Friday, March 28, 2014

ಒಳಿತನವನೆಸಗದವನು ಬೆಳಕನಿವನರಿಯದನು (597)

ಒಳಿತನವನೆಸಗದವನು ಬೆಳಕನಿವನರಿಯದನು |
ತಿಳಿದವನು ನಾನೆಂಬ ನಚ್ಚು ನಿನಗೇಕೆ? ||
ಸೆಳೆವುದಾರನದಾವ ಕಾರಣವದೆತ್ತಲಿಗೆ |
ತುಳಿ ನಿನ್ನ ಪಥವ ನೀಂ - ಮರುಳ ಮುನಿಯ || (೫೯೭)

(ಒಳಿತನ್+ಅವನು+ಎಸಗದವನು)(ಬೆಳಕನ್+ಇವನ್+ಅರಿಯದನು)(ನಾನ್+ಎಂಬ)(ನಿನಗೆ+ಏಕೆ)(ಸೆಳೆವುದು+ಆರನ್+ಅದು+ಆವ)(ಕಾರಣವು+ಅದು+ಎತ್ತಲಿಗೆ)

ಒಳ್ಳೆಯ ಕೆಲಸಗಳನ್ನು ಮಾಡದವನು ಮತ್ತು ಇತರರ ಜೀವನಕ್ಕೆ ಬೆಳಕನ್ನು ನೀಡಲು ತಿಳಿಯದವನಾದ ನಿನಗೆ ನಾನೇ ಹೆಚ್ಚು ತಿಳಿದವನೆಂಬ ನಂಬಿಕೆ(ನಚ್ಚು) ಹೇಗೆ ಬಂತು? ಯಾರನ್ನು ಯಾವ ಉದ್ದೇಶಕ್ಕಾಗಿ ಅದು ಎಲ್ಲಿಗೆ ಎಳೆದುಕೊಂಡು ಹೋಗುತ್ತದೆನ್ನುವುದು ನಮಗೆ ಗೊತ್ತಿಲ್ಲ. ಆದುದ್ದರಿಂದ ನೀನು ನಿನ್ನ ಮಟ್ಟಿಗೆ ನಿನ್ನ ದಾರಿಯಲ್ಲಿ ಸಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“That person has done nothing good, this person known not what light is
But I alone am wise and learned”, why this foolish utterance?
Who knows why something attracts someone in some direction?
Mind you business and walk on your path – Marula Muniya
(Translation from "Thus Sang Marula Muniya" by Sri. Narasimha Bhat)

Thursday, March 27, 2014

ದುಡಿ ಲೋಕದಲಿ ಮರುಳೆ ದುಡಿದೊಡಲ ಸವೆಯಿಸೈ (596)

ದುಡಿ ಲೋಕದಲಿ ಮರುಳೆ ದುಡಿದೊಡಲ ಸವೆಯಿಸೈ |
ಒಡಲು ಸವೆದಂತೆ ಮನದಲಗು ಸವೆಯುವುದು ||
ಸಡಗರವು ಕುಗ್ಗುತಿರೆ ಬುದ್ಧಿ ಕಳೆಯೇರುವುದು |
ಬೆಡಗುವಡೆಯುವುದಾತ್ಮ - ಮರುಳ ಮುನಿಯ || (೫೯೬)

(ದುಡಿದು+ಒಡಲ)(ಮನದ+ಅಲಗು)(ಬೆಡಗುವಡೆಯುವುದು+ಆತ್ಮ)

ಓ ದಡ್ಡ! ಪ್ರಪಂಚದಲ್ಲಿ ಸದಾ ಕಾಯಕ ಮಾಡು. ಕಾಯಕದಿಂದ ನಿನ್ನ ದೇಹ(ಒಡಲ)ವನ್ನು ಸವೆಯಿಸು. ದೇಹವು ಕ್ಷೀಣಿಸುತ್ತಾ ಹೋದಂತೆ ಮನಸ್ಸೆಂಬ ಕತ್ತಿಯ ಹರಿತವೂ ಸಹ ಸವೆಯುತ್ತದೆ. ಉತ್ಸಾಹ ಮತ್ತು ಸಂಭ್ರಮಗಳು ಕಡಿಮೆಯಾಗುತ್ತಿದ್ದಂತೆ ಬುದ್ಧಿಯ ಕಾಂತಿಯು ಏರುತ್ತದೆ. ಆಗ ಆತ್ಮವು ಅಂದ ಮತ್ತು ಸೊಗಸಿನಿಂದ ಕಾಣಿಸಿಕೊಳ್ಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Work hard in the world oh fool and wear our your body,
As the body wears out the blade of mind also wears out,
As outward pomp diminishes, wisdom gains greater brilliance
And self attains greater grace – Marula Muniya
(Translation from "Thus Sang Marula Muniya" by Sri. Narasimha Bhat)

Wednesday, March 26, 2014

ಕರ್ತವ್ಯದ ಕ್ಷೇತ್ರ ಪರಿಮಿತಿಯ ಗುರುತಿಸಿಕೊ (595)

