Friday, May 29, 2015

ಗುರುವ ಬಿಡಲೊಲದು ಜನ ಪಿಡಿಯದವನನು ತೀರ (777)

ಗುರುವ ಬಿಡಲೊಲದು ಜನ ಪಿಡಿಯದವನನು ತೀರ |
ಧರಣಿಯಲಿ ನಿಂದಿರದು ಗಗನಕೈದದದು ||
ಅರೆಯದನುಮರೆಯಿದನುಮನುಗೂಡಿಸುತಲೆಂತೊ |
ಚರಿಸುವುದು ಹದವೆಣಿಸಿ - ಮರುಳ ಮುನಿಯ || (೭೭೭)

(ಬಿಡಲ್+ಒಲದು)(ಪಿಡಿಯದು+ಅವನನು)(ನಿಂತು+ಇರದು)(ಗಗನಕೆ+ಐದದು+ಅದು)(ಅರೆಯದನುಂ+ಅರೆಯಿದನುಂ+ಅನುಗೂಡಿಸುತಲ್+ಎಂತೊ)(ಹದ+ಎಣಿಸಿ)

ಜನಗಳು ಗುರುವನ್ನು ಹೇಗೆ ಬಿಡಿಲಾರರೋ, ಅದೇ ರೀತಿ ಅವರು ಅವನನ್ನು ಅತಿಶಯವಾಗಿ ಅನುಸರಿಸಲೂ ಆರರು. ಭೂಮಿಯ ಮೇಲೆ ನಿಂತುಕೊಂಡಿರುವುದಿಲ್ಲ, ಹಾಗೆಂದು ಆಕಾಶ(ಗಗನ)ವನ್ನು ಸೇರುವುದೂ ಇಲ್ಲ. ಅರೆದು ಪುಡಿ ಮಾಡಿರುವ ಮತ್ತು ಅರೆಯದೆ ಪುಡಿಯಾಗದಿರುವ ಎರಡನ್ನೂ ಹೊಂದಿಸಿಕೊಂಡು ಹದವನ್ನು ತಿಳಿದು ಲೋಕದಲ್ಲಿ ವರ್ತಿಸಬೇಕು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

People are unable either to leave their Guru or to trust him.
They are unable either to remain on the earth or to fly up in the sky,
Harmonize that half and this half some-how
And move forward with all caution – Marula Muniya (777)
(Translation from "Thus Sang Marula Muniya" by Sri. Narasimha Bhat)

Wednesday, May 20, 2015

ಸಂದೇಹವಿರಲಿ ಸಯ್ತಿರದೆ ಕುದಿಯುತ್ತಿರಲಿ (776)

ಸಂದೇಹವಿರಲಿ ಸಯ್ತಿರದೆ ಕುದಿಯುತ್ತಿರಲಿ |
ಹಿಂದು-ಮುಂದುಗಳ ನೆನೆದದು ಬೆದಕುತಿರಲಿ ||
ಎಂದೊ ಬೇಸಗೆಯಲೊಂದುದಿನ ಮಳೆ ಬರುವಂತೆ |
ಮುಂದೆ ನಿಲುವುದು ತಥ್ಯ - ಮರುಳ ಮುನಿಯ || (೭೭೬)

(ಸಂದೇಹ+ಇರಲಿ)(ಸಯ್ತು+ಇರದೆ)(ಕುದಿಯುತ್ತ+ಇರಲಿ)(ನೆನೆದು+ಅದು)(ಬೆದಕುತ+ಇರಲಿ)(ಬೇಸಗೆಯಲಿ+ಒಂದುದಿನ)

ಮನಸ್ಸಿನಲ್ಲಿ ಶಂಕೆಗಳಿರಲಿ. ಆ ಸಂದೇಹಗಳು ಸಮಾಧಾನವನ್ನು (ಸುಯ್ತು) ಕಾಣದೆ ಕುದಿಯುತ್ತಲೇ ಇರಲಿ. ಹಿಂದು ಮತ್ತು ಮುಂದುಗಳನ್ನು ಜ್ಞಾಪಿಸಿಕೊಂಡು ಆ ಸಂದೇಹಗಳು ತಡಕಾಟದಲ್ಲಿರಲಿ (ಬೆದುಕುತಿರಲಿ). ಬೇಸಿಗೆಯ ದಿನಗಳಲ್ಲಿ ಎಂದೋ ಒಂದು ದಿವಸ ಮಳೆಯು ಬಂದು ಧರೆಯನ್ನು ತಂಪಾಗಿಸುವಂತೆ, ಸತ್ಯ(ತಥ್ಯ)ವೂ ಒಂದು ದಿನ ಎದುರಿಗೆ ಬಂದು ಶಂಕೆಗಳಿಗೆ ಸಮಾಧಾನವನ್ನು (ತಣಿಪು) ನೀಡುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Let there be doubt, let it boil in deep discontent,
Let it probe about the past and the future and explore them.
Like the rain that fails on someday in hot summer
Truth will rain down and cool the earth – Marula Muniya (776)
(Translation from "Thus Sang Marula Muniya" by Sri. Narasimha Bhat) #dvg,#kagga

