Thursday, June 30, 2011

ಸದಸದ್ವಿವೇಕ ವೈಶದ್ಯವಂ ನೀಡುವ (34)

ಸದಸದ್ವಿವೇಕ ವೈಶದ್ಯವಂ ನೀಡುವ |
ಚಿದನಂತರೂಪಿ ಭಕ್ತರ‍್ಗೆ ಸರ್ವರೊಳಂ ||
ಹೃದಯ ಪದ್ಮಾವಾಸ ಲೀಲಾಪ್ತನಾ ಶಿವನ |
ಪದವ ನೀಂ ಪಿಡಿ ಬಿಡದೆ - ಮರುಳ ಮುನಿಯ || (೩೪)

(ಸದಸತ್+ವಿವೇಕ)

ಒಳ್ಳೆಯದು ಯಾವುದು ಮತ್ತು ಕೆಟ್ಟದ್ದು ಯಾವುದು ಎಂಬುದು ಯುಕ್ತಾಯುಕ್ತ ವಿವೇಚನೆಯ ಸ್ಪಷ್ಟ(ವೈಶದ್ಯ)ತೆಯನ್ನು ಕೊಡುವ ಆ ಪರಮಾತ್ಮನ ರೂಪವನ್ನು ಅವನ ಭಕ್ತರು ಎಲ್ಲರಲ್ಲೂ(ಸರ್ವರೊಳಂ) ಕಾಣುತ್ತಾರೆ. ಹೃದಯ ಕಮಲ(ಪದ್ಮ)ದಲ್ಲಿ ವಾಸವಾಗಿರುವ (ಆವಾಸ) ಲೀಲಾಪ್ರಿಯನಾದ ಪರಮಾತ್ಮನ ಪಾದಾರವಿಂದವನ್ನು ನೀನು ಗಟ್ಟಿಯಾಗಿ ಹಿಡಿದುಕೋ.

Wednesday, June 29, 2011

ಲೀನಮುಂ ವಿಶದಮುಂ ಸಕ್ಕರೆಯು ನೀರಿನೊಳು (33)

ಲೀನಮುಂ ವಿಶದಮುಂ ಸಕ್ಕರೆಯು ನೀರಿನೊಳು |
ಪಾನಕಂ ಬಾಯ್ಗೆ ಸವಿ ಕಣ್ಗೆಕೈಗಿರದು ||
ನೀನಂತು ವಿಶ್ವಜೀವನಕಾಗು ಸನ್ಮಿತ್ರ |
ನೀನಾಗು ನಾನಿರದೆ - ಮರುಳ ಮುನಿಯ || (೩೩)

 (ನೀನ್+ಅಂತು)(ವಿಶ್ವಜೀವನಕೆ+ಆಗು)(ನೀನ್+ಆಗು)(ನಾನ್+ಇರದೆ)


 ಸಕ್ಕರೆಯು ನೀರಿನಲ್ಲಿ ಕರಗಿ(ಲೀನ)ಹೋದರೂ ಸಹ ಅದು ಪಾನಕವಾಗಿ ಅದರ ರುಚಿಯು ಬಾಯಿಗೆ ಸ್ಪಷ್ಟ(ವಿಶದ)ವಾಗಿ ತಿಳಿಯುತ್ತದೆ. ಆದರೆ ಅದು ಕಣ್ಣಿಗೆ ಗೋಚರವಾಗುವುದಿಲ್ಲ ಮತ್ತು ಕೈಗೆ ಸಿಗುವುದಿಲ್ಲ. ಇದೇ ರೀತಿ ನೀನೂ ಸಹ ಈ ಪ್ರಪಂಚದ ಜೀವನದಲ್ಲಿ ಒಳ್ಳೆಯ ಸ್ನೇಹಿತನಾಗಿ ಬಾಳು. ನಾನು ಎಂಬ ಅಹಂಕಾರವಿರದೆ ಬಾಳು.

Tuesday, June 28, 2011

ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು (32)

ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು |
ಅವ್ಯಾಜದಿಂ ಚಿತ್ತು ಲೀಲಿಸೆ ಜಗತ್ತು ||
ಸುವ್ಯಕ್ತ ಸಚ್ಚಿದಾನಂದಮೆ ಸಕಲ ಜಗತ್ತು |
ಸೇವ್ಯವದು ಸರ್ವರ್ಗೆ - ಮರುಳ ಮುನಿಯ || (೩೨)

 (ವ್ಯಕ್ತ+ಅಹೆನ್+ನೆ)(ಸೇವ್ಯವು+ಅದು)

