Friday, January 16, 2015

ಜಗಳವೇತಕೋ ತಮ್ಮ ನಿನಗೆನಗೆ ಸರ್ವರಿಗೆ (720)

ಜಗಳವೇತಕೋ ತಮ್ಮ ನಿನಗೆನಗೆ ಸರ್ವರಿಗೆ |
ಜಗದೊಳೆಡೆಯಿರಲಾಗಿ ಸೊಗದಿ ಬದುಕಲಿಕೆ ||
ಅಗಲವಿದೆ ನೆಲ ನಾವು ಮನವನಿಕ್ಕಟಮಾಡಿ |
ದುಗುಡ ಪಡುವುದು ಸರಿಯೆ? - ಮರುಳ ಮುನಿಯ || (೭೨೦)

(ಜಗಳ+ಏತಕೋ)(ನಿನಗೆ+ಎನಗೆ)(ಜಗದೊಳು+ಎಡೆ+ಇರಲಾಗಿ)(ಮನವ+ಇಕ್ಕಟಮಾಡಿ)

ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಸುಖವಾಗಿ ಜೀವನವನ್ನು ನಡೆಸಲು ಸ್ಥಳಾವಕಾಶವಿರುವಾಗ, ಸೋದರರಾದ ನಾನು, ನೀನು ಮತ್ತು ಇತರರೆಲ್ಲರೂ ಜಗಳವೇತಕ್ಕಾಡಬೇಕು? ಸಾಕಷ್ಟು ವಿಶಾಲವಾಗಿರುವ ಭೂಮಿಯು ಇರಲಾಗಿ, ನಾವು ನಮ್ಮ ಮನಸ್ಸುಗಳನ್ನು ಸಂಕುಚಿತಗೊಳಿಸಿಕೊಂಡು ದುಃಖ ಮತ್ತು ದುಮ್ಮಾನಗಳನ್ನು ಅನುಭವಿಸುವುದು ಸರಿಯೇ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Oh Brother! Why do we quarrel, you, I and all
When there is enough room for all of us in the world to love happily?
When the earth is vast, is it proper for us to narrow down our minds
And become unhappy – Marula Muniya (720)
(Translation from "Thus Sang Marula Muniya" by Sri. Narasimha Bhat) 

Tuesday, January 13, 2015

ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ (719)

ಸೃಷ್ಟಿಯೊಳು ದಂಡಾರ್ಹರಾರೆಂದು ಕೇಳಿದೊಡೆ |
ಸೃಷ್ಟಿಕರ್ತನೆ ಮೊದಲು ದಂಡ್ಯನೆಂಬೆನು ನಾಂ ||
ಸೊಟ್ಟನವನಿರಿಸಿಟ್ಟು ನೆಟ್ಟಗಿಸು ನೀನೆಂಬ |
ಕಟ್ಟಲೆಯದೇಂ ನ್ಯಾಯ? - ಮರುಳ ಮುನಿಯ || (೭೧೯)

(ದಂಡ+ಅರ್ಹರ್+ಆರ್+ಎಂದು)(ದಂಡ್ಯನ್+ಎಂಬೆನು)(ಸೊಟ್ಟನ್+ಅವನ್+ಇರಿಸಿ+ಇಟ್ಟು)(ನೆಟ್ಟಗೆ+ಇಸು)(ನೀನ್+ಎಂಬ)(ಕಟ್ಟಲೆ+ಅದು+ಏಂ)

ಸೃಷ್ಟಿಯಲ್ಲಿ ಯಾರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ನನ್ನನ್ನು ಕೇಳಿದರೆ, ಮೊಟ್ಟ ಮೊದಲಿಗೆ ಸೃಷ್ಟಿಕರ್ತನಾದ ಪರಮಾತ್ಮನನ್ನೇ ಶಿಕ್ಷೆಗೆ ಗುರಿಪಡಿಸಬೇಕೆಂದು ನಾನು ಹೇಳುತ್ತೇನೆ. ಪ್ರಪಂಚದ ಸೃಷ್ಟಿಯಲ್ಲಿ ಅನೇಕಾನೇಕ ಡೊಂಕುಗಳನ್ನಿರಿಸಿ ಇದನ್ನು ನೀನು ಸರಿಪಡಿಸು ಎನ್ನುವ ನಿಯಮದಲ್ಲಿ ನ್ಯಾಯವೆಲ್ಲಿದೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is the culprit to be punished first in this creation?
I would say that the Creator Himself is to be punished first.
Is it just on His part to create a world teeming with distortions
And then ordering us to set them right? – Marula Muniya (719)
(Translation from "Thus Sang Marula Muniya" by Sri. Narasimha Bhat)

