Friday, May 30, 2014

ಮೂಕಹೃಚ್ಛೂಲೆಗಳನರಿಯಲಾರದ ಸಖರು (624)

ಮೂಕಹೃಚ್ಛೂಲೆಗಳನರಿಯಲಾರದ ಸಖರು |
ಲೌಕಿಕದ ನಯಗಳಲಿ ಮನವ ಮರೆಯುವರು ||
ಸಾಕು ನಿನ್ನೊಳಗನರಸದ ಜನರ ಸಹವಾಸ |
ಏಕಾಕಿ ನೀನಿರೆಲೊ - ಮರುಳ ಮುನಿಯ || (೬೨೪)

(ಹೃತ್+ಶೂಲೆಗಳು+ಅನರಿಯಲಾರದ)(ನಿನ್ನೊಳಗನ್+ಅರಸದ)(ನೀನ್+ಇರು+ಎಲೊ)

ಬಾಯಿಬಿಟ್ಟು ಹೇಳಲಿಕ್ಕಾಗದಂತಹ ಹೃದಯ(ಹೃತ)ದ ತೀಕ್ಷ್ಣವಾದ ವೇದನೆ(ಶೂಲೆ)ಗಳನ್ನು ತಿಳಿಯಲಾರದ ಸ್ನೇಹಿತರು, ಲೋಕಕ್ಕೆ ಸಂಬಧಿಸಿದ ವ್ಯವಹಾರಗಳಲ್ಲಿ ನಿನ್ನ ಸೂಕ್ಷ್ಮ ಮನಸ್ಸನ್ನು ಅರಿಯಲಾರರು. ನಿನ್ನ ಅಂತರಂಗವನ್ನು ಹುಡುಕದಿರುವ ಜನಗಳ ಸಂಪರ್ಕ ಸಾಕು. ನೀನು ಒಬ್ಬಂಟಿಗ(ಏಕಾಕಿ)ನಾಗೇ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Those friends who can’t understand your silent agonies and sorrows
Forget themselves in smooth polished worldly conduct
Avoid the company of those who never peep into your mind
Be alone in such situation – Marula Muniya (624)
(Translation from "Thus Sang Marula Muniya" by Sri. Narasimha Bhat)

Thursday, May 29, 2014

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ (623)

ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ- |
ಯಾತುರದಿ ಕೀಳೆ ಹರಿಯುವುದು ಚೂರಾಗಿ ||
ಚೇತಸದ ಪಾಡಂತು ಜಗದ ಮುಳ್ಗಳಿನದನು |
ಸೈತರಿತು ಬಿಡಿಸಿಕೊಳೊ - ಮರುಳ ಮುನಿಯ || (೬೨೩)

(ಬಿದ್ದ+ಅರಿವೆ+ಆತುರದಿ)(ಪಾಡು+ಅಂತು)(ಮುಳ್ಗಳಿಂ+ಅದನು)

ತಾಳೆ ಹೂ ಮತ್ತು ಗುಲಾಬಿ ಹೂ ಗಿಡಗಳ ಪೊದೆಗಳ ಮೇಲೆ ಬಿದ್ದಿರುವ ಬಟ್ಟೆಯನ್ನು ಆತುರದಿಂದ ಬಿಡಿಸಿಕೊಳ್ಳಲು ಹೋದರೆ ಆ ಬಟ್ಟೆಯು ಹರಿದು ಛಿದ್ರವಾಗುವುದು ಖಂಡಿತ. ಅದೇ ರೀತಿ ಮನಸ್ಸಿನ ಅವಸ್ಥೆ. ಇಂತಹ ಮನಸ್ಸಿನ ಅವಸ್ಥೆಗಳನ್ನು ಜಗತ್ತಿನ ಕಷ್ಟಗಳೆಂಬ ಮುಳ್ಳುಗಳಿಂದ ಶಾಂತವಾಗಿ ಸದ್ದಿಲ್ಲದೆ ಬಿಡಿಸಿಕೊಂಡು ಪಾರಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The cloth fallen on fragrant screw-pine or rose
Will be torn into shreds if you pull it with force
Same is the fate of human mind entangled in worldly thorns
Disentangle it carefully – Marula Muniya (623)
(Translation from "Thus Sang Marula Muniya" by Sri. Narasimha Bhat)

