Thursday, September 27, 2012

ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ (287)

ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ |
ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ ||
ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ |
ಕಡಿಯೆಲ್ಲ ಪಾಶಗಳ - ಮರುಳ ಮುನಿಯ || (೨೮೭)

(ಜೀವವನ್+ಎಲ್ಲ)(ಮಮತೆಯನುಂ+ಎಲ್ಲ)(ಲೋಕಕ್ಕೆ+ಅದರ)

ಈ ಜಗತ್ತಿನ ಗೋಜು ಮತ್ತು ಗೊಂದಲಗಳಿಂದ ಜೀವವನ್ನು ವಿಮೋಚನೆ ಮಾಡು. ಸ್ವಾರ್ಥ, ಅಹಂಕಾರ ಮತ್ತು ಮಮತೆಗಳನ್ನು ಮತ್ತು ಪುಣ್ಯವನ್ನು ಸಂಪಾದಿಸಬೇಕೆಂಬ ಆಶೆಗಳನ್ನು ತ್ಯಜಿಸು. ಪ್ರಪಂಚದ ಕಡಿತಗಳಿಗೆ ಜಡನಾಗಿ ಕಷ್ಟಪಟ್ಟು ದುಡಿ. ಎಲ್ಲಾ ಬಂಧನ(ಪಾಶ)ಗಳನ್ನು ಕತ್ತರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Free your soul from all the tangles of the world,
Shed slowly all attachments, even the desire for punya,
Work for the welfare of the world but be immune to all its bites
And cut asunder all bonds – Marula Muniya
(Translation from "Thus Sang Marula Muniya" by Sri. Narasimha Bhat)

Wednesday, September 26, 2012

ಮಲರ ಕಂಪಂದಿನೆಲರಿನಲೆಗಳ ಪಿಡಿದು (286)

ಮಲರ ಕಂಪಂದಿನೆಲರಿನಲೆಗಳ ಪಿಡಿದು |
ಕಲೆತು ಕರಗುವುದಲ್ತೆ ಕಾಲ ಜಲಧಿಯಲಿ ||
ಒಳಿತು ಕೆಡಕುಗಳಂತು ನಿನ್ನ ಬಾಳರಲುಗಳು |
ಉಳಿಯುವುವನಂತದಲಿ - ಮರುಳ ಮುನಿಯ || (೨೮೬)

(ಕಂಪು+ಅಂದಿನ+ಎಲರಿನ+ಅಲೆಗಳ)(ಕರಗುವುದು+ಅಲ್ತೆ)(ಕೆಡಕುಗಳು+ಅಂತು)(ಬಾಳ್+ಅರಲುಗಳು)(ಉಳಿಯುವುವು+ಅನಂತದಲಿ)

ಹೂವಿನ (ಮಲರ್) ಸುಗಂಧ(ಕಂಪು)ವು ಆ ದಿನದ ಗಾಳಿ(ಎಲರ್)ಯ ಅಲೆಗಳನ್ನು ಹಿಡಿದು ಕಾಲವೆಂಬ ಸಮುದ್ರ(ಜಲಧಿ)ದಲ್ಲಿ ಸೇರಿಕೊಂಡು ಕರಗಿಹೋಗುವುದು ತಾನೆ? ಒಳ್ಳೆಯದು ಮತ್ತು ಕೆಟ್ಟದ್ದು ನಿನ್ನ ಜೀವನದ ಹೂವು(ಅಲರ್)ಗಳು. ಅವೂ ಸಹ ಅನಂತದಲ್ಲಿ ಲೀನವಾಗುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The fragrance of flowers sails on the waves of air,
Melts and mingles in the ocean of Eternity
Likewise the flowers of your life, your good and evil
Live forever in the Infinite – Marula Muniya (286)
(Translation from "Thus Sang Marula Muniya" by Sri. Narasimha Bhat)

Tuesday, September 25, 2012

ಅರುಣೋದಯದಾನಂದ ಗಿರಿಶೃಂಗದಾನಂದ (285)

ಅರುಣೋದಯದಾನಂದ ಗಿರಿಶೃಂಗದಾನಂದ |
ತೊರೆಯ ತೆರೆಯಾನಂದ ಹಸುರಿನಾನಂದ ||
ಮಲರು ತಳಿರಾನಂದವಿವು ಸೃಷ್ಟಿಯಾನಂದ |
ನಿರಹಂತೆಯಾನಂದ - ಮರುಳ ಮುನಿಯ || (೨೮೫)

(ಅರುಣೋದಯದ+ಆನಂದ)(ಗಿರಿಶೃಂಗದ+ಆನಂದ)(ತೆರೆಯ+ಆನಂದ)(ತಳಿರ+ಆನಂದವು+ಇವು) (ಸೃಷ್ಟಿಯ+ಆನಂದ)(ನಿರಹಂತೆಯ+ಆನಂದ)