ಅಸ್ಪಷ್ಟ (ಅವ್ಯಕ್ತ)ವಾಗಿರುವ ಸತ್ತ್ವ(ಸತ್ತು)ವು ತಾನೇ ಸ್ಪಷ್ಟ(ವ್ಯಕ್ತ)ವಾಗಿರುವೆನೆಂದರೆ ಅದು ಚೈತನ್ಯ (ಚಿತ್ತು)ವಾಗುತ್ತದೆ. ಚೈತನ್ಯವು ಸಹಜವಾಗಿ (ಅವ್ಯಾಜದಿಂ) ಆಟವಾಡಿದರೆ ಅದೇ ಈ ಪ್ರಪಂಚ. ಸ್ಪಷ್ಟವಾಗಿ ಗೋಚರಿಸುವ (ಸುವ್ಯಕ್ತ), ಇರುವಿಕೆ, ಜ್ಞಾನ ಮತ್ತು ಆನಂದಗಳು ಸೇರಿದ ಪರಮಾತ್ಮನೇ (ಸಚ್ಚಿದಾನಂದ) ಈ ಸಂಪೂರ್ಣ (ಸಕಲ) ಜಗತ್ತು. ಅವನು ಎಲ್ಲರಿಂದ ಪೂಜಿಸಲ್ಪಡಲು ಅರ್ಹನಾದವನು (ಸೇವ್ಯ).

ಲೀಲೆಗೆಂದೀಜಗವ ರಚಿಸಿ ಲೀಲೆಗೆ ತಾನೆ (31)

ಲೀಲೆಗೆಂದೀಜಗವ ರಚಿಸಿ ಲೀಲೆಗೆ ತಾನೆ |
ಮೂಲಾದಿಯೆನಿಪವೋಲ್ ನಾಮರೂಪಗಳ ||
ಚೀಲಂಗಳೊಳ್ಗವಿತು ಜಗವ ವೀಕ್ಷಿಸುತಿರ‍್ಪ |
ಪಾಲಕನ ನೆನೆ ಮಣಿದು - ಮರುಳ ಮುನಿಯ || (೩೧)

(ಲೀಲೆಗೆ+ಎಂದು++ಜಗವ)(ಮೂಲ+ಆದಿ+ಎನಿಪವೋಲ್)(ಚೀಲಂಗಳ+ಒಳ್ಗೆ+ಅವಿತು)(ವೀಕ್ಷಿಸುತ+ಇರ‍್ಪ)

ಆಟವಾಡುವುದಕ್ಕೋಸ್ಕರ ಈ ಪ್ರಪಂಚವನ್ನು ನಿರ್ಮಿಸಿ, ಆ ಆಟಕ್ಕೆ ತಾನೇ ಹುಟ್ಟು (ಮೂಲ) ಮತ್ತು ಮೊದಲು (ಆದಿ) ಎನ್ನಿಸುವಂತೆ, ಹಲವಾರು ಹೆಸರು ಮತ್ತು ಆಕಾರಗಳಿಂದ ಕೂಡಿದ, ಈ ದೇಹಗಳೆಂಬ ಚೀಲಗಳ ಒಳಗೆ ಬಚ್ಚಿಟ್ಟು (ಅವಿತು)ಕೊಂಡು ಪ್ರಪಂಚವನ್ನು ನೋಡುತ್ತಿರುವ (ವೀಕ್ಷಿಸುತ+ಇರ‍್ಪ), ಮತ್ತು ಅದನ್ನು ಕಾಪಾಡುತ್ತಿರುವ (ಪಾಲಕನ) ಪರಮಾತ್ಮನನ್ನು ಸ್ಮರಿಸಿಕೊಂಡು ನಮಸ್ಕರಿಸು.

Friday, June 24, 2011

ಪ್ರಕಟರಂಗದೊಳಾರು ನಿಜ ಬಾಲರನು ವಿವಿಧ (30)

ಪ್ರಕಟರಂಗದೊಳಾರು ನಿಜ ಬಾಲರನು ವಿವಿಧ |
ವಿಕಲ ಪಾತ್ರದ ನಟನೆಯಾಡುವುದ ನೋಡಿ ||
ಸಕಲ ತಾನಿರುತ ಗೂಢದಲಿ ನಲಿಯುತ್ತಲಿಹ |
ವಿಕಟರಸಿಕಂಗೆ ನಮೊ -ಮರುಳ ಮುನಿಯ || (೩೦)

(ಪ್ರಕಟರಂಗದ+ಒಳು+ಆರು)(ನಟನೆ+ಆಡುವುದ)(ತಾನ್+ಇರುತ)(ನಲಿಯುತ್ತಲ್+ಇಹ)


ಈ ಪ್ರಪಂಚ ಒಂದು ನಾಟಕವನ್ನು ಪ್ರದರ್ಶಿಸುವ ಸ್ಥಳ. ಪ್ರಕಾಶಕ್ಕೆ ಬಂದಿರುವ ಈ ನಾಟಕರಂಗದಲ್ಲಿ ತನ್ನ ಸ್ವಂತ ಮಕ್ಕಳ ವಿಧವಿಧವಾದ ಅಪೂರ್ಣವಾದ (ವಿಕಲ) ಪಾತ್ರಗಳ ನಟನೆಯನ್ನು ನೋಡಿ, ತಾನು ಎಲ್ಲದರಲ್ಲಿಯೂ ರಹಸ್ಯವಾಗಿರುತ್ತ ಆನಂದದಿಂದಿರುವ, ವ್ಯಂಗದಿಂದ ಕೂಡಿರುವ ರಸಿಕನಿಗೆ ನಮಸ್ಕಾರ (ನಮೋ).

