Friday, May 31, 2013

ಸವೆಯಿಪುದು ಶಿಲೆಯ ಗಾಳಿಗಳುಜ್ಜಿ ನೆಲವ ಜಲ (435)

ಸವೆಯಿಪುದು ಶಿಲೆಯ ಗಾಳಿಗಳುಜ್ಜಿ ನೆಲವ ಜಲ |
ಸವೆಯಿಪನು ಜಲವ ರವಿ ಎಲ್ಲವೆಲ್ಲರನು ||
ಸವೆಯಿಪುದು ತನುವ ಮನಸಿನ ಕೊರಗು ಕೆಣಕುಗಳು |
ಜವನು ಜಗದುಜ್ಜಿಕೆಯೊ - ಮರುಳ ಮುನಿಯ || (೪೩೫)

(ಗಾಳಿಗಳು+ಉಜ್ಜಿ)(ಎಲ್ಲವು+ಎಲ್ಲರನು)(ಜಗದ+ಉಜ್ಜಿಕೆಯೊ)

ಈ ಭೂಮಿಯ ಮೇಲಿರುವ ಕಲ್ಲುಗಳನ್ನು ಗಾಳಿಯು ತಿಕ್ಕಿ ತಿಕ್ಕಿ ಸವೆಯುವಂತೆ ಮಾಡುತ್ತದೆ. ಹಾಗೆಯೇ ಭೂಮಿಯನ್ನು ನೀರು ಸವೆಯಿಸುತ್ತದೆ. ಸೂರ್ಯನಾದರೋ, ಆ ನೀರು ಮತ್ತುಳಿದೆಲ್ಲವನು ಸವೆಯಿಸುತ್ತಾನೆ. ಮನುಷ್ಯ ದೇಹವನ್ನು ಅವನ ಮನಸ್ಸಿಗಾಗುವ ಚಿಂತೆ ಮತ್ತು ಪೀಡಿಸುವಿಕೆಗಳು ಕ್ಷೀಣಿಸುತ್ತವೆ. ಈ ರೀತಿ ಯಮಧರ್ಮರಾಯ(ಜವ)ನು ಬೇರೆ ಬೇರೆ ರೂಪಗಳಲ್ಲಿ ಈ ಜಗತ್ತಿನ ಉಜ್ಜುಕಲ್ಲು ಆಗಿದ್ದಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Scouring winds cause the weathering of the rocks and water erodes the earth
The sun wears out water and everything wears out every other thing
The sorrows and stings of minds wear out one’s body
Mutual friction in the world itself is death – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 30, 2013

ವಿಶ್ವಯಂತ್ರದ ಚಕ್ರ ಕೀಲ್ಕೊಂಡಿ ಕಡ್ದಿಗಳು (434)

ವಿಶ್ವಯಂತ್ರದ ಚಕ್ರ ಕೀಲ್ಕೊಂಡಿ ಕಡ್ದಿಗಳು |
ಭಾಸ್ವದಾದಿಗ್ರಹಮುಮಿಳೆಯು ಶಿಲೆ ಜಲಮುಂ ||
ಸ್ವಸ್ವಗುಣಕೃತ್ಯದಿನೆ ನಿಚ್ಚಮುಂ ಸವೆಯುವುವು |
ಸ್ವಸ್ವಭಾವವೆ ಮರಣ - ಮರುಳ ಮುನಿಯ || (೪೩೪)

(ಕೀಲ್+ಕೊಂಡಿ)(ಭಾಸ್ವತ್+ಆದಿಗ್ರಹಮುಂ+ಇಳೆಯು)

ಈ ಜಗತ್ತಿನ ಯಂತ್ರದ ಕೀಲು ಕೊಂಡಿ ಮತ್ತು ಕಡ್ಡಿಗಳು, ಸೂರ್ಯ (ಭಾಸ್ವತ್) ಮೊದಲಾದ ಗ್ರಹಗಳೂ ಮತ್ತು ಭೂಮಿಯ ಕಲ್ಲು, ನೀರೂ ಇತ್ಯಾದಿಗಳು, ತಮ್ಮ ತಮ್ಮ ನೈಸರ್ಗಿಕ ಸ್ವಭಾವ ಮತ್ತು ಕೆಲಸ ಕಾರ್ಯಗಳಿಂದ ಸದಾಕಾಲವೂ (ನಿಚ್ಚಮುಂ) ಸವೆಯುತ್ತಾ ಇರುತ್ತವೆ. ಅವುಗಳ ಸ್ವಂತ ಗುಣಗಳಿಂದಲೇ ಅವುಗಳಿಗೆ ಸಾವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The wheels, bolts, hooks and rods of the world machine
The sun and other celestial bodies, the stones and waters of the earth
Are continuously wearing out due to their own nature and work,
One’s own nature is his death – Marula Muniya
(Translation from "Thus Sang Marula Muniya" by Sri. Narasimha Bhat)

Wednesday, May 29, 2013

ಇರುವುದೇಕಿರಬೇಕದೇತಕೆನ್ನುವ ಸಖನೆ (433)

ಇರುವುದೇಕಿರಬೇಕದೇತಕೆನ್ನುವ ಸಖನೆ |
ಇರದೆ ನೀನೇನಪ್ಪೆ? ಬಯಸುವೆಯದೇನನ್ ||
ಇರುವುದಿಂತಿಲ್ಲದೊಡೆ ಮತ್ತೆಂತೊ ನಿಲುವುದದು |
ಮರಣ ಬರಿ ಮಾರ್ಪಾಟು - ಮರುಳ ಮುನಿಯ || (೪೩೩)

(ಇರುವುದು+ಏಕೆ+ಇರಬೇಕು+ಅದು+ಏತಕೆ+ಎನ್ನುವ)(ನೀನ್+ಏನ್+ಅಪ್ಪೆ)(ಬಯಸುವೆ+ಅದು+ಏನನ್)(ಇರುವುದು+ಇಂತು+ಇಲ್ಲದೊಡೆ)

