Monday, December 31, 2012

ಒಲಿದೊಲಿದು ಸಾರುವಳು ಕಣ್ಹೊಳಪ ಬೀರುವಳು (340)

ಒಲಿದೊಲಿದು ಸಾರುವಳು ಕಣ್ಹೊಳಪ ಬೀರುವಳು |
ಕಿಲಕಿಲನೆ ನಗಿಸುವಳು ಕಚಕುಳಿಗಳಿಕ್ಕಿ ||
ಮಲಗಿ ನೀಂ ನಿದ್ರಿಸಿರೆ ಕುಳಿಯೊಳಕ್ಕುರುಳಿಪಳು |
ಛಲಗಾತಿಯೋ ಪ್ರಕೃತಿ - ಮರುಳ ಮುನಿಯ || (೩೪೦)

(ಒಲಿದು+ಒಲಿದು)(ಕಣ್+ಹೊಳಪ)(ಕಚಕುಳಿಗಳ್+ಇಕ್ಕಿ)(ನಿದ್ರಿಸಿ+ಇರೆ)(ಕುಳಿಯೊಳ್+ಒಕ್ಕು+ಉರುಳಿಪಳು)

ನಿನ್ನನ್ನು ಇಷ್ಟಪಟ್ಟು ಮೋಹಿಸಿ ಹತ್ತಿರ ಬರುತ್ತಾಳೆ (ಸಾರುವಳು). ತನ್ನ ಕಣ್ಣುಗಳಿಂದ ಕಾಂತಿಯನ್ನು ಬೀರುತ್ತಾಳೆ. ನಿನಗೆ ಕಚಕುಳಿಯಿಕ್ಕಿ ಕಿಲಕಿಲನೆ ನಗುವಂತೆ ಮಾಡುತ್ತಾಳೆ. ನೀನೇನಾದರೂ ಮೈಮರೆತು ಮಲ...ಗಿಕೊಂಡು ನಿದ್ರೆ ಮಾಡಿದರೆ, ನಿನ್ನನ್ನು ಒಂದು ಹಳ್ಳ(ಕುಳಿ)ದೊಳಕ್ಕೆ ತಳ್ಳಿ ಬೀಳಿಸುತ್ತಾಳೆ. ಪ್ರಕೃತಿಯು ಬಹಳ ಹಟಮಾರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Appearing to be much pleased she comes near and throws enchanting glances
She tickles you and makes you laugh in ringing ripples
When you are fast asleep she hurls you into a ditch
Very obstinate in Nature – Marula Muniya (340)
(Translation from "Thus Sang Marula Muniya" by Sri. Narasimha Bhat)

Friday, December 28, 2012

ಬಳಿಗೆ ಬಾರೆನ್ನುವಳು ಕರೆ ಕರೆದು ಮುದ್ದಿಪಳು (339)

ಬಳಿಗೆ ಬಾರೆನ್ನುವಳು ಕರೆ ಕರೆದು ಮುದ್ದಿಪಳು |
ಫಲಪುಷ್ಪ ಮಣಿಕನಕವಿತ್ತು ನಲಿಸುವಳು ||
ನಲಿದು ನೀಂ ಮೈಮರೆಯೆ ಮರ್ಮದಲಿ ಚಿವುಟುವಳು |
ಛಲಗಾತಿಯೊ ಪ್ರಕೃತಿ - ಮರುಳ ಮುನಿಯ || (೩೩೯)

(ಬಾ+ಎನ್ನುವಳು)(ಮಣಿಕನಕ+ಇತ್ತು)

ನಿನ್ನನ್ನು ಹತ್ತಿರಕ್ಕೆ ಬಾ ಎಂದು ಕರೆಯುತ್ತಾಳೆ, ಕರೆದು ಮುದ್ದಿಸುತ್ತಾಳೆ. ಹೂವು, ಹಣ್ಣು, ರತ್ನ ಮತ್ತು ಬಂಗಾರಗಳನ್ನು ಕೊಟ್ಟು ಸಂತೋಷಪಡಿಸುತ್ತಾಳೆ. ಆವಾಗ ನೀನು ಹಿಗ್ಗಿ ಕುಣಿದಾಡಿ ಮೈಮರೆತರೆ, ಗುಟ್ಟಾಗಿ ನಿನಗೆ ತಿಳಿಯದಂತೆ ನಿನ್ನನ್ನು ಜಿಗುಟುತ್ತಾಳೆ. ಪ್ರಕೃತಿಯು ಬಹಳ ಹಟಮಾರಿ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

“Come near me” she incites you and showers kisses on you,
She presents you with flowers, fruits, gems and gold and amuses you,
When you forget yourself in the amusement, she pinches your vital parts,
Very obstinate is Nature – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 27, 2012

ಸಾದೃಶ್ಯ ಭಸ್ಮವನು ಕಣ್ಣಿಗೆರಚುತೆ ಪ್ರಕೃತಿ (338)

ಸಾದೃಶ್ಯ ಭಸ್ಮವನು ಕಣ್ಣಿಗೆರಚುತೆ ಪ್ರಕೃತಿ |
ಪ್ರತ್ಯೇಕತೆಯನದರೊಳಿಡುತೆ ಕಚಕುಳಿಯ ||
ಶತ್ರುಮಿತ್ರಪ್ರಮಾದದ ಗುಳಿಗೆಯುಣಿಸುತ್ತೆ |
ನೃತ್ಯಕೆಳೆವಳು ಜನವ - ಮರುಳ ಮುನಿಯ || (೩೩೮)

