Friday, August 31, 2012

ಇರುವುದೆನಲೆಂದೆಂದುಮೆತ್ತೆತ್ತಲುಂ ನೆರೆದು (271)

ಇರುವುದೆನಲೆಂದೆಂದುಮೆತ್ತೆತ್ತಲುಂ ನೆರೆದು |
ಕೊರೆವಡದೆ ಮಾರ‍್ಪಡದೆ ತಿರುಗದಲುಗದೆಯೆ ||
ಭರಿಪುದು ಚರಾಚರೋಭಯನವನದು ಧರಿಸಿಹುದು |
ಸ್ಥಿರತೆಯದು ಸತ್ಯವೆಲೊ - ಮರುಳ ಮುನಿಯ || (೨೭೧)

(ಇರುವುದು+ಎನಲು+ಎಂದೆಂದುಂ+ಎತ್ತೆತ್ತಲುಂ)(ತಿರುಗದು+ಅಲುಗದೆಯೆ)(ಚರ+ಅಚರ+ಉಭಯನವನು+ಅದು)
(ಸ್ಥಿರತೆ+ಅದು)(ಸತ್ಯ+ಎಲೊ)

ನಾವು ಯಾವುದನ್ನು ಇದೆ ಎಂದು ಹೇಳುತ್ತಿರುವೆವೋ ಅದು ಎಲ್ಲಾ ಕಡೆಯಲ್ಲಿಯೂ ತುಂಬಿಕೊಂಡು, ಕೊರತೆಯಿಲ್ಲದೆ, ಬದಲಾವಣೆಯಾಗದೆ, ತಿರುಗದೆ ಮತ್ತು ಅಲ್ಲಾಡದೆಯೇ ಇದೆ. ಅದು ಎಲ್ಲವನ್ನೂ ಹೊತ್ತುಕೊಂಡಿದೆ. ಈ ಜಗತ್ತಿನಲ್ಲಿರುವ ಸ್ಥಾವರ ಮತ್ತು ಜಂಗಮವೆಂಬ ಎರಡು ರೂಪಗಳನ್ನೂ ಅದು ಹೊಂದಿದೆ. ಅದು ಶಾಶ್ವತವಾಗಿರುವಂತಹುದು. ಇದೇ ಸತ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What exists, exists for ever and fills every place in every direction
It doesn’t wear out, doesn’t change, doesn’t turn and tremble,
It supports and rules over all movable and immovable existence
Truth is eternal – Marula Muniya (271)
(Translation from "Thus Sang Marula Muniya" by Sri. Narasimha Bhat)

Thursday, August 30, 2012

ಸತ್ಯಕೇ ಜಯವಂತೆ, ಜಯವೆ ಸತ್ಯಕ್ಕಿರಲು (270)


ಸತ್ಯಕೇ ಜಯವಂತೆ ! ಜಯವೆ ಸತ್ಯಕ್ಕಿರಲು |
ಮುತ್ತುವುವದೇಕದನು ಕಲಹ ಕಷ್ಟಗಳು ? ||
ಬತ್ತಿ ಸೊರಗದ ತುಟಿಗೆ ರುಚಿಸದೇ ಜಯದ ಫಲ ? |
ಪಟ್ಟೆತಲೆಗೇಹೂವು ? - ಮರುಳ ಮುನಿಯ || (೨೭೦)

(ಸತ್ಯಕ್ಕೆ+ಇರಲು)(ಮುತ್ತುವುವು+ಅದು+ಏಕೆ+ಅದನು)

ಸತ್ಯಕ್ಕೆ ಯಾವಾಗಲೂ ಗೆಲುವು ಎಂದರೂ ಆ ಸತ್ಯವನ್ನು ಜಗಳ ಮತ್ತು ಕಷ್ಟಗಳು ಏಕೆ ಮುತ್ತುತ್ತವೆ? ತುಟಿಯು ಬತ್ತಿ ಸೊರಗದಿದ್ದರೆ ಅದಕ್ಕೆ ಗೆಲುವಿನ ಫಲವು ರುಚಿಸಲಾರದೇನು? ಬೋಳು ತಲೆಯನ್ನು ಅಲಂಕರಿಸಲು ಹೂವೇಕೇ ಬೇಕು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Victory to truth they say; if victory to truth is certain
Why do fights and sufferings make it so strenuous?
Doesn’t the fruit of victory taste well unless the lips become parched?
Are flowers reserved only for bald heads? – Marula Muniya (270)
(Translation from "Thus Sang Marula Muniya" by Sri. Narasimha Bhat)

Wednesday, August 29, 2012

ಕಡೆಗೆ ಜಗ ಸತ್ಯಕ್ಕೆ, ಜಯವೇನೊ ದಿಟವಂತೆ (269)

ಕಡೆಗೆ ಜಗ ಸತ್ಯಕ್ಕೆ, ಜಯವೇನೊ ದಿಟವಂತೆ |
ತಡವೇಕೊ ! ಶೀಘ್ರದಿನೆ ಜಯ ಬಾರದೇಕೋ ! ||
ಪೊಡವಿ ಸತಿಸುತರು ಮತ್ತೈತರೆ ಹರಿಶ್ಚಂದ್ರ |
ನುಡುಗಿದ್ದ ಮುದಕನಲಿ - ಮರುಳ ಮುನಿಯ || (೨೬೯)

