Friday, January 31, 2014

ನೆನೆನೆನೆದು ಮನಸಳಲಿ ಅಳುತಳುತ ನೆನಪಿರಲಿ (565)

ನೆನೆನೆನೆದು ಮನಸಳಲಿ ಅಳುತಳುತ ನೆನಪಿರಲಿ |
ಗುಣವನಂತಾನು ಮೊಳಕಿಳಿಯಿಸುಗೆ ನೇಹಂ ||
ಅನುಚಿಂತೆಗೆಡೆಯಾಗಿಸುವ ಮಿತ್ರಮೃತಿ ದುಃಖ |
ಮನಕೆ ಪರಿಪಾವಕವೊ - ಮರುಳ ಮುನಿಯ || (೫೬೫)

(ಮನಸು+ಅಳಲಿ)(ಗುಣವನ್+ಅಂತ+ಆನು)(ಮೊಳಕೆ+ಇಳಿಯಿಸುಗೆ)(ಅನುಚಿಂತೆಗೆ+ಎಡೆ+ಆಗಿಸುವ)

ಮಿತ್ರನ ಸಾವನ್ನು ಪುನಃ ಪುನಃ ಜ್ಞಾಪಿಸಿಕೊಂಡು ನಿನ್ನ ಮನಸ್ಸು ದುಃಖಿಸಲಿ. ಆದರೆ ದುಃಖಿಸುವಾಗ ಜ್ಞಾಪಕದಲ್ಲಿಟ್ಟುಕೋ. ಈ ರೀತಿಯ ಸ್ವಾಭಾವವನ್ನು ಅಂಕುರವಾಗುವಂತೆ ಮಾಡುವುದು ಸ್ನೇಹ (ನೇಹ). ಹೀಗೆ ಸದಾಕಾಲವೂ ದುಃಖ ಮತ್ತು ಕಳವಳಕ್ಕೆ ಅವಕಾಶವನ್ನುಂಟು ಮಾಡುವ ಸ್ನೇಹಿತನ ಸಾವಿನ ದುಃಖವು ಮನಸ್ಸನ್ನು ಪರಿಶುದ್ಧಗೊಳಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Let the mind weep while remembering and remember while weeping,
At least thus, let friendship force noble qualities into your being.
Sorrow caused by a friend’s death that makes you grieve
Is the fire that purifies your mind – Marula Muniya (565)
(Translation from "Thus Sang Marula Muniya" by Sri. Narasimha Bhat)

Thursday, January 30, 2014

ಸಾಕಾರದೇಣಿಯೊ ನಿರಾಕಾರ ಹರ್ಮ್ಯಕ್ಕೆ (564)

ಸಾಕಾರದೇಣಿಯೊ ನಿರಾಕಾರ ಹರ್ಮ್ಯಕ್ಕೆ |
ಲೋಕವೇಣಿಯೊ ಪರಬ್ರಹ್ಮದರ್ಶನಕೆ ||
ಬೇಕುಬೇಡಗಳ ನೀನೀತತ್ತ್ವದಿಂ ಗಣಿಸಿ |
ವ್ಯಾಕುಲತೆಯನು ನೀಗು - ಮರುಳ ಮುನಿಯ || (೫೬೪)

(ಸಾಕಾರದ+ಏಣಿಯೊ)(ಲೋಕ+ಏಣಿಯೊ)(ನೀನ್+ಈ+ತತ್ತ್ವದಿಂ)

ನಿರಾಕಾರವೆಂಬ ಉಪ್ಪರಿಗೆಯ ಸೌಧ(ಹರ್ಮ)ವನ್ನೇರುವುದಕ್ಕೆ ಸಾಧನವಾಗಿರುವುದು ಸಾಕಾರವೆಂಬ ಏಣಿ. ಪರಮಾತ್ಮನನ್ನು ಕಾಣಲು ಈ ಪ್ರಪಂಚವೇ ಏಣಿ. ನಿನಗೆ ಬೇಕಾಗಿರುವುದನ್ನು ಮತ್ತು ಬೇಡವಾಗಿರುವುದನ್ನು ಈ ಸಿದ್ಧಾಂತದಿಂದ ಗಣನೆಗೆ ತೆಗೆದುಕೊಂಡು ಕಷ್ಟ, ಚಿಂತೆ ಮತ್ತು ದುಃಖ(ವ್ಯಾಕುಲತೆ)ಗಳನ್ನು ಕಳೆದುಕೋ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Form is the ladder to reach the formless high floor
This world is the ladder to climb up and enjoy God Vision
Appraise the dos and don’ts in the world according to this principle
And get relieved of all worries – Marula Muniya (564)
(Translation from "Thus Sang Marula Muniya" by Sri. Narasimha Bhat)