ಇರತಕ್ಕದ್ದು ಅದು ಏತಕ್ಕಾಗಿ ಇರಬೇಕು? ಎನ್ನುತ್ತಿರುವ ಸ್ನೇಹಿತನೆ, ಅದು ಇಲ್ಲದಿದ್ದರೆ ನೀನು ಏನಾಗುತ್ತೀಯೆ? ನೀನು ಏನನ್ನು ತಾನೇ ಅಪೇಕ್ಷಿಸುವೆ? ಅದನ್ನೇನಾದರೂ ಸ್ವಲ್ಪ ಯೋಚಿಸಿರುವೆಯೇನು? ಇರುವುದು ಹೀಗಿಲ್ಲದಿದ್ದರೆ ಮತ್ತೆ ಇನ್ಯಾವ ವಿಧದಲ್ಲಾದರೂ ಇದ್ದೇ ಇರುತ್ತದೆ. ಸಾವು ಕೇವಲ ಒಂದು ಬದಲಾವಣೆ ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Why do we exist and why should we exist” oh friend you ask
What else will you be if you can’t be so, what else do you desire for
If it doesn’t remain so, it has to remain in some other way
Death is merely a transformation – Marula Muniya
(Translation from "Thus Sang Marula Muniya" by Sri. Narasimha Bhat)

Tuesday, May 28, 2013

ಮೃತ್ಯುವನು ಹೊತ್ತಿರ‍್ಪರೆಲ್ಲರುಂ ತಮ್ಮೊಳಗೆ (432)

ಮೃತ್ಯುವನು ಹೊತ್ತಿರ‍್ಪರೆಲ್ಲರುಂ ತಮ್ಮೊಳಗೆ |
ತುತ್ತನಗಿದಗಿದೆ ಸವೆವುದು ಪಲ್ಲಸಾಲು ||
ರಥಚಕ್ರಗಳರೆದುಕೊಳ್ಳುವುವು ತಮ್ಮತಾಂ |
ಕೃತ್ಯಕರಣವೆ ಮೃತ್ಯು - ಮರುಳ ಮುನಿಯ || (೪೩೨)

(ಹೊತ್ತು+ಇರ‍್ಪರು+ಎಲ್ಲರುಂ)(ತುತ್ತನು+ಅಗಿದು+ಅಗಿದೆ)(ಚಕ್ರಗಳು+ಅರೆದುಕೊಳ್ಳುವುವು)

ಈ ಪ್ರಪಂಚದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಮನುಷ್ಯನೂ ಸದಾಕಾಲವೂ ಮರಣವನ್ನು ತನ್ನ ಜೊತೆಯಲ್ಲಿಯೇ ಹೊತ್ತುಕೊಂಡಿರುತ್ತಾನೆ. ತುತ್ತನ್ನು ಅಗಿದು ಅಗಿದು ಹಲ್ಲುಗಳ ಸಾಲುಗಳು ಸವೆದುಹೋಗುತ್ತದೆ. ರಥದ ಚಕ್ರಗಳು ತಾವಾಗಿ ತಾವೇ ಅರೆದುಕೊಂಡು ತೇದುಹೋಗುತ್ತವೆ. ಈ ರೀತಿ ಕೆಲಸ ಮತ್ತು ಅವುಗಳನ್ನು ಮಾಡುವ ಉಪಕರಣಗಳಿಂದಲೇ ಮರಣವು ಬರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Everyone carries his death within himself
The rows of teeth wear out biting and chewing food
The wheels of car turn round and round and come to a grinding halt
Working organ itself is death – Marula Muniya
(Translation from "Thus Sang Marula Muniya" by Sri. Narasimha Bhat)

Monday, May 27, 2013

ನಡೆಯಲಾಗಿಹ ಕಾಲು ನಡೆನಡೆಸಿ ಕುಸಿಯುವುದು (431)

ನಡೆಯಲಾಗಿಹ ಕಾಲು ನಡೆನಡೆಸಿ ಕುಸಿಯುವುದು |
ನುಡಿಯಲಿಹ ಬಾಯಿ ನುಡಿನುಡಿದು ಸೇದುವುದು ||
ದುಡಿಯಲೆಂದಿಹ ಕೈಯಿ ದುಡಿದುಡಿಯುತದಿರುವುದು |
ಪಡುವ ಬಾಳ್ವೆಯೆ ಮಡಿತ - ಮರುಳ ಮುನಿಯ || (೪೩೧)

(ನಡೆಯಲ್+ಆಗಿ+ಇಹ)(ನುಡಿಯಲ್+ಇಹ)(ದುಡಿಯಲ್+ಎಂದ್+ಇಹ)(ದುಡಿಯುತ+ಅದಿರುವುದು)

ನಡೆಯಲಿಕ್ಕೋಸ್ಕರವಾಗಿಯೇ ಇರುವ ಕಾಲುಗಳು ನಡೆ ನಡೆದು ಸೋತು, ಕುಸಿದು ಬೀಳುತ್ತವೆ. ಮಾತನ್ನಾಡುವುದಕ್ಕೋಸ್ಕರ ಇರುವ ಬಾಯಿ ಮಾತನಾಡಿ ಆಡಿ ಮುದುರಿಕೊಂಡು ಹೋಗುತ್ತದೆ. ಕೆಲಸ ಮಾಡುವುದಕ್ಕೋಸ್ಕರ ಇರುವ ಕೈಗಳು ಕೆಲಸವನ್ನು ಮಾಡಿ ಮಾಡಿ, ಕಂಪಿಸತೊಡಗುತ್ತದೆ. ನಾವು ಅನುಭವಿಸುವ ಜೀವನವೇ ನಮಗೆ ಮರಣ(ಮಡಿತ)ವನ್ನು ತರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Walking legs, walk and walk and collapse exhausted
Talking mouth, talks and talks and becomes tired and dumb
Working hands work and work and tremble failing to work
These experiences in life are a sort of death – Marula Muniya
(Translation from "Thus Sang Marula Muniya" by Sri. Narasimha Bhat)

Friday, May 24, 2013

ಜನ್ಮಕಥೆ ಮುಗಿಯುವುದು ಸಂಸ್ಕಾರವುಳಿಯುವುದು (430)

ಜನ್ಮಕಥೆ ಮುಗಿಯುವುದು ಸಂಸ್ಕಾರವುಳಿಯುವುದು |
ನಿರ್ಮಲದ ಸುಕೃತವಾಸನೆಗಳುಳಿದಿರುವೊಲ್ ||
ಜನ್ಮಾಂತರವುಮೆಮಗದೊಂದಾತ್ಮ ಲಾಭವಲ |
ಬ್ರಹ್ಮಸೋಪಾನವದು - ಮರುಳ ಮುನಿಯ || (೪೩೦)

(ಸುಕೃತ+ವಾಸನೆಗಳ್+ಉಳಿದು+ಇರುವ+ವೊಲ್)(ಜನ್ಮಾಂತರವುಂ+ಎಮಗೆ+ಅದು+ಒಂದಾತ್ಮ)