(ತಡ+ಏಕೊ)(ಬಾರದು+ಏಕೋ)(ಮತ್ತೆ+ಐತರೆ)(ಹರಿಶ್ಚಂದ್ರನು+ಉಡುಗಿದ್ದ)

’ಸತ್ಯಮೇವ ಜಯತೇ’ ಸತ್ಯಕ್ಕೆ ಎಂದಿಗೂ ಗೆಲುವು. ಅದು ನಿಜ, ಎಂದು ಜಗತ್ತು ಹೇಳುತ್ತದೆ. ಆದರೆ ಸತ್ಯಕ್ಕೆ ಗೆಲುವು ತಡವಾಗಿ ಏಕೆ ಬರುತ್ತದೆ? ಶೀಘ್ರವಾಗಿ ಬರಬಹುದಾಗಿತ್ತಲ್ಲ ! ಹರಿಶ್ಚಂದ್ರನಿಗೆ ಈ ಭೂಮಿ ಪತ್ನಿ ಮತ್ತು ಪುತ್ರರು ಮತ್ತೆ ದೊರೆಕುವ ಕಾಲಕ್ಕೆ ಅವನು ವೃದ್ಧನಾಗಿದ್ದ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Victory to dharma at the end is sure they say,
Why so much delay, why isn’t victory quick to come?
Harishchandra had become quite old when his kingdom
Wife and son returned to him – Marula Muniya (269)
(Translation from "Thus Sang Marula Muniya" by Sri. Narasimha Bhat)

Tuesday, August 28, 2012

ಜಯವಂತೆ ಧರ್ಮಕ್ಕೆ, ಧರ್ಮ ಜಯಿಸುವತನಕ (268)

ಜಯವಂತೆ ಧರ್ಮಕ್ಕೆ, ಧರ್ಮ ಜಯಿಸುವತನಕ |
ವ್ಯಯವೆಷ್ಟು ? ಲೋಗರಾತ್ಮಕ್ಕೆ ಗಾಯವೆಷ್ಟು ? ||
ಭಯಪಡಿಸಿ ದಯೆಬಿಡಿಸಿ ನಯಗೆಡಿಸಿ ಬಂದ ಜಯ |
ಜಯವೊ? ಅಪಜಯಸಮವೊ? - ಮರುಳ ಮುನಿಯ || (೨೬೮)

(ವ್ಯಯ+ಎಷ್ಟು)(ಲೋಗರ್+ಆತ್ಮಕ್ಕೆ)(ಗಾಯ+ಎಷ್ಟು)

ಎಂದೆಂದಿಗೂ ಧರ್ಮಕ್ಕೆ ಜಯವೆಂದು ಜಗತ್ತು ಹೇಳುತ್ತದೆ. ಆದರೆ ಧರ್ಮವು ಗೆಲ್ಲುವತನಕ ಆಗುವ ಕಷ್ಟನಷ್ಟಗಳೆಷ್ಟು? ಜನಗಳ ಆತ್ಮಕ್ಕಾಗುವ ಗಾಯಗಳೆಷ್ಟು? ಜನಗಳಲ್ಲಿ ಹೆದರಿಕೆಯನ್ನುಂಟುಮಾಡಿ, ಕರುಣೆಗಳನ್ನು ಹೋಗಲಾಡಿಸಿ, ಸಭ್ಯತೆಯನ್ನೂ ಇಲ್ಲದಂತಾಗಿಸಿ ಬಂದಿರುವ ಗೆಲುವನ್ನು, ಗೆಲವು ಎಂದು ಕರೆಯಬೇಕೋ ಅಥವಾ ಅದು ಸೋಲಿಗೆ ಸಮಾನವಾದುದ್ದೆಂದು ತಿಳಿಯಬೇಕೋ? ಸ್ವಲ್ಪ ಯೋಚಿಸಿನೋಡು. 
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Victory to Dharma they say! What a colossal waste there was till dharma won?
Were not innumerable injuries inflicted on the souls of the people?
Is victory won by means of threats, cruelty and cunningness?
A true victory? Is it not really a defeat? – Marula Muniya (268)
(Translation from "Thus Sang Marula Muniya" by Sri. Narasimha Bhat)

Monday, August 27, 2012

ನ್ಯಾಯಕೇ ಜಯವಂತೆ, ಧರ್ಮಜನೆ ಸಾಕ್ಷಿಯಲ (267)

ನ್ಯಾಯಕೇ ಜಯವಂತೆ , ಧರ್ಮಜನೆ ಸಾಕ್ಷಿಯಲ  |
ದಾಯಿಗರ ಸದೆದು ದೊರೆತನವ ಗೆದ್ದನಲ   ||
ಆಯಸಂಬಟ್ಟುಂಡುದೇನೆನ್ನದಿರ್ ಪೈತ್ರ |
ವಾಯಸಗಳುಂಡುವಲ , - ಮರುಳ ಮುನಿಯ || (೨೬೭)

