Friday, October 31, 2014

ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? (688)

ಆರು ತಾನರಿತನಿನ್ನೊರ‍್ವನೇಳ್ಗೆಯ ಬಗೆಯ? |
ಆರು ತನ್ನೇಳ್ಗೆಯನು ತಾನರಿತ ಕುಶಲಂ? ||
ಹೇರದಿರು ನಿನ್ನ ಕಣ್ಗಾಜನಿನ್ನೊರ‍್ವಂಗೆ |
ದಾರಿಯವನದವಂಗೆ - ಮರುಳ ಮುನಿಯ || (೬೮೮)

(ತಾನ್+ಅರಿತನ್+ಇನ್ನೊರ‍್ವನ+ಏಳ್ಗೆಯ)(ತನ್+ಏಳ್ಗೆಯನು)(ಕಣ್+ಗಾಜನು+ಇನ್ನೊರ‍್ವಂಗೆ)(ದಾರಿ+ಅವನದು+ಅವಂಗೆ)

ಇನ್ನೊಬ್ಬನ ಏಳಿಗೆಯ ಬಗೆಯನ್ನು ಯಾವನು ತಿಳಿದುಕೊಂಡಿದ್ದಾನೆ? ಅಥವಾ ತನ್ನ ಉನ್ನತಿಯ ಮಾರ್ಗವನ್ನೇ ತಿಳಿದುಕೊಂಡಿರುವ ಚತುರನು ಯಾರು? ನಿನ್ನ ಉದ್ಧಾರದ ಮಾರ್ಗಗಳೇ ನಿನಗೆ ತಿಳಿಯದಿರುವಾಗ ನಿನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಬೇಡ. ಅವರವರ ದಾರಿ ಅವರವರಿಗೆ ಬಿಟ್ಟಿದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who knows how to achieve the good of others?
Who knows how to accomplish one’s own good?
Thrust not your eyeglasses on the eyes of others.
Each has his own path marked out for him – Marula Muniya (688)
(Translation from "Thus Sang Marula Muniya" by Sri. Narasimha Bhat)

Thursday, October 30, 2014

ಹೆರರ ಬದುಕಿಗೆ ತನ್ನ ನೆರಳ ಬೀಳಲ್ಬಿಡದೆ (687)

ಹೆರರ ಬದುಕಿಗೆ ತನ್ನ ನೆರಳ ಬೀಳಲ್ಬಿಡದೆ |
ಹೊರಿಸದಿನ್ನೊರ‍್ವಂಗೆ ತನಗಿರುವ ಹೊರೆಯ ||
ಅರಿತು ತನ್ನೊಳಗದರೊಳಿತ ಹೊರಕನುಗೊಳಿಪ |
ಪರಿಯೆ ಸ್ವತಂತ್ರತೆಯೊ - ಮರುಳ ಮುನಿಯ || (೬೮೭)

(ಬೀಳಲ್+ಬಿಡದೆ)(ಹೊರಿಸದೆ+ಇನ್ನೊರ‍್ವಂಗೆ)(ತನಗೆ+ಇರುವ)(ತನ್ನ+ಒಳಗೆ+ಅದರ+ಒಳಿತ)(ಹೊರಕೆ+ಅನುಗೊಳಿಪ)

ಬೇರೆಯವರು ತಮ್ಮದೇ ಆದ ಬೆಳಕಿನಲ್ಲಿ ಜೀವನವನ್ನು ನಡೆಸುತ್ತಿರುವಾಗ, ತನ್ನ ನೆರಳನ್ನು ಅವರ ಮೇಲೆ ಬೀಳದಂತೆ ನಡೆಯುವ, ತನಗೆ ಬಂದಿರುವ ಭಾರವನ್ನು ಇತರರ ಹೆಗಲಿಗೇರಿಸದಂತೆ ಬಾಳ್ವೆಯನ್ನು ನಡೆಸುವ, ತನ್ನ ಅಂತರಂಗವನ್ನು ಅರ್ಥಮಾಡಿಕೊಂಡು, ತನ್ನಲ್ಲಿರುವ ಒಳ್ಳೆಯ ಶಕ್ತಿ ಸಾಮರ್ಥ್ಯಗಳನ್ನು ಬಾಹ್ಯ ಜಗತ್ತಿಗೆ ಉಪಯೋಗವಾಗುವ ಹಾಗೆ ಬಳಸುವ ವಿಧಾನಗಳೇ ಸ್ವಾತಂತ್ರ್ಯ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Without allowing one’s own shadow to mar the light of others,
Without shifting one’s own burden on to the shoulders of others,
Understanding one’s own self and coordinating its good with that of others
This life process is true freedom – Marula Muniya (687)
(Translation from "Thus Sang Marula Muniya" by Sri. Narasimha Bhat)