ಕರ್ತವ್ಯದ ಕ್ಷೇತ್ರ ಪರಿಮಿತಿಯ ಗುರುತಿಸಿಕೊ |
ಶಕ್ತಿ ನಿನಗಹುದು ಮಿತ ಕೈಯುಡುಗಿ ಸೋಲ್ವೆ ||
ಸ್ಮರ್ತವ್ಯದ ಕ್ಷೇತ್ರಸೀಮೆಗಳ ವಿಸ್ತರಿಸು |
ಸ್ವಾರ್ಥದಿಂ ಪರಮಾರ್ಥ - ಮರುಳ ಮುನಿಯ || (೫೯೫)

(ನಿನಗೆ+ಅಹುದು)(ಕೈ+ಉಡುಗಿ)

ನಿನ್ನ ಪಾಲಿನ ಹೊಣೆಯನ್ನು ನಿರ್ವಹಿಸುವ ಬಗ್ಗೆ ನಿನ್ನ ಇತಿಮಿತಿಗಳನ್ನು ಗೊತ್ತುಮಾಡಿಕೊ. ನಿನಗಿರುವ ಶಕ್ತಿಯು ಮಿತವಾದದ್ದು. ಅದನ್ನು ಮೀರಿದರೆ ನಿನ್ನ ಕೈಗಳು ಶಕ್ತಿಗುಂದಿ ನೀನು ಸೋತುಹೋಗುವೆ. ಆಚರಣೆಯ ಕಾರ್ಯಕ್ಷೇತ್ರಗಳನ್ನು ವಿಸ್ತಾರ ಮಾಡು. ಈ ರೀತಿಯಾಗಿ ನಿನಗೆ ಹಿತವಾದುದನ್ನು ಎಸಗುವುದರಲ್ಲಿ ಪರಮಾರ್ಥವನ್ನು ಗಳಿಸುವ ಕಾರ್ಯವೂ ಆಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Delimit the area and borders of the field of your duties
Limited is your strength and therefore your hands may become tired
But expand the area of wisdom and remembrance
Selfishness should grow as unselfish spirituality – Marula Muniya
(Translation from "Thus Sang Marula Muniya" by Sri. Narasimha Bhat)

Tuesday, March 25, 2014

ಧರ್ಮವನು ಜಾನಕೀರಾಮಚರಿತೆಯೊಳಮಧಿ (594)

ಧರ್ಮವನು ಜಾನಕೀರಾಮಚರಿತೆಯೊಳಮಧಿ |
ಧರ್ಮವನು ಕೃಷ್ಣ ಚರಿತಂಗಳೊಳಮರಿತು ||
ಕರ್ಮಿಯಾಗಿರುತ ನಿಷ್ಕರ್ಮಶಾಂತಿಯ ಪಡೆವ |
ಮರ್ಮವನು ಕಲಿಯೆಲವೊ - ಮರುಳ ಮುನಿಯ || (೫೯೪)

(ಜಾನಕೀರಾಮಚರಿತೆಯೊಳಂ+ಅಧಿಧರ್ಮವನು)(ಚರಿತಂಗಳೊಳಂ+ಅರಿತು)(ಕರ್ಮಿ+ಆಗಿ+ಇರುತ)

ನೀನು ನಿನ್ನ ದಿನನಿತ್ಯದ ಜೀವನದಲ್ಲಿ ಪಾಲಿಸಬೇಕಾಗಿರುವ ಧರ್ಮವನ್ನು, ಶ್ರೀರಾಮಚಂದ್ರನ ಇತಿಹಾಸ ಮತ್ತು ನಡವಳಿಕೆಗಳಿಂದಲೂ, ಲೋಕಾತೀತವಾದ ಧರ್ಮ(ಅಧಿಧರ್ಮ)ದ ಪಾಲಿಸುವಿಕೆಯನ್ನು ಶ್ರೀ ಕೃಷ್ಣನ ನಡವಳಿಕೆ ಮತ್ತು ಇತಿಹಾಸದಿಂದಲೂ, ತಿಳಿದುಕೊಂಡು ಕೆಲಸಗಳನ್ನು ಮಾಡಿಯೂ, ಪಾಪರಹಿತ(ನಿಷ್ಕರ್ಮ)ವಾದ ನೆಮ್ಮದಿಯನ್ನು ಹೊಂದುವ ರಹಸ್ಯ(ಮರ್ಮ)ವನ್ನು ಕಲಿತುಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Learn dharma from the life story of Janakirama
Learn Adhidharma from the life story of Shri Krishna
And learn the vital principle of enjoying the peace of inaction
While performing all duties – Marula Muniya
(Translation from "Thus Sang Marula Muniya" by Sri. Narasimha Bhat)

Monday, March 24, 2014

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ (593)