Thursday, June 23, 2011

ಜಾಗರೂಕತೆ ಸಹನೆ ಸದಸದ್ವಿವೇಕಮೀ (29)

ಜಾಗರೂಕತೆ ಸಹನೆ ಸದಸದ್ವಿವೇಕಮೀ |
ತ್ರೈಗುಣ್ಯ ನೀಗುವುದು ಬಹು ಕಷ್ಟಗಳನು ||
ಆಗದೊಡೆ ದೈವಕ್ಕೆ ತಲೆಬಾಗು ಶರಣೆಂದು |
ಬಾಗು ತಲೆಯನು ನಗುತ - ಮರುಳ ಮುನಿಯ || (೨೯)

(ಸತ್+ಆಸತ್+ವಿವೇಕಂ+) (ಶರಣು+ಎಂದು)

ಸದಾ ಜಾಗರೂಕನಾಗಿ ಎಚ್ಚರತಪ್ಪದಿರುವುದು, ಮಾಡುವ ಕೆಲಸ ಕಾರ್ಯಗಳನ್ನು ಸಹನೆಯಿಂದ ಮಾಡುವುದು ಮತ್ತು ಯಾವುದು ಒಳಿತು ಮತ್ತು ಯಾವುದು ಕೆಟ್ಟದ್ದು ಎನ್ನುವ ವಿವೇಚನೆಯನ್ನು ಬೆಳಸಿಕೊಳ್ಳುವುದು, ಈ ಮೇಲಿನ ಮೂರು ಸ್ವಭಾವ(ತ್ರೈಗುಣ್ಯ)ಗಳ ಅಭ್ಯಾಸದಿಂದ ನಾವು ನಮ್ಮ ಬಹುತೇಕ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ಈ ರೀತಿಯ ಅಭ್ಯಾಸದಿಂದಲೂ ಕಾರ್ಯಸಿದ್ಧಿ ಆಗದಿದ್ದಲ್ಲಿ ಆ ದೈವಕ್ಕೆ ತಲೆಬಗ್ಗಿಸಿ ಮೊರೆಹೋಗು. ನಗುತ್ತಾ ತಲೆಯನ್ನು ಬಗ್ಗಿಸು.


 ಇಲ್ಲಿ ಮೊರೆಹೋಗು ಎಂದರೆ ನಿನ್ನಿಂದಾಗದ ಕೆಲಸವನ್ನು ದೇವರಲ್ಲಿ ಬೇಡು ಎನ್ನುವುದಲ್ಲ. ನಿನ್ನೆಲ್ಲಾ ಪ್ರಯತ್ನವೂ ವಿಫಲವಾಗಿ ಕಷ್ಟವು ನಿವಾರಣೆ ಆಗದಿದ್ದಾಗ, ’ನೋವ ನೀಂ ಪಡುವದೇ ದೈವೇಚ್ಛೆಎಂದುಕೊಂಡು ಆ ಕಷ್ಟವನ್ನು ಸಹಿಸಿಕೊಳ್ಳುತ್ತಾ, ನಗುತ್ತಾ ದೇವರ ಮುಂದೆ ಶರಣುಹೋಗು.

Tuesday, June 21, 2011

ಶ್ರೀಮಂತನಾರ್ ತನ್ನ ಸಿರಿವಂತಿಕೆಯ ವಿಭವ (28)

ಶ್ರೀಮಂತನಾರ್ ತನ್ನ ಸಿರಿವಂತಿಕೆಯ ವಿಭವ |
ಸಾಮರ್ಥ್ಯಗಳ ನೋಡಿ ಸಂತಸಿಸಲೆಂದೀ |
ಭೂಮ್ಯಾದಿಯಿಂ ಜಗದ್ದರ್ಪಣವ ರಚಿಸಿಹನೊ |
ಆ ಮಹಾತ್ಮಂಗೆ ನಮೊ - ಮರುಳ ಮುನಿಯ || (೨೮)

(ಶ್ರೀಮಂತನ್+ಆರ್)(ಸಂತಸಿಸಲ್+ಎಂದು+)(ಭೂಮಿ+ಅದಿಯಿಂ)(ಜಗತ್+ದರ್ಪಣವ)


 ಯಾವ ಐಶ್ವರ್ಯವಂತನು, ತನ್ನ ಶ್ರೀಮಂತಿಕೆಯ ವೈಭವ(ವಿಭವ)ಗಳ ಶಕ್ತಿ ಮತ್ತು ಕೆಚ್ಚುಗಳನ್ನು ಕಂಡು ಸಂತೋಷಿಸಲೆಂದು (ಸಂತಸಿಸಲೆಂದು) ಈ ಭೂಮಿ, ಇತ್ಯಾದಿಗಳಿಂದ ಈ ಪ್ರಪಂಚವೆಂಬ ಕನ್ನಡಿಯನ್ನು (ದರ್ಪಣ) ನಿರ್ಮಿಸಿದನೋ, ಆ ಮಹಾತ್ಮನಿಗೆ ನಮಸ್ಕಾರ.