ಸೂರ್ಯನು ಹುಟ್ಟುವುದನ್ನು ನೋಡುವಾಗ ಸಿಗುವ ಸಂತೋಷ. ಪರ್ವತದ ತುತ್ತ ತುದಿಯನ್ನು ವೀಕ್ಷಿಸುವಾಗ ದೊರೆಯುವ ಆನಂದ. ಹೊಳೆಯ ಅಲೆಗಳನ್ನು ಕಾಣುವಾಗ ದೊರೆಯುವ ಸುಖ, ಹಸುರಾಗಿರುವ ಪ್ರಕೃತಿಯ ಚೆಲುವನ್ನು ನೋಡಿದಾಗ ಸಿಗುವ ಆನಂದ. ಹೂವು (ಮಲರು) ಮತ್ತು ಚಿಗುರುಗಳು ಗಿಡದಲ್ಲಿ ಬಿಡುವುದನ್ನು ಕಂಡಾಗ ಬರುವ ಸಂತೋಷ. ಇವುಗಳೆಲ್ಲವೂ ಸೃಷ್ಟಿಯು ನಮಗಿತ್ತಿರುವ ಸಂತೋಷಗಳು. ಅಹಂಕಾರವಿಲ್ಲದಿರುವುದೂ ಆನಂದವನ್ನು ಕೊಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The joy of glowing dawn and the joy of mountain peak,
The joy of ripples in stream and the joy of green vegetation
The joy of flowers and springs are the joys, of nature
Egolessness is the joy of self – Marula Muniya (285)
(Translation from "Thus Sang Marula Muniya" by Sri. Narasimha Bhat)

Monday, September 24, 2012

ಹರಿಭಜನೆಯಾನಂದ ಕಿರಿಮಕ್ಕಳಾನಂದ (284)

ಹರಿಭಜನೆಯಾನಂದ ಕಿರಿಮಕ್ಕಳಾನಂದ |
ಸರಸಗೀತಾನಂದ ಕರುಣೆಯಾನಂದ ||
ಪರಕಾರ್ಯದಾನಂದ ನಿಃಸ್ವಾರ್ಥದಾನಂದ |
ಪುರುಷಹರುಷಂಗಳಿವು - ಮರುಳ ಮುನಿಯ || (೨೮೪)

(ಹರಿಭಜನೆ+ಆನಂದ)(ಕಿರಿಮಕ್ಕಳ+ಆನಂದ)(ಸರಸಗೀತ+ಆನಂದ)(ಕರುಣೆಯ+ಆನಂದ) (ಪರಕಾರ್ಯದ+ಆನಂದ)(ನಿಃಸ್ವಾರ್ಥದ+ಆನಂದ)(ಹರುಷಂಗಳು+ಇವು)

ಪರಮಾತ್ಮನನ್ನು ಭಜಿಸಲು ಸಂತೊಷದಿಂದ ಹಾಡುವುದು. ಚಿಕ್ಕಮಕ್ಕಳ ಜೊತೆ ಆಟಗಳನ್ನಾಡಿಕೊಂಡು ಸಂತೋಷದಿಂದಿರುವುದು. ಇಂಪಾದ ಸಂಗೀತವನ್ನು ಕೇಳಿ ಆನಂದಿಸುವುದು. ಇನ್ನೊಬ್ಬರಲ್ಲಿ ದಯೆ ತೋರಿಸಿ ಪಡುವ ಹಿಗ್ಗು. ಬೇರೆಯವರ ಕೆಲಸಗಳನ್ನು ನೆರೆವೇರಿಸಿ ಗಳಿಸುವ ಖುಶಿ. ಸ್ವಾರ್ಥವನ್ನು ತೊರೆದು ಮಾಡುವ ಕೆಲಸಗಳಿಂದ ಪಡೆಯುವ ಸುಖ, ಇವುಗಳೆಲ್ಲವೂ ಮನುಷ್ಯನಿಗೆ ನಿಜವಾಗಿಯೂ ಸಂತೊಷ ಕೊಡುವ ಕಾರ್ಯಗಳು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The joy of singing God’s praise and the joy in the company of small children,
The joy of sweet music and the joy of compassion,
The joy of serving others and the joy of unselfishness,
These are the joys of man – Marula Muniya (284)
(Translation from "Thus Sang Marula Muniya" by Sri. Narasimha Bhat)

Friday, September 21, 2012

ನಿನ್ನನಾರ್ ನಿಯಮಿಸಿದರನ್ನವಸ್ತ್ರದನೆಂದು (283)

