Muniya" by Sri. Narasimha Bhat)

Friday, February 14, 2014

ಮೃಗದಂಶವಳಿವನಕ ಮೃಗತೃಷ್ಣೆ ಕಳೆವನಕ (571)

ಮೃಗದಂಶವಳಿವನಕ ಮೃಗತೃಷ್ಣೆ ಕಳೆವನಕ |
ಮಿಗಿಲು ತನುವಾತ್ಮದಿಂದೆಂಬುದಿರುವನಕ ||
ಸೊಗವೇಕೆ ಸೋದರಂಗೆಂಬ ಕರುಬಿರುವನಕ |
ಜಗಕೆ ಶಾಂತಿಯದೆಂತೊ? - ಮರುಳ ಮುನಿಯ || (೫೭೧)

(ಮೃಗದ+ಅಂಶ+ಅಳಿವನಕ)(ತನುವು+ಆತ್ಮದಿಂದ+ಎಂಬುದು+ಇರುವನಕ)(ಸೊಗವು+ಏಕೆ)(ಸೋದರಂಗೆ+ಎಂಬ)(ಕರುಬು+ಇರುವನಕ)(ಶಾಂತಿ+ಅದು+ಎಂತೊ)

ಮನುಷ್ಯರ ಮನಸ್ಸುಗಳಲ್ಲಿರುವ ಪಶುವಿನ ಅಂಶವು ನಾಶವಾಗುವತನಕ, ಅವನು ಮರೀಚೆಕೆ(ಮೃಗತೃಷ್ಣೆ)ಯನ್ನು ಹಿಂಬಾಲಿಸಿ ಓಡಿಹೋಗುವುದನ್ನು ತ್ಯಜಿಸುವತನಕ, ದೇಹವು ಆತ್ಮಕ್ಕಿಂತ ದೊಡ್ಡದು ಎಂಬ ತಪ್ಪು ಕಲ್ಪನೆ ಇರುವತನಕ, ತನ್ನ ಸಹೋದರರು ಏತಕ್ಕಾಗಿ ಸುಖ, ಸಂತೋಷಗಳನ್ನು ಅನುಭವಿಸಬೇಕೆಂಬ ಮತ್ಸರವು ಮನುಷ್ಯನಲ್ಲಿರುವ ತನಕ, ಜಗತ್ತಿಗೆ ಶಾಶ್ವತವಾದ ಸುಖ, ಶಾಂತಿ ಮತ್ತು ನೆಮ್ಮದಿಗಳು ಹೇಗೆ ತಾನೆ ಸಿಗುತ್ತದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Until animal nature becomes extinct or his beasty desires die,
As long as man considers his body is superior to his soul,
So long as one envies one’s own brother enjoying happiness
How can there be peace on earth? – Marula Muniya
(Translation from "Thus Sang Marula Muniya" by Sri. Narasimha Bhat)

Thursday, February 13, 2014

ತಾಯಿ ಮಕ್ಕಳಿಗೂಟವಿಡುವಾಗಲೊಂದಕ್ಕೆ (570)

ತಾಯಿ ಮಕ್ಕಳಿಗೂಟವಿಡುವಾಗಲೊಂದಕ್ಕೆ |
ಕಾಯಿ ಹೆಚ್ಚಿತು ಕೆನೆಮೊಸರೊಂದಕ್ಕೆ ತಮಗ- ||
ನ್ಯಾಯಮೆಲ್ಲೆಂದಣ್ಣತಮ್ಮದಿರು ಹೋರುವರೆ |
ದಾಯವಂತಿಕೆಯೊಳಗೆ - ಮರುಳ ಮುನಿಯ || (೫೭೦)

(ಮಕ್ಕಳಿಗೆ+ಊಟ+ಇಡುವಾಗಲ್+ಒಂದಕ್ಕೆ)(ಕೆನೆಮೊಸರು+ಒಂದಕ್ಕೆ)(ನ್ಯಾಯ+ಎಲ್ಲಿ+ಎಂದು+ಅಣ್ಣತಮ್ಮದಿರು)(ದಾಯವಂತಿಕೆಯು+ಒಳಗೆ)

ತಾಯಿಯು ತನ್ನ ಮಕ್ಕಳಿಗೆ ಊಟವನ್ನು ಬಡಿಸುವಾಗ, ಒಂದು ಮಗುವಿಗೆ ಕಾಯಿ ಪಲ್ಯವನ್ನು ಹೆಚ್ಚಾಗಿ ಹಾಕಿ, ಇನ್ನೊಂದು ಮಗುವಿಗೆ ಒಂದು ಸೌಟು ಕೆನೆಮೊಸರನ್ನು ಹೆಚ್ಚಾಗಿ ಹಾಕಿದ್ದಲ್ಲಿ, ತಮಗೆ ಭಾಗವಿಡುವುದರಲ್ಲಿ ನ್ಯಾಯ ಎಲ್ಲಿದೆ? ಎಂದು ಅಣ್ಣ ತಮ್ಮಂದಿರು ಕಾದಾಡುತ್ತಾರೇನು? ಪ್ರಪಂಚದಲ್ಲಿರುವ ದೇಶಗಳೆಲ್ಲವೂ ಹೀಗೆಯೇ ಅರಿತುಕೊಂಡು ನಡೆದರೆ ಮನುಜಕುಲದ ನಿನಾಶದ ಹಾದಿಯನ್ನು ತಪ್ಪಿಸಬಹುದೇನೋ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When mother serves food to her children during lunch,
One may get more vegetable pieces and another may get a little more curd
Do the brothers then fight among themselves accusing
unjustly to them? – Marula Muniya (570)
(Translation from "Thus Sang Marula Muniya" by Sri. Narasimha Bhat)

