Friday, September 4, 2015

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು (791)

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು |
ಬಿಡುಗೊಳದ ಮನುಜಮಾನಸರಾಶಿಯೊಂದು ||
ಅಡಿಗಡುಗಳುಂಟು ನೀರ‍್ಗದನೆಳೆವ ಭಟರುಂಟು |
ತಡೆಯುಂಟೆ ನರಮನಕೆ? - ಮರುಳ ಮುನಿಯ || (೭೯೧)

(ಕಡಲ್+ಎರಡು)(ನೀರ+ರಾಶಿ+ಅದು+ಒಂದು)(ಮನುಜ+ಮಾನಸರಾಶಿ+ಒಂದು)(ಅಡಿಗಡುಗಳು+ಉಂಟು)(ನೀರ‍್ಗೆ+ಅದನ್+ಎಳೆವ)(ಭಟರು+ಉಂಟು)(ತಡೆ+ಉಂಟೆ)

ಸೃಷ್ಟಿಯಲ್ಲಿ ಎರಡು ಸಮುದ್ರಗಳಿವೆ. ಒಂದು ನೀರಿನರಾಶಿ. ಮತ್ತೊಂದು ನಿರಂತರವಾಗಿ ಹರಿಯುತ್ತಿರುವ ಮನುಷ್ಯನ ಮನಸ್ಸಿನ ವಿಚಾರಧಾರೆ. ಆ ನೀರಿನ ಕೆಳಗಡೆ ಗಡಿಗಳಿವೆ(ಅಡಿಗಡುಗಳು). ಅದನ್ನು ನೀರಿಗೆ ಎಳೆಯುವ ಸೇವಕರೂ ಇದ್ದಾರೆ. ಮನುಷ್ಯನ ಮನಸ್ಸಿಗೆ ತಡೆಗಳಿಲ್ಲ. ಅದು ಎಲ್ಲಿ ಬೇಕಾದರೂ ಹಾರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two oceans in creation, one is the vast mass of water
The other is the restless mass of human mind,
Bottom and borders there are to the ocean and brave men there are to measure them,
But who is there to check human mind? - Marula Muniya (791)
(Translation from "Thus Sang Marula Muniya" by Sri. Narasimha Bhat)

Thursday, September 3, 2015

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ (790)

ಸೈಸುವನೆ ಜೈಸುವನು ತಾಳ್ಮೆಯೇ ಮೇಲ್ಮೆಯೈ |
ಸಾಸರೋಷಗಳಹುದು ದೋಷ ಭೀಷಣವು ||
ಸೈಸೇನು ಸೋಲಲ್ಲ ಅನ್ಯಾಯದೊಪ್ಪಲ್ಲ |
ಸೈಸುತೆದುರಿಸು ವಿಧಿಯ - ಮರುಳ ಮುನಿಯ || (೭೯೦)

(ಸಾಸ+ರೋಷಗಳ್+ಅಹುದು)(ಸೈಸುತ+ಎದುರಿಸು)

ಸಹಿಸು(ಸೈಸು)ವವನೇ ಜಯಿಸುತ್ತಾನೆ. ತಾಳುಮೆಯೇ ಮೇಲೇಳುವುದು. ತಾಳಿದವನು ಬಾಳಿಯಾನು. ವಿಚಾರಶೂನ್ಯ ಅಪೇಕ್ಷೆ (ಸಾಸ) ಮತ್ತು ಕೋಪ(ರೋಷ)ಗಳಿಂದ, ತಪ್ಪು ಮತ್ತು ಭಯಂಕರ(ಭೀಷಣ) ಅನಾಹುತಗಳಾಗಬಹುದು. ಸಹಿಸಿಕೊಂಡಿರುವುದು ಸೋತುಹೋದಂತೇನಲ್ಲ. ಅದು ಅನ್ಯಾಯವನ್ನು ಒಪ್ಪಿಕೊಂಡಂತೆಯೂ ಅಲ್ಲ. ಆದುದ್ದರಿಂದ ಸಹಿಸಿಕೊಂಡೇ ವಿಧಿಯನ್ನು ಎದುರಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

