Monday, December 30, 2013

ಬಡವನಾರ್? ಮಡದಿಯೊಲವಿನ ಸವಿಯನರಿಯದವನು (554)

ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಗನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ - ಮರುಳ ಮುನಿಯ || (೫೫೪)

(ಮಡದಿ+ಒಲವಿನ)(ಸವಿಯನ್+ಅರಿಯದವನು)(ಹುಡುಗರ+ಆಟದಿ)(ನಗಲ್+ಅರಿಯದವನು)(ಉಡುರಾಗನ+ಓಲಗದಿ)

ಪ್ರಪಂಚದಲ್ಲಿ ಜೀವಿಸುತ್ತಿರುವವರಲ್ಲಿ ಬಡವನು ಯಾರು? ಯಾವನು ತನ್ನ ಸತಿಯ ಪ್ರೀತಿಯ ರುಚಿಯನ್ನು ಕಾಣಲಾರದವನೋ, ಚಿಕ್ಕ ಮಕ್ಕಳ ಜೊತೆ ಆಟಗಳಲ್ಲಿ ಸೇರಿಕೊಂಡು ಸಂತೋಷಿಸಲು ಕಲಿತಿಲ್ಲವೋ, ಚಂದ್ರನ ತಂಪಾದ ಬೆಳಕಿನಲ್ಲಿ ಸಂತೋಷವಾಗಿ ಮೈಮರೆಯುವಂತೆ ವಿಹರಿಸಲಾರನೋ ಅವನೇ ಬಡವ. ಮನಸ್ಸನ್ನು ಶ್ರೀಮಂತಗೊಳಿಸಿಕೊಳ್ಳದೇ ಮತ್ತು ಸಂತೋಷಚಿತ್ತದಿಂಡ ಇಲ್ಲದಿರುವುದೇ ಬಡತನ, ಮತ್ತೇನೂ ಅಲ್ಲ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is poor? One who hasn’t tasted his wife’s love
One who cannot join the children in their play and enjoy
One who cannot forget himself in the cool bliss of the moonlight night
A poor mind is poverty personified –Marula Muniya
(Translation from "Thus Sang Marula Muniya" by Sri. Narasimha Bhat)

Friday, December 27, 2013

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ? (553)

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ?
ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ ?||
ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು |
ಸರಸತೆಯೆ ಸಿರಿತನವೊ - ಮರುಳ ಮುನಿಯ || (೫೫೩)

(ಹರುಷ+ಅಂಗಡಿ)(ಹೃದಯದ+ಒಳಚಿಲುಮೆಯದು)

ಸಂತೋಷವಾಗಿರುವುದಕ್ಕೆ ಸಿರಿಸಂಪತ್ತುಗಳು ಇರಲೇಬೇಕೇನು? ಸೂರ್ಯನ(ಅರುಣ) ಬೆಳಕಿಗೆ ಬಾಡಿಗೆ ಕೊಡಬೇಕೇನು? ಭೂಮಿತಾಯಿಯ ಪ್ರತಿನಿತ್ಯದ ವಿಧವಿಧವಾದ ರಂಗುಗಳಿಗೆ ಏನು ಬೆಲೆ? ಸಂತೋಷವೆನ್ನುವುದು ಅಂಗಡಿಯಲ್ಲಿ ನಾವು ಕೊಂಡುಕೊಳ್ಳುವುದಕ್ಕೆ ಸಿಗುವ ಸಾಮಗ್ರಿ(ಸರಕು) ಏನು? ಸಂತೋಷವೆನ್ನುವುದು ಹೃದಯದೊಳಗಿರುವ ಬುಗ್ಗೆ. ಸೌಜನ್ಯ ಮತ್ತು ರಸಿಕತೆಯಿಂದಿರುವುದೇ ಸಿರಿವಂತಿಕೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Why riches for happiness? Have you to pay any rent to enjoy the dawn?
Has any price been fixed for the myriad hues that adorn the earth every day?
Is happiness available in shops? It is the fountain in your heart,
Sense of humour itself is wealth – Marula Muniya (533)
(Translation from "Thus Sang Marula Muniya" by Sri. Narasimha Bhat)

Tuesday, December 24, 2013

ಅಹಿಮುಖಸಹಸ್ರದೊಳಗೊಂದುಸಿರ‍್ವನ್ ಆ ಶೇಷ (552)