(ಕಣ್ಣಿಗೆ+ಎರಚುತೆ)(ಪ್ರತ್ಯೇಕತೆಯನ್+ಅದರೊಳ್+ಇಡುತೆ)(ಗುಳಿಗೆ+ಉಣಿಸುತ್ತೆ)(ನೃತ್ಯಕೆ+ಎಳೆವಳು)

ಪ್ರಕೃತಿಯು ಎಲ್ಲವೂ ಒಂದೇ ತರನಾಗಿ ಕಾಣಿಸುವಂತೆ ಮಾಡುವ (ಸಾದೃಶ್ಯ) ಒಂದು ಮಂಕು ಬೂದಿ(ಭಸ್ಮ)ಯನ್ನು ಮನುಷ್ಯರ ಕಣ್ಣುಗಳಿಗೆ ಎರಚುತ್ತಾಳೆ. ಆದರೆ ಅದರೊಳಗಡೆ ಭೇದ ಭಾವಗಳನ್ನು ಕಲ್ಪಿಸುತ್ತಾ ನಡುನಡುವೆ ಕಚಗುಳಿಯನ್ನು ಇಡುತ್ತಾ, ವೈರಿ ಮತ್ತು ಸ್ನೇಹಿತರುಗಳೆಂಬ ಅಜಾಗ್ರತೆಗಳ (ಪ್ರಮಾದ) ಮಾತ್ರೆಗಳನ್ನು ತಿನ್ನಿಸುತ್ತಾ, ಜನಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature throws the magic dust into men’s eyes and makes them
Conscious of the similarity among them. At the same time
She also tickles them with the sense of difference
The she makes them eat the pill of faulty sense of
Friendship and enmity and drags them into the dance-concert- Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 26, 2012

ಅರ್ಧಾರ್ಧರುಚಿಗಳಿಂ ಕಣ್ಮನಂಗಳ ಕೆಣಕು- (337)

ಅರ್ಧಾರ್ಧರುಚಿಗಳಿಂ ಕಣ್ಮನಂಗಳ ಕೆಣಕು- |
ತುದ್ಯಮಂಗಳ ಗೆಯ್ಸಿ ಮನುಜನಿಂ ಪ್ರಕೃತಿ ||
ಬದ್ಧನಂಗೆಯ್ವಳುಳಿದರ್ಧಮಂ ಕೆಣಕಿಪಳು |
ವೃದ್ಧಿಯಿಂತವಳ ಸಿರಿ - ಮರುಳ ಮುನಿಯ || (೩೩೭)

(ಅರ್ಧ+ಅರ್ಧ+ರುಚಿಗಳಿಂ)(ಕಣ್+ಮನಂಗಳ)(ಕೆಣಕುತ+ಉದ್ಯಮಂಗಳ) (ಬದ್ಧನಂ+ಗೆಯ್ವಳು+ಉಳಿದ+ಅರ್ಧಮಂ)(ವೃದ್ಧಿಯಿಂತು+ಅವಳ)

ಪ್ರಕೃತಿಯ ಅರ್ಧಂಬರ್ಧ ಸವಿಗಳಿಂದ ಕಣ್ಣು ಮತ್ತು ಮನಸ್ಸುಗಳನ್ನು ಕೆರಳಿಸುತ್ತ, ಕೆಲಸಗಳಲ್ಲಿ (ಉದ್ಯಮಂ) ಅವನನ್ನು ತೊಡಗಿಸುತ್ತ, ಆ ಕಾರ್ಯದ ಅರ್ಧದಲ್ಲಿ ಅವನನ್ನು ಒಂದು ಕಟ್ಟುಪಾಡಿಗೆ ಒಳಪಡಿಸುತ್ತಾಳೆ. ಉಳಿದರ್ಧದಲ್ಲಿ ಅವನ ಮನಸ್ಸನ್ನು ಕೆರಳಿಸುತ್ತಾಳೆ. ಅವಳು ತನ್ನ ಸಂಪತ್ತನ್ನು ಈ ರೀತಿಯಾಗಿ ವೃದ್ಧಿಸಿಕೊಳ್ಳುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Making us taste the first half and tempting our eyes and mind,
Nature encourages us to engage ourselves in varied occupations
Thus she holds in bondage and entices us to taste the other half
So increases Her wealth – Marula Muniya
(Translation from "Thus Sang Marula Muniya" by Sri. Narasimha Bhat)

Friday, December 21, 2012

ದಾರದುಂಡೆಯೊ ಲೋಕ ನೂರುಮಾರೆಳೆಯೊಂದೆ (336)

ದಾರದುಂಡೆಯೊ ಲೋಕ ನೂರುಮಾರೆಳೆಯೊಂದೆ |
ನೂರು ಬಣ್ಣಗಳಲ್ಲಿ ನೂರು ಸಿಕ್ಕದರೊಳ್ ||
ಹಾರದಂತದಖಂಡ ಮೊದಲು ಕೊನೆಗಳನಲ್ಲಿ |
ಬೇರೆ ತೋರುವುದೆಂತೊ - ಮರುಳ ಮುನಿಯ || (೩೩೬)
(ದಾರದ+ಉಂಡೆಯೊ)(ನೂರುಮಾರ್+ಎಳೆ+ಒಂದೆ)(ಸಿಕ್ಕು+ಅದರೊಳ್)(ಹಾರದಂತೆ+ಅದು+ಅಖಂಡ)(ಕೊನೆಗಳನ್+ಅಲ್ಲಿ)(ತೋರುವುದು+ಎಂತೊ)