Wednesday, January 29, 2014

ಚಳಿಯಿನದಿರದೆಯೆ ಬೇಸಗೆಯಿನುಮ್ಮಳಿಸದೆಯೆ (563)

ಚಳಿಯಿನದಿರದೆಯೆ ಬೇಸಗೆಯಿನುಮ್ಮಳಿಸದೆಯೆ |
ಮಳೆಯಿಂದ ತೊಯ್ಯದೆಯೆ ಧರೆ ಬಸುರಿಯಹಳೆ ? ||
ತೊಳಸುವಳು ಜೀವಿಪಿಷ್ಟವ ಮಡಕೆಯಲಿ ಸೃಷ್ಟಿ |
ತಳಮಳವೆ ಪರಿಪಾಕ - ಮರುಳ ಮುನಿಯ || (೫೬೩)

(ಚಳಿಯಿನ್+ಅದಿರದೆಯೊ)(ಬೇಸಗೆಯಿನ್+ಉಮ್ಮಳಿಸದೆಯೆ)(ಬಸುರಿ+ಅಹಳೆ)

ಚಳಿಯಿಂದ ನಡುಗದೆ, ಬೇಸಗೆಯ ಸೆಕೆಯಿಂದ ತಪಿಸದಯೇ (ಉಮ್ಮಳಿಸು), ಮಳೆಯ ನೀರಿನಿಂದ ಒದ್ದೆಯಾಗದೆಯೇ ಭೂಮಿತಾಯಿಯು ಫಲವತ್ತಾಗಲು ಸಾಧ್ಯವೇನು? ಇದೇ ರೀತಿಯಲ್ಲಿ ಜೀವಿಯೆಂಬ ಹಿಟ್ಟನ್ನು (ಪಿಷ್ಟ) ಸೃಷ್ಟಿಯು ಮಡಕೆಯಲ್ಲಿ ಹಾಕಿ ಚೆನ್ನಾಗಿ ತೊಳಸುತ್ತಾಳೆ. ತಲ್ಲಣವು (ತಳಮಳ) ಜೀವಿಯನ್ನು ಪರಿಪಕ್ವಗೊಳಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

How can the earth become pregnant with fertility without shivering in cold,
And sweating in summer and getting drenched in rain?
Nature pounds the life-dough in the mud pot,
Mental agitation brings maturity – Marula Muniya
(Translation from "Thus Sang Marula Muniya" by Sri. Narasimha Bhat)

Tuesday, January 28, 2014

ತನುರುಜೆಯ ವಿಷಕರಗಿ ಬಣ್ಣಬಣ್ಣದಿ ಪರಿಯೆ (562)

ತನುರುಜೆಯ ವಿಷಕರಗಿ ಬಣ್ಣಬಣ್ಣದಿ ಪರಿಯೆ |
ಗುಣವಪ್ಪುದೌಷಧಕೆ ಕಾಲವನುವಾಗೆ ||
ಮನದ ರುಜಿನವುಮಂತು ಕರಗಿ ಹೊರಹರಿಯದಿರೆ |
ತಣಿವೆಂತು ಜೀವಕ್ಕೆ - ಮರುಳ ಮುನಿಯ || (೯೬೨)

(ಗುಣ+ಅಪ್ಪುದು+ಔಷಧಕೆ)(ಕಾಲ+ಅನುವಾಗೆ)(ರುಜಿನವುಂ+ಅಂತು)(ಹೊರಹರಿಯದೆ+ಇರೆ)(ತಣಿವು+ಎಂತು)