(ಆಯಸಂಬಟ್ಟು+ಉಂಡುದು+ಏನು+ಎನ್ನದಿರ್)(ವಾಯಸಗಳ್+ಉಂಡು+ಅಲ)

ಪ್ರಪಂಚದಲ್ಲಿ ಯಾವತ್ತಿಗೇ ನ್ಯಾಯಕ್ಕೇ ಗೆಲುವು ಎಂದು ನಾವು ತಿಳಿದಿದ್ದೇವೆ. ಇದಕ್ಕೆ ಪುರಾವೆಯಾಗಿ ಧರ್ಮರಾಜನನ್ನು ಉದಾಹರಿಸಬಹುದು. ತನ್ನ ಜ್ಞಾತಿಗಳನ್ನೇ(ದಾಯಿಗರ) ನಾಶಪಡಿಸಿ ಸಾಮ್ರಾಜ್ಯವನ್ನು ಗೆದ್ದ ತಾನೆ? ಬಳಲಿಕೆ ಮತ್ತು ನೋವುಗಳನ್ನು ಪಟ್ಟು ಅವನು ಅನುಭವಿಸುದುದು ಏನು ಎಂದು ಕೇಳಬೇಡ. ಪಿತೃ ದೇವತೆಗಳಿಗೆ (ಪೈತ್ರ) ಸಂಬಂಧಿಸಿದ ಪಿಂಡಗಳನ್ನು ಕಾಗೆಗಳು (ವಾಯಸ) ತಿಂದುದೇ ಅವನಿಗೆ ದೊರಕಿದ ಲಾಭ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Justice alone wins they say, Was not Dharmaja a witness to that?
Didn’t he win the throne by destroying his cousins?
Don’t comment on what he enjoyed after such a hard struggle.
Don’t crows eat the rice balls he offered to the manes? – Marula Muniya (267)
(Translation from "Thus Sang Marula Muniya" by Sri. Narasimha Bhat)

Friday, August 24, 2012

ಜಯವೆಲ್ಲಿ ಧರ್ಮಕಮಧರ್ಮಕಂ ಜಯವೆಲ್ಲಿ ? (266)

ಜಯವೆಲ್ಲಿ ಧರ್ಮಕಮಧರ್ಮಕಂ ಜಯವೆಲ್ಲಿ ? |
ಜಯವೇನಜಯವೇನನಂತಕೇಳಿಯಲಿ ? ||
ಜಯದ ಹಾದಿಗಳೆಲ್ಲ ಧರ್ಮದೀಪ್ತಗಳಲ್ಲ |
ಸ್ವಯಮಲಿಪ್ತನಿಗೆ ಜಯ- ಮರುಳ ಮುನಿಯ || (೨೬೬)

(ಧರ್ಮಕಂ+ಅಧರ್ಮಕಂ)(ಜಯವೇನು+ಅಜಯವೇನು+ಅನಂತ ಕೇಳಿಯಲಿ)(ಹಾದಿಗಳು+ಎಲ್ಲ)(ಧರ್ಮದೀಪ್ತಗಳ್+ಅಲ್ಲ) (ಸ್ವಯಂ+ಅಲಿಪ್ತನಿಗೆ)

ಧರ್ಮ ಮತ್ತು ಅಧರ್ಮಗಳಿಗೆ ಗೆಲುವು ಎಲ್ಲಿದೆ? ಈ ಕೊನೆಯಿಲ್ಲದ(ಅನಂತ) ಕ್ರೀಡೆಯಲ್ಲಿ ಗೆಲುವೇನು ಅಥವಾ ಸೋಲೇನು ? ಗೆಲುವಿನ ದಾರಿಗಳೆಲ್ಲವೂ ಧರ್ಮದ ಜ್ವಲಿಸುವ ದೀಪ(ದೀಪ್ತ)ಗಳೇನಲ್ಲ. ಸ್ವತಃ ಯಾವುದಕ್ಕೂ ಅಂಟಿಕೊಳ್ಳದವನಿಗೇ ಗೆಲುವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where is victory to dharma and where is victory to adharma?
What is victory and what is defeat in the endless play?
All the roads to victory are not lit by dharma
True victory is only to the unattached one – Marula Muniya (266)
(Translation from "Thus Sang Marula Muniya" by Sri. Narasimha Bhat)

Thursday, August 23, 2012

ಗಿರಿಶಿಖರದಲಿ ತತ್ತ್ವ, ಧರೆಯ ಹಳ್ಳದಿ ನೀನು (265)

ಗಿರಿಶಿಖರದಲಿ ತತ್ತ್ವ, ಧರೆಯ ಹಳ್ಳದಿ ನೀನು |
ಗರುಡರಕ್ಕೆಯನು ನೀಂ ಪಡೆಯದಿರ‍್ದೊಡೆಯುಂ ||
ಸ್ಪುರಿಸಲಿನಿತಾಗಾಗ ಶಿಖರ ನಿನ್ನಯ ಕಣ್ಗೆ |
ಪುರುಳಹುದೊ ಕಾಲಿಗದು - ಮರುಳ ಮುನಿಯ || (೨೬೫)

