Monday, October 31, 2011

ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ (93)

ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ-|
ಳಾಪಾತ ನಿಯತಂಗಳಾಳವರಿತವರಾರ್ ||
ಮಾಪನಾತೀತನಿತ್ಯಸ್ವೈರಸೂತ್ರದಿಂ |
ವ್ಯಾಪಿತಂ ಜಗವೆಲ್ಲ - ಮರುಳ ಮುನಿಯ || (೯೩)


(ಕ್ರಮಗಳ್+ಅಪಾತ)(ನಿಯತಂಗಳ+ಆಳವ+ಅರಿತವರಾರ್)(ಮಾಪನ+ಅತೀತನಿತ್ಯ+ಸ್ವೈರಸೂತ್ರದಿಂ)


ಜಗತ್ತಿನ ಚಕ್ರದ ಸುತ್ತುವಿಕೆಯ ಕ್ರಮಗಳ ಆಗುವಿಕೆ(ಆಘಾತ)ಯ ನಿಯಮ(ನಿಯತ)ಗಳ ಆಳವನ್ನು ತಿಳಿಯದವರು ಯಾರಾದರೂ ಇರುವರೇನು ? ಅಳತೆ(ಮಾಪನ)ಗೆ ಸಿಗದಿರುವ (ಅತೀತ) ಸದಾಕಾಲವೂ ಇರುವ ಸ್ವತಂತ್ರ (ಸ್ವೈರ) ನಿಯಮಗಳಿಂದ ಈ ಜಗತ್ತು ಹಬ್ಬಿಕೊಂಡಿದೆ (ವ್ಯಾಪಕಂ).

Monday, October 24, 2011

ನಾನೆನುವುದೊಂದೊ ಅಥವಾ ನೀನೆನುವುದೊಂದೊ (92)


ನಾನೆನುವುದೊಂದೊ ಅಥವಾ ನೀನೆನುವುದೊಂದೊ |
ನಾನು ನೀನುಗಳಿರದ ಅದು ಎನುವುದೊಂದೋ ||
ಏನೊ ಎಂತಾನುಮೊಂದೇ ಎಲ್ಲ; ಆ ಒಂದನ್ |
ಆನು ನೀನೇಗಳುಂ - ಮರುಳ ಮುನಿಯ || (೯೩)

(ನಾನ್+ಎನುವುದು+ಒಂದೊ)(ನೀನ್+ಎನುವುದು+ಒಂದೊ)(ಎಂತಾನುಂ+ಒಂದೇ)
(ನೀನ್+ಏಗಳುಂ)

ನಾನು ಎನ್ನುದುದು ಒಂದೋ ಅಥವಾ ನೀನು ಎನ್ನುವುದು ಒಂದೋ. ಇಲ್ಲ, ನಾನು ಮತ್ತು ನೀನು ಎವುಗಳೆರಡೂ ಇರದ ಇನ್ನೊಂದು ಎನ್ನುವುದೋ? ಇದು ಹೇಗಾದರೂ ಇರಲಿ ಅವುಗಳೆಲ್ಲವೂ ಒಂದೇ. ಅದನ್ನು ನೀನು ಎಂದೆಂದಿಗೂ (ಏಗಳುಂ) ಅವಲಂಬಿಸು (ಆನು).

Friday, October 21, 2011

ಶಿಲೆಯೊ ಮೃತ್ತಿಕೆಯೊ ಸೌಧವೊ ಕಾಲುಕಸ ಧೂಳೊ (91)


ಶಿಲೆಯೊ ಮೃತ್ತಿಕೆಯೊ ಸೌಧವೊ ಕಾಲುಕಸ ಧೂಳೊ |
ಬಳುಕು ಲತೆಯೋ ಮರನೊ ಒಣ ಸೌದೆ ತುಂಡೋ ||
ಲಲಿತ ಸುಂದರಿಯೊ ಸಾಧುವೋ ವೀರಸಾಹಸಿಯೊ |
ಚಲವೊ ಜಡವೋ (ಶಿವನೆ)- ಮರುಳ ಮುನಿಯ || (೯೧)