ನಿನ್ನನಾರ್ ನಿಯಮಿಸಿದರನ್ನವಸ್ತ್ರದನೆಂದು |
ಶೂನ್ಯವಪ್ಪುದೆ ಲೋಕ ನಿನ್ನ ಹಂಗಿರದೆ ? ||
ಸ್ವರ್ಣಗರ್ಭನ ಪಟ್ಟವನು ಧರಿಸಿ ನೀಂ ಜಗಕೆ |
ಕನ್ನವಿಡೆ ಬಂದಿಹೆಯ? - ಮರುಳ ಮುನಿಯ || (೨೮೩)

(ನಿನ್ನನ್+ಆರ್)(ನಿಯಮಿಸಿದರ್+ಅನ್ನವಸ್ತ್ರದನ್+ಎಂದು)

ಯಾರದರೂ ನಿನ್ನನ್ನು ಈ ಜಗತ್ತಿಗೆ ಆಹಾರ ಮತ್ತು ಬಟ್ಟೆಗಳನ್ನು ನೀಡುವವನೆಂದು ನೇಮಕ ಮಾಡಿರುವರೇನು? ನಿನ್ನ ಹಂಗಿಲ್ಲದಿದ್ದರೆ ಜಗತ್ತು ಏನೂ ಇಲ್ಲದೆ ಹಾಳಾಗಿ ಹೋಗುವುದೇನು? ಬ್ರಹ್ಮ(ಸ್ವರ್ಣಗರ್ಭ)ನ ಪದವಿಯನ್ನು ಹೊತ್ತುಕೊಂಡು ಈಪ್ರಪಂಚಕ್ಕೆ ಕನ್ನ
ಹಾಕಲು ಬಂದಿರುವೆಯೇನು?
(ಕೃಪೆ: ಶ್ರೀ. ಶ್ರೀಕಾಂತ್ರಗವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who has appointed you as the giver of food and clothing?
Would the world become a zero but for your generosity?
Have you come to the world with the authority of Brahma
Only to burgle it? – Marula Muniya (283)
(Translation from "Thus Sang Marula Muniya" by Sri. Narasimha Bhat)

Monday, September 17, 2012

ನಿನ್ನ ಪಾಪವ ತೊಳೆಯೆ ನಿನ್ನ ಸತ್ಕರ್ಮಗಳು (282)

ನಿನ್ನ ಪಾಪವ ತೊಳೆಯೆ ನಿನ್ನ ಸತ್ಕರ್ಮಗಳು |
ಅನ್ಯರ‍್ಗದುಪಕಾರವೆನ್ನುವುದಹಂತೆ ||
ಪುಣ್ಯಂ ಕುಟುಂಬಪೋಷಣೆಯೆಂಬ ನೆವದಿನಿಳೆ- |
ಗನ್ಯಾಯವಾಗಿಪುದೆ? - ಮರುಳ ಮುನಿಯ || (೨೮೨)

(ಸತ್+ಕರ್ಮಗಳು)(ಅನ್ಯರ‍್ಗೆ+ಅದು+ಉಪಕಾರ+ಎನ್ನುವುದು+ಅಹಂತೆ)(ನೆವದಿನ್+ಇಳೆಗೆ+ಅನ್ಯಾಯವಾಗಿಪುದೆ)

ನೀನು ಮಾಡುವ ಒಳ್ಳೆಯ ಕೆಲಸಗಳು ನಿನ್ನ ಪಾಪವನ್ನು ತೊಳೆಯುತ್ತವೆ. ನೀನು ಮಾಡುವ ಸತ್ಕರ್ಮಗಳು ಇತರರಿಗೆ ಸಹಾಯವಾಗುತ್ತದೆ ಎನ್ನುವುದು ಅಹಂಕಾರದ ಮಾತಾಗುತ್ತದೆ. ಸಂಸಾರವನ್ನು ಪೋಷಿಸುವುದೂ ಒಂದು ಪುಣ್ಯದ ಕೆಲಸ ಎನ್ನುವ ನೆಪದಿಂದ ಜಗತ್ತಿಗೆ ಅನ್ಯಾಯವನ್ನು ಮಾಡಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Only the one who does all his duties in the world with the sole purpose of
Becoming egoless truly aspires after liberation,
All others orally shout, Dharma, Dharma and nourish the ego
Egolessness itself is salvation – Marula Muniya (282)
(Translation from "Thus Sang Marula Muniya" by Sri. Narasimha Bhat)

Friday, September 14, 2012

ನಿರ್ಮಮತೆಯಭ್ಯಾಸಕೆಂದು ಲೋಕದೊಳೆಲ್ಲ (281)