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? (775)

ಸಂದೇಹ ಮೊದಲಿರದ ನಂಬುಗೆಯದೇಂ ಪಾಯ? |
ಬಂಧವಿರದಾಗಾರ ಗಾಳಿಯೆಡೆ ಸೊಡರು ||
ದ್ವಂದ್ವವಾದದಿನನಾವೃತವಾಗೆ ಸೂಕ್ಷ್ಮಕಣ್ |
ಮುಂದೆ ನಿಲುವುದು ತಥ್ಯ - ಮರುಳ ಮುನಿಯ || (೭೭೫)

(ಮೊದಲ್+ಇರದ)(ನಂಬುಗೆ+ಅದು+ಏಂ)(ಬಂಧವಿರದ+ಆಗಾರ)(ಗಾಳಿ+ಎಡೆ)(ದ್ವಂದ್ವವಾದದಿನ್+ಅನಾವೃತ+ಆಗೆ)

ಮೊಟ್ಟಮೊದಲಿನಲ್ಲಿ ಸಂದೇಹವೇ ಇರದಂತಹ ನಂಬಿಕೆಗಳು ಎಂತಹ ಅಡಿಗಲ್ಲಾದೀತು? ಅದು ಸರಿಯಾಗಿ ಕಟ್ಟದಿರುವ (ಬಂಧ) ಮನೆ (ಆಗಾರ) ಮತ್ತು ಗಾಳಿಯಿರುವ ಜಗದಲ್ಲಿಟ್ಟಿರುವ ದೀಪ(ಸೊಡರ್)ದಂತೆ ಕುಸಿದು, ಆರಿಹೋಗುತ್ತದೆ. ಸೂಕ್ಷ್ಮವಾಗಿರುವ ಕಣ್ಣುಗಳು ದ್ವಂದ್ವ ತರ್ಕಗಳಿಂದ ದೂರ ಸರಿದಾಗ (ಅನಾವೃತ) ಆ ಕಣ್ಣುಗಳ ಮುಂದೆ ಸತ್ಯ(ತಥ್ಯ)ವು ಬಂದು ನಿಂತುಕೊಳ್ಳುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Belief should grow after genuine doubt. If not it is similar to a house
Build without foundation and an open lamp exposes to wind
When your subtle eye is uncovered by opposing arguments,
Truth will stand face to face – Marula Muniya (775)
(Translation from "Thus Sang Marula Muniya" by Sri. Narasimha Bhat)

Monday, May 18, 2015

ಸಂದೇಹವೇಂ ಮನದೊಳ್? ಇರಲಿ, ಕುದಿಗೊಂಡಿರಲಿ (774)

ಸಂದೇಹವೇಂ ಮನದೊಳ್? ಇರಲಿ, ಕುದಿಗೊಂಡಿರಲಿ |
ಬೆಂದಲ್ಲದಿಳಿದೀತೆ ತಿಳಿವಿನೊಳಸಾರ ||
ತಂದೆ ನಿಶ್ಚಯಕೆ ಸಂಶಯ ಬುದ್ಧಿಮಥನದಿಂ |
ಬಂದಪುದು ತತ್ತ್ವಸುಧೆ - ಮರುಳ ಮುನಿಯ || (೭೭೪)

(ಕುದಿಗೊಂಡು+ಇರಲಿ)(ಬೆಂದ್+ಅಲ್ಲದೆ+ಇಳಿದೀತೆ)(ತಿಳಿವಿನ್+ಒಳಸಾರ)(ಬಂದ್+ಅಪುದು)