ನಾವು ತಳೆದಿರುವ ಜನ್ಮ ಒಂದು ದಿನ ಕೊನೆಗಾಣುತ್ತದೆ. ಆದರೆ ನಮ್ಮ ಹಿಂದಿನ ಜನ್ಮದ ಒಳ್ಳೆಯ ಕರ್ಮಗಳ ಶುಭವಾದ ವಾಸನೆಗಳು ಇರುವಂತೆ, ಈ ಜನ್ಮದ ಸಂಸ್ಕಾರಗಳು ಸಹ ಉಳಿದಿರುತ್ತವೆ. ಪುನಃ ಪುನಃ ಜನ್ಮಗಳನ್ನೆತ್ತಬೇಕಾದರೂ ಸಹ ನಮ್ಮ ಆತ್ಮಕ್ಕೆ ಪ್ರಯೋಜನಕರವಾಗುತ್ತವೆ. ಅವು ಬ್ರಹ್ಮನನ್ನು ಸೇರುವುದಕ್ಕೆ ಮೆಟ್ಟಿಲು(ಸೋಪಾನ)ಗಳಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Just as the noble tendencies of past meritorious deeds survive
The culture earned during this life continues even when the tale of this life ends
Rebirths are benign boons to the soul
They become the steeping stones to Brahma – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 23, 2013

ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? (429)

ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? |
ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ? ||
ಜೀವಕಂ ಸಾವಿಗಂ ಸಮಸಿದ್ಧನಾದವನೆ |
ಕೋವಿದನು ತತ್ತ್ವದಲಿ - ಮರುಳ ಮುನಿಯ || (೪೨೯)

(ಹೊರೆ+ಏನ್+ಅಲ್ಲ)(ಬಿಸುಡು+ಎನುವುದು+ಏಕೆ+ಅದನು)(ನಷ್ಟವುಂ+ಅಲ್ಲ)(ಭಯ+ಏಕೆ)(ಸಮಸಿದ್ಧನ್+ಆದವನೆ)

ಜೀವವೆನ್ನುವುದು ಒಂದು ಭಾರವೇನೂ ಅಲ್ಲ. ಅದನ್ನು ಹೊರಲಾರದೆ, ಬಿಸಾಕು, ಎಂದೇಕೆ ಹೇಳುವೆ? ಸಾವೆನ್ನುವುದೂ ಸಹ ನಮ್ಮನ್ನು ನಾಶ ಮಾಡುವುದಿಲ್ಲ. ಆದುದ್ದರಿಂದ ಸಾವು ಎಂದರೆ ಏಕೆ ಹೆದರುವೆ? ಬದುಕಿ ಜೀವನವನ್ನು ನಡೆಸುವುದಕ್ಕೆ ಮತ್ತು ಮರಣಕ್ಕೂ ಸಮಾನವಾಗಿ ಸಿದ್ಧನಿರುವ ಮನುಷ್ಯನೇ ಸಿದ್ಧಾಂತವನ್ನು ತಿಳಿದುಕೊಂಡ ವ್ಯಕ್ತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This life is no burden and why should we discard it?
Death is no loss and why should we fear to die?
One who is equally prepared to live and die
Is the master philosopher – Marula Muniya (429)
(Translation from "Thus Sang Marula Muniya" by Sri. Narasimha Bhat)

Wednesday, May 22, 2013

ತಿಕ್ತಾಮ್ಲ ಕಟುಲವಣವಿರದೆ ಭೋಜನವೇನು? (428)

ತಿಕ್ತಾಮ್ಲ ಕಟುಲವಣವಿರದೆ ಭೋಜನವೇನು? |
ರಕ್ತಿ ರಭಸಗಳಿರದೆ ಜೀವಿತವದೇನು? ||
ವ್ಯಕ್ತಿ ಕಾಮಕ್ರೋಧಮದಮತ್ಸರಗಳಿರದೆ |
ಶಕ್ತಿಯೇಂ ಸೃಷ್ಟಿಯಲಿ - ಮರುಳ ಮುನಿಯ || (೪೨೮)

(ತಿಕ್ತ+ಆಮ್ಲ)(ಕಟುಲವಣ+ಇರದೆ)(ಭೋಜನವು+ಏನು)(ರಭಸಗಳ್+ಇರದೆ)(ಜೀವಿತವು+ಅದು+ಏನು)(ಮತ್ಸರಗಳ್+ಇರದೆ)

ಕಹಿ(ತಿಕ್ತ), ಹುಳಿ (ಆಮ್ಲ), ಖಾರ(ಕಟು) ಮತ್ತು ಉಪ್ಪು (ಲವಣ)ಗಳಿಲ್ಲದಿರುವ ಊಟ ರುಚಿಯಾಗಿರುವುದಿಲ್ಲ. ಪ್ರೀತಿ ಮತ್ತು ಒಲವುಗಳ ಆವೇಶಗಳಿಲ್ಲದಿರುವ ಜೀವನವೂ ಸಹ ಹಾಗೆಯೇ ಸಾರವಿಲ್ಲದಾಗುತ್ತದೆ. ಮನುಷ್ಯರ ಕಾಮ, ಕೋಪ, ಗರ್ವ ಮತ್ತು ಹೊಟ್ಟೆಕಿಚ್ಚುಗಳಿರದ ಶಕ್ತಿ ಸೃಷ್ಟಿಯಲ್ಲಿ ಯಾವುದೂ ಇಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Dinner is not worth the name without dishes of strong alkaline, hot and salty tastes
Life without love and momentous speed is no life
Without human beings with passion, anger, pride and envy
There’s no vigour and vibrancy in creation – Marula Muniya (428)
(Translation from "Thus Sang Marula Muniya" by Sri. Narasimha Bhat)

Tuesday, May 21, 2013

ಕವಲೆರಡು ಸೀಳಿ ಮನುಜಸ್ವಭಾವದ ಹೊನಲ್ (427)

ಕವಲೆರಡು ಸೀಳಿ ಮನುಜಸ್ವಭಾವದ ಹೊನಲ್ |
ಪ್ರವಹಿಕುಂ ಸ್ವಾರ್ಥತೆ ಪರಾರ್ಥತೆಗಳಾಗಿ ||
ಜವುಗು ಹಳ್ಳದಿ ನಿಂತು ನಾರ‍್ವುದೊಂದಿನ್ನೊಂದು |
ವೆವಸಾಯಕೊದಗುವುದು - ಮರುಳ ಮುನಿಯ || (೪೨೭)