ಅಹಿಮುಖಸಹಸ್ರದೊಳಗೊಂದುಸಿರ‍್ವನ್ ಆ ಶೇಷ |
ಬಹುಜೀವದೊಳಗೊಂದೆ ಪರಮಾತ್ಮಸತ್ತ್ವ ||
ಸಿಹಿಯನೋ ಕಹಿಯನೋ ಮುಖ ಸವಿವುದಸುವಲ್ಲ |
ವಿಹರಿಸುವ ರೀತಿಯಿದು - ಮರುಳ ಮುನಿಯ || (೫೫೨)

(ಅಹಿಮುಖ+ಸಹಸ್ರದೊಳಗೆ+ಒಂದು+ಉಸಿರ‍್ವನ್)(ಬಹುಜೀವದೊಳಗೆ+ಒಂದೆ)(ಸವಿವುದು+ಅಸುವಲ್ಲ)

ಸಾವಿರ ಮುಖಗಳಿಂದ ಕೂಡಿದ ಶೇಷನೆಂಬ ಸರ್ಪ(ಅಹಿ)ದಲ್ಲಿ ಇರುವ ಶ್ವಾಸವು ಮಾತ್ರ ಒಂದೇ ಒಂದು. ಅದೇ ರೀತಿ ಸಮಸ್ತ ಜೀವಿಗಳೊಳಗಿರುವುದು ಪರಮಾತ್ಮನ ಒಂದೇ ಸಾರ ಮತ್ತು ತಿರುಳು. ಸಿಹಿ, ಕಹಿ, ಸುಖ ಮತ್ತು ದುಃಖಗಳನ್ನು ಸವಿಯುವುದು ದೇಹ ಮಾತ್ರವೇ ಹೊರತು ಜೀವವಲ್ಲ. ಪರಮಾತ್ಮನ ಸಾರವು ಜೀವಿಗಳಲ್ಲಿ ವಿಹಾರ ಮಾಡುವ ರೀತಿ ಇದು ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

One breath Mahashesha draws in through his thousand faces
One God substance lives in numberless beings
It is the face that experiences sweetness or bitterness and not the soul
This is how you should sport in life – Marula Muniya
(Translation from "Thus Sang Marula Muniya" by Sri. Narasimha Bhat)

Monday, December 23, 2013

ಕಷ್ಟಭಯತೋರ‍್ದಂದು, ನಷ್ಟನಿನಗಾದಂದು (551)

ಕಷ್ಟಭಯತೋರ‍್ದಂದು, ನಷ್ಟನಿನಗಾದಂದು |
ದೃಷ್ಟಿಯನು ತಿರುಗಿಸೊಳಗಡೆಗೆ ನೋಡಲ್ಲಿ ||
ಸೃಷ್ಟಿಯಮೃತದ್ರವಂ ಸ್ರವಿಸುವುದು ಗುಪ್ತಿಯಿಂ |
ಪುಷ್ಟಿಗೊಳ್ಳದರಿಂದೆ - ಮರುಳ ಮುನಿಯ || (೫೫೧)

(ಕಷ್ಟಭಯ+ತೋರ‍್ದ+ಅಂದು)(ತಿರುಗಿಸಿ+ಒಳಗಡೆಗೆ)(ಸೃಷ್ಟಿಯ+ಅಮೃತದ್ರವಂ)(ಪುಷ್ಟಿಗೊಳ್+ಅದರಿಂದೆ)

ತೊಂದರೆ ಮತ್ತು ಹೆದರಿಕೆಗಳು ನಿನ್ನನ್ನು ಕಾಡಿದಾಗ, ಕೆಡಕು ಮತ್ತು ಹಾನಿಗಳು ಉಂಟಾದಾಗ, ನಿನ್ನ ದೃಷ್ಟಿಯನ್ನು ನಿನ್ನೊಳಗಡೆಗೆ ತಿರುಗಿಸಿ ನೋಡು. ಸೃಷ್ಟಿಯ ಅಮೃತ ರಸವು ಗುಟ್ಟಾಗಿ(ಗುಪ್ತಿ) ಜಿನುಗು(ಸ್ರವಿಸು)ತ್ತಿರುವುದನ್ನು ಕಾಣುವೆ. ಆ ಅಮೃತ ರಸವನ್ನು ಸೇವಿಸಿ ಅದರಿಂದ ಗಟ್ಟಿಗನಾಗು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

When the fear the suffering afflicts you,  when you suffer heavy loss
Turn your vision inward and see
The ambrosia of creation oozing secretly there,
Draw strength from that source – Marula Muniya
(Translation from "Thus Sang Marula Muniya" by Sri. Narasimha Bhat)

Friday, December 20, 2013

ಕಡುಹೇಡಿ ಯಾರಯ್ಯ? ಬಡತನಕೆ ಹೆದರುವನು (550)