Wednesday, May 28, 2014

ಅನ್ಯರನು ನೀನುದ್ಧರಿಪ ಮಾತಹಂಕಾರ (622)

ಅನ್ಯರನು ನೀನುದ್ಧರಿಪ ಮಾತಹಂಕಾರ |
ಮಣ್ಣು ಹುಳುವೇಂ ಗಜವ ಕುಳಿಯಿನೆತ್ತುವುದು? ||
ಪನ್ನಗಕೆ ಪೊರೆಕಳೆಯುವಿರಕುವೊಲು ಜಗ ನಿನಗೆ |
ನಿನ್ನ ನೀನೆತ್ತಿಕೊಳೊ - ಮರುಳ ಮುನಿಯ || (೬೨೨)

(ನೀನ್+ಉದ್ಧರಿಪ)(ಮಾತು+ಅಹಂಕಾರ)(ಕುಳಿಯಿನ್+ಎತ್ತುವುದು)(ಪೊರೆಕಳೆಯುವ+ಇರಕು+ವೊಲು)(ನೀನ್+ಎತ್ತಿಕೊಳೊ)

ಬೇರೆಯವರನ್ನು ನಾನು ಉದ್ಧರಿಸುತ್ತೇನೆನ್ನುವುದು ಅಹಂಕಾರದ ಮಾತಾಗುತ್ತದೆ. ಮಣ್ಣಿನ ಹುಳುವು ಆನೆಯನ್ನು ತಗ್ಗಿನಿಂದ ಮೇಲಕೆತ್ತಲು ಸಾಧ್ಯವೇ? ಹಾವು ತನ್ನ ಪೊರೆಯನ್ನು ಇಕ್ಕಟ್ಟಿನಲ್ಲಿ ಕಳಚಿಕೊಳ್ಳುವಂತೆ ನಿನಗೆ ಈ ಜಗತ್ತು. ನೀನು ಈ ಕರ್ಮದೇಹವನ್ನು ಇಲ್ಲಿ ತ್ಯಜಿಸುವೆ. ನಿನ್ನನ್ನು ನೀನು ಮೊದಲು ಮೇಲೆತ್ತಿಕೊ. ಆತ್ಮೋದ್ಧಾರ ಮೊದಲು, ಲೋಕೋದ್ಧಾರ ಆಮೇಲೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

All talk of redeeming others is sheer egoism
Can an earth-worm lift up and elephant from a deep pit?
The world to you is what a thicket is to a snake to shed its slough
Elevate yourself therefore with your own self-effort – Marula Muniya (622)
(Translation from "Thus Sang Marula Muniya" by Sri. Narasimha Bhat)

Tuesday, May 27, 2014

ಗೊತ್ತಾದ ಕುರುಹು ಹೆಸರುಗಳಿಲ್ಲದಾ ಅಮಿತ (621)

ಗೊತ್ತಾದ ಕುರುಹು ಹೆಸರುಗಳಿಲ್ಲದಾ ಅಮಿತ |
ವಸ್ತುವನು ನೀಂ ತಿಳಿಯುವೊಡೆ ದೃಢದಿ ನಿನ್ನ ||
ಸೊತ್ತೆಂದು (ಪರಿ)ಗಣಿಸು (ಸು)ಜ್ಞಾನದಿಂದಲದು |
ತತ್ತ್ವವಪ್ಪುದು ನಿನಗೆ - ಮರುಳ ಮುನಿಯ || (೬೨೧)

(ಹೆಸರುಗಳು+ಇಲ್ಲದ+ಆ)(ಸುಜ್ಞಾನದಿಂದಲ್+ಅದು)(ತತ್ತ್ವ+ಅಪ್ಪುದು)