ಈ ಪ್ರಪಂಚವೆನ್ನುವುದು ಒಂದು ದಾರದ ಉಂಡೆಯಂತಿದೆ. ಒಂದು ನೂರು ಮಾರುಗಳಷ್ಟು ಉದ್ದವಿದ್ದರೂ ಅದು ಒಂದೇ ಒಂದು ಎಳೆಯಿಂದ ಕೂಡಿದೆ. ಅದರ ನೂರಾರು ಬಣ್ಣಗಳಲ್ಲಿ ನೂರಾರು ಗೋಜಲು(ಸಿಕ್ಕು)ಗಳಿವೆ. ಮೊದಲು ಮತ್ತು ಕೊನೆಗಳಲ್ಲಿ ಅದು ಒಂದು ಹಾರದಂತೆ ಇಡಿಯಾಗಿದ್ದರೂ ಸಹ, ಅದು ಹೇಗೋ ಬೇರೆಯಾಗಿಯೇ ಕಂಡುಬರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

This world is a ball of thread, hundreds and hundreds of meter long
Hundreds of colors and hundreds of tangles
It is unbroken like a garland
How can it beginning and end be traced? – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 20, 2012

ಚಿಂತಿಸಲ್ಗಾಗದದ್ಭುತಶಕ್ತಿ ಸೃಷ್ಟಿಯದು (335)

ಚಿಂತಿಸಲ್ಗಾಗದದ್ಭುತಶಕ್ತಿ ಸೃಷ್ಟಿಯದು |
ಜಂತು ಜಂತುವಿಗಮೊಂದೊಂದು ಬೇರೆ ನಯ ||
ಅಂತರದ ತಂತ್ರವನು ಗೆಯ್ಸಿಹಳು ಜಗವಂತು |
ಸಂತತವು ನವನವವೊ - ಮರುಳ ಮುನಿಯ || (೩೩೫)

(ಚಿಂತಿಸಲ್ಕೆ+ಆಗದ+ಅದ್ಭುತಶಕ್ತಿ)(ಜಂತುವಿಗಂ+ಒಂದೊಂದು)(ಗೆಯ್ಸಿ+ಇಹಳು)(ಜಗವು+ಅಂತು)

ನಾವು ಯೋಚಿಸಲಿಕ್ಕೂ ಸಾಧ್ಯವಾಗದಂತಹ ಅತ್ಯಾಶ್ಚರ್ಯಕರವಾದ ಬಲ ಪ್ರಕೃತಿಮಾತೆಗೆ ಇದೆ. ಒಂದೊಂದು ಪ್ರಾಣಿಗೂ ಬೇರೆ ಬೇರೆ ನೀತಿಗಳನ್ನಿಟ್ಟು, ಒಳಗಡೆಯ (ಅಂತರದ) ವ್ಯವಸ್ಥೆಯನ್ನು ಬೇರೆ ಬೇರೆ ರೀತಿಯಾಗಿ ಮಾಡಿ ಜಗತ್ತನ್ನು ನಡೆಸುತ್ತಾಳೆ. ಸದಾ (ಸಂತತ) ಹೊಸ ಹೊಸದಾಗಿರುವುದೇ ಅದರ ಲಕ್ಷಣವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature’s power is so marvelous and unthinkable
Her attitude and treatment varies from creature to creature.
With her strategy of maintaining differences among things and beings
This would appears always new and novel – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 19, 2012

ನಿರಪೇಕ್ಷೆ ನಿರುಪೇಕ್ಷೆ ಸೃಷ್ಟಿ ಕರ್ಮದ ರೀತಿ (334)

ನಿರಪೇಕ್ಷೆ ನಿರುಪೇಕ್ಷೆ ಸೃಷ್ಟಿ ಕರ್ಮದ ರೀತಿ |
ಬೆರಲದಿರದಾ ಕಣ್ಣುದಾಸೀನಮಿರದು ||
ಕಿರಿದವಳಿಗೊಂದಿರದು ಪರಿಪೂರ್ಣವೊಂದಿರದು |
ಪರಿವರ್ತ್ಯಮೆಲ್ಲಮುಂ - ಮರುಳ ಮುನಿಯ || (೩೩೪)

(ನಿಃ+ಅಪೇಕ್ಷೆ)(ನಿಃ+ಉಪೇಕ್ಷೆ)(ಬೆರಲ್+ಅದಿರದು+ಆ)(ಕಣ್ಣ್+ಉದಾಸೀನಂ+ಇರದು)(ಕಿರಿದು+ಅವಳಿಗೆ+ಒಂದು+ಇರದು)(ಪರಿಪೂರ್ಣವೊಂದು+ಇರದು)(ಪರಿವರ್ತ್ಯಂ+ಎಲ್ಲಮುಂ)