ಕಡುಹೇಡಿ ಯಾರಯ್ಯ? ಬಡತನಕೆ ಹೆದರುವನು |
ಎಡರುಗಳನೆದುರಿಸಲಿಕೆದೆಯಿಲ್ಲದವನು ||
ನಡುಗುವನು ಸತ್ಯದುಲಿಯನು ಕೇಳಿ (ಜಗದೊಳಗೆ) |
ನಡೆಸನವ ಜೀವನವ - ಮರುಳ ಮುನಿಯ || (೫೫೦)

(ಎಡರುಗಳನು+ಎದುರಿಸಲಿಕೆ+ಎದೆಯಿಲ್ಲದವನು)(ಸತ್ಯದ+ಉಲಿಯನು)(ನಡೆಸನ್+ಅವ)

ಪ್ರಪಂಚದಲ್ಲಿ ಕಡುಹೇಡಿ ಎಂದು ಯಾರಿಗೆ ಹೇಳಬಹುದು ? ಯಾವನು ಬಡತನಕ್ಕೆ ಹೆದರುವನೊ ಅವನು ಹೇಡಿ. ಯಾವನು ಅಡಚಣೆ, ಅಡ್ಡಿ, ಆತಂಕಗಳನ್ನು ಧೈರ್ಯದಿಂದ ಎದುರಿಸಲು ಹೆದರುವವನೋ ಅವನು ಹೇಡಿ. ಅವನು ಈ ಜಗತ್ತಿನಲ್ಲಿ ನಿಜವನ್ನು ಕೇಳಿಸಿಕೊಂಡು ಹೆದರಿ ನಡುಗುತ್ತಾನೆ. ಅವನು ಜೀವನವನ್ನು ನಡೆಸಲಾರ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Who is a first rank coward? It’s he who fears poverty,
It’s he who is not bold enough to brave difficulties,
It’s he who trembles to hear the voice of truth
And fails to live like a man – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 18, 2013

ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ (549)

ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ |
ನಶಿಸಲೀ ನಿನ್ನೆಲ್ಲವೇನಾದೊಡೇನು ? ||
ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ |
ಕುಶಲವೆದೆಗಟ್ಟಿಯಿರೆ - ಮರುಳ ಮುನಿಯ || (೫೪೯)

(ನಶಿಸಲ್+ಈ)(ನಿನ್ನ+ಎಲ್ಲ+ಏನ್+ಆದೊಡೆ+ಏನು)(ಬಸವಳಿಯದೆ+ಇರು)(ಕುಶಲ+ಎದೆಗಟ್ಟಿಯಿರೆ)

ಭೂಮಿಯು ಕುಸಿದು ಕೆಳಕ್ಕಿಳಿದು ಹೋಗಲಿ, ಆಕಾಶವು ಜಾರಿ ಕೆಳಕ್ಕೆ ಬಿದ್ದುಹೋಗಲಿ. ನಿನ್ನ ಸರ್ವಸ್ವವೆಲ್ಲವೂ ನಾಶವಾಗಿ ಹೋಗಲಿ. ಏನಾದರೇನು? ನೀನು ಮಾತ್ರ ಹೆದರಬೇಡ. ನಿನ್ನ ಜೀವವು ಆಯಾಸದಿಂದ ದಣಿದು ಶಕ್ತಿಗುಂದದಿರಲಿ (ಬಸವಳಿ). ಪರಮಾತ್ಮನ ಸತ್ತ್ವದಲ್ಲಿ ವಾಸಮಾಡು(ವಸಿಸು). ನಿನ್ನ ಅಂತರಂಗ ದೃಢವಾಗಿದ್ದಲ್ಲಿ, ಎಲ್ಲವೂ ಕ್ಷೇಮಕರ(ಕುಶಲ)ವಾಗಿರುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Let the earth sink down and let the sky collapse
Let all your things be destroyed, what of that?
Don’t feel weary, let your soul dwell in Shiva-substance
All will be well of you don’t lose heart – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 17, 2013

ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ (548)

ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ-|
ನಿಳೆಗೆ ಬೇಸರ ತರುವ ದಿನದಿನದ ಮಾತು ||
ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ-|
ಗಳಿಸುವವೊಲ್ ಯತ್ನಿಸೆಲೆ - ಮರುಳ ಮುನಿಯ || (೫೪೮)

(ಬೀಳ್ವುದು+ಏನ್+ಇಳೆಗೆ)(ಯತ್ನಿಸು+ಎಲೆ)