Wednesday, October 29, 2014

ಗೀತರಾಗಂ ನಾದಮಾನದಿಂ ರುಚಿಪಂತೆ (686)

ಗೀತರಾಗಂ ನಾದಮಾನದಿಂ ರುಚಿಪಂತೆ |
ಮಾತು ಛಂದಸು ಕೂಡಿ ಪದ್ಯವಪ್ಪಂತೆ ||
ಸ್ರೋತಂ ತಟಾನುಗತಿಯಿಂ ಯೋಗ್ಯವೆನಿಪಂತೆ |
ಸ್ವಾತಂತ್ರ್ಯ ಶಾಸ್ತಿಯಿಂ - ಮರುಳ ಮುನಿಯ || (೬೮೬)

(ಪದ್ಯವು+ಅಪ್ಪಂತೆ)(ತಟ+ಅನುಗತಿಯಿಂ)(ಯೋಗ್ಯ+ಎನಿಪಂತೆ)

ಹಾಡು ಮತ್ತು ರಾಗಗಳು ಮಧುರವಾದ ಧ್ವನಿಯಿಂದಲೊಡಗೂಡಿ ನಮಗೆ ಸವಿಯನ್ನು ಉಂಟುಮಾಡುವಂತೆ, ಮಾತು ಮತ್ತು ಛಂದಸ್ಸು ಕೂಡಿ ಒಂದು ಪದ್ಯವಾಗುವಂತೆ, ನದಿಯ ಪ್ರವಾಹ(ಸ್ರೋತ)ವು ಅದರ ದಡ(ತಟ)ಗಳ ನಿಯಂತ್ರಣದಿಂದ ಅನುಕೂಲವೆನ್ನಿಸುವಂತೆ, ಸ್ವಾತಂತ್ರ್ಯದ ಪ್ರಯೋಜನವು ನಿಯಮಪಾಲನೆಯಿಂದ ಸಾರ್ಥಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Songs and tunes in measured tones become melodious,
Words arranged in suitable meter becomes song
River flowing between its banks becomes useful,
Likewise freedom flowers with discipline – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 28, 2014

ಪ್ರಾತರನಿಲಂ ಸುಳಿಯೆ ನೂತನಾರುಣನೊಲಿಯೆ (685)

ಪ್ರಾತರನಿಲಂ ಸುಳಿಯೆ ನೂತನಾರುಣನೊಲಿಯೆ |
ಪ್ರೀತಿಮೆರೆದರಳುತಿಹ ನನಗೆ ಮರದೆಲೆಯಿಂ ||
ಆತಂಕ ತಾಕದಿರಲಾ ಆತ್ಮವಿಕಸನಮೆ |
ಸ್ವಾತಂತ್ರ್ಯದುಪಯೋಗ - ಮರುಳ ಮುನಿಯ || (೬೮೫)

(ಪ್ರಾತರ್+ಅನಿಲಂ)(ನೂತನ+ಅರುಣನ್+ಒಲಿಯೆ)(ಪ್ರೀತಿಮೆರೆದು+ಅರಳುತ+ಇಹ)(ಮರದ+ಎಲೆಯಿಂ)(ತಾಕದೆ+ಇರಲು+ಆ)(ಸ್ವಾತಂತ್ರ್ಯದ+ಉಪಯೋಗ)

ಬೆಳಗಿನ ಗಾಳಿಯು (ಪ್ರಾತರನಿಲಂ) ಬೀಸುತ್ತಿರಲು, ಬಾಲಸೂರ್ಯನು ಆಗ ತಾನೇ ನಲುಮೆಯಿಂದ ಕಾಣಿಸಿಕೊಳ್ಳಲು, ಪ್ರೀತಿಯಿಂದ ಶೋಭಿಸಿ ಅರಳುತ್ತಿರುವ ಮೊಗ್ಗಿಗೆ (ನನೆಗೆ) ಮರದಲ್ಲಿರುವ ಎಲೆಗಳಿಂದ ಅಡ್ಡಿ ಮತ್ತು ಹೆದರಿಕೆಗಳು ಇರದಿರುವಂತೆ ಆತ್ಮವಿಸ್ತಾರವನ್ನು ಹೊಂದುವುದೇ ಸ್ವಾತಂತ್ರ್ಯದ ಸಾರ್ಥಕ ಬಳಕೆಗೆ ನಿದರ್ಶನವಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the morning breeze gently blows and the new dawn blesses the world,
The love-showering bud behind the leaves of tree
Blossoms without the least obstruction from the leaves,
Blossoming of the self likewise is the best use of freedom – Marula Muniya
(Translation from "Thus Sang Marula Muniya" by Sri. Narasimha Bhat)