ಸೃಷ್ಟಿದೇವಿಯು ಕೆಲಸ ಮಾಡುವ ಕ್ರಮದಲ್ಲಿ ಯಾವ ವಿಧವಾದ ಬಯಕೆ(ಅಪೇಕ್ಷೆ)ಗಳೂ ಇಲ್ಲ ಮತ್ತು ಯಾವುದೇ ತರಹದ ನಿರ್ಲಕ್ಷ್ಯವೂ (ಉಪೇಕ್ಷೆ) ಇಲ್ಲ. ಅವಳ ಬೆರಳುಗಳು ಕಂಪಿಸುವುದಿಲ್ಲ ಮತ್ತು ಆ ಕಣ್ಣುಗಳಲ್ಲಿ ಉದಾಸೀನತೆಯಿರುವುದಿಲ್ಲ. ಅವುಗಳಿಗೆ ಯಾವ ಕೆಲಸವೂ ಚಿಕ್ಕದೆಂದೆನಿಸುವುದಿಲ್ಲ ಮತ್ತು ಪರಿಪೂರ್ಣತೆಯೂ ಇರುವುದಿಲ್ಲ. ಅವಳು ಸೃಷ್ಟಿಯಲ್ಲಿರುವುದೆಲ್ಲವನ್ನೂ ಬದಲಾಯಿಸುವ ಕಾರ್ಯದಲ್ಲೆ ನಿರತಳಾಗಿರುತ್ತಾಳೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Desirelessness and absence of disregard are the ways of Nature’s work.
She won’t lift her finger but she would be ever vigilant,
She considers nothing as small and nothing as perfect
Everything is ever changeable – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 18, 2012

ಹೃಸ್ವದಲಿ ದೀರ್ಘದಲಿ ಕುಟಿಲದಲಿ ಸರಳದಲಿ (333)

ಹೃಸ್ವದಲಿ ದೀರ್ಘದಲಿ ಕುಟಿಲದಲಿ ಸರಳದಲಿ |
ವಿಶ್ವಕಾಯಂ ಕಂಗಳಂಗವಿಭ್ರಮೆಯಿಂ- ||
ದೀಶ್ವರಂ ನಟಿಸುತಿರೆ ರಭಸವಳೆವವರಾರು? |
ಶಾಶ್ವತಂ ಮಿತಿಗಳವೆ ? - ಮರುಳ ಮುನಿಯ || (೩೩೩)

(ಕಂಗಳ್+ಅಂಗ+ವಿಭ್ರಮೆಯಿಂದ+ಈಶ್ವರಂ)(ನಟಿಸುತ+ಇರೆ)(ರಭಸವ+ಅಳೆವವರ್+ಆರು)(ಮಿತಿಗೆ+ಅಳವೆ)

ಚಿಕ್ಕದಾಗಿರುವುದರಲ್ಲಿ, ದೊಡ್ಡದಾಗಿರುವುದರಲ್ಲಿ, ಮೋಸ ವಂಚನೆಗಳಲ್ಲಿ ಮತ್ತು ನಿಷ್ಠಪಟತೆಯಲ್ಲಿ, ವಿಶ್ವವೇ ಶರೀರವಾಗಿರುವ ಪರಮಾತ್ಮನು (ವಿಶ್ವಕಾಯಂ) ಕಣ್ಣುಗಳ ಮತ್ತು ದೇಹದ ಭಾಗಗಳ ಬೆಡಗಿನಿಂದ ಅಭಿನಯಿಸುತ್ತಿರುವಾಗ, ಅವನ ಚಲನೆಯ ವೇಗವನ್ನು ಅಳೆಯುವವರ‍್ಯಾರಿದ್ದಾರೆ? ಸದಾಕಾಲವೂ ಇರುವ ಪರಮಾತ್ಮನಶಕ್ತಿಯು ನಮ್ಮ ಅಳತೆಗೆ ನಿಲುಕುವುದೇ?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

With movements, slow and swift curved and straight
God in His cosmic body dances skillfully moving His eyes and limbs
Who then can measure His speed? Can the Eternal be measured
By the limited mind? – Marula Muniya
(Translation from "Thus Sang Marula Muniya" by Sri. Narasimha Bhat) 

Monday, December 17, 2012

ನಾನು ನೀನಾದಂದು ನೀನೆಲ್ಲರಾದಂದು (332)

ನಾನು ನೀನಾದಂದು ನೀನೆಲ್ಲರಾದಂದು |
ಲೀನನೆಲ್ಲರೊಳಗಾಗಿ ನಾನು ಸತ್ತಂದು ||
ಏನೊಂದುಮೆನ್ನ ಹೊರಗೆನ್ನ ಕಣ್ಗಿರದಂದು |
ಜ್ಞಾನ ಪರಿಪೂರ್ಣವೆಲೊ - ಮರುಳ ಮುನಿಯ || (೩೩೨)

(ನೀನ್+ಆದಂದು)(ನೀನ್+ಎಲ್ಲರ್+ಆದಂದು)(ಲೀನನ್+ಎಲ್ಲರೊಳಗೆ+ಆಗಿ)(ಏನೊಂದುಂ+ಎನ್ನ)(ಹೊರಗೆ+ಎನ್ನ)(ಕಣ್ಗೆ+ಇರದಂದು)(ಪರಿಪೂರ್ಣವೆಲೊ)