ಸತತವಾಗಿ ಬೀಳುತ್ತಿರುವ ಮಳೆಯ ಆರ್ಭಟಕ್ಕೆ ಸಿಕ್ಕಿ ಹಳೆಯ ಮನೆ ಬೀಳುವುದು, ಪ್ರಪಂಚಕ್ಕೆ ಬೇಜಾರು ತರುವ ಪ್ರತಿನಿತ್ಯದ ಮಾತು. ನಾಶವಾಗಿ ಹೋದ ಮನೆಯನ್ನು ಪುನಃ ಕಟ್ಟಿಸಿ ಎದ್ದು ನಿಲ್ಲಿಸಿ, ಅಲ್ಲಿ ವಾಸಿಸುತ್ತಿದ್ದ ಮಂದಿಯ ಜೀವನದಲ್ಲಿ ಬೆಳಕು ಬರುವಂತೆ ಪ್ರಯತ್ನಿಸು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

An old house collapsing smitten by heavy rains
Is an everyday phenomenon though a sad affair
Then build a new house in the place of the old
And light a new lamp – Marula Muniya
(Translation from "Thus Sang Marula Muniya" by Sri. Narasimha Bhat)

Monday, December 16, 2013

ಆದ್ಯಂತರಹಿತವಾ ಪೌರುಷ ಪ್ರಗತಿಕಥೆ (547)

ಆದ್ಯಂತರಹಿತವಾ ಪೌರುಷ ಪ್ರಗತಿಕಥೆ |
ಸಾಧ್ಯವಹುದೆಲ್ಲೊಳಿತ್ತೆನುವ ಸಾಸವದು ||
ಸದ್ಯಕಾಗದ ಸಿದ್ಧಿ ನಾಳೆಗಾದೀತೆನುವ |
ಉದ್ಯಮೋತ್ಸಾಹವದು - ಮರುಳ ಮುನಿಯ || (೫೪೭)

(ಆದಿ+ಅಂತರಹಿತ+ಆ)(ಸಾಧ್ಯ+ಅಹುದು+ಎಲ್ಲ+ಒಳಿತ್ತು+ಎನುವ)(ನಾಳೆಗೆ+ಆದೀತು+ಎನುವ)(ಉದ್ಯಮ+ಉತ್ಸಾಹ+ಅದು)

ಮನುಷ್ಯನ ಪುರುಷತ್ವದ ಮುನ್ನಡೆಯ ಕಥೆಗೆ ಮೊದಲು (ಆದಿ) ಮತ್ತು ಕೊನೆಗಳಿಲ್ಲ (ಆದ್ಯಂತರಹಿತ). ಸರ್ವರಿಗೂ ಒಳ್ಳೆಯದನ್ನು (ಒಳಿತು) ಮಾಡಲು ಸಾಧ್ಯವೆಂದೆನ್ನುವ ಶೌರ್ಯ ಪರಾಕ್ರಮ ಮತ್ತು ಸಾಹಸ(ಸಾಸ)ಗಳವು. ತಕ್ಷಣದಲ್ಲೇ ಗುರಿಯನ್ನು ಮುಟ್ಟದಿದ್ದರೂ ಸಹ, ಮುಂದೆ ಅದು ಆಗಬಹುದೆನ್ನುವ ಕಾಯಕ(ಉದ್ಯಮ)ದ ಹುಮ್ಮಸ್ಸು (ಉತ್ಸಾಹ) ಅದು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Beginningless and endless is the saga of the onward march of manliness
It is an adventure with the firm belief that the welfare of tall is possible
The objective would be achieved tomorrow if not today
It is such a zeal for work – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 12, 2013

ಸೊಗಸುಗಳನೆಸಗುತ್ತೆ ಲೋಕಸಾಮಗ್ರಿಯಲಿ (546)

ಸೊಗಸುಗಳನೆಸಗುತ್ತೆ ಲೋಕಸಾಮಗ್ರಿಯಲಿ |
ಸೊಗ ದುಗುಡಗಳ ನಡುವೆ ಮತಿಯನೆಡವಿಸದೆ ||
ಜಗದಾತ್ಮವನು ನೆನೆದು ಸರ್ವಹಿತದಲಿ ಬಾಳ್ವ |
ಪ್ರಗತಿ ಪೌರುಷ ವಿಜಯ - ಮರುಳ ಮುನಿಯ || (೫೪೬)

(ಸೊಗಸುಗಳನ್+ಎಸಗುತ್ತೆ)(ಮತಿಯನ್+ಎಡವಿಸದೆ)(ಜಗದ+ಆತ್ಮವನು)

