Tuesday, July 21, 2015

ಹಳೆಯ ಮನೆ ಮಳೆಯ ಹೊಡೆತದಿನುರುಳಿ ಮಣ್ಣಪ್ಪು(785)

ಹಳೆಯ ಮನೆ ಮಳೆಯ ಹೊಡೆತದಿನುರುಳಿ ಮಣ್ಣಪ್ಪು-|
ದಿಳೆಗೆ ದಿನದಿನದ ಪಾಡದರೊಳತಿಶಯವೇಂ? ||
ಅಳಿದ ಮನೆಯನು ಮರಳಿ ಕಟ್ಟಿ ನಿಲ್ಲಿಸಿ ಬಾಳ |
ಬೆಳಗಿದೊಡೆ ಸುಕೃತ ಕಥೆ - ಮರುಳ ಮುನಿಯ || (೭೮೫)

(ಹೊಡೆತದಿಂ+ಉರುಳಿ)(ಮಣ್ಣ್+ಅಪ್ಪುದು+ಇಳೆಗೆ)(ಪಾಡು+ಅದರೊಳ್+ಅತಿಶಯ+ಏಂ)

ಒಂದು ಹಳೆಯ ಮನೆಯು ಮಳೆಯ ಹೊಡೆತದಿಂದ ಬಿದ್ದು ಭೂಮಿ(ಇಳೆ)ಯಲ್ಲಿ ಸೇರಿಕೊಂಡು ಅದರ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ನಮ್ಮ ದಿನನಿತ್ಯದ ಅವಸ್ಥೆಗಳೂ ಇದಕ್ಕಿಂತ ಬೇರೆಯೇನಲ್ಲ? ಬಿದ್ದು ನಾಶವಾಗಿ ಹೋಗಿರುವ ಮನೆಯನ್ನು ಪುನಃ ಎತ್ತಿ ಕಟ್ಟಿ ಅದರಲ್ಲಿ ವಾಸಿಸುವವರ ಬಾಳು ಬೆಳಗುವಂತೆ ಮಾಡುವುದೇ ಪುಣ್ಯದ ಕೆಲಸ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old house crumbling under heavy rain
And becoming one with the earth is an everyday occurrence
And there’s no wonder in it, But reconstructing the fallen house
And lighting up one’s life is noble righteous act- Marula Muniya (785)
(Translation from "Thus Sang Marula Muniya" by Sri. Narasimha Bhat)

Thursday, July 16, 2015

ಸಹಿಸುವುದು ಸವಿಯುವುದು ಕಹಿಯೂಟ ಸವಿಯುವುದು (784)

ಸಹಿಸುವುದು ಸವಿಯುವುದು ಕಹಿಯೂಟ ಸವಿಯುವುದು |
ಬಹುವಾಯಿತೆಂದೆನದೆ ಕಹಿಯ ಸಹಿಸುವುದು ||
ಕಹಿ-ಸಿಹಿಗಳೆರಡಲ್ಲಮೊಂದೆಯೆನಿಪನ್ನೆಗಂ |
ಸಹಿಸುವುದು ಬಂದುದನು - ಮರುಳ ಮುನಿಯ || (೭೮೪)

(ಬಹು+ಆಯಿತು+ಎಂದು+ಎನದೆ)(ಸಿಹಿಗಳು+ಎರಡಲ್ಲಂ+ಒಂದೆ+ಎನಿಪ+ಅನ್ನೆಗಂ)

ಬಂದುದ್ದನ್ನು ತಾಳ್ಮೆಯಿಂದ ಸಹಿಸುವುದು. ಸಿಹಿಯಾದುದನ್ನು ಸವಿಯುವುದು. ಕಹಿಯಾಗಿರುವ ಊಟವನ್ನು ಮಾಡಿಯೂ ತಾಳ್ಮೆಯಿಂದಿರುವುದು. ಇದು ನನಗೆ ಸಾಕಾಯಿತೆನ್ನದೆ ಆ ಕಹಿಯನ್ನು ತಾಳಿಕೊಳ್ಳುವುದು. ಕಹಿ ಮತ್ತು ಸಿಹಿಗಳು ಬೇರೆ ಅಲ್ಲ, ಎರಡೂ ನನಗೆ ಸಮಾನ ಎಂಬ ಭಾವ ಸಿದ್ಧಿಸುವವರೆಗೂ ತಾಳ್ಮೆಯಿಂದಿದ್ದು, ಬಂದುದ್ದನ್ನೆಲ್ಲ ಸಹಿಸುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Enduring enduring and enjoying even bitter food
Enduring bitterness, without grumbling that it is too bitter
Enduring everything till sweetness and bitterness become the same to you,
Endure everything that comes your way – Marula Muniya (784)
(Translation from "Thus Sang Marula Muniya" by Sri. Narasimha Bhat)

Wednesday, July 1, 2015

ಒಳಿತು ಕೇಡುಗಳೆರಡು ನಿನ್ನನುಭವದ ರೀತಿ (783)

ಒಳಿತು ಕೇಡುಗಳೆರಡು ನಿನ್ನನುಭವದ ರೀತಿ |
ಕಳವಳದಿನಾಚೆ ಮೇಲಿಹುದು ಪರಸತ್ತ್ವ ||
ಕಳಚು ನೀಂ ಸ್ವಾರ್ಥವನು ಬಳಕೆಯಾಚಾರವನು |
ತೊಳಗು ನಿಃಸ್ವಾರ್ಥದಲಿ - ಮರುಳ ಮುನಿಯ || (೭೮೩)

(ಕೇಡುಗಳ್+ಎರಡು)(ಕಳವಳದಿಂ+ಆಚೆ)(ಬಳಕೆ+ಆಚಾರವನು)

ಒಳ್ಳೆಯದು ಮತ್ತು ಕೆಡಕುಗಳು ನಿನ್ನ ಅನುಭವಗಳ ಬಗೆಗಳ ಮೇಲೆ ಅವಲಂಬಿಸಿರುತ್ತವೆ. ತಳಮಳಗಳ ಸ್ಥಿತಿ ಮೀರಿ ಪರಮಾತ್ಮನ ಅಸ್ತಿತ್ತ್ವ ಇರುತ್ತದೆ. ನೀನು ಸ್ವಪ್ರಯೋಜನವನ್ನು ಮತ್ತು ರೂಢಿಯಲ್ಲಿರುವ ಸಂಪ್ರದಾಯಗಳನ್ನು ಬಿಟ್ಟು ಪರೋಪಕಾರದಲ್ಲಿ ನಿರತನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Good and evil depend on how you experience things,
The Truth is far above all anxieties and worries
Give up selfishness and the worn out customs
And shine with the glory of selflessness – Marula Muniya (783)
(Translation from "Thus Sang Marula Muniya" by Sri. Narasimha Bhat)