ಕಲ್ಲೋ(ಶಿಲೆ), ಮಣ್ಣೋ (ಮೃತ್ತಿಕೆ), ಒಂದು ಬೃಹತ್ ಸೌಧವೋ, ಕಾಲಿನ ಕಸದ ಧೂಳೋ, ಬಳುಕುವ ಬಳ್ಳಿಯೋ, ಮರವೋ, ಒಣಗಿದ ಸೌದೆಯ ತುಂಡೋ, ಮನೋಹರವಾದ ಸುಂದರಿಯೋ, ಸಾಧು ಸಂತನೋ, ವೀರ ಸಾಹಸಿಯೋ, ಚಲಿಸುವ ವಸ್ತುವೋ ಅಥವಾ ಜಡರೂಪಗಳೋ, ಯಾವುದೇ ಇರಲಿ ಇವುಗಳೆಲ್ಲವೂ ಪರಮಾತ್ಮನ ವಿವಿಧ ರೂಪಗಳಷ್ಟೆ.

Thursday, October 20, 2011

ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು (90)


ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು |
ಸಿಕ್ಕಿರ‍್ಪುದರೊಳವನ ಕಾಣದಿಹರೇಕೆ ? ||
ಲೆಕ್ಕಿಲ್ಲದ ವೊಡಲ ಪೊತ್ತನನು ಕಂಡುದರೊಳ್ |
ಪೊಕ್ಕು ನೋಡದರೇಕೆ? - ಮರುಳ ಮುನಿಯ || (೯೦)

(ಸಿಕ್ಕಿಲ್ಲ+ಅವನ್+ಎಮ್ಮ)(ಕಣ್ಣಿಗೆ+ಎಂಬವರು)(ಸಿಕ್ಕಿ+ಇರ‍್ಪುದರೊಳ್+ಅವನ)
(ಕಾಣದಿಹರ್+ಏಕೆ)(ಲೆಕ್ಕ+ಇಲ್ಲದ)(ಕಂಡು+ಅದರೊಳ್)(ನೋಡದರ್+ಅದೇಕೆ)

ಮರಮಾತ್ಮನು ನಮ್ಮ ಕೈ ಮತ್ತು ಕಣ್ಣುಗಳಿಗೆ ಸಿಕ್ಕಿಲ್ಲವೆನ್ನುವವರು, ತಮಗೆ ಸಿಕ್ಕಿರುವುದರೊಳಗೇ ಅವನನ್ನು ಏಕೆ ಕಾಣಲಾರರು ? ಲೆಕ್ಕಕ್ಕೆ ಸಿಗದಷ್ಟು ದೇಹ(ಒಡಲು)ಗಳನ್ನು ಧರಿಸಿಕೊಂಡಿರುವವನನ್ನು ನೋಡಿ ಅದರೊಳಗೆ ಹೊಕ್ಕು (ಪೊಕ್ಕು) ಅವನನ್ನು ಕಾಣಲಾರರೇಕೆ?

Wednesday, October 19, 2011

ಎವೆಯಿಡದೆ ನೋಡು, ಮರ ಮರವು ಕರೆವುದು ನಿನ್ನ (89)


ಎವೆಯಿಡದೆ ನೋಡು, ಮರ ಮರವು ಕರೆವುದು ನಿನ್ನ |
ಕಿವಿಯನಾನಿಸು, ಕಲ್ಲು ಕಲ್ಲೊಳಂ ಸೊಲ್ಲು ||
ಅವಧರಿಸು ಜೀವ ಜೀವವುಮುಲಿವುದೊಂದುಲಿಯ |
ಭುವನವೇ ಶಿವವಾರ್ತೆ - ಮರುಳ ಮುನಿಯ || (೮೯)

(ಕಿವಿಯನ್+ಆನಿಸು)(ಜೀವವು+ಉಲಿವುದು+ಒಂದು+ಉಲಿಯ)