ನಿರ್ಮಮತೆಯಭ್ಯಾಸಕೆಂದು ಲೋಕದೊಳೆಲ್ಲ |
ಕರ್ಮಗಳ ಗೆಯ್ವನೆ ಮುಮುಕ್ಷು ಮಿಕ್ಕ ಜನ ||
ಧರ್ಮ ಧರ್ಮವೆನುತ್ತೆ ಪೋಷಿಪರಹಂಮತಿಯ |
ನಿರ್ಮಮತೆಯೇ ಮೋಕ್ಷ - ಮರುಳ ಮುನಿಯ || (೨೮೧)

(ನಿರ್ಮಮತೆ+ಅಭ್ಯಾಸಕೆ+ಎಂದು)(ಲೋಕದೊಳು+ಎಲ್ಲ)(ಧರ್ಮ+ಎನುತ್ತೆ)(ಪೋಷಿಪರ್+ಅಹಂಮತಿಯ)

ನಿರಹಂಕಾರ ಮತ್ತು ನಿಃಸ್ವಾರ್ಥತೆಯನ್ನು ರೂಢಿಸಿಕೊಳ್ಳುವುದಕ್ಕಾಗಿ ಪ್ರಪಂಚದಲ್ಲಿ ಏಲ್ಲಾ ಕೆಲಸಗಳನ್ನು ಮಾಡುವವನೇ ಮೋಕ್ಷಾರ್ಥಿ (ಮುಮುಕ್ಷು). ಮಿಕ್ಕಾ ಎಲ್ಲಾ ಜನರು ಧರ್ಮ, ಧರ್ಮವೆಂದೆನುತ್ತ ಅಹಂಕಾರ ಮತ್ತು ಸ್ವಾರ್ಥತೆಯನ್ನು ಪೋಷಿಸುತ್ತಾರೆ. ಆದರೆ ನಿರಹಂಕಾರ ಮತ್ತು ನಿಃಸ್ವಾರ್ಥತೆಯೇ ಮೋಕ್ಷ.
(ಕೃಪೆ: ಶ್ರೀ. ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Only the one who does all his duties in the world with the sole purpose of
Becoming egoless truly aspires after liberation,
All others orally shout, Dharma, Dharma and nourish the ego
Egolessness itself is salvation – Marula Muniya (281)
(Translation from "Thus Sang Marula Muniya" by Sri. Narasimha Bhat)

Thursday, September 13, 2012

ಅಹಿತನಾರ್ ನಿನಗಿಹದಿ ಪರದೊಳೆಲ್ಲಾದೊಡಂ (280)

ಅಹಿತನಾರ್ ನಿನಗಿಹದಿ ಪರದೊಳೆಲ್ಲಾದೊಡಂ |
ಇಹನವಂ ನಿನ್ನೊಳಿಲ್ಲಿಯೆ ಮನದ ಗವಿಯೊಳ್ ||
ಅಹಮೆಂಬ ರಾಕ್ಷಸಂ ಬಹುರೂಪಿ ಬಹುಮಾಯಿ |
ದಹಿಸು ನೀಂ ಮೊದಲವನ - ಮರುಳ ಮುನಿಯ || (೨೮೦)

(ಅಹಿತನ್+ಆರ್)(ನಿನಗೆ+ಇಹದಿ)(ಪರದೊಳ್+ಎಲ್ಲಾದೊಡಂ)(ಇಹನ್+ಅವಂ)(ನಿನ್ನೊಳ್+ಇಲ್ಲಿಯೆ)(ಅಹಂ+ಎಂಬ)(ಮೊದಲ್+ಅವನ)

ನಿನಗೆ ಈ ಪ್ರಪಂಚದಲ್ಲಿ, ಪರಲೋಕದಲ್ಲಿ ಮತ್ತು ಎಲ್ಲೆಲ್ಲಿಯೂ ಇರುವ ಶತ್ರು ಯಾರೆಂದರೆ, ಅವನು ನಿನ್ನೊಳಗಡೆಯೇ ನಿನ್ನ ಮನಸ್ಸಿನ ಗುಹೆಯಲ್ಲಿಯೇ ಇದ್ದಾನೆ. ಅವನು ಹಲವಾರು ಆಕಾರಗಳನ್ನು ಮತ್ತು ಮಾಯಾರೂಪಗಳನ್ನು ತಾಳಿರುವ ಅಹಂಕಾರವೆಂಬ ರಾಕ್ಷಸ. ಮೊಟ್ಟಮೊದಲಿಗೆ ಆ ಅಹಂಕಾರವನ್ನು ಸುಟ್ಟುಹಾಕು (ದಹಿಸು).
(ಕೃಪೆ: ಶ್ರೀ. ಶ್ರೀಕಾಂತ್ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is your enemy in this world, in the other world and anywhere else?
Here he is in the cave of your own mind,
He is your ego, a demon of many guises and tricks
Reduce him to ashes first – Marula Muniya (280)
(Translation from "Thus Sang Marula Muniya" by Sri. Narasimha Bhat)