Monday, October 27, 2014

ವರ್ತಮಾನದಿ ತೃಪ್ತಿಯೊಡನುತ್ತಮತೆಯಾಶೆ (684)

ವರ್ತಮಾನದಿ ತೃಪ್ತಿಯೊಡನುತ್ತಮತೆಯಾಶೆ |
ಚಿತ್ತದ ಸಮಾಧಾನ ಹಸ್ತದುದ್ಯೋಗ ||
ಕರ್ತವ್ಯಕಿಂತು ಕಾವಡಿಯ ತೆರದಿಬ್ಭಾರ |
ಯಾತ್ರೆಯದರಿಂ ಪೂರ್ಣ - ಮರುಳ ಮುನಿಯ || (೬೮೪)

(ತೃಪ್ತಿ+ಒಡನೆ+ಉತ್ತಮತೆ+ಆಶೆ)(ಹಸ್ತದ+ಉದ್ಯೋಗ)(ಕರ್ತವ್ಯಕೆ+ಇಂತು)(ತೆರದಿ+ಇಬ್ಭಾರ)(ಯಾತ್ರೆ+ಅದರಿಂ)

ಸದ್ಯದ ಸಂದರ್ಭದಲ್ಲಿ ಸಮಾಧಾನದ ಜೊತೆ ಶ್ರೇಷ್ಠವಾದದು(ಉತ್ತಮತೆ)ದನ್ನು ಹೊಂದುವ ಬಯಕೆ. ಮನಸ್ಸಿನ ನೆಮ್ಮದಿಗೋಸ್ಕರ ಕೈಗೆ ದೊರೆತಿರುವ ಒಂದು ಕೆಲಸ. ತನ್ನ ಪಾಲಿಗೆ ಬಂದಿರುವ ಕೆಲಸಗಳನ್ನು ಮಾಡಲು ಈ ರೀತಿ ಕಾವಡಿ(ಹೆಗಲ ಮೇಲೆ ಹೊರುವ ಎರಡೂ ಕಡೆ ಭಾರವಾಗಿರುವ ಒಂದು ಅಡ್ಡೆ)ಯಂತೆ ಎರಡೂ ಕಡೆ ಭಾರಗಳಿರಲು, ಮನುಷ್ಯನ ಭೂಲೋಕದ ಯಾತ್ರೆ ಪರಿಪೂರ್ಣವಾಗುತ್ತದೆ.

(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Contentment in your present condition with a desire for betterment
Peace of mind and proper work for hands to do
Duties of human life like kavadi have two side-weights
The life pilgrimage becomes complete with these – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 21, 2014

ಮಡುವೀಜುವಾಟದಲಿ ಶ್ರೀಕೃಷ್ಣಗೋಪಿಯರು (683)

ಮಡುವೀಜುವಾಟದಲಿ ಶ್ರೀಕೃಷ್ಣಗೋಪಿಯರು |
ದಡದಿಂದ ಧುಮ್ಮಿಕ್ಕಿ ತಡಕಾಡಿ ದಣಿದು ||
ಕಡೆಗೆ ದಡವೇರುತ್ತ ಕಿಲಕಿಲನೆ ನಗುವಂತೆ |
ಪೊಡವಿಯೊಳು ನರನೀಜು - ಮರುಳ ಮುನಿಯ || (೬೮೩)

(ಮಡುವ+ಈಜುವಾಟದಲಿ)(ಪೊಡವಿಯ+ಒಳು)(ನರನ+ಈಜು)

ಹೊಳೆಯ ಮಡುವಿನಲ್ಲಿ, ಈಜಾಡುವಾಗ ಶ್ರೀಕೃಷ್ಣಪರಮಾತ್ಮ ಮತ್ತು ಗೋಪಿಕಾಸ್ತ್ರೀಯರು, ದಡದಿಂದ ನೀರಿನೊಳಕ್ಕೆ ಧುಮುಕಿ, ಹುಡುಕಿ, ತಡಕಾಡಿ ಆಯಾಸಗೊಂಡು ಕೊನೆಯಲ್ಲಿ ಕಿಲಕಿಲನೆ ನಗುತ್ತಾ ದಡವನ್ನು ಏರುವಂತೆ, ಮನುಷ್ಯನೂ ಈ ಬಾಳಿನ ಹೊಳೆಯಲ್ಲಿ ಈಜುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

With the sole intention of swimming and enjoying
Shri Krishna and the Gopis jump into the lake, struggle and tire themselves,
At last they stop their play, come up and laugh joyfully,
Similar is man’s swim in the world - Marula Muniya (683)
(Translation from "Thus Sang Marula Muniya" by Sri. Narasimha Bhat)

Monday, October 20, 2014

ಹೊಟ್ಟೆಪಾಡಿಗೆ ಸತ್ಯವನು ಬಿಡದೊಂದು ದುಡಿಮೆ (682)