’ನಾನು’ ನೀನಾದ ದಿನ, ನೀನು ಎಲ್ಲರಲ್ಲೂ ಒಂದಾದ ದಿನ, ಎಲ್ಲರೊಳಗೂ ಸೇರಿಹೋಗಿ ’ನಾನು’ ಎನ್ನುವುದು ಅಳಿದ ದಿನ, "ನನ್ನ ಕಣ್ಣುಗಳಿಗೆ ಹೊರಗೆ ಬೇರೇನೂ ಕಾಣಿಸದು" ಎಂಬ ಅನುಭವ ಉಂಟಾದಾಗ ಸಂಪೂರ್ಣವಾದ ಜ್ಞಾನವು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When I become you and you become all
When the ‘I’ in me dies by becoming one with all
When nothing appears alien to my eyes
The knowledge is complete – Marula Muniya
(Translation from "Thus Sang Marula Muniya" by Sri. Narasimha Bhat)

Friday, December 14, 2012

ಸೃಜಿಸಿ ಯಂತ್ರಾಯುಧಗಳಂ ಪ್ರಗತಿಸಾಧನೆಗೆ (331)

ಸೃಜಿಸಿ ಯಂತ್ರಾಯುಧಗಳಂ ಪ್ರಗತಿಸಾಧನೆಗೆ |
ನಿಜಲಕ್ಷಣೋನ್ನತಿಯನೇ ಮರೆತು ಮನುಜಂ ||
ರುಜಿತಾತ್ಮನಪ್ಪನಾ ಯಂತ್ರಾಪಘಾತದಿನೆ |
ವಿಜಯ ವಿಭ್ರಾಂತಿಯದು - ಮರುಳ ಮುನಿಯ || (೩೩೧)

(ಯಂತ್ರ+ಆಯುಧಗಳಂ)(ಲಕ್ಷಣ+ಉನ್ನತಿಯನೇ)(ರುಜಿತಾತ್ಮನ್+ಅಪ್ಪನ್+ಆ)(ಯಂತ್ರ+ಅಪಘಾತದಿನೆ)

ಏಳಿಗೆಯನ್ನು ಹೊಂದುವುದಕ್ಕಾಗಿ ಯಂತ್ರ ಮತ್ತು ಆಯುಧಗಳನ್ನು ಸೃಷ್ಟಿಮಾಡಿ, ತನ್ನ ಸ್ವಂತ ಅಭ್ಯುದಯದ ಚಿಹ್ನೆಗಳನ್ನು ಮರೆತು, ಮನುಷ್ಯನು, ಯಂತ್ರಗಳ ಅಪಘಾತಗಳಿಂದ ಬಾಧೆಗೆ ಒಳಗಾದವನಾಗುತ್ತಾನೆ (ರುಜಿತಾತ್ಮನ್). ಈ ಗೆಲುವು, ಒಂದು ಭ್ರಮೆಯೇ (ವಿಭ್ರಾಂತಿ) ಸರಿ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

In his craze to achieve progress man manufactures machines and weapons
He forgets the greatness of his own true nature
And becomes sick in soul due to the mishap caused by machines
Isn’t his sense of victory a delusion? – Marula Muniya (331)
(Translation from "Thus Sang Marula Muniya" by Sri. Narasimha Bhat)

Wednesday, December 12, 2012

ಧರಣಿ ತರಣಿಗಳ ಗತಿಕ್ಲ್‍ಪ್ತವೆನುವವೊಲಿಹುದು (330)

ಧರಣಿ ತರಣಿಗಳ ಗತಿಕ್ಲ್‍ಪ್ತವೆನುವವೊಲಿಹುದು |
ಚಲಿಸುತಿರಲವರ ಬಲ ವೆಯವಾಗದಿಹುದೇಂ? ||
ಕರಗುವುದವರ‍್ಗಳೊಡಲವರಡಿಗಳದುರುವುವು |
ಕೊರೆಯಾರಿಗದರಿಂದೆ? - ಮರುಳ ಮುನಿಯ || (೩೩೦)

(ಕ್ಲ್‍ಪ್ತ+ಎನುವವೊಲ್+ಇಹುದು)(ಚಲಿಸುತಿರಲ್+ಅವರ)(ವೆಯ+ಆಗದೆ+ಇಹುದೇಂ)(ಕರಗುವುದು+ಅವರ‍್ಗಳ+ಒಡಲು+ಅವರ+ಅಡಿಗಳ್+ಅದುರುವುವು)

ಭೂಮಿ(ಧರಣಿ) ಮತ್ತು ಸೂರ್ಯ(ತರಣಿ)ರುಗಳ ಚಲನೆಗಳು ಒಂದು ನಿಗದಿಯಾದ ವ್ಯವಸ್ಥೆಗೆ ಮತ್ತು ಮಿತ ಜ್ಞಾನಕ್ಕೆ ಒಳಪಟ್ಟಿರುವೆಂತಿದೆ. ಆದರೂ ಅವುಗಳು ಚಲಿಸುತ್ತಿರುವಾಗ ಅವರುಗಳ ಶಕ್ತಿಯು ಖರ್ಚಾ(ವೆಯ)ಗದೆ ಇರುವುದೇನು? ಅವರ ದೇಹಗಳು ಕರಗಿಹೋಗುತ್ತವೆ ಮತ್ತು ಅವರ ಪಾದಗಳು ನಡಗುವುವು. ಇದರಿಂದ ಯಾರಿಗೆ ಕೊರತೆ ಅಥವಾ ನ್ಯೂನತೆಗಳುಂಟಾಗುತ್ತವೆ?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The movements of the earth and the sun seem to be regular and prompt
Would not their energy get spent as they go on moving?
Their bodies may melt and their feet mat falter,
Who will be the loser on this account? – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 11, 2012