ಕಣ್ಣುಗಳ ರೆಪ್ಪೆಗಳನ್ನು (ಎವೆ) ಮಿಟುಕಿಸದೆ ನೋಡು, ಪ್ರಪಂಚದಲ್ಲಿರುವ ಮರ ಮರಗಳೂ ನಿನ್ನನ್ನು ಕರೆಯುತ್ತಿವೆ. ಕಿವಿಗೊಟ್ಟು ಕೇಳು, ಪ್ರಪಂಚದಲ್ಲಿರುವ ಕಲ್ಲು ಕಲ್ಲುಗಳಲ್ಲೂ ಧ್ವನಿ(ಸೊಲ್ಲು)ಗಳನ್ನು ಕೇಳುತ್ತೀಯೆ. ಮನಸ್ಸಿಟ್ಟು ಕೇಳು (ಅವಧರಿಸು) ಪ್ರತಿಯೊಂದು ಜೀವಿಯೂ ಒಂದೊಂದು ಮಾತು(ಉಲಿ)ಗಳನ್ನು ಹೇಳುತ್ತಿದೆ. ಈ ಪ್ರಪಂಚವೆಲ್ಲವೂ ಪರಮಾತ್ಮನ ಸಮಾಚಾರವೇ ಹೌದು.

Tuesday, October 18, 2011

ಇರುವುದೇ ಸತ್ಯವದು ವಿವಿಧವಪ್ಪುದೆ ಲೋಕ (88)


ಇರುವುದೇ ಸತ್ಯವದು ವಿವಿಧವಪ್ಪುದೆ ಲೋಕ-|
ವದನರಿವುದೇ ಆತ್ಮನೆಲ್ಲವನು ಧರಿಪ ||
ಪರವಸ್ತುವೇ ಬ್ರಹ್ಮವದ ಸ್ಮರಿಸಿ ಬದುಕಲಾ |
ಪರಮಪದವಿರುವಿಕೆಯೆ - ಮರುಳ ಮುನಿಯ || (೮೮)

(ವಿವಿಧ+ಅಪ್ಪುದೆ)(ಲೋಕ+ಅದನ್+ಅರಿವುದೇ)(ಆತ್ಮನ್+ಎಲ್ಲವನು)
(ಬದುಕಲ್+ಆ+ಪರಮಪದ+ಇರುವಿಕೆಯೆ)

ಇರುವುದೇ ನಿಜವಾದದ್ದು. ಅದು ನಾನಾ ಬಗೆಯಲ್ಲಿ ಕಾಣಿಸಿಕೊಳ್ಳುವುದೇ ಪ್ರಪಂಚ. ಅದನ್ನು ತಿಳಿದುಕೊಂಡಿರುವುದೇ ಆತ್ಮ. ಈ ಎಲ್ಲವನ್ನೂ ಹೊತ್ತಿರುವ (ಧರಿಪ) ಪರವಸ್ತುವೇ ಬ್ರಹ್ಮ. ಅದನ್ನು ಸದಾಕಾಲದಲ್ಲೂ ಜ್ಞಾಪಕದಲ್ಲಿಟ್ಟುಕೊಂಡು ನಮ್ಮ ನಮ್ಮ ಜೀವನವನ್ನು ನಡೆಸಿದ್ದಲ್ಲಿ ಮೋಕ್ಷದ ಅನುಭವವನ್ನು ಹೊಂದುತ್ತೇವೆ.

Monday, October 17, 2011

ಶ್ರೊತಾರ್ಥಮೇ ಹೃದನುಭೂತಾರ್ಥಮಾದಂದು (87)


ಶ್ರೊತಾರ್ಥಮೇ ಹೃದನುಭೂತಾರ್ಥಮಾದಂದು |
ಮಾತಿಗೆಟುಕದ ಸತ್ಯದರ್ಶನಂ ನಿನಗೆ ||
ಜ್ಯೋತಿ ನಿನ್ನೊಳಗೆ ಹೃದಯಾಂತರಾಳದೊಳಿಹುದು |
ಆತುಮದ ತೇಜವದು - ಮರುಳ ಮುನಿಯ || (೮೭)

(ಹೃತ್+ಅನುಭೂತ+ಅರ್ಥಂ+ಆದ+ಅಂದು)(ಮಾತಿಗೆ+ಎಟುಕದ)
(ಹೃದಯಾಂತರಾಳದ+ಒಳ್+ಇಹುದು)

ವೇದಗಳ ಅರ್ಥವೇ (ಶ್ರೊತಾರ್ಥಮೇ) ಹೃದಯವು ಅನುಭವಿಸಿದ (ಅನುಭೂತ) ಅರ್ಥ ಆದಾಗ, ಮಾತಿಗೆ ನಿಲುಕದಂತಹ ಸತ್ಯದ ದರ್ಶನ ನಿನಗಾಗುತ್ತದೆ. ಏಕೆಂದರೆ ಬೆಳಕು ನಿನ್ನೊಳಗೆ ನಿನ್ನ ಹೃದಯದ ಅಂತರಾಳದಲ್ಲಿ ಇದೆ. ಆತ್ಮದ ತೇಜಸ್ಸು ಅದು.

