Friday, April 27, 2012

ರಾತ್ರಿ ದಿವಸ ಕ್ರಮಾವೃತ್ತಿಗಾರ್ ಕಾರಣನೊ (200)

ರಾತ್ರಿ ದಿವಸ ಕ್ರಮಾವೃತ್ತಿಗಾರ್ ಕಾರಣನೊ |
ಭೌತ ಪ್ರಪಂಚ ನಿಯಮಕದಾರೊ ಅವನೇ ||
ವಾತಾವರಣ ವೈಪರೀತ್ಯಕಂ ಕಾರಣನು |
ಕೇತು ರಾಹುವುಮವನೆ - ಮರುಳ ಮುನಿಯ || (೨೦೦)

(ಕ್ರಮ+ಆವೃತ್ತಿಗೆ+ಆರ್)(ನಿಯಮಕೆ+ಅದು+ಆರೊ)(ರಾಹುವುಂ+ಅವನೆ)

ರಾತ್ರಿ ಮತ್ತು ಹಗಲುಗಳು ಒಂದಾದ ಮೇಲೊಂದು ಬರುವ ಸರದಿಗಳಿಗೆ ಮತ್ತು ಈ ಭೌತಪ್ರಪಂಚದ ನಿಯಮಗಳಿಗೂ ಯಾವನು ಕಾರಣಕರ್ತನೋ, ಅವನೇ, ಹವಾಮಾನ ಮತ್ತು ಪರಿಸರಗಳ (ವಾತಾವರಣ) ವಿಪರೀತಗಳಿಗೂ ಸಹ ಕಾರಣನಾದವನು. ರಾಹು ಮತ್ತು ಕೇತುಗಳೂ ಅವನೇ.

Thursday, April 26, 2012

ಕಾಚದೃಗ್ಯಂತ್ರದಿಂ ಗಣಿತ ಸಂಕೇತದಿಂ (199)

ಕಾಚದೃಗ್ಯಂತ್ರದಿಂ ಗಣಿತ ಸಂಕೇತದಿಂ |
ಲೋಚನಗ್ರಾಹ್ಯ ಪ್ರಪಂಚದುಪಮಿತಿಯಿಂ ||
ವಾಚಾಮಗೋಚರವನರಸುವಂ ನಭಪಟವ |
ಸೂಚಿಯಿಂ ಹೊಲಿವವನು - ಮರುಳ ಮುನಿಯ || (೧೯೯)

(ಪ್ರಪಂಚದ+ಉಪಮಿತಿಯಿಂ)(ವಾಚಾಮಗೋಚರವನ್+ಅರಸುವಂ)

ಗಾಜಿನ ಸೂಕ್ಷ್ಮದರ್ಶಕ ಯಂತ್ರದಿಂದ(ಕಾಚದೃಗ್ಯಂತ್ರದಿಂ), ಗಣಿತದ ಸೂತ್ರಗಳಿಂದ ಮತ್ತು ಕಣ್ಣಿಗೆ ನಿಲುಕುವ (ಲೋಚನಗ್ರಾಹ್ಯ) ಪ್ರಪಂಚದ ಹೋಲಿಕೆಗಳಿಂದ (ಉಪಮಿತಿಯಿಂ) ಮಾತಿಗೆ ನಿಲುಕದ (ವಾಚಾಮಗೋಚರವನ್) ಪ್ರಪಂಚವನ್ನು ಹುಡುಕುವುದು, ಆಕಾಶವೆಂಬ ವಸ್ತ್ರವನ್ನು (ನಭಪಟ) ಸೂಜಿ(ಸೂಚಿ)ಯಿಂದ ಹೊಲಿಯುವುದಕ್ಕೆ ಪ್ರಯತ್ನಿಸಿದಂತಾಗುತ್ತದೆ.