ದೇಹಕ್ಕೆ ಬಂದಿರುವ ಕಾಯಿಲೆ(ರುಜೆ)ಯ ವಿಷವು ಕರಗಿ ಬಣ್ಣ ಬಣ್ಣಗಳಾಗಿ ಹರಿದು ಹೋದ ಬಳಿಕ, ಕಾಲದ ಅನುಕೂಲತೆ ಮತ್ತು ಔಷಧದ ಸೇವನೆಯಿಂದ ದೇಹವು ಚೇತರಿಸಿಕೊಳ್ಳುತ್ತದೆ. ಅದೇ ರೀತಿ ಮನಸ್ಸಿಗುಂಟಾಗಿರುವ ಕಾಯಿಲೆ(ರುಜಿನ)ಯೂ ಸಹ ಕರಗಿ ಹೊರಕ್ಕೆ ಹರಿದು ಹೋಗದಿದ್ದರೆ ಜೀವಕ್ಕೆ ತಂಪು ಮತ್ತು ತೃಪ್ತಿ ಹೇಗೆ ಸಿಗುತ್ತದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the toxin causing the disease flows out in many hues,
In due course of time medicines cure the patient.
Unless mental disease also flows out likewise
How can the soul enjoy peace? – Marula Muniya
(Translation from "Thus Sang Marula Muniya" by Sri. Narasimha Bhat)

Monday, January 27, 2014

ಲೋಕಾನುಭವವೊಂದು ಜೀವಸ್ವಸಂಸ್ಕಾರ (561)

ಲೋಕಾನುಭವವೊಂದು ಜೀವಸ್ವಸಂಸ್ಕಾರ |
ಬೇಕು ಬೇಡಗಳ ಹದಗೊಳಿಪ ಪರಿಷ್ಕಾರ ||
ಆಕುಲತೆ ಬಿಟ್ಟ ಚಿತ್ತಕೆ ಶಾಂತಿಯಾಧಾರ |
ಏಕಾತ್ಮವೈಹಾರ - ಮರುಳ ಮುನಿಯ || (೫೬೧)

ಲೋಕದ ಅನುಭವಗಳು ಜೀವಕ್ಕೆ ತನ್ನಿಂದ ತಾನೇ ಆಗುವ ತಿದ್ದುಪಾಡುಗಳು. ಅವು ಜೀವನದ ಬೇಕು ಮತ್ತು ಬೇಡಗಳನ್ನು ಪರಿಪಕ್ವಗೊಳಿಸಿ ಶುದ್ಧ ಮತ್ತು ಒಪ್ಪ ಮಾಡುತ್ತವೆ. ಕಳವಳ ಮತ್ತು ವ್ಯಥೆಗಳನ್ನು (ಆಕುಲತೆ) ತೊರೆದಿರುವ ಮನಸ್ಸಿಗೆ ಶಾಂತಿಯನ್ನು ನೀಡಲು ಕಾರಣವಾಗಿರುತ್ತದೆ. ಇದು ಒಂದೇ ಆತ್ಮದ ವಿಹಾರ(ವೈಹಾರ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Each experience in the world is a refinement to the soul
The likes and dislikes form the process of its purification
Peace is the foundation of the mind devoid of anxieties
It is a pleasure trip of the solitary self – Marula Muniya
(Translation from "Thus Sang Marula Muniya" by Sri. Narasimha Bhat)

Wednesday, January 22, 2014

ಕನ್ಯೆ ಪರನೊಡವೆ ತನದಲ್ಲವೆಂದರಿದಿದ್ದು (560)

ಕನ್ಯೆ ಪರನೊಡವೆ ತನದಲ್ಲವೆಂದರಿದಿದ್ದು |
ನನ್ನಿಯಿಂದವಳ ಪೋಷಿಪ ಜನಕನಂತೆ ||
ಮನ್ನಿಪುದು ಜಗವನೀಂ ನ್ಯಾಸವಸ್ತುವದೆಂದು |
ನಿನಗೇನುಮೆಳಸದೆಯೆ - ಮರುಳ ಮುನಿಯ || (೫೬೦)

(ತನದು+ಅಲ್ಲ+ಎಂದು+ಅರಿದಿದ್ದು)(ನನ್ನಿಯಿಂದ+ಅವಳ)(ಜಗವನ್+ಈಂ)(ನ್ಯಾಸವಸ್ತು+ಅದು+ಎಂದು)(ನಿನಗೇನುಂ+ಎಳಸದೆಯೆ)