ಹೊಟ್ಟೆಪಾಡಿಗೆ ಸತ್ಯವನು ಬಿಡದೊಂದು ದುಡಿಮೆ |
ನಿಷ್ಠೆಯಿಂದಿಹ ಗೆಳತಿ ಕಷ್ಟ (ದಿನಗಳಿಗೆ) ||
ಸೃಷ್ಟೀಶಭಕ್ತಿ - ಈ ಮೂವರಿರಲ್ ಜೀವನದಿ |
ಕಷ್ಟವೇನಿಹುದಯ್ಯ - ಮರುಳ ಮುನಿಯ || (೬೮೨)

(ನಿಷ್ಠೆ+ಇಂದ+ಇಹ)(ಸೃಷ್ಟಿ+ಈಶಭಕ್ತಿ)(ಮೂವರ್+ಇರಲ್)(ಕಷ್ಟ+ಏನ್+ಇಹುದು+ಅಯ್ಯ)

ದಿನನಿತ್ಯದ ಉದರಂಭರಣೆಗಾಗಿ ಪ್ರಾಮಾಣಿಕತೆಯಿಂದ ದುಡಿಯಲು ಒಂದು ಉದ್ಯೋಗ. ಕಷ್ಟದ ದಿನಗಳಿಗೆ ಆಸರೆಯಾಗಿ, ತೀವ್ರವಾದ ಆಸಕ್ತಿ ಮತ್ತು ಶ್ರದ್ಧೆಯಿಂದಿರುವ ಜೀವನದ ಸಂಗಾತಿ. ಸೃಷ್ಟಿಕರ್ತನಾದ ಪರಮಾತ್ಮನಲ್ಲಿ ಭಕ್ತಿ. ಈ ಮೂರನ್ನೂ ಒಳಗೊಂಡ ಜೀವನವನ್ನು ನಡೆಸುವುದರಲ್ಲಿ ಕಷ್ಟವೇನಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Can there be difficulty in life when you have the following three?
An honest occupation to earn your livelihood,
A life partner who is friendly and faithful even in difficult times
And implicit devotion in God – Marula Muniya (682)
(Translation from "Thus Sang Marula Muniya" by Sri. Narasimha Bhat)

Friday, October 17, 2014

ಆವುದಾನುಂ ನಿನ್ನ ಬಾಳಬಲಿಗೊಳಲಿಹುದೆ (681)

ಆವುದಾನುಂ ನಿನ್ನ ಬಾಳಬಲಿಗೊಳಲಿಹುದೆ |
ದೈವವೋ ಧರ್ಮವೋ ಸಖ್ಯವೋ ಸುಖವೋ ||
ಜೀವವೆಲ್ಲವ ತನ್ನೊಳಕೆ ಕೊಳುವ ಲಕ್ಷ್ಯವೊಂ - |
ದಾವರಿಸೆ ನೀಂ ಧನ್ಯ - ಮರುಳ ಮುನಿಯ || (೬೮೧)

(ಬಾಳಬಲಿಗೊಳಲ್+ಇಹುದೆ)(ಜೀವವು+ಎಲ್ಲವ)(ಲಕ್ಷ್ಯ+ಒಂದು+ಆವರಿಸೆ)

ದೈವವೋ, ಧರ್ಮವೋ, ಸ್ನೇಹವೋ ಅಥವಾ ಸಖ್ಯವೋ ಇದು ಯಾವುದಾದರೂ ಒಂದು ನಿನ್ನ ಜೀವನವನ್ನು ಬಲಪಡಿಸದಿರುವುದೇನು? ಜೀವವೆಲ್ಲವನ್ನೂ ತನ್ನೊಳಗೆಡೆಗೆ ತೆಗೆದುಕೊಳ್ಳುವ ಒಂದು ಧ್ಯೇಯವು ನಿನ್ನನ್ನು ಆವರಿಸಿದರೆ ನೀನು ಅದೃಷ್ಟಶಾಲಿ ಹಾಗೂ ಸಾರ್ಥಕಜೀವಿಯೆನ್ನಿಸುವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

God or religion or friendship or happiness,
Each one of these demands the sacrifice of your life
Fulfillment you attain when the goal to include all life
In your embrace fills you through and through – Marula Muniya
(Translation from "Thus Sang Marula Muniya" by Sri. Narasimha Bhat)

Thursday, October 16, 2014

ಕೃಪಣಿಯೋ ಸೃಷ್ಟಿಯವಳೊಂದನುಂ ವ್ಯರ್ಥಿಸಳು (680)