Wednesday, April 25, 2012

ಸದ್ಯಸ್ಕಲೌಕಿಕಕೆ ಸರಿ ಭೌತವಿಜ್ಞಾನ (198)

ಸದ್ಯಸ್ಕಲೌಕಿಕಕೆ ಸರಿ ಭೌತವಿಜ್ಞಾನ |
ಭೇದ್ಯವದರಿಂದೆಂತು ಪರತತ್ತ್ವಸೀಮೆ ? ||
ಖಾದ್ಯರಸಗಳನರಿವ ನಾಲಗೆಗೆ ಗಾನರಸ |
ವೇದ್ಯವಹುದೆಂತಯ್ಯ - ಮರುಳ ಮುನಿಯ || (೧೯೮)

(ಭೇದ್ಯ+ಅದರಿಂದ+ಎಂತು)(ಖಾದ್ಯರಸಗಳನ್+ಅರಿವ)(ವೇದ್ಯ+ಅಹುದು+ಎಂತಯ್ಯ)

ಈಗಿನ ಕಾಲದ (ಸದ್ಯಸ್ಕ) ಲೋಕವ್ಯವಹಾರಕ್ಕೆ ಭೌತವಿಜ್ಞಾನದಿಂದ ಪ್ರಯೋಜನವುಂಟು. ಆದರೆ ಈ ವಿಜ್ಞಾನದಿಂದ ಪರಮಾತ್ಮನನ್ನು ಅರಿಯುವ ಸಿದ್ಧಾಂತದ ಗಡಿಯನ್ನು ಸೀಳಿ ಪ್ರವೇಶಿಸಲು ಸಾಧ್ಯವೇನು ? ಆಹಾರ ಪದಾರ್ಥ(ಖಾದ್ಯವಸ್ತು)ಗಳ ರುಚಿಯನ್ನು ತಿಳಿಯುವ ನಾಲಿಗೆ, ಸಂಗೀತದ ಸ್ವಾದವನ್ನು ಹೇಗೆ ತಿಳಿಯಲು ಸಾಧ್ಯ (ವೇದ್ಯ)?

Tuesday, April 24, 2012

ಅಂದಂದು ನಿನ್ನಂತರಂಗ ಬಹಿರಾವರಣ (197)

ಅಂದಂದು ನಿನ್ನಂತರಂಗ ಬಹಿರಾವರಣ |
ಸಂದರ್ಭದಿನೆ ನಿನಗೆ ಧರ್ಮವಿಧಿ ಜಗದಿ ||
ದ್ವಂದ್ವಗಳ ಮೀರಿ ನೀನದನರಿತು ನಡೆಯುತಿರೆ |
ಮುಂದೆ ಸತ್ಯದ ಪೂರ್ಣ - ಮರುಳ ಮುನಿಯ || (೧೯೭)

(ನಿನ್ನ+ಅಂತರಂಗ)(ಬಹಿರ್+ಆವರಣ)(ನೀನ್+ಅದನ್+ಅರಿತು)(ನಡೆಯುತ+ಇರೆ)

ಆವತ್ತು ಆವತ್ತಿನದಿನದ ನಿನ್ನ ಒಳಮನಸ್ಸು ಮತ್ತು ಹೊರಜಗತ್ತಿನ ಸನ್ನಿವೇಶಗಳ ಕಾರಣದಿಂದ ನಿನಗೆ ಜಗತ್ತಿನ ಧರ್ಮದ ನಿಯಮಗಳ ಕಟ್ಟಳೆಗಳು, ನೀನು ಈ ವೈವಿಧ್ಯವನ್ನು ದಾಟಿಹೋಗಿ, ಅವುಗಳನ್ನು ಅರ್ಥ ಮಾಡಿಕೊಂಡು ಔಚಿತ್ಯದಿಂದ ವ್ಯವಹರಿಸಿದರೆ ಮುಂದೆ ನಿನಗೆ ಸಂಪೂರ್ಣ ಸತ್ಯದ ದರ್ಶನ ಸಾಧ್ಯ.