Friday, June 17, 2011

ಜಗಕೆಲ್ಲ ಕಾರಣಂ ಪ್ರೇರಣಂ ಧಾರಣಂ (27)

ಜಗಕೆಲ್ಲ ಕಾರಣಂ ಪ್ರೇರಣಂ ಧಾರಣಂ |
ಭಗವಂತನೆಂಬೊಂದದೇನೊ ಇಹುದಲ್ತೆ ||
ಬಗೆವ ನಾಮದರ ಸಂಬಂಧಗಳ ಗೂಢಮದು |
ಮುಗಿವ ಕೈಗಳನದಕೆ - ಮರುಳ ಮುನಿಯ || (೨೭)

(ಭಗವಂತನ್+ಎಂಬ+ಒಂದು+ಅದು+ಏನೊ) (ಇಹುದು+ಅಲ್ತೆ) (ನಾಂ+ಅದರ) (ಗೂಢಂ+ಅದು)(ಕೈಗಳನ್+ಅದಕೆ)


 ಈ ಪ್ರಪಂಚವು ಹುಟ್ಟಿ, ಇರುವುದಕ್ಕೆ ಕಾರಣಕರ್ತ, ಇದನ್ನು ನಿರ್ಮಿಸಿ, ನಿಭಾಯಿಸುವುದಕ್ಕೆ ಪ್ರಚೋದಕನು ಮತ್ತು ಇದನ್ನು ನಡೆಯಿಸುವುದಕ್ಕೆ ಆಧಾರವಾಗಿರುವ (ಧಾರಣಂ) ಭಗವಂತನೆಂಬ ಯಾವುದೋ ಒಂದು ವಸ್ತು ಇದೆ ತಾನೆ ! ನಾವು ಅದರ ಈ ಸಂಬಂಧಗಳ ಬಗ್ಗೆ ಯೋಚಿಸಿ(ಬಗೆವ)ದರೆ ಅದು ರಹಸ್ಯ(ಗೂಢ)ವಾಗಿರುವುದು ಕಂಡುಬರುತ್ತದೆ. ನಾವು ಆ ರಹಸ್ಯಕ್ಕೆ ಕೈ ಮುಗಿಯೋಣ.

Thursday, June 16, 2011

ದೈವವೊಂದೇ ಸತ್ತ್ವವದರ ನೆರಳೆ ಜಗತ್ತು (26)

ದೈವವೊಂದೇ ಸತ್ತ್ವವದರ ನೆರಳೆ ಜಗತ್ತು |
ಆವಗಮದೆಲ್ಲೆಡೆಯು ಗೂಢಮಿರುತಿಹುದು ||
ನೋವು ಸಾವುಗಳೆಲ್ಲವಿರುವುದರ ದವಲತ್ತು |
ನಾವದಕೆ ಮಣಿವಮೆಲೊ- ಮರುಳ ಮುನಿಯ || (೨೬)

 (ದೈವವು+ಒಂದೇ)(ಸತ್ತ್ವ+ಅದರ)(ಆವಗಮ್+ಅದು+ಎಲ್ಲೆಡೆಯು)(ಗೂಢಮ್+ಇರುತ+ಇಹುದು)(ಸಾವುಗಳು+ಎಲ್ಲ+ಇರುವುದರ)(ನಾವು+ಅದಕೆ)(ಮಣಿವಂ+ಎಲೊ)


ದೇವರು ಒಂದೇ ಸತ್ತ್ವ. ಆ ಸತ್ತ್ವದ ನೆರಳೇ ಈ ಜಗತ್ತು. ಈ ಸತ್ತ್ವವು ಯಾವಾಗಲೂ (ಆವಗ್ಂ) ಎಲ್ಲೆಲ್ಲಿಯೂ (ಎಲ್ಲೆಡೆಯು) ರಹಸ್ಯ(ಗೂಢ)ವಾಗೇ ಇರುತ್ತದೆ. ನಾವುಗಳು ಪಡುವ ನೋವು ಮತ್ತು ಅನುಭವಿಸುವ ಸಾವುಗಳೆಲ್ಲವೂ ಇದರ ಅಧಿಕಾರದ ದರ್ಪ(ದವಲತ್ತು)ದಿಂದ ನಡೆಯುತ್ತದೆ. ನಾವು ಈ ರಹಸ್ಯವಾಗಿರುವ ಸತ್ತ್ವಕ್ಕೆ ನಮಸ್ಕರಿಸೋಣ (ಮಣಿವಂ).