Friday, October 14, 2011

ಸಾಧಕಪದಂ ದ್ವೈತ ಸಿದ್ಧಪದಮದ್ವೈತ (86)


ಸಾಧಕಪದಂ ದ್ವೈತ ಸಿದ್ಧಪದಮದ್ವೈತ |
ರೋಧಗಳ ನಡುವೆ ನದಿ ಮುಂಬರಿಯಲುದಧಿ ||
ದ್ವೈಧವಿರೆ ವಿರಹ ಪ್ರಿಯೈಕ್ಯತಾನದ್ವೈಧ |
ಭೇದ ಬರಿ ಭಾವ ದಶೆ - ಮರುಳ ಮುನಿಯ || (೮೬)

(ಸಿದ್ಧಪದಂ+ಅದ್ವೈತ)(ಮುಂಬರಿಯಲ್+ಉದಧಿ)(ದ್ವೈಧ+ಇರೆ)
(ಪ್ರಿಯ+ಐಕ್ಯ+ತಾನ್+ಅದ್ವೈಧ)

ಸಾಧಕನ ದಾರಿ ದ್ವೈತ, ಸಾಧಿಸಿದ ಪದವಿ ಅದ್ವೈತ. ಎರಡು ದಡ(ರೋಧ)ಗಳ ಮಧ್ಯೆ ನದಿಯು ಮುಂದೆ ಸಾಗುತ್ತಿರಲು ಸಮುದ್ರವನ್ನು ಅದು ಸೇರಿದಾಗ ದ್ವೈತ(ದ್ವೈಧ) ಸ್ಥಿತಿಯಲ್ಲಿ ಅದು ಬೇರೆಯಾಗಿ ಉಳಿದುಹೋಗುತ್ತದೆ. ಆದರೆ ಅದ್ವೈತ(ಅದ್ವೈಧ) ಸ್ಥಿತಿಯಲ್ಲಿ ಅದು ಪ್ರಿಯದಲ್ಲಿ ಒಂದಾಗಿ (ಐಕ್ಯ) ಹೋಗುತ್ತದೆ. ವ್ಯತ್ಯಾಸ(ಭೇದ)ವು ಕೇವಲ ಯೋಚಿಸುವ ಸ್ಥಿತಿ(ದಶೆ)ಯಲ್ಲಿ ಮಾತ್ರ ಇರುತ್ತದೆ.

Thursday, October 13, 2011

ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ (85)


ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ |
ಮರಲ ತಳೆವುದು ಚಿಗುರಿ ಕಾಷ್ಠತೆಯ ದಾಟಿ ||
ನರನಂತು ದೇಹಿತೆಯ ಮೃಚ್ಛಿಲಾಂಶವ ಮೀರೆ |
ಪರಮಾರ್ಥಸುಮದೆ ಕೃತಿ - ಮರುಳ ಮುನಿಯ || (೮೫)

(ನರನ್+ಅಂತು)(ಮೃತ್+ಶಿಲಾ+ಅಂಶ)

ಮರವು ಕಾಂಡ ಮತ್ತು ಬುಡದಲ್ಲಿ ಗಟ್ಟಿಯಾಗಿರುತ್ತದೆ. ಕೊಂಬೆಗಳ ಮೇಲೆ ಅದು ಮರದ ಕಟ್ಟಿಗೆ(ಕಾಷ್ಠ)ತನವನ್ನು ಮೀರಿ, ಚಿಗುರಿ, ಹೂವನ್ನು (ಮರಲ) ಬಿಡುತ್ತದೆ. ಅದೇ ರೀತಿ ಮನುಷ್ಯನೂ ಸಹ ಅವನ ದೇಹದ ಮಣ್ಣು (ಮೃತ್) ಮತ್ತು ಕಲ್ಲು(ಶಿಲಾ)ಗಳ ಭಾಗಗಳನ್ನು ದಾಟಿಹೋದರೆ ಮೋಕ್ಷವೆಂಬ ಹೂವನ್ನು(ಸುಮ) ದೊರಕಿಸಿಕೊಂಡು ಧನ್ಯ(ಕೃತಿ)ನಾಗುತ್ತಾನೆ.