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ |
ಸಂಧಾನಗಳನೆಲ್ಲ ಮೀರ‍್ದುದಾ ಲೀಲೆ ||
ಅಂದಂದಿಗಂದಂದು ಬಂದಿಹುದು ಕರ್ತವ್ಯ |
ಸಂದುದನು ನಿರ್ವಹಿಸು - ಮರುಳ ಮುನಿಯ || (೫೯೩)

(ಅಂದಿನ+ಅಂದ್+ಅಂದಿಗೆ+ಅದು)(ಸಂಧಾನಗಳನ್+ಎಲ್ಲ)(ಮೀರ‍್ದುದು+ಆ)(ಅಂದಂದಿಗೆ+ಅಂದಂದು)(ಬಂದು+ಇಹುದು)

ಅವತ್ತಾವತ್ತಿಗೆ ಮುಂದೆ ಹೋಗುತ್ತಿರುವ ಈ ಜಗತ್ತಿನ ವಿದ್ಯಮಾನಗಳೆಂಬ ಆಟ. ಹೊಂದಾಣಿಕೆಗಳೆಲ್ಲವನ್ನೂ ದಾಟಿ ಹೋಗುತ್ತಿರುವ ಆಟವಿದು. ಅವತ್ತಾವತ್ತಿಗೆ ನೀನು ಮಾಡಬೇಕಾದ ಕೆಲಸ ಕಾರ್ಯಗಳು ನಿನ್ನ ಪಾಲಿಗೆ ಬರುತ್ತವೆ. ಹಾಗೆ ನಿನ್ನ ಪಾಲಿಗೆ ಬಂದಿರುವುದನ್ನು ನಿರ್ಯೋಚನೆಯಿಂದ ಗೊಣಗದೆ ನಿಭಾಯಿಸು (ನಿರ್ವಹಿಸು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Doing a day’s duty on that day itself if the play of progress
The play has no shortcuts or compromises
On each day the day’s duty would present itself
Discharge the duty that falls to your lot – Marula Muniya
(Translation from "Thus Sang Marula Muniya" by Sri. Narasimha Bhat)

Thursday, March 20, 2014

ಬೆಟ್ಟತಿಟ್ಟುಗಳಿಂದೆ ವಾಯುರಭಸಕೆ ತಡೆಯೆ? (592)

ಬೆಟ್ಟತಿಟ್ಟುಗಳಿಂದೆ ವಾಯುರಭಸಕೆ ತಡೆಯೆ? |
ತಿಟ್ಟುತಗ್ಗುಗಳಿಂದೆ ಹೊಳೆ (ಹರಿಯದಿಹುದೆ)? ||
ರಟ್ಟೆಬೆಟ್ಟುಗಳು ಬಾಗದೆ (ನೆಟ್ಟಗಿರಬಹುದೆ)? |
ಸೊಟ್ಟಿಗುಂ ಬೆಲೆಯುಂಟು - ಮರುಳ ಮುನಿಯ || (೫೯೨)

(ಹರಿಯದೆ+ಇಹುದೆ)(ನೆಟ್ಟಗೆ+ಇರಬಹುದೆ)(ಬೆಲೆ+ಉಂಟು)

ಬೆಟ್ಟ ಮತ್ತು ದಿಣ್ಣೆಗಳು ಗಾಳಿಯು ಬೀಸುವ ರಭಸವನ್ನು ತಡೆಯಲಾದೀತೇನು? ದಿಣ್ಣೆ ಮತ್ತು ತಗ್ಗುಗಳಿದ್ದರೂ ಸಹ ಹೊಳೆಯು ಹರಿಯದೆ ಇರುವುದೇನು? ಮನುಷ್ಯನ ದೇಹಕ್ಕಂಟಿಕೊಂಡಿರುವ ರಟ್ಟೆ ಮತ್ತು ಬೆರಳುಗಳು ಬಾಗದೆ ನೆಟ್ಟಗೇ ಇರಲು ಸಾಧ್ಯವೇನು? ಪ್ರಪಂಚದಲ್ಲಿ ಸೊಟ್ಟದಾಗಿರುವುದಕ್ಕೂ ಸಹ ಬೆಲೆ ಇದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can hills and highland prevent the rushing wind?
Don’t rivers flow even though there are high and low grounds?
Can hills and shoulders be straight with no bends?
Even crooked shape has its own value – Marula Muniya (592)
(Translation from "Thus Sang Marula Muniya" by Sri. Narasimha Bhat)

Wednesday, March 19, 2014

ಮಾರನಿಳೆಯೊಳ್ ಸುರಾವಾಟಿಕೆಯನಿರಿಸದಿರೆ (591)

ಮಾರನಿಳೆಯೊಳ್ ಸುರಾವಾಟಿಕೆಯನಿರಿಸದಿರೆ |
ಗಾರುಡಿಯನಾಡದಿರೆ ರುದ್ರಶಕ್ತಿಗಳು ||
ವೈರಿಂಚಿಕರ್ಮದಲಿ ಚಾತುರ್ಯವಿನ್ನೇನು |
ಹೋರಿಪ್ಪುದವನ ಕಲೆ - ಮರುಳ ಮುನಿಯ || (೫೯೧)