ತಿಳಿಯುವಂತಹ ಚಿಹ್ನೆ ಮತ್ತು ಹೆಸರುಗಳಿಲ್ಲದಿರುವ, ಮಿತಿಯಿಲ್ಲದಿರುವ ನಿರಾಕಾರ ನಿರ್ಗುಣ ವಸ್ತುವಾದ ಪರಮಾತ್ಮನನ್ನು ನೀನು ತಿಳಿಯಬೇಕೆಂದರೆ, ಆ ಜ್ಞಾನವನ್ನು ನಿಶ್ಚಿತವಾಗಿ ನಿನ್ನ ಸ್ವತ್ತೆಂದು ಲೆಕ್ಕಕ್ಕೆ ತೆಗೆದುಕೊ. ಒಳ್ಳೆಯ ಜ್ಞಾನಮಾರ್ಗದಿಂದ ಅದು ನಿನಗೆ ತತ್ತ್ವ ಸಿದ್ಧಾಂತವಾಗಿ ಪರಿಣಮಿಸುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Infinite Entity has no known names, forms or signs
If you wish to know It well, firmly believe It to be your own asset
With blessed wisdom It becomes your own forever
It becomes your life principle then – Marula Muniya (621)
(Translation from "Thus Sang Marula Muniya" by Sri. Narasimha Bhat)

Friday, May 23, 2014

ಮಚ್ಚರಿಸಬೇಡ ಮಚ್ಚರವನಾಗಿಸಬೇಡ (620)

ಮಚ್ಚರಿಸಬೇಡ ಮಚ್ಚರವನಾಗಿಸಬೇಡ |
ಕಿಚ್ಚದಂಟಲು ಸುಡುವುದೆಲ್ಲ ನಿನ್ನದನು |
ಹೆಚ್ಚು ಕೊರೆಯವರವರ ಪೂರ್ವಕೃತ ತಾತ್‍ಕ್ಷಣಿಕ |
ಉಚ್ಚವಿರಿಸಾತ್ಮವನು - ಮರುಳ ಮುನಿಯ || (೬೨೦)

(ಮಚ್ಚರವನ್+ಆಗಿಸಬೇಡ)(ಕಿಚ್ಚು+ಅದು+ಅಂಟಲು)(ಸುಡುವುದು+ಎಲ್ಲ)(ಕೊರೆ+ಅವರ+ಅವರ)(ಉಚ್ಚ+ಇರಿಸು+ಆತ್ಮವನು)

ಮತ್ಸರ(ಮಚ್ಚರ)ವನ್ನು ಪಡಬೇಡ. ಮತ್ಸರವಾಗುವಂತಹ ಕೃತಿಗಳನ್ನು ಮಾಡಬೇಡ. ಬೆಂಕಿ(ಕಿಚ್ಚು)ಯು ಹೊತ್ತಿಕೊಳ್ಳಲು ನಿನ್ನೆಲ್ಲವನ್ನೂ ಸುಟ್ಟುಹಾಕುತ್ತದೆ. ಒಂದು ಕಡಿಮೆ ಅಥವಾ ಒಂದು ಹೆಚ್ಚಾಗಿರುವುದು ಅವರವರು ಪಡೆದುಕೊಂಡು ಬಂದ ಪೂರ್ವಜನ್ಮಗಳ ಫಲ. ಅದು ಆ ಕ್ಷಣಕ್ಕೆ ಮಾತ್ರ ಅನ್ವಯಿಸುವಂತಾದ್ದು. ಈ ಎಲ್ಲ ಭಾವಗಳನ್ನು ಮೀರಿ ನೀನು ನಿನ್ನ ಆತ್ಮಸ್ಥಿತಿಯನ್ನು ಮೇಲ್ಮಟ್ಟದಲ್ಲಿಟ್ಟುಕೊಂಡಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Envy not others and provoke not envy in others,
When the fire of jealousy is kindled, it burns your everything,
Opulence and poverty are temporary and are the fruits of your karma
But preserve yourself always in excellence – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 22, 2014

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು (619)

ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು |
ದೈವಪದಸಾಯುಜ್ಯ ದೇಹ ಬಿಟ್ಟಂದು ||
ಮೂವರಗಳಿವನು ವರಿಸಿದ ಪೂರ್ವಿಕರ್ ಸಾರ |
ಕೋವಿದರ್ ಬೇಡಂತು - ಮರುಳ ಮುನಿಯ || (೬೧೯)

(ನೋವು+ಇರದೆ)(ದೈನ್ಯತೆ+ಉಳಿದ)(ಮೂವರಗಳು+ಇವನು)(ಬೇಡ್+ಅಂತು)