(ಕವಲ್+ಎರಡು)(ಪರಾರ್ಥತೆಗಳ್+ಆಗಿ)(ನಾರ‍್ವುದು+ಒಂದು+ಇನ್ನೊಂದು)(ವೆವಸಾಯಕೆ+ಒದಗುವುದು)

ಮನುಷ್ಯನ ಸಹಜಗುಣಗಳ ಹೊಳೆಯು(ಹೊನಲ್) ಎರಡು ಕವಲುಗಳಾಗಿ ಸೀಳಿ ಸ್ವಹಿತ ಮತ್ತು ಪರಹಿತಗಳೆಂಬುದಾಗಿ ಒಂದು ಕವಲು ಹರಿಯುತ್ತದೆ. ಇನ್ನೊಂದು ಕವಲು ಜಿನುಗುತ್ತಿರುವ (ಜವುಗು) ಹಳ್ಳದಲ್ಲಿ ನಿಂತು ದುರ್ನಾತ(ನಾರ‍್ವುದು)ವನ್ನು ಬೀರುತ್ತದೆ. ಆದರೆ ಈ ಎರಡನೆಯ ಕವಲು ಬೇಸಾಯ(ವೆವಸಾಯ) ಮಾಡಲಿಕ್ಕೆ ಸಹಾಯಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The river of human nature forks and flows in two streams,
The stream of selfishness and the stream of altruism
One lingers in low swamp stagnates and stinks
The other irrigates agricultural lands – Marula Muniya
(Translation from "Thus Sang Marula Muniya" by Sri. Narasimha Bhat)

Monday, May 20, 2013

ಅಳುವಿಂದೆ ನಗುವಿಂದೆ ಕಳವಳದ ಸುಯ್ಲಿಂದೆ (426)

ಅಳುವಿಂದೆ ನಗುವಿಂದೆ ಕಳವಳದ ಸುಯ್ಲಿಂದೆ |
ಚಲುವಿಕೆಯ ಜೊಂಪಿಂದೆ ನಲುಮೆಯಿಂಪಿಂದೆ ||
ಕೆಳೆಯ ಕಂಬನಿಯಿಂದೆ ಹಗೆಯ ಬಿಸಿ ಬೆವರಿಂದೆ |
ಜಳಕವೋ ಜೀವಕ್ಕೆ - ಮರುಳ ಮುನಿಯ || (೪೨೬)

ಅಳುವುದರಿಂದ, ನಗುವುದರಿಂದ, ತಳಮಳದಿಂದ ಕೂಡಿದ ನಿಟ್ಟುರಿಸಿನಿಂದ (ಸುಯ್ಲು) ಚೆಲುವಾಗಿರುವುದನ್ನು ಕಂಡು ಮೈಮರೆತು (ಜೊಂಪು) ಸಂತೋಷಿಸುವುದರಿಂದ, ಪ್ರೀತಿಯ (ನಲುಮೆ) ಮಾಧುರ್ಯ ಮತ್ತು ಸೊಗಸಿನಿಂದ, ಸ್ನೇಹಿತರ ಕಣ್ಣೀರುಗಳಿಂದ ಮತ್ತು ಶತ್ರುವಿನ ದ್ವೇಷವೆಂಬ ಶಾಖದಿಂದ ಬರುವ ಬೆವರಿನಿಂದ, ಜೀವಕ್ಕೆ ಸ್ನಾನ(ಜಳಕ)ವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sorrows and smiles, sighs of anxiety
Intoxication affected by beauty and affection
Tears of friendship and hot sweat of hatred
All go to wash the soul clean – Marula Muniya
(Translation from "Thus Sang Marula Muniya" by Sri. Narasimha Bhat)

Friday, May 17, 2013

ಸಿಹಿಯಾಗಿ ನಾಲಗೆಗೆ ಹುಳಿಯಾಗಿ ಹಲ್ಗಳಿಗೆ (425)

ಸಿಹಿಯಾಗಿ ನಾಲಗೆಗೆ ಹುಳಿಯಾಗಿ ಹಲ್ಗಳಿಗೆ |
ಕಹಿಯಾಗಿ ಗಂಟಲಿಗೆ ಮೆಣಸಾತ್ಮಕಾಗಿ ||
ಬಹುವಿಧದ ಸವಿನೋಡು ಸಂಸಾರ ವೃಕ್ಷಫಲ |
ಸಹಿಸದನು ವಹಿಸದನು - ಮರುಳ ಮುನಿಯ || (೪೨೫)

(ಮೆಣಸು+ಆತ್ಮಕೆ+ಆಗಿ)(ಸಹಿಸು+ಅದನು)(ವಹಿಸು+ಅದನು)

ನಮ್ಮ ನಾಲಗೆಗಳಿಗೆ ಸಿಹಿಯಾಗಿರುತ್ತಾ, ಹಲ್ಲುಗಳಿಗೆ ಹುಳಿಯಾಗಿರುತ್ತಾ, ಗಂಟಲುಗಳಿಗೆ ಕಹಿಯಾಗಿರುತ್ತಾ, ಆತ್ಮಕ್ಕೆ ಮೆಣಸಿನಂತೆ ಖಾರವಾಗಿರುತ್ತಾ, ಈ ಸಂಸಾರವೆಂಬ ತರುವಿನ ಫಲ ವಿಧವಿಧವಾದ ರುಚಿಗಳನ್ನು ಕೊಡುತ್ತದೆ. ನೀನು ಈ ರುಚಿಗಳನ್ನು ತಾಳಿಕೊ ಮತ್ತು ಸಂಸಾರವೆಂಬ ವೃಕ್ಷದ ಜವಾಬ್ದಾರಿಯನ್ನು ಹೊತ್ತುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sweet to the tongue, sour to the teeth
Bitter to the throat and hot chilly to the soul
Many are the tastes of the fruits of the family tree
Accept and endure it – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 16, 2013

ಹುಳಿ ಮಾವಿನೆಳೆಕಾಯಿ ಮಾಗಿದರೆ ಮಧುಖಂಡ (424)

ಹುಳಿ ಮಾವಿನೆಳೆಕಾಯಿ ಮಾಗಿದರೆ ಮಧುಖಂಡ |
ಹಲವುದಿನಮಿನ್ನುಮಿರೆ ತಾನೆ ಕೊಳೆಯುವುದು ||
ಇಳುವುದಿಂತೊಳಿತು ಹೊಲಸಿಂ ಹೊಲಸಿನಿಂದೊಳಿತು |
ಫಲವೊಂದೆ ಹತ್ತು ರುಚಿ - ಮರುಳ ಮುನಿಯ || (೪೨೪)