(ಪಡೆಯದೆ+ಇರ‍್ದೊಡೆಯುಂ)(ಸ್ಪುರಿಸಲು+ಇನಿತು+ಆಗಾಗ)(ಪುರುಳ್+ಅಹುದೊ)(ಕಾಲಿಗೆ+ಅದು)

ಉನ್ನತ ಪರ್ವತದ ತುದಿಯಲ್ಲಿ ತತ್ತ್ವ ಇದೆ. ಆದರೆ ನೀನು ನಿಂತಿರುವುದು ಮಾತ್ರ ಈ ಭೂಮಿಯ (ಧರೆಯ) ಒಂದು ಗುಣಿಯಲ್ಲಿ. ಗರುಡ ಪಕ್ಷಿಯಂತೆ ನೀನು ರೆಕ್ಕೆಗಳನ್ನು ಹೊಂದಿರದಿದ್ದರೂ, ಯಾವಾಗ ಈ ಶಿಖರವು ನಿನ್ನ ಕಣ್ಣುಗಳಿಗೆ ಗೋಚರವಾಗುವುದೋ, ಆವಾಗ ಆ ಶಿಖರವನ್ನೇರಲು ಹಳ್ಳದಲ್ಲಿ ನಿಂತಿರುವ ನಿನ್ನ ಕಾಲುಗಳಿಗೆ ಆ ಚೈತನ್ಯ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Truth is high up on the hill top and you are in the valley below,
Even though you possess not the wings of Garuda, the king of birds
You can see the hill top now and then and draw inspiration
It would strengthen your legs – Marula Muniya (265)
(Translation from "Thus Sang Marula Muniya" by Sri. Narasimha Bhat)

Wednesday, August 22, 2012

ಬಾಹ್ಯದಿಂದಂತರಕಮಂತರದೆ ಬಾಹ್ಯಕಂ (264)

ಬಾಹ್ಯದಿಂದಂತರಕಮಂತರದೆ ಬಾಹ್ಯಕಂ |
ಗ್ರಾಹ್ಯಮಾಗಿಹುದೊಂದಖಂಡೈಕ ರಸವು ||
ಗುಹ್ಯವದು ನಿತ್ಯಾನುಸಂಧಾನದಿಂದ ಲವ- |
ಗಾಹ್ಯವಾ ರಸತತ್ತ್ವ - ಮರುಳ ಮುನಿಯ || (೨೬೪)

(ಬಾಹ್ಯದಿಂದ+ಅಂತರಕಂ+ಅಂತರದೆ)(ಗ್ರಾಹ್ಯಂ+ಆಗಿ+ಇಹುದು+ಒಂದು+ಅಖಂಡ+ಏಕ)(ಗುಹ್ಯ+ಅದು)(ನಿತ್ಯಾ+ಅನುಸಂಧಾನದಿಂದ)(ಲವಗಾಹ್ಯವು+ಆ)

ಹೊರ ಜಗತ್ತಿ(ಬಾಹ್ಯ)ನಿಂದ ಒಳಮನಸ್ಸಿ(ಅಂತರಕಂ)ಗೆ ಮತ್ತು ಒಳಮನಸ್ಸಿನಿಂದ ಹೊರಜಗತ್ತಿಗೆ, ಹೀಗೆ ಸ್ವೀಕರಿಸಲು ಯೋಗ್ಯವಾದ (ಗ್ರಾಹ್ಯ), ಎಲ್ಲರನ್ನೂ ಕೂಡಿದ ಮತ್ತು ಇಡಿಯಾಗಿ (ಅಖಂಡ) ಏಕವಾಗಿರುವ (ಏಕ) ಒಂದು ರಸ ಸತ್ತ್ವವು ಬಚ್ಚಿಟ್ಟು(ಗುಹ್ಯ)ಕೊಂಡಿದೆ. ಪ್ರತಿದಿನದ ಪರೀಕ್ಷಣೆಯಿಂದ ಈ ಸಿದ್ಧಾಂತದ ರಸ ಸತ್ತ್ವವನ್ನು ಕೊಂಚಮಟ್ಟಿಗೆ ತಿಳಿಯಲು ಸಾಧ್ಯವಾಗುತ್ತದೆ (ಲಹಗಾವ್ಯ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Worthy of experiences in the unbroken stream of rasa,
That flows from outside to inside and from inside to outside
The mysterious rasa can be experienced only
Through ceaseless search – Marula Muniya (264)
(Translation from "Thus Sang Marula Muniya" by Sri. Narasimha Bhat)

Tuesday, August 21, 2012

ಗುರಿಯೊಂದು ಬೇಕು ಜಗದಡವಿಯಲಿ ಪಥ ಕಾಣೆ (263)

ಗುರಿಯೊಂದು ಬೇಕು ಜಗದಡವಿಯಲಿ ಪಥ ಕಾಣೆ |
ತಿರುತಿರುಗಿ ಬಳಬಳಲಿ ಪಾಳಾಗದಿರೆ ಬಾಳ್ ||
ಸ್ಥಿರಸತ್ಯವಿರಬೇಕು ಬಾಳ್ ಪ್ರದಕ್ಷಿಣವದಕೆ |
ಅರಸು ನೀನದನುರದಿ - ಮರುಳ ಮುನಿಯ || (೨೬೩)

