Thursday, February 28, 2013

ಮರದ ತುದಿಯಲ್ಲಿ ತನ್ನ ಕೈಗೆಟುಗದಿಹ ಹೂವ (377)

ಮರದ ತುದಿಯಲ್ಲಿ ತನ್ನ ಕೈಗೆಟುಗದಿಹ ಹೂವ - |
ನರುಮೆ ಕಣ್ಣಿಂ ನೋಡಿ ನಲೆಯೆ ಕಲಿತವನು ||
ಕಿರಿಮೊಗ್ಗು ನೆರೆದರಳುವುದನೋಡಿ ಸುಯ್ವವನು |
ಗುರುವಾಗಿರಲಿ ನಿನಗೆ - ಮರುಳ ಮುನಿಯ || (೩೭೭)

(ಕೈಗೆ+ಎಟುಗದೆ+ಇಹ)(ಹೂವನ್+ಅರುಮೆ)(ನೆರೆದು+ಅರಳುವುದ+ನೋಡಿ)(ಸುಯ್ವ+ಅವನು)

ಒಂದು ಮರದ ತುದಿಯಲ್ಲಿ ತನ್ನ ಕೈಗೆ ಸಿಗದಿರುವಂತೆ ಬಿಟ್ಟಿರುವ ಹೂವನ್ನು ಪ್ರೀತಿ(ಅರುಮೆ)ಯ ಕಣ್ಣುಗಳಿಂದ ಕಂಡು ಸಂತೋಷಿಸುವುದನ್ನು ತಿಳಿದುಕೊಂಡವನು ಮತ್ತು ಚಿಕ್ಕ ಮೊಗ್ಗುಗಳು ಗಿಡದಲ್ಲಿ ತುಂಬಿಕೊಂಡು ಅರಳುವುದನ್ನು ವೀಕ್ಷಿಸಿ ಉಸಿರು ಬಿಡುವವನು, ನಿನಗೆ ಗುರುವಾಗಿರಲಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Accept the one who dances in the joy on seeing the flowers on tree tops
With admiring eyes even though they are unreachable
And the one who breathes in joy on seeing the blossoming buds
As your Preceptor – Marula Muniya
(Translation from "Thus Sang Marula Muniya" by Sri. Narasimha Bhat)

Wednesday, February 27, 2013

ರೋಚಕಂಗಳ ರಚಿಸಿ ಭೂ ಭೋಜ್ಯ ಶಾಲೆಯಲಿ (376)

ರೋಚಕಂಗಳ ರಚಿಸಿ ಭೂ ಭೋಜ್ಯ ಶಾಲೆಯಲಿ |
ಪಾಚನಕ್ರಮದ ರಸಸಾರ ಸಾಧನೆಗೆ ||
ಸೂಚಿಸುತ ಸೌಂದರ್ಯ ಮೂಲ ಪಾಠವ ಕಲಿಸು- |
ವಾಚಾರ್ಯನೇ ಪ್ರಕೃತಿ - ಮರುಳ ಮುನಿಯ || (೩೭೬)

(ಕಲಿಸುವ+ಆಚಾರ್ಯನೇ)

ಆಕರ್ಷಕ ವಸ್ತುಗಳನ್ನು (ರೋಚಕಂಗಳ) ನಿರ್ಮಿಸಿ, ಈ ಭೂಮಿಯ ಭೋಜನ ಶಾಲೆಯಲ್ಲಿ, ರಸಭರಿತವಾದ ಅಡುಗೆಯನ್ನು ತಯಾರಿಸುವ ವಿಧಾನಗಳನ್ನು ತೋರಿಸಿಕೊಡುತ್ತಾ, ಸೊಬಗುಗಳ ಮೊದಲ ಪಾಠವನ್ನು (ಮೂಲಪಾಠ) ತಿಳಿಸಿಕೊಡುವ ಗುರುವೇ ಪ್ರಕೃತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
 
Nature prepares delicious dishes in the kitchen, the world
He teaches us how to cook the most tasty dishes
He imparts the basic lessons in aesthetics,
Such a great preceptor is Nature – Marula Muniya
(Translation from "Thus Sang Marula Muniya" by Sri. Narasimha Bhat)

Tuesday, February 26, 2013

ಆಗಸದ ಲೋಲಗಳ ಖಗಕುಲೋಡ್ಡೀನಗಳ (375)

ಆಗಸದ ಲೋಲಗಳ ಖಗಕುಲೋಡ್ಡೀನಗಳ |
ಸಾಗರೋರ್ಮಿಗಳ ತರುಶಿರದ ಜಲಕಣದಾ ||
ಬಾಗು ಗುಂಡುಗಳ ಚಂದವ ಕಣ್ಗೆ ಕಲಿಸುತಿಹ |
ಮಾಗುರುವು ಸೃಷ್ಟಿಯಲೆ - ಮರುಳ ಮುನಿಯ || (೩೭೫)

(ಕುಲ+ಉಡ್ಡೀನಗಳ)(ಸಾಗರ+ಊರ್ಮಿಗಳ)(ಕಲಿಸುತ+ಇಹ)