ಪ್ರಪಂಚವು ಒದಗಿಸಿರುವ ಸಲಕರಣೆಗಳನ್ನುಪಯೋಗಿಸಿ ಸೌಂದರ್ಯವನ್ನುಂಟುಮಾಡುವ ಕೆಲಸಗಳನ್ನು ಮಾಡುತ್ತಾ, ಸುಖ ಮತ್ತು ದುಃಖಗಳ ಮಧ್ಯದಲ್ಲಿರುವಾಗ, ಬುದ್ಧಿಶಕ್ತಿಯು ಎಡವದಂತೆ ನೋಡಿಕೊಂಡು, ಜಗತ್ತೆಲ್ಲ ಏಕಾತ್ಮರೂಪಿ ಎಂದು ಜ್ಞಾಪಕದಲ್ಲಿರಿಸಿಕೊಂಡು, ಎಲ್ಲರಿಗೂ ಹಿತವಾಗುವ ರೀತಿಯಲ್ಲಿ ಜೀವನವನ್ನು ನಡೆಸುತ್ತಾ, ಹೊಂದುವ ಏಳಿಗೆಯೇ ಪೌರುಷತ್ವದ ಗೆಲುವು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

During good and pleasant deeds with the materials available here
Without allowing the mind to stumble amidst joys and sorrows
Living for the welfare of all, ever remembering the universal soul
Is progress and it is the victory of manliness – Marula Muniya (546)
(Translation from "Thus Sang Marula Muniya" by Sri. Narasimha Bhat)

Wednesday, December 11, 2013

ಕವಿ ತತ್ತ್ವದರ್ಶಕರು ವಿಜ್ಞಾನಯೋಜಕರು (545)

ಕವಿ ತತ್ತ್ವದರ್ಶಕರು ವಿಜ್ಞಾನಯೋಜಕರು |
ನವಧರ್ಮಬೋಧಕರು ರಾಷ್ಟ್ರಚೋದಕರು ||
ಅವತರಿಸಿ ಮರಮರಳಿ ತೋರಿಹರು ಪುರುಷತ್ವ - |
ದವಿನಶ್ಯತೆಯ ನೋಡು - ಮರುಳ ಮುನಿಯ || (೫೪೫)

(ಪುರುಷತ್ವದ+ಅವಿನಶ್ಯತೆಯ)

ಕವಿಗಳು, ದಾರ್ಶನಿಕರು, ವಿಜ್ಞಾನವನ್ನು ಉಪಯೋಗಕ್ಕೆ ತಂದವರು, ಹೊಸ ಹೊಸ ಧರ್ಮಬೋಧಕರು, ರಾಷ್ಟ್ರವನ್ನು ಪ್ರೇರಿಸುವ ನಾಯಕರುಗಳು ಪುನಃ ಪುನಃ ಇಳಿದು ಬಂದು ಪ್ರಪಂಚದಲ್ಲಿ ಪುರುಷತ್ವದ ಸ್ಥಿರತ್ವವನ್ನು (ಅವಿನಶ್ಯತೆ) ತೋರಿಸಿರುವುದನ್ನು ನೋಡು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Poets, philosopher-seers, master planners of science
New religious teachers, patriotic statesmen
Have incarnated again and again and have proved
The indestructibility of human valour – Marula Muniya
(Translation from "Thus Sang Marula Muniya" by Sri. Narasimha Bhat)

Tuesday, December 10, 2013

ದುಃಖದುದರದಿ ಕಡಲ ಬಾಡಬದವೊಲು ಸತ್ತ್ವ (544)

ದುಃಖದುದರದಿ ಕಡಲ ಬಾಡಬದವೊಲು ಸತ್ತ್ವ |
ಮಿಕ್ಕಿಹುದು ನಿನ್ನೊಳು ವಿಮೋಚನೇಚ್ಛೆಯಲಿ ||
ಪ್ರಾಕ್ಕೃತದ ನಿಗಳ ಕೈಗಳ ಬಿಗೆಯೆ ತೋಳಿಂದ |
ಕುಕ್ಕದನು ತಿಕ್ಕದನು - ಮರುಳ ಮುನಿಯ || (೫೪೪)

(ದುಃಖದ+ಉದರದಿ)(ವಿಮೋಚನೇ+ಇಚ್ಛೆಯಲಿ)(ಕುಕ್ಕು+ಅದನು)(ತಿಕ್ಕು+ಅದನು)