Monday, April 23, 2012

ವೇದಾಂತಮುಂ ಲೋಕ ವಿಜ್ಞಾನಮುಂ ನಿನ್ನ(196)

ವೇದಾಂತಮುಂ ಲೋಕ ವಿಜ್ಞಾನಮುಂ ನಿನ್ನ |
ಹಾದಿಗೆರಡಂಕೆ ನಡುಪಟ್ಟಿಯಲಿ ನಡೆ ನೀಂ ||
ಆಧ್ಯಾತ್ಮವೊಂದು ಬದಿಯಧಿಭೌತವಿನ್ನೊಂದು |
ಸಾಧಿಸೆರಡನುಮೊಮ್ಮೆ - ಮರುಳ ಮುನಿಯ || (೧೯೬)

(ಹಾದಿಗೆ+ಎರಡು+ಅಂಕೆ)(ಬದಿಯ+ಅಧಿಭೌತ+ಇನ್ನೊಂದು)(ಸಾಧಿಸು+ಎರಡನುಂ+ಒಮ್ಮೆ)

ವೇದಾಂತ ಮತ್ತು ಈ ಪ್ರಪಂಚದ ವಿಜ್ಞಾನಗಳು ನಿನ್ನ ದಾರಿಗಿರುವ ಎರಡು ಹತೋಟಿಯ ಗುರುತುಗಳು. ನೀನು ಅವೆರಡರ ನಡುವೆ ಇರುವ ಪಟ್ಟಿಯ ಮೇಲೆ ನಡೆ. ಒಂದು ಆತ್ಮನಿಗೆ ಸಂಬಂಧಪಟ್ಟದ್ದು, ಮತ್ತೊಂದು ಭೌತಿಕ ವಿಜ್ಞಾನ. ನೀನು ಎರಡನ್ನೂ ಅಭ್ಯಸಿಸಿ ಒಂದೇ ಬಾರಿಗೆ ನಿಭಾಯಿಸು.

Friday, April 20, 2012

ನೀರು ನೆಲವೆರಡನು ಸೋಕದೆಯೆ ಬಾನಿನಲಿ (195)

ನೀರು ನೆಲವೆರಡನು ಸೋಕದೆಯೆ ಬಾನಿನಲಿ |
ಪಾರುವುದು ಪಕ್ಕಿ ನೋಡದರವೊಲು ಜಾಣಂ ||
ಧಾರುಣಿಯ ಗೊಂದಲ ದ್ವಂದ್ವಂಗಳಂ ಬಿಟ್ಟು |
ಮೀರುವಂ ನಿರ್ಲಿಪ್ತ - ಮರುಳ ಮುನಿಯ || (೧೯೫)

(ನೆಲ+ಎರಡನು)(ನೋಡು+ಅದರವೊಲು)

ಹಕ್ಕಿಯು ನೀರು ಮತ್ತು ನೆಲಗಳೆರಡನ್ನು ಮುಟ್ಟದೆ ಆಕಾಶ(ಬಾನ್)ದಲ್ಲಿ ಹಾರಾಡುತ್ತದೆ. ಈ ರೀತಿಯಾಗಿ ಪ್ರಪಂಚದಲ್ಲಿ ನಡೆದುಕೊಳ್ಳುವವನೇ ಬುದ್ಧಿವಂತ. ಈ ಭೂಮಿಯ ಗದ್ದಲ ಮತ್ತು ಕಲಹಗಳನ್ನು ತೊರೆದು ಅವುಗಳನ್ನು ದಾಟಿ ಹೋಗುವವನೇ ಈ ಪ್ರಪಂಚದಲ್ಲಿ ಯಾವುದಕ್ಕೂ ಅಂಟಿಕೊಳ್ಳದವನು (ನಿರ್ಲಿಪ್ತ).