Wednesday, September 12, 2012

ರಾಮಾನುಜರ್ ಮನೆಯ ಹೊರನಿಂತ ಶಿಷ್ಯನನು (279)

ರಾಮಾನುಜರ್ ಮನೆಯ ಹೊರನಿಂತ ಶಿಷ್ಯನನು |
ನಾಮವೇನೆನ್ನಲಾನಾನೆಂದನಾತಂ ||
ಬಾ ಮಗುವೆ ನಾಂ ಸತ್ತಮೇಲೆ ನೀಂ ಬರ‍್ಪುದೆಂ- |
ದಾ ಮುನಿಯ ಮಾತ ನೆನೆ - ಮರುಳ ಮುನಿಯ || (279)

(ನಾಮ+ಏನ್+ಎನ್ನಲ್+ಆ+ನಾನ್+ಎಂದನ್+ಆತಂ)(ಬರ‍್ಪುದು+ಎಂದ+ಆ)

ಶ್ರೀಮದ್ರಾಮಾನುಜರು ವಿಶಿಷ್ಟಾದ್ವೈತದ ಆಚಾರ‍್ಯರು. ಇವರು ನೆಲೆಸಿದ್ದ ಕುಟೀರದ ಹೊರಗೆ ಶಿಷ್ಯನೊಬ್ಬನು ಬಂದು ಬಾಗಿಲು ಬಡಿದನಂತೆ. ’ಯಾರು ನೀನು?’ ಎಂದು ಆಚಾರ‍್ಯರು ಪ್ರಸ್ನಿಸಲಾಗಿ ’ನಾನು, ನಾನು’ ಎಂದು ಶಿಷ್ಯನು ಹೇಳಿದನು. ಆಗ ಆಚಾರ‍್ಯರು ’ಮಗು ಒಳಗೆ ಬಾ, ಆದರೆ ನೀನು ನನ್ನ ಜೊತೆ ಬರುವುದು "ನಾನು" ಸತ್ತಮೇಲೆ ಮಾತ್ರ’ ಎಂದರು. ನಾನು ಎಂದರೆ ಅಹಂಕಾರ. ಅಹಂಕಾರವಳಿದರೆ ಮಾತ್ರ ಗುರುವಿನ ಲಾಭವಾಗುತ್ತದೆ. ಅದರಿಂದ ಸಗ್ದತಿ ದೊರೆಯುತ್ತದೆ - ಎಂದು ಅಭಿಪ್ರಾಯ. ಈ ಮುನಿಗಳ ಮಾತುಗಳನ್ನು ಸದಾಕಾಲವೂ ಜ್ಞಾಪಿಸಿಕೊಂಡು ಅಹಂಕಾರವನ್ನು ತೊರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Ramanujar asked his disciple standing outside the house
What his name was and he replied, ‘This is I’
Then the sage said, ‘Come in child after the demise of ‘I’
Remember these words – Marula Muniya (279)
(Translation from "Thus Sang Marula Muniya" by Sri. Narasimha Bhat)


Monday, September 10, 2012

ತ್ಯಜಿಸಿ ನೀಂ ಭುಜಿಸುವುದು ಮನೆ ಸತ್ರವೆಂಬವೊಲು (278)

ತ್ಯಜಿಸಿ ನೀಂ ಭುಜಿಸುವುದು ಮನೆ ಸತ್ರವೆಂಬವೊಲು |
ಯಜಮಾನನಲ್ಲ ನೀನತಿಥಿಯೆಂಬವೊಲು ||
ಭುಜವ ಭಾರಕೆ ನೀಡು ರುಚಿಗೆ ರಸನೆಯ ನೀಡು |
ಭುಜಿಸು ಮಮತೆಯ ಮರೆತು - ಮರುಳ ಮುನಿಯ || (278)

(ಸತ್ರ+ಎಂಬವೊಲು)(ನೀನ್+ಅತಿಥಿ+ಎಂಬವೊಲು)