ನಿನ್ನ ಮನಸ್ಸಿನಲ್ಲಿ ಶಂಕೆಗಳುಂಟೋ? ಅದು ಹಾಗೆ ಕುದಿಯುತ್ತಾ ಇರಲಿ ಬಿಡು. ಸರಿಯಾಗಿ ಪಕ್ವವಾದ ಹೊರತು ತಿಳುವಳಿಕೆಗೆ ಒಳಗಿನ ಸಾರ ಅಂತರಂಗಕ್ಕೆ ಇಳಿಯಲಾರದು. ತಾನು ಗೊತ್ತು ಮಾಡಿಕೊಂಡಿರುವ ನಿರ್ಣಯಕ್ಕೆ ಸಂದೇಹಗಳುಂಟಾದಾಗ, ಬುದ್ಧಿಯನ್ನುಪಯೋಗಿಸಿ ಕೂಲಂಕುಶವಾಗಿ ವಿಚಾರ ಮಾಡುವುದರಿಂದ ಪರಮಾತ್ಮನ ತತ್ತ್ವಾಮೃತ(ಸುಧೆ)ಯು ದೊರಕುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

What’s the doubt lurking in your mind? Let it boil well
Will the essence of wisdom flow out unless it is baked well?
Doubt is the father of decision; the ambrosia of Truth comes out
Only when you churn your intellect well – Marula Muniya
(Translation from "Thus Sang Marula Muniya" by Sri. Narasimha Bhat) #dvg,#kagga

Thursday, May 14, 2015

ಮನುಜಯಂತ್ರವ ಪೋಲ್ವ ಯಂತ್ರವಿನ್ನೆಲ್ಲಿಹುದು? (773)

ಮನುಜಯಂತ್ರವ ಪೋಲ್ವ ಯಂತ್ರವಿನ್ನೆಲ್ಲಿಹುದು? |
ಮನದವೊಲು ಗರಗಸದ ಚಕ್ರವಿನ್ನೆಲ್ಲಿ? ||
ಅನಿಲಗತಿಯಿಂ ವಿಚಲ ತರವಲ್ತೆ ಮನದ ಗತಿ |
ಮನ ಕೊಂಕು ಜನ ಡೊಂಕು - ಮರುಳ ಮುನಿಯ || (೭೭೩)

(ಯಂತ್ರ+ಇನ್ನೆಲ್ಲಿ+ಇಹುದು)(ಚಕ್ರ+ಇನ್ನೆಲ್ಲಿ)

ಮನುಷ್ಯನ ರಚನೆಯನ್ನು ಹೋಲುವ ಬೇರೆ ಯಾವ ಯಂತ್ರಗಳು ಎಲ್ಲಿವೆ? ಮನುಷ್ಯನ ಗರಗಸದಂತಿರುವ ಮನಸ್ಸಿನ ಚಕ್ರ ಇನ್ನೆಲ್ಲಾದರೂ ಉಂಟೇನು? ಮನಸ್ಸಿನ ಚಲನೆಯೂ ಗಾಳಿಯ ಚಲನೆಯಂತೆ ಚಂಚಲ(ವಿಚಲ)ವಲ್ಲವೇ? ಮನಸ್ಸು ವಕ್ರವಿದ್ದಂತೆ, ಜನಗಳೂ ವಕ್ರ ಸ್ವಭಾವದವರಾಗಿದ್ದಾರೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Where is the machine comparable to human machine?
Where is the wheel-saw similar to human mind?
Is not mind’s velocity far more than that of the wind?
When mind is crooked man becomes wicked – Marula Muniya (773)
(Translation from "Thus Sang Marula Muniya" by Sri. Narasimha Bhat)

Tuesday, May 12, 2015

ಎನಗಾಗದೊಳಿತಾರ‍್ಗಮಾಗದಿರಲೆನ್ನದಿರು (772)

ಎನಗಾಗದೊಳಿತಾರ‍್ಗಮಾಗದಿರಲೆನ್ನದಿರು |
ತನು ಭೇದದಿಂದಾತ್ಮ ಭೇದವೆಣಿಸದಿರು ||
ಮನದ ರಾಜ್ಯದೊಳೆಲ್ಲರೆಲ್ಲೊಳಿತುಗಳನು ನೀ- |
ನನುಭವಿಸಲಾರೆಯಾ? - ಮರುಳ ಮುನಿಯ || (೭೭೨)