ಆಕಾಶ(ಆಗಸ)ದಲ್ಲಿರುವ ಗುಂಡಾಗಿರುವ ವಸ್ತುಗಳನ್ನು, ಹಕ್ಕಿ(ಖಗ)ಯ ಜಾತಿಗೆ ಸೇರಿದವುಗಳ ಹಾರಾಟ(ಉಡ್ಡೀನ)ಗಳನ್ನು, ಸಮುದ್ರದ ಅಲೆ(ಊರ್ಮಿ)ಗಳ, ಗಿಡಗಳ ತುದಿಯ ಮತ್ತು ನೀರಿನ ಹನಿಗಳ, ಧಾರೆ ಮತ್ತು ಮುತ್ತಿನ ಚೆಲುವುಗಳನ್ನು ನಿನ್ನ ಕಣ್ಣುಗಳಿಗೆ ಬೋಧೆಯಾಗುವಂತೆ ಮಾಡುತ್ತಿರುವ ಮಾಹಾಗುರುವು ಸೃಷ್ಟಿತಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature is the great preceptor who teaches your eyes to enjoy
The beauty of the celestial orbs and of the flying sky-birds
The beauty of the curved ocean waves and of the round water drops on the tree tops
Such a great preceptor is Nature – Marula Muniya (375)
(Translation from "Thus Sang Marula Muniya" by Sri. Narasimha Bhat)

Monday, February 25, 2013

ಅರುಣಿಮೆಯ ಸಂಜೆಗಳ ನೀಲಿಮೆಯ ನಭತಲವ (374)


ಅರುಣಿಮೆಯ ಸಂಜೆಗಳ ನೀಲಿಮೆಯ ನಭತಲವ |
ಹರಿತವನಶಾದ್ವಲವ ತಾಮ್ರಪಲ್ಲವವ ||
ಪರಿಪರಿಯ ಬಣ್ಣ ಸೊಬಗುಗಳ ಕಣ್ಣಿಗೆ ಕಲಿಪ |
ಗುರುವಾರು ಪ್ರಕೃತಿಯಲೆ - ಮರುಳ ಮುನಿಯ || (೩೭೪)

(ಗುರು+ಆರು)(ಪ್ರಕೃತಿ+ಅಲೆ)

ಸೂರ್ಯನು ಸಾಯಂಕಾಲದ ಹೊತ್ತು ಮುಳುಗುವಾಗ ಕಾಣುವ ನಸುಗೆಂಪು(ಅರುಣಿಮೆ) ಬಣ್ಣವನ್ನು, ನೀಲಿಯಾಗಿ ಕಾಣುವ ಆಕಾಶ(ನಭ)ದ ಸ್ಥಳವನ್ನು, ಹಸಿರು (ಹರಿತ) ಬಣ್ಣವಾಗಿ ಕಾಣುತ್ತಿರುವ ಕಾಡಿನ ಹುಲ್ಲುಗಾವಲುಗಳನ್ನು (ಶಾದ್ವಲ), ಕೆಂಪು(ತಾಮ್ರ)ಬಣ್ಣದಿಂದ ಒಡಗೂಡಿರುವ ಗಿಡಗಳ ಚಿಗುರು(ಪಲ್ಲವ)ಗಳನ್ನು ಮತ್ತು ಈ ರೀತಿ ವಿಧವಿಧವಾದ ವರ್ಣಗಳನ್ನು ಮತ್ತು ಅಂದಗಳನ್ನು ನಿನ್ನ ಕಣ್ಣುಗಳಿಗೆ ಕಾಣಿಸಿಕೊಡುವ ಗುರು ಯಾರು? ಪ್ರಕೃತಿ ತಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature is the great preceptor who teaches your eyes to enjoy
The beauty of the red rosy evenings and the blue sky
The grace of green wild vegetation and the copper red springs
And the wide variety of colors – Marula Muniya (374)
(Translation from "Thus Sang Marula Muniya" by Sri. Narasimha Bhat)

Friday, February 22, 2013

ಸ್ವಾದುಗಳ ನಾಲಗೆಗೆ ರಾಗಗಳ ಕಂಗಳಿಗೆ (373)

ಸ್ವಾದುಗಳ ನಾಲಗೆಗೆ ರಾಗಗಳ ಕಂಗಳಿಗೆ |
ನಾದ ಸರಗಳ ಕಿವಿಗೆ ಸುರಭಿಯುನುಸಿರ್ಗೆ   ||
ಮಾಧುರಿಯ ರಸಭಾವಗಳ ಮನಕೆ ಕಲಿಸುತಿರು - |
ವಾದಿಗುರು ಸೃಷ್ಟಿಯಲೆ - ಮರುಳ ಮುನಿಯ || (೩೭೩)

(ಸುರಭಿಯುನ್+ಉಸಿರ್ಗೆ)(ಕಲಿಸುತಿರುವ+ಆದಿಗುರು)(ಸೃಷ್ಟಿ+ಅಲೆ)