ನೀನು ವಾಸಿಸುತ್ತಿರುವ ಗೃಹವೇ ಒಂದು ಸಾರ್ವಜನಿಕ ಸತ್ರವೆಂದು ಭಾವಿಸು. ನೀನು ಅದಕ್ಕೆ ಒಡೆಯನಲ್ಲ. ಆದರೆ ನೀನು ಅಲ್ಲಿರುವ ಒಬ್ಬ ಅತಿಥಿಯೆನ್ನುವಂತೆ ನಡೆದುಕೊಂಡು, ತ್ಯಾಗದ ಭಾವದಿಂದ ನೀನು ಊಟ ಮಾಡು. ಅಲ್ಲಿರುವ ಕಾರ್ಯಭಾರಕ್ಕೆ ನಿನ್ನ ಭುಜವನ್ನು ಒಡ್ಡು. ದೊರೆತ ಸವಿಗೆ ನಿನ್ನ ನಾಲಿಗೆಯನ್ನು ನೀಡು. ಅಹಂಕಾರ ಮತ್ತು ಸ್ವಾರ್ಥಗಳನ್ನು ಬಿಟ್ಟು ಆಹಾರವನ್ನು ಸೇವಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Regard your home as a choultry and accept food renouncing the sense of ownership
Conduct yourself, not as a master but as a guest,
Give your shoulder to the burden and your tongue to the taste,
But eat forgetting your ego – Marula Muniya (278)
(Translation from "Thus Sang Marula Muniya" by Sri. Narasimha Bhat)

ಲೋಕೋಪಕಾರ ಶಿವನೊರ‍್ವನೆತ್ತುವ ಭಾರ (277)

ಲೋಕೋಪಕಾರ ಶಿವನೊರ‍್ವನೆತ್ತುವ ಭಾರ |
ಏಕೆ ನಿನಗದನು ಹೊರುವಧಿಕಾರವವನು ||
ಬೇಕಾದವೊಲು ಗೆಯ್ಗೆ, ನಿನ್ನ ಮಮತಾಕ್ಷಯಕೆ |
ಲೋಕದಿಂದುಪಕಾರ - ಮರುಳ ಮುನಿಯ || (೨೭೭)

(ಶಿವನ್+ಒರ‍್ವನ್+ಎತ್ತುವ)(ಹೊರುವ+ಅಧಿಕಾರವು+ಅವನು)(ಲೋಕದಿಂದ+ಉಪಕಾರ)

ಈ ಪ್ರಪಂಚದ ಭಾರವನ್ನು ಹೊರುವುದು, ಪರಮಾತ್ಮನೊಬ್ಬನೇ ಪ್ರಪಂಚಕ್ಕೆ ಮಾಡುವ ಸಹಾಯ. ನಿನಗೇತಕ್ಕೆ ಆ ಹೊರೆಯನ್ನು ಹೊರುವ ಅಧಿಕಾರ? ಅದು ಅವನಿಗೇ ಬಿಟ್ಟದ್ದು. ನಿನ್ನ ಕೈಲಾದಷ್ಟು ಕೆಲಸವನ್ನು ನೀನು ಮಾಡಿದರೆ, ನಿನ್ನ ಮೋಹ ಮತ್ತು ಅಹಂಕಾರಗಳನ್ನು ನಶಿಸಲು ಪ್ರಪಂಚದಿಂದ ಸಹಾಯವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Helping the world is the sole responsibility shouldered by Lord Shiva
Why do you usurp the authority of shouldering it yourself?
Let Shiva manage it as He wills, know that the world helps you
To wear out your ego-sense – Marula Muniya (277)
(Translation from "Thus Sang Marula Muniya" by Sri. Narasimha Bhat)

Friday, September 7, 2012

ಬೆನ್ನಲುಬನುಪಕೃತನೊಳುಡುಗಿಪುಪಕೃತಿಯೇನು ? (276)

ಬೆನ್ನಲುಬನುಪಕೃತನೊಳುಡುಗಿಪುಪಕೃತಿಯೇನು ? |
ಅನ್ಯಾಶ್ರಯವ ಕಲಿತ ಲತೆ ನೆಟ್ಟಗಿಹುದೇ ? ||
ತನ್ನಿಂದ ತಾನೆ ಅಬಲಂ ಬಲಿಯಲನುವಾಗಿ |
ನಿನ್ನ ನೀಂ ಮರೆಯಿಸಿಕೊ - ಮರುಳ ಮುನಿಯ || (೨೭೬)

(ಬೆನ್ನಲುಬನು+ಉಪಕೃತನೊಳು+ಉಡುಗಿಪ+ಉಪಕೃತಿಯೇನು)(ಅನ್ಯ+ಆಶ್ರಯವ)(ನೆಟ್ಟಗೆ+ಇಹುದೇ)(ಬಲಿಯಲು+ಅನುವಾಗಿ)