ಕೃಪಣಿಯೋ ಸೃಷ್ಟಿಯವಳೊಂದನುಂ ವ್ಯರ್ಥಿಸಳು |
ಉಪಯೋಗಗೈವಳೆಲ್ಲರನುಮೆಲ್ಲವನುಂ ||
ಅಪರಿಮಿತ ಜೀವನಸಮೃದ್ಧಿಯವಳಾಕಾಂಕ್ಷೆ |
ಸಫಲವದಕಾದ ಬಾಳ್ - ಮರುಳ ಮುನಿಯ || (೬೮೦)

(ಸೃಷ್ಟಿ+ಅವಳು+ಒಂದನುಂ)(ಉಪಯೋಗಗೈವಳ್+ಎಲ್ಲರನುಂ+ಎಲ್ಲವನುಂ)(ಜೀವನ+ಸಮೃದ್ಧಿ+ಅವಳ+ಆಕಾಂಕ್ಷೆ)(ಸಫಲವು+ಅದಕೆ+ಆದ)

ಸೃಷ್ಟಿದೇವತೆ ಬಹಳ ಜಿಪುಣಿ(ಕೃಪಣಿ). ಅವಳು ಯಾವುದೊಂದನ್ನೂ ಪೋಲು(ವ್ಯರ್ಥ) ಮಾಡುವುದಿಲ್ಲ. ಅವಳು ಲೋಕದಲ್ಲಿರುವ ಎಲ್ಲಾ ಜನರನ್ನು ಮತ್ತು ಸಮಸ್ತ ವಸ್ತುಗಳನ್ನೂ ಉಪಯೋಗಿಸಿತ್ತಾಳೆ. ಜೀವನವನ್ನು ಅಪಾರವಾಗಿ ಸಂಪದ್ಭರಿತಗೊಳಿಸಬೇಕೆಂಬುದು ಅವಳ ಆಸೆ (ಆಕಾಕ್ಷೆ). ಸೃಷ್ಟಿದೇವಿಯ ಉದ್ದೇಶಕ್ಕೆ ಯಾರ ಜೀವನವು ನೆರವಾಗುವುದೋ ಅಂಥವರ ಜೀವನವು ಸಾರ್ಥಕವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature is a miser and She wastes nothing,
She uses everyone and everything available in the universe.
Immense prosperity in life is Her desire,
Fruitful is the life that fulfils it – Marula Muniya (680)
(Translation from "Thus Sang Marula Muniya" by Sri. Narasimha Bhat)

Wednesday, October 15, 2014

ಮಡುವು ಮಾನವ ಲೋಕ ಮಾಯೆಯಾ ಜಲರಾಶಿ (679)

ಮಡುವು ಮಾನವ ಲೋಕ ಮಾಯೆಯಾ ಜಲರಾಶಿ |
ತಡೆ ಕಣ್ಗೆ ಮೋಹ ಭಯ ರೋಷಗಳ ಹೊಡೆತ ||
ದುಡುಕುತಾಯಸಬಟ್ಟು ಮಡುವೊಳೀಜುವನವನು |
ದಡವೇರೆ ಪರಮಸುಖಿ - ಮರುಳ ಮುನಿಯ || (೬೭೯)

(ದುಡುಕುತ+ಆಯಸಬಟ್ಟು)(ಮಡುವೊಳ್+ಈಜುವನ್+ಅವನು)(ದಡ+ಏರೆ)

ಮನುಷ್ಯನ ಬಾಳೆಂಬುದು ನದಿಯ ಆಳವಾದ ಒಂದು ಜಾಗ(ಮಡುವು). ಆ ಜಲರಾಶಿಯೇ ಮಾಯೆ. ಅವನ ಕಣ್ಣುಗಳಿಗೆ ಪ್ರೀತಿ, ಹೆದರಿಕೆ, ಕೋಪಗಳು ಅಡ್ಡಬರಲು, ಅವುಗಳಿಂದ ಅವನಿಗೆ ಹೊಡೆತ. ಆವಾಗ ಅವನು ಮುಂದಾಲೋಚನೆಯಿಲ್ಲದೆ ಮುನ್ನುಗ್ಗಿ, ಶ್ರಮ ಮತ್ತು ಬಳಲಿಕೆಯಿಂದ, ಆ ಮಡುವಿನಲ್ಲಿ ಈಜುತ್ತಾನೆ. ಅವನು ದಡವನ್ನು ಮುಟ್ಟಿದಾಗ ಸುಖವನ್ನು ಹೊಂದುತ್ತಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This human world is a vast lake filled with the water of illusion
Attachment obstructs his vision, fear and anger smite him
He swims hastily, moves forward and tires himself
But he becomes overjoyed on reaching the bank – Marula Muniya (679)
(Translation from "Thus Sang Marula Muniya" by Sri. Narasimha Bhat)

Tuesday, October 14, 2014

ಹೊಟ್ಟೆಪಾಡಿನ ದುಡಿಮೆ ಸೃಷ್ಟೀಶಪದದೊಲುಮೆ (678)