(ಮಾವಿನ+ಎಳೆಕಾಯಿ)(ಹಲವುದಿನಂ+ಇನ್ನುಂ+ಇರೆ)(ಇಳುವುದು+ಇಂತು+ಒಳಿತು)(ಹೊಲಸಿನಿಂದ+ಒಳಿತು)

ಹುಳಿಯಾಗಿರುವ ಎಳೆಯ ಮಾವಿನಕಾಯಿಯು ಪಕ್ವವಾಗಿ ಹಣ್ಣಾದರೆ ಅದು ಸಿಹಿಯಾಗಿರುತ್ತದೆ. ಅದನ್ನು ಬಹುಕಾಲ ಹಾಗೇ ಇಟ್ಟಿದ್ದರೆ ಅದು ಕೊಳೆತು ಹಾಳಾಗಿ ಹೋಗುತ್ತದೆ. ಈ ರೀತಿಯಾಗಿ ಹೊಲಸಿನಿಂದ ಒಳ್ಳೆಯದು ಇಳಿದು ಬರುತ್ತದೆ ಅಂತೆಯೇ ಒಳ್ಳೆಯದರಿಂದ ಕೆಟ್ಟದ್ದು ಬರುತ್ತದೆ. ಒಂದೇ ಬೆಳೆಯಾದರೂ ರುಚಿ ಮಾತ್ರ ನಾನಾ ಪ್ರಕಾರದಲ್ಲಿ ಸಿಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sour tender mango turns into bowl sweetness when it becomes ripe
But when left in this condition for many days it rots
Thus comes good from filth and filth from good
Fruit in one, but tastes are many – Marula Muniya
(Translation from "Thus Sang Marula Muniya" by Sri. Narasimha Bhat)

Wednesday, May 15, 2013

ಬೇರಿನಲಿ ಮಣ್ಕಂಪು ಕಸಿರು ಕಂಪೆಲೆಗಳಲಿ (423)

ಬೇರಿನಲಿ ಮಣ್ಕಂಪು ಕಸಿರು ಕಂಪೆಲೆಗಳಲಿ |
ಸೌರಭವು ಮಲ್ಲಿಗೆಯು ಹೂವಿನಲಿ ಮಾತ್ರ ||
ಸಾರಪಾಕಕ್ರಮವಿದೀ ಸೃಷ್ಟಿಭಟ್ಟಿಯಲಿ |
ಕ್ಷೀರ ಹುಲ್ಲಿಂದಲ್ತೆ - ಮರುಳ ಮುನಿಯ || (೪೨೩)

(ಮಣ್+ಕಂಪು)(ಕಂಪು+ಎಲೆಗಳಲಿ)(ಸಾರಪಾಕಕ್ರಮವು+ಇದು+ಈ)(ಹುಲ್ಲಿಂದ+ಅಲ್ತೆ)

ಒಂದು ಗಿಡದ ಬೇರಿನಲ್ಲಿ ಮಣ್ಣಿನ ವಾಸನೆ ಇರುತ್ತದೆ. ಹಸಿಯಾಗಿರುವ ಎಲೆಗಳಲ್ಲಾದರೋ ಬೇರೆ ವಿಧವಾದ ವಾಸನೆ ಇರುತ್ತದೆ. ಆದರೆ ಸುವಾಸನೆ ಬರುವುದು ಮಲ್ಲಿಗೆಯ ಹೂವಿನಿಂದ ಮಾತ್ರ. ಅದು ಬೇರು ಮತ್ತು ಎಲೆಗಳಲ್ಲಿರುವುದಿಲ್ಲ. ಈ ರೀತಿಯಾಗಿ ತಿರುಳನ್ನು ಸೃಷ್ಟಿಯು ಭಟ್ಟಿಯಲ್ಲಿ ಒಂದು ಕ್ರಮದಿಂದ ಪಾಕ ಮಾಡುತ್ತದೆ. ಹಸುವು ಹುಲ್ಲನ್ನು ತಿನ್ನುವುದರಿಂದ ತಾನೆ ಹಾಲು ಬರುವುದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Smell of soil in roots and unpleasant odour in tender leaves
Fragrance only in the jasmine flower
This is the cuisine in the brewery of nature
Is not milk produced from grass? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, May 14, 2013

ಕುದಿ-ಕುದಿದು ಬಿಸಿಯಾರಿ ಮನ ತಣ್ಣಗಾದಂದು (422)

ಕುದಿ-ಕುದಿದು ಬಿಸಿಯಾರಿ ಮನ ತಣ್ಣಗಾದಂದು |
ಬೆದಬೆದಕಿ ಕೈಸೋತು ಹುರುಡಡಗಿದಂದು ||
ಸೊದೆಗೆಂದು ಕಾದ ತುಟಿ ಸೊರಗಿ ತರಗಾದಂದು |
ಉದಯ ನವಯುಗ ನಿನಗೆ - ಮರುಳ ಮುನಿಯ ||(೪೨೨)

(ಬಿಸಿ+ಆರಿ)(ತಣ್ಣಗೆ+ಆದಂದು)(ಹುರುಡು+ಅಡಗಿದಂದು)(ಸೊದೆಗೆ+ಎಂದು)(ತರಗು+ಆದಂದು)

ವಿಪರೀತವಾಗಿ ಕುದ್ದು ಬಿಸಿಯಾದ ಮನಸ್ಸು ಆರಿ ತಣ್ಣಗಾದಾಗ, ಕೆದಕಿ, ಕೆದಕಿ, ಕೈಗಳು ಸೋತು, ಪೈಪೋಟಿ (ಹುರುಡು) ಮಾಡುವ ಶಕ್ತಿಯು ಕುಗ್ಗಿಹೋದಾಗ, ಅಮೃತ(ಸೊದೆ)ಕ್ಕೋಸ್ಕರ ಕಾದು ಕಾದು, ಅದು ದೊರಕದೆ ತುಟಿಯು ಬತ್ತಿ, ಒಣಗಿ(ತರಗು)ಹೋದಾಗ, ನಿನಗೆ ಹೊಸಯುಗವು ಹುಟ್ಟುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When your simmering mind steadily loses hear and cools down
When your spirit of competition dies down after long strenuous efforts
When your tongue becomes a withered leaf after craving for ambrosia
Then dawns a new age to you – Marula Muniya (422)
(Translation from "Thus Sang Marula Muniya" by Sri. Narasimha Bhat)