ನಮ್ಮ ಪೂರ್ವಿಕರ ಜೀವನದ ತತ್ತ್ವವು ಈ ಮೂರು ಗುರಿಗಳಲ್ಲಿತ್ತು. ನೋವನ್ನು ಅನುಭವಿಸದೆಯೇ ಬರುವಂತಹ ಸಾವು. ಯಾಚನಾಸ್ಥಿತಿಗಳಿಲ್ಲದ ಜೀವನ. ಮರಣ ಬಂದಾಗ ಪರಮಾತ್ಮನ ಪಾದಾರವಿಂದವನ್ನು ಸೇರುವುದು (ಸಾಯುಜ್ಯ). ತಿಳಿದಂತಹ ಪಂಡಿತರು (ಕೋವಿದರ್) ಈ ವರಗಳನ್ನು ಬೇಡೆಂದು ಹೇಳುತ್ತಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Death without pain and life sans humiliation
Salvation at the feet of the Lord on giving up the body
Our ancestors who opted for the above three boons were really wise
Pray to the Lord for the same – Marula Muniya (619)
(Translation from "Thus Sang Marula Muniya" by Sri. Narasimha Bhat)

Wednesday, May 21, 2014

ಬಹುತೆಯಿಂದೇಕತೆಗೆ ಗೃಹವಂಶರಾಷ್ಟ್ರಗಳು (618)

ಬಹುತೆಯಿಂದೇಕತೆಗೆ ಗೃಹವಂಶರಾಷ್ಟ್ರಗಳು |
ಬಹುತೆ ಪ್ರಕೃತಿಯ ಸಿದ್ಧಿ ಏಕತೆ ಮನುಜಸಿದ್ಧಿ ||
ಅಹಮಿನೊಳೆಲ್ಲವನೆಲ್ಲದರೊಳಹಮನು ಕಾಣೆ |
ಮಹನೀಯನಾತನೆಲೊ - ಮರುಳ ಮುನಿಯ || (೬೧೮)

(ಬಹುತೆಯಿಂದ+ಏಕತೆಗೆ)(ಅಹಮಿನೊಳು+ಎಲ್ಲವನು+ಎಲ್ಲದರೊಳ್+ಅಹಮನು)(ಮಹನೀಯನ್+ಆತನೆಲೊ)

ಬಹುತೆಯಿಂದ ಏಕತೆಗೆ ಹೋಗುವಂತೆ ಮನೆ, ಕುಲ ಮತ್ತು ದೇಶಗಳು ಮಾಡುತ್ತವೆ. ಬಹುತೆ ಪ್ರಕೃತಿಯ ಸಾಧನೆ. ಏಕತೆ ಮನುಷ್ಯನ ಸಾಧನೆ. ತನ್ನೊಳಗೆ ಬಹುತ್ವವನ್ನು ಮತ್ತು ಬಹುತ್ವದಲ್ಲಿ ತನ್ನನ್ನು ಯಾವನು ಕಾಣಬಲ್ಲನೋ ಅವನೇ ಶ್ರೇಷ್ಠನಾದವನು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Families, races and nations are moving from diversity to unity
Diversity is the gift of Nature and unity is the accomplishment of man
One should see all in his self and his self in all
Such person is really great – Marula Muniya (618)
(Translation from "Thus Sang Marula Muniya" by Sri. Narasimha Bhat)

Thursday, May 15, 2014

ಮುಳ್ತುಂಬಿಹವು ಜಗದ ದಾರಿಗಳದೆತ್ತಲುಂ (617)

ಮುಳ್ತುಂಬಿಹವು ಜಗದ ದಾರಿಗಳದೆತ್ತಲುಂ |
ಕಾಲ್ತಳಕೆ ನೀಂ ಜ್ಞಾನದೆಲೆ ಹಸುರ ಸವರು ||
ಮುಳ್ತಲೆಯ ಬಾಗಿಪುದು ನೆಲ ಹುಲ್ಲ ಹೊದೆಯುವುದು |
ಬಾಳ್ತನದ ತಂತ್ರವಿದು - ಮರುಳ ಮುನಿಯ || (೬೧೭)

(ಮುಳ್+ತುಂಬಿ+ಇಹವು)(ದಾರಿಗಳ್+ಅದು+ಎತ್ತಲುಂ)(ಕಾಲ್+ತಳಕೆ)(ಜ್ಞಾನದ+ಎಲೆ)(ಮುಳ್+ತಲೆಯ)(ತಂತ್ರ+ಇದು)