ಸುರಪ ಚಾಪದ ಗಾತ್ರ ವಿಸ್ತಾರ ಭಾರಗಳ (329)

ಸುರಪ ಚಾಪದ ಗಾತ್ರ ವಿಸ್ತಾರ ಭಾರಗಳ |
ಧರೆಯಿಂದಲಳೆಯುವೆಯ ಕೈ ಮೊಳಗಳಿಂದೆ? ||
ಪರಮಾನುಭವದೊಳದ್ವೈತವೋ ದ್ವೈತವೋ |
ಅರಿಯುವನೆ ಬರಿ ತರ್ಕಿ? - ಮರುಳ ಮುನಿಯ || (೩೨೯)
 
(ಧರೆಯಿಂದಲ್+ಅಳೆಯುವೆಯ)(ಪರಮಾನುಭವದೊಳು+ಅದ್ವೈತವೋ)

ಆಕಾಶದಲ್ಲಿ ಕಾಣುವ ಕಾಮನಬಿಲ್ಲಿನ (ಸುರಪ ಚಾಪದ) ದಪ್ಪ, ಉದ್ದಗಲ ಮತ್ತು ತೂಕಗಳನ್ನು ನೀನು ಭೂಮಿ(ಧರೆ)ಯಲ್ಲಿ ನಿಂತುಕೊಂಡು ನಿನ್ನ ಮೊಣಕೈಗಳಿಂದ ಮೊಳ ಹಾಕಿ ಅಳೆಯುವೆಯೇನು? ಪರಮಾತ್ಮನ ಇರುವಿಕೆಯ ಅನುಭವಗಳಲ್ಲಿ ಅದ್ವೈತವಿದೆಯೋ ಅಥವಾ ದ್ವೈತವಿದೆಯೋ, ಇದನ್ನು ಕೇವಲ ತರ್ಕ ಮಾತ್ರದಿಂದ ತಿಳಿಯಲು ಸಾಧ್ಯವೇನು?
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The volume, extent and weight of the rainbow above
Can you measure in cubits from the earth?
Can a dry logician understand whether the experience
Of the Supreme Truth is monism or dualism? – Marula Muniya
(Translation from "Thus Sang Marula Muniya" by Sri. Narasimha Bhat)

Monday, December 10, 2012

ಸ್ವಸ್ವರೂಪವನರಿತುಕೊಳುವ ಮುನ್ನವೆ ನರಂ (328)

ಸ್ವಸ್ವರೂಪವನರಿತುಕೊಳುವ ಮುನ್ನವೆ ನರಂ |
ವಿಶ್ವಪ್ರಕೃತಿ ಕಾರ್ಯಶಾಲೆಯೊಳಗುಟ್ಟನ್ ||
ವಶ್ಯವಾಗಿಸಿಕೊಳ್ಳಲುಜ್ಜಗಿಸಿ ತನಗೆ ತಾ - |
ನಸ್ವಸ್ಥನಾಗಿಹನೊ - ಮರುಳ ಮುನಿಯ || (೩೨೮)
(ಸ್ವಸ್ವರೂಪವನ್+ಅರಿತುಕೊಳುವ)(ಕಾರ್ಯಶಾಲೆಯ+ಒಳಗುಟ್ಟನ್)(ವಶ್ಯವಾಗಿಸಿಕೊಳ್ಳಲ್+ಉಜ್ಜಗಿಸಿ)(ತಾನ್+ಅಸ್ವಸ್ಥನಾಗಿ+ಇಹನೊ)

ತನ್ನ ನಿಜವಾದ ಸ್ವರೂಪವನ್ನು ತಾನು ತಿಳಿದುಕೊಳ್ಳುವ ಮೊದಲೇ, ಮನುಷ್ಯನು ಈ ಪ್ರಪಂಚದ ಪ್ರಕೃತಿಯ ಕಾರ್ಖಾನೆಯೆ ಒಳಗಿನ ರಹಸ್ಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು(ವಶ್ಯ) ಪ್ರಯತ್ನಿಸಿ (ಉಜ್ಜುಗಿಸಿ), ತನ್ನ ಅರೋಗ್ಯವನ್ನು ಕಳೆದುಕೊಂಡಿದ್ದಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Long before realizing his own true self
Man attempts to uncover and usurp for himself
The secrets of the workshop of universal Nature,
But he fails, in his endeavor and becomes unhappy – Marula Muniya
(Translation from "Thus Sang Marula Muniya" by Sri. Narasimha Bhat)

Friday, December 7, 2012

ಸತ್ಯ ಸೂರ್ಯನವೊಲಪಾರವಸದಳ ನಿನಗೆ (327)

ಸತ್ಯ ಸೂರ್ಯನವೊಲಪಾರವಸದಳ ನಿನಗೆ |
ನಿತ್ಯ ಲಭ್ಯವು ನಿನಗೆ ಖಂಡ ಮಾತ್ರವದು ||
ಶ್ರುತಿ ಯುಕ್ತಿಗಳು ಕಣ್ಣಳವು ಸಮ್ಮತಿಯೊಳು ಸೇರೆ |
ಮಿತ ದೃಶ್ಯ ನಿನಗೆಲವೊ - ಮರುಳ ಮುನಿಯ || (೩೨೭)

(ಸೂರ್ಯನವೊಲು+ಅಪಾರ+ಅಸದಳ)(ಮಾತ್ರ+ಅದು)(ಕಣ್+ಅಳವು)(ನಿನಗೆ+ಎಲವೊ)