Wednesday, June 15, 2011

ದೇವನೋ ಧರ್ಮವೋ ಕಾಲವೋ ಕರ್ಮವೋ (25)

ದೇವನೋ ಧರ್ಮವೋ ಕಾಲವೋ ಕರ್ಮವೋ |
ದೇವಿಯೋ ತತ್ತ್ವವೋ ಸ್ವಾಮಿಯೋ ವಿಭುವೋ ||
ಪಾವನಾತ್ಮವೋ ಸಾಕ್ಷಿಯೋ ಪರಬ್ರಹ್ಮವೋ |
ಆವಗಂ ನತಿಯವಗೆ -ಮರುಳ ಮುನಿಯ || (೨೫)

(ಪಾವನ+ಆತ್ಮವೋ)(ನತಿ+ಅವಗೆ)

 ಅವನನ್ನು ನಾವು ನಾನಾ ವಿಧವಾದ ಹೆಸರುಗಳಿಂದ ಗುರುತಿಸಬಹುದು. ಅವನು ದೇವರಾಗಿರಬಹುದು. ಧರ್ಮದ ಪ್ರತಿರೂಪವಾಗಿರಬಹುದು. ಅಕ್ಷಯವಾಗಿರುವ ಕಾಲವಾಗಿರಬಹುದು, ಅವನನ್ನೇ ಕರ್ಮವೆಂದೆನ್ನಬಹುದು. ಪೂಜಿಸಲ್ಪಡುವ ದೇವಿಯೆಂದೆನ್ನಬಹುದು. ಗಹನವಾದ ಸಿದ್ಧಾಂತವೇ ಅವನೆನ್ನಬಹುದು. ಗುರುವೆಂದೆನ್ನಬಹುದು. ಒಡೆಯ(ವಿಭು)ನೆಂದೆನ್ನಬಹುದು. ಪವಿತ್ರವಾದ (ಪಾವನ) ಆತ್ಮವೆಂದೆನ್ನಬಹುದು. ಈ ಲೋಕದಲ್ಲಿ ನಡೆಯುವ ಆಗುಹೋಗುಗಳಿಗೆಲ್ಲಾ ಸಾಕ್ಷಿಯೆಂದೆನ್ನಬಹುದು ಅಥವಾ ಅವನನ್ನು ನಾವು ಪರಬ್ರಹ್ಮನೆಂದು ಗುರುತಿಸಬಹುದು. ಅವನು ಈ ಮೇಲ್ಕಂಡ ಯಾರೇ ಆಗಲಿ ಯಾವಾಗಲೂ (ಆವಗ್ಂ) ಅವನಿಗೆ ನಮಸ್ಕಾರ (ನತಿ).

Tuesday, June 14, 2011

ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ (24)

ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ |
ನೂರು ನೂರಾಕೃತಿ ವಿಲಾಸ ವಿಭವಗಳಿಂ- ||
ದಾರಾಧನೆಯನಾವನಂಗೀಕರಿಪನೊ ಅವ-|
ನೋರುವಂಗೀ ನಮನ -ಮರುಳ ಮುನಿಯ || (೨೪)


(ವಿಭವಗಳಿಂದ+ಆರಾಧನೆಯನು+ಆವನ್+ಅಂಗೀಕರಿಪನೊ)(ಅವನ್+ಓರುವಂಗೆ+)


 ನೂರಾರು ಗುಡಿಗಳಲ್ಲಿ ನೂರಾರು ಹೆಸರುಗಳಲ್ಲಿ, ನೂರಾರು ಆಕಾರ, ಬೆಡಗು ಮತ್ತು ವೈಭವ(ವಿಭವ)ಗಳಿಂದ ಯಾವನು ಪೂಜೆಯನ್ನು (ಆರಾಧನೆ) ಒಪ್ಪಿಸಿಕೊಳ್ಳುತ್ತಿರುವನೋ ಆ ಒಬ್ಬನಿಗೆ (ಓರುವಂಗೆ) ಈ ನಮಸ್ಕಾರವನ್ನು ಸಲ್ಲಿಸುತ್ತಿದ್ದೇನೆ.

Monday, June 13, 2011

ಒಬ್ಬಂಟಿ ದೈವವದು ಹಬ್ಬದೂಟವನೆಳಸಿ (23)

ಒಬ್ಬಂಟಿ ದೈವವದು ಹಬ್ಬದೂಟವನೆಳಸಿ |
ಇಬ್ಬರಾಟಕ್ಕಿಳಿದು ಹಲವಾಗಿ ಮತ್ತೆ ||
ದಿಬ್ಬಣವ ನಡಸುತಿಹುದುಬ್ಬಿದೀ ಲೋಕದಲಿ |
ಅದ್ಭುತಕೆ ನಮಿಸೆಲವೊ-ಮರುಳ ಮುನಿಯ || (೨೩)