ಜಗತ್ತಿನ ಸಕಲ ಹಾದಿಗಳಲ್ಲೂ ಮುಳ್ಳುಗಳು ತುಂಬಿಕೊಂಡು ನಾವು ನಡೆದಾಡುವುದು ಕಷ್ಟಕರವಾಗುವಂತೆ ಮಾಡಿದೆ. ಆ ಮುಳ್ಳುಗಳು ನಿನ್ನ ಪಾದಗಳನ್ನು ಚುಚ್ಚಬಾರದೆಂದರೆ, ನೀನು ಈ ಉಪಾಯವನ್ನು ಮಾಡು. ನಿನ್ನ ಪಾದದಡಿಗೆ ಜ್ಞಾನವೆಂಬ ಎಲೆಯ ಹಸುರನ್ನು ಲೇಪಿಸು. ಆವಾಗ ಆ ಮುಳ್ಳು ತನ್ನ ತಲೆಯನ್ನು ಬಗ್ಗಿಸುತ್ತದೆ ಮತ್ತು ನೆಲವು ಹುಲ್ಲನ್ನು ಹೊದ್ದುಕೊಳ್ಳುತ್ತದೆ. ಜೀವನವನ್ನು ನಡೆಸುವ ಉಪಾಯವಿದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The pathways in the world are everywhere strewn with thorns,
Spread therefore the soft green leaves of wisdom underneath your feat,
It bends the thorny ends and covers the ground with grass
This is the way of successful life – Marula Muniya (617)
(Translation from "Thus Sang Marula Muniya" by Sri. Narasimha Bhat)

Wednesday, May 14, 2014

ತನ್ನ ಕೈಸೇರಿದೈಸಿರಿಯನನ್ಯಂಗಿತ್ತು (616)

ತನ್ನ ಕೈಸೇರಿದೈಸಿರಿಯನನ್ಯಂಗಿತ್ತು |
ತನ್ನಿನನ್ಯಂ ಸಿರಿಯ ಕಸಿದೋಡಿದಂದು ||
ಅನ್ಯಾಯಿಗನನರಸಿ ದಂಡಿಸಿದ ರಾಘವನೆ |
ಸಂನ್ಯಸನಕಾದರ್ಶ - ಮರುಳ ಮುನಿಯ || (೬೧೬)

(ಕೈಸೇರಿದ+ಐಸಿರಿಯನ್+ಅನ್ಯಂಗೆ+ಇತ್ತು)(ತನ್ನಿನ್+ಅನ್ಯಂ)(ಕಸಿದು+ಓಡಿದಂದು)(ಅನ್ಯಾಯಿಗನನ್+ಅರಸಿ)
(ಸಂನ್ಯಸನಕೆ+ಆದರ್ಶ)

ತನ್ನ ಕೈಗೆ ದೊರಕಿದ ಐಶ್ವರ್ಯ(ಸಿರಿ)ವಾದ ಕೋಸಲ ರಾಜ್ಯವನ್ನು ಭರತನಿಗೆ ಕೊಟ್ಟು ತನ್ನ ಐಶ್ವರ್ಯವಾದ ಸೀತಾದೇವಿಯನ್ನು ರಾವಣನು ಅಪಹರಿಸಿಕೊಂಡು ಹೋದಾಗ ತಪ್ಪು ಮಾಡಿದ ರಾವಣನನ್ನು ಶಿಕ್ಷಿಸಿ ಸಂಹರಿಸಿದ ಶ್ರೀರಾಮನ ನಡತೆಯು ವೈರಾಗ್ಯದ ಬಾಳಿಗೆ ಮಾದರಿಯಾಗಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Sri Rama renounced his kingship in favour of his brother Bharatha
But when Ravana kidnapped his wife, his precious treasure
He found out the wicked Ravana ad punished him
Sri Rama is certainly an ideal renouncer – Marula Muniya (616)
(Translation from "Thus Sang Marula Muniya" by Sri. Narasimha Bhat)

Tuesday, May 13, 2014

ನಂಬು ನೀಂ ದೈವವನು ನಂಬು ಸ್ವಯಂಭುವನು (615)

