Wednesday, April 11, 2012

ವಾಸನಾಕ್ಷಯಪದಕೆ ಯೋಗಗತಿ ಮೂರಂತೆ (191)

ವಾಸನಾಕ್ಷಯಪದಕೆ ಯೋಗಗತಿ ಮೂರಂತೆ |
ಆಶೆಗಳನತಿಭೋಗ ಮುಗಿಪುದೆನೆ ವಾಮ ||
ಶೋಷಿಪ್ಪುದದನುಗ್ರತಪಗಳಿಂದೆನಲು ಹಟ |
ಶಾಸನದ ನಯ ರಾಜ - ಮರುಳ ಮುನಿಯ || (೧೯೧)

(ವಾಸನಾ+ಕ್ಷಯಪದಕೆ)(ಆಶೆಗಳನ್+ಅತಿಭೋಗ)(ಶೋಷಿಪ್ಪುದದನ್+ಉಗ್ರತಪಗಳಿಂದ+ಎನಲು)

ಹಿಂದಿನ ಜನ್ಮಗಳ ಕರ್ಮಫಲದಿಂದ ಬಂದ ಆಸೆಗಳನ್ನು (ವಾಸನೆ) ನಶಿಸು(ಕ್ಷಯ)ವಂತೆ ಮಾಡಲು ಮೂರು ಮಾರ್ಗಗಳಿವೆ. ಆ ಆಶೆಗಳನ್ನು ವಿಪರೀತವಾಗಿ ಅನುಭವಿಸಿ ಅವುಗಳನ್ನು ಮುಗಿಸುತ್ತೇನೆನ್ನುವುದು, ಒಂದು ತಪ್ಪು(ವಾಮ) ದಾರಿ. ಅವುಗಳನ್ನು ತೀಕ್ಷ್ಣವಾದ (ಉಗ್ರ) ತಪಸ್ಸಿನಿಂದ ಕ್ಷಯಿಸುತ್ತೇನೆನ್ನುವುದು ಹಠಮಾರ್ಗವಾಗುತ್ತದೆ. ತನ್ನ ಸ್ವಂತ ಆಜ್ಞೆಯ ಸೂಕ್ಷ್ಮತೆ ಮತ್ತು ನಾಜೂಕುತನದಿಂದ ಅವುಗಳನ್ನು ಕ್ಷಯಿಸುವುದು ರಾಜ ಮತ್ತು ಯೋಗ್ಯವಾದ ಮಾರ್ಗ.

No comments:

Post a Comment