ಮಧುರವಾದ ರುಚಿಗಳನ್ನು (ಸ್ವಾದುಗಳ) ನಿನ್ನ ನಾಲಿಗೆಗೆ, ವಿಧವಿಧವಾದ ಬಣ್ಣಗಳನ್ನು (ರಾಗಗಳ) ನಿನ್ನ ಕಣ್ಣುಗಳಿಗೆ, ಶಬ್ಧಗಳ ಇಂಪಾದ ಧ್ವನಿ(ಸರ)ಗಳನ್ನು ನಿನ್ನ ಕಿವಿಗಳಿಗೆ, ಸುವಾಸನೆ(ಸುರಭಿ)ಗಳನ್ನು ನಿನ್ನ ನಾಸಿಕಕ್ಕೆ, ಮನೋಹರ (ಮಾಧುರಿ)ವಾದ ನವರಸ ಭಾವನೆಗಳನ್ನು ನಿನ್ನ ಮನಸ್ಸಿಗೆ ಅರಹುತ್ತಿರುವ, ಮೂಲಗುರು ಸೃಷ್ಟಿ ತಾನೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Nature teaches tastes to the tongue and colors to the eyes
Sounds and musical notes to the ears and fragrance to the nose
She teaches sentiments and aesthetic emotions to the mind
Nature is your first Preceptor – Marula Muniya (373)
(Translation from "Thus Sang Marula Muniya" by Sri. Narasimha Bhat)

Thursday, February 21, 2013

ಗುರುವಿಲ್ಲವೆನಬೇಡ ಜಗವೇ ಜಗದ್ಗುರುವೊ (372)

ಗುರುವಿಲ್ಲವೆನಬೇಡ ಜಗವೇ ಜಗದ್ಗುರುವೊ |
ಅರಿಮಿತ್ರ ವಿಭುಭೃತ್ಯ ಸತಿಪುತ್ರವರ್ಗ ||
ಪರಿಪರಿಯ ಪಾಠಗಳ ಕಲಿಸುತಿರ್ಪರು ನಿನಗೆ |
ಅರಿತುಕೊಳಲನುವಾಗು - ಮರುಳ ಮುನಿಯ || (೩೭೨)

(ಗುರು+ಇಲ್ಲ+ಎನಬೇಡ)(ಜಗತ್+ಗುರುವೊ)(ಕಲಿಸುತ+ಇರ್ಪರು)(ಅರಿತುಕೊಳಲ್+ಅನುವಾಗು)

ನನಗೆ ಯಾವ ಗುರುವೂ ಇಲ್ಲ ಎಂದೆನ್ನಬೇಡ. ಈ ಪ್ರಪಂಚವೇ ನಿನಗೆ ಎಲ್ಲಾ ಪಾಠಗಳನ್ನು ಕಲಿಸುವ ಜಗದ್ಗುರು. ಶತ್ರು(ಅರಿ), ಸ್ನೇಹಿತ(ಮಿತ್ರ), ಒಡೆಯ(ವಿಭು) ಸೇವಕ (ಭೃತ್ಯ), ಪತ್ನಿ, ಪುತ್ರ ಮತ್ತು ಇತರರು, ವಿಧವಿಧವಾದ ಪಾಠಗಳನ್ನು ನಿನಗೆ ಕಲಿಸುತ್ತಿದ್ದಾರೆ. ಈ ಪಾಠಗಳನ್ನು ಕಲಿತುಕೊಳ್ಳಲು ಸಿದ್ಧನಾಗು (ಅನುವಾಗು).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Say not you have no preceptor, the world itself is the world teacher
Friend, foe, master, servant, wife and children
All these people teach you a variety of lessons
Be ready to learn – Marula Muniya (372)
(Translation from "Thus Sang Marula Muniya" by Sri. Narasimha Bhat)

Wednesday, February 20, 2013

ಜೀವನವೆ ಸಂಪತ್ತು, ಬೇರೆ ಸಂಪತ್ತೇಕೆ? (371)

ಜೀವನವೆ ಸಂಪತ್ತು, ಬೇರೆ ಸಂಪತ್ತೇಕೆ? |
ಭೂವಿಯಚ್ಚಿತ್ರಗಳಿನಗಲ್ದ ತಿಳಿಗಣ್ಣು ||
ಜೀವಲೋಕದ ದನಿಗೆ ಮರುದನಿಯ ಮಿಡಿಯುವುದೆ |
ದೈವ ಪ್ರಸಾದವು - ಮರುಳ ಮುನಿಯ || (೩೭೧)

(ಭೂಮಿಯತ್+ಚಿತ್ರಗಳಿನ್+ಅಗಲ್ದ)

ನಾವು ನಡೆಸುತ್ತಿರುವ ಜೀವನವೇ ಪರಮೈಶ್ವರ್ಯ. ಮಿಕ್ಕ ಇನ್ನಾವ ಐಶ್ವರ್ಯಗಳೂ ಬೇಕಿಲ್ಲ. ಭೂಮಿ ಮತ್ತು ಆಕಾಶ(ವಿಯತ್)ಗಳಲ್ಲಿ ಪ್ರಕೃತಿಯು ಸೃಷ್ಟಿಸಿರುವ ಚಿತ್ರಗಳನ್ನು ಕಂಡು ಹಿಗ್ಗದಿರುವ ನಿರ್ಮಲವಾದ ಕಣ್ಣುಗಳು, ಈ ಜಗತ್ತಿನಲ್ಲಿರುವ ಜೀವಿಗಳ ಧ್ವನಿಗೆ ಪ್ರತಿಧ್ವನಿಯನ್ನು ಕೊಟ್ಟು ಸ್ಪಂದಿಸುವುದೇನು? ಪರಮಾತ್ಮನು ನಮ್ಮ ಮೇಲೆ ತೋರಿಸಿರುವ ದಯೆ ಮತ್ತು ಅನುಗ್ರಹಗಳು ಇವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Life itself is wealth, what other wealth is greater than Life?
Do you enjoy the pictures of world and sky wide-eyed?
Does your heart echo the voices of the world of life?
These are the great gifts of God – Marula Muniya || (371)
(Translation from "Thus Sang Marula Muniya" by Sri. Narasimha Bhat)