 (ದೈವವು+ಅದು)(ಹಬ್ಬದ+ಊಟವನು+ಎಳಸಿ)(ಇಬ್ಬರ+ಆಟಕ್ಕೆ+ಇಳಿದು) (ನಡಸುತ+ಇಹುದು+ಉಬ್ಬಿದ+)(ನಮಿಸು+ಎಲವೊ)

 ಒಬ್ಬನೇ ಒಬ್ಬನಾಗಿರುವ ದೈವವು ಹಬ್ಬದ ಊಟವನ್ನು ಬಯಸಿ(ಎಳಸಿ) ಎರಡು ಮಂದಿ ಆಡುವ ಆಟವನ್ನಾಡಲು ಪ್ರಾರಂಭಿಸಿ, ಅದರಿಂದ ಅದು ಬಹುಮಂದಿಯಾಯಿತು. ಆ ದೈವವೇ ಪುನಃ ಮದುವೆಯ ಮೆರವಣಿಗೆ(ದಿಬ್ಬಣ)ಯನ್ನು, ಹಿಗ್ಗಿ ಬೀಗುತ್ತಿರುವ ಈ ಪ್ರಪಂಚದಲ್ಲಿ ನಡೆಸುತ್ತಿದೆ. ಈ ಅದ್ಭುತವಾಗಿರುವ ಸೋಜಿಗಕ್ಕೆ ನಮಸ್ಕರಿಸು.

Thursday, June 9, 2011

ಇರುವುದೊಂದೆಂದೆಂದುಮೆತ್ತೆತ್ತಲುಂ ಮರೆಯೊಳ್ (22)

ಇರುವುದೊಂದೆಂದೆಂದುಮೆತ್ತೆತ್ತಲುಂ ಮರೆಯೊಳ್ |
ಇರುವುದದು ಹೆರುವುದದು ಹೊರುವುದೆಲ್ಲವದು ||
ಪಿರಿದು ತಾನಾಗಿರುವ ಕಿರಿದೆನಿಪುದೆಲ್ಲವನು |
ಶರಣು ಅವೊಂದಕ್ಕೆ - ಮರುಳ ಮುನಿಯ || (೨೨)
 (ಇರುವುದು+ಒಂದು+ಎಂದೆಂದುಂ+ಎತ್ತೆತ್ತಲುಂ) (ಹೊರುವುದು+ಎಲ್ಲ+ಅದು) (ಕಿರಿದು+ಎನಿಪುದು+ಎಲ್ಲವನು)

 ಆ ಬ್ರಹ್ಮ ವಸ್ತು ಒಂದೇ ಒಂದು ಹೌದು. ಅದು ಎಲ್ಲೆಲ್ಲಿಯೂ ಮತ್ತು ಎಂದೆಂದಿಗೂ ಇರುವ ವಸ್ತು. ಅದು ಬಚ್ಚಿಟ್ಟುಕೊಂಡಿರುತ್ತದೆ. ಅದು ಇರುತ್ತದೆ, ಸೃಷ್ಟಿಕಾರ್ಯವನ್ನು ಮಾಡುತ್ತದೆ ಮತ್ತು ಭೂಮಿಯ ರಕ್ಷಣಾಭಾರವನ್ನು ಹೊರುತ್ತದೆ. ಅದು ಹಿರಿದಾ(ಪಿರಿದು)ಗಿದ್ದು ಪ್ರಪಂಚದಲ್ಲಿರುವ ಮಿಕ್ಕೆಲ್ಲವನ್ನೂ ಚಿಕ್ಕದೆಂದಿ(ಕಿರಿದು)ನಿಸುವಂತೆ ಮಾಡುತ್ತದೆ. ಆ ವಸ್ತುವಿಗೆ ನಮಸ್ಕರಿಸು.

Wednesday, June 8, 2011

ಒಂದಿರುವುದೆಂದೆಂದುಮೊಂದು ತಾನೇ ತಾನು (21)

ಒಂದಿರುವುದೆಂದೆಂದುಮೊಂದು ತಾನೇ ತಾನು |
ಹಿಂದೆನಿಪುದಿಲ್ಲ ಮುಂದೆನಿಪುದಿಲ್ಲೆತ್ತಲ್ ||
ಸಂದಿನಲಿ ಬಯಲಿನಲಿ ಬೀಡಿನಲಿ ಕಾಡಿನಲಿ |
ವಂದಿಸೊ ಅದೊಂದಕ್ಕೆ-ಮರುಳ ಮುನಿಯ || (೨೧)

 (ಒಂದಿರುವುದು+ಎಂದೆಂದುಂ+ಒಂದು) (ಹಿಂದೆ+ಎನಿಪುದು+ಇಲ್ಲ) (ಮುಂದೆ+ಎನಿಪುದು+ಇಲ್ಲ+ಎತ್ತಲ್)