(ಎನಗೆ+ಆಗದ+ಒಳಿತು+ಆರ‍್ಗಂ+ಆಗದಿರಲಿ+ಎನ್ನದಿರು)(ಭೇದದಿಂದ+ಆತ್ಮ)(ಭೇದ+ಎಣಿಸದೆ+ಇರು)(ರಾಜ್ಯದೊಳ್+ಎಲ್ಲರ+ಎಲ್ಲ+ಒಳಿತುಗಳನು)(ನೀನ್+ಅನುಭವಿಸಲಾರೆಯಾ)

ನನಗೆ ಆಗದಿರುವ ಒಳ್ಳೆಯದು ಇತರರಿಗೂ ಆಗಬಾರದು ಎಂದು ಹೇಳಬೇಡ. ದೇಹದಿಂದ ದೇಹಕ್ಕೆ ಕಂಡುಬರುವ ವ್ಯತ್ಯಾಸಗಳಿಂದ ಆತ್ಮ-ಆತ್ಮಗಳಲ್ಲಿ ಭೇದ ಭಾವಗಳನ್ನು ಕಲ್ಪಿಸಬೇಡ. ನಿನ್ನ ಮನಸ್ಸಿನ ರಾಜ್ಯದಲ್ಲಿ ನೀನು ಎಲ್ಲರ ಹಿತಗಳನ್ನು ಅನುಭವಿಸಲಾರೆಯೇನು?
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Say not that none else should enjoy the happiness that you couldn’t enjoy,
Discriminate not between self and self though the bodies are different
Can’t you enjoy all the happiness of all the people
In the kingdom of your mind? – Marula Muniya (772)
(Translation from "Thus Sang Marula Muniya" by Sri. Narasimha Bhat)

Friday, May 8, 2015

ಗೃಹಿಧರ್ಮವನು ನಿನ್ನ ಮಹಿಯ ಚೌರ್ಯಕೆ ಹೊದಿಸಿ (771)

ಗೃಹಿಧರ್ಮವನು ನಿನ್ನ ಮಹಿಯ ಚೌರ್ಯಕೆ ಹೊದಿಸಿ |
ಸಹಜ ಲೋಭಿತೆಯ ನಿಃಸ್ಪೃಹತೆಯೆನ್ನುವುದೆ? ||
ವಹಿಪುದು ಕುಟುಂಬ ಭಾರವನಾತ್ಮದೆಲುಬುಗಳು |
ಸಹಿಸಲಹ ಮಿತಿಯೊಳಗೆ - ಮರುಳ ಮುನಿಯ || (೭೭೧)

(ಭಾರವನ್+ಆತ್ಮದ+ಎಲುಬುಗಳು)(ಸಹಿಸಲು+ಅಹ)

ನಿನ್ನ ದಿನನಿತ್ಯದ ಗೃಹಕೃತ್ಯದ ಧರ್ಮಪಾಲನೆಗಳನ್ನು ಈ ಜಗತ್ತಿನಲ್ಲಿ(ಮಹಿ) ನೀನು ಮಾಡುವ ಕಳ್ಳತನ(ಚೌರ್ಯಕ್ಕೆ)ಕ್ಕೆ ಹೊದಿಸಿ, ಸಹಜವಾಗಿರುವ ನಿನ್ನ ಜಿಪುಣತನವನ್ನು ನೀನು ಪ್ರಾಮಾಣಿಕ ಮತ್ತು ನಿಃಸ್ವಾರ್ಥ (ನಿಃಸ್ಪೃಹತೆ) ಬುದ್ಧಿ ಎಂದೆನ್ನುವೆಯೇನು? ಸಂಸಾರದ ಭಾರಗಳನ್ನು ನಿನ್ನ ಆತ್ಮದ ಮೂಳೆಗಳು (ಎಲುಬುಗಳು) ಸಹಿಸಲು ಸಾಧ್ಯವಾದಷ್ಟು ಮಿತಿಯೊಳಗೆ ಹೊತ್ತುಕೊಳ್ಳುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Grab not the land of others under the garb of householder’s duty
Label not your inborn greed as selflessness,
Bear your family burden only as much as
The bones of your self can endure – Marula Muniya (771)
(Translation from "Thus Sang Marula Muniya" by Sri. Narasimha Bhat)

Thursday, May 7, 2015

ತಬ್ಬಿಕೊಳದಿರು ಹಸುಳೆ ನಿನ್ನದಾದೊಡಮದನು (770)