ಸತ್ಯವೆಂಬ ಸೂರ್ಯನಿಗಿರುವಂತಹ ಅಪಾರ ಶಕ್ತಿಯು, ನಿನಗೆ ಅಸಾಧ್ಯವಾದುದು (ಅಸದಳ). ಅದರಲ್ಲಿ ದಿನನಿತ್ಯವೂ ನಿನಗೆ ದೊರಕುವುದು ಒಂದು ಚೂರು ಮಾತ್ರ. ಕಿವಿಗಳ ಉಪಯೋಗ ಮತ್ತು ಕಣ್ಣುಗಳ ಶಕ್ತಿ (ಅಳವು) ಒಪ್ಪಿ, (ಸಮ್ಮತಿ) ಕೂಡಿಕೊಂಡಿದ್ದಲ್ಲಿ,ಮಿತ ಪ್ರಮಾಣದಲ್ಲಿ ಸತ್ಯವು ನಿನಗೆ ಗೋಚರವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Truth is infinite and unbearable like the full sub
Only a part of it is ever accessible to you,
Even this limited vision you can enjoy when Vedic wisdom,
Your intelligence and eyesight come together in harmony – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 6, 2012

ನಾನು ನಾನಾನೆನ್ನುತಿರುವೊಂದುಸಿರೆ ನಿನ್ನ (326)

ನಾನು ನಾನಾನೆನ್ನುತಿರುವೊಂದುಸಿರೆ ನಿನ್ನ |
ಮಾನಸದ ಚೀಲದಲಿ ತುಂಬಿ ಬೀಗುತಿರೆ ||
ತಾಣವದರೊಳಗೆಲ್ಲಿ ಬೇರೊಂದುಸಿರು ಹೋಗಲು |
ಕಾಣದದು ತತ್ತ್ವವನು - ಮರುಳ ಮುನಿಯ || (೩೨೬)

(ನಾನ್+ನಾನ್+ಎನ್ನುತಿರ+ಒಂದು+ಉಸಿರೆ)(ತಾಣ+ಅದರ+ಒಳಗೆ+ಎಲ್ಲಿ)(ಬೇರೆ+ಒಂದು+ಉಸಿರು)(ಕಾಣದು+ಅದು)

’ನಾನು ನಾನು’ ಎಂದೆನ್ನುತಿರುವ ಒಂದು ಉಸಿರು ನಿನ್ನ ಮನಸ್ಸಿನ ಚೀಲದೊಳಗೆ ತುಂಬಿಕೊಂಡು ಗರ್ವ(ಬೀಗು)ಪಡುತ್ತಿರಲು,
ನಿನ್ನ ಮನಸ್ಸಿನೊಳಗಡೆ ಬೇರೆ ಯಾವುದಾದರೂ ಉಸಿರು ಹೋಗಲು ಸ್ಥಳ(ತಾಣ)ವೆಲ್ಲಿದೆ? ಈ ಅಹಂತೆಯು ನಿನ್ನ
ತುಂಬಿಕೊಂಡಿರುವಾಗ ಪರಮಾತ್ಮನ ತತ್ತ್ವವನ್ನು ಅದು ಕಾಣಲು ಸಾಧ್ಯವಿಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When every breath that fills the bag of your mind
Shouts I, I and I and swells with ego
Where then is room for another breath there?
So it fails to see the Truth – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 5, 2012

ಸಾಧಿಪ್ಪೆವೇನ ನಾಂ? ನಮಗಿರ್ಪ ಶಕ್ತಿಯೇಂ (325)

ಸಾಧಿಪ್ಪೆವೇನ ನಾಂ? ನಮಗಿರ್ಪ ಶಕ್ತಿಯೇಂ |
ಸಾಜವಂ ಮುರಿವೆವೇಂ ಕಿಂಕರರು ನಾವು ||
ಬೋಧಮುಂ ಪ್ರಕೃತಿಮಿತಮಾಶೆಯುಂ ಮಿತ ನಮಗೆ |
ಪಾದ ಬಿಡುವಕ್ಷಿ ಬಿಗಿ - ಮರುಳ ಮುನಿಯ || (೩೨೫)

(ಸಾಧಿಪ್ಪೆವು+ಏನ)(ನಮಗೆ+ಇರ್ಪ)(ಮುರಿವೆವು+ಏಂ)(ಪ್ರಕೃತಿಮಿತಂ+ಆಶೆಯುಂ)

ನಾವು ಸಾಧಿಸುವುದಾದರೂ ಏನನ್ನು? ನಮಗಿರುವ ಬಲಾಬಲಗಳಾದರೂ ಏನು? ಸಹಜವಾಗಿರುವುದನ್ನು ಮುರಿಯಲು ಸಾಧ್ಯವೇನು? ನಾವು ಕೇವಲ ಸೇವಕ(ಕಿಂಕರ)ರು ಮಾತ್ರ ಎನ್ನುವುದನ್ನು ಮರೆಯಬೇಡ. ಜ್ಞಾನ, ಪ್ರಕೃತಿ ಮತ್ತು ಆಶೆಯೂ ನಮ್ಮ ಪಾಲಿಗೆ ಮಿತವಾಗಿವೆ. ಪ್ರಯತ್ನ ಸಾಗಲಿ ಆದರೆ ಆಶಾದೃಷ್ಟಿಯಲ್ಲಿ ಹಿಡಿತವಿರಲಿ(ಅಕ್ಷಿಬಿಗಿ).
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What can we achieve? What is our capacity?
Can we change our inborn nature? We are but its slaves
Our wisdom and desires are bridled by Nature
Carefully observe with your eyes and walk forward – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 4, 2012