Wednesday, October 12, 2011

ಸೋಹಮನುಭವಿಯಾಗು ದುರ್ಲಭವದೆನ್ನೆ ದಾ- (84)



ಸೋಹಮನುಭವಿಯಾಗು ದುರ್ಲಭವದೆನ್ನೆ ದಾ-|
ಸೋಹಮನುಭವಿಯಾಗು ವಿಭು ವಿಶ್ವಗಳೊಳು ||
ಮೋಹ ಪರಿಯುವುದಂತೊ ಇಂತೊ ಎಂತಾದೊಡೇಂ |
ರಾಹು ಬಿಡೆ ರವಿ ಪೂರ್ಣ - ಮರುಳ ಮುನಿಯ || (೮೪)

(ಸೋಹ+ಅನುಭವಿ+ಆಗು)(ದುರ್ಲಭವು+ಅದು+ಎನ್ನೆ)(ದಾಸೋಹಂ+ಅನುಭವಿ+ಆಗು)
(ವಿಶ್ವಗಳ+ಒಳು)(ಪರಿಯುವುದು+ಅಂತೊ)

ಪರಮಾತ್ಮನೇ ನಾನು (ಸೋಹಂ) ಎಂದು ಭಾವಿಸು. ಅದು ಸಾಧ್ಯವಾಗದೆನ್ನುವುದಾದರೆ ಪರಮಾತ್ಮನು ಸೃಷ್ಟಿಸಿದ ಈ ಪ್ರಪಂಚದಲ್ಲಿ ನಾನು ಪರಮಾತ್ಮನ ಸೇವಕ(ದಾಸೋಹಂ)ನೆಂದು ಭಾವಿಸಿ ಅನುಭವಿಸು. ರಾಹು ಬಿಟ್ಟ ತಕ್ಷಣ ಸೂರ್ಯನು ಪೂರ್ತಿಯಾಗಿ ಬೆಳಗುವಂತೆ, ಈ ಪ್ರಕಾರದ ಅನುಭವಿಕೆಯಿಂದ ಇಷ್ಟೋ ಅಷ್ಟೋ ಎಷ್ಟಾದರೂ ಅಕ್ಕರೆ, ಪ್ರೇಮ ಮತ್ತು ಅಜ್ಞಾನಗಳ ನಿವಾರಣೆಯಾಗುತ್ತದೆ.

Tuesday, October 11, 2011

ಇನ್ನೊಂದನೆಳಸಗೊಡದನ್ಯವನು ಮರೆಯಿಪುದು (83)


ಇನ್ನೊಂದನೆಳಸಗೊಡದನ್ಯವನು ಮರೆಯಿಪುದು |
ತನ್ನನೇ ತಾಂ ನೆನೆಯದಂತೆ ಕರಗಿಪುದು ||
ಪೂರ್ಣದೊಳ್ ಪ್ರೇಮಿಯಂ ಪ್ರಿಯದೊಳೊಂದಾಗಿಪುದು |
ಚೆನ್ನೆನುವುದದ್ವೈತ - ಮರುಳ ಮುನಿಯ || (೮೩)

(ಇನ್ನೊಂದನ್+ಎಳಸಗೊಡದೆ+ಅನ್ಯವನು)(ಪ್ರಿಯದೊಳ್+ಒಂದಾಗಿಪುದು)
(ಚೆನ್ನ್+ಎನುವುದು+ಅದ್ವೈತ)