(ಗುರಿ+ಒಂದು)(ಜಗದ+ಅಡವಿಯಲಿ)(ಪಾಳಾಗದೆ+ಇರೆ)(ಸ್ಥಿರಸತ್ಯ+ಇರಬೇಕು)(ಪ್ರದಕ್ಷಿಣೆ+ಅವದಕೆ)(ನೀನ್+ಅದನು+ಉರದಿ)

ಈ ಜಗತ್ತೆಂಬ ಅರಣ್ಯದಲ್ಲಿ ಸುತ್ತಿ ಅಲೆದಾಡಿ ಆಯಾಸಗೊಂಡು ನಮ್ಮ ಬಾಳನ್ನು ಹಾಳುಮಾಡಿಕೊಳ್ಳದೆಯೇ ದಾರಿಯನ್ನು ಕಾಣಲು, ನಾವು ಒಂದು ಧ್ಯೇಯವನ್ನಿಟ್ಟುಕೊಂಡಿರಬೇಕು. ಶಾಶ್ವತವಾದ ಸಿದ್ಧಾಂತವಿರಬೇಕು. ನಮ್ಮ ಬಾಳು ಅದನ್ನು ಯಾವಾಗಲೂ ಅನುಸರಿಸುತ್ತಿರಬೇಕು. ಅದನ್ನು ನೀನು ನಿನ್ನ ಅಂತರಂಗದ ಒಳಗಡೆ ಹುಡುಕು (ಅರಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You must have a goal lest you should lose track in the world-forest
And lest your life should become a waste, wandering and getting exhausted,
Your life is a circumambulation around the constant Truth
Search and find it out in your own heart – Marula Muniya (263)
(Translation from "Thus Sang Marula Muniya" by Sri. Narasimha Bhat)

Thursday, August 16, 2012

ಇಂದ್ರಿಯ ಸಮಸ್ತದಖಿಲಾನುಭವಗಳ ನೀನು (262)

ಇಂದ್ರಿಯ ಸಮಸ್ತದಖಿಲಾನುಭವಗಳ ನೀನು |
ಕೇಂದ್ರೀಕೃತಂಗೆಯ್ದು ಮನನದಿಂ ಮಥಿಸಿ ||
ತಂದ್ರಿಯಿರದಾತ್ಮ ಚಿಚ್ಛಕ್ತಿಯಿಂದುಜ್ಜುಗಿಸೆ |
ಸಾಂದ್ರತತ್ತ್ವಪ್ರಾಪ್ತಿ - ಮರುಳ ಮುನಿಯ || (೨೬೨)

(ಸಮಸ್ತದ+ಅಖಿಲ+ಅನುಭವಗಳ)(ತಂದ್ರಿಯಿರದ+ಆತ್ಮ)(ಚಿಚ್ಛಕ್ತಿಯಿಂದ+ಉಜ್ಜುಗಿಸೆ)

ಇಂದ್ರಿಯಗಳಿಗೆ ಸಂಬಂಧಪಟ್ಟ ಎಲ್ಲಾ ಅನುಭವಗಳನ್ನು ನೀನು ಅಂತರಂಗದಲ್ಲಿ ಏಕಾಗ್ರಗೊಳಿಸಿ, ಮನಸ್ಸಿನೊಳಗಡೆ ಅವುಗಳನ್ನು ನಿರಂತರ ಚಿಂತನ ಮಂಥನಗಳಿಂದ ಕೂಲಂಕುಷವಾಗಿ ಆಲೋಚಿಸಿ, ಆಲಸ್ಯ(ತಂದ್ರಿ)ದಿಂದರದ ಆತ್ಮದ ಜ್ಞಾನಶಕ್ತಿ(ಚಿಚ್ಛಕ್ತಿ)ಯಿಂದ ಸಾಧನೆಗೈದಲ್ಲಿ ಪರಬ್ರಹ್ಮ ಸಾಕ್ಷಾತ್ಕಾರ ಆಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Gather all your experiences of all senses and focus them on one point,
Think deeply, reflect and churn them in the mind,
Endeavour with the will power of the awakened soul,
You would then attain the eternal Truth – Marula Muniya
(Translation from "Thus Sang Marula Muniya" by Sri. Narasimha Bhat)

Tuesday, August 14, 2012

ಕೂಡುವುದು ಚೆದರುವುದು ಮತ್ತೊಟ್ಟು ಕೂಡುವುದು (261)

ಕೂಡುವುದು ಚೆದರುವುದು ಮತ್ತೊಟ್ಟು ಕೂಡುವುದು |
ಓಡಾಡಿ ಗುಡುಗಿ ಮಿಂಚೆಸೆದು ಕರಗುವುದು ||
ಕಾಡಿ ಭೂಮಿಯನುಬ್ಬೆಗಂಬಡಿಸಿ ಕಡೆಗೆಂದೊ |
ಮೋಡ ಮರೆಗರೆಯುವುದು - ಮರುಳ ಮುನಿಯ || (೨೬೧)