ಬೆನ್ನುಮೂಳೆಗಳನ್ನು ನಿನ್ನಿಂದ ಉಪಕಾರ ಹೊಂದಿದವ(ಉಪಕೃತ)ನ ಒಳಗಡೆ ಅಡಗಿಸಿಡುವ ನೆರವನ್ನೇಕೆ ಮಾಡುತ್ತೀಯೆ? ಬೇರೆಯವರ ಅಧಾರದಿಂದ ನಿಂತಿರುವ (ಕಲಿತ) ಬಳ್ಳಿ ತನ್ನಿಂದ ತಾನೇ ನೆಟ್ಟಗೆ ನಿಲ್ಲಲಾದೀತೇನು? ಅಶಕ್ತನಾದವನು ತನ್ನ ಸ್ವಂತ ಪ್ರಯತ್ನದಿಂದಲೇ ಬಲಿಷ್ಠನಾಗಲು ಸಿದ್ಧನಾಗುವಂತೆ, ನಿನ್ನನ್ನು ನೀನೇ ಮರೆಯುವಂತೆ ರೂಪಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can the help that weakens the backbone of the receiver be called help?
Can the creeper that always depends on other’s support stand erect on its own?
Never flaunt yourself but help the weak
To become strong by self-effort – Marula Muniya (276)
(Translation from "Thus Sang Marula Muniya" by Sri. Narasimha Bhat)

Thursday, September 6, 2012

ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ (275)

ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ |
ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ||
ನಾನು ನೀನುಗಳ ಬೊಬ್ಬೆಯೆ ಲೋಕದಲಿ ಹಬ್ಬ |
ಕ್ಷೀಣವಾಗಲಿ ನಾನು - ಮರುಳ ಮುನಿಯ || (೨೭೫)

(ನಾನ್+ಎಂದು+ಉರುಬಿ)(ನಿನ್ನ+ಇಕ್ಕೆಲದಿ)(ಕ್ಷೀಣ+ಆಗಲಿ)

ನಾನು, ನಾನು ಎಂದು ರಭಸದಿಂದ ಮೇಲೆ ಬಿದ್ದು (ಉರುಬಿ) ನಿನ್ನ ಎರಡೂ ಪಕ್ಕಗಳನ್ನೂ ನೋಡಿದರೆ, ಪ್ರತಿಯೊಬ್ಬರ ನಾನು ನಾನುಗಳ ಮರು ಕೂಗಾಟ ಮತ್ತು ಕೆರಳುವಿಕೆಗಳನ್ನು ನೀನು ಕಾಣುತ್ತೀಯೆ. ಈ ರೀತಿಯಾದ ನಾನು ಮತ್ತು ನೀನುಗಳ ಒದರಾಟಗಳೇ ಪ್ರಪಂಚದಲ್ಲಿ ಎಲ್ಲೆಲ್ಲೂ ಮೆರೆಯುತ್ತಿದೆ. ಆದ ಕಾರಣ ’ನಾನು’ ಎಂಬ ಅಹಂತೆ ಪ್ರತಿಯೊಬ್ಬರಲ್ಲಿ ಸೊರಗಿಹೋಗಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You are shouting I, I, I, see your two sides,
Irritated people are also shouting I, I, I
Riotous revelry in the shouting world of I and you
May the egoistic I wane away – Marula Muniya (275)
(Translation from "Thus Sang Marula Muniya" by Sri. Narasimha Bhat)

Wednesday, September 5, 2012

ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ (274)

ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ |
ಮೊದಲು ನಾನೆನ್ನವರು ಬಳಿಕ ಉಳಿದವರು ||
ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ |
ಅದುಮಿಕೊ ಅಹಂತೆಯನು - ಮರುಳ ಮುನಿಯ || (೨೭೪)

(ನಾನ್+ಎನಗೆ)(ಮೊದಲ್+ಊಟ)(ನಾನ್+ಎನ್ನವರು)(ಲೋಕದ+ಎಲ್ಲ)

ಮೊದಲು ನಾನು. ಮೊದಲು ನನಗೆ ಊಟವನ್ನು ಹಾಕಬೇಕು. ಮೊದಲಮಣೆ ನನಗೆ ಮೀಸಲಾಗಿರಬೇಕು. ಮೊದಲು ನಾನು ಮತ್ತು ನನ್ನವರು, ನಂತರ ಉಳಿದವರ ಬಗ್ಗೆ ಯೋಚಿಸೋಣ. ಈ ಬಗೆಯ ಅಹಂಭಾವನೆಗಳು ಪ್ರಪಂಚದ ಎಲ್ಲಾ ಜಗಳ ಮತ್ತು ದುಃಖಗಳ ಮೂಲ. ಆದ್ದರಿಂದ ನಿನ್ನ ಅಹಂಕಾರವನ್ನು ಯಾವಾಗಲೂ ಅದುಮಿಟ್ಟುಕೊಂಡಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

First I, server the dinner first to me and offer the first seat to me,
I and my people first and all others afterwards
This attitude is the root of all fights and sorrows in the world
Subdue this Ego – Marula Muniya (274)
(Translation from "Thus Sang Marula Muniya" by Sri. Narasimha Bhat)

Tuesday, September 4, 2012

ಹೃದಯಾಂಗಣದ ಗರ್ಭದೊಳಗಿಹುದು ತಿಳಿಚಿಲುಮೆ (273)