ಸ್ರಷ್ಟನಾವನೊ ಆತನಾರಾದೊಡೇಂ ನಿನಗೆ (324)

ಸ್ರಷ್ಟನಾವನೊ ಆತನಾರಾದೊಡೇಂ ನಿನಗೆ |
ಶಿಷ್ಟನಾಗಿಪೆಯ ಏನವನ ನೀನು ? ||
ಶಿಷ್ಟರನು ಮಾಡು ಒಡಹುಟ್ಟುಗಳ ಮೊದಲು ನೀನ್ |
ಸೃಷ್ಟಿಯಂಶವೆ ಕಾಣೊ - ಮರುಳ ಮುನಿಯ || (೩೨೪)

(ಸ್ರಷ್ಟನ್+ಆವನೊ)(ಆತನಾರ್+ಆದೊಡೇಂ)(ಶಿಷ್ಟನ್+ಆಗಿಪೆಯ)(ಸೃಷ್ಟಿ+ಅಂಶವೆ)

ಈ ಜಗತ್ತನ್ನು ನಿರ್ಮಿಸಿದ ಬ್ರಹ್ಮನು (ಸ್ರಷ್ಟನ್) ಯಾರಾದರೇನು? ಅವನನ್ನು ನೀನು ಸಜ್ಜನನ್ನಾಗಿ ಮಾಡುವೆಯೇನು? ಆ ಕೆಲಸ ಮಾಡುವುದರ ಬದಲು ಮೊದಲಿಗೆ ನಿನ್ನೆ ಜೊತೆಯಲ್ಲಿ ಹುಟ್ಟಿರುವವರನ್ನು ಸಜ್ಜನರನ್ನಾಗಿ ಮಾಡು. ಅವರೆಲ್ಲರೂ ಈ ಸೃಷ್ಟಿಯ ಅಂಶವೇ ಆಗಿರುವ ಕಾರಣ ಸೃಷ್ಟಿಯನ್ನೇ ನೇರ ಮಾಡಲು ಯತ್ನಿಸಿದಂತೆ ಆಗುತ್ತದೆ. (ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Whoever may be the Creator, it matters not who He is!
Can you reform Him as a person of great virtues?
First make your brothers, the embodiments of virtues
Know that you are also a part of creation – Marula Muniya
(Translation from "Thus Sang Marula Muniya" by Sri. Narasimha Bhat)

Monday, December 3, 2012

ತ್ರಿಭುವನಗಳ್ಗೇಕೈಕನೀಶಂ ನಿರಂಕುಶಂ (323)

ತ್ರಿಭುವನಗಳ್ಗೇಕೈಕನೀಶಂ ನಿರಂಕುಶಂ |
ಸಭೆಯುಮಿಲ್ಲವನ ತಿದ್ದಿಸೆ ಜನದ ಕೂಗಿಂ ||
ಅಭಯನಾಳುವ ರಾಜ್ಯವನುದಿನಮುಮಿಂತು ಸಂ- |
ಕ್ಷುಭಿತಮಿಹುದಚ್ಚರಿಯೆ - ಮರುಳ ಮುನಿಯ || (೩೨೩)

(ತ್ರಿಭುವನಗಳ್ಗೆ+ಏಕೈಕನ್+ಈಶಂ)(ಸಭೆಯುಂ+ಇಲ್ಲ+ಅವನ)(ಅಭಯನ್+ಆಳುವ) (ರಾಜ್ಯವನ್+ಅನುದಿನಮುಂ+ಇಂತು)(ಸಂಕ್ಷುಭಿತಂ+ಇಹುದು+ಅಚ್ಚರಿಯೆ)

ಮೂರೂ ಲೋಕಗಳಿಗೆ ಯಾವ ವಿಧವಾದ ಅಂಕೆಯೂ ಇಲ್ಲದೆ ಒಡೆಯನಾಗಿರುವವನು ಒಬ್ಬನೇ ಒಬ್ಬನಾದ ಈಶ್ವರ. ಅಲ್ಲಿರುವ ಜನಗಳ ಕೂಗುಗಳಿಂದ ಅವನನ್ನು ತಿದ್ದಿಸಲು ಯಾವ ಪ್ರಜಾ ಪ್ರತಿನಿಧಿಸಭೆಯೂ ಇಲ್ಲ. ಯಾವ ವಿಧದ ಭಯವೂ ಇಲ್ಲದೆ ಈ ರಾಜ್ಯಗಳನ್ನು ಪ್ರತಿನಿತ್ಯವೂ ಹೀಗೆ ಅಳುತ್ತಿರುವಲ್ಲಿ, ಅಲ್ಲೋಲ ಕಲ್ಲೋಲಗಳು ಕಂಡುಬರುವುದು ಆಶ್ಚರ್ಯಕರವಾದ ವಿಷಯವೇನೂ ಅಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One single dictator Monarch rules all the three worlds
There’s no assembly to correct Him as per the voiced wishes of the people
It is no surprise then if such a country is always in turmoil
When the fearless Autocrat rules over it – Marula Muniya
(Translation from "Thus Sang Marula Muniya" by Sri. Narasimha Bhat)