Monday, January 12, 2015

ಸತ್ಯವಾವುದು ಕಡಲ ನಡುವಣ ದ್ವೀಪದೊಂ (718)

ಸತ್ಯವಾವುದು ಕಡಲ ನಡುವಣ ದ್ವೀಪದೊಂ-|
ದೆತ್ತರದ ಗುಡಿಯ ಕಿಟಕಿಗಳಿಂದ ನೋಡೆ ||
ಉತ್ತರವೊ ದಕ್ಷಿಣವೊ ಪೂರ್ವವೊ ಪಶ್ಚಿಮವೊ |
ಎತ್ತ ಸತ್ಯದ ನೃತ್ಯ - ಮರುಳ ಮುನಿಯ || (೭೧೮)

(ಸತ್ಯವು+ಆವುದು)(ದ್ವೀಪದ+ಒಂದು+ಎತ್ತರದ)

ಸಮುದ್ರದ ಮಧ್ಯದಲ್ಲಿರುವ ದ್ವೀಪದ ಒಂದು ಎತ್ತರವಾಗಿರುವ ಪ್ರದೇಶದಲ್ಲಿರುವ ಮಂಟಪದ ಕಿಟಕಿಗಳಿಂದ ಆಚೆಯ ಪ್ರದೇಶವನ್ನು ವೀಕ್ಷಿಸುತ್ತಿರುವವನಿಗೆ ಸತ್ಯವೆನ್ನುವುದು ಯಾವ ದಿಕ್ಕಿನಲ್ಲಿರುತ್ತದೆ? ಅದು ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮದಿಕ್ಕಿನಲ್ಲಿ ಕಾಣುತ್ತದೇನು? ಸತ್ಯದ ನರ್ತನವು ಅವನಿಗೆ ಯಾವ ದಿಕ್ಕಿನಲ್ಲಿ ತೋರುವುದೆಂದು ಯಾರೂ ಹೇಳಲಾರರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is the Truth when seen through the windows of a shrine
Standing on the top of an island hill surrounded by the sea?
On all sides, in east, west, north and south
The truth only dances as sea waves – Marula Muniya (718)
(Translation from "Thus Sang Marula Muniya" by Sri. Narasimha Bhat)

Friday, January 9, 2015

ಪಾರವಿಲ್ಲದಿಹ ಚೈತನ್ಯರಾಶಿಯೊ ಜೀವ (717)

ಪಾರವಿಲ್ಲದಿಹ ಚೈತನ್ಯರಾಶಿಯೊ ಜೀವ |
ಬೇರಿನಾ ಬೇರೆ ನೀನೆಂತರಿವೆ? ಕರಿದೆ? ||
ತಾರೆಯಳೆವಣುವೊಡೆವ ಯಂತ್ರಗಳಿಗೆಟುಕದದು |
ಆರರಿವರದರಿರವ - ಮರುಳ ಮುನಿಯ || (೭೧೭)

(ಪಾರ+ಇಲ್ಲದೆ+ಇಹ)(ನೀನ್+ಎಂತು+ಅರಿವೆ)(ತಾರೆಯ+ಅಳೆವ+ಅಣುವ+ಒಡೆವ)(ಯಂತ್ರಗಳಿಗೆ+ಎಟುಕದು+ಅದು)