(ಮಾರನ್+ಇಳೆಯೊಳ್)(ಸುರಾವಾಟಿಕೆಯನ್+ಇರಿಸದಿರೆ)(ಗಾರುಡಿಯನ್+ಆಡದೆ+ಇರೆ)(ಚಾತುರ್ಯ+ಇನ್ನೇನು)(ಹೋರಿಪ್ಪುದು+ಅವನ)

ಮನ್ಮಥನು (ಮಾರ) ಭೂಮಿ(ಇಳೆ)ಯಲ್ಲಿ ಮತ್ತು ತರುವಂತಹ ಪದಾರ್ಥಗಳನ್ನು ಇರಿಸದಿದ್ದಲ್ಲಿ, ಶಿವನ ಭೀಕರ ಶಕ್ತಿಗಳು ತಮ್ಮ ಇಂದ್ರಜಾಲ (ಗಾರುಡಿ) ಶಕ್ತಿಗಳನ್ನು ತೋರಿಸದಿದ್ದಲ್ಲಿ, ಬ್ರಹ್ಮಸೃಷ್ಟಿಯ ಕಾರ್ಯದಲ್ಲಿ ಇನ್ಯಾವ ಚತುರತೆ ಇದ್ದೀತು? ಹೋರಾಟವಾಡಿಸುವುದೇ ಅವನ ಕಲೆಯಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If Cupid doesn’t set up liquor shops in the world,
If the terrible forces don’t indulge in their jugglery
What dexterity is there in the Creator’s world?
Making us fight is also His art – Marula Muniya (591)
(Translation from "Thus Sang Marula Muniya" by Sri. Narasimha Bhat)

Tuesday, March 18, 2014

ಕರ್ತನಂಶಾಂಶ ಸಂಯೋಜನೆಯ ಕಾಣ್ಬಂಗೆ (590)

ಕರ್ತನಂಶಾಂಶ ಸಂಯೋಜನೆಯ ಕಾಣ್ಬಂಗೆ -
ವ್ಯರ್ಥಲೇಶಮುಮಿರದು ಸೃಷ್ಟಿಕಾರ್ಯದಲಿ ||
ಕರ್ತವ್ಯವಿಲ್ಲೆನಗೆ ಬಾಳು ಪಾಳೆನ್ನದಿರು |
ಸಾರ್ಥಕ ಪರೋಕ್ಷವದು - ಮರುಳ ಮುನಿಯ || (೫೯೦)

(ಕರ್ತನ+ಅಂಶ+ಅಂಶ)(ವ್ಯರ್ಥಲೇಶಮುಂ+ಇರದು)(ಕರ್ತವ್ಯ+ಇಲ್ಲ+ಎನಗೆ)(ಬಾಳುಪಾಳ್+ಎನ್ನದೆ+ಇರು)

ಸೃಷ್ಟಿಕರ್ತನು ರಚಿಸಿದ ಒಂದೊಂದು ಭಾಗದ ಹೊಂದಾಣಿಕೆ(ಸಂಯೋಜನೆ)ಯ ಕ್ರಮವನ್ನು ಅರ್ಥ ಮಾಡಿಕೊಂಡವನಿಗೆ, ಸೃಷ್ಟಿಯು ಎಸಗಿರುವ ಕೆಲಸಗಳಲ್ಲಿ ನಿರುಪಯುಕ್ತವಾಗಿರುವುದು ಯಾವುದೂ ಕಾಣುವುದಿಲ್ಲ. ಆದ್ದರಿಂದ "ನಾನು ಮಾಡಬೇಕಾಗಿರುವ ಯಾವ ಕೆಲಸ, ಕಾರ್ಯಗಳೂ ಇಲ್ಲ, ಈ ಜೀವನವೆಲ್ಲವೂ ಹಾಳು, ಎಂದೆನ್ನಬೇಡ. ಪ್ರತಿಫಲವು ಅಗೋಚರವಾದುದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who can see how Creator has composed the different components
Cannot see any wasteful work in this creation
Say not this life is a waste and you have no duty to perform
This life is useful and its meaning in indirectly evident- Marula Muniya
(Translation from "Thus Sang Marula Muniya" by Sri. Narasimha Bhat)

Monday, March 17, 2014

ಧರ್ಮಸೂಚನೆಗಾಗುವನಿತು ನಿಯಮವನು ನಿಜ (589)

ಧರ್ಮಸೂಚನೆಗಾಗುವನಿತು ನಿಯಮವನು ನಿಜ |
ಮರ್ಮಿತೆಯ ಸೂಚಿಪ್ಪನಿತು ಯದೃಚ್ಛೆಯನು ||
ನಿರ್ಮರ್ತ್ಯಮರ್ತ್ಯಗಳನೊಡವೆರಸಿ ಪರಮೇಷ್ಠಿ |
ನಿರ್ಮಿಸಿಹನೀ ಜಗವ - ಮರುಳ ಮುನಿಯ || (೫೮೯)