ಸಾಮರ್ಥ್ಯವೆನ್ನುವುದು ದುಃಖದ ಹೊಟ್ಟೆಯಲ್ಲಿ ಸಮುದ್ರದ ಬಡಬಾಗ್ನಿ(ಬಡಬ)ಯಂತಿರುತ್ತದೆ. ಬಿಡುಗಡೆಯ ಬಯಕೆಯಲ್ಲಿ ನಿನ್ನೊಳಗೆ ಅದು ಉಳಿದಿರುತ್ತದೆ. ನಿನ್ನ ಪೂರ್ವ ಕರ್ಮಗಳ(ಪ್ರಾಕೃತದ) ಸಂಕೋಲೆ(ನಿಗಳ)ಗಳು, ತನ್ನ ತೋಳುಗಳಿಂದ ನಿನ್ನ ಕೈಗಳನ್ನು ಬಿಗಿದಿರುವಾಗ, ಅದನ್ನು ನೀನು ಕುಕ್ಕಿ ಮತ್ತು ತಿಕ್ಕಿ ನಿನ್ನ ಶಕ್ತಿ ಸಾಮರ್ಥ್ಯಗಳನ್ನು ಹೊರಹೊಮ್ಮಿಸಿಕೊ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Just like the raging badaba fire blazes at the bottom of the sea
Your strong will power clamours for release amidst your sorrows
When the shackles of the past Karma bind and bite your hands
Smash them into pieces with your arms – Marula Muniya (544)
(Translation from "Thus Sang Marula Muniya" by Sri. Narasimha Bhat)

Monday, December 9, 2013

ಎದೆಗಟ್ಟಿ ಯೆದೆಗಟ್ಟಿ ಯೆದೆಗಟ್ಟಿ ಯೆನ್ನುತಿರು (543)

ಎದೆಗಟ್ಟಿ ಯೆದೆಗಟ್ಟಿ ಯೆದೆಗಟ್ಟಿ ಯೆನ್ನುತಿರು |
ಪದ ಜಾರಿ ಬಿದ್ದಂದು ತಲೆ ತಿರುಗಿದಂದು ||
ಬದುಕೇನು ಜಗವೇನು ದೈವವೇನೆನಿಪಂದು |
ಅದಿರದೆದೆಯೇ ಸಿರಿಯೋ - ಮರುಳ ಮುನಿಯ || (೫೪೩)

(ದೈವವು+ಏನ್+ಎನಿಪಂದು)(ಅದಿರದ+ಎದೆಯೇ)

ನಿನ್ನ ಕಾಲುಗಳು ಉಡುಗಿ ನೀನು ಜಾರಿ ಬಿದ್ದಾಗ ಮತ್ತು ನಿನ್ನ ತಲೆ ತಿರುಗಿದಂತಾದಾಗ, ಜೀವನದಲ್ಲಿ ಏನಿದೆ? ಪ್ರಪಂಚ ಏಕೆ ಬೇಕು? ಮತ್ತು ದೇವರು ಎಲ್ಲಿದ್ದಾನೆ? ಎಂದಿನ್ನಿಸಿದಾಗ, ನನ್ನ ಎದೆ (ಧೈರ್ಯ ಸ್ಥೈರ್ಯ) ಬಹಳ ಗಟ್ಟಿಯಾಗಿದೆ ಎಂದೆನ್ನುತಿರು. ಅಲುಗಾಡದೆ ಮತ್ತು ಹೆದರದೆ ಇರುವ ಎದೆಗಾರಿಕೆಯೇ ಸಂಪತ್ತು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

My heart is strong; my heart is strong, feel so always
When you slip and fall and when your head is reeling
When all life, whole world and the great God let you down
The unshakable heart is the only support – Marula Muniya
(Translation from "Thus Sang Marula Muniya" by Sri. Narasimha Bhat)

Friday, December 6, 2013

ಉರ್ವರೆಯಪೇಕ್ಷಿಸಿರೆ ನಿನ್ನ ಬಲ ಸಾಹಸವ (542)

ಉರ್ವರೆಯಪೇಕ್ಷಿಸಿರೆ ನಿನ್ನ ಬಲ ಸಾಹಸವ |
ನಿರ್ವಿಣ್ಣತೆಯಿನಡಗಿ ಮುಡುಗುವುದೆ ಸಾವು ||
ನಿರ್ವಹಿಸು ಲೌಕಿಕವ ಸಾತ್ತ್ವಿಕದ ಶೌರ್ಯದಿಂ |
ನಿರ್ವೀರ್ಯತನ ಬೇಡ - ಮರುಳ ಮುನಿಯ || (೫೪೨)

(ಉರ್ವರೆ+ಅಪೇಕ್ಷಿಸಿ+ಇರೆ)(ನಿರ್ವಿಣ್ಣತೆಯಿನ್+ಅಡಗಿ)