ಇನ್ನೊಂದನ್ನು ಬಯಸದಂತೆ ತನ್ನದಲ್ಲದ ಬೇರೆ ಎಲ್ಲವನ್ನು ಮರೆಯುವಂತೆ ಮಾಡುವುದು. ಅನಂತರ ತನ್ನನ್ನು ತಾನೇ ಜ್ಞಾಪಕ ಇಟ್ಟುಕೊಳ್ಳದಂತೆ ಅದರಲ್ಲೇ ಪೂರ್ತಿಯಾಗಿ ಕರಗಿಸಿಬಿಡುವುದು. ಕೊನೆಯಲ್ಲಿ ಪ್ರೇಮಿಯನ್ನು ಪ್ರಿಯನ ಜೊತೆ ಸೇರಿಸುವುದು. ಈ ರೀತಿಯ ಐಕ್ಯವೇ ಒಳ್ಳೆಯದು ಮತ್ತು ಸೊಗಸು ಎನ್ನುತ್ತದೆ ಅದ್ವೈತ.

Monday, October 10, 2011

ಹೃದಯವೊಂದರಿನಲ್ತು ಮೇಧೆಯೊಂದರಿನಲ್ತು (82)


ಹೃದಯವೊಂದರಿನಲ್ತು ಮೇಧೆಯೊಂದರಿನಲ್ತು |
ವಿದಿತವಪ್ಪುದು ನಿನಗೆ ತಾರಕದ ತತ್ತ್ವಂ ||
ಹದದಿನಾ ಸಾಧನೆಗಳೆರಡುಮೊಂದಾಗೆ ಬೆಳ-|
ಕುದಿಸುವುದು ನಿನ್ನೊಳಗೆ - ಮರುಳ ಮುನಿಯ || (೮೨)

(ಹೃದಯ+ಒಂದರಿನ್+ಅಲ್ತು)(ಮೇಧೆ+ಒಂದರಿನ್+ಅಲ್ತು)(ವಿದಿತ+ಅಪ್ಪುದು)
(ಹದದಿನ್+ಆ)(ಸಾಧನೆಗಳು+ಎರಡುಂ+ಒಂದಾಗೆ)(ಬೆಳಕು+ಉದಿಸುವುದು)
(ನಿನ್ನ+ಒಳಗೆ)

ಕೇವಲ ಹೃದಯದಿಂದ ಮಾತ್ರ ಅಥವಾ ಬುದ್ಧಿ(ಮೇಧೆ) ಶಕ್ತಿಯಿಂದ ಮಾತ್ರವಲ್ಲ ನಿನಗೆ ಪಾರಾಗುವ (ತಾರಕ) ಸಿದ್ಧಾಂತವು ತಿಳಿಯುವುದು (ವಿಧಿತ). ಒಂದು ಪಕ್ವತೆ ಮತ್ತು ಕ್ರಮದಿಂದ ಈ ಎರಡೂ ಉಪಕರಣ (ಸಾಧನೆ)ಗಳೂ ಒಂದಾದಾಗ ನಿನ್ನೊಳಗೆ ಬೆಳಕು ಹುಟ್ಟುತ್ತದೆ(ಉದಿಸುವುದು).

Friday, October 7, 2011

ಒಮ್ಮೊಮ್ಮೆ ಸತಿಪತಿಯರಿರ‍್ವರಾಚರಿತದಲಿ (81)



ಒಮ್ಮೊಮ್ಮೆ ಸತಿಪತಿಯರಿರ‍್ವರಾಚರಿತದಲಿ |
ಒಮ್ಮೊಮ್ಮೆಯವರೇಕಮಿರ‍್ತನವನುಳಿದು ||
ಬ್ರಹ್ಮ ಜೀವರ‍್ಕಳಂತಿರರೆ ವೈಕಲ್ಯದಲಿ |
ಮರ್ಮವನುಭವವೇದ್ಯ - ಮರುಳ ಮುನಿಯ || (೮೧)

(ಸತಿಪತಿಯರ್+ಇರ‍್ವರ್+ಆಚರಿತದಲಿ)(ಒಮ್ಮೊಮ್ಮೆ+ಅವರ್+ಏಕಂ+ಇರ‍್ತನವನ್+ಉಳಿದು)
(ಜೀವರ‍್ಕಳ್+ಅಂತು+ಇರರೆ)