Tuesday, February 11, 2014

ದೇಶ ದೇಶದ ಚರಿತೆ ಮಾನುಷ್ಯನಾಶಕಥೆ (569)

ದೇಶ ದೇಶದ ಚರಿತೆ ಮಾನುಷ್ಯನಾಶಕಥೆ |
ಘಾಸ ಪಸಿರೆಂತಂತು ಮಸಣಮುಂಟಲ್ಲಿ ||
ರೋಷ ಮತ್ಸರಬೀಜ ಮನುಜವಿಧ್ವಂಸಕ್ಕೆ |
ಶಾಶ್ವತರಹಸ್ಯವದು - ಮರುಳ ಮುನಿಯ || (೫೬೯)

(ಪಸಿರ್+ಎಂತು+ಅಂತು)(ಮಸಣಮ್+ಉಂಟಲ್ಲಿ)

ಪ್ರತಿಯೊಂದು ದೇಶದ ಕಥೆಯೂ ಮನುಷ್ಯರುಗಳ ನಾಶದ ಕಥೆಯೇ ಹೌದು. ಒಬ್ಬೊರನ್ನೊಬ್ಬರು ಕಾದಾಡಿ ಭೂಮಿಯನ್ನು ಒಂದು ಸ್ಮಶಾನವನ್ನಾಗಿ ಮಾಡುತ್ತಿರುವಾಗ ಅಲ್ಲಿ ಸೊಂಪಾದ ಹಸಿರು(ಪಸಿರು) ಹುಲ್ಲು(ಘಾಸ)ಗಾವಲನ್ನು ಕಾಣಲಾದೀತೇನು? ರೋಷ, ದ್ವೇಷ ಮತ್ತು ಅಸೂಯೆಗಳು ಮನುಷ್ಯನ ಸಂಪೂರ್ಣ ವಿನಾಶಕ್ಕೆ ಕಾರಣವಾಗುತ್ತದೆ. ಇದು ಎಲ್ಲ ಕಾಲಕ್ಕೂ ಇರುವ ಗುಟ್ಟು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The history of every nation is the tale of human destruction
Cremation grounds and green patches of grass exist side by side
The seeds of anger and jealousy lead to human destruction
This is an eternal mystery – Marula Muniya
(Translation from "Thus Sang Marula Muniya" by Sri. Narasimha Bhat)

Monday, February 10, 2014

ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ (568)

ಚಿತ್ತವಿಕ್ಷೋಬೆ ತಾಂ ಮೃತ್ಯುಸಾಕ್ಷಾದ್ರೂಪ |
ಪ್ರತ್ಯಕ್ಷಯಮನು ನಿನ್ನೊಳೆದ್ದಿಹ ಕ್ರೋಧ ||
ಕತ್ತಿಯೊಂದಲಗು ತರಿಯಲ್ಪಗೆಯನಿನ್ನೊಂದು |
ಕೆತ್ತುವುದು ನಿನ್ನನೇ - ಮರುಳ ಮುನಿಯ || (೫೬೮)

(ಸಾಕ್ಷಾದ್+ರೂಪ)(ನಿನ್ನೊಳ್+ಎದ್ದಿಹ)(ಕತ್ತಿಯ+ಒಂದು+ಅಲಗು)(ತರಿಯಲ್+ಪಗೆಯನ್+ಇನ್ನೊಂದು)

ಮನಸ್ಸಿನ ಅಸ್ಥಿರತೆ (ವಿಕ್ಷೋಭೆ) ಸಾವಿನ ಪ್ರತ್ಯಕ್ಷ ರೂಪ. ನಿನ್ನೊಳಗೆ ಭುಗಿಲೆದ್ದಿರುವ ಕೋಪ(ಕ್ರೋಧ)ವು ಸಾಕ್ಷಾತ್ ಯಮಧರ್ಮರಾಯನೇ ಹೌದು. ಇಬ್ಬಾಯಿ ಕತ್ತಿಯ ಹರಿತವಾದ ಒಂದು ತುದಿ ನಿನ್ನ ಹಗೆಯನ್ನು ತರಚಿ, ಗೀರಿದರೆ ಅದರ ಇನ್ನೊಂದು ತುದಿ ಮಾತ್ರ ನಿನ್ನನ್ನೇ ಕತ್ತರಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Mental commotion is the very incarnation of Death
Anger burning in mind is nothing but death
When one blade of the double-end edged sword pierces the enemy
The other one pierces your own body into pieces – Marula Muniya
(Translation from "Thus Sang Marula Muniya" by Sri. Narasimha Bhat)