ತಬ್ಬಿಕೊಳದಿರು ಹಸುಳೆ ನಿನ್ನದಾದೊಡಮದನು |
ತಬ್ಬಲಿಯ ಮುಂದೆ ಅವನೆದೆಯೊಳದರಿಂದೆ ||
ಅಬ್ಬೆ ತನಗಿಲ್ಲ ತನ್ನನು ಕೇಳ್ವರಿಲ್ಲೆನ್ನು- |
ವುಬ್ಬೆಗಂ ಪುಟ್ಟೀತು - ಮರುಳ ಮುನಿಯ || (೭೭೦)

(ತಬ್ಬಿಕೊಳದೆ+ಇರು)(ನಿನ್ನದು+ಆದೊಡಂ+ಅದನು)(ಅವನ+ಎದೆಯೊಳ್+ಅದರಿಂದೆ)(ಕೇಳ್ವರ್+ಇಲ್ಲ+ಎನ್ನುವ+ಉಬ್ಬೆಗಂ)

ಮಗುವು ನಿನ್ನದೇ ಆದರೂ ಸಹ, ಅದನ್ನು ಒಬ್ಬ ತಂದೆತಾಯಿಗಳಿಲ್ಲದಿರುವ ತಬ್ಬಲಿ ಮಗುವಿನ ಮುಂದೆ ತಬ್ಬಿಕೊಂಡು ಮುದ್ದಿಸಬೇಡ. ಏಕೆಂದರೆ ಆವಾಗ ಆ ತಬ್ಬಲಿಯ ಹೃದಯದ ಒಳಗಡೆ ತನಗೆ ತಾಯಿ (ಅಬ್ಬೆ) ಇಲ್ಲ, ಆದ್ದರಿಂದ ತನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಎನ್ನುವ ದುಃಖ ಮತ್ತು ದುಮ್ಮಾನಗಳು (ಉಬ್ಬೆಗ) ಹುಟ್ಟಬಹುದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Embrace not the child, though it is your own
In front of an orphan as his heart may burn
With the feeling that he is motherless and there’s none
To look after him – Marula Muniya (770)
(Translation from "Thus Sang Marula Muniya" by Sri. Narasimha Bhat) #dvg,#kagga

Monday, May 4, 2015

ಅಣುವ ಸೀಳಲುಬಹುದು ಕಣವನೆಣಿಸಲುಬಹುದು (769)

ಅಣುವ ಸೀಳಲುಬಹುದು ಕಣವನೆಣಿಸಲುಬಹುದು |
ತಣು ಬಿಸಿಗಳೊತ್ತಡವ ಪಿಡಿದಳೆಯಬಹುದು ||
ಗಣಿಸಲಳವೇ ಪ್ರೇಮ ಸುಖ ದುಃಖ ಮಹಿಮೆಗಳ |
ಮನದ ಮೂಲವತರ್ಕ್ಯ - ಮರುಳ ಮುನಿಯ || (೭೬೯)

(ಬಿಸಿಗಳ+ಒತ್ತಡವ)(ಪಿಡಿದು+ಅಳೆಯಬಹುದು)(ಗಣಿಸಲು+ಅಳವೇ)(ಮೂಲವು+ಅತರ್ಕ್ಯ)

ಅಣುವನ್ನು ಸೀಳಿ ಅದರಿಂದ ಉಪಯೋಗಗಳನ್ನು ಪಡೆಯಬಹುದು. ಸೂಕ್ಷ್ಮಕಣಗಳನ್ನು ಲೆಕ್ಕ ಹಾಕಬಹುದು. ತಂಪು (ತಣಿ) ಮತ್ತು ಶಾಖಗಳ ಒತ್ತಡಗಳನ್ನು ಹಿಡಿದು ಅಳತೆ ಮಾಡಬಹುದು. ಆದರೆ ಒಲವು, ಪ್ರೀತಿ, ದುಃಖ, ದುಮ್ಮಾನಗಳ ಹಿರಿಮೆಗಳನ್ನು ಅಳತೆ ಮಾಡಿ ಲೆಕ್ಕ ಹಾಕಲು ಸಾಧ್ಯವೇನು? ಮನಸ್ಸಿನಲ್ಲಿ ಉದ್ಭವಿಸುವ ಭಾವನೆಗಳನ್ನು ತರ್ಕಕ್ಕೆ ಸಿಗಲಾರವು (ಅತರ್ಕ್ಯ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

You can split atoms and count particles,
You can measure the intensity of cold and heat,
But can you count the wondrous powers of love, happiness and sorrow?
The root of mind lies beyond logic – Marula Muniya (769)
(Translation from "Thus Sang Marula Muniya" by Sri. Narasimha Bhat)