 ಎಂದೆಂದಿಗೂ ತಾನೇ ತಾನಾಗಿ ಇರುವಂತಹ ವಸ್ತು ಒಂದೇ ಒಂದು ಇದೆ. ಅದು ಪರಬ್ರಹ್ಮ ವಸ್ತು. ಅದಕ್ಕೆ ಹಿಂದೆ ಎನ್ನಿಸುವುದು ಯಾವುದೂ ಇಲ್ಲ. ಮುಂದೆ ಎನ್ನಿಸುವುದೂ ಎಲ್ಲಿಯೂ ಕಾಣಸಿಗುವುದಿಲ್ಲ. ಸಂದುಗೊಂದುಗಳಲ್ಲಿ, ವಿಸ್ತಾರವಾಗಿರುವ ಬಯಲಿನಲ್ಲಿ, ಎಲ್ಲರೂ ವಾಸಿಸುವ ಮನೆ(ಬೀಡು)ಗಳಲ್ಲಿ, ಕಡೆಗೆ ಕಾಡುಮೇಡುಗಳಲ್ಲಿ ಹಾಗೆಯೇ ನೀನು ಎಲ್ಲಿದ್ದರೆ ಅಲ್ಲೇ ಆ ವಸ್ತುವಿಗೆ ನಮಸ್ಕರಿಸು.

Monday, June 6, 2011

ಸಾಗರಂ ಬ್ರಹ್ಮವದರಿಂದೆ ತಾತ್ಕಾಲದುಪ- (20)

ಸಾಗರಂ ಬ್ರಹ್ಮವದರಿಂದೆ ತಾತ್ಕಾಲದುಪ- |
ಯೋಗಕಾಗಿಹ ಕಾಲ್ವೆಯೆಲ್ಲ ದೇವರ‍್ಕಳ್ ||
ವಾಗೀಶ ಲಕ್ಷ್ಮೀಶ ಗೌರೀಶಮುಖರೆಲ್ಲ |
ರಾಗ ಭೋಗಕ್ಕಲ್ತೆ - ಮರುಳ ಮುನಿಯ || (೨೦)

(ಬ್ರಹ್ಮ+ಅದರಿಂದೆ)(ತಾತ್ಕಾಲದ+ಉಪಯೋಗಕೆ+ಆಗಿಹ)(ಭೋಗಕ್ಕೆ+ಅಲ್ತೆ)

ಸಾಗರ ಬ್ರಹ್ಮ. ಆ ಜಲಾಶಯದಿಂದ ಹೊರಡುವ ಆ ಸಮಯಕ್ಕೆ ಮಾತ್ರ ಉಪಯೋಗವಾಗುವ ಕಾಲುವೆಗಳೆಲ್ಲವೂ ದೇವರುಗಳಿದ್ದಂತೆ. ಬ್ರಹ್ಮ(ವಾಗೀಶ), ವಿಷ್ಣು(ಲಕ್ಷ್ಮೀಶ) ಮತ್ತು ಶಿವ(ಗೌರೀಶ)ರ ಮುಖಗಳೆಲ್ಲವೂ ಪ್ರೀತಿ(ರಾಗ) ಮತ್ತು ಸುಖಾನುಭವ(ಭೋಗ)ಗಳಿಗೋಸ್ಕರ ತಾನೆ?

Friday, June 3, 2011

ಲೀನಂ ಪರಬ್ರಹ್ಮದೊಳಗಿರ್ದನಾತ್ಮ ತಾಂ (19)

ಲೀನಂ ಪರಬ್ರಹ್ಮದೊಳಗಿರ್ದನಾತ್ಮ ತಾಂ |
ಕ್ಷೋಣೀವಿಲಾಸದೊಳು ತಾನು ಬೇರೆನಿಪಾ ||
ಮಾನುಷ್ಯವನು ತಳೆದು ನಾನಾಕೃತಿಯ ತಾಳಿ |
ಹೀನತೆಯ ಪಡುತಿಹನೊ - ಮರುಳ ಮುನಿಯ || (೧೯)

(ಪರಬ್ರಹ್ಮದೊಳಗೆ+ಇರ್ದನ್+ಆತ್ಮ)(ಬೇರೆ+ಎನಿಪಾ)(ನಾನಾ+ಆಕೃತಿಯ)(ಪಡುತ+ಇಹನೊ)

 ಪರಬ್ರಹ್ಮನಲ್ಲಿ ಸಂಪೂರ್ಣವಾಗಿ ಸೇರಿಹೋಗಿದ್ದ ಆತ್ಮನು ಈ ಪ್ರಪಂಚ(ಕ್ಷೋಣೀ)ದ ವಿನೋದಗಳಲ್ಲಿ ತಾನು ಬೇರೆಯೇ ಎನ್ನಿಸುವ ಮನುಷ್ಯಜನ್ಮವನ್ನು (ಮಾನುಷ್ಯವನು) ಪಡೆದು (ತಳೆದು) ವಿಧ ವಿಧವಾದ ಆಕಾರಗಳನ್ನು ಧರಿಸಿಕೊಂಡು ಹೀನದಶೆಯನ್ನು ಅನುಭವಿಸುತ್ತಿರುವನು.