Tuesday, February 19, 2013

ಸುಳ್ಳೇನೊ ದಿಟವೇನೊ ಜಗದ ನಂಬಿಕೆಗಳಲಿ (370)

ಸುಳ್ಳೇನೊ ದಿಟವೇನೊ ಜಗದ ನಂಬಿಕೆಗಳಲಿ |
ಕಲ್ಲೋಲವಹುದು ಮನವಾದೊಡಂಜಿಕೆಯೇಂ ? ||
ನೆಲ್ಲು ಬಾಣಲಿಯ ಬಿಸಿಯೊಳು ಹೊರಳುತರಳಾಗೆ |
ಸಲ್ಲುವುದು ಹಿತರುಚಿಗೆ - ಮರುಳ ಮುನಿಯ || (೩೭೦)

(ಕಲ್ಲೋಲ+ಅಹುದು)(ಮನವ+ಆದೊಡಂ+ಅಂಜಿಕೆ+ಏಂ)(ಬಿಸಿಯ+ಒಳು)(ಹೊರಳುತ+ಅರಳು+ಆಗೆ)

ಈ ಪ್ರಪಂಚದ ಭರವಸೆ, ವಿಶ್ವಾಸಗಳಲ್ಲಿ ನಿಜ ಮತ್ತು ಸುಳ್ಳು ಯಾವುದೆಂದು ಹೇಗೆ ತಿಳಿಯುವುದು? ಮನಸ್ಸು ಒಂದು ಬೃಹತ್ ಅಲೆಯಂತೆ (ಕಲ್ಲೋಲ) ಆದರೂ ಸಹ ಭೀತಿ (ಅಂಜಿಕೆ) ಏತಕ್ಕೆ? ಬತ್ತ(ನೆಲ್ಲು)ವು ಬಿಸಿ ಬಾಂಡಲೆಯಲ್ಲಿ ಹುರಿಯಲ್ಪಟ್ಟ, ಅರಳು ಆದರೆ, ಅದು ಬಾಯಿಯ ಅಸ್ವಾದನೆಗೆ ಹಿತಕರವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Which are true and which are false in the beliefs of men in the world?
Why do you fear even if your mind becomes agitated?
When the paddy grains in the burning pan roll on and blossom into popcorn
They become tasty and enjoyable – Marula Muniya (370)
(Translation from "Thus Sang Marula Muniya" by Sri. Narasimha Bhat)

Friday, February 15, 2013

ಅಜವಸ್ತುವೊಂದದರ ಛಾಯೆಯೊಂದೀಯೆರಡೆ (369)

ಅಜವಸ್ತುವೊಂದದರ ಛಾಯೆಯೊಂದೀಯೆರಡೆ |
ನಿಜಗಳೀ ವಿಶ್ವಜೀವನದ ಲೀಲೆಯಲಿ ||
ಭಜಿಸಿ ನೀಂ ವಸ್ತುವನು ಛಾಯೆಯಾಟವನಾಡೆ |
ಮೃಜಿತಮದುಮಪ್ಪುದೆಲೊ - ಮರುಳ ಮುನಿಯ || (೩೬೯)

(ಒಂದು+ಅದರ)(ಛಾಯೆ+ಒಂದು+ಈ+ಎರಡೆ)(ನಿಜಗಳು+ಈ)(ಛಾಯೆ+ಆಟವನ್+ಆಡೆ)(ಮೃಜಿತಂ+ಅದು+ಅಪ್ಪುದು+ಎಲೊ)

ಬ್ರಹ್ಮ(ಅಜ)ನೆಂಬ ವಸ್ತು ಒಂದು ಮತ್ತು ಮತ್ತೊಂದು ಅದರ ನೆರಳು. ಇವೆರಡೇ ಈ ಪ್ರಪಂಚದ ಬಾಳೆಂಬ ಆಟದಲ್ಲಿ ಸತ್ಯ. ನೀನು ಪರಮಾತ್ಮನನ್ನು ಪೂಜಿಸಿ (ಭಜಿಸಿ) ಆ ನೆರಳಿನ ಜೊತೆ ಆಟವನ್ನಾಡಿದರೆ, ಬದುಕು ಪರಿಶುದ್ಧ (ಮೃಜಿತ)ವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Two things are only are true in the play of worldly life
One is the eternal Brahma and the other is His shadow
Singing His praise and playing the role of His shadow
You become the purest purity – Marula Muniya (369)
(Translation from "Thus Sang Marula Muniya" by Sri. Narasimha Bhat)

Wednesday, February 13, 2013

ಏನ ತಾಂ ತಂದುಕೊಂಡಿಹನು ತನ್ನಯ ಬಾಳ್ಗೆ (368)