ಪ್ರಪಂಚ(ಉರ್ವರೆ)ವು ನಿನ್ನ ಶಕ್ತಿ ಮತ್ತು ಪರಾಕ್ರಮಗಳನ್ನು ಬಯಸುತ್ತಿರು(ಅಪೇಕ್ಷಿಸು)ವಾಗ, ದುಃಖ ಮತ್ತು ಬೇಸರ(ನಿರ್ವಿಣ್ಣತೆ)ತೆಯಿಂದ ಬಚ್ಚಿಟ್ಟುಕೊಂಡು ಮುರುಟುರುವುದೇ ಸಾವು. ಆದ ಕಾರಣ ಸತ್ತ್ವಗುಣದಿಂದ ಕೂಡಿದ ಪರಾಕ್ರಮದಿಂದ ಲೋಕವ್ಯವಹಾರವನ್ನು ನೆರವೇರಿಸು. ನಿಸ್ಸಾಮರ್ಥ್ಯ ಮತ್ತು ನಿಸ್ಸಾಹಸವನ್ನು ತೋರಿಸಬೇಡ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

It is death to hide and shrink with utter despondency
When the world demands your prowess and valour
Manage the affairs of the world with satvic valour
Shed your sense of weakness – Marula Muniya
(Translation from "Thus Sang Marula Muniya" by Sri. Narasimha Bhat)

Thursday, December 5, 2013

ಅಳುವರೊಡನಳುತಳುತೆ ನಗುವರೆಡೆ ನಗುನಗುತೆ (541)

ಅಳುವರೊಡನಳುತಳುತೆ ನಗುವರೆಡೆ ನಗುನಗುತೆ |
ಬಲುಹದೋರುವರೊಡನೆ ಬಲುಹನುಬ್ಬಿಸುತೆ ||
ಹುಲುಸುಬೆಳೆ ಬೇಕೆಂಬನಿಗೆ ಹುಲುಸುದೋರುತ್ತೆ |
ಸಲಿಸವರಿಗವರಿಚ್ಛೆ - ಮರುಳ ಮುನಿಯ || (೫೪೧)

(ಅಳುವರೊಡನೆ+ಅಳುತ+ಅಳುತೆ)(ನಗುವರ+ಎಡೆ)(ಬಲುಹ+ತೋರುವರ+ಒಡನೆ)(ಬಲುಹನ್+ಉಬ್ಬಿಸುತೆ)(ಬೇಕು+ಎಂಬನಿಗೆ)(ಹುಲುಸು+ತೋರುತ್ತೆ)(ಸಲಿಸು+ಅವರಿಗೆ+ಅವರ+ಇಚ್ಛೆ)

ದುಃಖಿಸುವರ ಜೊತೆ ಅವರ ದುಃಖದಲ್ಲಿ ಭಾಗಿಯಾಗುತ್ತಾ, ಸಂತೋಷವಾಗಿರುವವರ ಜೊತೆ ಸಂತೋಷವಾಗಿರುತ್ತಾ, ತಮ್ಮ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಪ್ರದರ್ಶಿಸುವವರ ಜೊತೆ ಅವರ ಸಾಹಸಗಳನ್ನು ಹುರಿದುಂಬಿಸುತ್ತಾ, ಸಮೃದ್ಧಿಯಾದ ಫಸಲು ಬೇಕೆನ್ನುವವರಿಗೆ ಸಮೃದ್ಧಿಯ ದಾರಿಯನ್ನು ತೋರಿಸುತ್ತಾ, ಅವರವರಿಗೆ ಅವರವರ ಬಯಕೆಗಳನ್ನು ತಲುಪಿಸುತ್ತಿರು.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Weeping with those who weep and laughing with those who laugh
Displaying one’s prowess with those who wish to wrestle
Pointing at the plentiful harvest to those who desire for plenty
Strive to fulfil the desires of all – Marula Muniya
(Translation from "Thus Sang Marula Muniya" by Sri. Narasimha Bhat)

Wednesday, December 4, 2013

ಹೃದಯವರಸುವದೊಂದು ನೆಲೆಯ ತನ್ನಿನಿರಸಕೆ (540)

ಹೃದಯವರಸುವದೊಂದು ನೆಲೆಯ ತನ್ನಿನಿರಸಕೆ |
ನದಿ ಸಾಗರವನರಸಿ ಪರಿದೋಡುವಂತೆ ||
ಎದೆಹಾಲ ಶಿಶುಗೂಡದಿರೆ ತಾಯ್ಗೆ ನೋವಲ್ತೆ |
ಬದುಕೆಲ್ಲವೆದೆಮಿಡಿತ - ಮರುಳ ಮುನಿಯ || (೫೪೦)