Monday, May 13, 2013

ನಾಲಗೆಗೆ ಜೇನಾದ ಪಾನ ಕರುಳಿಗೆ ಸೀಗೆ (421)

ನಾಲಗೆಗೆ ಜೇನಾದ ಪಾನ ಕರುಳಿಗೆ ಸೀಗೆ |
ಕೇಳಲಿಂಚರವೆ ಕಿವಿ ಕಂಗಳಲಿ ಮಂಜು ||
ಮೇಲೊಡಲ ಸೊಗವೊಳಗಣಾತ್ಮವನು ತೊಳೆದೀತು |
ಲೀಲೆಯುಂ ಕ್ಷಾಲಕವೊ - ಮರುಳ ಮುನಿಯ || (೪೨೧)

(ಕೇಳಲ್+ಇಂಚರವೆ)(ಮೇಲ್+ಒಡಲ)(ಸೊಗವೊಳಗಣ+ಆತ್ಮವನು)

ನಾಲಗೆಗೆ ಸಿಹಿಯಾಗಿ ರುಚಿಯಾಗಿರುವ ಜೇನುತುಪ್ಪವನ್ನು ಕುಡಿಯುವುದು ದೇಹದಲ್ಲಿರುವ ಕರುಳಿಗೆ ಸೀಗೆಪುಡಿಯಂತೆ ಭಾಸವಾಗಬಹುದು. ಕಿವಿಗಳಿಗೆ ಕೇಳಲು ಇಂಪಾದ ಧ್ವನಿಯು (ಇಂಚರ), ಕಣ್ಣುಗಳಿಗೆ ಮಬ್ಬನ್ನುಂಟುಮಾಡಬಹುದು. ದೇಹದ ಮೇಲೆ ಕಾಣಿಸುವ ಚೆಲುವು, ಒಳಗಿರುವ ಆತ್ಮವನ್ನು ತೊಳೆದು ಶುಚಿ ಮಾಡಬಹುದು. ಈ ರೀತಿಯ ಸುಖದಾಟಗಳೆಲ್ಲವೂ ಶುದ್ಧಿಕಾರಕವಾಗಬಲ್ಲುವು (ಕ್ಷಾಲಕ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Honey sweet beverage may adversely affect your intestines
Sweet musical notes may bring tears to your eyes
Outer beauty may clean your soul within
Even play can be cathartic to your system – Marula Muniya
(Translation from "Thus Sang Marula Muniya" by Sri. Narasimha Bhat)

Friday, May 10, 2013

ಕಹಿಕಷಾಯವದೆಂದು, ಕಾರಚೂರ್ಣಮದೆಂದು (420)

ಕಹಿಕಷಾಯವದೆಂದು, ಕಾರಚೂರ್ಣಮದೆಂದು |
ಸಿಹಿಯ ಲೇಹ್ಯಮದೆಂದು ನಿನಗೆ ಹಿತವಹುದೋ ||
ವಿಹಿತ ಗೈವನು ವೈದ್ಯ ನೀನಲ್ಲ, ರೋಗಿ ನೀಂ |
ಗ್ರಹಿಸು ವಿಧಿಯೌಷಧವ - ಮರುಳ ಮುನಿಯ || (೪೨೦)

(ಕಹಿಕಷಾಯ+ಅದು+ಎಂದು)(ಕಾರಚೂರ್ಣಂ+ಅದು+ಎಂದು)(ಲೇಹ್ಯಂ+ಅದು+ಎಂದು)(ಹಿತ+ಅಹುದೋ)(ನೀನ್+ಅಲ್ಲ)(ವಿಧಿಯ+ಔಷಧವ)

ಕಹಿಯಾಗಿರುವ ಕಷಾಯ, ಖಾರವಾಗಿರುವ ಚೂರ್ಣ ಮತ್ತು ಬಾಯಿಗೆ ರುಚಿಯಾಗಿ ಸಿಹಿಯಾಗಿರುವ ಲೇಹ್ಯಗಳಲ್ಲಿ, ಯಾವುದು ಯಾವಾಗ ನಿನಗೆ ಒಳ್ಳೆಯದನ್ನು ಮಾಡುತ್ತದೆಂದು ನಿರ್ಧರಿಸಿ ಕೊಡುವವನು ವೈದ್ಯನೇ ಹೊರತು ನೀನಲ್ಲ. ಆದ್ದರಿಂದ ರೋಗಿಯಾದ ನೀನು ವಿಧಿಯು ನಿನಗೆ ಕೊಡುತ್ತಿರುವ ಔಷಧವನ್ನು ಇದೇ ರೀತಿ ಸ್ವೀಕರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Bitter decoction, hot tasting powder, sweet linctus
Whatever is appropriate in your case
The physician decides and not you, a patient
Likewise accept the medicine prescribed by Fate – Marula Muniya (420)
(Translation from "Thus Sang Marula Muniya" by Sri. Narasimha Bhat)

Thursday, May 9, 2013

ಭೋಗ ರೋಗ ವಿಯೋಗ ದಾರಿದ್ರ್ಯ ಚಿಂತೆಗಳ (419)

ಭೋಗ ರೋಗ ವಿಯೋಗ ದಾರಿದ್ರ್ಯ ಚಿಂತೆಗಳ |
ಬೇಗೆಯಲಿ ಮಾನಸದ ಹಸಿರು ಮಾಗಾಯಿ ||
ಮಾಗಿ ಹಣ್ಣಾಗುವುದು ಹುಳಿಯೆ ಜೇನಾಗುವುದು |
ಭೂಗೋಲದಮೃತವದು - ಮರುಳ ಮುನಿಯ || (೪೧೯)

(ಹಣ್ಣು+ಆಗುವುದು)(ಜೇನು+ಆಗುವುದು)(ಭೂಗೋಲದ+ಅಮೃತ+ಅದು)