(ಧರ್ಮಸೂಚನೆಗೆ+ಆಗುವ+ಅನಿತು)(ಸೂಚಿಪ್ಪ+ಅನಿತು)(ನಿರ್ಮರ್ತ್ಯ+ಮರ್ತ್ಯಗಳನ್+ಒಡವೆರಸಿ)(ನಿರ್ಮಿಸಿಹನ್+ಈ)

ಧರ್ಮವನ್ನು ತಿಳಿಯಪಡಿಸುವುದಕ್ಕೆ ಆಗುವಷ್ಟು ನಿಯಮಗಳನ್ನು, ತನ್ನ ರಹಸ್ಯಗಳನ್ನು ತಿಳಿಸಿಕೊಡುವ ಆಕಸ್ಮಿಕ ಮತ್ತು ಸ್ವಾತಂತ್ರ್ಯ(ಯದೃಚ್ಛೆ)ಗಳನ್ನು, ಅಮರತ್ವ ಮತ್ತು ಮೃತತ್ವಗಳ ಒಳಗಡೆ ಬೆರಸಿ, ಪರಬ್ರಹ್ಮನು ಈ ಜಗತ್ತನ್ನು ರಚಿಸಿದ್ದಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He has provided principles sufficient to remind us of righteousness,
He has granted us sufficient freedom to know His real intentions
God has mixed the mortal with the immortal
And has created this world – Marula Muniya
(Translation from "Thus Sang Marula Muniya" by Sri. Narasimha Bhat)

Friday, March 14, 2014

ವಿಶ್ವವೀಶ್ವರ ಕಾವ್ಯವವನಕಟವಿಕಟ ಕಥೆ (588)

ವಿಶ್ವವೀಶ್ವರ ಕಾವ್ಯವವನಕಟವಿಕಟ ಕಥೆ |
ಶಾಶ್ವತನಶಾಶ್ವತಾಕಾರ ಲೀಲೆ(ಯಿದು) ||
ಬೇಸರವ ಕಳೆಯಲ್ಕೆ ಹಸನವವಮಾಡಿಹನು |
ಅಸ್ವಾದ್ಯಮೆಲ್ಲರ‍್ಗೆ - ಮರುಳ ಮುನಿಯ || (೫೮೮)

(ವಿಶ್ವವು+ಈಶ್ವರ)(ಕಾವ್ಯ+ಅವನ+ಅಕಟ+ವಿಕಟ )(ಶಾಶ್ವತನ+ಅಶಾಶ್ವತ+ಆಕಾರ)(ಹಸನವ+ಅವಂ+ಮಾಡಿಹನು)(ಅಸ್ವಾದ್ಯಂ+ಎಲ್ಲರ‍್ಗೆ)

ಜಗತ್ತು ಪರಮಾತ್ಮನ ಕಾವ್ಯ ಮತ್ತು ಅವನ ಅಸಂಬದ್ಧತೆಯ ಕಥೆ. ಯಾವಾಗಲೂ ಇರುವವನ, ಶಾಶ್ವತವಾಗಿಲ್ಲದಿರುವ ರೂಪಗಳ ವಿನೋದವಾದ ಆಟ ಇದು. ಬೇಸರವನ್ನು ಹೋಗಲಾಡಿಸಲು ಅವನು ಒಳ್ಳೆಯದು ಮತ್ತು ಶ್ರೇಷ್ಠವಾದುದ್ದನ್ನು ಮಾಡಿದ್ದಾನೆ. ಇದರ ಸವಿ(ಅಸ್ವಾದ್ಯ) ಎಲ್ಲರಿಗೂ ದೊರೆಯುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The universe is God’s great poetical work, His sad grotesque tale
This is the evanescent play of the Eternal
He has played this joke to get rid of His boredom
All are free to enjoy it – Marula Muniya (588)
(Translation from "Thus Sang Marula Muniya" by Sri. Narasimha Bhat)

Thursday, March 13, 2014

ಮಿಂಚಿಂದೆ ಮಣ್ಕಣಕೆ ಕಣದೆ ಮಿಂಚಿಂದಾಚೆ (587)

ಮಿಂಚಿಂದೆ ಮಣ್ಕಣಕೆ ಕಣದೆ ಮಿಂಚಿಂದಾಚೆ |
ಸಂಚರಿಸುತಿಹುದೊಂದಲೌಕಿಕದ ತೇಜಂ ||
ಸಂಚಿಯೊಂದರೊಳೀ ಪ್ರಪಂಚವನ್ನಿಟ್ಟಿಹುದು |
ಸಂಚದರದೆಲ್ಲವಿದು - ಮರುಳ ಮುನಿಯ || (೫೮೭)