He who endures wins, patience itself is excellence,
Mad adventure and anger may end is dangerous blunder
Endurance isn’t defeat and acquiescence isn’t injustice
Endure and bravely face the Fate – Marula Muniya (790)
(Translation from "Thus Sang Marula Muniya" by Sri. Narasimha Bhat) #dvg,#kagga

Wednesday, September 2, 2015

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ (789)

ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ |
ಸಹಿಸು ಬೇಡದ ಬಂದ ಪಾಡನೆಲ್ಲ |
ಸಹನೆ ನಿನ್ನಾತ್ಮವನು ಗಟ್ಟಿಪಡಿಪಭ್ಯಾಸ |
ವಿಹಿತವದು ಮನುಜಂಗೆ - ಮರುಳ ಮುನಿಯ || (೭೮೯)

(ಗಟ್ಟಿಪಡಿಪ+ಅಭ್ಯಾಸ)

ಒಂದು ಜೀವಕ್ಕೆ ಗೆಲುವು ಸಹನೆಯಿಂದ ಬರುತ್ತದೆ. ಆದುದ್ದರಿಂದ ನೀನು ಕೇಳಿಕೊಳ್ಳದಿದ್ದರೂ ಸಹ ನಿನ್ನ ಪಾಲಿಗೆ ಬಂದುದ್ದನೆಲ್ಲಾವನ್ನೂ ನೀನು ಸಹನೆಯಿಂದ ತಾಳಿಕೊ. ಅದು ನಿನ್ನ ಆತ್ಮವನ್ನು ಗಟ್ಟಿಗೊಳಿಸುವ ಸಾಧನವಾಗಿದೆ. ಮನುಷ್ಯನಿಗೆ ಬಾಳಲು ಯೋಗ್ಯವಾದ ಮಾರ್ಗ ಅದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Endurance itself is success in life and therefore endure all that comes to you
Endure all joys and sorrows that come to you unmasked
Endurance is an exercise that strengthens your self
It is quite essential to man – Marula Muniya (789)
(Translation from "Thus Sang Marula Muniya" by Sri. Narasimha Bhat)

Tuesday, September 1, 2015

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ (788)

ಸತ್ತ್ವರಜತಮಗಳ ಸ್ಪರ್ಧೆಯೆ ಜಗಲ್ಲೀಲೆ |
ಎತ್ತರದಲೆಯ ತೆರೆಯ ಬೀಳೇಳು ಕಡಲು ||
ಉತ್ತಮನು ಲೀಲೆಯಂ ಲೀಲೆಯೆಂದಾಡುವನು |
ಅತ್ತು ನಿಂತರು (ಕೆಲರು)-ಮರುಳ ಮುನಿಯ || (೭೮೮)

(ಎತ್ತರದ+ಅಲೆಯ)(ಬೀಳ್+ಏಳು)

ಸತ್ತ್ವ, ರಜಸ್ಸು ಮತ್ತು ತಮೋಗುಣಗಳು ಒಂದರ ಜೊತೆ ಇನ್ನೊಂದು ಸ್ಪರ್ಧಿಸುತ್ತಿರುವುದೇ ಈ ಜಗತ್ತಿನ ಆಟ. ಸಮುದ್ರದಲ್ಲಿ ಒಂದು ತೆರೆಯು ಮೇಲಕ್ಕೆ ಎದ್ದು ಪುನಃ ಕೆಳಕ್ಕೆ ಬೀಳುತ್ತದೆ. ಶ್ರೇಷ್ಠವಾಗಿ ಜೀವನವನ್ನು ನಡೆಸುವವನು, ಇದು ಒಂದು ಆಟವೆಂದು ತಿಳಿದುಕೊಂಡು ಆ ಆಟವನ್ನು ನಿಯಮಗಳಿಗನುಸಾರವಾಗಿ ಚೆನ್ನಾಗಿ ಆಡುತ್ತಾನೆ. ಮಿಕ್ಕವರು ದುಃಖಿಸುತ್ತಾ ಇರುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The world play is a competition among satva, rajas and tamas
The sea is just the rise and fall of high waves
The wise considers this play as play
But others waste their lives in grieving – Marula Muniya (788)
(Translation from "Thus Sang Marula Muniya" by Sri. Narasimha Bhat)