ಸುಖಾನುಭವಗಳ, ಕಾಯಿಲೆ ಕಸಾಲೆಗಳ, ಅಗಲಿಕೆಗಳ, ಬಡತನದ ಕಷ್ಟ ಮತ್ತು ತೊಂದರೆಗಳ ತಾಪ(ಬೇಗೆ)ಗಳಲ್ಲಿ ಮನಸ್ಸೆಂಬ ಹಸಿರಾಗಿರುವ ಮಾವಿನಕಾಯಿ (ಮಾಗಾಯಿ) ಪಕ್ವವಾಗಿ ಹಣ್ಣಾಗುತ್ತದೆ. ಆವಾಗ ಕಾಯಿಯಲ್ಲಿದ್ದ ಹುಳಿಯು ಹೋಗಿ ಅದು ಜೇನುತುಪ್ಪದಂತೆ ಸಿಹಿಯಾಗಿರುತ್ತದೆ. ಇದು ಪ್ರಪಂಚವು ನಮಗಿತ್ತಿರುವ ಅಮೃತ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The green mango of your mind gets mellowed
It ripens and its sourness turns into sweetness
In the heat of worries, sensual pleasures, bereavement and penury,
It is the ambrosia of the earth – Marula Muniya (419)
(Translation from "Thus Sang Marula Muniya" by Sri. Narasimha Bhat)

Wednesday, May 8, 2013

ಮನಸಿನ ವ್ಯಾಧಿಯೇಂ ತನುವಿನ ವ್ಯಾಧಿವೊಲೆ (418)

ಮನಸಿನ ವ್ಯಾಧಿಯೇಂ ತನುವಿನ ವ್ಯಾಧಿವೊಲೆ |
ಜನಿಸುವುದದಾವುದೋ ಪ್ರಾಚೀನ ಕೃತದಿಂ ||
ಅನುಭವಿಸಿದಲ್ಲದದು ಮುಗಿಯದೇಂಗೆಯ್ದೊಡಂ |
ಮನವಗ್ನಿಪರ್ವತವೊ - ಮರುಳ ಮುನಿಯ || (೪೧೮)

(ಜನಿಸುವುದು+ಅದು+ಆವುದೋ)(ಅನುಭವಿಸಿದ+ಅಲ್ಲದೆ+ಅದು)(ಮುಗಿಯದ್ಯು+ಏಂ+ಗೆಯ್ದೊಡಂ)(ಮನವು+ಅಗ್ನಿಪರ್ವತವೊ)

ನಮ್ಮ ಮನಸ್ಸಿನಲ್ಲಿ ಉಂಟಾಗುವ ಬೇನೆ(ವ್ಯಾಧಿ), ದೇಹಕ್ಕುಂಟಾಗುವ ಕಾಯಿಲೆಯಂತೆ, ಪೂರ್ವಜನ್ಮದಲ್ಲಿ ಮಾಡಿದ ಯಾವುದೋ ಕರ್ಮಗಳಿಂದ ಹುಟ್ಟುತ್ತದೆ. ಇದನ್ನು ನೀನು ಅನುಭವಿಸಿಯೇ ತೀರಬೇಕು. ಇದನ್ನು ಬೇರೆ ಯಾವ ವಿಧದಲ್ಲೂ ಪರಿಹರಿಸಲು ಅಸಾಧ್ಯ. ಮನಸ್ಸು ಒಂದು ಅಗ್ನಿಪರ್ವತದಂತಿರುತ್ತದೆ, ಅದು ಯಾವಾಗ ಸ್ಫೋಟಿಸುತ್ತದೆಂದು ಹೇಳಲು ಸಾಧ್ಯವಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Mental illness like physical ailment
Arises as a result of your past Karma
It can’t be cured unless you fully experience it
The mind within is a blazing volcano – Marula Muniya (418)
(Translation from "Thus Sang Marula Muniya" by Sri. Narasimha Bhat)

Tuesday, May 7, 2013

ಭಕ್ಷಣವನಿತ್ತಂದು ತಂದೆ ನಿನಗಾದವನು (417)

ಭಕ್ಷಣವನಿತ್ತಂದು ತಂದೆ ನಿನಗಾದವನು |
ಶಿಕ್ಷಣಕೆ ಕೋಲ್ಪಿಡಿಯೆ ಶತ್ರುವಾದಾನೇ? ||
ಅಕ್ಷಿಗೆಟುಕದ ಶಕ್ತಿಯೊಂದೆತ್ತಣಿನೊ ನಿನ್ನ |
ವೀಕ್ಷಿಸುತ ನಡೆಸುವುದೊ - ಮರುಳ ಮುನಿಯ || (೪೧೭)

(ಭಕ್ಷಣವನ್+ಇತ್ತಂದು)(ನಿನಗೆ+ಆದವನು)(ಕೋಲ್+ಪಿಡಿಯೆ)(ಶತ್ರು+ಆದಾನೇ)(ಅಕ್ಷಿಗೆ+ಎಟುಕದ)(ಶಕ್ತಿ+ಒಂದು+ಎತ್ತಣಿನೊ)

ನಿನಗೆ ಆಹಾರ ಇತ್ತು ಪೋಷಿಸಿದ ತಂದೆ, ನಿನಗೆ ವಿದ್ಯೆ ಬುದ್ಧಿಗಳನ್ನು ಕಲಿಸಲು ಕೋಲನ್ನು ಹಿಡಿದಾಗ ಅವನು ನಿನ್ನ ವೈರಿಯಾಗುವನೇನು? ಅವನು ಆವಾಗಲೂ ನಿನ್ನ ಒಳಿತನ್ನು ಬಯಸುವ ತಂದೆಯೇ ಹೌದು. ಹೀಗೆಯೇ ನಿನ್ನ ಜೀವನದಲ್ಲೂ ಸಹ ನಿನ್ನ ಕಣ್ಣಿಗೆ ನಿಲುಕದಂತಹ ಒಂದು ಶಕ್ತಿ ಎಲ್ಲಿಂದಲೋ ಬಂದು ನಿನ್ನನ್ನು ಪರಿಶೀಲಿಸುತ್ತ, ನಿನ್ನ ಕೈ ಹಿಡಿದು ನಡೆಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He fed you and you loved him as your father
Will he become your foe if he canes you while training?
A power that is beyond you field of vision
Watches you from somewhere and guides you – Marula Muniya (417)
(Translation from "Thus Sang Marula Muniya" by Sri. Narasimha Bhat)

Monday, May 6, 2013

ಬದುಕು ಬದುಕೇ ಬದುಕಿನೆಂದು ಬಿಡುಗಡೆ ನಿನಗೆ (416)

ಬದುಕು ಬದುಕೇ ಬದುಕಿನೆಂದು ಬಿಡುಗಡೆ ನಿನಗೆ |
ಬದುಕೆಲ್ಲರಂತೆ ಎಲ್ಲದರಲಿ ಕಲೆತು ||
ಎದುರಿಸು ವಿಧಿ ಗೈವ ಶಿಕ್ಷೆ-ಪರೀಕ್ಷೆಗಳಲಿ ನೀಂ |
ಸುಧೆ ತಳದಲಿಹುದೆಲವೊ - ಮರುಳ ಮುನಿಯ || (೪೧೬)