ಹೊಟ್ಟೆಪಾಡಿನ ದುಡಿಮೆ ಸೃಷ್ಟೀಶಪದದೊಲುಮೆ |
ಇಷ್ಟ ಬಾಂಧವ ಮಿತ್ರ ಲೋಕಗಳ ಗೆಯ್ಮೆ ||
ಇಷ್ಟ ಸಂಗಾತಿ ಜನ ಕಾವ್ಯ ಗೀತಗಳಿರಲು |
ಕಷ್ಟವೇಂ ಬಾಳಲಿಕೆ - ಮರುಳ ಮುನಿಯ || (೬೭೮)

(ಸೃಷ್ಟಿ+ಈಶ+ಪದದ+ಒಲುಮೆ)(ಗೀತಗಳ್+ಇರಲು)

ಜೀವನವನ್ನು ನಿರ್ವಹಿಸುವುದಕ್ಕೋಸ್ಕರ ಆರ್ಥಿಕ ನೆರವನ್ನು ನೀಡುವ ಒಂದು ಉದ್ಯೋಗ, ಜಗತ್ತನ್ನು ಸೃಷ್ಟಿಸಿದ ಪರಮಾತ್ಮನ ಪದಕಮಲಗಳಲ್ಲಿ ಅಚಲ ನಂಬಿಕೆ, ವಿಶ್ವಾಸ ಮತ್ತು ಪ್ರೀತಿ. ಪ್ರೀತಿಪಾತ್ರರಾದ ಬಂಧುಗಳು, ಸ್ನೇಹಿತರುಗಳು, ಇವರುಗಳ ಜೊತೆ ಬಾಳಿನ ಸುಖಕ್ಕಾಗಿ ದುಡಿಯುವುದು. ಪ್ರೀತಿಸುವ ಸಂಗಾತಿ, ಸತ್ಕಾವ್ಯ ಮತ್ತು ಸಂಗೀತಗಳೆಲ್ಲವೂ ಇರಲಾಗಿ ಬದುಕಿ ಬಾಳಲು ಕಷ್ಟವೆಲ್ಲಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An occupation to earn the daily bread and God’s grace to reassure you,
The gains of your loving relations, and dear friends,
The loving company of your life partner, poetry and music
Is life difficult when you have all these? – Marula Muniya (678)
(Translation from "Thus Sang Marula Muniya" by Sri. Narasimha Bhat)

Monday, October 13, 2014

ಯಾತನೆಯ ರಂಗ ನರಜನ್ಮವೆನ್ನಿಪುದು ದಿಟ (677)

ಯಾತನೆಯ ರಂಗ ನರಜನ್ಮವೆನ್ನಿಪುದು ದಿಟ |
ನೀತಿಯಿನದುದ್ಧಾರ್ಯಮೆಂಬುದುಂ ದಿಟವೇ ||
ಭೀತಿಯಿನಭೀತತಗೆ ಮೃತ್ಯುವಿನಮರ್ತ್ಯತೆಗೆ |
ಸೇತು ಪೂರುಷಜನ್ಮ - ಮರುಳ ಮುನಿಯ || (೬೭೭)

(ನರಜನ್ಮ+ಎನ್ನಿಪುದು)(ನೀತಿಯಿಂ+ಅದು+ಉದ್ಧಾರ್ಯ+ಎಂಬುದುಂ)(ಭೀತಿಯಿಂ+ಅಭೀತತಗೆ)(ಮೃತ್ಯುವಿಂ+ಅಮರ್ತ್ಯತೆಗೆ)

ಕಷ್ಟ, ದುಃಖ ಮತ್ತು ನೋವುಗಳನ್ನನುಭವಿಸುವ ಬದುಕು ಈ ನರಜನ್ಮವೆಂದು ಎನ್ನಿಸುವುದು ನಿಜ. ಆದರೆ ನೀತಿ, ನಿಯಮಗಳನ್ನು ಪಾಲಿಸುವುದರಿಂದ ಅದನ್ನು ಮೇಲಕ್ಕೆತ್ತಲು ಸಾಧ್ಯವೆನ್ನುವುದು ಸಹ ನಿಜವೇ ಹೌದು. ಹೆದರಿಕೆಯಿಂದ ನಿರ್ಭೀತಿಯ ಸ್ಥಿತಿಗೆ ಮತ್ತು ಸಾವಿನಿಂದ ಆಮೃತತ್ವಕ್ಕೆ ಸಾಗಲು ಇರುವ ಸೇತುವೆಯೆಂದರೆ ನರಜನ್ಮವೇ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It is true that human life appears to be a play field of agonies
It is also true that it can be elevated to excellence through noble conduct
Human life is a bridge for us to cross from fear to fearlessness
And from death to immortality – Marula Muniya
(Translation from "Thus Sang Marula Muniya" by Sri. Narasimha Bhat)