Thursday, April 19, 2012

ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ (194)

ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ |
ಆವ ನದಿಯೊಳು ಪರಿದು ಕಡಲ ಪಾಲಕ್ಕುಂ ||
ಜೀವಿಗಳ ಗತಿಯಂತು ದಾರಿ ಗೊತ್ತಿರುವರಾರ್ |
ಆವುದೆನಲದೆ ದಾರಿ - ಮರುಳ ಮುನಿಯ || (೧೯೪)

(ನೀರ್+ಅದು+ಆವ)(ಪಾಲ್+ಅಕ್ಕುಂ)(ಗತಿ+ಅಂತು)(ಗೊತ್ತು+ಇರುವರು+ಆರ್)(ಆವುದು+ಎನಲ್+ಅದೆ)

ಮನೆಯಿಂದ ಹೊರಗೆ ಹರಿಯುವ ನೀರು ಚರಂಡಿಯಲ್ಲಿ ಹರಿದು ಇನ್ಯಾವ ಹೊಳೆಯನ್ನೊ ಸೇರಿ, ಅನಂತರ ಮತ್ತೆ ಯಾವ ನದಿಯಲ್ಲೊ ಹರಿದು, ಸಮುದ್ರದ ಪಾಲಾಗುತ್ತದೆ. ಈ ಪ್ರಪಂಚದಲ್ಲಿ ಜೀವಿಸುತ್ತಿರುವ ಜೀವಿಗಳ ಅವಸ್ಥೆಯೂ ಹಾಗೆಯೇ ಹೌದು. ಈ ಜೀವಿಗಳ ದಾರಿ ಮತ್ತು ಗುರಿಗಳನ್ನು ತಿಳಿದವರ‍್ಯಾರು? ಯಾವುದಾದರೆ ಅದೇ ಅವುಗಳ ದಾರಿ.

Wednesday, April 18, 2012

ಚರಮಧ್ಯದೊಳ್ ಸ್ಥಿರವ ಜಗದಿ ಬ್ರಹ್ಮವ ನೆನೆವ (193)

ಚರಮಧ್ಯದೊಳ್ ಸ್ಥಿರವ ಜಗದಿ ಬ್ರಹ್ಮವ ನೆನೆವ |
ನೆರಳೊಳರ್ಕಪ್ರಭೆಯ ಕಾಣುವಂ ಜಾಣಂ ||
ಎರಡುಮನದೊಂದೆಂಬವೊಲ್ (ಸಮದ) ಬದುಕಿನಲಿ |
ಚರಿಸುವಂ ಪರಮಾರ್ಥಿ - ಮರುಳ ಮುನಿಯ || (೧೯೩)

(ನೆರಳೊಳ್+ಅರ್ಕಪ್ರಭೆಯ)(ಎರಡುಮನ+ಅದು+ಒಂದು+ಎಂಬವೊಲ್)

ಚಲಿಸುತ್ತಿರುವುದರ ಮಧ್ಯದಲ್ಲಿ ಶಾಶ್ವತವಾಗಿರುವುದನ್ನು, ಜಗತ್ತಿನ ಜೀವನದಲ್ಲಿ ಬ್ರಹ್ಮವನ್ನು ಜ್ಞಾಪಿಸಿಕೊಳ್ಳುವವನು ಮತ್ತು ನೆರಳಿನಲ್ಲಿ ಸೂರ್ಯ(ಅರ್ಕ)ನ ಪ್ರಕಾಶ(ಪ್ರಭೆ)ಯನ್ನು ಕಾಣಬಲ್ಲವನು ಬುದ್ಧಿವಂತ. ಎರಡೂ ಮನಸ್ಸುಗಳು ಒಂದೇ ಎನ್ನುವಂತೆ ಈ ಉನ್ಮತ್ತ (ಸಮದ) ಜೀವನದಲ್ಲಿ ಯಾವನು ವ್ಯವಹರಿಸಬಲ್ಲನೋ ಅವನೇ ಪರಮತತ್ತ್ವವನ್ನು ಅರಿತವನು.