ಏನ ತಾಂ ತಂದುಕೊಂಡಿಹನು ತನ್ನಯ ಬಾಳ್ಗೆ |
ಮಾನವಂ ಪ್ರಗತಿಯಂ ಸಾಧಿಪುಜ್ಜುಗದೊಳ್? ||
ಆನೆಯಡಿಗದು ಕೀಳ್ತ ಲತೆ ನಿಗಳವಾದಂತೆ |
ಜಾಣ್‍ತನದೆ ತನುಗುರುಳು - ಮರುಳ ಮುನಿಯ || (೩೬೮)

(ತಂದುಕೊಂಡು+ಇಹನು)(ಸಾಧಿಪ+ಉಜ್ಜುಗದ+ಒಳ್)(ಆನೆ+ಅಡಿಗೆ+ಅದು)(ತನುಗೆ+ಉರುಳು)

ಮನುಷ್ಯನು ಏಳಿಗೆಯನ್ನು ಈಡೇರಿಸುವ ಪ್ರಯತ್ನದಲ್ಲಿ ತನ್ನ ಜೀವನಕ್ಕೆ ತನಗೆ ತಾನೇ ಏನನ್ನು ತಂದುಕೊಂಡಿದ್ದಾನೆ? ಆನೆಯು ಬಳ್ಳಿಗಳನ್ನು ಕಿತ್ತನಂತರ ಅವು ಆ ಆನೆಯ ಕಾಲು(ಅಡಿ)ಗಳಿಗೇ ತೊಡರಿಕೊಂಡು ಅದಕ್ಕೆ ಸಂಕೋಲೆಯಾಗುವಂತೆ, ಮನುಷ್ಯನೂ ಸಹ ತನ್ನ ಅತಿ ಬುದ್ಧಿವಂತಿಕೆಯಿಂದ ತನ್ನ ದೇಹ(ತನು)ಕ್ಕೆ ಪಾಶ(ಉರುಳು)ವನ್ನು ಬಿಗಿದುಕೊಂಡಿದ್ದಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What has man earned for his life
In his tireless endeavor to achieve progress?
Just as the uprooted creeper becomes a binding chain to the elephant’s leg
Man’s cleverness has become the killing noose around his neck – Marula Muniya
(Translation from "Thus Sang Marula Muniya" by Sri. Narasimha Bhat)

Tuesday, February 12, 2013

ಜೀವಜಡಗಳು ನದೀಕೂಲಗಳವೊಲು ಬೇರೆ (367)

ಜೀವಜಡಗಳು ನದೀಕೂಲಗಳವೊಲು ಬೇರೆ |
ಜೀವ ಜೀವಗಳು ನದಿನದಿಯಂತೆ ಬೇರೆ ||
ಜೀವಾತ್ಮಗಳ್ ಪ್ರವಾಹೋರ್ಮಿಗಳವೊಲು ಬೇರೆ |
ತ್ರೈವಿಧ್ಯವೀಭೇದ - ಮರುಳ ಮುನಿಯ || (೩೬೭)

(ಜೀವ+ಆತ್ಮಗಳ್)(ಪ್ರವಾಹ+ಊರ್ಮಿಗಳವೊಲು)(ತ್ರೈವಿಧ್ಯ+ಈ+ಭೇದ)

ಈ ಪ್ರಪಂಚದಲ್ಲಿ ಜೀವವಿರುವ ವಸ್ತುಗಳು ಮತ್ತು ಜೀವವಿರದಿರುವ ವಸ್ತುಗಳು ನದಿಯ ದಡ(ಕೂಲ)ಗಳಂತೆ ಬೇರೆ ಬೇರೆಯಾಗಿವೆ. ಜೀವ ಮತ್ತು ಜೀವಗಳು ಬೇರೆ ಬೇರೆ ನದಿಯಂತೆ ಬೇರೆ ಬೇರೆಯಾಗಿರುತ್ತವೆ. ಈ ರೀತಿ ಮೂರು (ತ್ರೈ) ವಿಧವಾದ ವ್ಯತ್ಯಾಸ(ಭೇದ)ಗಳಿವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Soul and soul are separate like the banks of a river
Soul and soul are different like different rivers
Soul and soul are different like waves in a river
Threefold are the differences like this – Marula Muniya (367)
(Translation from "Thus Sang Marula Muniya" by Sri. Narasimha Bhat)

Monday, February 11, 2013

ಒಲವು ನಲುಮೆಯೆ ಸೃಷ್ಟಿ ಮುಳಿಸು ಮಂಕೇ ಪ್ರಲಯ (366)

ಒಲವು ನಲುಮೆಯೆ ಸೃಷ್ಟಿ ಮುಳಿಸು ಮಂಕೇ ಪ್ರಲಯ- |
ಜಲಧಿಯಲಿ ಸಂಸಾರ ಶಿಲೆಯ ನೆಲೆ ಶಾಂತಿ ||
ಚಲನವಲನವೆ ಮಾಯೆಯಚಲಸಂಸ್ಥಿತಿ ಬೊಮ್ಮ |
ಲಲಿತರೌದ್ರಗಳೆ ಜಗ - ಮರುಳ ಮುನಿಯ || (೩೬೬)

(ಮಾಯೆ+ಅಚಲ)