Tuesday, February 4, 2014

ರಣಮೂಲವಿಹುದು ಲೋಕದ ಹೃದಯಗಹ್ವರದಿ (567)

ರಣಮೂಲವಿಹುದು ಲೋಕದ ಹೃದಯಗಹ್ವರದಿ |
ಶುನಕ ಶುನಕವನೋಡಿ ಕೆರಳುವುದು ಬರಿದೆ ||
ಅನುದಿತಾಶಂಕೆಗಳು ಭೀತಿಗಳಸೂಯೆಗಳು |
ಸೆಣಸುತಿರ‍್ಪುವು ನರನ - ಮರುಳ ಮುನಿಯ || (೫೬೭)

(ರಣಮೂಲ+ಇಹುದು)(ಅನುದಿತ+ಆಶಂಕೆಗಳು)(ಭೀತಿಗಳು+ಅಸೂಯೆಗಳು)(ಸೆಣಸುತ+ಇರ‍್ಪುವು)

ಜಗತ್ತಿನ ಹೃದಯದ ಗುಹೆ(ಗಹ್ವರ)ಗಳಲ್ಲಿ ಯುದ್ಧದ ಮೂಲಗಳಿವೆ. ಒಂದು ನಾಯಿಯು ಮತ್ತೊಂದು ನಾಯಿಯನ್ನು ಕಂಡು ಕೆರಳಿ ಬೊಗಳಾಡುವುದು ಕೇವಲ ಆಟ ಮಾತ್ರಕ್ಕಲ್ಲ. ಹೇಳಲಿಕ್ಕಾಗದಂತಹ (ಅನುದಿತ)ಅನುಮಾನ, ಅಪನಂಬಿಕೆ, ಹೆದರಿಕೆ, ದ್ವೇಷ ಮತ್ತು ಮತ್ಸರಗಳು, ಮನುಷ್ಯರನ್ನು ಹೋರಾಡುವಂತೆ ಮಾಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The root cause of all the wars in the caves of human hearts
A dog sees another dog and barks for nothing
Unborn doubts, fears and jealousies against man wage wars
Likewise in human hearts – Marula Muniya
(Translation from "Thus Sang Marula Muniya" by Sri. Narasimha Bhat)

Monday, February 3, 2014

ಪ್ರೀತಿ ತಪ್ಪೇನಲ್ಲ ಆತುಮವು ಮಣ್ಣಲ್ಲ (566)

ಪ್ರೀತಿ ತಪ್ಪೇನಲ್ಲ ಆತುಮವು ಮಣ್ಣಲ್ಲ |
ಯಾತನೆಯನರಿಯದನ್ ಸುಖವರಿತನಲ್ಲ ||
ಆತುರದಿ ನೋಯ್ವೆದೆಯೆ ಬೆಂಕಿಸೋಕದ ನರನು |
ಪೂತಾತ್ಮನೆಂತಹನೊ - ಮರುಳ ಮುನಿಯ || (೫೬೬)

(ತಪ್ಪು+ಏನ್+ಅಲ್ಲ)(ಮಣ್ಣ್+ಅಲ್ಲ)(ಯಾತನೆಯನ್+ಅರಿಯದನ್)(ಸುಖವ+ಅರಿತನ್+ಅಲ್ಲ)(ನೋಯ್ವ+ಎದೆಯೆ)(ಪೂತ+ಆತ್ಮನ್+ಎಂತು+ಅಹನೊ)

ಪ್ರೀತಿಸುವುದು ತಪ್ಪೇನೂ ಅಲ್ಲ. ಒಂದು ಜೀವಿಯು ಇನ್ನೊಂದು ಜೀವಿಯನ್ನು ಒಲವಿನಿಂದ ಕಾಣುವುದು ಸರಿಯೇ ಹೌದು. ಆತ್ಮವು ಕೇವಲ ಜಡ ಮಣ್ಣಲ್ಲ. ಯಾವನು ನೋವು ಮತ್ತು ವೇದನೆಗಳನ್ನು ತಿಳಿದಿಲ್ಲವೋ, ಅವನು ಸುಖವನ್ನೂ ಸಹ ತಿಳಿದವನಲ್ಲ. ತವಕದಿಂದ ನೋಯುತ್ತಿರುವ ಹೃದಯದ ಬೆಂಕಿಯನ್ನು ಸೋಕದಿರುವ ಮನುಷ್ಯನು ಹೇಗೆ ಪವಿತ್ರ(ಪೂತ)ನಾದ ಆತ್ಮನಾಗುತ್ತಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")