Friday, October 10, 2014

ಕ್ಷರ ಜಗತ್ತಿನೊಳಕ್ಷಯದ ವಾಸನೆಯ ಕಾಣ್ಬ (676)

ಕ್ಷರ ಜಗತ್ತಿನೊಳಕ್ಷಯದ ವಾಸನೆಯ ಕಾಣ್ಬ |
ವಿರಸ ಮಧ್ಯದಿ ಸರಸ ಸಿರಿಯನಾಶಿಸುವಾ ||
ವರವದಾರ‍್ಗುಂಟು ಸೃಷ್ಟಿಯ ಜಂತು ವರ್ಗದಲಿ |
ನರಜಾತಿಯೊಂದುಳಿದು - ಮರುಳ ಮುನಿಯ || (೬೭೬)

(ಜಗತ್ತಿನೊಳು+ಅಕ್ಷಯದ)(ಸಿರಿಯನ್+ಆಶಿಸುವ+ಆ)(ವರವು+ಅದು+ಆರ‍್ಗೆ+ಉಂಟು)(ನರಜಾತಿ+ಒಂದು+ಉಳಿದು)

ನಾಶವಾಗುವಂತಹ (ಕ್ಷರ) ಪ್ರಪಂಚದೊಳಗೆ, ಶಾಶ್ವತದ ಜಾಡನ್ನು ಕಾಣುವ (ಕಾಣ್ಬ), ವೈಮನಸ್ಯ(ವಿರಸ)ದ ನಡುವೆ ವಿನೋದವಾಗಿರುವಂತಹ ಸಂಪತ್ತನ್ನು ಅಪೇಕ್ಷಿಸುವ ವಿಶೇಷ ಶಕ್ತಿ, ಸೃಷ್ಟಿಯ ಜೀವಕೋಟಿಗಳಲ್ಲಿ ಮನುಷ್ಯಜಾತಿಗೆ ಬಿಟ್ಟು ಇನ್ಯಾರಿಗಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The gift of feeling the fragrance of the immortal in the moral world,
The gift of seeking the treasure of harmony in the midst of discord,
Who possesses this gift among the creatures of the world
Except the human kind? – Marula Muniya
(Translation from "Thus Sang Marula Muniya" by Sri. Narasimha Bhat)

Wednesday, October 8, 2014

ಬಾಲದೊಳೊ ಬೆನ್ನಿನೊಳೊ ಕಣ್ಗೆದ್ದು ಕಾಣದೆಡೆ (675)

ಬಾಲದೊಳೊ ಬೆನ್ನಿನೊಳೊ ಕಣ್ಗೆದ್ದು ಕಾಣದೆಡೆ |
ತೋಳಿನೊಳೊ ತೊಂಡಿಲೊಳೊ ಮೆಯ್ಯಮುದುರಿನೊಳೊ ||
ಜಾಲಾಗಿ ಜುಂಗಾಗಿ ಸಿಗುರಾಗಿ ಸುಳಿಯಾಗಿ |
ಬಾಳ ತೆನೆಯೆದ್ದೀತೊ - ಮರುಳ ಮುನಿಯ || (೬೭೫)

(ಮೆಯ್ಯಮುದುರಿನ+ಒಳೊ)

ಬಾಲದೊಳಗೆ, ಬೆನ್ನಿನಲ್ಲಿ, ನಮ್ಮ ಕಣ್ಣುಗಳಿಗೆ ಕಾಣಿಸದಂತಿರುವ ಸ್ಥಳದಲ್ಲಿ, ತೋಳಶಕ್ತಿಯಲ್ಲಿ, ಶಿರೋಭೂಷಣ(ತೊಂಡಿಲು)ದಲ್ಲಿ, ಅಥವಾ ದೇಹದ ಮುದುರುಗಳಲ್ಲಿ ಬಲೆಯಂತೆ, ನಾರುಗಳಂತೆ, ಸಿಬುರು ಚಕ್ಕೆಗಳಂತೆ, ಸುತ್ತು ಸುತ್ತುಗಳಂತೆ ಜೀವನದ ಸಾರ (ಬಾಳ ತೆನೆ) ಬಾಳತೆನೆ ಇರಬಹುದು. ಸರಿಯಾಗಿ ಪರೀಕ್ಷಿಸಿ ನೋಡು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The corn-ear bunch of human life may be in a place
That doesn’t strike the eyes; it may be in the tail or on the back,
It may be in the arm or in the crest, or in any body fold
It may be like webs, fibres, splinters or spirals – Marula Muniya
(Translation from "Thus Sang Marula Muniya" by Sri. Narasimha Bhat)