ಸ್ನೇಹ ಮತು ಸಂತೋಷ (ನಲುಮೆ)ಗಳೇ ಸೃಷ್ಟಿ. ಕೋಪ (ಮುಳಿಸು) ಬೆಪ್ಪುತನ ಮತ್ತು ದಿಗ್ಭ್ರಮೆಗಳೇ ನಾಶ(ಪ್ರಲಯ). ಸಮುದ್ರದ ತೆರೆಗಳಂತೆ ಸಂಸಾರ ಮತ್ತು ಶಿಲೆಯಂತೆ ಸ್ಥಿರವಾದ ಆಶ್ರಯವೇ ನೆಮ್ಮದಿ. ಚಂಚಲತೆ ಮತ್ತು ಅಸ್ಥಿರತೆಯೇ ಮಾಯೆ ಮತ್ತು ಅಲುಗಾಡದೆ ಶಾಶ್ವತವಾಗಿರುವ ಬೆಟ್ಟದಂತೆ ಚಿರಂತನ ಅವಸ್ಥೆಯಲ್ಲಿರುವುದೇ ಪರಬ್ರಹ್ಮ. ಸುಂದರ, ಮನೋಹರ ಮತ್ತು ಕೋಮಲ(ಲಲಿತ) ಸ್ವರೂಪದ ಜತೆಗೆ ಸಿಟ್ಟು, ರೋಷ ಮತ್ತು ಭೀಕರತೆಯ ಸ್ವರೂಪವನ್ನು ಒಳಗೊಂಡಿರುವುದೇ ಜಗತ್ತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Pleasure and love are creation, anger and ignorance are dissolution
This worldly life is a roaring ocean, where peace is the rock refuge
Movement is Maya, unshakable existence is Brahma
Beauty and terror constitute the world – Marula Muniya
(Translation from "Thus Sang Marula Muniya" by Sri. Narasimha Bhat)

Friday, February 8, 2013

ನರಶತಕ ಶತಲೋಕ ಶವಶತಕವೇಕಶವ (365)

ನರಶತಕ ಶತಲೋಕ ಶವಶತಕವೇಕಶವ |
ಪರಿಪರಿಯಭಿವ್ಯಕ್ತಿ ಜೀವ ಸತ್ತ್ವವಿರೆ ||
ಸ್ವಾರಸ್ಯಚಿತ್ರದಿಂ ಚಿತ್ರವೈವಿಧ್ಯದಿಂ |
ಶಿವರೊ ಸೃಷ್ಟಿಗೆ ವ್ಯಕ್ತಿ - ಮರುಳ ಮುನಿಯ || (೩೬೫)

(ಶತಕವು+ಏಕಶವ)(ಪರಿಪರಿಯ+ಅಭಿವ್ಯಕ್ತಿ)

ನೂರಾರು ಮನುಷ್ಯರಿದ್ದಲ್ಲಿ ನೂರಾರು ಪ್ರಪಂಚಗಳು ಅವರ ಮನಸ್ಸಿನಲ್ಲಿರುತ್ತವೆ. ಆದರೆ ನೂರಾರು ಶವಗಳಿದ್ದರೂ ಅವುಗಳಲ್ಲಿ ಮನಸ್ಸಿಲ್ಲದಿರುವುದರಿಂದ ಅವು ಒಂದೇ ಒಂದು ಶವಕ್ಕೆ ಸಮಾನವಾಗುತ್ತವೆ. ನಾನಾಪರಿಯಲ್ಲಿ ಕಾಣಿಸಿಕೊಳ್ಳುವಿಕೆ (ಅಭಿವ್ಯಕ್ತಿ) ಮತ್ತು ಜೀವಗಳ ಸಾರಗಳಿರಲು, ಸ್ವಾರಸ್ಯವಾಗಿರುವ ಬದುಕಿನ ನೋಟಗಳಿಂದ ಮತ್ತು ಬದುಕಿನ ವಿವಿಧತೆಯಿಂದ ಮನುಷ್ಯನು ಈ ಸೃಷ್ಟಿಗೆ ಶಿಖರಪ್ರಾಯನಾಗಿದ್ದಾನೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Hundreds of human beings are hundreds of worlds
But hundreds of corpses are as good as one. When alive
The manifestations are many. With fascinating pictures
Of fantastic varieties man shines as the crown of creation – Marula Muniya (365)
(Translation from "Thus Sang Marula Muniya" by Sri. Narasimha Bhat)

Thursday, February 7, 2013

ನಟರಾಜನಂಗಾಂಗವಿಕ್ಷೇಪದಲಿ ಮೇಯ (364)

ನಟರಾಜನಂಗಾಂಗವಿಕ್ಷೇಪದಲಿ ಮೇಯ - |
ಘಟನೆಗಂ ಮಾಪಕನ ನಯನ ಚಾಲನೆಗಂ ||
ತ್ರುಟಿಮಾತ್ರದನಿವಾರ್ಯ ಭೇದವಿರೆ ವಿಜ್ಞಾನ |
ಪಟುತೆ ನಿಷ್ಫಲವಲ್ಲಿ - ಮರುಳ ಮುನಿಯ || (೩೬೪)

(ನಟರಾಜನ+ಅಂಗಾಂಗ)(ತ್ರುಟಿಮಾತ್ರದ್+ಅನಿವಾರ್ಯ)(ಭೇದ+ಇರೆ)(ನಿಷ್ಫಲ+ಅಲ್ಲಿ)