(ಮತ್ತೆ+ಒಟ್ಟು)(ಮಿಂಚ್+ಎಸೆದು)(ಭೂಮಿಯನ್+ಉಬ್ಬೆಗಂಬಡಿಸಿ)(ಕಡೆಗೆ+ಎಂದೊ)

ಎಲ್ಲಾ ಮೋಡಗಳೂ ಒಂದುಕಡೆ ಸೇರುತ್ತವೆ, ಚೆದುರುತ್ತವೆ, ಪುನಃ ಒಂದಾಗಿ ಸೇರುತ್ತವೆ. ಆಕಾಶದಲ್ಲಿ ಈ ರೀತಿಯಾಗಿ ಓಡಾಡಿ, ಗುಡುಗು, ಮಿಂಚುಗಳಿಂದ ಕಾಣಿಸಿಕೊಂಡು ಆ ನಂತರ ಮೋಡವು ಮರೆಯಾಗುತ್ತದೆ. ಭೂಮಿಯನ್ನು ಪೀಡಿಸಿ ಸಂತಾಪ, ಭಯ ಮತ್ತು ಸಂಭ್ರಮಗಳನ್ನುಂಟುಮಾಡಿ(ಉಬ್ಬೆಗ) ಕೊನೆಗೆ ಆ ಮೋಡಗಳು ಮಳೆಯನ್ನು ಸುರಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The clouds gather together, scatter away and mass up again,
They run about thundering and launching lightening and melt off,
They harass and bring distress to the earth with overheat
And some day at last they shower rain – Marula Muniya
(Translation from "Thus Sang Marula Muniya" by Sri. Narasimha Bhat)

Monday, August 13, 2012

ನೆಲನ ಬಿಡದಡಿ ರೆಕ್ಕೆ ತೊಡದ ಮೈಯಾದೊಡಂ (260)

ನೆಲನ ಬಿಡದಡಿ ರೆಕ್ಕೆ ತೊಡದ ಮೈಯಾದೊಡಂ |
ಕೆಳಕೆ ಮೇಲಕೆ ನರನು ಮೊಗವ ತಿರುಗಿಸನೇಂ ? ||
ತಲೆಯ ತಾನೆತ್ತಿ ಗಗನಕೆ ಕಣ್ಣ ಸಾರ‍್ಚಿದಾ |
ಗಳಿಗೆಯೇ ವಿಷ್ಣು ಪದ - ಮರುಳ ಮುನಿಯ || (೨೬೦)

(ಬಿಡದ+ಅಡಿ)(ಮೈ+ಆದೊಡಂ)(ತಾನ್+ಎತ್ತಿ)

ನೆಲವನ್ನು ಬಿಡದಿರುವ ಪಾದಗಳು ಮತ್ತು ರೆಕ್ಕೆಯನ್ನು ಹೊಂದಿರದ ದೇಹ ಆದರೂ ಸಹ, ಮನುಷ್ಯನು ತನ್ನ ಮುಖ(ಮೊಗ)ವನ್ನು ಕೆಳಕ್ಕೆ ಮತ್ತು ಮೇಲಕ್ಕೆ ತಿರುಗಿಸಿ ನೋಡುವುದಿಲ್ಲವೇನು? ತನ್ನ ತಲೆಯನ್ನು ಮೇಲಕ್ಕೆತ್ತಿಕೊಂಡು, ಆಕಾಶಕ್ಕೆ ಕಣ್ಣನ್ನು ಸೇರಿಸಿ ನೋಡಿದ ಗಳಿಗೆಯಲ್ಲಿಯೇ ಅವನಿಗೆ ಪರಮಾತ್ಮನ ಪಾದಾರವಿಂದವು ಗೋಚರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Feet bound to the ground and unwinged body unable to fly,
Even then can’t man turn his face up and down?
The blessed feet of Lord Vishnu would crown his head
The very moment he looks up and stretches his sight to the sky – Marula Muniya
(Translation from "Thus Sang Marula Muniya" by Sri. Narasimha Bhat)

Friday, August 10, 2012

ಶುದ್ಧಮೊದಲಿದ್ದು ಕೆಸರಿನ ಮಡುವಿನಲಿ ಬಿದ್ದು (259)

ಶುದ್ಧಮೊದಲಿದ್ದು ಕೆಸರಿನ ಮಡುವಿನಲಿ ಬಿದ್ದು |
ಒದ್ದೆಯಲಿ ಸಂಸಾರವೆಂದು ತಾರಾಡಿ ||
ಒದ್ದಾಡಿ ಮೈಕೊಡವಿ ಮತ್ತೆ ಪೂರ್ವದಲಿದ್ದ |
ಶುದ್ಧತೆಯಡರ‍್ವುದದು - ಮರುಳ ಮುನಿಯ || (೨೫೯)

(ಮೊದಲ್+ಇದ್ದು)(ಸಂಸಾರ+ಎಂದು)(ಪೂರ್ವದಲ್+ಇದ್ದ)(ಶುದ್ಧತೆಯ+ಅಡರ‍್ವುದು+ಅದು)