Tuesday, October 7, 2014

ವಸ್ತು ಸತ್ತ್ವದ ಕಾವು ಗಟ್ಟಿಯೊಡಲೊಳಗೆನುತೆ (674)

ವಸ್ತು ಸತ್ತ್ವದ ಕಾವು ಗಟ್ಟಿಯೊಡಲೊಳಗೆನುತೆ |
ಹಸ್ತಿಯನು ತುಂಡಾಗ್ರವಿರದೆ ಮೆಚ್ಚುವರೆ? ||
ಕಸ್ತೂರಿಕಾಮೃಗದೊಳಗ್ಗಳದ ಪುರುಳೆಲ್ಲಿ? |
ವ್ಯಕ್ತಿತೆಯ ನೆಲೆ ಸೂಕ್ಷ್ಮ - ಮರುಳ ಮುನಿಯ || (೬೭೪)

(ಗಟ್ಟಿ+ಒಡಲು+ಒಳಗೆ+ಎನುತೆ)(ತುಂಡ+ಅಗ್ರ+ಇರದೆ)(ಕಸ್ತೂರಿಕಾಮೃಗದ+ಒಳ್+ಅಗ್ಗಳದ)

ಒಂದು ವಸ್ತುವಿನ ಶಕ್ತಿ ಗಟ್ಟಿಯಾಗಿರುವ ದೇಹದೊಳಗೆ ಮಾತ್ರ ಇರುವುದೆಂದ ಮಾತ್ರಕ್ಕೆ, ಆನೆ(ಹಸ್ತಿ)ಯನ್ನು ಅದರ ಮುಖದಲ್ಲಿ ಸೊಂಡಿಲು (ತುಂಡು) ಇರದೆ ಯಾರಾದರೂ ಇಷ್ಟಪಡುತ್ತಾರೇನು? ಕಸ್ತೂರಿ ಮೃಗದೊಳಗೆ ಶ್ರೇಷ್ಠ(ಅಗ್ಗಳ)ವಾದ ಸುಗಂಧ ದ್ರವ್ಯ ಮತ್ತು ಸುವಾಸನೆಯ ಸಾರ ಎಲ್ಲಿ ಅಡಗಿರುತ್ತದೆ? ತಿಳಿಯಲಾಗದು. ಹಾಗೆಯೇ ವ್ಯಕ್ತಿತ್ವದ ಮೂಲವೂ ಸಹ ಬಹು ಗೂಢವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“The substance of an object lies within a strong body” they say
But would anyone admire an elephant without trunk?
Where’s the precious musk in the body of the musk deer preserved?
Intricate is the basis of one’s personality – Marula Muniya (674)
(Translation from "Thus Sang Marula Muniya" by Sri. Narasimha Bhat)

Monday, October 6, 2014

ನಾರಸತ್ತ್ವಾಯನಂ ನಾರಾಯಣಂ ಬಗೆಯೆ (673)

ನಾರಸತ್ತ್ವಾಯನಂ ನಾರಾಯಣಂ ಬಗೆಯೆ |
ಪೌರುಷಪರಾಕಾಷ್ಠಪದವೆ- ಆ ದೈವಂ ||
ದಾರುತೆಯ ಕಳೆವ ಮಂದಾರಸುಮಸುರಭಿಯದು |
ಪಾರಮಾರ್ಥಿಕ ಜೀವ - ಮರುಳ ಮುನಿಯ || (೬೭೩)

ಮಾನವಶಕ್ತಿಯ ಆಶ್ರಯ(ನಾರಸತ್ತ್ವಾಯನಂ) ಆ ಪರಮಾತ್ಮನೇ ಎಂದು ತಿಳಿದರೆ, ಪೌರುಷತ್ವದ ತುತ್ತತುದಿ (ಪರಾಕಾಷ್ಠ)ಯನ್ನು ಹೊಂದುವುದನ್ನೇ ಆ ಪರಮಾತ್ಮನೆನ್ನುವನು. ಪಾರಮಾರ್ಥಿಕತೆಯನ್ನು ಹೊಂದಿದ ಜೀವವು ಮರ(ದಾರು)ದ ಅಂಶವನ್ನು ನಾಶಮಾಡಿಕೊಂಡ ಸ್ವರ್ಗಲೋಕದ ಪಾರಿಜಾತ(ಮಂದಾರ)ದ ಹೂವಿ(ಸುಮ)ನ ಪರಿಮಳ(ಸುರಭಿ)ದಂತಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

God Narayana Himself is the abode of all the best human virtues,
God is the Supreme state of the best human nature,
The soul divine in the Godly state is the fragrant mandara flower
That has shed all its wooden nature – Marula Muniya (673)
(Translation from "Thus Sang Marula Muniya" by Sri. Narasimha Bhat)