ಹೃದಯಾಂಗಣದ ಗರ್ಭದೊಳಗಿಹುದು ತಿಳಿಚಿಲುಮೆ |
ವಿಧವಿಧದ ಲೋಕಾನುಭವದ ಹಾರೆಗಳು ||
ಬೆದಕಿ ಬಾವಿಯನಗೆಯೆ ಸತ್ಕಲೆಯ ಘಟಗಳಲಿ |
ಬದುಕಿಗೊದಗುವುದಮೃತ - ಮರುಳ ಮುನಿಯ || (೨೭೩)

(ಹೃದಯ+ಅಂಗಣದ)(ಗರ್ಭದೊಳಗೆ+ಇಹುದು)(ಲೋಕ+ಅನುಭವದ)(ಬಾವಿಯನ್+ಅಗೆಯೆ)(ಸತ್+ಕಲೆಯ) (ಬದುಕಿಗೆ+ಒದಗುವುದು+ಅಮೃತ)

ಹೃದಯದ ಅಂಗಳದೊಳಗಿನ ಗರ್ಭದಲ್ಲಿ ತಿಳಿಯಾದ ನೀರಿನ ಬುಗ್ಗೆಯಿದೆ. ಜಗತ್ತಿನ ಬಗೆಬಗೆಯ ಅನುಭವಗಳೆಂಬ ಹಾರೆಗಳಿಂದ, ಈ ಅಂಗಳದಲ್ಲಿ ಬಾವಿಯನ್ನು ತೋಡಿದರೆ, ಶ್ರೇಷ್ಠವಾದ ಕಲೆಗಳ ಬಿಂದಿಗೆ(ಘಟ)ಗಳಲ್ಲಿ, ನಮ್ಮಗಳ ಜೀವನಕ್ಕೆ ಬೇಕಾದ ಅಮೃತವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

A limpid spring lies hidden in the depth of human heart,
When the spades of many varieties of life experiences
Prod and dig a well there, the ambrosia would be available
In the vessels of fine-arts – Marula Muniya (273)
(Translation from "Thus Sang Marula Muniya" by Sri. Narasimha Bhat)

Monday, September 3, 2012

ಶುಭ ಅಶುಭಗಳಿಗಂಜೆ ಸುಖದುಃಖಗಳಿಗಂಜೆ (272)

ಶುಭ ಅಶುಭಗಳಿಗಂಜೆ ಸುಖದುಃಖಗಳಿಗಂಜೆ |
ಅಭಯ ಭಯಗಳಿಗಂಜೆ ಲೋಗರಿಂಗಂಜೆ ||
ಉಭಯಗಳ ಮೀರ್ದ ಶಾಂತಿಯ ಸತ್ಯವೊಂದಿಹುದು |
ಲಭಿಸಲದು ಶಾಶ್ವತವೊ - ಮರುಳ ಮುನಿಯ || (೨೭೨)

(ಅಶುಭಗಳಿಗೆ+ಅಂಜೆ)(ಸುಖದುಃಖಗಳಿಗೆ+ಅಂಜೆ)(ಭಯಗಳಿಗೆ+ಅಂಜೆ)(ಲೋಗರಿಂಗೆ+ಅಂಜೆ)(ಸತ್ಯವೊಂದು+ಇಹುದು) (ಲಭಿಸಲ್+ಅದು)

ಮಂಗಳ ಮತ್ತು ಅಮಂಗಳಕರವಾದುದಕ್ಕೆ, ಸಂತೋಷ ಮತ್ತು ನೋವುಗಳಿಗೆ, ಹೆದರಿಕೆ ಮತ್ತು ಭಯವಿಲ್ಲದಿರುವುದಕ್ಕೆ ಮತ್ತು ಜನಗಳಿಗೆ, ಇವುಗಳೆಲ್ಲಕ್ಕೂ ನಾವು ಹೆದರದಿರೆ, ಈ ಎರಡನ್ನೂ ದಾಟಿದ ನಮಗೆ ನೆಮ್ಮದಿಯನ್ನು ನೀಡುವ ಸತ್ಯ ಒಂದಿದೆ. ಆ ಸತ್ಯವು ನಿನೆಗೆ ದೊರಕಿದಾಗ ನಿನಗೆ ಶಾಶ್ವತವಾದ ನೆಮ್ಮದಿ ಸಿಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There exists the Truth, the adobe of peace, it transcends all dualities,
It is unafraid of all things, auspicious and inauspicious
Happiness and sorrow, fear and fearlessness, unafraid of any person
It remains with you forever if once attained – Marula Muniya (272)
(Translation from "Thus Sang Marula Muniya" by Sri. Narasimha Bhat)