(ಮಿಂಚು+ಇಂದೆ)(ಮಣ್+ಕಣಕೆ)(ಮಿಂಚಿಂದ+ಆಚೆ)(ಸಂಚರಿಸುತ+ಇಹುದು+ಒಂದು+ಅಲೌಕಿಕದ)(ಸಂಚಿ+ಒಂದರ+ಒಳ್+ಈ)(ಪ್ರಪಂಚವಂ+ಇಟ್ಟಿ+ಇಹುದು)(ಸಂಚು+ಅದರದು+ಎಲ್ಲ+ಇದು)

ಒಂದು ಧೂಳಿನ ಕಣಕ್ಕೆ ಮಿಂಚಿನಿಂದ ಮತ್ತು ಧೂಳಿನ ಕಣದಿಂದ ಮಿಂಚಿನಿಂದ ಆಚೆಗೆ ಒಂದು ಅಲೌಕಿಕವಾದ ಪ್ರಭೆ(ತೇಜ)ಯು ಸಂಚರಿಸುತ್ತದೆ. ಒಂದು ಚೀಲ(ಸಂಚಿ)ದಲ್ಲಿ ಅದು ಈ ಪ್ರಪಂಚವನ್ನಿಟ್ಟಿದೆ. ಎಲ್ಲವೂ ಇದರ ಪಿತೂರಿ(ಸಂಚು)ಯೇ ಹೌದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A celestial light moves to and fro from lighting
To every particle of dust and from the earth to the realm beyond lightning
It preserves this universe in a bag
And all this is its plan – Marula Muniya
(Translation from "Thus Sang Marula Muniya" by Sri. Narasimha Bhat)

Wednesday, March 12, 2014

ಸೃಷ್ಟಿವ್ಯವಸ್ಥೆಯೊಳ್ ವ್ಯರ್ಥಮಾವುದುಮಿರದು (586)

ಸೃಷ್ಟಿವ್ಯವಸ್ಥೆಯೊಳ್ ವ್ಯರ್ಥಮಾವುದುಮಿರದು |
ಬೆಟ್ಟ ನದಿ ಮರುಭೂಮಿ (ಮಣ್) ಕಾಡು ಕಣಿವೆ ||
ವೃಷ್ಟಿಕಾರಕಗಳವು ವಾಯುಶೋಧಕಗಳವು |
ದಿಟ್ಟಿಸಾಳದಿ ನಿಜವ - ಮರುಳ ಮುನಿಯ || (೫೮೬)

(ವ್ಯರ್ಥಂ+ಆವುದುಂ+ಇರದು)(ವೃಷ್ಟಿಕಾರಕಗಳ್+ಅವು)(ಶೋಧಕಗಳ್+ಅವು)(ದಿಟ್ಟಿಸು+ಆಳದಿ)

ಸೃಷ್ಟಿಯ ವ್ಯವಸ್ಥೆಯಲ್ಲಿ ವ್ಯರ್ಥವಾಗಿರುವುದು ಯಾವುದೂ ಇರುವುದಿಲ್ಲ. ಬೆಟ್ಟ, ನದಿ ಮರುಭೂಮಿ, ಮಣ್ಣು, ಅರಣ್ಯ, ಕಣಿವೆ, ಇವುಗಳೆಲ್ಲವೂ ಮಳೆಯನ್ನು ಸುರಿಸಲು ಕಾರಣಗಳಾಗುತ್ತವೆ. ಮತ್ತು ಗಾಳಿಯನ್ನು ಶುದ್ಧಪಡಿಸುತ್ತವೆ. ಈ ಸತ್ಯಸಂಗತಿಯನ್ನು ಗಂಭೀರವಾಗಿ ಪರಿಗಣಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nothing is wasted in the working on creation
Hills, rivers, deserts, jungles and valleys
The cause rainfall and purify the air
Realize this underlying truth – Marula Muniya (586)
(Translation from "Thus Sang Marula Muniya" by Sri. Narasimha Bhat)

Tuesday, March 11, 2014

ಸೃಷ್ಟಿಕರ್ತನೆ ಕೃತಿಗೆ ಪುಷ್ಟಿಯಂ ನೀಡದೊಡೆ (585)

ಸೃಷ್ಟಿಕರ್ತನೆ ಕೃತಿಗೆ ಪುಷ್ಟಿಯಂ ನೀಡದೊಡೆ |
ನಷ್ಟ ತನಗೇ (ಎಂಬುದ)ಷ್ಟರಿಯದವನೆ ||
ತುಷ್ಟಿಗಳನದರಿಂದಲಷ್ಟಿಷ್ಟು ಕೊಟ್ಟು ಉ-|
ಚ್ಛಿಷ್ಟವನು ಬಿಟ್ಟಿಹನು - ಮರುಳ ಮುನಿಯ (೫೮೫)

(ಎಂಬುದು+ಅಷ್ಟು+ಅರಿಯದವನೆ)(ತುಷ್ಟಿಗಳನ್+ಅದರಿಂದಲ್+ಅಷ್ಟಿಷ್ಟು)