ತನಗೆ ಹುಟ್ಟಿದ ಮಗಳು ತನ್ನ ವಸ್ತುವಲ್ಲ, ಅವಳು ಒಂದು ದಿನ ಮದುವೆಯಾಗಿ ಹೋಗುವ ಇತರರಿಗೆ ಸೇರುವ ಒಡವೆ ಎಂದು ತಿಳಿದಿದ್ದರೂ ಸಹ, ಪ್ರೀತಿ(ನನ್ನಿ)ಯಿಂದ ಅವಳನ್ನು ಕಾಪಾಡಿ ಬೆಳೆಸುವ ತಂದೆಯಂತೆ, ನೀನೂ ಸಹ ಈ ಪ್ರಪಂಚದ ವಸ್ತುಗಳಿಂದ, ಏನನ್ನೂ ಅಪೇಕ್ಷಿಸದೆ(ಎಳಸದೆ) ಈ ಜಗತ್ತು ಎಂಬುದು ನಿನ್ನಲ್ಲಿಟ್ಟ ಇಡುಗಂಟೆಂದು (ನ್ಯಾಸವಸ್ತು) ಭಾವಿಸಿ ಜೀವನವನ್ನು ನಡೆಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Knowing fully that his daughter will not remain his but will be somebody else’s soon,
A father brings up his daughter with all love and affection
You likewise should treat his world as a thing pledged
Without desiring it for yourself – Marula Muniya (560)
(Translation from "Thus Sang Marula Muniya" by Sri. Narasimha Bhat)

Tuesday, January 21, 2014

ಕೊಳದೊಳಲೆ ಬಳೆಯಾಗಿ ಸುಳಿಯಾಗಿ ಹರಹರಡಿ (559)

ಕೊಳದೊಳಲೆ ಬಳೆಯಾಗಿ ಸುಳಿಯಾಗಿ ಹರಹರಡಿ |
ವಲಯ ವಲಯಗಳಾಗಿ ದಡವ ಸೋಕುವವೋಲ್ ||
ಬಳೆಯಾಗಿ ನಿನ್ನ ಬಾಳ್ ವಲಯವಲಯಗಳಾಗಿ |
ಬಲುಬಾಳನೊಳಗೊಳ್ಗೆ - ಮರುಳ ಮುನಿಯ || (೫೫೯)

(ಕೊಳದೊಳ್+ಅಲೆ)(ಬಾಳನ್+ಒಳಗೊಳ್ಗೆ)

ಕೊಳದ ಅಲೆಗಳು ಬಳೆಯಾಕಾರವಾಗಿ ಮತ್ತು ಸುಳಿಯಾಗಿ ಕೊಳದ ತುಂಬ ಹರಡಿಕೊಂಡು, ವರ್ತುಲಾಕಾರಗಳಾಗಿ ಕೊಳದ ದಡವನ್ನು ಮುಟ್ಟುವಂತೆ, ನಿನ್ನ ಜೀವನವು ಸಹ ಬಳೆಯಾಗಿ, ವರ್ತುಲ ವರ್ತುಲಗಳಾಗಿ, ಒಂದು ವಿಶ್ವ ಜೀವನವನ್ನು ಒಳಗೂಡಿರಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A ripple in a lake spreads round and round and round
In bangle like circles and reaches the banks
Let your life expand likewise in bangle-like circles
And encompass many lives in its loving embrace – Marula Muniya
(Translation from "Thus Sang Marula Muniya" by Sri. Narasimha Bhat)

Monday, January 20, 2014

ಮುದಿತನದೊಳೆಳೆಯರೊಡನಾಡುತ್ತ ನಲಿವವನು (558)

ಮುದಿತನದೊಳೆಳೆಯರೊಡನಾಡುತ್ತ ನಲಿವವನು |
ಬದುಕಿನರ್ಥವನರಿತನ್ ಅದರ ಸವಿಯುಂಡವನ್ ||
ಸೊದೆಯ ಕಣವಡಗಿಹುದು ಜೀವದಾಳದೊಳೆಲ್ಲ |
ಅದರ ಸವಿ ಶಿಶುಲೀಲೆ - ಮರುಳ ಮುನಿಯ || (೫೫೮)

(ಮುದಿತನದೊಳು+ಎಳೆಯರೊಡನೆ+ಆಡುತ್ತ)(ಬದುಕಿನ+ಅರ್ಥವನ್+ಅರಿತನ್)(ಕಣ+ಅಡಗಿ+ಇಹುದು)(ಜೀವದ+ಆಳದೊಳ್+ಎಲ್ಲ)