Thursday, June 2, 2011

ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು (18)


ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು |
ಮುಳುಗಿ ತಡಕಾಡಿ ಮೇಲ್ಬಂದು ದಡ ಸೇರ‍್ವ ||
ಕಡಲಾಡಿವೋಲ್ಬೊಮ್ಮಚೈತನ್ಯವಾಡುವುದು |
ಪೊಡವಿಯಾ ಮಡುವಿನಲಿ - ಮರುಳ ಮುನಿಯ || (೧೮)

(ಕಣ್+ಮೂಗುಗಳ) (ಕಡಲಾಡಿ+ವೋಲ್+ಬೊಮ್ಮ+ಚೈತನ್ಯವು+ಆಡುವುದು)

ಕಣ್ಣು ಮತ್ತು ಮೂಗುಗಳನ್ನು ಬಿಗಿದುಕೊಂಡು ಸಮುದ್ರ(ಕಡಲು)ದೊಳಕ್ಕೆ ಅದರಲ್ಲಿ ಮುಳುಗಿ ತಡಕಾಡಿ ನಂತರ ಮೇಲೆ ಬಂದು ದಡವನ್ನು ಸೇರುವ ಕಡಲಾನ್ವೇಷಕನಂತೆ (ಕಡಲಾಡಿ) ಪರಬ್ರಹ್ಮನ ಚೇತನದ ಶಕ್ತಿ ಈ ಪ್ರಪಂಚದ (ಪೊಡವಿ) ಮಡುವಿನಲ್ಲಿ ಆಡುತ್ತಿರುತ್ತದೆ.

Wednesday, June 1, 2011

ಇರುವುದೊಂದೋ ಎರಡೊ ಎರಡರಂತೆಸೆವೊಂದೊ (17)

ಇರುವುದೊಂದೋ ಎರಡೊ ಎರಡರಂತೆಸೆವೊಂದೊ |
ಅರೆಮರೆಯೊಳಿಪ್ಪುದೇನದು ಲೆಕ್ಕಕಿಲ್ಲ ||
ಸ್ಥಿರದಿರ್ಕೆಯೇ ಇರ‍್ಕೆ ಧರಣಿಯೊಳ್ ಸ್ಥಿರಮೆಲ್ಲಿ? |
ಪರಮಾತ್ಮನೇ ಸ್ಥಿರವು - ಮರುಳ ಮುನಿಯ || (೧೭)

 (ಇರುವುದು+ಒಂದೋ) (ಎರಡರಂತೆ+ಎಸೆವ+ಒಂದೊ) (ಅರೆಮರೆಯೊಳು+ಇಪ್ಪುದು+ಏನದು) (ಸ್ಥಿರದ+ಇರ್ಕೆಯೇ) (ಧರಣಿಯ+ಒಳ್)(ಸ್ಥಿರಂ+ಎಲ್ಲಿ)

 ಪ್ರಪಂಚದಲ್ಲಿರುವುದು ಒಂದೋ ಅಥವಾ ಎರಡೊ? ಇಲ್ಲ ಎರಡರಂತೆ ಶೋಭಿಸುವ (ಎಸೆವ) ಒಂದೇ ಒಂದೊ? ಪರಮಾತ್ಮನು ಒಬ್ಬನೇ ಆದರೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡು ಮೆರೆಯುತ್ತಿರುವನೋ? ಅರ್ಧಂಬರ್ಧ ಮರೆಯಲ್ಲಿರುವುದನ್ನು ಗಣನೆಗೆ ತೆಗೆದುಕೊಳ್ಳಲಿಕ್ಕಾಗುವುದಿಲ್ಲ. ಅವು ಬೇಕಾದಷ್ಟಿವೆ. ಯಾವುದು ನಿಶ್ಚಿತವಾಗಿ ಕಾಣುತ್ತದೋ ಅಥವಾ ನಮ್ಮನುಭವಕ್ಕೆ ಬರುವುದೋ ಅದನ್ನು ಮಾತ್ರ ನಾವು ಗಣನೆಗೆ ತೆಗೆದುಕೊಳ್ಳಲು ಸಾಧ್ಯ. ದೃಢವಾಗಿರುವುದರ ಇರುವಿಕೆಯೇ ನಿಜವಾದ ಇರುವಿಕೆ. ಆದರೆ ಈ ಭೂಮಿಯಲ್ಲಿ ಎಲ್ಲವೂ ಪ್ರತಿಕ್ಷಣ ಬದಲಾಗುತ್ತಿರುವಾಗ ದೃಢವಾಗಿರುವುದು ಯಾವುದೂ ಇಲ್ಲ. ಪರಮಾತ್ಮನೊಬ್ಬನೇ ದೃಢವಾಗಿರುವುದು. ಮಿಕ್ಕಿದ್ದೆಲ್ಲವೂ ಪ್ರತಿಕ್ಷಣವೂ ಬದಲಾಗುತ್ತಿರುತ್ತದೆ.