ಈ ಪ್ರಪಂಚವನ್ನು ಸೃಷ್ಟಿಸಿದ ಪರಮಾತ್ಮನೇ ತನ್ನ ಕೃತಿಗೆ ಪುಷ್ಟಿಯನ್ನು ಕೊಡದಿದ್ದಲ್ಲಿ, ಅದರಿಂದ ತನಗೇ ನಷ್ಟವೆನ್ನುವುದು ಅವನಿಗೆ ತಿಳಿಯದೇನು? ಆದ್ದರಿಂದ, ಸ್ವಲ್ಪಮಟ್ಟಿಗೆ ಆನಂದ ಮತ್ತು ತೃಪ್ತಿ(ತುಷ್ಟಿ)ಗಳನ್ನು ಕೊಟ್ಟು, ಉಳಿದುದನ್ನು (ಉಚ್ಛಿಷ್ಟ)ಬಿಟ್ಟಿದ್ದಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Doesn’t the creator know that it is a loss to Himself
If He doesn’t give sustenance to His own creation?
He has landed out happiness in small quantities
And has left the residue unused – Marula Muniya
(Translation from "Thus Sang Marula Muniya" by Sri. Narasimha Bhat)

Friday, March 7, 2014

ಸೃಷ್ಟಿವ್ಯವಸ್ಥೆಯೊಳ್ ವ್ಯರ್ಥಮಾವುದುಮಲ್ತು (584)

ಸೃಷ್ಟಿವ್ಯವಸ್ಥೆಯೊಳ್ ವ್ಯರ್ಥಮಾವುದುಮಲ್ತು |
ಬೆಟ್ಟ ನದಿ ಕಾಡು ಮರುಭೂಮಿ ಮಣ್ ಧೂಳು ||
ವೃಷ್ಟಿ ಹಿಮವಾತಂಗಳಾಗಿಪ್ಪುವೊಟ್ಟಿನಿಂ |
ಒಟ್ಟಿನಿಂ ನೋಡದನು - ಮರುಳ ಮುನಿಯ || (೫೮೪)

(ವ್ಯರ್ಥಂ+ಆವುದುಂ+ಅಲ್ತು)(ಹಿಮವಾತಂಗಳ್+ಆಗಿಪ್ಪುವ್+ಒಟ್ಟಿನಿಂ)

ಸೃಷ್ಟಿಯ ವ್ಯವಸ್ಥೆಯಲ್ಲಿ ವ್ಯರ್ಥವಾಗಿರುವುದು ಯಾವುದೂ ಇಲ್ಲ. ಬೆಟ್ಟ, ಹೊಳೆ, ಕಾಡು, ಮರುಭೂಮಿ, ಮಣ್ಣು, ಧೂಳು, ಮಳೆ(ವೃಷ್ಟಿ), ಹಿಮ, ಗಾಳಿ (ವಾತ), ಇವುಗಳು ಹುಟ್ಟಿನಿಂದ ಜೊತೆ ಜೊತೆಯಾಗಿ ಆಗಿವೆ. ನೀನು ಇವುಗಳನ್ನು ಸಮದೃಷ್ಟಿಯಿಂದ ನೋಡು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nothing is a waste in the arrangement of creation,
Mountains, rivers, forests, deserts, soil and dust
Together they cause rain and snowfall
As an integrated, coordinated entity – Marula Muniya
(Translation from "Thus Sang Marula Muniya" by Sri. Narasimha Bhat)

Wednesday, March 5, 2014

ಕೇಶಸಾಮ್ರಾಜ್ಯದಲಿ ಮೀಶೆಯೇ ದೊರೆಯಂತೆ (583)

ಕೇಶಸಾಮ್ರಾಜ್ಯದಲಿ ಮೀಶೆಯೇ ದೊರೆಯಂತೆ |
ಶಾಸನವದೇಂ? ಪಕ್ಷಪಾತ ಕೆಲರೊಳಗೆ ||
ಸ್ತ್ರೀ ಸಮೂಹಕ್ಕೆಲ್ಲ ಮೋಸವಾಯ್ತದರಿಂದೆ |
ಲೇಸಮಾಡುವುದೆಂತೊ - ಮರುಳ ಮುನಿಯ || (೫೮೩)

(ಶಾಸನ+ಅದು+ಏಂ)(ಮೋಸ+ಆಯ್ತು+ಅದರಿಂದೆ)(ಲೇಸಮಾಡುವುದು+ಎಂತೊ)

ಕೇವಲ ಕೂದಲುಗಳಿರುವ ಚಕ್ರಾಧಿಪತ್ಯದಲ್ಲಿ ರಾಜನ ಪಟ್ಟ ಮೀಸೆಗಂತೆ. ಕೆಲವರೊಳಗೆ ಪಕ್ಷಪಾತ ತೋರುವ ಇದೇ ಶಾಸನವೇನು? ಈ ರೀತಿಯ ಶಾಸನದಿಂದ ಪ್ರಪಂಚದಲ್ಲಿರುವ ಸ್ತ್ರೀ ಸಮುದಾಯಕ್ಕೆ ಮೋಸವಾಯಿತು. ಇದನ್ನು ಸರಿಪಡಿಸುವುದು ಹೇಗೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Moustache is said to be monarch of the hair-kingdom
Why such rule? Why such discrimination?
The entire women class is discriminated against and is cheated of
How to set right thing wrong? – Marula Muniya (583)
(Translation from "Thus Sang Marula Muniya" by Sri. Narasimha Bhat)