ಜೀವನದ ಮುಸ್ಸಂಜೆಯಲ್ಲಿ ಚಿಕ್ಕ ಮಕ್ಕಳ ಜೊತೆ ಆಟಗಳನ್ನು ಆಡುತ್ತಾ ಸಂತೋಷದಿಂದಿರುವವನು ಬದುಕಿನ ಅರ್ಥವನ್ನು ತಿಳಿದುಕೊಂಡು ಬಾಳಿನ ರುಚಿಯನ್ನು ಸವಿಯುತ್ತಾನೆ. ಪ್ರತಿ ಜೀವಿಯ ಅಂತರಾಳದೊಳಗೆ ಅಮೃತ(ಸೊದೆ)ದ ಕಣವು ಬಚ್ಚಿಟ್ಟುಕೊಂಡಿದೆ. ಅದರ ರುಚಿ ನಮಗೆ ಚಿಕ್ಕ ಮಕ್ಕಳ ಆಟಪಾಟಗಳಲ್ಲಿ ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One who happily plays with children even in old age
Is the one who has understood and enjoyed the sweetness of life.
Drops of nectar are stored in the depth of souls
You can enjoy its sweetness in the play of children – Marula Muniya
(Translation from "Thus Sang Marula Muniya" by Sri. Narasimha Bhat)

Monday, January 13, 2014

ಭಯಕಷ್ಟಗಳಲಿ ಧೈರ್ಯಕದೊಂದು ದೈವಮತ (557)

ಭಯಕಷ್ಟಗಳಲಿ ಧೈರ್ಯಕದೊಂದು ದೈವಮತ |
ದಯಿತೆಯೊರ್ವಳು ಜಗದ ಭರದಿ ಪಾಲ್ಗೊಳಲು ||
ನಿಯತದೊಂದುದ್ಯೋಗ ಉದರ ಪೋಷಣೆಗೆ |
ತ್ರಯದಿಂದ ನೀಂ ಧನ್ಯ - ಮರುಳ ಮುನಿಯ || (557)

(ಧೈರ್ಯಕೆ+ಅದು+ಒಂದು)(ದಯಿತೆ+ಓರ್ವಳು)(ನಿಯತದ+ಒಂದು+ಉದ್ಯೋಗ)

ಜೀವನವನ್ನು ನಡೆಸುವಾಗ ಬರುವ ಹೆದರಿಕೆ ಮತ್ತು ತೊಂದರೆಗಳನ್ನು ಮನಸ್ಸು ಎದುರಿಸಲು, ದೈವದ ಒಂದು ನಂಬಿಕೆ. ಜಗತ್ತಿನ ಭಾರವನ್ನು ಹೊರುವುದರಲ್ಲಿ ಸಹಭಾಗಿಯಾಗಲು ಒಬ್ಬಳು ಪ್ರೀತಿಪಾತ್ರದವಳು (ದಯಿತೆ). ಹೊಟ್ಟೆ ತುಂಬಿಸಲು ನಿಶ್ಛಿತವಾಗಿರುವ ಒಂದು ಕೆಲಸ, ಈ ಮೂರೂ ಸೇರಿದರೆ ನೀನು ಅದೃಷ್ಟವಂತ ಮತ್ತು ಪುಣ್ಯವಂತನೆನ್ನಬಹುದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A religion to infuse courage in fear and difficulties,
A loving wife to share the stresses and strains of the world,
A regular job to enable you to feed the members of your family,
Fortunate you are with these three – Marula Muniya

(Translation from "Thus Sang Marula Muniya" by Sri. Narasimha Bhat)

Tuesday, January 7, 2014

ನಿರ್ಗುಣ ನಿರಾಕಾರ ಪರತತ್ತ್ವಗಿರಿ ಶಿಖರ (556)

ನಿರ್ಗುಣ ನಿರಾಕಾರ ಪರತತ್ತ್ವಗಿರಿ ಶಿಖರ |
ದುರ್ಗಮಮದೆನ್ನಿಸಿರೆ ಮನದ ದುರ್ಬಲದಿಂ ||
ಮಾರ್ಗವನು ನೀನರಸು ಸಗುಣ ಸಾಕಾರಂಗ- |
ಳೇರ‍್ಗಲ್ಲ ಮೆಟ್ಟಿಲಿಂ - ಮರುಳ ಮುನಿಯ || (೫೫೬)