ನಂಬು ನೀಂ ದೈವವನು ನಂಬು ಸ್ವಯಂಭುವನು |
ನಂಬು ಸಾಂಬನ ಮನದಿ ತುಂಬು ಭಕ್ತಿಯನು ||
ಬಿಂಬವೋ ಕಂಬವೋ ನಂಬಿಕೆಯ ಮಾತ್ರದಿಂ- |
ದಿಂಬುಗೊಳುವುದು ಜೀವ - ಮರುಳ ಮುನಿಯ || (೬೧೫)

(ಮಾತ್ರದಿಂದ+ಇಂಬುಗೊಳುವುದು)

ದೇವರಲ್ಲಿ ಭರವಸೆ ಇಡು. ಬ್ರಹ್ಮ(ಸ್ವಯಂಭು)ನಲ್ಲಿ ವಿಶ್ವಾಸವಿಡು. ಶಿವ(ಸಾಂಬ)ನನ್ನು ನಂಬು. ನಿನ್ನ ಮನಸ್ಸಿನ ತುಂಬ ಭಕ್ತಿಯನ್ನು ತುಂಬಿಕೊ. ಮೂರ್ತಿಯೋ (ಬಿಂಬ) ಅಥವಾ ಸ್ತಂಭ(ಕಂಬ)ವೋ, ಯಾವುದಾದರೂ ಒಂದು ನಂಬಿಕೆಯ ಮಾತ್ರದಿಂದ ಜೀವವು ಅನುಕೂಲತೆ(ಇಂಬು)ಯನ್ನು ಹೊಂದುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Believe in God, believe in the self-created one
Believe in Sambha, and fill the mind with devotion
It may be an image or a pillar, but with firm faith,
The soul finds a comfortable places to repose – Marula Muniya
(Translation from "Thus Sang Marula Muniya" by Sri. Narasimha Bhat)

Thursday, May 8, 2014

ಎಡರುಗಳ ಕಡಲಿನಲೆ ಸಾಲೆದ್ದು ನಿನ್ನಸುವ (614)

ಎಡರುಗಳ ಕಡಲಿನಲೆ ಸಾಲೆದ್ದು ನಿನ್ನಸುವ |
ಬಡಿಯುತಿರೆ ದಿಕ್ಕುಕಾಣದ ಕುಂಟುಜೀವಂ ||
ಪಿಡಿಯೆ ಕೈಗೇನಾನುಮೊಂದೊಂದವಲೆಂದೆಂಬ |
ತಡಕಾಟವೇ ಭಕ್ತಿ - ಮರುಳ ಮುನಿಯ || (೬೧೪)

(ಕಡಲಿನ+ಅಲೆ)(ಸಾಲು+ಎದ್ದು)(ನಿನ್ನ+ಅಸುವ)(ಬಡಿಯುತ+ಇರೆ)(ಕೈಗೆ+ಏನಾನುಂ+ಒಂದೊಂದು+ಅವಲ್+ಎಂದೆಂಬ)

ತೊಂದರೆ(ಎಡರು)ಗಳ ಸಮುದ್ರ(ಕಡಲು)ದ ಅಲೆಯ ಸಾಲುಗಳು ಎದ್ದು ನಿನ್ನ ಪ್ರಾಣ(ಅಸು)ವನ್ನು ಬಡಿಯುತ್ತಿರುವಾಗ ಕುಂಟುಜೀವಕ್ಕೆ ದಿಕ್ಕುತೋರದೆ ಮತ್ತು ಏನು ಮಾಡಬೇಕೆಂದು ತಿಳಿಯದೆ, ಅಸರೆಗಾಗಿ ಏನನ್ನಾದರೂ ಒಂದು ಶ್ರೇಷ್ಠವಾದುದ್ದನ್ನು (ಅವಲ್) ಹಿಡಿದು ಕೊಳ್ಳಬೇಕೆಂದೆನ್ನುವ ಹುಡುಕಾಟವೇ ಭಕ್ತಿ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You limping soul finds itself in a helpless condition
When the giant sea – waves of difficulties line up and hit it
It then frantically gropes to grasp some strong support
This groping of the soul is the devotion – Marula Muniya (614)
(Translation from "Thus Sang Marula Muniya" by Sri. Narasimha Bhat)

Wednesday, May 7, 2014

ಮರವ ಪಿಡಿದಿರುವೆಲೆಯ ಗಾಳಿ ಬಿಸಿಲಂಜಿಸವು (613)