ಎಲ್ಲೆಯಿಲ್ಲದಿರುವ ಚೇತನ ತುಂಬಿಕೊಂಡಿರುವ ರಾಶಿ ಈ ಜೀವವೆನ್ನುವುದು. ಬೇರುಗಳ ಬೇರನ್ನು, ಎಂದರೆ, ಮೂಲದ ಮೂಲವನ್ನು ನೀನು ಹೇಗೆ ತಿಳಿಯಲು ಸಾಧ್ಯ? ಅದು ಕಪ್ಪಾಗಿರುವುದೇನು? ನಕ್ಷತ್ರಗಳನ್ನು ಅಳೆಯುವ ಮತ್ತು ಅಣುಗಳನ್ನು ಬೇರ್ಪಡಿಸುವ ಯಂತ್ರಗಳಿಗೆ ಈ ವಸ್ತುವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಸ್ಥಿತಿಯನ್ನು ತಿಳಿದವರು ಯಾರಿದ್ದಾರೆ?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The soul is an infinite sea of dynamic energy,
How can you know the mother root of all roots? Is it ever possible?
The machines measuring stars and splitting atoms cannot touch it,
Who can know its nature and existence? – Marula Muniya (717)
(Translation from "Thus Sang Marula Muniya" by Sri. Narasimha Bhat)

Wednesday, January 7, 2015

ತತ್ತ್ವವೇನಾತ್ಮವೋ ಬ್ರಹ್ಮವೋ ಜೀವವೋ? (716)

ತತ್ತ್ವವೇನಾತ್ಮವೋ ಬ್ರಹ್ಮವೋ ಜೀವವೋ? |
ಬಿತ್ತೊ ಸಿಹಿತಿರುಳೋ ಮೇಲ್ ಸಿಪ್ಪೆಯೋ ಮಾವೋ? ||
ಕತ್ತರಿಯೊ ಬರಿ ತರ್ಕ, (ವಿಕಲ) ಸಕಲದೊಳಿಹುದೆ? |
ವಸ್ತು ಬಗೆಯಲಖಂಡ - ಮರುಳ ಮುನಿಯ || (೭೧೬)

(ತತ್ತ್ವವು+ಏನ್+ಆತ್ಮವೋ)(ಸಕಲದ+ಒಳ್+ಇಹುದೆ)(ಬಗೆಯಲ್+ಅಖಂಡ)

ನಾವು ತತ್ತ್ವ, ತತ್ತ್ವವೆಂದು ಕರೆಯುವ ಅದು ಏನು? ಆತ್ಮವನ್ನೋ ಹಾಗೆ ನಾವು ಕರೆಯುವುದು? ಅಥವಾ ಅದು ಪರಬ್ರಹ್ಮ ವಸ್ತುವೋ, ಅಥವಾ ಜೀವವೋ? ಇಲ್ಲ ಬೀಜವೊ(ಬಿತ್ತೊ), ಸಿಹಿಯಾಗಿರುವ ತಿರುಳೋ, ಮೇಲಿನ ಸಿಪ್ಪಿಯೋ ಅಥವಾ ಮಾವಿನ ಹಣ್ಣೋ? ತರ್ಕವು ಒಂದು ಕೇವಲ ಕತ್ತರಿಯೋ? ನ್ಯೂನತೆ ಮತ್ತು ಅಪೂರ್ಣತೆಯು ಸಮಗ್ರ ಹಾಗೂ ಸಂಪೂರ್ಣತೆಯಲ್ಲಿರುವುದೋ? ನಾವು ಸರಿಯಾಗಿ ವಿಚಾರ ಮಾಡಿದರೆ ಪರವಸ್ತುವು ಇಡಿಯಾಗಿ ಅಖಂಡವಾಗಿರುವುದನ್ನು ಕಾಣುತ್ತೇವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What is Truth? Is it self or soul or Brahma?
Is mango the seed or the sweet pulp of the outer skin?
Dry argument is like scissors, Is not the truth in each and everything?
Realize that the Truth is an undivided whole – Marula Muniya (716)
(Translation from "Thus Sang Marula Muniya" by Sri. Narasimha Bhat)

Tuesday, January 6, 2015

ಮುಕ್ತಿ ಮುಕ್ತಿಯೆನುತ್ತಲೆಲ್ಲರುಂ ಜೀವಿತದ (715)

ಮುಕ್ತಿ ಮುಕ್ತಿಯೆನುತ್ತಲೆಲ್ಲರುಂ ಜೀವಿತದ |
ರಕ್ತಿಗಳ ತೊರೆದು ಯತಿವೃತ್ತಿಯಲಿ ಚರಿಸೆ ||
ಶಕ್ತಿಗುಜ್ಜುಗವೆಲ್ಲೆ? ಜೀವನಕೆ ರಸವೆಲ್ಲಿ? |
ರಿಕ್ತನಾಗನೆ ಬೊಮ್ಮ? - ಮರುಳ ಮುನಿಯ || (೭೧೫)