(ದುರ್ಗಮಂ+ಅದು+ಎನ್ನಿಸಿ+ಇರೆ)(ನೀನ್+ಅರಸು)(ಸಾಕಾರಂಗಳ+ಏರ‍್ಗಲ್ಲ)

ಯಾವುದೇ ವಿಧವಾದ ರೂಪ ಮತ್ತು ಗುಣಗಳಿಲ್ಲದ ಪರ್ವತದ ತುತ್ತ ತುದಿ ಪರಮಾತ್ಮ. ನಿನ್ನ ಶಕ್ತಿಹೀನವಾದ ಮನಸ್ಸಿನಿಂದ, ಅದನ್ನೇರುವುದು ಕಷ್ಟ(ದುರ್ಗಮ)ವೆಂದೆನ್ನಿಸಿದರೆ, ಗುಣ ಮತ್ತು ರೂಪಗಳಿಂದೊಡಗೂಡಿದ ಏರುವ ಮೆಟ್ಟಿಲುಗಳಿಂದ ನೀನು ಅದನ್ನು ಹತ್ತುವ ದಾರಿಯನ್ನು ಹುಡುಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

If the feeble mind finds the attribute-less and formless
Mountain peak of Divine Truth quite unreachable
You should climb up through the stepping stones of
Attributes and forms to reach the summit – Marula Muniya (556)
(Translation from "Thus Sang Marula Muniya" by Sri. Narasimha Bhat)

Friday, January 3, 2014

ಬೆಂದ ಬೇಳೆಗೆ ಬೆರೆಸಿದುಪ್ಪಿನಿಂದಡುಗೆ ರುಚಿ (555)

ಬೆಂದ ಬೇಳೆಗೆ ಬೆರೆಸಿದುಪ್ಪಿನಿಂದಡುಗೆ ರುಚಿ |
ಮುಂದುಪ್ಪು ಬಳಿಕ ಬೇಳೆಯಿನಡುಗೆಯಹುದೆ? ||
ಮಂದಿಮನೆಗಳ ಸೆಕೆಗೆ ಮೆತುಗೊಳದೊರಟುಜೀವ - |
ಕಂದೀತೆ ವೇದಾಂತ - ಮರುಳ ಮುನಿಯ || (೫೫೫)

(ಬೆರೆಸಿದ+ಉಪ್ಪಿನಿಂದ+ಅಡುಗೆ)(ಮುಂದು+ಉಪ್ಪು)(ಬೇಳೆಯಿನ್+ಅಡುಗೆ+ಅಹುದೆ)(ಮೆತುಗೊಳದ+ಒರಟುಜೀವಕೆ+ಅಂದೀತೆ)

ಮಾಡಿರುವ ಅಡುಗೆ ರುಚಿ ಬರಬೇಕಾದರೆ, ಬೇಳೆ ಬೆಂದ ನಂತರ ಅದಕ್ಕೆ ಉಪ್ಪನ್ನು ಸೇರಿಸಬೇಕು. ಬೇಳೆ ಬೇಯುವುದಕ್ಕೆ ಮುಂಚೆಯೇ ಅದಕ್ಕೆ ಉಪ್ಪನ್ನು ಬೆರೆಸಿಟ್ಟರೆ, ಬೇಳೆ ಬೇಯುವುದಿಲ್ಲ. ಅಡುಗೆ ಆಗುವುದಿಲ್ಲ. ಇದೇ ರೀತಿ ತನ್ನ ಸುತ್ತಮುತ್ತಲಿನವರು ಪಡುತ್ತಿರುವ ಬೇಗೆಗೆ ಮೃದುವಾಗಿ ಸ್ಪಂದಿಸದಿರುವ ಒರಟು ಜೀವಕ್ಕೆ, ಬದುಕಿನ ಹದವನ್ನು ತಿಳಿಸುವ ವೇದಾಂತವನ್ನು ಎಟುಕಿಸಲು ಸಾಧ್ಯವೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The dish becomes tasty when you add salt to the well baked pulses
But will it taste well when you first put the salt and then add pulses?
Will the uncultured soul that mellows not in the heat of human misery
Readily agree to accept spirituality? – Marula Muniya
(Translation from "Thus Sang Marula Muniya" by Sri. Narasimha Bhat)