ಒಂದೊಂದು ಸಲ ಪತಿ ಪತ್ನಿಯರಿಬ್ಬರ ವರ್ತನೆ(ಆಚರಿತ)ಗಳಲ್ಲಿ, ಒಂದೊಂದು ಸಲ ಅವರಿಬ್ಬರಾಗಿರುವುದನ್ನು (ಇರ‍್ತನವನ್) ಬಿಟ್ಟು ಒಂದೇ ಆಗಿ, ಅವರ ಕುಂದು, ಕೊರತೆ ಮತ್ತು ಚಿಂತೆಗಳ ನಡುವೆಯೂ, ಇಬ್ಬರೂ ಬ್ರಹ್ಮನು ಸೃಷ್ಟಿಸಿದ ಜೀವಗಳೇ ಎಂಬಂತೆ ನಡೆದುಕೊಳ್ಳುವುದಿಲ್ಲವೇನು? ಈ ರಹಸ್ಯ(ಮರ್ಮ)ವನ್ನು ಅನುಭವದಿಂದ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ (ವೇದ್ಯ).

ಈ ಸಂಬಂಧದಲ್ಲಿ ನಾವು ಬೇರೆ ಬೇರೆ ಎಂಬ ಭಾವನೆ ಅಳಿಸಿಹೋಗುತ್ತದೆ. ಗಂಡನ ಮಾತೇ ಹೆಂಗಸಿನ ಇಂಗಿತ, ಹೆಂಗಸಿನ ಇಂಗಿತವೇ ಗಂಡನ ಆಚರಣೆ, ಹಾಗೆ ಬ್ರಹ್ಮವಸ್ತು ಬೇರೆ; ನಾನು ಬೇರೆ; ಜೀವ ಬೇರೆ ಎಂಬ ಭಾವನೆ ಅಳಿಸಿಹೋಗಬೇಕಾದರೆ ನಾನು, ನಾನು ಎಂದು ಹೇಳಿಕೊಳ್ಳುವ ಭಾವನೆ ಮರೆಯಾಗಬೇಕು. ಆಗ ಪರಮಾತ್ಮಾನುಭವದ ಕಡೆ ಒಂದು ಹೆಜ್ಜೆಹಾಕಿದಂತಾಗುತ್ತದೆ.

Wednesday, October 5, 2011

ಅನುಭವವದೇನು ? ನಿನ್ನುದ್ದಿಷ್ಟವಸ್ತುವನು (80)


ಅನುಭವವದೇನು ? ನಿನ್ನುದ್ದಿಷ್ಟವಸ್ತುವನು |
ಮನವಪ್ಪಿಕೊಂಡಿಹುದು ಹೊರಗೊಳಗೆ ಸರ್ವಂ ||
ತನುವೊಳಿಹ ರಕ್ತಮಾಂಸಗಳ ತೊಗಲಿನವೋಲು |
ಮನ ಪಿಡಿಯಲನುಭವವೊ - ಮರುಳ ಮುನಿಯ || (೮೦)

(ಅನುಭವವು+ಅದು+ಏನು)(ನಿನ್ನ+ಉದ್ದಿಷ್ಟ+ವಸ್ತುವನು)(ಮನವು+ಅಪ್ಪಿಕೊಂಡು+ಇಹುದು)
(ಹೊರಗೆ+ಒಳಗೆ)(ತನುವೊಳು+ಇಹ)(ಪಿಡಿಯಲ್+ಅನುಭವವೊ)

ಅನುಭವವೆಂದರೇನು ಎನ್ನುವುದರ ವಿವರಣೆ ಇಲ್ಲಿದೆ. ನೀನು ಪಡೆಯಬೇಕೆಂದು ಉದ್ದೇಶಿಸಿದ (ಉದ್ದಿಷ್ಟ) ವಸ್ತುವನ್ನು, ನಿನ್ನ ಮನಸ್ಸು, ಹೊರಗೆ, ಒಳಗೆ ಮತ್ತು ಎಲ್ಲೆಲ್ಲೂ ಪೂರ್ತಿಯಾಗಿ ಆವರಿಸಿಕೊಂಡಿರುವುದು. ದೇಹ(ತನು)ದಲ್ಲಿರುವ ರಕ್ತ ಮಾಂಸ ಮತ್ತು ಚರ್ಮಗಳಂತೆ ಮನಸ್ಸೂ ಸಹ ಆ ವಸ್ತುವನ್ನು ಹಿಡಿದುಕೊಂಡಿದ್ದರೆ ನಿನಗೆ ಅನುಭವದ ಅರಿವುಂಟಾಗುತ್ತದೆ.