(ಹೃದಯ+ಅರಸುವದು+ಒಂದು)(ತನ್ನ+ಇನಿರಸಕೆ)(ಸಾಗರವನ್+ಅರಸಿ)(ಪರಿದು+ಓಡುವಂತೆ)(ಶಿಶುಗೆ+ಊಡದಿರೆ)(ನೋವ್+ಅಲ್ತೆ)(ಬದುಕು+ಎಲ್ಲ+ಎದೆಮಿಡಿತ)

ನದಿಯು ಸಮುದ್ರವನ್ನು ಹುಡುಕಿಕೊಂಡು ಹರಿದುಹೋಗಿ ಅದನ್ನು ಸೇರುವಂತೆ ಹೃದಯವು ತನ್ನ ಸವಿಯಾದ ಭಾವನೆಗಳಿಗೋಸ್ಕರ ಒಂದು ಆಶ್ರಯವನ್ನು ಹುಡುಕಿಕೊಂಡು ಹೋಗುತ್ತದೆ. ಮಗು(ಶಿಶು)ವಿಗೆ ಎದೆಯ ಹಾಲನ್ನು ಉಣಿಸದಿದ್ದರೆ, ತಾಯಿಗೇ ನೋವುಂಟಾಗುವಂತೆ, ಬದುಕೆಲ್ಲವೂ ಈ ರೀತಿಯ ಅಂತಃಕರಣದ ಮಿಡಿತಗಳಿಂದ ಕೂಡಿದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Like the river runs seeking for the sea
Human heart seeks for a vessel for pouring its ambrosia
Won’t it be painful to the mother if she can’t feed her child with breast-milk?
All the life is the throbbing of the heart – Marula Muniya
(Translation from "Thus Sang Marula Muniya" by Sri. Narasimha Bhat)

Monday, December 2, 2013

ದೊರೆ ತನದು ಬಲಮೆಂದು ಜನ ತಮದು ನೆಲನೆಂದು (539)

ದೊರೆ ತನದು ಬಲಮೆಂದು ಜನ ತಮದು ನೆಲನೆಂದು |
ಪರಿಪಂಥದಲಿ ಪೊಣರೆ ರಾಜ್ಯ ವಿಷಮಿಸದೇಂ? ||
ದೊರೆಯವರ ಮನವರಿತು ಜನರವರ ಹೊರೆಯರಿತು |
ಇರುತನವಮೀರೆ ಸೊಗ - ಮರುಳ ಮುನಿಯ || (೫೩೯)

(ಬಲಮ್+ಎಂದು)(ನೆಲನ್+ಎಂದು)(ಇರುತನವ+ಮೀರೆ)

ರಾಜ್ಯವನ್ನು ನಡೆಸುವ ಭಾರವನ್ನು ಹೊತ್ತಿರುವ ರಾಜನು, ರಾಜ್ಯಾಧಿಕಾರ ತನ್ನದೆಂದೂ, ಆದರೆ ಜನರು ತಾವು ವಾಸಿಸುತ್ತಿರುವ ನಾಡು ತಮಗೇ ಸೇರಿದ್ದೆಂದು ಸ್ಪರ್ಧಾ ಮನೋಭಾವದಲ್ಲಿ(ಪರಿಪಂಥದಲಿ) ಹೋರಾಡಿದರೆ (ಪೊಣರೆ) ರಾಜ್ಯವು ಸಂಕಟ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳದಿರುತ್ತದೆಯೇ? ರಾಜನು ತನ್ನ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು, ಹಾಗೆಯೇ ಜನರೂ ಸಹ ದೊರೆಗಿರುವ ರಾಜ್ಯ ನಡೆಸುವ ಭಾರಗಳನ್ನು ತಿಳಿದುಕೊಂಡು, ಅವರಿಬ್ಬರೂ ಬೇರೆ ಬೇರೆ ಬೇರೆಯೆಂಬ ಭಾವನೆಯನ್ನು ಮೀರಿದರೆ ರಾಜ್ಯದಲ್ಲಿ ಸುಖ, ಶಾಂತಿಗಳು ನೆಲಸುತ್ತವೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

The king asserts that all the power is his and the people claim that all land is theirs
Wouldn't the country be in difficulty if they fight like this?
Happiness ensues when the King understands their mind and
The people realize his burden and both overcome duality – Marula Muniya
(Translation from "Thus Sang Marula Muniya" by Sri. Narasimha Bhat)