ಮರವ ಪಿಡಿದಿರುವೆಲೆಯ ಗಾಳಿ ಬಿಸಿಲಂಜಿಸವು |
ಸ್ಥಿರದ ನಂಬುಗೆಯನೆಲೆಯಲಿ ಬಾಳ್ವನಂತು ||
ಹಿರಿಯೊಂದು ನಚ್ಚಿನಾಸರೆಯಿಲ್ಲದನ ಪಾಡು |
ತರಗೆಲೆಯ ಪಾಡಹುದೊ - ಮರುಳ ಮುನಿಯ || (೬೧೩)

(ಪಿಡಿದಿರುವ+ಎಲೆಯ)(ಬಿಸಿಲ್+ಅಂಜಿಸವು)(ಬಾಳ್ವನ್+ಅಂತು)(ನಚ್ಚಿನ+ಆಸರೆ+ಇಲ್ಲದನ)(ಪಾಡು+ಅಹುದೊ)

ಮರವನ್ನು ಹಿಡಿದಿರುವ ಎಲೆಯನ್ನು ಸೂರ್ಯನ ಬಿಸಿಲು ಮತ್ತು ವಾಯುವಿನ ವೇಗಗಳು ಹೆದರಿಸಲಾರವು. ಒಂದು ಧೃಡವಾದ ನಂಬಿಕೆಯ ಆಶ್ರಯದಲ್ಲಿ ಇರುವವನ ಜೀವನವೂ ಹೀಗೆಯೇ ಇರುತ್ತದೆ. ಒಂದು ಹಿರಿದಾಗಿರುವುದನ್ನು ನಂಬದೆ, ಅದರ ಆಶ್ರಯವಿಲ್ಲದವನ ಅವಸ್ಥೆ ತರಗೆಲೆಯಂತೆ ದಿಕ್ಕು ದೆಸೆಯಿಲ್ಲದೆ ಹಾರಾಡಿಹೋಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Wind and sunlight cannot frighten the leaves sticking fast to the tree
Similar is one who lives established in a firm faith
But the life of one who isn’t protected by such a faith
Is similar to that of a dry withered leaf – Marula Muniya
(Translation from "Thus Sang Marula Muniya" by Sri. Narasimha Bhat)

Tuesday, May 6, 2014

ಸದಸದ್ವಿವೇಕಿತಾಪ್ರದನಾತ್ಮನೀಶ್ವರನು (612)

ಸದಸದ್ವಿವೇಕಿತಾಪ್ರದನಾತ್ಮನೀಶ್ವರನು |
ನಿಧಿಯವಂ ಸತ್ಯಕ್ಕೆ ಸತ್ಯಯೋಗಕ್ಕೆ ||
ಬದುಕವನ ವರವ(ವನ) ಪಿಡಿಯವನೆ ಶರಣೆಂದು |
ಅದಿರದಿರು ಕದಲದಿರು - ಮರುಳ ಮುನಿಯ || (೬೧೨)

(ಸದಸದ್ವಿವೇಕಿತಾಪ್ರದನು+ಆತ್ಮನ್+ಈಶ್ವರನು)(ನಿಧಿ+ಅವಂ)(ಬದುಕು+ಅವನ)(ವರ+ಅವನ)(ಪಿಡಿ+ಅವನೆ)

ಒಳ್ಳೆಯ ವಿವೇಚನಾ ಶಕ್ತಿಯನ್ನು ಕೊಡುವವನು ಈಶ್ವರ. ಸತ್ಯ ಮತ್ತು ಸತ್ಯಸಾಧನೆಗೆ ಅವನು ಅಧಾರಪ್ರಾಯ. ಬದುಕು ಅವನು ನಮಗೆ ಕರುಣಿಸಿರುವ ಒಂದು ಅನುಗ್ರಹ. ನೀನು ಅವನಿಗೆ ಶರಣಾಗತನಾಗು. ಅಲ್ಲಾಡದೆ ಮತ್ತು ಕದಡದೆ ಇರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The Lord of the Self who bestows you the wisdom to discern the real from the unreal
He is the abode of truth and the yoga of truth
This life is His boon, surrender and hold on to his feet
Be firm and unwavering – Marula Muniya (612)
(Translation from "Thus Sang Marula Muniya" by Sri. Narasimha Bhat)