ಆತ್ಮವು ಪ್ರಾರಂಭದಲ್ಲಿ ಶುದ್ಧವಾಗಿದ್ದು, ನಂತರ ಕೆಸರಿನ ಮಡುವಿನಲಿ ಬಿದ್ದು ಸಂಸಾರವೆಂಬ ಒದ್ದೆಯಲ್ಲಿ ತಾರಾಡಿ, ಒದ್ದಾಡಿ ಮೈ ಕೊಡವಿಕೊಂಡು ಪುನಃ ಮೊದಲಿನಲ್ಲಿದ್ದ ಶುದ್ಧಸ್ವರೂಪವನ್ನೇ ಹೊಂದುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It was pure initially but later it fell into pool of mud and
With its wet body it ran about thinking of family and world
Then it struggled hard and collected itself and regained
Its pristine purity – Marula Muniya
(Translation from "Thus Sang Marula Muniya" by Sri. Narasimha Bhat)

Thursday, August 9, 2012

ಉರದೊಳದ ನೀನರಸು ಶಿರವ ದೀವಿಗೆ ಮಾಡು (258)

ಉರದೊಳದ ನೀನರಸು ಶಿರವ ದೀವಿಗೆ ಮಾಡು |
ಕರ ಚರಣ ಮೊದಲಾದುವೊರೆವುದನು ಕೇಳು ||
ಅರಿವುಗಣ್ ನಿನ್ನೊಳಗೆ ಪೊರೆಯು ಮುಸುಕಿಹುದದನು |
ಪರಿಶುದ್ಧಗೊಳಿಸದನು - ಮರುಳ ಮುನಿಯ || (೨೫೮)

(ಉರದೊಳ್+ಅದ)(ನೀನ್+ಅರಸು)(ಮೊದಲಾದುವು+ಒರೆವುದನು)(ನಿನ್ನ+ಒಳಗೆ)(ಮುಸುಕಿಹುದು+ಅದನು)
(ಪರಿಶುದ್ಧಗೊಳಿಸು+ಅದನು)

ನಿನ್ನ ಹೃದಯ(ಉರ)ದ ಒಳಗಡೆ ನೀನು ಅದನ್ನು ಹುಡುಕು (ಅರಸು). ಅದನ್ನು ಹುಡುಕಲು ನಿನ್ನ ಶಿರಸ್ಸನ್ನು ಒಂದು ದೀಪವನ್ನಾಗಿ ಮಾಡಿಕೊ. ನಿನ್ನ ಕೈ, ಪಾದ, ಮೊದಲಾದುವುಗಳು ಹೇಳು(ಒರೆ)ವುದನ್ನು ಆಲಿಸು. ತಿಳುವಳಿಕೆಯ ಚಕ್ಷುವು ನಿನ್ನೊಳಗೇ ಇದೆ. ಆದರೆ ಅದನ್ನು ಒಂದು ಪದರವು ಆವರಿಸಿಕೊಂಡು ನೀನು ಏನೂ ನೋಡಲಾಗದಂತೆ ಮಾಡುತ್ತಿದೆ. ಆ ಪೊರೆಯನ್ನು ತೆಗೆದು ಕಣ್ಣುಗಳನ್ನು ಶುದ್ಧಗೊಳಿಸಿದರೆ ನೀನು ನಿನ್ನ ತಿಳುವಳಿಕೆಯ ಚಕ್ಷುಗಳಿಂದ ನೋಡಲಾದೀತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Make your head the search light and search It in your heart,
Heed the words of your hands and legs,
Your eye of wisdom within has dimmed due to cataract
Remove the cataract and clean that eye – Marula Muniya
(Translation from "Thus Sang Marula Muniya" by Sri. Narasimha Bhat)

Friday, August 3, 2012

ಮಿತವಿರಲಿ ನಿನ್ನೆಲ್ಲ ಜಗದ ವರ್ತನೆಗಳಲ್ಲಿ (257)

ಮಿತವಿರಲಿ ನಿನ್ನೆಲ್ಲ ಜಗದ ವರ್ತನೆಗಳಲ್ಲಿ |
ಅತಿರೇಕದಿಂದೊಳಿತೆ ವಿಷಮವಾದೀತು |
ಸತತ ನರಯತ್ನ ಮಿತಮಿರ‍್ದೊಡಂ ವ್ಯಾಪ್ತಿ ನಿ- |
ಶ್ಚಿತವಯ್ಯ ಜಯಸಿದ್ಧಿ - ಮರುಳ ಮುನಿಯ || (೨೫೭)

(ಅತಿರೇಕದಿಂದ+ಒಳಿತೆ)(ಮಿತ+ಇರ‍್ದೊಡಂ)