Thursday, April 12, 2012

ಏಕದಿನನೇಕಗಳನಾಗಿಪುದು ನೈಸರ್ಗ (192)

ಏಕದಿನನೇಕಗಳನಾಗಿಪುದು ನೈಸರ್ಗ |
ಏಕತೆಗನೇಕಗಳ ಮರಳಿಪನು ಪುರುಷಂ ||
ಲೋಕ ಸಂಸೃತಿಗೆ ನಾನಾತ್ವ ಮುಕ್ತಿಗಭೇದ |
ಸಾಕಲ್ಯ ಮತಿಯೆ ಪಥ - ಮರುಳ ಮುನಿಯ || (೧೯೨)

(ಏಕದಿನ್+ಅನೇಕಗಳನ್+ಆಗಿಪುದು)(ಏಕತೆಗೆ+ಅನೇಕಗಳ)(ಮುಕ್ತಿಗೆ+ಅಭೇದ)

ಪ್ರಕೃತಿಯು ಒಂದರಿಂದ ಅನೇಕಗಳನ್ನು ಮಾಡುತ್ತದೆ. ಪುರುಷನು ತನ್ನ ಶಕ್ತಿಯಿಂದ ಈ ಅನೇಕಗಳನ್ನು ಪುನಃ ಹಿಂದಿರುಗಿಸುತ್ತಾನೆ. ಈ ಪ್ರಪಂಚದ ಜೀವನಕ್ಕೆ ನಾನಾ ರೂಪಗಳಿಂದ ಮುಕ್ತಿ ಹೊಂದುವ ವ್ಯತ್ಯಾಸಗಳು ಇವೆ. ಪರಿಪೂರ್ಣತೆಯ ಜ್ಞಾನಮಾರ್ಗವೇ ಇದಕ್ಕೆ ತಕ್ಕ ದಾರಿ.

Wednesday, April 11, 2012

ವಾಸನಾಕ್ಷಯಪದಕೆ ಯೋಗಗತಿ ಮೂರಂತೆ (191)

ವಾಸನಾಕ್ಷಯಪದಕೆ ಯೋಗಗತಿ ಮೂರಂತೆ |
ಆಶೆಗಳನತಿಭೋಗ ಮುಗಿಪುದೆನೆ ವಾಮ ||
ಶೋಷಿಪ್ಪುದದನುಗ್ರತಪಗಳಿಂದೆನಲು ಹಟ |
ಶಾಸನದ ನಯ ರಾಜ - ಮರುಳ ಮುನಿಯ || (೧೯೧)

(ವಾಸನಾ+ಕ್ಷಯಪದಕೆ)(ಆಶೆಗಳನ್+ಅತಿಭೋಗ)(ಶೋಷಿಪ್ಪುದದನ್+ಉಗ್ರತಪಗಳಿಂದ+ಎನಲು)

ಹಿಂದಿನ ಜನ್ಮಗಳ ಕರ್ಮಫಲದಿಂದ ಬಂದ ಆಸೆಗಳನ್ನು (ವಾಸನೆ) ನಶಿಸು(ಕ್ಷಯ)ವಂತೆ ಮಾಡಲು ಮೂರು ಮಾರ್ಗಗಳಿವೆ. ಆ ಆಶೆಗಳನ್ನು ವಿಪರೀತವಾಗಿ ಅನುಭವಿಸಿ ಅವುಗಳನ್ನು ಮುಗಿಸುತ್ತೇನೆನ್ನುವುದು, ಒಂದು ತಪ್ಪು(ವಾಮ) ದಾರಿ. ಅವುಗಳನ್ನು ತೀಕ್ಷ್ಣವಾದ (ಉಗ್ರ) ತಪಸ್ಸಿನಿಂದ ಕ್ಷಯಿಸುತ್ತೇನೆನ್ನುವುದು ಹಠಮಾರ್ಗವಾಗುತ್ತದೆ. ತನ್ನ ಸ್ವಂತ ಆಜ್ಞೆಯ ಸೂಕ್ಷ್ಮತೆ ಮತ್ತು ನಾಜೂಕುತನದಿಂದ ಅವುಗಳನ್ನು ಕ್ಷಯಿಸುವುದು ರಾಜ ಮತ್ತು ಯೋಗ್ಯವಾದ ಮಾರ್ಗ.