Tuesday, October 4, 2011

ಬಾನೊಳೆಲರಾಟಕ್ಕೆ ಸಿಕ್ಕಿರ್ಪ ಧೂಳುಕಣ (79)


ಬಾನೊಳೆಲರಾಟಕ್ಕೆ ಸಿಕ್ಕಿರ್ಪ ಧೂಳುಕಣ |
ಭಾನುವಿಂಗೆಷ್ಟು ಸನಿಹವದೆಷ್ಟು ದೂರ ||
ಅನುಭಾವದ ಮಾತು ಊಹೆ ತರ್ಕಗಳಲ್ಲ |
ಸ್ವಾನುಭೂತಿಯೆ ಸತ್ಯ - ಮರುಳ ಮುನಿಯ || (೭೯)

(ಬಾನೊಳ್+ಎಲರ್+ಆಟಕ್ಕೆ)(ಭಾನುವಿಂಗೆ+ಎಷ್ಟು)(ಸನಿಹ+ಅದು+ಎಷ್ಟು)

ಆಕಾಶದಲ್ಲಿ (ಬಾನೊಳ್) ಗಾಳಿಯ (ಎಲರ್) ಆಟಕ್ಕೆ ಸಿಕ್ಕಿಹಾಕಿಕೊಂಡಿರುವ ಒಂದು ಧೂಳಿನ ಕಣವು, ಸೂರ್ಯ (ಭಾನು)ನಿಗೆಷ್ಟು ಹತ್ತಿರ (ಸನಿಹ) ಅಥವಾ ಅದು ಅವನಿಂದೆಷ್ಟು ದೂರ ಇದೆಯೆಂದು ಯಾರಾದರೂ ನಿಖರವಾಗಿ ಹೇಳಬಲ್ಲರೇನು? ಇದೇ ರೀತಿ ಅನುಭವದಿಂದ ಸಿದ್ಧಿಯಾದ ಮಾತುಗಳು ಊಹೆ ಮತ್ತು ತರ್ಕಕ್ಕೆ ಸಿಗುವುದಿಲ್ಲ. ಸ್ವಂತ ಅನುಭವದಿಂದ ಬಂದಿರುವ ತಿಳುವಳಿಕೆಯೇ (ಸ್ವಾನುಭೂತಿ) ಸತ್ಯ.

Monday, October 3, 2011

ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ (78)


ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ |
ಎತ್ತೆತ್ತಲ್ ಎಂದೆಂದುಂ ಇರುವುದದು ಸತ್ಯ ||
ಗೊತ್ತಿಲ್ಲ ಗುರಿಯಿಲ್ಲ ಗುರುತು ಗೆಯ್ಮೆಗಳಿಲ್ಲ |
ಸತ್ ಒಳ್ಮೆಯೊಳ್ಳಿತದು - ಮರುಳ ಮುನಿಯ || (೭೮)

(ಇರುವಿಕೆಯದ+ಅಸ್ತಿತ್ವ)(ಇರುವುದು+ಅದು)(ಒಳ್ಮೆಯ+ಒಳ್ಳಿತು+ಅದು)

ಶ್ರೇಷ್ಠವಾಗಿರುವ ವಸ್ತು ಎನ್ನುವುದರ ಇರುವಿಕೆ ಬರಿಯ ಇರುವಿಕೆಯೇ ಹೌದು. ಎಲ್ಲೆಲ್ಲಿಯೂ ಎಂದೆಂದಿಗೂ ಇರುವುದು ಸತ್ಯ. ಅದಕ್ಕೆ ಒಂದು ಗೊತ್ತು, ಗುರಿ, ಗುರುತು ಮತ್ತು ಕಾರ್ಯ(ಗೆಯ್ಮೆ)ಗಳಿಲ್ಲ. ಅದು ಒಳ್ಳೆಯದರಲ್ಲಿ ಒಳ್ಳೆಯದು. ಶ್ರೇಷ್ಠವಾಗಿರುವುದರಲ್ಲಿ ಶ್ರೇಷ್ಠವಾದುದು.