ನಿನ್ನ ಪ್ರಪಂಚದ ವ್ಯವಹಾರಗಳಲ್ಲಿ ಮಿತಿ ಇರಲಿ. ಇಲ್ಲದಿದ್ದಲ್ಲಿ ಅತಿರೇಕಗಳಿಂದ ಒಳ್ಳೆಯದಾಗುವುದರ ಬದಲು ಕಷ್ಟ ಪರಿಸ್ಥಿತಿಯುಂಟಾಗುವ ಸಾಧ್ಯತೆಗಳಿವೆ. ನಿರಂತರವಾದ ಎಲ್ಲಾ ಪುರುಷ ಪ್ರಯತ್ನಗಳೂ ಮಿತಿಯಲ್ಲಿದ್ದಲ್ಲಿ ಜಯ ದೊರಕುವುದು ಖಂಡಿತ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Let all your actions and contacts in the world be moderate
Even good things would become odd and evil if they transgress the moderate limits
If human endeavor is constant and moderate
Success is sure and certain – Marula Muniya
(Translation from "Thus Sang Marula Muniya" by Sri. Narasimha Bhat)

Thursday, August 2, 2012

ಪಾತಿಗಳನಗೆದು ಗೊಬ್ಬರವಿಕ್ಕಿ ನೀರೆರೆದು (256)

ಪಾತಿಗಳನಗೆದು ಗೊಬ್ಬರವಿಕ್ಕಿ ನೀರೆರೆದು |
ಪ್ರೀತಿಯಿಂ ತರುಲತೆಯ ಕಳೆತೆಗೆದು ನಿಚ್ಚಂ ||
ನೂತನದ ಪುಷ್ಪಪಲ್ಲವಲಕ್ಷ್ಮಿಯಿಂ ನಲಿವ |
ತೋಟಗಾರನೊ ಬೊಮ್ಮ - ಮರುಳ ಮುನಿಯ || (೨೫೬)

(ಪಾತಿಗಳನು+ಅಗೆದು)(ಗೊಬ್ಬರ+ಇಕ್ಕಿ)(ನೀರ್+ಎರೆದು)

ಚಿಕ್ಕ ಚಿಕ್ಕ ಗಿಡಗಳಿಗೆ ಪಾತಿಗಳನ್ನು ಸರಿಯಾಗಿ ತೋಡಿ, ಗೊಬ್ಬರವನ್ನು ಹಾಕಿ, ನೀರನ್ನು ಸುರಿದು, ಅಕ್ಕರೆಯಿಂದ ಗಿಡ-ಬಳ್ಳಿಗಳ ಕಳೆಗಳನ್ನು ನಿರಂತರವಾಗಿ (ನಿಚ್ಚಂ) ತೆಗೆದುಹಾಕುತ್ತಾ ಹೊಸ ಹೂವು, ಚಿಗುರು(ಪಲ್ಲವ)ಗಳ ಚೆಲುವನ್ನು ಕಂಡು ಸಂತೊಷಿಸುವ ತೋಟಗಾರ ಪರಬ್ರಹ್ಮ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Brahma is a Gardener who digs the beds daily,
Manures and waters the trees and creepers and removes the weeds.
He bubbles with joy seeing Goddess Lakshmi in the fresh
Flowers and springs of His garden – Marula Muniya
(Translation from "Thus Sang Marula Muniya" by Sri. Narasimha Bhat)

Wednesday, August 1, 2012

ಮನುಜನಾಗದ ಮಾನುಷಸ್ನೇಹಕಿರದ ನಿ- (255)

ಮನುಜನಾಗದ ಮಾನುಷಸ್ನೇಹಕಿರದ ನಿ- |
ರ್ಗುಣಿ ದೈವವಾಗಿರಲು ಭಕ್ತಿ ಬರಿದಲ್ತೆ? ||
ದನಿಗೆ ಮಾರ‍್ದನಿಗುಡದ ಕೈಗೆ ಕೈಪಿಡಿ ಕುಡದ |
ಅನುದಾರಿ ದೈವವೇಂ? - ಮರುಳ ಮುನಿಯ || (೨೫೫)

(ಮನುಜನ್+ಆಗದ)(ಮಾನುಷಸ್ನೇಹಕೆ+ಇರದ)(ದೈವ+ಆಗಿರಲು)(ಬರಿದು+ಅಲ್ತೆ)(ಮಾರ‍್ದನಿ+ಕುಡದ)

ಮನುಷ್ಯನಾಗದ ಮತ್ತು ಮನುಷ್ಯನ ಗೆಳೆತನಕ್ಕೆ ನೆರವಾಗದಿರದ, ನಿರ್ಗುಣಿಯೇ ಈ ದೇವರಾಗಿರಲು, ನಮ್ಮ ಭಕ್ತಿಯಿಂದ ಏನು ಉಪಯೋಗ? ನಮ್ಮ ಧ್ವನಿಗೆ ಮರುದನಿ ಕೊಡದ ಮತ್ತು ನಮ್ಮ ಕೈಗಳಿಗೆ ಆಶ್ರಯ ನೀಡದ ಉದಾರಿಯಲ್ಲದ ಶಕ್ತಿಯೇ ಈ ದೈವವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Doesn’t our devotion become hollow of God can’t be human,
If He is devoid of emotions and cannot share human friendship?
Is God an unkind entity who doesn’t respond to our call
And who doesn’t stretch out His helping hand to clasp our’s? – Marula Muniya
(Translation from "Thus Sang Marula Muniya" by Sri. Narasimha Bhat)