ನೃತ್ಯ ಮಾಡುತ್ತಿರುವ ಶಿವನ ಅಂಗಾಂಗಗಳ ಕ್ಷೋಭೆ(ವಿಕ್ಷೇಪ)ಗಳಲ್ಲಿ ನಮ್ಮ ತಿಳಿವಿಗೆ ಎಟುಕಬಹುದಾದ ಮತ್ತು ಅಳೆಯಲು ಸಾಧ್ಯವಾದ ಘಟನೆಗಳಿಗೂ ಮತ್ತು ಇವುಗಳನ್ನು ನೋಡುವವನ (ಮಾಪನ) ಕಣ್ಣುಗಳ ಚಲನಶಕ್ತಿಗೂ, ಸ್ವಲ್ಪ (ತ್ರುಟಿ) ಮಾತ್ರ ತಪ್ಪಿಸಿಲಾಗದ ವ್ಯತ್ಯಾಸವಿದ್ದರೆ, ವಿಜ್ಞಾನದ ಸಾಮರ್ಥ್ಯ(ಪಟುತೆ)ವು ಅಲ್ಲಿ ವ್ಯರ್ಥವಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

There can be an inevitable point space difference between
The knowledge movement of the body of Nataraja
The Cosmic Dancer and the eye movement of the measuring observer
In such a situation, even the scientific skills becomes futile – Marula Muniya (364)
(Translation from "Thus Sang Marula Muniya" by Sri. Narasimha Bhat)
 

Wednesday, February 6, 2013

ಮೂಲ ಸದ್ಬ್ರಹ್ಮದೇಕದ ಬಹುತೆಯೇ ವೇಷ (363)

ಮೂಲ ಸದ್ಬ್ರಹ್ಮದೇಕದ ಬಹುತೆಯೇ ವೇಷ |
ಕಾಲ ದೇಶದೊಳಾತ್ಮ ಸಿಕ್ಕಿಹುದು ವೇಷ ||
ತಾಳಿ ದೇಹವನಾತ್ಮ ಜೀವವಾದುದೆ ವೇಷ |
ಲೀಲೆ ವೇಷದ ಸರಣಿ - ಮರುಳ ಮುನಿಯ || (೩೬೩)

(ಸತ್+ಬ್ರಹ್ಮದ+ಏಕದ)(ದೇಶದೊಳ್+ಆತ್ಮ)(ಜೀವ+ಆದುದೆ)

ಮೂಲನಾಗಿರುವ ಪ್ರಶಸ್ತನಾದ ಮತ್ತು ಪೂಜಾರ್ಹನಾಗಿರುವ ಬ್ರಹ್ಮನ ಏಕತೆಯ ಬಹುವಾಗಿರುವಿಕೆಯೇ ಈ ವೇಷ. ಸಮಯ ಮತ್ತು ಸ್ಥಳಗಳೊಳಗೆ ಆತ್ಮವು ಸಿಕ್ಕಿಕೊಂಡು ವೇಷವನ್ನು ಧರಿಸಿದೆ. ಆತ್ಮವು ದೇಹವನ್ನು ಧರಿಸಿ ಜೀವಿಯಾಗಿರುವುದೆ ವೇಷ. ಈ ವೇಷಧಾರಿ ಜೀವಿಗಳ ನಿರಂತರ ನಟನೆಯೇ ಒಂದು ಆಟ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The many forms of the one obsolete Brahma, the fountain head are disguises
Self becoming soul limiting itself in time and place is a disguise
Self becoming soul in the body also a disguise
This play is a chain of disguised forms – Marula Muniya (363)
(Translation from "Thus Sang Marula Muniya" by Sri. Narasimha Bhat)

Tuesday, February 5, 2013

ಮಾರನ ಬೆರಲ್ ನಿನಗೆ ಕಚಕುಳಿಯನಿಕ್ಕದಿರೆ (362)

ಮಾರನ ಬೆರಲ್ ನಿನಗೆ ಕಚಕುಳಿಯನಿಕ್ಕದಿರೆ |
ವೈರ ನಿನ್ನೆದೆಯೊಳಕೆ ಹುಳಿಯ ಹಿಂಡದಿರೆ ||
ಸ್ವಾರಸ್ಯವೇನಿನ್ನು ಜಗದ ನಾಟಕದಲ್ಲಿ |
ಬೇರು ಸೃಷ್ಟಿಗೆ ಕಾಮ - ಮರುಳ ಮುನಿಯ || (೩೬೨)

(ಕಚಕುಳಿಯನ್+ಇಕ್ಕದೆ+ಇರೆ)(ನಿನ್ನ+ಎದೆಯ+ಒಳಕೆ)(ಹಿಂಡದೆ+ಇರೆ)(ಸ್ವಾರಸ್ಯವೇನ್+ಇನ್ನು)