(ಬದುಕಿಂ+ಎಂದು)(ಬದುಕು+ಎಲ್ಲರಂತೆ)(ತಳದಲಿ+ಇಹುದು+ಎಲವೊ)

ನೀನು ಜೀವನವನ್ನು ನಡೆಸಲೇಬೇಕು, ಬೇರೆ ಗತ್ಯಂತರವಿಲ್ಲ. ಆದರೆ ಈ ಜೀವನದಿಂದ ನಿನಗೆ ಎಂದು ಮುಕ್ತಿ ಸಿಗುತ್ತದೆ ಎನ್ನುವುದರ ಬಗ್ಗೆ ಯೋಚಿಸು. ಬದುಕಿರುವುದಷ್ಟು ಸಮಯ ಜಗತ್ತಿನಲ್ಲಿರುವ ಬೇರೆ ಎಲ್ಲರ ತರಹ, ಎಲ್ಲದರಲ್ಲಿಯೂ ಸಮರಸಗೊಂಡು ಜೀವಿತವನ್ನು ನಡೆಸು. ವಿಧಿಯು ಕೊಡುವ ಶಿಕ್ಷೆ ಮತ್ತು ಪರೀಕ್ಷೆಗಳನ್ನು ನೀನು ಧೈರ್ಯದಿಂದ ಎದುರಿಸು. ಆವಾಗ ಅಮೃತವು (ಸುಧೆ)ವು ತಳದಲ್ಲಿ ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Life, life, oh life! When can you ever free yourself!
Live like all, rubbing shoulders with others
Squarely brave the punishments and ordeals that Fate makes you suffer
Remember that ambrosia lies at the bottom – Marula Muniya (416)
(Translation from "Thus Sang Marula Muniya" by Sri. Narasimha Bhat)

Friday, May 3, 2013

ವಸ್ತುಗ್ರಹಣವೈದು ಬೆರಲ್ಗಳಸಮತೆಯಿಂದ (415)

ವಸ್ತುಗ್ರಹಣವೈದು ಬೆರಲ್ಗಳಸಮತೆಯಿಂದ |
ಸ್ವಸ್ತಿಯ ಸಮಾಜಕ್ಕೆ ವಿವಿಧಕರಣಂಗಳ್ ||
ಒಟ್ಟಿನೊಳ್ಳಿತ ಮಾಡೆ ಶಕ್ತಿ ಗುಣಭೇದಗಳು |
ಯುಕ್ತವಹ ತತ್ತ್ವವದು - ಮರುಳ ಮುನಿಯ || (೪೧೫)

(ವಸ್ತುಗ್ರಹಣ+ಐದು)(ಬೆರಲ್ಗಳ+ಅಸಮತೆಯಿಂದ)(ಒಟ್ಟಿನೊಳ್+ಒಳ್ಳಿತ)(ಯುಕ್ತ+ಅಹ)(ತತ್ತ್ವ+ಅದು)

ನಮ್ಮ ಕೈಗಳಲ್ಲಿರುವ ಐದೈದು ಬೆರಳುಗಳ ಅಸಮಾನತೆಯಿಂದ (ಅಸಮತೆ) ನಾವು ಒಂದು ವಸ್ತುವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ವಿಧವಿಧವಾದ ಕೆಲಸ ಮಾಡಲು ಬೇಕಾಗುವ ಸಾಧನಗಳು ಸಮಾಜದ ಕ್ಷೇಮ(ಸ್ವಸ್ತಿ)ಕ್ಕಾಗಿ ಇವೆ. ಎಲ್ಲರಿಗೂ ಒಳ್ಳೆಯದನ್ನು ಮಾದಲು ಈ ಬಲ ಮತ್ತು ಸ್ವಭಾವಗಳ ವ್ಯತ್ಯಾಸಗಳು ಸೃಷ್ಟಿಯಲ್ಲಿ ಇಡಲ್ಪಟ್ಟಿವೆ. ಇವು ಯೋಗ್ಯ(ಯುಕ್ತ)ವಾಗಿರುವ ಸಿದ್ಧಾಂತಗಳು ಎನಿಸಿವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Uneven size of fingers enables a person to grip things well
Different men, materials and tools for the overall good of society
Differences in qualities and abilities also facilities the welfare of the community
It is certainly a desirable phenomenon – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 2, 2013

ಗುಣಶಕ್ತಿಗಳ ಸೃಷ್ಟಿಯನುವಂಶ ಪ್ರತ್ಯೇಕ (414)

ಗುಣಶಕ್ತಿಗಳ ಸೃಷ್ಟಿಯನುವಂಶ ಪ್ರತ್ಯೇಕ |
ಜನ ಜನದೊಳಿರಿಸಿರ್ಪಳನ್ಯೋನ್ಯಮವರು ||
ವಿನಿಮಯ ನ್ಯಾಯದಿಂ ಕೊರತೆಯಂ ತುಂಬುತ್ತ |
ಅನುವಹುದು ಕಲಿಯಲ್ಕೆ - ಮರುಳ ಮುನಿಯ || (೪೧೪)

(ಸೃಷ್ಟಿ+ಅನುವಂಶ)(ಜನದೊಳ್+ಇರಿಸಿರ್ಪಳ್+ಅನ್ಯೋನ್ಯಂ+ಅವರು)(ಅನು+ಅಹುದು)

ಸ್ವಭಾವ ಮತ್ತು ಬಲಾಬಲಗಳು ಅನುವಂಶಿಕೆಯಿಂದ ಬರುವಂತೆ ಸೃಷ್ಟಿಯು ಬೇರೆ ಬೇರೆ ಜನಗಳಲ್ಲಿ ಇರಿಸಿದೆ. ಪರಸ್ಪರ ಸ್ನೇಹ, ಪ್ರೀತಿ ಮತ್ತು ಕೊಟ್ಟು, ಕೊಳ್ಳುವ(ವಿನಿಮಯ) ನೀತಿಗಳಿಂದ ಕೊರತೆಗಳನ್ನು ಹೋಗಲಾಡಿಸಿಕೊಂಡರೆ ಕಲಿಯಲು ಸರಿಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Qualities, abilities and heredity gifted by Nature
Differ from man to man and therefore
They should mutually exchange, complement and make good the deficiency
And be prepared to learn from one another – Marula Muniya
(Translation from "Thus Sang Marula Muniya" by Sri. Narasimha Bhat)