Tuesday, April 10, 2012

ನೈಸರ್ಗ ಪೌರುಷಗಳುಭಯ ಸಮರಸಯುಕ್ತಿ (190)

ನೈಸರ್ಗ ಪೌರುಷಗಳುಭಯ ಸಮರಸಯುಕ್ತಿ |
ಕೌಶಲದೆ ಜೀವಿತಂ ಸಾರ್ಥಕಂ ನೀಂ ಶು- ||
ಶ್ರೂಷಿಸುತ್ತಿನಿತು ನಿಗ್ರಹಿಸಿನಿತು ಪ್ರಕೃತಿಯಂ |
ದಾಸಿಯಾಗಿಸಿ ಗೆಲ್ಲೊ - ಮರುಳ ಮುನಿಯ || (೧೯೦)

(ಪೌರುಷಗಳ+ಉಭಯ)(ಶುಶ್ರೂಷಿಸುತ್ತ+ಇನಿತು)(ನಿಗ್ರಹಿಸಿ+ಇನಿತು)

ಪ್ರಕೃತಿ ಮತ್ತು ಪುರುಷರಿಬ್ಬರ ಸಮನಾದ ಬೆರೆಯುವಿಕೆಯ ಚಾತುರ್ಯದಿಂದ ಬಾಳು ಸಫಲವಾಗುತ್ತದೆ. ನೀನು ಪ್ರಕೃತಿಯನ್ನು ಸ್ವಲ್ಪಸ್ವಲ್ಪವಾಗಿ ಉಪಚರಿಸುತ್ತಾ ಮತ್ತು ಸ್ವಲ್ಪ ಸ್ವಲ್ಪವಾಗಿ ಹತೋಟಿಯಲ್ಲಿಟ್ಟುಕೊಳ್ಳುತ್ತಾ ನಿನ್ನ ಸೇವಕಿಯನ್ನಾಗಿ ಮಾಡಿಕೊಂಡು ಅವಳನ್ನು ಗೆಲ್ಲು.

Monday, April 9, 2012

ತುಪ್ಪದಿಂ ಬೆಂಕಿಯಾರಿಪನು ವಾಮಾಚಾರಿ (189)

ತುಪ್ಪದಿಂ ಬೆಂಕಿಯಾರಿಪನು ವಾಮಾಚಾರಿ |
ಕಪ್ಪು ಮೈಸುಡೆ ಬಿಳ್ಪೆನುವನು ಹಟಯೋಗಿ ||
ಉಪ್ಪುನೀರನು ಸಪ್ಪೆಗೈದು ಭಟ್ಟಿಯುಪಾಯ-
ಕೊಪ್ಪದಾತುರ ದುಡುಕು - ಮರುಳ ಮುನಿಯ || (೧೮೯)

(ಬೆಂಕಿ+ಆರಿಪನು)(ಬಿಳ್ಪು+ಎನುವನು)(ಭಟ್ಟಿ+ಉಪಾಯಕೆ+ಒಪ್ಪದು+ಆತುರ)

ಮಾಟವನ್ನು ಆಚರಿಸುವವನು ತುಪ್ಪದಿಂದ ಬೆಂಕಿಯನ್ನು ಉಪಶಮನ ಮಾಡುತ್ತಾನೆ. ಮೈ ಸುಟ್ಟು ಕಪ್ಪಗಾದರೂ ಸಹ ಅದು ಬಿಳಿಯೆಂದೆನ್ನುತ್ತಾನೆ ಒಬ್ಬ ಹಟಯೋಗಿ. ಆದರೆ ಉಪ್ಪುನೀರನ್ನು ಕಾಯಿಸಿ ಭಟ್ಟಿಯಿಳಿಸಿ, ಆ ಉಪ್ಪನ್ನು ತೆಗೆದು ಯುಕ್ತಿಯಿಂದ ಮಾಡುವ ಕೆಲಸಕ್ಕೆ ಆತುರ ಮತ್ತು ದುಡುಕುತನ ಸಲ್ಲದು.