ಮನ್ಮಥ(ಮಾರ)ನ ಬೆರಳುಗಳು ನಿನಗೆ ಕಚಕುಳಿಯನ್ನಿಡದಿದ್ದರೆ, ದ್ವೇಷ ಮತ್ತು ಹಗೆತನಗಳು ನಿನ್ನ ಎದೆಯೊಳಗಡೆ ಹುಳಿಯನ್ನು ಹಿಂಡದಿದ್ದರೆ, ಈ ಜಗತ್ತಿನ ನಾಟಕದಲ್ಲಿ ಸ್ವಾರಸ್ಯವೇನಾದರೂ ಉಳಿದಿರುತ್ತದೇನು? ಜಗತ್ತಿನ ಸೃಷ್ಟಿಗೆ ಬೇರು ಕಾಮವೇ ಹೌದು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where is interest and excellence in the world drama
If cupid’s finger doesn’t tickle your sensitive parts
And hatred and jealously don’t squeeze acid drops into your heart?
Lusty love is the root of creation – Marula Muniya (362)
(Translation from "Thus Sang Marula Muniya" by Sri. Narasimha Bhat)

Monday, February 4, 2013

ವೇಷವೋ ಜಗವೆಲ್ಲ ಜೀವ ನಾಟಕ ವೇಷ (361)

ವೇಷವೋ ಜಗವೆಲ್ಲ ಜೀವ ನಾಟಕ ವೇಷ |
ರೋಷ ಮೋಹಗಳ ಮತ್ಸರದಹಂಕೃತಿಯಾ |
ಭಾಷೆ ಭೂಷಣದಿಂದ ನೂರಾರು ವೇಷಗಳ |
ತೋಷಣಂ ದೇವಂಗೆ - ಮರುಳ ಮುನಿಯ || (೩೬೧)

(ಮತ್ಸರದ+ಅಹಂಕೃತಿಯಾ)

ಈ ಪ್ರಪಂಚವೆಲ್ಲವೂ ಪಾತ್ರಧಾರಿಗಳು ವೇಷ ಧರಿಸಿರುವುದರಲ್ಲೇ ಇದೆ. ಇದು ಜೀವಿಗಳ ನಾಟಕದ ಪಾತ್ರಗಳಿಂದ ಒಡಗೂಡಿದೆ. ಕೋಪ, ಪ್ರೀತಿ, ಅಕ್ಕರೆ, ಅಜ್ಞಾನ, ಹೊಟ್ಟೆಕಿಚ್ಚು ಮತ್ತು ಅಹಂಕಾರಗಳ ಭಾಷೆ, ಅಲಂಕಾರ ಮತ್ತು ಶೋಭೆಗಳು ಮತ್ತು ನೂರಾರು ಉಡುಗೆ ಮತ್ತು ಪೋಷಾಕುಗಳು, ಆ ಪರಮಾತ್ಮನಿಗೆ ಸಂತೋಷ(ತೋಷಣ)ವನ್ನುಂಟುಮಾಡುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The entire universe is an appearance and the life’s drama, a disguise
Red rage, deluding passion, jealousy and pride
Are the language and apparel of the hundreds of characters
All this is amusement to God – Marula Muniya
(Translation from "Thus Sang Marula Muniya" by Sri. Narasimha Bhat)

Friday, February 1, 2013

ನಾಟಕವನಾಡಿದೆಯ ವೇಷವನು ಕಟ್ಟಿದೆಯ (360)

ನಾಟಕವನಾಡಿದೆಯ ವೇಷವನು ಕಟ್ಟಿದೆಯ |
ಪಾಟವವ ತೋರಿದೆಯೇನಭಿನಯದ ಕಲೆಯೊಳ್? ||
ನೋಟಕರ್ ಪಟ್ಟರೇಂ ಚಾಕ್ಷುಷಭ್ರಾಂತಿಯನು |
ಆಟಕಾಟವೆ ವಿಹಿತ - ಮರುಳ ಮುನಿಯ || (೩೬೦)

(ನಾಟಕವನ್+ಆಡಿದೆಯ)(ತೋರಿದೆಯೇನ್+ಅಭಿನಯದ)

ನಾಟಕದೊಳಗೆ ಪಾತ್ರಧಾರಿಯಾಗಿ ಅದಕ್ಕೆ ತಕ್ಕಂತೆ ವೇಷವನ್ನು ಹಾಕಿದೆಯೇನು? ನಿನ್ನ ಅಭಿನಯದ ಕಲೆಯಲ್ಲಿ ಸಾಮರ್ಥ್ಯ(ಪಾಟವ)ವನ್ನು ತೋರಿಸಿದೆಯೇನು? ನಾಟಕವನ್ನು ನೋಡುವುದರಲ್ಲಿ ಪ್ರೇಕ್ಷಕರು ಕಣ್ಣಿಗೆ ಸಂಬಂಧಪಟ್ಟ (ಚಾಕ್ಷುಷ) ಭ್ರಮೆಯನ್ನು ಅನುಭವಿಸಿದರೇನು? ನಾಟಕದೊಳಗೆ ಈ ರೀತಿಯಾಗಿ ನಾ...ಟಕವನ್ನು ಆಡುವುದೇ ಯೋಗ್ಯವಾದದ್ದು.
(ಕೃಪೆ: ಶ್ರೀ. ಶ್ರೀಕಾಂತ್‍ ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Did you put on the costume and play your role in the drama?
Did you display your skill in the art of acting?
Did the onlookers enjoy the illusion?
Play is suitable only for play – Marula Muniya
(Translation from "Thus Sang Marula Muniya" by Sri. Narasimha Bhat)