Tuesday, March 4, 2014

ಬೇರೆ ನಾಂ ಜಗದಿನೆಂಬಾ ಭೇದವಳಿದಿರಲು (582)

ಬೇರೆ ನಾಂ ಜಗದಿನೆಂಬಾ ಭೇದವಳಿದಿರಲು |
ವೈರಾಗ್ಯ ಸೌಭಾಗ್ಯ ಭೇದ ಕಳೆದಿರಲು ||
ಊರು ನಾಂ ಕಾಡುನಾನೆಂಬೆಣಿಕೆ ಸವೆದಿರಲು |
ಭಾರವೇನಾತಂಗೆ? - ಮರುಳ ಮುನಿಯ || (೫೮೨)

(ಜಗದಿನ್+ಎಂಬ+ಆ)(ಭೇದ+ಅಳಿದು+ಇರಲು)(ಕಳೆದು+ಇರಲು)(ಕಾಡುನಾನ್+ಎಂಬ+ಎಣಿಕೆ)(ಸವೆದು+ಇರಲು)(ಭಾರವು+ಏನ್+ಆತಂಗೆ)

ಈ ಜಗತ್ತಿನಿಂದ ನಾನು ಪ್ರತ್ಯೇಕವೆನ್ನುವ ಭೇದ ಭಾವನೆ ಇಲ್ಲದವನಿಗೆ, ವಿರಕ್ತತೆ(ವೈರಾಗ್ಯ) ಮತ್ತು ಸೌಭಾಗ್ಯವೆನ್ನುವ ವ್ಯತ್ಯಾಸವನ್ನು ಪರಿಗಣಿಸದೆ ಇರುವವನಿಗೆ ಮತ್ತು ನಾಡು, ಕಾಡುಗಳೆಂಬ ಬೇಧ ಭಾವವನ್ನು ದೂರ ಮಾಡಿದವನಿಗೆ, ಯಾವ ಭಾರವೂ ಇರುವುದಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the feeling that one is different from the world is obliterated,
When the sense of differences between renouncement and enjoyment is erased,
When the sense of difference between inhabited village and wilderness ceases
Nothing is burdensome to such a person – Marula Muniya
(Translation from "Thus Sang Marula Muniya" by Sri. Narasimha Bhat)

Monday, March 3, 2014

ಒಮ್ಮೊಯ್ಯೊಳಿಮ್ಮೊಗಂ ಗಂಡಭೇರುಂಡಕ್ಕೆ (581)

ಒಮ್ಮೊಯ್ಯೊಳಿಮ್ಮೊಗಂ ಗಂಡಭೇರುಂಡಕ್ಕೆ |
ಇಮ್ಮೊಗಮಖಂಡಪರಮಾದಿಸತ್ಯಕ್ಕೆ ||
ಬ್ರಹ್ಮಮೊಂದಿನ್ನೊಂದನಂತ ದ್ವೈತಸಮೂಹ |
ನಿರ್ಮೂರ್ತಮೂರ್ತಗಳು - ಮರುಳ ಮುನಿಯ || (೫೮೧)

(ಒಮ್ಮೊಯ್ಯೊಳ್+ಇಮ್ಮೊಗಂ)(ಇಮ್ಮೊಗಂ+ಅಖಂಡ+ಪರಮ+ಆದಿ+ಸತ್ಯಕ್ಕೆ)(ಬ್ರಹ್ಮಂ+ಒಂದು+ಇನ್ನೊಂದು+ಅನಂತ)

ಗಂಡಭೇರುಂಡ ಪಕ್ಷಿಗೆ ಒಂದೇ ದೇಹದಲ್ಲಿ ಎರಡು ಮುಖ(ಇಮ್ಮೊಗ)ಗಳಿವೆ. ಇದೇ ರೀತಿ ಪರಮಾತ್ಮನ ಅಖಂಡವಾದ ಮೂಲ ಸತ್ಯಕ್ಕೂ ಎರಡು ಮುಖಗಳಿವೆ. ಒಂದು ಪರಬ್ರಹ್ಮ ಇನ್ನೊಂದು ಅನಂತವಾಗಿರುವ ದ್ವೈತಗಳ ಗುಂಪು(ಸಮೂಹ). ಒಂದು ನಿರಾಕಾರ, ಇನ್ನೊಂದು ಸಾಕಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One body and two faces to gandabherdunda,
Two faces to the one Eternal Supreme, the Primordial Truth
One is Brahma, the other is the ocean of infinite dualities
Some are abstract, some are concrete – Marula Muniya
(Translation from "Thus Sang Marula Muniya" by Sri. Narasimha Bhat)