(ಮುಕ್ತಿ+ಎನುತ್ತಲ್+ಎಲ್ಲರುಂ)(ಶಕ್ತಿಗೆ+ಉಜ್ಜುಗ+ಎಲ್ಲೆ)(ರಿಕ್ತನ್+ಆಗನೆ)

ಪ್ರಪಂಚದ ಬಂಧನಗಳಿಂದ ಬಿಡುಗಡೆಯನ್ನು ಹೊಂದಬೇಕೆಂದು ಎಲ್ಲಾ ಜನರೂ ಜೀವನಾಸಕ್ತಿ(ರಕ್ತಿ)ಯನ್ನು ಬಿಟ್ಟು ಸನ್ಯಾಸಿಗಳಂತೆ ಜೀವನವನ್ನು ನಡೆಸಿದ್ದಲ್ಲಿ, ಮನುಷ್ಯನ ಪೌರುಷ ಮತ್ತು ಬಲಾಬಲಗಳಿಗೆ ಉದ್ಯೋಗ(ಉಜ್ಜುಗ)ವೆಲ್ಲಿ ಇರುತ್ತದೆ? ಆವಾಗ ಜೀವನದಲ್ಲಿ ಏನಾದರೂ ಸ್ವಾರಸ್ಯವಿರುತ್ತದೇನು? ಪರಬ್ರಹ್ಮನು ಅವನ ಇರುವಿಕೆಯ ಅಗತ್ಯವೇ ಇಲ್ಲದಂತೆ ಶೂನ್ಯ(ರಿಕ್ತ)ನಾಗಲಾರನೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Crying out “Salvation, Salvation”, if all people in the world
Renounce all worldly interests and live like mendicants
Where is work for human energy and where is joy in life?
Would not Brahma become bankrupt then? – Marula Muniya (715)
(Translation from "Thus Sang Marula Muniya" by Sri. Narasimha Bhat)

Monday, January 5, 2015

ಸರ್ವಜ್ಞನಾಳುತಿರಲೇಕಿಂತು ಲೋಕದಲಿ (714)

ಸರ್ವಜ್ಞನಾಳುತಿರಲೇಕಿಂತು ಲೋಕದಲಿ |
ದುರ್ವಾರ ದೋಷಗಳು? ಧರ್ಮಲೋಪಗಳು ? ||
ಸರ್ವಕಾರುಣಿಕಪ್ರಭುತ್ವದೊಳಗೇಕಿಂತು |
ನಿರ್ವಿಣ್ಣತೆಯೊ ಜನಕೆ ? - ಮರುಳ ಮುನಿಯ || (೭೧೪)

(ಸರ್ವಜ್ಞನು+ಆಳುತ+ಇರಲ್+ಏಕೆ+ಇಂತು)(ಪ್ರಭುತ್ವದ+ಒಳಗೆ+ಏಕೆ+ಇಂತು)

ಸಕಲವನ್ನೂ ಅರಿತಿರುವ ಪರಮಾತ್ಮನು ಆಳುತ್ತಿರುವ ಈ ಜಗತ್ತಿನಲ್ಲಿ ಏಕೆ ಈ ತಡೆಯಲಿಕ್ಕಾಗದಂತಹ (ದುರ್ವಾರ) ಕುಂದುಕೊರತೆಗಳು ಮತ್ತು ಧರ್ಮಲೋಪಗಳು? ಎಲ್ಲರಲ್ಲೂ ದಯೆ ಮತ್ತು ಕನಿಕರಗಳನ್ನು ತೋರಿಸತಕ್ಕಂತಹ ಆಡಳಿತದಲ್ಲಿ ಜನಗಳಿಗೆ ನಿರಾಸೆ ಮತ್ತು ದುಃಖಗಳು ಏಕೆ ಮತ್ತು ಹೇಗೆ ಬಂತು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why such irresistible evils and ethical lapses
In this world ruled by the omniscient Lord?
Why such despair to people under the rule of
The All merciful King? – Marula Muniya (714)
(Translation from "Thus Sang Marula Muniya" by Sri. Narasimha Bhat)