Saturday, April 7, 2012

ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು (188)

ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು |
ಧರೆಯಿಂದ ಶಿಖರಕೇರುವುದು ಪುರುಷತನ ||
ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು |
ಪರಮಾರ್ಥ ಸಾಧನೆಯೊ - ಮರುಳ ಮುನಿಯ || (೧೮೮)

 ‎(ಗುರಿ+ಅರಿತು)(ಶಿಖರಕೆ+ಏರುವುದು)(ಹಿರಿದು+ಆಗುವುದು)(ದಿನದಿನದೊಳ್+ಅನಿತು+ಅನಿತು)

ಮೋಕ್ಷಸಾಧನೆಗೆ ಮಾರ್ಗಗಳನ್ನು ಮಾನ್ಯ ಡಿ.ವಿ.ಜಿಯವರನ್ನು ಇಲ್ಲಿ ಹೇಳುತ್ತಿದ್ದಾರೆ. ನಾವು ನಡೆಸುತ್ತಿರುವ ಈ ಬಾಳಿಗೆ ಏನಾದರೂ ಉದ್ದೇಶಗಳುಂಟೋ? ಆ ಉದ್ದೇಶಗಳನ್ನು ತಿಳಿದುಕೊಂಡು ಬಾಳನ್ನು ನಡೆಸುವುದು ಮತ್ತು ಭೂಮಿ(ಧರೆ)ಯಿಂದ ಪರ್ವತದ ತುದಿಯನ್ನು ಹತ್ತುವುದು ಪುರುಷತನದ ಲಕ್ಷಣ. ಪ್ರತಿನಿತ್ಯವೂ ಸ್ವಲ್ಪ ಸ್ವಲ್ಪವಾಗಿ ಚಿಕ್ಕ ಮತ್ತು ಸಣ್ಣದಾಗಿರುವುದರಿಂದ, ದೊಡ್ಡದು ಮತ್ತು ಶ್ರೇಷ್ಠವಾಗುವುದು, ಮೋಕ್ಷವನ್ನು ಪಡೆಯುವುದು ಸಾಧನವಾಗಿದೆ.

Thursday, April 5, 2012

ಸೌಂದರ್ಯ ಮಾಧುರ್ಯ ಬ್ರಾಹ್ಮಿಕಾನಂದ (187)

ಸೌಂದರ್ಯ ಮಾಧುರ್ಯ ಬ್ರಾಹ್ಮಿಕಾನಂದ |
ಸಿಂಧು ಶೀಕರ ಸುಕೃತ ಪವನನುಪಕಾರ ||
ಬಂದಿಯದರಿಂ ಭೋಗಿ ಯೋಗಿಗದು ತತ್ತ್ವಾನು- |
ಸಂಧಾನ ಸಾಧನವೊ - ಮರುಳ ಮುನಿಯ || (೧೮೭)

(ಬ್ರಾಹ್ಮಿಕ+ಆನಂದ)(ಪವನನ+ಉಪಕಾರ)(ಬಂದಿ+ಅದರಿಂ)(ಯೋಗಿಗೆ+ಅದು)(ತತ್ತ್ವ+ಅನುಸಂಧಾನ)

ಸೊಗಸು, ಚೆಲುವು, ಸಿಹಿ ಮತ್ತು ಮನೋಹರವಾಗಿರುವುದು (ಮಾಧುರ್ಯ) ಬ್ರಹ್ಮ ಸಂಬಂಧವಾದ ಉತ್ತಮವಾದ(ಬ್ರಾಹ್ಮಿಕ) ಸಂತೋಷಗಳು. ನದಿ ಮತ್ತು ಸಮುದ್ರ(ಸಿಂಧುಗಳ)ಗಳ ತಂಪಾದ ತುಂತುರು ಹನಿ (ಶೀಕರ)ಗಳನ್ನು ಅನುಭವಿಸುವ ಅದೃಷ್ಟದ ಕೆಲಸ, ಗಾಳಿ(ಪವನ)ಯ ಸಹಾಯದಿಂದ ನಮಗೆ ಲಭ್ಯವಾಗುತ್ತದೆ. ಪ್ರಪಂಚವನ್ನು ಅನುಭವಿಸುವ ಸುಖಪುರುಷನು ಇವುಗಳಿಗೆ ದಾಸನಾಗಿ ಸೆರೆಯಾಗುತ್ತಾನೆ(ಬಂದಿ). ಒಬ್ಬ ಯೋಗಿಗಾದರೋ ಇದು ಪರಬ್ರಹ್ಮನನ್ನು ಧ್ಯಾನಿಸಿ ಸೇರುವ ಸಾಧನವಾಗಿರುತ್ತದೆ.

Wednesday, April 4, 2012

ನೀನೊರೆವ ತತ್ತ್ವಗಳ ನಿನ್ನುನ್ನತೋಕ್ತಿಗಳ (186)

ನೀನೊರೆವ ತತ್ತ್ವಗಳ ನಿನ್ನುನ್ನತೋಕ್ತಿಗಳ |
ನೀನಾನುಮನ್ಯೂನದಿಂ ಚರಿಸಲಾಯ್ತೇಂ ? ||
ಊನವಲ್ಲಿರ‍್ದೊಡೇಂ ಕಾಲಾನುಕಾಲದ |
ಧ್ಯಾನದಿಂ ಸಿದ್ಧಿಯೆಲೊ - ಮರುಳ ಮುನಿಯ || (೧೮೬)

(ನೀನ್+ಒರೆವ)(ನಿನ್ನ+ಉನ್ನತ+ಉಕ್ತಿಗಳ)(ನೀನಾನುಂ+ಅನ್ಯೂನದಿಂ)(ಚರಿಸಲ್+ಆಯ್ತೇಂ)(ಊನ+ಅಲ್ಲಿ+ಇರ‍್ದೊಡೇಂ)

ನೀನು ಹೇಳುವ (ಒರೆವ) ಸಿದ್ಧಾಂತಗಳನ್ನು ಮತ್ತು ದೊಡ್ಡ ದೊಡ್ಡ ಮಾತುಗಳನ್ನು ನೀನಾದರೂ ಯಾವ ವಿಧವಾದ ಕುಂದು ಕೊರತೆಗಳಿಲ್ಲದೆ, ನಡೆಸಲಾಯಿತೇನು ? ಇವುಗಳನ್ನು ಪಾಲಿಸುವುದರಲ್ಲಿ ಕುಂದು, ಕೊರತೆ (ಊನ)ಗಳಿದ್ದರೂ ಸಹ ಬಹಳ ಕಾಲದ ಚಿಂತನೆಯಿಂದ ನೀನು ಅವುಗಳನ್ನು ಪಾಲಿಸಲಾದೀತು.

Tuesday, April 3, 2012

ನಾನಾತ್ವದಿಂ ನಿನ್ನೇಕತೆಗೆ ಮರಳಿಸಲು (185)

ನಾನಾತ್ವದಿಂ ನಿನ್ನೇಕತೆಗೆ ಮರಳಿಸಲು |
ನ್ಯೂನತೆಗಳಿಂ ಪೂರ್ಣದಶೆಗೆ ಸಾಗಿಸಲು ||
ಮಾನವತೆಯಿಂ ಬ್ರಹ್ಮತೆಗೆ ನಿನ್ನ ಸೇರಿಸಲು |
ಮೌನ ಮಾನನವೆ ಮಾರ್ಗ - ಮರುಳ ಮುನಿಯ || (೧೮೫)

ನಾನಾವಿಧವಾದ ರೂಪ ಮತ್ತು ಆಕಾರಗಳಿಂದ, ನಿನ್ನನ್ನು ಏಕತೆಗೆ ಪುನಃ ಸೇರಿಸಲು, ಕೊರತೆಗಳಿಂದ ನಿನ್ನನ್ನು ಸಂಪೂರ್ಣವಾದ ಸ್ಥಿತಿಗೆ ತಲುಪಿಸಲು, ಮನುಷ್ಯತ್ವದಿಂದ ನಿನ್ನನ್ನು ಬ್ರಹ್ಮತ್ವಕ್ಕೆ ಸೇರಿಸಲು, ಮೌನದಿಂದ ಧ್ಯಾನಿಸುವುದೇ ದಾರಿ.